Members of the Palestinian civil emergency service celebrate despite a delay in the ceasefire between Israel and Hamas over the hostage list, in Gaza City Members of the Palestinian civil emergency service celebrate despite a delay in the ceasefire between Israel and Hamas over the hostage list, in Gaza City 

ಧರ್ಮಗುರು ರೊಮೆನೆಲ್ಲಿ: ಕದನ ವಿರಾಮ ಒಪ್ಪಂದದ ನಂತರದ ಗಾಜಾ

ಈ ವಾರಾಂತ್ಯದಲ್ಲಿ ವಿಶ್ವಗುರು ಫ್ರಾನ್ಸಿಸ್ ರವರೊಂದಿಗಿನ ದೂರವಾಣಿ ಕರೆಯ ನಂತರ, ಗಾಜಾದಲ್ಲಿರುವ ಏಕೈಕ ಕಥೋಲಿಕ ಧರ್ಮಸಭೆಯ ಧರ್ಮಕೇಂದ್ರದ ಧರ್ಮಗುರುವಾದ ಗೇಬ್ರಿಯಲ್ ರೊಮೆನೆಲ್ಲಿರವರು, ಹಮಾಸ್ ಮತ್ತು ಇಸ್ರಯೇಲ್ ನಡುವಿನ ಕದನ ವಿರಾಮ ಜಾರಿಗೆ ಬರುತ್ತಿದ್ದಂತೆಯೇ ಗಾಜಾದ ವಾತಾವರಣದ ಬಗ್ಗೆ ವ್ಯಾಟಿಕನ್ ಸುದ್ಧಿಗೆ ತಿಳಿಸಿದ್ದಾರೆ.

ಕೀಲ್ಸ್ ಗುಸ್ಸಿ ಮತ್ತು ಬೆಂಡೆಟ್ಟಾ ಕ್ಯಾಪೆಲ್ಲಿ

ಹಮಾಸ್ ಮತ್ತು ಇಸ್ರಯೇಲ್ ನಡುವಿನ ಕದನ ವಿರಾಮ ಜಾರಿಗೆ ಬಂದ ತಕ್ಷಣದ ಗಂಟೆಗಳಲ್ಲಿ, ಪವಿತ್ರ ಕುಟುಂಬದ ದೇವಾಲಯ, ಕಥೋಲಿಕರ ದೇವಾಲಯದ ಧರ್ಮಕೇಂದ್ರದ ಧರ್ಮಗುರುವಾದ ಗೇಬ್ರಿಯಲ್ ರೊಮೆನೆಲ್ಲಿರವರು, ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ಸಂಘರ್ಷದ ನಂತರದ ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾತನಾಡಿದರು.

ಕದನ ವಿರಾಮ ಎಂದರೆ ತಕ್ಷಣದ ಶಾಂತಿ ಎಂದರ್ಥವಲ್ಲ
ಬೆಂಡೆಟ್ಟಾ ಕ್ಯಾಪೆಲ್ಲಿರವರೊಂದಿಗೆ ಮಾತನಾಡಿದ ಧರ್ಮಗುರು ರೊಮೆನೆಲ್ಲಿರವರು, ಕದನ ವಿರಾಮದ ಆರಂಭವು ತಕ್ಷಣದ ಶಾಂತಿ ಎಂದರ್ಥವಲ್ಲ ಎಂದು ವಿವರಿಸಿದರು. “ಕದನ ವಿರಾಮದ ನಂತರವೂ, ಇನ್ನೂ ಗುಂಡಿನ ಚಕಮಕಿ ಮತ್ತು ಬಾಂಬ್ ದಾಳಿಗಳು ನಡೆದವು” ಎಂದು ಅವರು ವಿವರಿಸಿದರು. “ಒತ್ತೆಯಾಳುಗಳ ಹೆಸರುಗಳನ್ನು ಬಿಡುಗಡೆ ಮಾಡುವಲ್ಲಿ ವಿಳಂಬವಾಯಿತು.”

ಆದರೆ, ಜನರು ಈಗ ನಿಜವಾದ ಭರವಸೆ ಇದೆ ಎಂದು ನಂಬಲು ಪ್ರಾರಂಭಿಸಿದ್ದಾರೆ ಹಾಗೂ "ಜನರು ಮತ್ತೆ ಭವಿಷ್ಯದ ಬಗ್ಗೆ ಯೋಚಿಸಲು ಮತ್ತು ಬದುಕಲು ಪ್ರಾರಂಭಿಸಿದ್ದಾರೆ" ಎಂದು ಅವರು ಹೇಳಿದರು.

ಕದನ ವಿರಾಮ ಒಪ್ಪಂದದ ಹೊರತಾಗಿಯೂ, ಜನರು ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗುತ್ತಿಲ್ಲ, ಏಕೆಂದರೆ ಅದು ಇನ್ನೂ ಮಿಲಿಟರಿ ವಲಯವೆಂದು ಪರಿಗಣಿಸಲ್ಪಟ್ಟಿದೆ.

15 ತಿಂಗಳ ಹಿಂಸಾಚಾರದ ನಂತರ, ಧರ್ಮಗುರುವಾದ ರೊಮೆನೆಲ್ಲಿರವರು, ಅನೇಕ ಜನರು ಸಮುದ್ರಕ್ಕೆ ಹೋಗುವುದು ಮತ್ತು ಅದರಲ್ಲಿ ಈಜುವುದು ಮುಂತಾದ ಸರಳ ಆಕಾಂಕ್ಷೆಗಳನ್ನು ಹೊಂದಿರುತ್ತಾರೆ ಎಂದು ಹಂಚಿಕೊಂಡರು. ಆದರೂ, ಇಸ್ರಯೇಲ್ ಅಧಿಕಾರಿಗಳು ಅದರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.

"ಜನರು ತಮ್ಮ ಮನೆಗಳನ್ನು ಹೇಗೆ ಪುನರ್ನಿರ್ಮಿಸುವುದು ಮತ್ತು ತಮ್ಮ ಜೀವನವನ್ನು ಮತ್ತೆ ಹೇಗೆ ಪುನರಾರಂಭಿಸುವುದು ಎಂಬುದರ ಕುರಿತು ಯೋಚಿಸಲು ಪ್ರಾರಂಭಿಸುತ್ತಿದ್ದಾರೆ, ಆದರೆ ಇದು ಇನ್ನೂ ಅನಿಶ್ಚಿತತೆಯಲ್ಲಿದೆ" ಎಂದು ಧರ್ಮಗುರುವಾದ ರೊಮೆನೆಲ್ಲಿರವರು ವಿವರಿಸಿದರು.

ಮಾನವೀಯ ನೆರವು ಅತ್ಯಗತ್ಯ
ಮಾನವೀಯ ನೆರವು ಅತ್ಯಗತ್ಯ ಎಂದು ಧರ್ಮಕೇಂದ್ರದ ಧರ್ಮಗುರುವು ಒತ್ತಿ ಹೇಳಿದರು. “ಗಾಜಾದ ಎಲ್ಲಾ ಮೂಲಸೌಕರ್ಯಗಳು ನಿಜವಾಗಿಯೂ ನಾಶವಾಗಿವೆ; ಕೆಲವೇ ಕಟ್ಟಡಗಳು ಉಳಿದಿವೆ” ಎಂದು ಅವರು ಹೇಳಿದರು. ಆಹಾರದ ಜೊತೆಗೆ, ಗಾಜಾದ ಜನರಿಗೆ ಕುಡಿಯಲು ಶುದ್ಧ ನೀರು, ವಿದ್ಯುತ್‌ ಮತ್ತು ಜನರೇಟರ್‌ಗಳಿಗೆ ಡೀಸೆಲ್ ನ ಅಗತ್ಯವಿದೆ.

600 ಟ್ರಕ್‌ಗಳು ನೆರವು ತರಲಿವೆ - ಸಂಘರ್ಷ ಪ್ರಾರಂಭವಾಗುವ ಮೊದಲು ಬಂದಿದ್ದಕ್ಕಿಂತ 200 ಹೆಚ್ಚು. ಗಾಜಾದಲ್ಲಿ ವಾಸಿಸುವ 2.3 ಮಿಲಿಯನ್ ಜನರ ಭೀಕರ ಪರಿಸ್ಥಿತಿಯ ಚಿತ್ರವನ್ನು ಧರ್ಮಗುರುವಾದ ರೊಮೆನೆಲ್ಲಿರವರು ಚಿತ್ರಿಸಿದ್ದಾರೆ: “ಸಂಘರ್ಷದ ಸಮಯದಲ್ಲಿ, ಏನೂ ಸಾಧ್ಯವಾಗದ ದಿನಗಳು ಇದ್ದವು, ಆದ್ದರಿಂದ 600 ಟ್ರಕ್‌ಗಳು ಒಳ್ಳೆಯ ಸಂಖ್ಯೆ, ಆದರೂ ಖಂಡಿತವಾಗಿಯೂ ಸಾಕಾಗುವುದಿಲ್ಲ. ”ಗಾಜಾ ಗಡಿಯಲ್ಲಿರುವ ಜನರಿಗೆ ಅಂತರರಾಷ್ಟ್ರೀಯ ಸಮುದಾಯವು ನೆರವು ನೀಡುತ್ತದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

ಅಕ್ಟೋಬರ್ 2023 ರಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ, ವಿಶ್ವಗುರು ಫ್ರಾನ್ಸಿಸ್ ರವರು ಪ್ರತಿದಿನ ಸಂಜೆ ಧರ್ಮಗುರು ರೊಮೆನೆಲ್ಲಿರವರಿಗೆ ಕರೆ ಮಾಡಿ ಪರಿಶೀಲಿಸುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ ಜನವರಿ 18 ರಂದು, ಧರ್ಮಕೇಂದ್ರದ ಧರ್ಮಗುರುವು ಈ ಕರೆಯನ್ನು "ತುಂಬಾ ಸುಂದರ" ಎಂದು ಬಣ್ಣಿಸಿದರು.

ಏಕೆಂದರೆ, ಆ ಕರೆಯ ಸಮಯದಲ್ಲಿ, ಹಲವಾರು ನಿರಾಶ್ರಿತರು ಮತ್ತು ಮಕ್ಕಳು ಹಾಜರಿದ್ದರು. ನಿರಾಶ್ರಿತರು ವಿಶ್ವಗುರುಗಳ ಬೆಂಬಲಕ್ಕೆ ಧನ್ಯವಾದ ಹೇಳಲು ಈ ಕರೆಯನ್ನು ಬಳಸಿದರು. ಅವರು ಬ್ಯಾನರ್ ತಯಾರಿಸಿ ಇಂಗ್ಲಿಷ್, ಸ್ಪ್ಯಾನಿಷ್, ಅರೇಬಿಕ್ ಮತ್ತು ಇಟಾಲಿಯದ ಭಾಷೆಗಳಲ್ಲಿ ಒಂದು ನುಡಿಗಟ್ಟು ಹೇಳಿದರು.

ವಿಶ್ವಗುರು ಫ್ರಾನ್ಸಿಸ್ ರವರನ್ನು ನೋಡುವುದು ಎಷ್ಟು ಸುಂದರವಾಗಿದೆ ಎಂದು ಹೇಳಿದರು ಮತ್ತು ಗಾಜಾದಲ್ಲಿ ಶಾಂತಿ ಬರುತ್ತಿದೆ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಈ ನುಡಿಗಟ್ಟು ಎಲ್ಲರ ಮೇಲೆ ಪರಿಣಾಮ ಬೀರಿತು ಎಂದು ಧರ್ಮಕೇಂದ್ರದ ಧರ್ಮಗುರು ರೊಮೆನೆಲ್ಲಿರವರು ಹೇಳಿದರು. "ಕದನ ವಿರಾಮವು ಶಾಂತಿಗೆ ಸಮಾನಾರ್ಥಕವಲ್ಲ ಎಂದು ನಮಗೆ ತಿಳಿದಿದೆ, ಆದರೆ ಇದು ಈ ಯುದ್ಧದ ಅಂತ್ಯದತ್ತ ಮತ್ತು ಗಾಜಾದ ಜೀವನದಲ್ಲಿ ಹೊಸ ಅಧ್ಯಾಯದ ಆರಂಭದತ್ತ ಒಂದು ಹೆಜ್ಜೆಯಾಗಿದೆ" ಎಂದು ಅವರು ವಿವರಿಸಿದರು.

ಪ್ರತಿದಿನ, ವಿಶ್ವಗುರುಗಳು ಗಾಜಾದ ಜನರಿಗೆ ತಮ್ಮ ಆಶೀರ್ವಾದವನ್ನು ನೀಡುತ್ತಾರೆ. ಜೆರುಸಲೇಮ್‌ನ ಲತೀನ್ ಪಿತೃಪ್ರಧಾನರು ಹೇಳಿದಂತೆ, ವಿಶ್ವಗುರು ಫ್ರಾನ್ಸಿಸ್ ರವರು "ನಮ್ಮಲ್ಲಿ ಒಬ್ಬರು, ನಮ್ಮ ಸಮುದಾಯದ ಒಬ್ಬರು, ನಮ್ಮ ಧರ್ಮಕೇಂದ್ರದಲ್ಲಿ ಒಬ್ಬರಾಗಿದ್ದಾರೆ" ಎಂದು ಧರ್ಮಗುರು ರೊಮೆನೆಲ್ಲಿರವರು ಹೇಳಿದರು.

ಜೀವನ ಹೊಸದಾಗಿ ಪ್ರಾರಂಭ
ಕದನ ವಿರಾಮದ ಬೆಳಕಿನಲ್ಲಿ, ಧರ್ಮಕೇಂದ್ರದ ಧರ್ಮಗುರು ಜನರನ್ನು ಕುರಿತು, ಜನರು "ನಿಜವಾಗಿಯೂ, ತುಂಬಾ ದಣಿದಿದ್ದಾರೆ, ತುಂಬಾ ದಣಿದಿದ್ದಾರೆ" ಎಂದು ಬಣ್ಣಿಸಿದರು. ಆದರೂ, ಇದರ ಹೊರತಾಗಿಯೂ, ಧರ್ಮಗುರು ರೊಮೆನೆಲ್ಲಿರವರು "ಒಂದು ರೀತಿಯ ಪ್ರಶಾಂತತೆ, ಒಂದು ರೀತಿಯ ಶಾಂತಿ ಇದೆ, ಆದರೆ ನಾವು ಅದನ್ನು ಪ್ರತಿದಿನವೂ ಅಂದರೆ, ದಿನದಿಂದ ದಿನಕ್ಕೆ ಸ್ವೀಕರಿಸಬೇಕಾಗಿದೆ" ಎಂದು ಹೇಳಿದರು.

ಗಾಜಾ ಗಡಿಯಲ್ಲಿ ಮಾಡಲು ಬಹಳಷ್ಟಿದ್ದು, ಯಾವುದಾದರೂ ಒಂದು ರೀತಿಯಲ್ಲಿ ಸಹಾಯ ಮಾಡಿದ, ಅನೇಕ ಜನರಿಗೆ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ನಿರ್ದಿಷ್ಟವಾಗಿ ಹೇಳುವುದಾದರೆ, ಡಿಸೆಂಬರ್ 2024 ರಲ್ಲಿ ಮಾತ್ರ ಧರ್ಮಸಭೆಯು ಸುಮಾರು 60,000 ಜನರಿಗೆ ಹಣ್ಣು ಮತ್ತು ತರಕಾರಿಗಳನ್ನು ಒದಗಿಸಿದೆ ಎಂದು ಅವರು ಒತ್ತಿ ಹೇಳಿದರು.

ಹಲವಾರು ದೇವಾಲಯದ ಕಟ್ಟಡಗಳು ಹಾನಿಗೊಳಗಾಗಿದ್ದರೂ ಅಥವಾ ನಾಶವಾಗಿದ್ದರೂ ಸಹ, ಧರ್ಮಕೇಂದ್ರದ ಧರ್ಮಗುರುವು, ದೇವಾಲಯಗಳನ್ನು ಮತ್ತೆ ತೆರೆಯುತ್ತೇವೆ ಮತ್ತು ಪುನರ್ನಿರ್ಮಿಸುತ್ತೇವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

20 ಜನವರಿ 2025, 15:16