JORDAN-CHRISTIANITY-CHURCH JORDAN-CHRISTIANITY-CHURCH  (AFP or licensors)

ಪವಿತ್ರ ಭೂಮಿ: ಜೋರ್ಡಾನ್‌ನಲ್ಲಿ ಆರಂಭವಾಗುವ “ಐದನೇ ಸುವಾರ್ತೆ”

ಜೋರ್ಡಾನ್‌ನಲ್ಲಿ ಮೋಶೆಯ ಮುಂದಾಳತ್ವದಲ್ಲಿ ಸರ್ವೇಶ್ವರ ತಂದೆ ಇಸ್ರಾಯೇಲರನ್ನು ವಿಮೋಚಿಸಿದ್ದರಿಂದ ಹಿಡಿದು, ಪ್ರಭು ಯೇಸು ಕ್ರಿಸ್ತರ ದೀಕ್ಷಾಸ್ನಾನವರೆಗೆ ಅನೇಕ ಬೈಬಲ್ ಘಟನೆಗಳು ನಡೆದಿವೆ. ಹಾಗೆಯೇ, ಈ ದೇಶದಲ್ಲಿನ ಕ್ರೈಸ್ತ ಉಪಸ್ಥಿತಿ ಅತ್ಯಂತ ಪುರಾತನ ಮೂಲಗಳನ್ನು ಹೊಂದಿದೆ. ಆಂಡ್ರಿಯಾ ಟೋರ್ನಿಯೆಲ್ಲಿ – ಜೋರ್ಡಾನ್

ಪವಿತ್ರ ಭೂಮಿ ಎಂದಾಗ, ಸಾಮಾನ್ಯವಾಗಿ ನಾವು ಪ್ರಭು ಯೇಸು ಕ್ರಿಸ್ತರ ಜೀವನಕ್ಕೆ ಸಂಬಂಧಿಸಿದ ಪಾಲೆಸ್ತೀನ್ ಮತ್ತು ಇಸ್ರಾಯೇಲಿನ  ಬೆತ್ಲೆಹೇಮ್, ನಜರೇತ್, ಕಫೆರ್ನವುಮ್, ಜೆರುಸಲೇಮ್ ಮುಂತಾದ ಐತಿಹಾಸಿಕ ಸ್ಥಳಗಳನ್ನೇ ನೆನಪಿಸಿಕೊಳ್ಳುತ್ತೇವೆ.

ಆದರೆ ಕ್ರೈಸ್ತ ಸ್ಮೃತಿಗಳು ಚದುರಿಕೊಂಡಿರುವ, ತೀರ್ಥಯಾತ್ರೆಗೆ ಸಮರ್ಪಕವಾದ ಮತ್ತೊಂದು ದೇಶವೂ ಇದೆ—ಅದು ಜೋರ್ಡಾನ್.

ಇದು ಮೋಶೆ ಯೆಹೂದ್ಯ ಜನರನ್ನು ವಾಗ್ದಾತ್ತ ನಾಡಿನೆಡೆಗೆ ನಡೆಸಿಕೊಂಡು ಹಾದುಹೋದ ನಾಡು. ಅನೇಕ ಬೈಬಲ್ ಹಾಗೂ ಶುಭ ಸಂದೇಶದ ಘಟನೆಗಳು ನಡೆದ ಭೂಮಿ. ಮೋಶೆ ತಮ್ಮ ಅಂತಿಮ ಕ್ಷಣಗಳಲ್ಲಿ ಕಾನಾನ್ ನಾಡನ್ನು ದೂರದಿಂದಲೇ ಕಂಡ ಭೂಮಿ ಕೂಡ ಇದೇ.

ಇದೇ ಭೂಮಿಯಲ್ಲಿ ಸ್ನಾನಿಕ ಯೋವಾನ್ನರು ಪ್ರಭು ಯೇಸು ಕ್ರಿಸ್ತರಿಗೆ ದೀಕ್ಷಾಸ್ನಾನ ನೀಡಿದರು. ಇದೇ ನಾಡಿನಲ್ಲಿ ನಜರೇತ್‌ನ ಪ್ರಭು ಯೇಸು ಕ್ರಿಸ್ತರು ತಮ್ಮ ಮೊದಲ ಶಿಷ್ಯರಾದ ಅಂದ್ರೇಯ ಮತ್ತು ಪೇತ್ರರನ್ನು ಭೇಟಿಯಾದರು; ಅನೇಕ ರೋಗಗಳನ್ನು ಗುಣಪಡಿಸಿದರು; ಅದ್ಭುತಗಳನ್ನು ನಡೆಸಿದರು.

ಸಂದರ್ಭ ಕಠಿಣವಾದರೂ—ಜೋರ್ಡಾನ್ ಗಡಿ ಹಂಚಿಕೊಂಡಿರುವ ಸಿರಿಯಾ, ಇರಾಕ್, ಸೌದಿ ಅರೇಬಿಯಾ, ಇಸ್ರಾಯೇಲ್ ಮತ್ತು ಪಾಲೆಸ್ತೀನ್  ಸ್ಥಿತಿಗತಿಗಳನ್ನು ನೋಡಿದರೆ ಸಾಕು—ಜೋರ್ಡಾನ್ ತನ್ನ ಸ್ಥಿರತೆ ಹಾಗೂ ವಿಭಿನ್ನ ಧಾರ್ಮಿಕ ಪರಂಪರೆಗಳ ಶಾಂತಿಯುತ ಸಹಅಸ್ತಿತ್ವಕ್ಕಾಗಿ ವಿಶೇಷವಾಗಿ ಗುರುತಿಸಿಕೊಳ್ಳುತ್ತದೆ.

ಕ್ರೈಸ್ತರು ಇಲ್ಲಿನ ಜನಸಂಖ್ಯೆಯ ಕೇವಲ ಶೇಕಡಾ 6ರಷ್ಟಿದ್ದರೂ,  ದೇಶದ ಸಂಪೂರ್ಣ ನಾಗರೀಕರಾಗಿದ್ದಾರೆ. ಇಲ್ಲಿನ ಕ್ರೈಸ್ತರು ಶಾಲೆಗಳನ್ನು ನಡೆಸುತ್ತಿದ್ದಾರೆ, ಆಸ್ಪತ್ರೆಗಳನ್ನು ಸೇವೆಗಳನ್ನು ನೀಡುತ್ತಿದ್ದಾರೆ. ಲ್ಯಾಟಿನ್ ಕಥೋಲಿಕ ಸಭೆಯ ವಿಷಯಕ್ಕೆ ಬಂದರೆ, ಅವರು ಜೆರುಸಲೇಮಿನ ಲ್ಯಾಟಿನ್ ಮಹಾಧರ್ಮಾಧ್ಯಕ್ಷರ ಅಧೀನದಲ್ಲಿರುವ ಧರ್ಮಕ್ಷೇತ್ರದ ಅತಿ ದೊಡ್ಡ ಭಾಗವನ್ನು ಪ್ರತಿನಿಧಿಸುತ್ತಾರೆ.

ಮೃತಸಾಗರ ಹಾಗೂ ಕೆಂಪುಸಾಗರದ ತೀರದ ರೆಸಾರ್ಟ್‌ಗಳ ಕಾರಣದಿಂದಲೂ, ಮುಖ್ಯವಾಗಿ ಪೆಟ್ರಾ ಎಂಬ ಅಸಾಧಾರಣ ಶಿಲಾನಗರದ ಅಪೂರ್ವ ಸೌಂದರ್ಯದ ಕಾರಣದಿಂದಲೂ ಜೋರ್ಡಾನ್ ಪ್ರವಾಸಿಗರಿಗೆ ಆಕರ್ಷಕ ತಾಣವಾಗಿದೆ.ಶಿಲೆಯೊಳಗೆ ಕೊತ್ತಿದ ನಬಟೇಯನ್ ನಾಗರವಾದ ಪೆಟ್ರಾ, 1985ರಿಂದಲೇ UNESCO(ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ವಿಶ್ವ ಪಾರಂಪರಿಕ ತಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ಜೋರ್ಡಾನ್ ತನ್ನ ಕ್ರೈಸ್ತ ಪರಂಪರೆಯ ಮಹತ್ವವನ್ನು ಇನ್ನಷ್ಟು ಬೆಳಗಿಸುವತ್ತ ಕ್ರಮೇಣ ಗಮನ ಹರಿಸುತ್ತಿದೆ.

ಅಕಾಬಾ ಮತ್ತು ಪೆಟ್ರಾ

ಅಕಾಬಾದಲ್ಲಿರುವ ದೇವಾಲಯ, ಕ್ರಿ.ಶ. 3ನೇ ಶತಮಾನಕ್ಕೆ ಸೇರಿದದ್ದು. ಇದನ್ನು ಜಗತ್ತಿನಲ್ಲಿ ಕ್ರೈಸ್ತ ಆರಾಧನೆಗಾಗಿ ಉದ್ದೇಶಪೂರ್ವಕವಾಗಿ ನಿರ್ಮಿಸಲಾದ ಅತಿ ಪುರಾತನ ಕಟ್ಟಡವೆಂದು ಪರಿಚಯಿಸಲಾಗುತ್ತಿದೆ. ಪುರಾತತ್ವ ವಿಜ್ಞಾನಿಗಳು 1998ರಲ್ಲಿ ಈ ದೇವಾಲಯವನ್ನು ಪತ್ತೆಹಚ್ಚಿದರು.

ಈ ದೇವಾಲಯ ರೋಮನ್ ಸಾಮ್ರಾಜ್ಯದ ಅಂಚಿನ ಪ್ರದೇಶದಲ್ಲಿದ್ದ ಕಾರಣ, ಕ್ರಿ.ಶ. 303ರಲ್ಲಿ ಚಕ್ರವರ್ತಿ ಡಯೋಕ್ಲೇಷಿಯನ್ ಹೊರಡಿಸಿದ ಆದೇಶದಿಂದ ಆರಂಭವಾದ “ಮಹಾ ಹಿಂಸೆ” ಸಮಯದಲ್ಲಿ ಇದು ಸಂಪೂರ್ಣ ನಾಶವಾಗದೇ ಉಳಿದಿರಬಹುದೆಂದು ಊಹಿಸಲಾಗುತ್ತದೆ.

ಜೂನ್ 1998ರಲ್ಲಿ ಕೆಂಪುಸಾಗರದ ತೀರದಲ್ಲಿರುವ ಜೋರ್ಡಾನ್‌ನ ಕರಾವಳಿ ನಗರ ಅಕಾಬಾದಲ್ಲಿ, ಪುರಾತತ್ವಜ್ಞರ ತಂಡ ಈ ಅವಶೇಷಗಳನ್ನು ಕಂಡುಹಿಡಿದಿತು.

ಇದರ ವಾಸ್ತುಶೈಲಿ ತಕ್ಷಣವೇ ಗಮನ ಸೆಳೆಯಿತು. ಏಕೆಂದರೆ ಜೋರ್ಡಾನ್‌ನಲ್ಲಿನ ಮೊದಲ ಕ್ರೈಸ್ತ ಆರಾಧನಾ ಸ್ಥಳಗಳು ಕೇವಲ 4ನೇ ಶತಮಾನದ ಅಂತ್ಯಕ್ಕೆ ಮಾತ್ರ ಸೇರಿವೆ ಎಂಬ ಇತಿಹಾಸಕಾರರ ಸಾಮಾನ್ಯ ನಂಬಿಕೆಯನ್ನು ಈ ಕಟ್ಟಡ ಪ್ರಶ್ನಿಸಿತು.

ಈ ಲೇಖನದ ಬರಹಗಾರರು ಕೂಡ ಒಂದು ಭಾನುವಾರದ ಬೆಳಕು ತುಂಬಿದ ಮಧ್ಯಾಹ್ನ, ಈ ಅವಶೇಷಗಳ ನಡುವೆ ಪವಿತ್ರ ಬಲಿಪೂಜೆ ಆಚರಿಸಲು ಅವಕಾಶ ಪಡೆದ ಪ್ರವಾಸಿಗರ ಗುಂಪಿನ ಭಾಗವಾಗಿದ್ದರು. ಚೌಕದ ಮಧ್ಯದಲ್ಲಿರುವ ಈ ಅವಶೇಷಗಳನ್ನು, ಬದಿಗಳಲ್ಲಿ ತೆರೆದಿರುವ ಮೇಲ್ಛಾವಣಿಯ ಮೂಲಕ ಸಂರಕ್ಷಿಸಲಾಗಿದೆ.

ಕ್ರೈಸ್ತರಿಗೆ ಸಾರ್ವಜನಿಕವಾಗಿ ಆರಾಧನೆ ನಡೆಸಲು ಅವಕಾಶ ನೀಡುವ ಈ ವಾತಾವರಣವೇ, ಬಹುಸಂಖ್ಯಾತ ಮುಸ್ಲಿಂ ದೇಶದಲ್ಲಿ ವಿಭಿನ್ನ ಧರ್ಮಗಳು ಸಹಜವಾಗಿ ಸಹಅಸ್ತಿತ್ವದಲ್ಲಿರುವ ಜೋರ್ಡಾನ್‌ನ ಧರ್ಮಸಹಿಷ್ಣುತೆಯ ಸಾಕ್ಷಿಯಾಗಿದೆ.

ಪೆಟ್ರಾದಲ್ಲಿಯೂ ಕ್ರೈಸ್ತ ಸ್ಮೃತಿಗಳು ಉಳಿದಿವೆ. ವಿಶೇಷವಾಗಿ 5ನೇ–6ನೇ ಶತಮಾನಕ್ಕೆ ಸೇರಿದ ಬೈಝಾಂಟೈನ್ ದೇವಾಲಯ, ಅದರ ಅದ್ಭುತ ಮೋಸಾಯಿಕ್ ಚಿತ್ರಗಳ ಮೂಲಕ ಜೀವನ ಹಾಗೂ ಪ್ರಕೃತಿಯ ದೃಶ್ಯಗಳನ್ನು ಚಿತ್ರಿಸುತ್ತದೆ. ಇವು ಪೌರಾಣಿಕ ಅಲಂಕಾರಗಳಿಂದ ಕ್ರೈಸ್ತ ಚಿಹ್ನೆಗಳತ್ತ ನಡೆದ ಪರಿವರ್ತನೆಯನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಇಲ್ಲಿರುವ ದೀಕ್ಷಾಸ್ನಾನ ಮಂದಿರವು ಪುರಾತನ ಕಾಲದ ಅತಿ ದೊಡ್ಡ ದೀಕ್ಷಾಸ್ನಾನ ಮಂದಿರಗಳಲ್ಲಿ ಒಂದಾಗಿದೆ. ಇದನ್ನು ಈಗಾಗಲೇ ಇದ್ದ ನೀರಿನ ತೊಟ್ಟಿಯಿಂದ ರೂಪಿಸಲಾಗಿದೆ.

ಇದಕ್ಕೆ ಹೊಂದಿಕೊಂಡಿರುವ ಬಸಿಲಿಕಾ ಪ್ರಾರ್ಥನಾ ಮಂದಿರವನ್ನು “ನೀಲಿ ಧರ್ಮಸಭೆ” ಎಂದೂ ಕರೆಯಲಾಗುತ್ತದೆ—ಈಜಿಪ್ಟ್ ಮೂಲದ ನೀಲಿ ಛಾಯೆಯ ಗ್ರಾನೈಟ್ ಕಲ್ಲುಗಳ ಕಾರಣದಿಂದ. ಇದು ಮೊದಲು ಇದ್ದ ನಬಟೇಯನ್ ಆರಾಧನಾ ಸ್ಥಳದ ಮೇಲೆಯೇ ನಿರ್ಮಾಣಗೊಂಡಿದ್ದು, ನಂತರ ಬೆಂಕಿ ಮತ್ತು ಭೂಕಂಪಗಳಿಂದ ನಾಶವಾಯಿತು.

ನೆಬೋ ಪರ್ವತ

ಇದು ಅಪಾರ ಸೌಂದರ್ಯದ ಶಿಖರ. ಇಲ್ಲಿ ನಿಂತು ನೋಡಿದರೆ ಮೃತಸಾಗರ, ಜುದೇಯ ಮರಳುಭೂಮಿ, ಜೋರ್ಡಾನ್ ಕಣಿವೆ, ಜುದೇಯ ಮತ್ತು ಸಮಾರಿಯಾದ ಪರ್ವತಗಳು—ಒಂದೇ ದೃಷ್ಟಿಪಥದಲ್ಲಿ ಕಾಣುತ್ತವೆ.

ಆಕಾಶ ಸ್ಪಷ್ಟವಾಗಿರುವ ದಿನಗಳಲ್ಲಿ ಜೆರುಸಲೇಮ್ ಹಾಗೂ ಪವಿತ್ರ ನಗರದತ್ತ ಸಾಗುವ ದಾರಿಯೂ ದೂರದಿಂದ ಕಾಣುತ್ತದೆ.

ಈ ಸ್ಥಳದ ಅನ್ವೇಷಣೆ ಮತ್ತು ಉತ್ಖನನ ಕಾರ್ಯಗಳು ಪವಿತ್ರ ಭೂಮಿಯ ಸಂರಕ್ಷಣಾ ಸಂಸ್ಥೆಯ (Custody of the Holy Land) ಪ್ರಯತ್ನಗಳಿಂದ ಸಾಧ್ಯವಾಯಿತು. ವಿಶೇಷವಾಗಿ ಸಹೋದರ ಜಿರೋಲಾಮೊ ಮಿಹಾಯಿಕ್ ಅವರು 1932ರಲ್ಲಿ ಈ ಭೂಮಿಯನ್ನು ಖರೀದಿಸುವಲ್ಲಿ ಯಶಸ್ವಿಯಾದರು.

1930ರ ದಶಕದಲ್ಲಿ ನಡೆದ ಉತ್ಖನನ ಕಾರ್ಯಗಳು, ನಂತರ 1960ರ ಪ್ರಾರಂಭದಲ್ಲಿ ನಡೆದ ಮುಂದಿನ ಹಂತದ ಕಾರ್ಯಗಳು—ಯುದ್ಧಸಂಘರ್ಷಗಳಿಂದ ಕೆಲಕಾಲ ಸ್ಥಗಿತಗೊಂಡು, 1970ರ ದಶಕದಲ್ಲಿ ವಂ. ಗುರು ಮಿಶೆಲ್ ಪಿಚ್ಚಿರಿಲ್ಲೋ ಅವರಿಂದ ಪುನರಾರಂಭಗೊಂಡು ಅಪರೂಪದ ಪಾರಂಪರಿಕ ಸಂಪತ್ತನ್ನು ಹೊರತಂದವು.

ಈ ತಾಣವನ್ನು 4ನೇ ಶತಮಾನದ ಅಂತ್ಯದಲ್ಲಿ ಪವಿತ್ರ ಭೂಮಿಗೆ ಪಥಪ್ರದರ್ಶಕ ತೀರ್ಥಯಾತ್ರೆ ಮಾಡಿದ ಯಾತ್ರಿಕ ಎಗೆರಿಯಾ ಕೂಡ ಉಲ್ಲೇಖಿಸಿದ್ದಾರೆ. ಗಾಜಾದ ಮೊನೊಫಿಸೈಟ್ ಧರ್ಮಾಧ್ಯಕ್ಷರಾಗಿದ್ದ ಪೀಟರ್ ದಿ ಐಬೇರಿಯನ್ ಕೂಡ ಇದನ್ನು ದಾಖಲಿಸಿದ್ದಾರೆ.

ಉತ್ಖನನಗಳಿಂದ, ವಿಶೇಷವಾಗಿ ಸಂಪೂರ್ಣವಾಗಿ ಉಳಿದಿರುವ ಬೈಝಾಂಟೈನ್ ಮೋಸಾಯಿಕ್‌ಗಳು ಅತ್ಯಂತ ಅಮೂಲ್ಯ ನಿಧಿಗಳಾಗಿ ಪತ್ತೆಯಾದವು.

ಇಂದು ಇಲ್ಲಿ 430 ಕ್ರಿ.ಶ.ಕ್ಕೆ ಸೇರಿದ ಮೊದಲ ಬಸಿಲಿಕಾದ ಅವಶೇಷಗಳು, ನಂತರ ನಿರ್ಮಿಸಲಾದ ಮಠದ ಕಟ್ಟಡಗಳು, 500 ಕ್ರಿ.ಶ.ಕ್ಕೆ ಸೇರಿದ ಮೂರು ಕಮಾನುಗಳುಳ್ಳ ಭಾಗಗಳ ರಚನೆಯೊಂದಿಗೆ ಮುಕ್ತಾಯಗೊಳ್ಳುವ ಭವ್ಯ ಬಸಿಲಿಕಾ, ಪುರಾತನ ದೀಕ್ಷಾಸ್ನಾನ ಮಂದಿರ, ನಂತರ 6ನೇ ಶತಮಾನದ ಬಸಿಲಿಕಾ ಮತ್ತು “ಥಿಯೋಟೋಕೋಸ್” (ದೇವಮಾತೆ) ಪ್ರಾರ್ಥನಾ ಮಂದಿರಗಳ ಅವಶೇಷಗಳನ್ನು ಗುರುತಿಸಬಹುದು.

ಕಾಲಕ್ರಮೇಣ ಭೂಕಂಪಗಳಿಂದ ಕಟ್ಟಡಗಳು ಕುಸಿದವು. 2016ರಿಂದ ಯಾತ್ರಿಕರನ್ನು, ಮರದ ವಿನ್ಯಾಸದೊಂದಿಗೆ ನವೀಕರಿಸಿದ ಬಸಿಲಿಕಾದೊಳಗೆ ಸ್ವಾಗತಿಸಲಾಗುತ್ತಿದೆ—ಇಲ್ಲಿ ಹೊಸದು ಹಳೆಯದನ್ನು ಮುಚ್ಚದೇ, ಪುರಾತನತೆಯ ವೈಭವವೇ ಸ್ಪಷ್ಟವಾಗಿ ಹೊರಹೊಮ್ಮುವಂತೆ ವಿನ್ಯಾಸ ಮಾಡಲಾಗಿದೆ.

ಮಕಾಯೆರಸ್

ಈ ಪರ್ವತದ ಮೇಲೆ ಕ್ರಿ.ಪೂ. 90ರಲ್ಲಿ ರಾಜ ಅಲೆಕ್ಸಾಂಡರ್ ಜನ್ನೇಯಸ್ ನಿರ್ಮಿಸಿದ ಹಸ್ಮೋನಿಯನ್ ಕೋಟೆ ಇತ್ತು. ರೋಮನ್ನರು ಅದನ್ನು ನಾಶಮಾಡಿದ ಬಳಿಕ, ಕ್ರಿ.ಪೂ. 30ರಲ್ಲಿ ಶ್ರೇಷ್ಠ ಹೆರೋದನು ಇಲ್ಲಿ ಚಳಿಗಾಲ ಕಳೆಯಲು ಅರಮನೆ-ಕೋಟೆಯನ್ನು ನಿರ್ಮಿಸಿದನು.

ಇಲ್ಲಿಯೂ ದೃಶ್ಯಾವಳಿ ಅಸಾಧಾರಣ. ಪತ್ತೆಯಾದ ಅವಶೇಷಗಳು, ಪರ್ವತದ ಹೃದಯದೊಳಗೆ ಪ್ರವೇಶಿಸುವಂತೆ ನಿರ್ಮಿಸಲಾದ ಅರಮನೆ ಹಾಗೂ ಸೇವಕರಿಗಾಗಿ ನಿರ್ಮಿಸಲಾದ ಗ್ರಾಮವೊಂದನ್ನು ನೋಡಬಹುದು.

ಶ್ರೇಷ್ಠ ಹೆರೋದನು ಮೃತಸಾಗರದಲ್ಲಿ ಚಿಕಿತ್ಸೆ ಪಡೆಯಲು ಇಲ್ಲಿ  ಪ್ರಯಾಣಿಸುತ್ತಿದ್ದನೆಂಬ ದಾಖಲೆಗಳಿವೆ. ಪರಂಪರೆಯ ಪ್ರಕಾರ, ಸ್ನಾನಿಕಾ ಯೋವಾನ್ನರು ಈ ಗೋಡೆಗಳೊಳಗೆ ಬಂಧಿಸಲ್ಪಟ್ಟರು. ಇದೇ ಸ್ಥಳದಲ್ಲಿ ಹೆರೋದ ಅಂತಿಪಾಸ್ ಸಲೋಮೆಯ ಬೇಡಿಕೆಗೆ ಒಪ್ಪಿ, ಯೋವಾನ್ನರ ಶಿರಚ್ಛೇದನಕ್ಕೆ ಆದೇಶ ನೀಡಿದನೆಂದು ಹೇಳಲಾಗುತ್ತದೆ.

ಈ ಕೋಟೆಯನ್ನು ಕ್ರಿ.ಶ. 37ರಲ್ಲಿ ರಾಜ ನಾಲ್ಕನೇ ಅರೆಟಾಸ್ ನಾಶಮಾಡಿದನುರ. ನಂತರ ಕ್ರಿ.ಶ. 71ರಲ್ಲಿ ರೋಮನ್ನರು ಇದನ್ನು ಸಂಪೂರ್ಣವಾಗಿ ನೆಲಸಮಗೊಳಿಸಿದರು.

ಪ್ರಭು ಯೇಸು ಕ್ರಿಸ್ತರ ದೀಕ್ಷಾಸ್ನಾನ

ಸುವಾರ್ತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಸ್ಥಳವೆಂದರೆ—ಪ್ರಭು ಯೇಸು ಕ್ರಿಸ್ತರ ದೀಕ್ಷಾಸ್ನಾನ ನಡೆದ ಸ್ಥಳ. ಇದು ಯೋವಾನ್ನರ ಶುಭ ಸಂದೇಶದಲ್ಲಿ ಉಲ್ಲೇಖವಾಗುವ “ಜೋರ್ಡಾನ್ ನದಿಯಾಚೆಯ ಬೆಥಾನಿ”. ಪ್ರಾರಂಭಿಕ ಕ್ರೈಸ್ತ ಯುಗದಲ್ಲಿ ಇದನ್ನು “ಬೆಥಾಬರಾ” ಎಂದು ಕರೆಯಲಾಗುತ್ತಿತ್ತು. ಇಂದು ಇದನ್ನು ಅಲ್-ಮಘ್ತಾಸ್ ಎಂದು ಕರೆಯುತ್ತಾರೆ—ಅರೇಬಿಕ್‌ನಲ್ಲಿ ಇದರ ಅರ್ಥ “ದೀಕ್ಷಾಸ್ನಾನ” ಅಥವಾ “ಮುಳುಗು”.

ಇದು 6ನೇ ಶತಮಾನದ ಪ್ರಸಿದ್ಧ ಮಡಾಬಾ ನಕ್ಷೆಯಲ್ಲಿಯೂ ಕಾಣಿಸುತ್ತದೆ. ಜೋರ್ಡಾನ್‌ನಲ್ಲಿ ತಪ್ಪದೇ ನೋಡಬೇಕಾದ ಮತ್ತೊಂದು ಮಹತ್ವದ ತಾಣವಿದು. ಪುರಾತತ್ವ ಸಾಕ್ಷ್ಯಗಳು ಈ ಗುರುತನ್ನು ಇನ್ನಷ್ಟು ದೃಢಪಡಿಸುತ್ತವೆ.

5ನೇ ಶತಮಾನದ ಅಂತ್ಯ ಮತ್ತು 6ನೇ ಶತಮಾನದ ಆರಂಭದಲ್ಲಿ, ಬೈಝಾಂಟೈನ್ ಚಕ್ರವರ್ತಿ ಒಂದನೇ ಅನಾಸ್ಟಾಸಿಯಸ್  ಡಿಕೋರಸ್ ಇಲ್ಲಿ ಸ್ನಾನಿಕ ಯೋವಾನ್ನರಿಗೆ ಸಮರ್ಪಿತ ಮೊದಲ ದೇವಾಲಯವನ್ನು ಕಟ್ಟಿಸಿದರು. ಆ ಕಾಲದ ಯಾತ್ರಿಕರು ಈ ನಿರ್ಮಾಣವನ್ನು ವಿವರಿಸಿದ್ದಾರೆ.

ನಂತರ ಇಲ್ಲಿ ಪರಮ ತ್ರಿತ್ವದ ಬಸಿಲಿಕಾವನ್ನು ನಿರ್ಮಿಸಲಾಯಿತು—ಕನಿಷ್ಠ 27 ಮೀಟರ್ ಉದ್ದ ಮತ್ತು 15 ಮೀಟರ್ ಅಗಲದ ಭವ್ಯ ದೇವಾಲಯವಿದು. ಸುತ್ತಮುತ್ತಲ ಉತ್ಖನನಗಳಲ್ಲಿ ತಪಸ್ವಿಗಳ ಗುಹೆಗಳು, ಪ್ರಾರ್ಥನಾ ಮಂದಿರಗಳು, ಮೋಸಾಯಿಕ್‌ಗಳು, ಮಾರ್ಬಲ್ ನೆಲಹಾಸುಗಳು ಹಾಗೂ ದೊಡ್ಡ ಶಿಲುಬೆಯಾಕಾರದ ದೀಕ್ಷಾಸ್ನಾನ ಮಂದಿರ ಪತ್ತೆಯಾಗಿದೆ.

ಇದಕ್ಕೆ ಅಷ್ಟೇ ದೂರದಲ್ಲೇ, ಪ್ರವಾದಿ ಎಲೀಯರ ಸ್ಮೃತಿಗೆ ಸಂಬಂಧಿಸಿದ ಅವಶೇಷಗಳೂ ಪತ್ತೆಯಾಗಿವೆ. 2015ರಲ್ಲಿ ಈ ಪ್ರದೇಶವನ್ನು ಯುನೆಸ್ಕೋ(UNESCO) ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸಲಾಯಿತು.

ಇಲ್ಲಿಯೂ “ಅತಿಕ್ರಮಣಕಾರಿ” ಆಧುನಿಕ ನಿರ್ಮಾಣಗಳಿಲ್ಲದೆ, ಮೂಲ ತಾಣದ ಗೌರವ ಉಳಿಸುವ ರೀತಿಯಲ್ಲಿ ಸಂರಕ್ಷಣೆ ಮಾಡಿರುವುದು ಗಮನಾರ್ಹ. ದೀಕ್ಷಾಸ್ನಾನ ತಾಣದ ನಿರ್ದೇಶಕ ರುಸ್ತೋಮ್ ಮಖ್ಜಿಯನ್ ಅವರ ವಿವರಣೆ ಪ್ರಕಾರ, ಕೆಲ ಭಾಗಗಳನ್ನು ಕೇವಲ ಹಗುರವಾದ ಮರದ ಛಾವಣಿಗಳ ಮೂಲಕ ಮುಚ್ಚಲಾಗಿದೆ.

ಪಿಜ್ಜಬಲ್ಲಾ: “ಎಂಟನೇ ಸಂಸ್ಕಾರ”

ಜೆರುಸಲೇಮಿನ ಲ್ಯಾಟಿನ್ ಕಥೋಲಿಕ ಸಭೆಯ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಪಿಯರ್ಬಟ್ಟಿಸ್ತಾ ಪಿಜ್ಜಬಲ್ಲಾ ಅವರ ಮಾತಿನಲ್ಲಿ, “ಪವಿತ್ರ ಭೂಮಿ ಐದನೇ ಸುವಾರ್ತೆ. ನಾನು ಇದನ್ನು ಒಂದು ರೀತಿಯ ಎಂಟನೇ ಸಂಸ್ಕಾರ ಎಂದೂ ಕರೆಯಲು ಇಷ್ಟಪಡುತ್ತೇನೆ—ಏಕೆಂದರೆ ಇಲ್ಲಿ ನೀವು ಪ್ರಭು ಯೇಸು ಕ್ರಿಸ್ತರೊಂದಿಗೆ ಶಾರೀರಿಕವಾಗಿ, ಸ್ಪರ್ಶಿಸುವಂತೆ, ಭೇಟಿಯಾಗುವ ಅನುಭವ ಪಡೆಯಬಹುದು. ಪವಿತ್ರ ಭೂಮಿಗೆ ಹೋಗದೆ ಇದ್ದರೂ ಒಬ್ಬನು ಸಂಪೂರ್ಣ ಕ್ರೈಸ್ತನಾಗಿರಬಹುದು. ಆದರೆ ಪವಿತ್ರ ಭೂಮಿಗೆ ಹೋದರೆ, ನಿಮ್ಮ ಕ್ರೈಸ್ತ ನಂಬಿಕೆ ಇನ್ನಷ್ಟು ಗಟ್ಟಿಯಾಗುತ್ತದೆ, ಇನ್ನಷ್ಟು ಸ್ಪಷ್ಟವಾಗುತ್ತದೆ.”

ಜೋರ್ಡಾನ್‌ನಿಂದ ಕಾರ್ಡಿನಲ್ ಪಿಜ್ಜಬಲ್ಲಾ ತೀರ್ಥಯಾತ್ರಿಕರನ್ನು  ಪ್ರಭು ಯೇಸು ಕ್ರಿಸ್ತರ ಜೀವನಕ್ಕೆ ಸಾಕ್ಷಿಯಾದ ಕಲ್ಲುಗಳನ್ನು ಸ್ವಂತ ಕೈಗಳಿಂದ ಸ್ಪರ್ಶಿಸುವಂತೆ, ಹಾಗೂ ಇಂದಿನ ಕ್ರೈಸ್ತ ಸಮುದಾಯಗಳೆಂಬ “ಜೀವಂತ ಕಲ್ಲುಗಳನ್ನು” ಭೇಟಿಯಾಗುವ ಆಹ್ವಾನ ನೀಡುತ್ತಾರೆ.

“ನಾನು ಎಲ್ಲರನ್ನೂ ಪವಿತ್ರ ಭೂಮಿಗೆ ಬರಲು ಪ್ರೋತ್ಸಾಹಿಸುತ್ತೇನೆ, ಅಲ್ಲಿ  ಪ್ರಭು ಯೇಸು ಕ್ರಿಸ್ತರು ಮತ್ತು ಅವರ ಮಾನವತ್ವದೊಂದಿಗೆ ನಡೆದ ಅದ್ಭುತ ಭೇಟಿಯ ಅನುಭವವನ್ನು ಪಡೆಯಲಿ” ಎಂದು ಕಾರ್ಡಿನಲ್ ಎಲ್ಲರನ್ನೂ ಸ್ವಾಗತಿಸುತ್ತಾರೆ.

 

16 ಜನವರಿ 2026, 18:25