2025.09.05 Gintaras Grušas, Arcivescovo di Vilnius © Aistė Karpytė 2025.09.05 Gintaras Grušas, Arcivescovo di Vilnius © Aistė Karpytė  (© Aistė Karpytė)

ಕ್ರೈಸ್ತ ಏಕತೆಯ ಪ್ರಾರ್ಥನಾ ವಾರದಲ್ಲಿ ಶಾಂತಿಗಾಗಿ ಪ್ರಾರ್ಥಿಸೋಣ: ಮಹಾಧರ್ಮಾಧ್ಯಕ್ಷರಾದ ವಂ. ಗ್ರೂಶಾಸ್

ವಿಶ್ವದಾದ್ಯಂತ ಶಾಂತಿಗೆ ಎದುರಾಗಿರುವ ನಿರಂತರ ಬೆದರಿಕೆಗಳ ನಡುವೆ, ಯೂರೋಪಿನ ಧರ್ಮಾಧ್ಯಕ್ಷರ ಸಮ್ಮೇಳನಗಳ ಮಂಡಳಿಯ ಅಧ್ಯಕ್ಷರಾದ ಮಹಾಧರ್ಮಾಧ್ಯಕ್ಷ ವಂ. ಗಿಂಟಾರಸ್ ಗ್ರೂಶಾಸ್ ಅವರು, ಜನವರಿ 18ರಿಂದ 25ರವರೆಗೆ ಪ್ರತಿವರ್ಷ ಆಚರಿಸಲಾಗುವ “ಕ್ರೈಸ್ತ ಏಕತೆಗಾಗಿ ಪ್ರಾರ್ಥನಾ ವಾರ”ದ ಸಂದರ್ಭದಲ್ಲಿ ಶಾಂತಿಗಾಗಿ ಪ್ರಾರ್ಥಿಸಬೇಕೆಂದು ಕ್ರೈಸ್ತರನ್ನು ಆಹ್ವಾನಿಸಿದ್ದಾರೆ. - ದೆಬೋರಾ ಕ್ಯಾಸ್ಟೆಲ್ಲಾನೋ ಲುಬೊವ್

ಯುದ್ಧಗಳ ಕಹಿ ನೆರಳಿನಲ್ಲಿ ನಲುಗುತ್ತಿರುವ ಇಂದಿನ ಜಗತ್ತಿನಲ್ಲಿ, ಶಾಂತಿಗಾಗಿ ಪ್ರಾರ್ಥನೆ ಎನ್ನುವುದು ಕೇವಲ ಧಾರ್ಮಿಕ ವಿಧಿವಿಧಾನವಲ್ಲ; ಅದು ಮಾನವತೆಯ ಮೇಲಿನ ಹೊಣೆಗಾರಿಕೆಯೂ ಹೌದು ಎಂಬ ಸಂದೇಶವನ್ನು ಮಹಾಧರ್ಮಾಧ್ಯಕ್ಷ ವಂ. ಗಿಂಟಾರಸ್ ಗ್ರೂಶಾಸ್ ಅವರು ಗಂಭೀರವಾಗಿ ಮುಂದಿಟ್ಟಿದ್ದಾರೆ. 2025ರ ನವೆಂಬರ್ 5ರಂದು ರೋಮ್‌ನಲ್ಲಿ ನಡೆದ “ಸಾರ್ವತ್ರಿಕ ಸನ್ನದಿನ”(ಚಾರ್ಟ ಓಕ್ಯುಮೆನಿಕಾ) ನವೀಕರಿತ ರೂಪದ ಸಹಿ ಸಮಾರಂಭದ ಬಳಿಕ, ಚರ್ಚುಗಳಲ್ಲಿ ಶಾಂತಿ-ಪ್ರಾರ್ಥನೆಯ ಅಗತ್ಯತೆಯನ್ನು ಅವರು ಮತ್ತೆ ಪುನರುಚ್ಚರಿಸಿದ್ದಾರೆ.

ವಿಲ್ನಿಯಸ್‌ನ ಮಹಾಧರ್ಮಾಧ್ಯಕ್ಷರಾಗಿರುವ ವಂ. ಗ್ರೂಶಾಸ್ ಅವರು, ಯೂರೋಪಿನಲ್ಲಿ ಈ ಸನ್ನದಿನ “ಸ್ವೀಕಾರ ಹಂತ”ವನ್ನು ಮರುಪ್ರಾರಂಭಿಸುವ ಮೂಲಕ, ಯೂರೋಪಿನ ವಿವಿಧ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನಗಳ ಅಧ್ಯಕ್ಷರಿಗೆ ಮನದಾಳದ ವಿನಂತಿಯನ್ನು ಸಲ್ಲಿಸಿದ್ದಾರೆ. ವಿಶೇಷವಾಗಿ, ಶಾಂತಿಗಾಗಿ ಪ್ರಾರ್ಥನೆ ಎಂಬ ಈ ಉದ್ದೇಶವನ್ನು ಈ ಅವಧಿಯಲ್ಲಿ ಮುಖ್ಯವಾಗಿ ಹಿಡಿದುಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದ್ದಾರೆ. “ಕ್ರಿಸ್ತನಲ್ಲಿ ದೀಕ್ಷಾಸ್ನಾನ ಪಡೆದವರ ನಡುವಿನ ಈ ಏಕತೆ, ಜಗತ್ತಿನಾದ್ಯಂತ ಶಾಂತಿಗೆ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ.” ಎಂಬ ಮಾತನ್ನು ಅವರು ಸ್ಪಷ್ಟಪಡಿಸಿದ್ದಾರೆ..

ಪ್ರಾರ್ಥನೆ—ಸಮಗ್ರ ಏಕತಾ ಚಳವಳಿಯ ಜೀವಾಳ

ಯೂರೋಪಿನ ಧರ್ಮಾಧ್ಯಕ್ಷರ ಸಮ್ಮೇಳನಗಳ ಅಧ್ಯಕ್ಷರಿಗೆ ಕಳುಹಿಸಿದ ತಮ್ಮ ಪತ್ರದಲ್ಲಿ, ಮಹಾಧರ್ಮಾಧ್ಯಕ್ಷ ವಂ. ಗ್ರೂಶಾಸ್ ಅವರು, “ಪ್ರಾರ್ಥನೆಯೇ ಸಮಗ್ರ ಏಕತಾ ಚಳವಳಿಯ ಆತ್ಮ” ಎಂಬ ಎರಡನೇ ವ್ಯಾಟಿಕನ್ ಸಭೆಯ ಬೋಧನೆಯನ್ನು ನೆನಪಿಸಿದ್ದಾರೆ.

“ಪ್ರಾರ್ಥನೆ ಎಂದರೆ ‘ಸಂಪೂರ್ಣ ಏಕತಾ ಚಳವಳಿಯ ಆತ್ಮ’ (UR, 8); ಮತ್ತು ಅದು ಕ್ರೈಸ್ತ ಏಕತೆಗಾಗಿ ಪ್ರತಿವರ್ಷ ಆಚರಿಸಲಾಗುವ ಪ್ರಾರ್ಥನಾ ಅಷ್ಟಕದಲ್ಲಿ ಅತ್ಯಂತ ಶಕ್ತಿಯಾಗಿ ವ್ಯಕ್ತವಾಗುತ್ತದೆ”.

ಈ ಸಂದರ್ಭದಲ್ಲಿ, ವಿಶ್ವದ ಹಲವೆಡೆ ನಡೆಯುತ್ತಿರುವ ಸಶಸ್ತ್ರ ಸಂಘರ್ಷಗಳು, ಉಲ್ಬಣಿಸುತ್ತಿರುವ ಭೌಗೋಳಿಕ-ರಾಜಕೀಯ ಒತ್ತಡಗಳು ಮತ್ತು ನಿರಂತರ ಅಸ್ಥಿರತೆಗಳ ಹಿನ್ನೆಲೆಯನ್ನು  ಉಲ್ಲೇಖಿಸಿ, ಇಂತಹ ಸ್ಥಿತಿಯಲ್ಲಿ, ಧರ್ಮಸಭೆಗಳು ಒಂದೇ ಧ್ವನಿಯಲ್ಲಿ ಶಾಂತಿಗಾಗಿ ಪ್ರಾರ್ಥಿಸಬೇಕಾದ ಹೊಣೆಗಾರಿಕೆಯನ್ನು ಮತ್ತಷ್ಟು ಗಟ್ಟಿಯಾಗಿ ಸ್ವೀಕರಿಸಬೇಕು ಎಂಬುದನ್ನು  ಸೂಚಿಸಿದ್ದಾರೆ.

25ನೇ ವಾರ್ಷಿಕೋತ್ಸವದ ಹೊಸ್ತಿಲಲ್ಲಿ ಪುನರ್‌ಸಂಕಲ್ಪ

2001ರ ಏಪ್ರಿಲ್ 22ರಂದು ಸ್ಟ್ರಾಸ್ಬರ್ಗ್‌ನಲ್ಲಿ ಮೂಲ “ಸಾರ್ವತ್ರಿಕ ಸನ್ನದಿ”ಗೆ ಸಹಿ ಹಾಕಲಾದ ದಿನಕ್ಕೆ 25 ವರ್ಷಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ, ಅದರ ಸಂದೇಶವು ಕೇವಲ ನೆನಪಿನ ಪುಟಗಳಲ್ಲಿ ಉಳಿಯಬಾರದು; ಅದು ಬದುಕಿನ ನಡವಳಿಕೆಯಲ್ಲಿ ಪ್ರತಿಫಲಿಸಬೇಕು ಎಂದು ಮಹಾಧರ್ಮಾಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.

ಈ ಪ್ರಾರ್ಥನೆಯ ಏಕತೆ ಕೇವಲ ಕ್ರೈಸ್ತರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕೆ ಸೀಮಿತವಾಗದೆ, ಪರಸ್ಪರ ಸಂಘರ್ಷದಲ್ಲಿರುವ ಎಲ್ಲ ಪಕ್ಷಗಳಲ್ಲಿಯೂ ಸಹ ಒಂದು ಸಂಧಾನದ ಮನಸ್ಸನ್ನು ಬೆಳೆಸಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ. “ಈ ಏಕತೆ ಕ್ರೈಸ್ತರಲ್ಲಷ್ಟೇ ಅಲ್ಲ, ಪರಸ್ಪರ ಸಂಘರ್ಷದಲ್ಲಿರುವ ಎಲ್ಲರಲ್ಲಿಯೂ ಸಾಧಿಸಲಿ; ಶಾಂತಿ ಮತ್ತೆ ಮರುನಿರ್ಮಾಣವಾಗಲಿ” ಎಂದು ಅವರು ಪ್ರಾರ್ಥಿಸಿದ್ದಾರೆ.

ಈ ಸಾಮೂಹಿಕ ಪ್ರಾರ್ಥನೆಯನ್ನೂ, ನವೀಕರಿತ ಸನ್ನದಿನ ಸ್ವೀಕಾರ ಪ್ರಕ್ರಿಯೆಯನ್ನೂ, ಯೂರೋಪಿನ ತಾಯಿ ಎಂಬ ಹೆಸರಿನಿಂದ ಗೌರವಿಸಲ್ಪಡುವ ಧನ್ಯ ಕನ್ಯಾ ಮರಿಯಮ್ಮ ಅವರ ಮಧ್ಯಸ್ಥಿಕೆಗೆ ಹಾಗೂ ಯೂರೋಪಿನ ಪೋಷಕ ಸಂತರುಗಳ ಆಶೀರ್ವಾದಕ್ಕೆ ಸಮರ್ಪಿಸಲಾಗಿದೆ ಎಂದು ಮಹಾಧರ್ಮಾಧ್ಯಕ್ಷರು ನೆನಪಿಸಿದ್ದಾರೆ.

ನವೀಕರಿತ ಸನ್ನದು: ಯೂರೋಪಿನ ಏಕತಾ ಪಯಣದಲ್ಲಿ ಮಹತ್ವದ ಮೈಲುಗಲ್ಲು

ಯೂರೋಪಿನ ಧರ್ಮಸಭೆಗಳ ಏಕತಾ ಪಯಣದಲ್ಲಿ ನವೀಕರಿತ “ಸಾರ್ವತ್ರಿಕ ಸನ್ನದು” ಒಂದು ಪ್ರಮುಖ ಮೈಲುಗಲ್ಲಾಗಿದೆ. 25 ವರ್ಷಗಳ ಬಳಿಕವೂ, ಧರ್ಮಸಭೆಗಳ ನಡುವೆ ಸಹಕಾರ, ಸಂವಾದ ಮತ್ತು ಒಟ್ಟಿನ ಸಾಕ್ಷ್ಯವನ್ನು ಉತ್ತೇಜಿಸುವ ಮುಖ್ಯ ಮಾರ್ಗಸೂಚಿ  ದಾಖಲೆಗಳಲ್ಲಿ ಒಂದಾಗಿದೆ.

ಈ ಸನ್ನದಿನ ಪರಿಷ್ಕರಣೆ ಕಾರ್ಯವನ್ನು, ಯೂರೋಪಿನ ಧರ್ಮಾಧ್ಯಕ್ಷರ ಸಮ್ಮೇಳನಗಳ ಮಂಡಳಿ ಮತ್ತು ಯೂರೋಪಿನ ಧರ್ಮಸಭೆಗಳ ಸಮ್ಮೇಳನಗಳ ಸಂಯುಕ್ತ ಸಮಿತಿಯ ಆದೇಶದ ಮೇರೆಗೆ ರಚಿಸಲಾದ ಕಾರ್ಯಬಳಗ ನಡೆಸಿತು.

ಇದೀಗ, ಯೂರೋಪಿನ ಕ್ರೈಸ್ತ ಧರ್ಮಸಭೆಗಳು ತಮ್ಮ ತಮ್ಮ ಪರಿಸರದಲ್ಲಿ ನವೀಕರಿತ ಸನ್ನದ,ನ್ನು ಗಂಭೀರವಾಗಿ ಅಳವಡಿಸಿಕೊಂಡು, ಏಕತಾ ಸಂವಾದ, ಸಾಮೂಹಿಕ ಪ್ರಾರ್ಥನೆ, ಒಟ್ಟಿನ ಸಾಕ್ಷ್ಯ ಮತ್ತು ರೂಪಾಂತರಕಾರಿ ಶಿಕ್ಷಣ-ಸಂಸ್ಕಾರಗಳ ಮೂಲಕ ಅದರ ಅರ್ಥವನ್ನು ಬದುಕಿನಲ್ಲಿ ಜಾರಿಗೊಳಿಸಬೇಕೆಂಬ ಕರೆ ನೀಡಲಾಗಿದೆ.

15 ಜನವರಿ 2026, 12:50