Bishop-John-Dolan.jpg Bishop-John-Dolan.jpg 

ಮಾನಸಿಕ ಸ್ವಾಸ್ಥ್ಯಕ್ಕೆ ದೈವ ವಿಶ್ವಾಸ ಮತ್ತು ವಿಜ್ಞಾನ ಎರಡೂ ಅಗತ್ಯ: ಧರ್ಮಾಧ್ಯಕ್ಷ ಡೋಲನ್

ಮಾನಸಿಕ ಆರೋಗ್ಯ ಸಂಬಂಧಿ ತೊಂದರೆಗಳು ಧರ್ಮಸಭೆಗೆ ದೊಡ್ಡ ಧಾರ್ಮಿಕ ಸವಾಲಾಗಿ ಪರಿಣಮಿಸಿರುವ ಸಂದರ್ಭದಲ್ಲಿ, ಅಮೇರಿಕಾದ ಫೀನಿಕ್ಸ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಜಾನ್ ಡೋಲನ್ ಅವರು, ತ್ವರಿತ ಪರಿಹಾರಗಳು ಅಥವಾ ಅತಿಸರಳ ಉತ್ತರಗಳಿಗಿಂತ ನಿಜವಾದ ಬೆಂಬಲವೇ ಅಗತ್ಯವೆಂದು ಒತ್ತಿ ಹೇಳಿದ್ದಾರೆ.

ಧರ್ಮಾಧ್ಯಕ್ಷ ಡೋಲನ್ ಅವರು, ಮಾನಸಿಕ ಅಸ್ವಸ್ಥತೆಯಿಂದ ಬಳಲುವವರ ಕುಟುಂಬಗಳು ಅಥವಾ ಆತ್ಮಹತ್ಯೆಯಿಂದ ತಮ್ಮ ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳು ಅನುಭವಿಸುವ ನೋವಿನ ಕಡೆ ಗಮನ ಹರಿಸುತ್ತಾ, “ಯಾರಾದರೂ ಆತ್ಮಹತ್ಯೆಯಿಂದ ತಮ್ಮ ಆತ್ಮೀಯರನ್ನು ಕಳೆದುಕೊಳ್ಳುವಾಗ, ಅಥವಾ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಯನ್ನು ದಿನದಿಂದ ದಿನಕ್ಕೆ ಕುಸಿಯುತ್ತಿರುವುದನ್ನು ನೋಡುತ್ತಿರುವಾಗ, ಕುಟುಂಬಗಳು ಅಪಾರವಾದ ನೋವನ್ನು ಅನುಭವಿಸುತ್ತವೆ,” ಎಂದು ಅವರು ಹೇಳಿದ್ದಾರೆ.

ಇಚ್ಛಿತ್ತ ವಿಕಲತೆ (ಸ್ಕಿಜೋಫ್ರೇನಿಯಾ) ಅಥವಾ ದ್ವಿಧ್ರುವಿ ಅಸ್ವಸ್ಥತೆ (ಬೈಪೋಲಾರ್ ಡಿಸಾರ್ಡರ್) ಗಳಂತಹ ಸಮಸ್ಯೆಗಳ ಎದುರು ಕುಟುಂಬಸ್ಥರು ಅನೇಕ ಬಾರಿ ಅಸಹಾಯಕರಾಗುತ್ತಾರೆ. ಪ್ರೀತಿ ಇದ್ದರೂ, ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಅವರಿಗೆ ತಿಳಿಯುವುದಿಲ್ಲ.

ಈ ಅಸಹಾಯತೆಯೇ ಕೆಲವೊಮ್ಮೆ ಅತಿಸರಳ ಪರಿಹಾರಗಳ ಕಡೆಗೆ ಕೊಂಡೊಯ್ಯುತ್ತದೆ , “ಶೀಘ್ರ ಪರಿಹಾರಗಳ ಪ್ರಲೋಭನೆಗೆ ಒಳಗಾಗುತ್ತಾರೆ,” ಎಂದು ಧರ್ಮಾಧ್ಯಕ್ಷರು ಹೇಳುತ್ತಾರೆ.

ಇದಕ್ಕೆ ಕೇವಲ ಧಾರ್ಮಿಕ ದೃಷ್ಟಿಕೋನ ಅಥವಾ ಕೇವಲ ವೈದ್ಯಕೀಯ ದೃಷ್ಟಿಕೋನ ಮಾತ್ರ ಸಾಕಾಗುವುದಿಲ್ಲ. “ಯಾರಿಗಾದರೂ ‘ಮತ್ತೆ ದೇವಾಲಯಕ್ಕೆ ಹೋಗಿ’ ಎಂದು ಹೇಳುವುದರಿಂದಲೇ ಸಮಸ್ಯೆ ಪರಿಹಾರವಾಗುವುದಿಲ್ಲ. ಹಾಗೆಯೇ, ಮನೋವೈದ್ಯರ ಬಳಿಗೆ ಕಳುಹಿಸುವುದು ಒಳ್ಳೆಯ ಆರಂಭವಾದರೂ, ಅದೂ ಸಾಕಾಗದು,” ಎಂದು ಅವರು ಎಚ್ಚರಿಸಿದರು.

ನಂಬಿಕೆ ಮತ್ತು ವಿಜ್ಞಾನ – ಎದುರಾಳಿಗಳಲ್ಲ

ಧರ್ಮಾಧ್ಯಕ್ಷ ಡೋಲನ್ ಅವರ ಪ್ರಕಾರ, ಮಾನಸಿಕ ಆರೋಗ್ಯ ಸೇವೆ ಸಂಪೂರ್ಣ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಂಡಿರಬೇಕು. “ಇಲ್ಲಿ ಎಲ್ಲವೂ ಬೇಕು – ಧಾರ್ಮಿಕ ಕಾಳಜಿಯೂ ಬೇಕು, ವೃತ್ತಿಪರ ಸಹಾಯವೂ ಬೇಕು.”  “ದೇವಾಲಯಕ್ಕೆ ಬರಲು ಅವರನ್ನು ಉತ್ತೇಜಿಸುವುದರೊಂದಿಗೆ, ಸಲಹೆಗಾರರು, ಮನೋವೈದ್ಯರು, ಮನೋವಿಜ್ಞಾನಿಗಳ ಬಳಿಗೂ ಹೋಗುವಂತೆ ಪ್ರೋತ್ಸಾಹಿಸಬೇಕು,” ಎಂದು  ತಿಳಿಸುತ್ತಾರೆ.

ನಂಬಿಕೆ ಮತ್ತು ವಿಜ್ಞಾನ ಪರಸ್ಪರ ವಿರೋಧಿಗಳಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದರು. “ನಾವು ಸ್ಪರ್ಧೆ ಮಾಡಬೇಕಿಲ್ಲ. ನಂಬಿಕೆ ಮತ್ತು ವಿಜ್ಞಾನ ಒಂದೇ ದಾರಿಯಲ್ಲಿ ಸಾಗಬೇಕು, ವೈದ್ಯಶಾಸ್ತ್ರ ಮತ್ತು ಮನೋವಿಜ್ಞಾನ ನಂಬಿಕೆಗೆ ಅಪಾಯವಲ್ಲ. ವಿಜ್ಞಾನ ದೇವರಿಂದ ಬಂದ ವರ. ಆದ್ದರಿಂದ ವಿಜ್ಞಾನವೂ ಪವಿತ್ರಾತ್ಮದತ್ತ ವರವೇ,” ಎಂದು  ಹೇಳಿದರು.

ಮಾನಸಿಕ ಅಂಚಿನಲ್ಲಿರುವವರೊಂದಿಗೆ ಸಹಯಾನ

ತಮ್ಮ ಧರ್ಮಾಧ್ಯಕ್ಷೀಯ ವಾಕ್ಯವಾದ “ನನ್ನ ಪ್ರೀತಿಯಲ್ಲಿ ನೆಲೆಸಿರಿ” ಎಂಬುದನ್ನು ವಿವರಿಸುತ್ತಾ, ಧರ್ಮಾಧ್ಯಕ್ಷ ಡೋಲನ್ ಹೃದಯದ ಉದಾಹರಣೆ ನೀಡುತ್ತಾರೆ. ಹೃದಯವು ದೇಹದ ಅಂಚಿನವರೆಗೂ ರಕ್ತವನ್ನು ಕಳುಹಿಸುವಂತೆ, ಮಾನಸಿಕ ಆರೋಗ್ಯ ಸೇವೆಯೂ ಸಮಾಜದ ಅಂಚಿನಲ್ಲಿರುವವರವರೆಗೆ ತಲುಪಬೇಕು.

“ಮಾನಸಿಕ ಆರೋಗ್ಯ ಸೇವೆ ಅಂಚಿನಲ್ಲಿರುವವರ ಬಳಿಗೆ ಹೋಗುವುದೇ ಆಗಿದೆ,” ಎಂದು ಅವರು ಹೇಳಿದರು. ಈ ಸೇವೆಯ ಉದ್ದೇಶ ಯಾರನ್ನಾದರೂ ‘ಸರಿಪಡಿಸುವುದು’ ಅಲ್ಲ, ಆದರೆ ಅವರ ಜೊತೆಗೆ ನಿಲ್ಲುವುದು.

“ನಾವು ರೋಗನಿರ್ಣಯ ಮಾಡುವುದಿಲ್ಲ, ಔಷಧ ನೀಡುವುದಿಲ್ಲ. ಆದರೆ ನಾವು ಜೊತೆಗಿರುತ್ತೇವೆ, ಧಾರ್ಮಿಕ ಸೇವೆಯಲ್ಲ ಇಲ್ಲವೇ ಕಾರ್ಯತಂತ್ರವೂ ಅಲ್ಲ .“ಇದು ಪ್ರಭು ಯೇಸು ಕ್ರಿಸ್ತನ ಪವಿತ್ರ ಹೃದಯದಿಂದ ಹೊರಹೊಮ್ಮುವ ಪ್ರೀತಿಯ ಕಾರ್ಯ,” ಎಂದರು.

ಮೂರು ಪ್ರಮುಖ ಆದ್ಯತೆಗಳು

ಫೀನಿಕ್ಸ್ ಧರ್ಮಕ್ಷೇತ್ರದಲ್ಲಿ ಮಾನಸಿಕ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಧರ್ಮಾಧ್ಯಕ್ಷರಾದ ಡೋಲನ್ ಅವರು ಮೂರು ಸ್ಪಷ್ಟ ಆದ್ಯತೆಗಳನ್ನು ಗುರುತಿಸಿದ್ದಾರೆ.

ಮೊದಲನೆಯದು – ಶಿಕ್ಷಣ.

ವಿಶೇಷವಾಗಿ ಗುರುಗಳು ಮತ್ತು ಉಪಗುರುಗಳಿಗೆ ಮಾನಸಿಕ ಆರೋಗ್ಯ ಪ್ರಥಮ ಸಹಾಯದ ಕುರಿತು ತರಬೇತಿ ನೀಡುವುದು ಬಹಳ ಮುಖ್ಯವೆಂದು ಅವರು ಹೇಳುತ್ತಾರೆ. ಇದರಿಂದ ಪಾದ್ರಿಗಳು ಮತ್ತು ಧಾರ್ಮಿಕ ಸೇವಕರು ಸಂಕಷ್ಟದಲ್ಲಿರುವ ವ್ಯಕ್ತಿಗಳ ಲಕ್ಷಣಗಳನ್ನು ಗುರುತಿಸಿ, ಹೆಚ್ಚಿನ ಅರ್ಥಮಾಡಿಕೊಳ್ಳುವಿಕೆ ಮತ್ತು ಕಾಳಜಿಯೊಂದಿಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ.

ಎರಡನೆಯದು – ಬೆಂಬಲ ಮತ್ತು ಸಾನ್ನಿಧ್ಯ.

ವಿಶೇಷವಾಗಿ ಅತ್ಯಂತ ದುರ್ಬಲ ಪರಿಸ್ಥಿತಿಗಳಲ್ಲಿರುವ ಸ್ಥಳಗಳಲ್ಲಿ, ಉದಾಹರಣೆಗೆ ಕಾರಾಗೃಹಗಳಲ್ಲಿ, ಧರ್ಮಕ್ಷೇತ್ರವು ಹೆಚ್ಚು ಸಕ್ರಿಯವಾಗಿ ಹಾಜರಿರಬೇಕು ಎಂದು ಅವರು ತಿಳಿಸುತ್ತಾರೆ. ಜೈಲುಗಳಲ್ಲಿ ಪರಸ್ಪರ ಸಹಾಯ ಮತ್ತು ಜೊತೆಯಾಗಿ ನಡೆಯುವ (peer-support) ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಒಂಟಿತನದಲ್ಲಿದ್ದರೂ ಸಹ ಮಾನವ ಸಂಬಂಧಗಳು ಎಷ್ಟು ಮುಖ್ಯ ಎಂಬುದನ್ನು ಇದು ತೋರಿಸುತ್ತದೆ.

ಮೂರನೇ ಆದ್ಯತೆ ವ್ಯವಸ್ಥಾತ್ಮಕ ಕ್ರಮಗಳು.

ಅರಿಜೋನಾದ ಮರಿಕೋಪಾ ಕೌಂಟಿಯಲ್ಲಿ ಮಾನಸಿಕ ಆರೋಗ್ಯ ಸಂಕಷ್ಟದಲ್ಲಿರುವ ರೋಗಿಗಳಿಗೆ ಲಭ್ಯವಿರುವ ಹಾಸಿಗೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗಿದೆ. ಮೊದಲು 350 ಇದ್ದ ಹಾಸಿಗೆಗಳು ಈಗ 600 ಆಗಿವೆ. ಇನ್ನಷ್ಟು ಅಗತ್ಯವಿದೆ, ಇದು ದುಬಾರಿ ಆದರೂ ಅತ್ಯವಶ್ಯಕವಾದ ಕ್ರಮವೆಂದು ಧರ್ಮಾಧ್ಯಕ್ಷರು ಒತ್ತಿ ಹೇಳಿದ್ದಾರೆ.

ರೂಪಣೆ ಮತ್ತು ಭರವಸೆ

ಮಾನಸಿಕ ಆರೋಗ್ಯ ಸೇವೆ ಧರ್ಮಗುರುಗಳ ರೂಪಣೆಯಲ್ಲಿಯೂ ಪ್ರಮುಖವಾಗಿದೆ.

“ಮಾನಸಿಕ ಆರೋಗ್ಯದ ಸೇವೆ ಗುರು ತರಬೇತಿ ಕೇಂದ್ರಗಳಿಗೂ  ವಿಸ್ತರಿಸುತ್ತದೆ. ಭವಿಷ್ಯದ ಗುರುಗಳು ಮಾನಸಿಕ ಆರೋಗ್ಯವು ದೂರವಿರಬೇಕಾದ ವಿಷಯವಲ್ಲ, ಬದಲಾಗಿ ಅಪ್ಪಿಕೊಳ್ಳಬೇಕಾದ ಸೇವೆಯೆಂಬ ಅರಿವು ಮೂಡಿಸಲಾಗುತ್ತದೆ ಎಂದು ಧರ್ಮಾಧ್ಯಕ್ಷ ಡೋಲನ್ ವಿವರಿಸುತ್ತಾರೆ. ಇದರಿಂದ ದೇವರ ಪ್ರೀತಿಪಾತ್ರ ಮಕ್ಕಳಾಗಿರುವ ಅರಿವಿನ ಮೇಲೆ ನಿಂತ ಸ್ವಪರಿಚಯ ಮತ್ತು ಬೆಳವಣಿಗೆ ಸಾಧ್ಯವಾಗುತ್ತದೆ ಎಂಬುದೇ ಅಂತಿಮ ಗುರಿ ಎಂದು ಅವರು ಹೇಳಿದರು.

30 ಡಿಸೆಂಬರ್ 2025, 14:16