2023.12.05 2023.12.05  

ಮೊವಿಲಿದಾದ್ ಹ್ಯೂಮಾನಾ’: ಕನಸುಗಳ ಹಾದಿ ಹಿಡಿದವರಿಗೆ ಭರವಸೆಯನ್ನು ಬಿತ್ತುವ ಸೇವೆ

ಸಮಾನತೆಯ ಮನೋಭಾವದಿಂದ ಪ್ರೇರಿತರಾದ ನಿಷ್ಕಳಂಕ ಮರಿಯಮ್ಮನ ಫ್ರಾನ್ಸಿಸ್ಕನ್ ಸನ್ಯಾಸಿನಿಯರು, ಉತ್ತಮ ಭವಿಷ್ಯಕ್ಕಾಗಿ ವಲಸೆಯ ಹಾದಿ ಹಿಡಿದು ಅಮೆರಿಕಾ–ಮೆಕ್ಸಿಕೊ ಗಡಿಗೆ ತಲುಪುವವರಿಗೆ ತಂಗುದಾಣ ಮತ್ತು ಸಹಾಯ ಒದಗಿಸುತ್ತಿದ್ದಾರೆ. “ಮೊವಿಲಿದಾದ್ ಹ್ಯೂಮಾನಾ” ಎಂಬ ತಮ್ಮ ಧರ್ಮಸೇವೆ ಮೂಲಕ, ಅವರು ವಲಸಿಗರನ್ನು ಗೌರವದಿಂದ ಸ್ವೀಕರಿಸಿ, ಹೊಸ ಜೀವನದ ಆಶೆಯನ್ನು ಬಲಪಡಿಸಲು ಶ್ರಮಿಸುತ್ತಿದ್ದಾರೆ.

ಅಗತ್ಯ ಇರುವ ಜಾಗದಲ್ಲೇ ಸೇವೆ

ಸುಮಾರು ಮೂವತ್ತು ವರ್ಷಗಳ ಹಿಂದೆ ಪಿಯೆದ್ರಾಸ್ ನೆಗ್ರಾಸ್ ಧರ್ಮಕ್ಷೇತ್ರ ಗಡಿಯಲ್ಲಿ ದೇಶದಿಂದ ಹೊರಹಾಕಲ್ಪಟ್ಟವರಿಗಾಗಿ ಆಶ್ರಯ ಧಾಮವನ್ನು ಆರಂಭಿಸಿತು. ನಂತರ ವಲಸೆಯ ಪರಿಸ್ಥಿತಿಗಳು ತೀಕ್ಷ್ಣವಾಗಿ ಬದಲಾಗುತ್ತಾ ಬಂದಂತೆ, ಇಂದು ‘ಫ್ರೊಂತೆರಾ ಡಿಗ್ನಾ’ ಎಂದು ಕರೆಯಲ್ಪಡುವ, ಉತ್ತಮ ಬದುಕಿನ ನಿರೀಕ್ಷೆಯೊಂದಿಗೆ ನಡೆದುಕೊಂಡು ಬರುವ ವಲಸಿಗರಿಗೆ ಭರವಸೆಯ ಮರೀಚಿಕೆಯಾಗಿ ನಿಂತಿದೆ.

ಸಹೋದರಿ ಇಸಬೆಲ್ ಅವರು ಎಲ್‌ಸಾಲ್ವಡಾರ್‌ನ ಧಾರ್ಮಿಕ ಸಂಘಟನೆಗಳ ಜೊತೆ ಕಾರ್ಯಮಾಡಿ, ನಂತರ ಸ್ವತಃ ವಲಸೆ ಮಾರ್ಗದ ಹಲವು ಆಶ್ರಯಗಳನ್ನು ಅನುಭವಿಸಿ, ಕೊನೆಗೆ ಮೆಕ್ಸಿಕೊಗೆ ತಲುಪಿದರು. 2018ರಲ್ಲಿ ಅವರು ಬೊಗೊಟಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಂದ ವೆನೆಜುವೇಲಾ ವಲಸಿಗರಿಗೆ ಮಾರ್ಗದರ್ಶನ, ಆಹಾರ, ಸಾಂತ್ವನ ಮತ್ತು ಮಾನವ ಕಳ್ಳಸಾಗಣೆಯ ವಿರುದ್ಧ ಜಾಗೃತಿ ನೀಡುವ ಕೆಲಸ ಮಾಡಿದರು.

ಸಹಕಾರವೇ ಭರವಸೆಯ ದೀಪ

ಕೊವಿಡ್–19 ಸಮಯದಲ್ಲಿ, ಭಗಿನಿಯರು ದಿನಕ್ಕೆ ಸಾವಿರಕ್ಕೂ ಹೆಚ್ಚು ವಲಸಿಗರಿಗೆ ಆಹಾರ, ಹಾಸಿಗೆ, ಔಷಧ ಚಿಕಿತ್ಸೆ ಮತ್ತು ಆಧ್ಯಾತ್ಮಿಕ ಧೈರ್ಯ ಒದಗಿಸಿದರು. ಸ್ಥಳೀಯ ಜನರು, ಧರ್ಮಕೇಂದ್ರಗಳು, ಸ್ವಯಂಸೇವಕರು, ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್(Doctors without Borders), ಮತ್ತು ಫ್ರಾನ್ಸಿಸ್ಕನ್ ನೆಟ್‌ವರ್ಕ್ ಫಾರ್ ಮೈಗ್ರಂಟ್ಸ್(ಫ್ರಾನ್ಸಿಸ್ಕನ್ ವಲಸೆ ಜಾಲ ) —ಎಲ್ಲರ ಸಹಕಾರದಿಂದ ಈ ಸೇವೆ ತಡೆರಹಿತವಾಗಿ ಸಾಗಿತು. ಸಹೋದರಿ ಇಸಬೆಲ್ ಇವರೆಲ್ಲರ ಸೇವೆ ಹಾಗೂ ಸಹಕಾರಕ್ಕೆ ತಾನು ಚಿರಋಣಿ ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ

ಗರ್ಭಿಣಿಯರು, ಅಪಹರಣದಿಂದ ಪಾರಾದವರು, ದುರುಪಯೋಗಕ್ಕೊಳಗಾದವರು—ಇವರ ಕಥೆಗಳು ನೋವು ತುಂಬಿದ್ದರೂ, ತಮ್ಮ ಕನಸನ್ನು ಮನಸ್ಸಿನಲ್ಲಿ ಹಿಡಿದಿರುವ ಧೈರ್ಯವೇ ಭಗಿನಿಯರಿಗೆ ಸೇವೆ ಮಾಡಲು ಮತ್ತಷ್ಟು ಸ್ಫೂರ್ತಿ ನೀಡುತ್ತಿದೆ. ಅನೇಕ ಮಹಿಳೆಯರು ನಂತರ ಧನ್ಯವಾದದ ಸಂದೇಶ ಕಳುಹಿಸುವುದು, ಈ ಸೇವೆಯ ಮಾನವೀಯತೆಯನ್ನು ಇನ್ನಷ್ಟು ಗಾಢಗೊಳಿಸುತ್ತದೆ.

ವಲಸೆ ಮತ್ತು ಪೂಜ್ಯ ಮರಿಯಾ ಕರಿದಾದ್ ಬ್ರೇಡರ್

ತನ್ನ ತಾಯಿ ಹಾಗೂ ತಂಗಿಯ ಉತ್ತಮ ಭವಿಷ್ಯಕ್ಕಾಗಿ ದೇಶ ತೊರೆದು ವಲಸೆ ಬಂದಿರುವ ಕಮಿಲ್ಲೋ, “ಎಲ್ಲ ತಾಯಂದಿರಿಗೆ (ಭಗಿನಿಯರಿಗೆ) ನಾನು ಹೇಳಬೇಕೆಂದಿರುವ ಸಂದೇಶವೆಂದರೆ, ನೀವು ವಲಸಿಗರಿಗೆ ಮಾಡುವ ಈ ಸುಂದರವಾದ ಹಾಗೂ ಮಹತ್ತರವಾದ ಕಾರ್ಯದಲ್ಲಿ ಧೈರ್ಯ ಕಳೆದುಕೊಳ್ಳಬೇಡಿ. ನನ್ನ ದೇಶದ ಸ್ವಾತಂತ್ರ್ಯ ದಿನದಂದು ನೀವು ನನಗಾಗಿ ಮಾಡಿದ ವಿಶೇಷ ಊಟ, ಧ್ವಜಗಳು ಹಾಗೂ ನಮ್ಮ ದೇಶದ ಉಪಾಹಾರ—ಇವನ್ನೆಲ್ಲಾ ನಾನು ಎಂದಿಗೂ ಮರೆವುದಿಲ್ಲ” ಭಗಿನಿಯರ ಸೇವೆಗೆ ವಂದಿಸುತ್ತಾರೆ. ವಲಸೆ ಅನಿವಾರ್ಯವಾದ ಸತ್ಯ; ಇಂತಹ ಸತ್ಯಕ್ಕೆ ಫ್ರಾನ್ಸಿಸ್ಕನ್ ಸಹೋದರಿಯರು ಸಹೋದರತ್ವದ ಮನೋಭಾವದಿಂದ, ಸಹಯಾತ್ರಿಗಳಂತೆ ಸ್ಪಂದಿಸುತ್ತಿದ್ದಾರೆ.

ಸಂಸ್ಥಾಪಕಿ ಧನ್ಯ ಮರಿಯಾ ಕರಿದಾದ್ ಬ್ರೇಡರ್ ಅವರು ತಮ್ಮ ಕಾಲದಲ್ಲಿ ಮಿಷನರಿ ಆದರ್ಶವನ್ನು ಅಂಗೀಕರಿಸಿ, 19ನೇ ಶತಮಾನದ ಅಂತ್ಯದಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ್ನು ತೊರೆದು, ಈಕ್ವಡಾರ್ ಮತ್ತು ಕೊಲೊಂಬಿಯಾದ ತಿರಸ್ಕೃತ ಜನರಿಗಾಗಿ ಕೆಲಸ ಮಾಡಿದರು. ಯುದ್ಧಾವಸ್ಥೆಯಲ್ಲಿ ಶಾಲೆಯನ್ನು ಆಸ್ಪತ್ರೆಗೆ ಪರಿವರ್ತಿಸಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ ಅವರ ತ್ಯಾಗಭಾವ—ಇಂದಿನ ಸನ್ಯಾಸಿನಿಯರಿಗೆ ದಾರಿದೀಪವಾಗಿದೆ.

“ಮದರ್ ಕರಿದಾದ್ ಇಂದಿದ್ದರೆ, ಗಡಿಯಿರುವ ಪ್ರತಿಯೊಂದು ಸ್ಥಳದಲ್ಲಿಯೂ ಸನ್ಯಾಸಿನಿಯರಿಗಾಗಿ ಮನೆಗಳು ಮತ್ತು ಸೇವಾ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದರು. ಇದೇ ಮದರ್ ಕರಿದಾದ್ ಅವರ ಸೇವಾತ್ಮ ನಮ್ಮನ್ನು ಪಿಯೆದ್ರಾಸ್ ನೆಗ್ರಾಸ್‌ನಲ್ಲಿ ಪ್ರತಿದಿನ ನಿಸ್ವಾರ್ಥ ಸೇವೆ ಮಾಡಲು ಪ್ರೇರೇಪಿಸುತ್ತದೆ” ಎಂದು ತಮ್ಮ ಸೇವಾನುಭವವನ್ನು ಹಂಚಿಕೊಂಡರು.

12 ಡಿಸೆಂಬರ್ 2025, 13:47