ಶಾಂತಿ ಮೌಲ್ಯಗಳ ಪ್ರಚಾರಕ್ಕೆ ವ್ಯಾಟಿಕನ್ ಮಾಧ್ಯಮಕ್ಕೆ ಪೋಲೆಂಡ್ ಗೌರವ
ಲೇಖಕರು: ಕರೋಲ್ ಡಾರ್ಮೋರೋಸ್ (ವಾರ್ಸಾ)
ಶಾಂತಿ ಮತ್ತು ಭದ್ರತೆ ಮೌಲ್ಯಗಳನ್ನು ಪ್ರಚಾರ ಮಾಡುವಲ್ಲಿ ನೀಡಿರುವ ಕೊಡುಗೆಗಾಗಿ ವ್ಯಾಟಿಕನ್ ರೇಡಿಯೋ–ವ್ಯಾಟಿಕನ್ ಸುದ್ದಿ ಸಂಸ್ಥೆಯ ಪೋಲಿಷ್ ವಿಭಾಗ ಹಾಗೂ ‘ಎಲ್’ಒಸರ್ವಾತೋರೇ ರೊಮಾನೋ’ ಪತ್ರಿಕೆಗೆ ‘ಬೆನೆಮೆರೆಂಟಿ’ ಗೌರವ ಪ್ರಶಸ್ತಿ ಪ್ರದಾನಿಸಲಾಗಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ 21ರಂದು ವಾರ್ಸಾದ ಪೋಲಂಡ್ ಸೇನಾ ಸಂಗ್ರಹಾಲಯದಲ್ಲಿ ನಡೆಯಿತು. ಇದು ಪೋಲಂಡ್‌ನ ಸೈನಿಕ ಧರ್ಮಪ್ರಾಂತ್ಯ ಪುನರ್ ಸ್ಥಾಪನೆಯ 35ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಗಾಲಾ ಕಾರ್ಯಕ್ರಮದಲ್ಲಿ ಜರುಗಿತು.
‘ಮಾಧ್ಯಮಗಳು ಶಾಂತಿಗೆ ಸೇವೆ ಸಲ್ಲಿಸುತ್ತಿವೆ’
ಪ್ರಶಸ್ತಿಯನ್ನು ಪೋಲಂಡ್‌ನ ಸೈನಿಕ ಧರ್ಮಾಧ್ಯಕ್ಷರಾದ ಧರ್ಮಾಧ್ಯಕ್ಷ ವಿಸ್ವಾವ್ ಲೆಚೋವಿಚ್ ಪ್ರದಾನಿಸಿದರು. ಈ ವೇಳೆ ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಯ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಿರುವುದನ್ನು ವಿಶೇಷವಾಗಿ ಉಲ್ಲೇಖಿಸಿ,
“ಮಾಧ್ಯಮಗಳು ಶಾಂತಿ ಮತ್ತು ಭದ್ರತೆಗೆ ಸೇವೆ ಸಲ್ಲಿಸುತ್ತವೆ ಎಂಬುದಕ್ಕೆ ಇದು ದೃಢೀಕರಣ” ಎಂದು ಹೇಳಿದರು.ಇದೇ ಸಂದರ್ಭದಲ್ಲಿ , “ಸಂವಹನ ವಿಭಾಗವು ಪೂಜ್ಯ ಜಗದ್ಗುರುಗಳ ಮತ್ತು ಧರ್ಮಸಭೆಯ ಧ್ವನಿಯನ್ನು ಜಗತ್ತಿನ ಎಲ್ಲೆಡೆ ತಲುಪಿಸುತ್ತಿದೆ. ಇದು ಶಾಂತಿಯ ರಾಜನಾದ ಯೇಸು ಕ್ರಿಸ್ತನ ಸೇವೆಯೇ” ಎಂದರು.
ಧರ್ಮಾಧ್ಯಕ್ಷರು ವ್ಯಾಟಿಕನ್ ಪತ್ರಕರ್ತರಿಗೆ ಧನ್ಯವಾದ ಸಲ್ಲಿಸಿ, “ಇಂದಿನ ಜಗತ್ತು ಅನೇಕ ಸಂಘರ್ಷಗಳಿಂದ ತತ್ತರಿಸಿರುವ ಸಂದರ್ಭದಲ್ಲಿಯೂ, ಸತ್ಯ, ಪ್ರೀತಿ, ಶಾಂತಿ, ನ್ಯಾಯ, ಏಕಾತ್ಮತೆ ಮೊದಲಾದ ಮೌಲ್ಯಗಳಿಗೆ ವ್ಯಾಟಿಕನ್ ಮಾಧ್ಯಮಗಳು ಸಾಕ್ಷಿಯಾಗಿ ನಿಂತಿವೆ” ಎಂದು ಹೇಳಿದರು.
ಶಾಂತಿಗೆ ಸೇವೆಯಾದ ಸಂವಹನ
ವ್ಯಾಟಿಕನ್ ಸುದ್ದಿ ಸಂಸ್ಥೆಯ ಸಂಪಾದಕೀಯ ನಿರ್ದೇಶಕರಾದ ಅಂಡ್ರಿಯಾ ಟೋರ್ನಿಯೆಲ್ಲಿ ಪೋಲಿಷ್ ಭಾಷೆಯಲ್ಲಿ ಮಾತನಾಡಿ, “ಪೇತ್ರನ ಉತ್ತರಾಧಿಕಾರಿಯ ಧ್ವನಿಯನ್ನು ಜಗತ್ತಿನ ಪ್ರತಿಯೊಂದು ಮೂಲೆಗೆ ತಲುಪಿಸುವುದೇ ನಮ್ಮ ಧ್ಯೇಯ” ಎಂದು ಹೇಳಿದರು. ಮುಂದುವರೆದು, “ವ್ಯಾಟಿಕನ್ ಸುದ್ದಿ ಸಂಸ್ಥೆಯ ವ್ಯವಸ್ಥೆಯೊಳಗೆ ಪೋಲಿಷ್ ವಿಭಾಗವು ಒಂದು ಮಾದರಿಯಾಗಿದೆ. ಸಂತ ದ್ವಿತೀಯ ಜಾನ್ ಪಾಲರ ನಿಧನದ 21 ವರ್ಷಗಳ ಬಳಿಕವೂ, ವ್ಯಾಟಿಕನ್ ಸುದ್ದಿ ಸಂಸ್ಥೆಯ ಸಂವಹನ ನಡೆಸುವ ಏಳು ಪ್ರಮುಖ ಭಾಷೆಗಳಲ್ಲೊಂದು ಪೋಲಿಷ್ ಆಗಿಯೇ ಮುಂದುವರಿದಿದೆ” ಎಂದು ಹೇಳಿದರು.
ಟೋರ್ನಿಯೆಲ್ಲಿ ಅವರು ವ್ಯಾಟಿಕನ್ ರೇಡಿಯೋಗೆ ಇರುವ ದೀರ್ಘ ಪರಂಪರೆಯನ್ನು, ಜೆಸೂಯಿಟ್‌ಗಳ ಪಾತ್ರವನ್ನು ಹಾಗೂ ನಂತರ ವಂದನೀಯ ಗುರು ಪಾವೆಲ್ ರೈಟೆಲ್–ಅಂದ್ರಿಯಾನಿಕ್ ನೇತೃತ್ವದ ತಂಡದ ಸೇವೆಯನ್ನು ಸ್ಮರಿಸಿದರು. ಅವರು, “ಸತ್ಯಾಧಾರಿತ ಸುದ್ದಿ ಪ್ರಸಾರ, ಸಂಬಂಧ ನಿರ್ಮಾಣ, ಜವಾಬ್ದಾರಿಯುತ ಸಂವಹನ—ಇವೆಲ್ಲವೂ ಕಥೋಲಿಕ ಮಾಧ್ಯಮಗಳ ಮೂಲ ಕರ್ತವ್ಯಗಳು” ಎಂದು ಹೇಳಿದರು.
ಪೋಲಿಷ್ ಭಾಷೆಯ ಮಹತ್ವ
ವ್ಯಾಟಿಕನ್ ಮಾಧ್ಯಮದ ಉಪ ಸಂಪಾದಕೀಯ ನಿರ್ದೇಶಕರಾದ ಮಾಸಿಮಿಲಿಯಾನೋ ಮೆನಿಕೆಟ್ಟಿ ಮಾತನಾಡಿ, “ವ್ಯಾಟಿಕನ್ ಸುದ್ದಿ ಸಂಸ್ಥೆಯ ಇತಿಹಾಸದಲ್ಲೂ, ಇಂದಿನ ಧ್ಯೇಯದಲ್ಲೂ ಪೋಲಿಷ್ ಭಾಷೆಗೆ ವಿಶೇಷ ಸ್ಥಾನವಿದೆ” ಎಂದು ಹೇಳಿದರು.
“ಸರ್ವಾಧಿಕಾರ ಕಾಲದ ಕಠಿಣ ವರ್ಷಗಳಲ್ಲಿ ಈ ಭಾಷೆ ವಿಶ್ವಾಸವನ್ನು ಉಳಿಸಿಕೊಂಡಿತು. ಇಂದೂ ವ್ಯಾಟಿಕನ್ ರೇಡಿಯೋ, ವ್ಯಾಟಿಕನ್ ಸುದ್ದಿ ಸಂಸ್ಥೆಯ ಹಾಗೂ ‘ಎಲ್’ಒಸರ್ವಾತೋರೇ ರೊಮಾನೋ’ ಮೂಲಕ ಸುವಾರ್ತೆಯ ಸೌಂದರ್ಯವನ್ನು ಸಾರುತ್ತದೆ ಹಾಗೂ ಪ್ರತಿಯೊಂದು ಸುದ್ದಿಯನ್ನು ಧರ್ಮಸಭೆಯ ಸಾಮಾಜಿಕ ಬೋಧನೆಯ ಕಣ್ಣಿನಿಂದ ಅರ್ಥೈಸುತ್ತದೆ” ಎಂದು ಅವರು ತಿಳಿಸಿದರು.
ಮತ್ತೊಂದೆಡೆ, ಹಿಂಸೆ–ಅನ್ಯಾಯದಿಂದ ಕಲುಷಿತಗೊಂಡಿರುವ ಜಗತ್ತಿನಲ್ಲಿ ವ್ಯಾಟಿಕನ್ ಮಾಧ್ಯಮಗಳು “ಭರವಸೆಯ ದಿಕ್ಕು” ನೀಡುತ್ತವೆ ಎಂದೂ, ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರ ಮಾತನ್ನು ಉಲ್ಲೇಖಿಸಿ *ಅಸ್ತ್ರವಿಲ್ಲದ, ಅಸ್ತ್ರಗಳನ್ನು ನಿಷ್ಕ್ರಿಯಗೊಳಿಸುವ ಸಂವಹನ”ವನ್ನು ಪ್ರೋತ್ಸಾಹಿಸುತ್ತವೆ ಎಂದೂ ಹೇಳಿದರು.
‘ಮಿಲಿಟೋ ಪ್ರೊ ಕ್ರಿಸ್ತೋ’ ಪದಕವೂ ಪ್ರದಾನ
ಈ ಗೌರವವನ್ನು ಅಂಡ್ರಿಯಾ ಟೋರ್ನಿಯೆಲ್ಲಿ, ಮಾಸಿಮಿಲಿಯಾನೋ ಮೆನಿಕೆಟ್ಟಿ ಹಾಗೂ ಪೋಲಿಷ್ ವಿಭಾಗದ ಮುಖ್ಯಸ್ಥರಾದ ವಂದನೀಯ ಗುರು ಪಾವೆಲ್ ರೈಟೆಲ್–ಅಂದ್ರಿಯಾನಿಕ್ ಅವರು ಸಂಯುಕ್ತವಾಗಿ ಸ್ವೀಕರಿಸಿದರು.
ಇದಲ್ಲದೆ, ಶಾಂತಿ ಪ್ರಚಾರದಲ್ಲಿ ತೊಡಗಿರುವ ಸೇವೆಯನ್ನು ಗುರುತಿಸಿ, ವ್ಯಾಟಿಕನ್ ಮಾಧ್ಯಮದ ನಿರ್ದೇಶಕರು ಹಾಗೂ ಪೋಲಿಷ್ ವಿಭಾಗದ ಸಿಬ್ಬಂದಿಗೆ ‘ಮಿಲಿಟೋ ಪ್ರೊ ಕ್ರಿಸ್ತೋ’ ಪದಕಗಳನ್ನೂ ಪ್ರದಾನಿಸಲಾಯಿತು.
ಪೋಲಿಷ್ ಸೇನೆಯ ಘಟಕಗಳಿಗೆ ಹೆಚ್ಚುವರಿ ಗೌರವ
ಈ ವರ್ಷದ ‘ಬೆನೆಮೆರೆಂಟಿ’ ಪ್ರಶಸ್ತಿಗಳನ್ನು ಪೋಲಂಡ್‌ನ ಸೈನಿಕ ಧರ್ಮಾಧ್ಯಕ್ಷರು, ಹಿರಿಯ ಸೇನಾಧಿಕಾರಿಗಳು ಮತ್ತು ಸೇನೆಯ ಪ್ರಮುಖ ಸಂಸ್ಥೆಗಳಿಗೆ ಸಹ ಪ್ರದಾನಿಸಿದರು. ಅವುಗಳಲ್ಲಿ:
ಸಶಸ್ತ್ರ ಪಡೆಗಳ ಕಾರ್ಯಾಚರಣೆ ಕಮಾಂಡ್
ಸಶಸ್ತ್ರ ಪಡೆಗಳ ಬೆಂಬಲ ಪರಿಶೀಲನಾ ಘಟಕ
ವಾಯುಪಡೆಯ ಕರೋಲ್ ಕುರ್ಪಿನ್ಸ್ಕಿ ಪ್ರತಿನಿಧಿ ವಾದ್ಯವೃಂದ ಸೇರಿವೆ.
ಪೋಲಂಡ್‌ನ ಸೈನಿಕ ಧರ್ಮಪ್ರಾಂತ್ಯವನ್ನು 1919ರಲ್ಲಿ ಸ್ಥಾಪಿಸಲಾಗಿತ್ತು. ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲೂ ಇದರ ಪಾತ್ರ ಗಮನಾರ್ಹವಾಗಿತ್ತು. ಕಮ್ಯೂನಿಸ್ಟ್ ಆಡಳಿತದ ಕಾಲದಲ್ಲಿ ಸೈನಿಕರ ಧಾರ್ಮಿಕ ಸೇವೆ ಸ್ಥಗಿತಗೊಂಡಿತ್ತು. ಆದರೆ 35 ವರ್ಷಗಳ ಹಿಂದೆ ಸಂತ ದ್ವಿತೀಯ ಜಾನ್ ಪಾಲರು ಈ ಸೈನಿಕ ಧರ್ಮಪ್ರಾಂತ್ಯವನ್ನು ಪುನಃಸ್ಥಾಪಿಸಿದರು. ಪ್ರಸ್ತುತ ಇದರೊಳಗೆ 130ಕ್ಕಿಂತ ಹೆಚ್ಚು ಸೈನಿಕ ಧರ್ಮಗುರುಗಳು ಸೇವೆ ಸಲ್ಲಿಸುತ್ತಿದ್ದಾರೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).