PALESTINIAN-ISRAEL-CONFLICT-RELIGION-CHRISTIANITY-CHRISTMAS PALESTINIAN-ISRAEL-CONFLICT-RELIGION-CHRISTIANITY-CHRISTMAS  (AFP or licensors)

ಕುಟುಂಬವಿಲ್ಲದ ಮಕ್ಕಳಿಗೆ ಪ್ರೀತಿಯನ್ನು ನೀಡುತ್ತಿರುವ ಧಾರ್ಮಿಕ ಅನಾಥಾಲಯ – ಬೆತ್ಲೆಹೇಮ್

ಬೆತ್ಲೆಹೇಮಿನಲ್ಲಿ ಇರುವ ಪವಿತ್ರ ಕುಟುಂಬ ಅನಾಥಾಲಯವನ್ನು ಸಂತ ವಿನ್ಸೆಂಟ್ ಡಿ ಪಾಲ್ ಸಭೆಯ ಧರ್ಮಸಂಸ್ಥೆಯಾದ ಸೇವಾ ಪುತ್ರಿಯರು(Sisters of Charity) ನಡೆಸುತ್ತಿದ್ದಾರೆ. ಇಲ್ಲಿ ಕುಟುಂಬವಿಲ್ಲದ, ತ್ಯಜಿಸಲ್ಪಟ್ಟ ಅಥವಾ ಅನಾಥರಾದ ಆರು ವರ್ಷ ವಯಸ್ಸಿನವರೆಗೆಗಿನ ಮಕ್ಕಳಿಗೆ ಆಶ್ರಯ ನೀಡಲಾಗುತ್ತದೆ. “ಇಲ್ಲಿ ನಾವು ಪ್ರತಿದಿನ ಜೀವಂತ ಯೇಸುವನ್ನು ಆಚರಿಸುತ್ತೇವೆ. ಸಮಾಜದಿಂದ ತಿರಸ್ಕೃತರಾದ ಈ ಮಕ್ಕಳನ್ನು ನಮ್ಮ ಕೈಗಳಲ್ಲಿ ಅಪ್ಪಿಕೊಳ್ಳುವ ಮೂಲಕ, ನಾವು ಕ್ರಿಸ್ತನನ್ನೇ ಸ್ವಾಗತಿಸುತ್ತೇವೆ,” ಎಂದು ಒಬ್ಬ ಸಹೋದರಿ ಹೇಳುತ್ತಾರೆ.

ಬೆತ್ಲೆಹೇಮಿನ “ಪವಿತ್ರ ಕುಟುಂಬ” ಅನಾಥಾಲಯದ ಕೊಠಡಿಗಳೊಳಗೆ ಒಂದು ನಿಶ್ಶಬ್ದ ಕಂಪನ ಹರಡಿಕೊಂಡಿದೆ. ಅದು ಭೂಕಂಪವಲ್ಲ; ಸೌಮ್ಯವಾದರೂ ಮಕ್ಕಳ  ಪ್ರಬಲವಾದ ಚೈತನ್ಯದಿಂದ ಉಂಟಾಗುವ ನಡುಕ.

ತೊಟ್ಟಿಲಿನಿಂದ ಸಹೋದರಿ ಎತ್ತಿಕೊಂಡಾಗ ನಗುವ ಯೋಸೆಫ್.

ಮರಿಯಂ—ತನ್ನ ಹಳದಿ ಚೆಂಡನ್ನು ಬಿಟ್ಟೇ ಬಿಡದೆ ಓಡಾಡುತ್ತಾಳೆ.

ಓಮರ್—ಏನೂ ಮಾಡದೆ ನಿಂತುಕೊಂಡು, ಒಂದು ಮೃದುವಾದ ಸ್ಪರ್ಶಕ್ಕಾಗಿ ಕಾಯುತ್ತಾನೆ.

ಇಲ್ಲಿ ಕೊಠಡಿಗಳನ್ನು ತುಂಬಿರುವುದು ಶಬ್ದವಲ್ಲ, ಆಟವಲ್ಲ—ಪ್ರೀತಿಯ ದಾಹ.

ಸಂತ ವಿನ್ಸೆಂಟ್ ಡಿ ಪೌಲ್ ಧಾರ್ಮಿಕಸಹೋದರಿಯರು ನಡೆಸುವ ಈ ಪವಿತ್ರ ಕುಟುಂಬ ಅನಾಥಾಲಯದಲ್ಲಿ, ತ್ಯಜಿಸಲ್ಪಟ್ಟ ಮತ್ತು ಅನಾಥರಾದ ಆರು ವರ್ಷದೊಳಗಿನ ಮಕ್ಕಳು ಆಶ್ರಯ ಪಡೆಯುತ್ತಾರೆ. ಬಣ್ಣಬಣ್ಣದ ಕ್ರೇಯಾನ್‌ಗಳು, ಆಟಿಕೆಗಳು ಮತ್ತು ನಗುನಗುತ್ತ ಓಡಾಡುವ ಹೆಜ್ಜೆಗಳ ನಡುವೆ ಜೀವನ ನಿಧಾನವಾಗಿ ಸಾಗುತ್ತದೆ.

ಕಣ್ಣಿನ ನೋಟಗಳು, ಮಡಿಲಲ್ಲಿ ಸೇರುವ ಅಪ್ಪುಗೆಗಳು—ಇವೆಲ್ಲವೂ ಕಣ್ಣೀರನ್ನು ತಡೆಯಲಾಗದ ಭಾವನೆಯನ್ನು ಹುಟ್ಟಿಸುತ್ತವೆ. ಈ ಮಕ್ಕಳು ಆಹಾರ, ಶಿಕ್ಷಣ, ವೈದ್ಯಕೀಯ ಆರೈಕೆ ಮಾತ್ರವಲ್ಲ; ಅದಕ್ಕಿಂತ ಮಿಗಿಲಾಗಿ ಅಂಗೀಕಾರ ಮತ್ತು ಆತ್ಮೀಯತೆಯನ್ನು ಇಲ್ಲಿ ಪಡೆಯುತ್ತಾರೆ.

ಸಹೋದರಿಯೊಬ್ಬರು ಹೇಳುವಂತೆ, “ನಾವು ಇಲ್ಲಿ ಪ್ರತಿದಿನ ಜೀವಂತ ಯೇಸುವನ್ನು ಆಚರಿಸುತ್ತೇವೆ. ಸಮಾಜ ತಳ್ಳಿಹಾಕಿದ ಈ ಮಕ್ಕಳನ್ನು ನಾವು ಅಪ್ಪಿಕೊಳ್ಳುವಾಗ, ಕ್ರಿಸ್ತನನ್ನೇ ನಮ್ಮ ಕೈಗಳಲ್ಲಿ ಸ್ವೀಕರಿಸುತ್ತೇವೆ.” ಬೆತ್ಲೆಹೇಮಿನ ಈ ಚಿಕ್ಕ ಕೊಠಡಿಗಳಲ್ಲಿ, ಪ್ರೀತಿಯೇ ಪ್ರಾರ್ಥನೆ. ಅಪ್ಪುಗೆಯೇ ಸಾಕ್ಷಿ. ಮಕ್ಕಳೇ ಬದುಕಿನ ಶುಭಸಂದೇಶ.

ಯೇಸುವಿನಂತಿರುವ ಮಕ್ಕಳು

“ಈ ಮಕ್ಕಳು ಅನಾಥರು, ತ್ಯಜಿಸಲ್ಪಟ್ಟವರು, ಕೆಲವರು ಬೀದಿಗಳಲ್ಲೇ ಪತ್ತೆಯಾದವರು,” ಎಂದು ವಿನ್ಸೆಂಟಿಯನ್ ಸಮುದಾಯದ ಪ್ರಾಂತೀಯ ಮುಖ್ಯಸ್ಥರಾದ ವಂದನೀಯ ಗುರು ಕರೀಂ ಮರೂನ್ ವಿವರಿಸುತ್ತಾರೆ.

“ಇದು ಎಲ್ಲ ದೃಷ್ಟಿಕೋನಗಳಿಂದಲೂ ನೋವಿನ ವಾಸ್ತವ್ಯ. ಇವರಲ್ಲಿ ಅನೇಕರು ಅತಿದೌರ್ಬಲ್ಯಪೂರ್ಣ ಕುಟುಂಬ ಪರಿಸ್ಥಿತಿಗಳಲ್ಲಿ ಹುಟ್ಟಿದವರು. ಕೆಲವರು ಏಕಾಂಗಿ ಯುವ ತಾಯಂದಿರ ಮಕ್ಕಳಾಗಿದ್ದು, ತಮ್ಮ ಕುಟುಂಬಗಳಿಂದ ಜೀವಭಯದ ಕಾರಣ ಮಕ್ಕಳನ್ನು ತ್ಯಜಿಸಬೇಕಾದ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ.”

“ಸಹೋದರಿಯರು ಆ ನವಜಾತ ಶಿಶುಗಳನ್ನು ಸ್ವೀಕರಿಸುತ್ತಾರೆ, ಬೆಳೆಸುತ್ತಾರೆ, ಪ್ರೀತಿಸುತ್ತಾರೆ.”

“ಈ ಮಕ್ಕಳು ಯೇಸುವಿನಂತೆಯೇ. ದುರ್ಬಲತೆ, ತ್ಯಜನೆ ಮತ್ತು ಗಾಯಗೊಂಡ ಸಮಾಜದೊಳಗೆ ಹುಟ್ಟಿದವರು. ಇವರಿಗೆ ಅಪಾರ ಪ್ರೀತಿ ಮತ್ತು ಮೃದುತನ ಬೇಕು.”

ಇಲ್ಲೊಂದು ಆಳವಾದ ರಹಸ್ಯವಿದೆ—ಇವರಿಗೆ ಮನೆ ಇದೆ, ಆಹಾರ ಇದೆ, ಆರೈಕೆ ಇದೆ, ಮಮತೆ ಇದೆ. ಆದರೂ, ತಾಯಿ ಮತ್ತು ತಂದೆಯ ಕೊರತೆಯ ತವಕ ಸದಾ ಹೃದಯದೊಳಗೆ ಉಳಿದೇ ಇರುತ್ತದೆ” ಎಂದು ಸಹೋದರಿಯೊಬ್ಬರು ಹೇಳುತ್ತಾರೆ.

ಅನಾಥಾಲಯದ ವ್ಯವಸ್ಥೆ

ಬೆತ್ಲೆಹೇಮಿನ ಪವಿತ್ರ ಕುಟುಂಬ ಅನಾಥಾಲಯದಲ್ಲಿ ಪ್ರಸ್ತುತ 45 ಮಕ್ಕಳು ಶಾಶ್ವತವಾಗಿ ವಾಸಿಸುತ್ತಿದ್ದಾರೆ. ಇದರೊಂದಿಗೆ, ಹಗಲಿನ ವೇಳೆಯಲ್ಲಿ ಕೆಲಸಕ್ಕೆ ಹೋಗುವ ಬಡ ಕುಟುಂಬಗಳ  35 ಮಕ್ಕಳಿಗೆ ದಿನಪಾಲನಾ ಸೇವೆ (ಡೇ–ಕೇರ್) ಕೂಡ ಇಲ್ಲಿ ಒದಗಿಸಲಾಗುತ್ತಿದೆ. ಈ ಮೂಲಕ, ಆರು ವರ್ಷ ವಯಸ್ಸಿನವರೆಗೆ ಒಟ್ಟು ಸುಮಾರು 80 ಮಕ್ಕಳಿಗೆ ಈ ಸಂಸ್ಥೆ ಆಶ್ರಯ ನೀಡುತ್ತಿದೆ.

ಈ ಅನಾಥಾಲಯದ ವ್ಯವಸ್ಥೆ ಅತ್ಯಂತ ಕ್ರಮಬದ್ಧವಾಗಿ ರೂಪುಗೊಂಡಿದೆ. ಇಲ್ಲಿ ಅಡುಗೆಮನೆ, ಭೋಜನಾಲಯ, ದೇವಾಲಯ, ಪ್ರಾರ್ಥನಾಲಯ, ವಸತಿಗೃಹಗಳು, ತರಗತಿ ಕೋಣೆಗಳು ಹಾಗೂ ಆಟದ ಮೈದಾನಗಳು ಇವೆ.

ವಸತಿಗೃಹಗಳನ್ನು ಮಕ್ಕಳ ವಯಸ್ಸಿನ ಆಧಾರದ ಮೇಲೆ ವಿಭಜಿಸಲಾಗಿದೆ. ನವಜಾತ ಶಿಶುಗಳಿಗಾಗಿ (9 ತಿಂಗಳವರೆಗೆ) ಪ್ರತ್ಯೇಕ ನರ್ಸರಿ ಕೊಠಡಿ ಇದೆ. ಒಂದು ವರ್ಷದಿಂದ ಒಂದು ಮತ್ತು ಅರ್ಧ ವರ್ಷ ವಯಸ್ಸಿನ ಮಕ್ಕಳಿಗಾಗಿ ಹಾಸಿಗೆಗಳಿರುವ ತೊಟ್ಟಿಲುಗಳ ಕೊಠಡಿ ಇದೆ. ಮೂರು ವರ್ಷ ವಯಸ್ಸಿನ ಮಕ್ಕಳಿಗಾಗಿ ಮತ್ತೊಂದು ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಅತಿ ಹಿರಿಯ ಮಕ್ಕಳಿಗಾಗಿ ದೊಡ್ಡ ಹಾಸಿಗೆಗಳಿರುವ ಪ್ರತ್ಯೇಕ ಕೊಠಡಿಯೂ ಇದೆ.

ಶಿಕ್ಷಣ ವ್ಯವಸ್ಥೆಯೂ ವಯಸ್ಸಿನ ಆಧಾರದ ಮೇಲೆ ರೂಪುಗೊಂಡಿದೆ. ನವಜಾತ ಮಕ್ಕಳಿಗಾಗಿ ಪ್ರತ್ಯೇಕ ತರಗತಿ, ಮಧ್ಯಂತರ ಹಂತದ ಮಕ್ಕಳಿಗೆ ವಿಶೇಷ ತರಗತಿಗಳು ಮತ್ತು ಹಿರಿಯ ಮಕ್ಕಳಿಗಾಗಿ ವಿಭಿನ್ನ ತರಗತಿ ಕೋಣೆಗಳು ಇವೆ.

ಈ ಸಂಪೂರ್ಣ ವ್ಯವಸ್ಥೆಯನ್ನು ನಿರಂತರವಾಗಿ ನಡೆಸಲು ಸುಮಾರು 70 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಸಹೋದರಿಯರು, ಶಿಕ್ಷಕರು, ವೈದ್ಯರು ಮತ್ತು ಸ್ವಯಂಸೇವಕರು ಸೇರಿದ್ದಾರೆ. ಈ ಎಲ್ಲರ ಸೇವೆಯಿಂದಲೇ ಮಕ್ಕಳಿಗೆ ಆಹಾರ, ಶಿಕ್ಷಣ, ವೈದ್ಯಕೀಯ ಆರೈಕೆ ಮತ್ತು ಮಾನವೀಯ ಮಮತೆ ಒದಗಿಸಲಾಗುತ್ತಿದೆ.

ತಳ್ಳಲ್ಪಟ್ಟಾಗ ಸ್ವೀಕರಿಸುವುದು

“ಬೆತ್ಲೆಹೇಮಿನಲ್ಲಿ ಕ್ರಿಸ್ತಜಯಂತಿ ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ. ಆದರೆ ಇಲ್ಲಿ ನಾವು ಜೀವಂತ ಯೇಸುವನ್ನು ಪ್ರತಿದಿನವೂ ಆಚರಿಸುತ್ತೇವೆ,” ಎಂದು ಕಳೆದ ಇಪ್ಪತ್ತು ವರ್ಷಗಳಿಂದ ಈ ಅನಾಥಾಲಯದ ಮಕ್ಕಳನ್ನು ಆರೈಕೆ ಮಾಡುತ್ತಿರುವ ಸಹೋದರಿ ಲಾವ್ಡಿ ಫಾರೆಸ್ ಹೇಳುತ್ತಾರೆ.

“ನಾವು ಮಾತುಗಳಿಂದ ಧರ್ಮೋಪದೇಶ ಮಾಡುವುದಿಲ್ಲ. ನಾವು ಯಾರು, ನಾವು ಏನು ಮಾಡುತ್ತೇವೆ ಎಂಬುದರ ಮೂಲಕವೇ ನಮ್ಮ ಧಾರ್ಮಿಕ ಗುರುತನ್ನು ತೋರಿಸುತ್ತೇವೆ. ಸಮಾಜದಿಂದ ತಳ್ಳಲ್ಪಟ್ಟ ಈ ಮಕ್ಕಳನ್ನು ನಾವು ನಮ್ಮ ಕೈಗಳಲ್ಲಿ ಅಪ್ಪಿಕೊಳ್ಳುವಾಗ, ಕ್ರಿಸ್ತನನ್ನೇ ಸ್ವೀಕರಿಸುತ್ತೇವೆ. ಇಲ್ಲಿ ಅವರು ಪ್ರೀತಿಯನ್ನು, ತೆರೆದ ಕೈಗಳನ್ನು ಮತ್ತು ಆತ್ಮೀಯತೆಯನ್ನು ಕಾಣುತ್ತಾರೆ.ಆದರೆ ಈ ಆರೈಕೆ ಅನಂತಕಾಲ ಇರುವುದಿಲ್ಲ." 

“ಬೆತ್ಲೆಹೇಮಿನಲ್ಲಿ ಕ್ರಿಸ್ತಜಯಂತಿ ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ. ಆದರೆ ಇಲ್ಲಿ ನಾವು ಜೀವಂತ ಯೇಸುವನ್ನು ಪ್ರತಿದಿನವೂ ಆಚರಿಸುತ್ತೇವೆ,” ಎಂದು ಕಳೆದ ಇಪ್ಪತ್ತು ವರ್ಷಗಳಿಂದ ಈ ಅನಾಥಾಲಯದ ಮಕ್ಕಳನ್ನು ಆರೈಕೆ ಮಾಡುತ್ತಿರುವ ಸಹೋದರಿ ಲಾವ್ಡಿ ಫಾರೆಸ್ ಹೇಳುತ್ತಾರೆ.

“ನಾವು ಮಾತುಗಳಿಂದ ಧರ್ಮೋಪದೇಶ ಮಾಡುವುದಿಲ್ಲ. ನಾವು ಯಾರು, ನಾವು ಏನು ಮಾಡುತ್ತೇವೆ ಎಂಬುದರ ಮೂಲಕವೇ ನಮ್ಮ ಧಾರ್ಮಿಕ ಗುರುತನ್ನು ತೋರಿಸುತ್ತೇವೆ. ಸಮಾಜದಿಂದ ತಳ್ಳಲ್ಪಟ್ಟ ಈ ಮಕ್ಕಳನ್ನು ನಾವು ನಮ್ಮ ಕೈಗಳಲ್ಲಿ ಅಪ್ಪಿಕೊಳ್ಳುವಾಗ, ಕ್ರಿಸ್ತನನ್ನೇ ಸ್ವೀಕರಿಸುತ್ತೇವೆ. ಇಲ್ಲಿ ಅವರು ಪ್ರೀತಿಯನ್ನು, ತೆರೆದ ಕೈಗಳನ್ನು ಮತ್ತು ಆತ್ಮೀಯತೆಯನ್ನು ಕಾಣುತ್ತಾರೆ.” ಆದರೆ ಈ ಆರೈಕೆ ಅನಂತಕಾಲ ಇರುವುದಿಲ್ಲ ಎಂದು ಸಹೋದರಿ  ಫಾರೆಸ್ ಹೇಳುತ್ತಾರೆ.

“ನಾವು ಇವರನ್ನು ಆರು ವರ್ಷಗಳವರೆಗೆ ಮಾತ್ರ ಜೊತೆಯಾಗಿ ನಡೆಸಿಕೊಳ್ಳಬಹುದು. ಅವರು ಇಲ್ಲಿಂದ ಹೊರಡುವ ಸಮಯ ಬಂದಾಗ ಅದು ಯಾವಾಗಲೂ ನೋವಿನ ಕ್ಷಣವೇ. ನಂತರ ಅವರ ಜೀವನ ಯಾವ ದಿಕ್ಕಿನಲ್ಲಿ ಸಾಗುತ್ತದೆ, ಅವರಿಗೆ ಯಾವ ಭವಿಷ್ಯ ಕಾದಿದೆ ಎಂಬುದು ನಮಗೆ ತಿಳಿಯದು.”

ಅದಕ್ಕಾಗಿಯೇ, ಬೆತ್ಲೆಹೇಮಿನಲ್ಲಿ ನಮ್ಮ ಈ ಸೇವೆಯ ಮಹತ್ವ ಇನ್ನಷ್ಟು ಹೆಚ್ಚುತ್ತದೆ ಎಂದು ಅವರು ವಿವರಿಸುತ್ತಾರೆ.

“ನಾವು ಇರುವ ಪ್ರತಿದಿನವೂ, ಸಾಧ್ಯವಾದಷ್ಟು ಕಾಲ, ಇವರನ್ನು ಕಾಪಾಡುವುದು, ಪ್ರೀತಿಸುವುದು, ಮಾನವೀಯ ಗೌರವವನ್ನು ಅನುಭವಿಸಲು ಅವಕಾಶ ನೀಡುವುದು ನಮ್ಮ ಕರ್ತವ್ಯ. ನಂತರ ಅವರನ್ನು ಪ್ಯಾಲೆಸ್ತೀನಿನ ರಾಜ್ಯ ವ್ಯವಸ್ಥೆಗೆ ಒಪ್ಪಿಸಲಾಗುತ್ತದೆ. ಇಲ್ಲಿ ಕಳೆದ ಈ ವರ್ಷಗಳು, ಅವರ ಜೀವನದ ಅಡಿಪಾಯವಾಗಲೆಂದು ನಾವು ಬಯಸುತ್ತೇವೆ.” ಹೇಳುತ್ತಾರೆ.

ದೈವಕೃಪೆಯ ಹಸ್ತಕ್ಷೇಪ

ವಂ. ಕರೀಮ್ ಮರುನ್ ಈ ವಾಸ್ತವವನ್ನು ಒಂದೆಡೆ “ತೆರೆದ ಗಾಯ” ಎಂದು, ಮತ್ತೊಂದೆಡೆ “ಪ್ರತಿದಿನ ನಡೆಯುವ ಅದ್ಭುತ” ಎಂದು ವರ್ಣಿಸುತ್ತಾರೆ.

ವೇದನಾಕರ ವಾಸ್ತವವೇನೆಂದರೆ, “ಸಂಪೂರ್ಣವಾಗಿ ಒಂಟಿಯಾಗಿರುವ ತಾಯಂದಿರಿದ್ದಾರೆ. ಕುಟುಂಬದ ಬೆಂಬಲವಿಲ್ಲದೆ, ಮಾತಿನ ಮೂಲಕ ಅಥವಾ ಅಂತರ್ಜಾಲದ (ಇಂಟರ್ನೆಟ್‌ನ) ಮೂಲಕ ಆಸ್ಪತ್ರೆಗಳಲ್ಲಿ ಸಹಾಯವನ್ನು ಬೇಡುತ್ತಾರೆ. ಮಗು ಜನಿಸಿದ ಬಳಿಕ, ತಮ್ಮ ಜೀವಭಯದಿಂದ ಅಥವಾ ಸಾಮಾಜಿಕ ಒತ್ತಡದಿಂದ, ಅವರು ಮಗುವಿನ ಮೇಲಿನ ಎಲ್ಲ ಹಕ್ಕುಗಳನ್ನು ತ್ಯಜಿಸಿ ತಮ್ಮ ಕುಟುಂಬಗಳಿಗೆ ಮರಳುತ್ತಾರೆ. ಆ ಮಗು ಮಾತ್ರ ಸೇಂಟ್ ವಿನ್ಸೆಂಟ್ ಡಿ ಪೌಲ್ ಅವರ ಧರ್ಮಕನ್ಯೆಯರ ಆರೈಕೆಯಲ್ಲಿ ಉಳಿಯುತ್ತದೆ.”

ಆದರೆ ಇನ್ನೊಂದು ಮುಖವೂ ಇದೆ — ಭರವಸೆಯ ಮುಖ.

“ಆರ್ಥಿಕವಾಗಿ ನೋಡಿದರೆ, ಈ ಶಿಶುವಿಹಾರ ಬಹುತೇಕ ಸಂಪೂರ್ಣವಾಗಿ ಖಾಸಗಿ ದೇಣಿಗೆಗಳ ಮೇಲೆಯೇ ನಿಂತಿದೆ,” ಎಂದು ಫಾದರ್ ಮರುನ್ ಹೇಳುತ್ತಾರೆ. ಕ್ರೈಸ್ತ ಯಾತ್ರಿಕರು, ಅತಿಥಿಗೃಹದಲ್ಲಿ ಉಳಿಯುವವರು, ಇಸ್ರಾಯೇಲಿ ಜನರು, ಹಾಗೂ ಪ್ಯಾಲೆಸ್ತೀನಿಯ ಕುಟುಂಬಗಳು — ಎಲ್ಲರೂ ಸೇರಿ ಧರ್ಮಕನ್ಯೆಯರ ಸೇವೆಗೆ ನೆರವಾಗುತ್ತಾರೆ.

ಸಹೋದರಿ ಫಾರೆಸ್ ಇದನ್ನು,“ಇವೆಲ್ಲವೂ ದೈವಕೃಪೆಯಿಂದಲೇ ಸಾಧ್ಯವಾಗಿದೆ. ನಾವು ಇದನ್ನು ನಮ್ಮ ‘ಬಿಳಿ ಕೈಗಳು’ ಎಂದು ಕರೆಯುತ್ತೇವೆ. ಇಲ್ಲಿ ಬರುವ ಪ್ರತಿಯೊಬ್ಬರೂ ತಮ್ಮ ಶಕ್ತಿಗೆ ತಕ್ಕಷ್ಟು ಕೊಡುತ್ತಾರೆ. ಒಂದು ನಾಣ್ಯವಾದರೂ ನಮಗೆ ಸಂಪತ್ತೇ. ಕರ್ತನು ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ” ಎಂದು ವಿವರಿಸುತ್ತಾರೆ.

ಪ್ರೀತಿ ಮತ್ತು ಆತ್ಮೀಯತೆ

ಈ ಅನಾಥಾಲಯದ ಉದ್ದೇಶ ಒಂದೇ—ಈ ಮಕ್ಕಳಿಗೆ ಗೌರವ, ಪ್ರೀತಿ ಮತ್ತು ಬದುಕಿನ ಒಂದು ಅವಕಾಶ ನೀಡುವುದು. ಇಲ್ಲಿ ಬರುವ ಯಾತ್ರಿಕರು ಮಕ್ಕಳೊಂದಿಗೆ ಆಳವಾಗಿ ಬೆಸೆದುಕೊಳ್ಳುತ್ತಾರೆ. ಈ ಆತ್ಮೀಯತೆ ಒಂದೇ ದಿಕ್ಕಿನದ್ದಲ್ಲ; ಮಕ್ಕಳಿಂದಲೂ ಅದೇ ಪ್ರೀತಿ ಮರಳಿ ಬರುತ್ತದೆ.

ಸಹೋದರಿ  ಫಾರೆಸ್ ಅವರ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿ ಉಳಿದಿರುವ ಒಂದು ಘಟನೆ ಇದೆ. ಒಮ್ಮೆ ಫ್ರಾನ್ಸಿನಿಂದ ಬಂದ ಒಂದು ಗುಂಪಿನಲ್ಲಿ, ಒಂದು ಮಹಿಳೆ ಇದ್ದರು. ಅವರು ತಮ್ಮ ಬಾಲ್ಯದಲ್ಲಿ ತ್ಯಜಿಸಲ್ಪಟ್ಟವರೇ. ಆದರೆ ಅವರಿಗೆ ಒಂದು ಕುಟುಂಬದ ಆಶ್ರಯ ಸಿಕ್ಕಿತ್ತು. ಅವರು ಬೆಳೆದರು, ಬದುಕಿನಲ್ಲಿ ನೆಲೆ ಕಂಡರು, ವಿವಾಹವೂ ಆಗಿತ್ತು. ಅವರು ಇಲ್ಲಿ ಮಕ್ಕಳನ್ನು ನೋಡುತ್ತಿದ್ದಂತೆಯೇ ಕಣ್ಣೀರು ಹರಿಸಿದರು.

“ನನಗೆ ಒಂದು ಕುಟುಂಬ ಸಿಕ್ಕಿತು. ಆದರೆ ಈ ಮಕ್ಕಳು? ಇವರಿಗೆ ಮುಂದೆ ಏನು? ಇಲ್ಲಿ ದತ್ತು ನೀಡುವುದು ಅನುಮತಿಸಿಲ್ಲ. ನಾನು ಕೂಡ ಇವರಲ್ಲಿ ಒಬ್ಬಳಾಗಬಹುದಿತ್ತು. ಆದರೆ ನನಗೆ ಒಂದು ಅವಕಾಶ ದೊರೆಯಿತು” ಎಂದು ಹಂಚಿಕೊಂಡ ಮಾತುಗಳು ನನ್ನ ಹೃದಯವನ್ನು ತಟ್ಟಿದವು ಎಂದು ಸಹೋದರಿ ಫಾರೆಸ್ ಹೇಳುತ್ತಾರೆ.

“ನಾವು ಈ ಮಕ್ಕಳನ್ನು ನೋಡಿಕೊಳ್ಳುತ್ತೇವೆ, ಪ್ರೀತಿಸುತ್ತೇವೆ, ಕಾಳಜಿ ವಹಿಸುತ್ತೇವೆ. ಆದರೆ ಯಾವಾಗಲೂ ಏನೋ ಒಂದು ಕೊರತೆ ಉಳಿಯುತ್ತದೆ—ಒಂದು ಕುಟುಂಬ. ಇದೇ ನಮ್ಮ ಅತಿದೊಡ್ಡ ನೋವು,” ಎಂದು ಅವರು ಹೇಳುತ್ತಾರೆ.

ಈ ಪುಟ್ಟ ಮಕ್ಕಳ ಸುತ್ತ ಒಂದು ಮೌನವಾದ, ಆದರೆ ಬಲವಾದ ಸಹಾನುಭೂತಿಯ ಸರಪಳಿ ನಿರ್ಮಾಣವಾಗಿದೆ. ಸ್ವಯಂಸೇವಕರು, ವೈದ್ಯರು, ದಾನಿಗಳು, ಯಾತ್ರಿಕರು, ಸುತ್ತಮುತ್ತಲಿನ ನೆರೆಹೊರೆಯವರು, ಯಾರಾದರೂ ಹಾಲು, ಆಹಾರ, ಬಟ್ಟೆ, ಆಟಿಕೆಗಳು, ಡೈಪರ್‌ಗಳು, ಹೊದಿಕೆಗಳು ಮುಂತಾದ ಏನಾದರೊಂದನ್ನು ತರುತ್ತಾರೆ. ಈ ರೀತಿ, ಈ ಇಲ್ಲಿ ಪ್ರೀತಿ, ಜೀವ ಮತ್ತು ಭರವಸೆ ನಿಧಾನವಾಗಿ ಹರಿದು ಬರುತ್ತದೆ. ಇಲ್ಲಿ ಈ ಮಕ್ಕಳು ಕೇವಲ ಆಶ್ರಯ ಪಡೆಯುವುದಿಲ್ಲ. ಇವರು ಸ್ವತಃ ಪ್ರೀತಿಯ ಕೇಂದ್ರವಾಗುತ್ತಾರೆ. ಇವರೇ ಪ್ರೀತಿಯನ್ನು ಜಗತ್ತಿಗೆ ಮರಳಿ ಕಲಿಸುವವರು.

28 ಡಿಸೆಂಬರ್ 2025, 13:41