Guatemala inmates riot at three prisons, take hostages, officials say Guatemala inmates riot at three prisons, take hostages, officials say 

ಗ್ವಾಟೆಮಾಲಾದ ಮಹಾಧರ್ಮಾಧ್ಯಕ್ಷರು: ಶಾಂತಿಗಾಗಿ, ಹಿಂಸಾಚಾರ ಅಂತ್ಯಕ್ಕಾಗಿ ನಿರಂತರ ಪ್ರಾರ್ಥನೆ ಮಾಡಿ

ಜನವರಿ 18ರಂದು ಪ್ರಕಟಿಸಿದ ಹೇಳಿಕೆಯಲ್ಲಿ, ಸ್ಯಾಂಟಿಯಾಗೊ ದೆ ಗ್ವಾಟೆಮಾಲಾ ಮಹಾಧರ್ಮಾಧ್ಯಕ್ಷರು, ದೇಶದಲ್ಲಿ “ಭದ್ರತಾ ಬಿಕ್ಕಟ್ಟು” ಉಂಟುಮಾಡಿರುವ “ಆತಂಕ ಮತ್ತು ಅಶಾಂತಿ” ಪರಿಸ್ಥಿತಿಯ ಹಿನ್ನೆಲೆ ಶಾಂತಿಗಾಗಿ ನಿರಂತರ ಪ್ರಾರ್ಥನೆ ಮಾಡುವಂತೆ ಕರೆ ನೀಡಿದ್ದಾರೆ.

ವ್ಯಾಟಿಕನ್ ವರದಿ

ಸ್ಯಾಂಟಿಯಾಗೊ ದೆ ಗ್ವಾಟೆಮಾಲಾ ಮಹಾಧರ್ಮಾಧ್ಯಕ್ಷರಾದ ಗೊನ್ಸಾಲೋ ದೆ ವಿಲ್ಲಾ ಯ್ ವಾಸ್ಕ್ವೆಝ್ ಅವರು, ದೇಶದ ವಿವಿಧ ಭಾಗಗಳಲ್ಲಿ—ವಿಶೇಷವಾಗಿ ಮಹಾಧರ್ಮಕ್ಷೇತ್ರದ ವ್ಯಾಪ್ತಿಯ ಪ್ರದೇಶಗಳಲ್ಲಿ—“ಭದ್ರತಾ ಬಿಕ್ಕಟ್ಟು” ಕಾರಣವಾಗಿ ಇತ್ತೀಚೆಗೆ ಉಂಟಾದ ಅಶಾಂತಿ ಕುರಿತು ಜನವರಿ 18ರಂದು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಅವರು, “ಇಂದು ಜೀವ ಕಳೆದುಕೊಂಡವರಿಗಾಗಿ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಹಾಗೆಯೇ, ಶಾಂತಿಯ ಪ್ರಭುವಾದ  ಯೇಸು ಕ್ರಿಸ್ತನಿಗೆ ನನ್ನ ಪ್ರಾರ್ಥನೆಯನ್ನು ಅರ್ಪಿಸುತ್ತೇನೆ—ನಮ್ಮ ನಗರಕ್ಕೂ ಅದರ ಸುತ್ತಮುತ್ತಲ ಪುರಸಭೆಗಳಿಗೂ ಮತ್ತೆ ಶಾಂತಿ ಮರಳಲಿ,” ಎಂದು ಮನದುಂಬಿ ಹೇಳಿದರು.

ಇನ್ನೊಬ್ಬರ ಜೀವಕ್ಕೂ ಅಪಾಯ ಉಂಟಾಗದಂತೆ, ಸ್ಯಾಂಟಿಯಾಗೊ ದೆ ಗ್ವಾಟೆಮಾಲಾ ಮಹಾಧರ್ಮಾಧ್ಯಕ್ಷರು “ಈ ಭಾನುವಾರದ ಸಂಜೆ ಬಲಿಪೂಜೆಗಳನ್ನು ಗ್ವಾಟೆಮಾಲಾ ವಿಭಾಗದ ಸಂಪೂರ್ಣ ಪ್ರದೇಶದಲ್ಲಿ ಸ್ಥಗಿತಗೊಳಿಸಬೇಕು” ಎಂದು ಸೂಚಿಸಿ, ಅದಕ್ಕೆ ಅನುಮತಿ ನೀಡಿದರು.

ವಿಶ್ವವ್ಯಾಪಿ ಕಥೋಲಿಕ ಧರ್ಮಸಭೆಗೆ ಆಹ್ವಾನ ವಿಸ್ತರಿಸಿದ ಅವರು, “ಈ ಸಂದರ್ಭದಲ್ಲಿ ನಮ್ಮನ್ನು ಕಾಡಿ ದುಃಖಪಡಿಸುತ್ತಿರುವ ಹತ್ಯಾತ್ಮಕ ಹಿಂಸಾಚಾರಕ್ಕೆ ಅಂತ್ಯವಾಗಲಿ, ಶಾಂತಿ ನೆಲೆಸಲಿ ಎಂದು ನಿರಂತರ ಪ್ರಾರ್ಥನೆ ಮಾಡಿ,” ಎಂದು ಮನವಿ ಮಾಡಿದರು.

ದೇಶದ ಪರಿಸ್ಥಿತಿ

ಅದೇ ಭಾನುವಾರ—ಜನವರಿ 18ರಂದು—ಗ್ವಾಟೆಮಾಲಾದ ರಾಷ್ಟ್ರಪತಿಯಾದ ಬೆರ್ನಾರ್ಡೊ ಅರೆವಾಲೊ ಅವರು, ದೇಶದಾದ್ಯಂತ 30 ದಿನಗಳ ಕಾಲ “ನಿರ್ಬಂಧ ಸ್ಥಿತಿ” (State of Siege) ಘೋಷಿಸಿದರು.

ಕಾರಾಗೃಹ ಗಲಭೆಗಳು ಹಾಗೂ ರಾಷ್ಟ್ರೀಯ ನಾಗರಿಕ ಪೊಲೀಸ್ ಪಡೆ (PNC) ಮೇಲೆ ನಡೆದ ಶಸ್ತ್ರದಾಳಿಗಳಂತಹ ಘಟನೆಗಳಿಗೆ ಸಂಬಂಧಿಸಿದ ಗುಂಪು ಸಂಘರ್ಷಗಳಳ ಹಿಂಸಾಚಾರ ತೀವ್ರಗೊಂಡ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.

ರಾಷ್ಟ್ರಕ್ಕೆ ಸಂದೇಶ ನೀಡಿದ ಅಧ್ಯಕ್ಷರು, ಈ ವಿಶೇಷ ಕ್ರಮವನ್ನು ತಕ್ಷಣ ಜಾರಿಗೊಳಿಸಲಾಗುವುದು ಎಂದು ಘೋಷಿಸಿ, ಜನರ ರಕ್ಷಣೆ ಮತ್ತು ಆಂತರಿಕ ಭದ್ರತೆ ಖಚಿತಪಡಿಸಲು ಇದು ಅನಿವಾರ್ಯ ಎಂದು ಸಮರ್ಥಿಸಿಕೊಂಡರು.

ಇದಲ್ಲದೆ, ಅಪರಾಧಿ ಗುಂಪುಗಳು ನಡೆಸುತ್ತಿರುವ ದಾಳಿಗಳ ವಿರುದ್ಧ “ರಾಜ್ಯದ ಸಂಪೂರ್ಣ ಶಕ್ತಿ” ಬಳಕೆ ಸಾಧ್ಯವಾಗುವಂತೆ ಇದು ನೆರವಾಗಲಿದೆ ಎಂದು  ಹೇಳಿದರು ಎಂದು ADN Celam (ಲ್ಯಾಟಿನ್ ಅಮೆರಿಕಾ ಮತ್ತು ಕರೀಬಿಯನ್ ಧರ್ಮಾಧ್ಯಕ್ಷರ ಮಂಡಳಿಯ ಸುದ್ದಿ ಸೇವೆ/ನ್ಯೂಸ್‌ಲೆಟರ್) ವರದಿ ಮಾಡಿದೆ.

 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

20 ಜನವರಿ 2026, 19:05