HAITI-CONFLICT HAITI-CONFLICT  (AFP or licensors)

ಹೈಟಿಯನ್ನರಿಗೆ ರಕ್ಷಣೆ ವಿಸ್ತರಿಸಲು ಟ್ರಂಪ್ ಸರ್ಕಾರಕ್ಕೆ ಅಮೆರಿಕದ ಧರ್ಮಾಧ್ಯಕ್ಷರ ಮನವಿ

ಅಮೆರಿಕಾದಲ್ಲಿ ವಾಸಿಸುತ್ತಿರುವ ಹೈಟಿ ನಾಗರಿಕರು ತಾತ್ಕಾಲಿಕ ಸಂರಕ್ಷಿತ ಸ್ಥಾನಮಾನ (Temporary Protected Status) ಅಂತ್ಯವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕದ ಧರ್ಮಾಧ್ಯಕ್ಷರು ಟ್ರಂಪ್ ಸರ್ಕಾರಕ್ಕೆ “ನ್ಯಾಯಸಮ್ಮತ ಹಾಗೂ ಕರುಣೆಯುತ ರೀತಿಯಲ್ಲಿ” ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ಅವರ ತಾತ್ಕಾಲಿಕ ನಿವಾಸ ಅನುಮತಿಯನ್ನು ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.

ಲೇಖಕರು: ಡೆವಿನ್ ವಾಟ್ಕಿನ್ಸ್

ಫೆಬ್ರವರಿ 3ರಂದು ತಾತ್ಕಾಲಿಕ ಸಂರಕ್ಷಿತ ಸ್ಥಾನಮಾನ (ಟೆಂಪರರಿ ಪ್ರೊಟೆಕ್ಟೆಡ್ ಸ್ಟೇಟಸ್ – TPS) ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ, ಅಮೆರಿಕಾದಲ್ಲಿ ವಾಸಿಸುತ್ತಿರುವ 3 ಲಕ್ಷಕ್ಕೂ ಹೆಚ್ಚು ಹೈಟಿ ನಾಗರಿಕರು ತಮ್ಮ ಕಾನೂನುಬದ್ಧ ರಕ್ಷಣೆಯನ್ನು ಕಳೆದುಕೊಳ್ಳುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ಅಮೆರಿಕಾದ ಕಥೋಲಿಕ ಧರ್ಮಾಧ್ಯಕ್ಷರು ಜನವರಿ 29ರಂದು ಪ್ರಕಟಿಸಿದ ಹೇಳಿಕೆಯಲ್ಲಿ, ಹೈಟಿ ವಲಸಿಗರ ವಿಚಾರದಲ್ಲಿ “ಸರಿಯಾದದ್ದನ್ನು ಮಾಡಬೇಕು” ಎಂದು ಟ್ರಂಪ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. “ಈ ಸಂದರ್ಭದಲ್ಲಿ ಜನರನ್ನು ಸುರಕ್ಷಿತ ಹಾಗೂ ಕ್ರಮಬದ್ಧವಾಗಿ ಹೈಟಿಗೆ ಹಿಂದಿರುಗಿಸುವ ಯಾವುದೇ ವಾಸ್ತವಿಕ ಸಾಧ್ಯತೆ ಇಲ್ಲ,” ಎಂದು ಅವರು ಹೇಳಿದ್ದಾರೆ.

ಈ ಹೇಳಿಕೆಗೆ ಅಮೆರಿಕಾದ ಕಥೋಲಿಕ ಧರ್ಮಾಧ್ಯಕ್ಷರ ಸಮಾವೇಶದ (ಯುಎಸ್‌ಸಿಸಿಬಿ) ವಲಸೆ ಸಮಿತಿಯ ಅಧ್ಯಕ್ಷರಾದ ಪೂಜ್ಯ ಧರ್ಮಾಧ್ಯಕ್ಷರಾದ ಬ್ರೆಂಡನ್ ಕ್ಯಾಹಿಲ್ ಹಾಗೂ ಅಂತರರಾಷ್ಟ್ರೀಯ ನ್ಯಾಯ ಮತ್ತು ಶಾಂತಿ ಸಮಿತಿಯ ಅಧ್ಯಕ್ಷರಾದ ಪೂಜ್ಯ ಧರ್ಮಾಧ್ಯಕ್ಷರಾದ ಎ. ಇಲಿಯಾಸ್ ಝೈಡನ್ ಸಹಿ ಹಾಕಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಹೈಟಿಯಲ್ಲಿ ಹಿಂಸಾಚಾರ ಮತ್ತು ಕಾನೂನುಶೂನ್ಯತೆ ತೀವ್ರಗೊಂಡಿದ್ದು, ಸಂಘಟಿತ ಅಪರಾಧಿ ಗುಂಪುಗಳು ರಾಜಧಾನಿ ಪೋರ್ಟ್-ಓ-ಪ್ರಿನ್ಸ್‌ನ ವಿಶಾಲ ಪ್ರದೇಶಗಳನ್ನು ತಮ್ಮ ವಶಕ್ಕೆ ಪಡೆದಿವೆ. “ಟಿಪಿಎಸ್ ರದ್ದುಪಡಿಸುವುದರಿಂದ ಅಮೆರಿಕಾದಲ್ಲಿ ವಾಸಿಸುತ್ತಿರುವ ನಮ್ಮ ಹೈಟಿ ಸಹೋದರರು ಮತ್ತು ಸಹೋದರಿಯರು ತಮ್ಮ ಕಾನೂನು ಸ್ಥಾನಮಾನ ಮತ್ತು ಉದ್ಯೋಗ ಅನುಮತಿಯನ್ನು ಕಳೆದುಕೊಳ್ಳುವ ಸ್ಥಿತಿ ಉಂಟಾಗಲಿದೆ. ಇದು ನಮ್ಮನ್ನು ಗಂಭೀರವಾಗಿ ಕಳವಳಗೊಳಿಸುತ್ತದೆ,” ಎಂದು ಧರ್ಮಾಧ್ಯಕ್ಷರು ಹೇಳಿದ್ದಾರೆ.

ಅವರು ಸೂಚಿಸಿದಂತೆ, ಅಮೆರಿಕಾದ ರಾಜ್ಯ ಇಲಾಖೆಯು ಹೈಟಿಗೆ ಸಂಬಂಧಿಸಿದಂತೆ ಪ್ರಸ್ತುತ ‘ಮಟ್ಟ 4’ ಪ್ರವಾಸ ಎಚ್ಚರಿಕೆಯನ್ನು ಜಾರಿಗೊಳಿಸಿದ್ದು, ಅಪಹರಣ, ನಾಗರಿಕ ಅಶಾಂತಿ ಹಾಗೂ ಭಯೋತ್ಪಾದಕ ಚಟುವಟಿಕೆಗಳಂತಹ “ಜೀವನಕ್ಕೆ ಅಪಾಯ ಉಂಟುಮಾಡುವ ಅಪಾಯಗಳು” ಇರುವುದಾಗಿ ಎಚ್ಚರಿಸಿದೆ.

ಅದೇ ವೇಳೆ, ವಿಮಾನ ಸಂಚಾರ ಮತ್ತು ಸುರಕ್ಷತೆಯನ್ನು ಮೇಲ್ವಿಚಾರಣೆ ಮಾಡುವ ಅಮೆರಿಕಾದ ಫೆಡರಲ್ ವಿಮಾನಯಾನ ಆಡಳಿತವು, ಯಾವುದೇ ಅಮೆರಿಕ ನಗರದಿಂದ ಹೈಟಿ ರಾಜಧಾನಿಗೆ ವಿಮಾನ ಹಾರಾಟ ನಡೆಸುವುದನ್ನು ನಿಷೇಧಿಸಿದೆ.

ನ್ಯಾಯ ಮತ್ತು ಕರುಣೆಯ ಆಮಂತ್ರಣ

ತಮ್ಮ ಹೇಳಿಕೆಯಲ್ಲಿ, ಅಮೆರಿಕಾದ ಧರ್ಮಾಧ್ಯಕ್ಷರು ತಾತ್ಕಾಲಿಕ ಸಂರಕ್ಷಿತ ಸ್ಥಾನಮಾನ (TPS) ನಿಜಕ್ಕೂ ತಾತ್ಕಾಲಿಕವೇ ಎಂಬುದನ್ನು ಒಪ್ಪಿಕೊಂಡರೂ, ದೀರ್ಘಕಾಲದಿಂದ TPS ಅಡಿಯಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ರಾಷ್ಟ್ರೀಯತೆ ಯಾವುದೇ ಇರಲಿ ಸ್ಥಿರ ಕಾನೂನು ಸ್ಥಾನಮಾನಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುವಂತೆ “ಸಾಧ್ಯವಾದ ಅವಕಾಶಗಳನ್ನು” ಕಾನೂನಿನ ಮೂಲಕ ಒದಗಿಸಬೇಕೆಂದು ಕಾಂಗ್ರೆಸ್‌ಗೆ ತಮ್ಮ ಮನವಿ ಮಾಡಿದ್ದಾರೆ.

ಆದರೆ, ಇಂತಹ ಕಾನೂನು ರೂಪಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಅವರು ಸೂಚಿಸಿ, ಪರಿಣಾಮವಾಗಿ ಕಾರ್ಯನಿರ್ವಹಣಾ ಶಾಖೆಯೇ “ನ್ಯಾಯ ಮತ್ತು ಕರುಣೆಯೊಂದಿಗೆ ನಡೆದುಕೊಳ್ಳುವ” ಜವಾಬ್ದಾರಿಯನ್ನು ಹೊರುವಂತಾಗಿದೆ ಎಂದು ಹೇಳಿದರು.

“ಮಾನವ ಜೀವವನ್ನು ರಕ್ಷಿಸಲು, ಕಾನೂನನ್ನು ಗೌರವಿಸಲು ಮತ್ತು ಈ ದೇಶದಲ್ಲಿಯೂ ಅದರಾಚೆಯೂ ಜನರಿಗೆ ಹೆಚ್ಚಿನ ಸ್ಥಿರತೆಯನ್ನು ಉತ್ತೇಜಿಸಲು, ಸರಿಯಾದದ್ದನ್ನು ಮಾಡಲು ಟ್ರಂಪ್ ಸರ್ಕಾರಕ್ಕೆ ಇನ್ನೂ ಅವಕಾಶವಿದೆ,” ಎಂದು ಧರ್ಮಾಧ್ಯಕ್ಷರು ಹೇಳಿದರು. “ಹೈಟಿ ಜನರಿಗೆ ಈ ಅತ್ಯಾವಶ್ಯಕ ರಕ್ಷಣೆಯನ್ನು ವಿಸ್ತರಿಸುವ ಕಾರ್ಯನಿರ್ವಹಿಸಬೇಕೆಂದು ಈ ಮೂಲಕ ಸರ್ಕಾರಕ್ಕೆ  ನಾವು ಮನವಿ ಮಾಡುತ್ತೇವೆ.” ಕೊನೆಗೆ, ಹೈಟಿಯಲ್ಲಿ ವಾಸಿಸುತ್ತಿರುವವರಾಗಲಿ, ಅಮೆರಿಕಾದಲ್ಲಾಗಲಿ ಅಥವಾ ಬೇರೆಡೆಗಳಲ್ಲಾಗಲಿ—ಎಲ್ಲ ಹೈಟಿ ಜನರೊಂದಿಗೆ ಅಮೆರಿಕಾದ ಧರ್ಮಸಭೆ ತನ್ನ ಐಕ್ಯಮತ್ಯವನ್ನು ಪುನಃ ದೃಢಪಡಿಸಿದೆ.

“ಹೈಟಿಯ ಪಾಲಕಿಯರಾದ ನಿತ್ಯ ಸಹಾಯದ ಮಾತೆಯ   ಮಧ್ಯಸ್ಥಿಕೆಯನ್ನು ನಾವು ಕೋರುತ್ತೇವೆ, ಹೈಟಿ ಜನರಿಗೆ ಅವರು ಸದಾ ಶಕ್ತಿ ಮತ್ತು ಸಾಂತ್ವನದ ಮೂಲವಾಗಿರಲಿ,” ಎಂದು ಅವರು ಪ್ರಾರ್ಥಿಸಿದರು.

ಕಳೆದ ನಾಲ್ಕು ವರ್ಷಗಳಲ್ಲಿ ಲೈಂಗಿಕ ಹಿಂಸಾಚಾರದಲ್ಲಿ ತೀವ್ರ ಏರಿಕೆ

ಇತ್ತೀಚೆಗೆ ಡಾಕ್ಟರ್ಸ್ ವಿತೌಟ್ ಬೋರ್ಡರ್ಸ್ (MSF) ಸಂಸ್ಥೆ, ಹೈಟಿಯಲ್ಲಿ ಜನರು ಅತೀವ ಪ್ರಮಾಣದ ಲೈಂಗಿಕ ಮತ್ತು ಲಿಂಗಾಧಾರಿತ ಹಿಂಸಾಚಾರವನ್ನು ಎದುರಿಸುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದೆ. ಪೋರ್ಟ್-ಔ-ಪ್ರಿನ್ಸ್‌ನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಕಳೆದ ನಾಲ್ಕು ವರ್ಷಗಳಲ್ಲಿ ಮೂರರಷ್ಟು ಹೆಚ್ಚಾಗಿದೆ ಎಂದು ಈ ಆರೋಗ್ಯ ಸೇವಾ ಸಂಸ್ಥೆ ತಿಳಿಸಿದೆ.

ಹೊಸ ವರದಿಯ ಪ್ರಕಾರ, ಲೈಂಗಿಕ ಹಿಂಸಾಚಾರದ ಪ್ರಮಾಣವೂ ಅದರ ತೀವ್ರತೆಯೂ ಅಚ್ಚರಿ ಹುಟ್ಟಿಸುವಂತಿದೆ. “ಒಂದೇ ವೇಳೆ 10 ಅಥವಾ ಅದಕ್ಕಿಂತ ಹೆಚ್ಚು ಅಪರಾಧಿಗಳು 100ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದ್ದಾರೆ,” ಎಂದು ವರದಿ ಹೇಳಿದ್ದು, ಪ್ರತಿ ಪ್ರಕರಣದಲ್ಲೂ ಸರಾಸರಿ ಮೂರು ಅಪರಾಧಿಗಳು ಭಾಗಿಯಾಗಿರುವುದಾಗಿ ಸೂಚಿಸಿದೆ.

ಹೈಟಿಯ ರಾಜಧಾನಿಯ ಸುಮಾರು 90 ಶೇಕಡಾ ಪ್ರದೇಶವನ್ನು ಗ್ಯಾಂಗ್‌ಗಳು ನಿಯಂತ್ರಿಸುತ್ತಿದ್ದು, ಭಯ ಹುಟ್ಟಿಸಲು ಮತ್ತು ತಮ್ಮ ಹಿಡಿತವನ್ನು ಕಾಯ್ದುಕೊಳ್ಳಲು ಅವುಗಳು ಲೈಂಗಿಕ ಹಿಂಸೆಯನ್ನು ಉಪಯೋಗಿಸುತ್ತಿವೆ ಎಂದು ತಜ್ಞರು ತಿಳಿಸಿದ್ದಾರೆ.

 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

30 ಜನವರಿ 2026, 16:01