2023.11.07 il Dio che dà la vita 2023.11.07 il Dio che dà la vita  (Copyright (c) 2020 Porstocker/Shutterstock. No use without permission.)

ಉತ್ತಮ ಕುರಿಗಾಹಿಯ ದಯಾ ಮಾತೆಯ ಸಹೋದರಿಯರ ಸಭೆ ಕೌಟುಂಬಿಕ ಹಿಂಸೆಯಿಂದ ಪೀಡಿತ ಮಹಿಳೆಯರು ಮತ್ತು ಮಕ್ಕಳಿಗೆ ಆಶ್ರಯ ನೀಡುತ್ತಿದೆ

ಮಾಲ್ತ ಮತ್ತು ಪೋರ್ಚುಗಲ್‌ನಲ್ಲಿ, ಕೌಟುಂಬಿಕ ಹಿಂಸೆಯಿಂದ ಉಂಟಾಗುವ ಆಘಾತ ಮತ್ತು ಸಮಾಜದ ತಿರಸ್ಕಾರವನ್ನು ಎದುರಿಸುತ್ತಿರುವ ಮಹಿಳೆಯರು ಹಾಗೂ ಬಾಲಕಿಯರೊಂದಿಗೆ ಉತ್ತಮ ಕುರಿಗಾಹಿಯ ಸಹೋದರಿಯರ ಸಭೆಯ ತಮ್ಮ ಜೀವನವನ್ನು ಹಂಚಿಕೊಂಡು, ಗುಣಪಡಿಸುವ ಸೇವೆಯನ್ನು ಮುಂದುವರೆಸುತ್ತಿದ್ದಾರೆ. – ಸಹೋದರಿ ಕ್ರಿಸ್ಟಿನ್ ಮಸಿವೊ, CPS

ಉತ್ತಮ ಕುರಿಗಾಹಿಯ ದಯಾ ಮಾತೆಯ ಸಹೋದರಿಯರ ಸಭೆ, ತಮ್ಮ ಸಂಸ್ಥಾಪಕಿ ಸಂತ ಮೇರಿ ಯೂಫ್ರಾಸಿಯಾ ಪೆಲೆಟಿಯರ್ ಅವರ ಹೆಜ್ಜೆಗುರುತುಗಳನ್ನು ಅನುಸರಿಸಿ, ಗಾಯಗೊಂಡ ಜೀವಗಳಲ್ಲಿ ನಿರಾಶೆಯ ಮಧ್ಯೆ ಆಶಾಕಿರಣವಾಗಿ ನಿಲ್ಲುತ್ತಿದೆ. ಹಿಂಸೆ, ದಾರಿದ್ರ್ಯ ಮತ್ತು ಸಾಮಾಜಿಕ ಹೊರಗಾಣಿಕೆಯಿಂದ ಬಾಧಿತರಾದ ಮಹಿಳೆಯರು, ಮಕ್ಕಳು ಮತ್ತು ಕುಟುಂಬಗಳಿಗೆ ಪ್ರೀತಿಯನ್ನು ಮತ್ತು ಸೇವೆಯನ್ನು ನೀಡುವುದು ಇವರ ಧ್ಯೇಯವಾಗಿದೆ.

ಮಾಲ್ತದ ಸಹೋದರಿ ಡೋರಿಸ್ ಸಲಿಬಾ ಮತ್ತು ಪೋರ್ಚುಗಲ್‌ನ ಸಹೋದರಿ ಮಾರಿಯಾ ರೊಸಾರಿಯೋ ಅವರ ಮಾತಿನಂತೆ, ಈ ಸಹೋದರಿಯರ ನಿರಂತರ ದಯೆಯ ಕಾರ್ಯವು ಅವರ ಸಭೆಯ ವರ್ಚಸ್ಸಿನಿಂದಲೇ ಹೊರಹೊಮ್ಮುತ್ತದೆ. ಅಗತ್ಯವಿರುವ ಸ್ಥಳದಲ್ಲೇ ಗೌರವ, ಗುಣಮುಖತೆ ಮತ್ತು ಭರವಸೆ ತಲುಪಿಸುವುದು ಇವರ ಸಂಯುಕ್ತ ಸೇವೆಯ ಉದ್ದೇಶ.

ಮಾಲ್ತದಲ್ಲಿ ಬಿರುಗಾಳಿಯ ಮಧ್ಯೆ ಆಶ್ರಯ

ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ, ಮಾಲ್ತದ ಸಹೋದರಿ ಡೋರಿಸ್ ಸಲಿಬಾ ಅವರು ಕೌಟುಂಬಿಕ ಹಿಂಸೆಯಿಂದ ಪಾರಾಗುವ ಮಹಿಳೆಯರು ಮತ್ತು ಮಕ್ಕಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಲ್ತದಲ್ಲಿನ ಉತ್ತಮ ಕುರಿಗಾಹಿಯ ಸಹೋದರಿಯರ ಪ್ರತಿಷ್ಠಾನದ ನಿರ್ದೇಶಕಿಯಾಗಿರುವ ಅವರು ಕುಟುಂಬಗಳು ಸುರಕ್ಷಿತ ಆಶ್ರಯವನ್ನು ಪಡೆದು, ತಮ್ಮ ಜೀವನವನ್ನು ಪುನರ್‌ನಿರ್ಮಿಸಿಕೊಳ್ಳಲು ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಪಡೆಯುವಂತಹ ಆಶ್ರಯ ಕೇಂದ್ರದ ಕಾರ್ಯಾಚರಣೆಯನ್ನು ಸಮನ್ವಯಗೊಳಿಸುತ್ತಿದ್ದಾರೆ.

“ನಮ್ಮ ಸಭೆಯನ್ನು ದೇವರು ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ನೆರವಾಗುವ ಕರೆಗೆ ಆರಿಸಿಕೊಂಡಿದ್ದಾರೆ,” ಎಂದು ಅವರು ಹೇಳುತ್ತಾರೆ. “ ದಿನದ ಯಾವುದೇ ಸಮಯದಲ್ಲಿ ಯಾವ ಸ್ಥಿತಿಯಲ್ಲಿ ಬಂದರೂ ಬಾಧಿತರನ್ನು  ನಾವು ಸ್ವಾಗತಿಸುತ್ತೇವೆ. ಕೆಲವರು ತೀವ್ರ ಆಘಾತದಲ್ಲಿರುತ್ತಾರೆ; ಕೆಲವೊಮ್ಮೆ ತೊಟ್ಟಿರುವ ಬಟ್ಟೆಯೇ ಅವರ ಸಂಪತ್ತು. ನಾವು ತಕ್ಷಣವೇ ಆಹಾರ ಮತ್ತು ಹಾಸಿಗೆಯೊಂದಿಗೆ ಕೊಠಡಿಗಳನ್ನು ಸಿದ್ಧಪಡಿಸಿ, ಸುರಕ್ಷತೆಯ ವಾತಾವರಣವನ್ನು ನಿರ್ಮಿಸುತ್ತೇವೆ. ಮೊದಲ ಚಿಕಿತ್ಸೆಯೆಂದರೆ ಶಾಂತಿ ಎಂಬುದನ್ನು ನಾವು ತಿಳಿದಿದ್ದೇವೆ; ಆದ್ದರಿಂದ ಅವರಿಗೆ ವಿಶ್ರಾಂತಿ ನೀಡುತ್ತೇವೆ.”

ಈ ಆಶ್ರಯ ಕೇಂದ್ರದಲ್ಲಿ ಆರು ತಿಂಗಳ ಕಾಲ ವಾಸಕ್ಕೆ ಅವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಮಹಿಳೆಯರು ಮಾನಸಿಕ ಸಮಾಲೋಚನೆ, ಕಾನೂನು ಸಹಾಯ ಮತ್ತು ಉದ್ಯೋಗ ಅಥವಾ ದೀರ್ಘಕಾಲೀನ ವಸತಿ ಹುಡುಕುವ ನೆರವನ್ನು ಪಡೆಯುತ್ತಾರೆ. ಅನೇಕರು ಮಾಲ್ತದ ಕೌಟುಂಬಿಕ ಹಿಂಸೆ ಕೇಂದ್ರ ಅಥವಾ ಪೊಲೀಸ್ ಸೇವೆಗಳ ಮೂಲಕ ಇಲ್ಲಿ ಬರುತ್ತಾರೆ.

ಸರ್ಕಾರಿ ಸಂಸ್ಥೆಗಳೊಂದಿಗೆ ಸಹಕಾರ

“ ಸರ್ಕಾರದ ಸಾಮಾಜಿಕ ಕಾರ್ಯಕರ್ತರೊಂದಿಗೂ ನಾವು ಸಹಯೋಗದಲ್ಲಿ ಕೆಲಸ ಮಾಡುತ್ತೇವೆ,” ಎಂದು ಸಹೋದರಿ ಡೋರಿಸ್ ವಿವರಿಸುತ್ತಾರೆ. “ಸರ್ಕಾರ ಕೆಲವು ಸಿಬ್ಬಂದಿ ವೇತನಗಳು ಮತ್ತು ಆಹಾರ ಸಹಾಯವನ್ನು ಒದಗಿಸುತ್ತದೆ. ಉಳಿದುದಕ್ಕಾಗಿ ನಾವು ಮಾಲ್ತದ ಜನರ ಉದಾರ ಮನಸ್ಸಿನ ಮೇಲೆ ಅವಲಂಬಿತರಾಗಿದ್ದೇವೆ. ಆಹಾರ, ಬಟ್ಟೆ ಅಥವಾ ಹಣ ಸಹಾಯವಾಗಿ ಬರುತ್ತದೆ. ಇದು ಸುಲಭದ ಕೆಲಸವಲ್ಲ; ಆದರೆ ದೇವರು ಯಾವಾಗಲೂ ಒದಗಿಸುತ್ತಾರೆ.”

ನಾಲ್ಕು ಸಕ್ರಿಯ ಸಹೋದರಿಯರು ತರಬೇತಿ ಪಡೆದ ಸಿಬ್ಬಂದಿಯೊಂದಿಗೆ ಸೇವೆ ಸಲ್ಲಿಸುತ್ತಿದ್ದು, ಅವರ ಸೇವೆಯ ಹೃದಯ ‘ಹಾಜರಾತಿ’ಯಲ್ಲಿದೆ. “ನಾವು ಕೇಳುತ್ತೇವೆ, ಅವರೊಂದಿಗೆ ಅಳುತ್ತೇವೆ, ಪ್ರಾರ್ಥಿಸುತ್ತೇವೆ. ಕೆಲವರು ನಂತರ ಮರಳಿ ಬಂದು, ‘’ಇಲ್ಲಿ ಕಳೆದ ಸಮಯ ನನ್ನ ಜೀವನವನ್ನು ಉಳಿಸಿತು’ ಎಂದು ಕೃತಜ್ಞತೆ ವ್ಯಕ್ತಪಡಿಸುತ್ತಾರೆ. ಅದೇ ನಮ್ಮ ದೊಡ್ಡ ಪ್ರತಿಫಲ.”

ಕಾಲಕ್ರಮೇಣ, ಸಭೆಯ ಸೇವೆಗಳು ವಿವಾಹೇತರ ತಾಯಂದಿರ ಮತ್ತು ಯುವತಿಯರ ಆರೈಕೆಯಿಂದ, ಕೌಟುಂಬಿಕ ಹಿಂಸೆ ಮತ್ತು ಶರಣಾರ್ಥಿಗಳ ಆರೈಕೆಯಂತಹ ತುರ್ತು ಸಮಸ್ಯೆಗಳತ್ತ ವಿಸ್ತರಿಸಿವೆ.

“ ಪವಿತ್ರಾತ್ಮರ ಮಾರ್ಗದಶನಕ್ಕೆ ಒಪ್ಪಿಸಿಕೊಡಲ್ಪಟ್ಟ ನಮ್ಮ ಅಪೋಸ್ತಲಿಕ ಸೇವೆಗಳು   ಸಮಾಜದ ಅಗತ್ಯಗಳಿಗೆ ತಕ್ಕಂತೆ ರೂಪಾಂತರಗೊಳ್ಳುತ್ತವೆ ” ಎಂದು ಅವರು ಹೇಳುತ್ತಾರೆ. “ಧರ್ಮಕ್ಷೇತ್ರ ಮತ್ತು ಜನಸಾಮಾನ್ಯರೊಂದಿಗೆ ಸಹಭಾಗಿತ್ವದಲ್ಲಿ ನಾವು ಕೆಲಸ ಮಾಡುತ್ತೇವೆ. ಸಮುದಾಯವಾಗಿ ನಡೆದು ದೇವರ ಕಾರ್ಯದಲ್ಲಿ ಪಾಲ್ಗೊಳ್ಳುವುದೇ ಸಂಯುಕ್ತತೆಯ(synodality) ಅರ್ಥ

ಪೋರ್ಚುಗಲ್‌ನಲ್ಲಿ ‘ತಾಯಿಯ ಹೃದಯ’

ಅಜೋರಸ್ ದ್ವೀಪಸಮೂಹದ ಸಾಂ ಮಿಗುಯೆಲ್ ದ್ವೀಪದಿಂದ ಬಂದ ಸಹೋದರಿ ಮರಿಯಾ ರೊಸಾರಿಯೋ, ಸಂಕಷ್ಟದಲ್ಲಿರುವ ಮಕ್ಕಳು ಮತ್ತು ಯುವ ತಾಯಂದಿರ ಆರೈಕೆಯಲ್ಲಿ ತೊಡಗಿದ್ದಾರೆ.

“ನಾನು ಸಭೆಗೆ ಸೇರಿದಾಗಿನಿಂದಲೂ ಬಾಲಕಿಯರು, ತಾಯಂದಿರು ಮತ್ತು ಮಕ್ಕಳೊಂದಿಗೆ ಕೆಲಸ ಮಾಡುತ್ತಿದ್ದೇನೆ,” ಎಂದು ಅವರು ನಗುಮುಖದಿಂದ ಹೇಳುತ್ತಾರೆ. “ನನಗೆ ಸ್ವಂತ ಮಕ್ಕಳು ಇಲ್ಲ; ಆದರೆ ಅವರನ್ನೆಲ್ಲ ನನ್ನ ಮಕ್ಕಳಂತೆ ಕಾಣುತ್ತೇನೆ.”

ಸಹೋದರಿಯರಿಂದ ಸಹಾಯ ಪಡೆಯುವ ಈ ಮಕ್ಕಳು  ಅಸುರಕ್ಷಿತ ಮನೆಗಳಿಂದ ರಕ್ಷಿಸಲ್ಪಟ್ಟವರು. ನಿರ್ಲಕ್ಷ್ಯ, ಹಿಂಸೆ, ದುರ್ಬಳಕೆ ಅಥವಾ ತೀವ್ರ ದಾರಿದ್ರ್ಯವನ್ನು  ಅನುಭವಿಸಿರುವರು ಸರ್ಕಾರಿ ಸಾಮಾಜಿಕ ಸೇವೆಗಳ ಮೂಲಕ ಇಲ್ಲಿಗೆ ಬರುತ್ತಾರೆ.

“ಕೆಲವರು ಏನೂ ಇಲ್ಲದೆ ಬರುತ್ತಾರೆ; ಕೆಲವರು ಬೀದಿಗಳಲ್ಲೇ ನಿದ್ರಿಸಿದ್ದವರು,” ಎಂದು ಸಹೋದರಿ ಮರಿಯಾ ಹೇಳುತ್ತಾರೆ. “ಇಲ್ಲಿ ಅವರಿಗೆ ಆಹಾರ, ಪ್ರೀತಿ ಮತ್ತು ಸ್ಥಿರತೆ ದೊರೆಯುತ್ತದೆ. ಅವರು ಶಾಲೆಗೆ ಹೋಗುತ್ತಾರೆ, ಕಲಿಯುತ್ತಾರೆ ಮತ್ತು ಬೆಳೆಯುತ್ತಾರೆ.”

ಮಕ್ಕಳು 18 ಅಥವಾ ಕೆಲವೊಮ್ಮೆ 21 ವರ್ಷಗಳ ವಯಸ್ಸಿನವರೆಗೆ ಇಲ್ಲಿ ಉಳಿದು ಸ್ವಾವಲಂಬಿ ಜೀವನಕ್ಕೆ ಸಿದ್ಧರಾಗುತ್ತಾರೆ. ಶಿಕ್ಷಕರು, ಮನೋವೈದ್ಯರು ಮತ್ತು ಸಾಮಾಜಿಕ ಕಾರ್ಯಕರ್ತರೊಂದಿಗೆ ಸಹಕಾರದಲ್ಲಿ ಸಹೋದರಿಯರು ಭಾವನಾತ್ಮಕ ಆರೈಕೆಯನ್ನು ಒದಗಿಸುತ್ತಾರೆ.

“ಸಣ್ಣ ಸಂತೋಷಗಳನ್ನು ನಾವು ಸಂಭ್ರಮಿಸುತ್ತೇವೆ; ಅವರು ಪ್ರೀತಿಸಲ್ಪಟ್ಟವರು ಮತ್ತು ಮೌಲ್ಯಯುತರು ಎಂಬುದನ್ನು ಕಲಿಸುತ್ತೇವೆ,” ಎನ್ನುತ್ತಾರೆ ಅವರು.

ಆಧಾರ ಸ್ತಂಭಗಳು

ಮಾಲ್ತದಂತೆ, ಇಲ್ಲಿ ಕೂಡ ಸಹೋದರಿಯರು ಸಮುದಾಯದ ಉದಾರತೆಯ ಮೇಲೆ ಹೆಚ್ಚಿನ ಮಟ್ಟದಲ್ಲಿ ಅವಲಂಬಿತರಾಗಿದ್ದಾರೆ.

“ಸರ್ಕಾರದಿಂದ ಸ್ವಲ್ಪ ಹಣಕಾಸಿನ ಸಹಾಯ ಸಿಗುತ್ತದೆ; ಆದರೆ ಅದು ಸಾಕಾಗುವುದಿಲ್ಲ,” ಎಂದು ಸಹೋದರಿ ಮರಿಯಾ ಹೇಳುತ್ತಾರೆ. “ಸೂಪರ್‌ಮಾರ್ಕೆಟ್‌ಗಳೊಂದಿಗೆ ಸಹಭಾಗಿತ್ವದ ಮೂಲಕ ಆಹಾರ ಪದಾರ್ಥಗಳು ಸಿಗುತ್ತವೆ; ಸ್ಥಳೀಯ ದಾನಿಗಳ ಸಹಾಯವೂ ಇದೆ.”

ಅವರು ಪಡೆಯುವ ಸಹಾಯವನ್ನು ಸಂಸ್ಥೆಯೊಳಗೆ ಮಾತ್ರವಲ್ಲದೆ, ಹೊರಗಿನ ಬಡ ಕುಟುಂಬಗಳೊಂದಿಗೂ ಹಂಚಿಕೊಳ್ಳುತ್ತಾರೆ.

“ನಮ್ಮೊಂದಿಗೆ ವಾಸಿಸುವ ಮಕ್ಕಳಿಗಷ್ಟೇ ಅಲ್ಲ; ನಮ್ಮ ಸುತ್ತಲಿನ ಬಡವರಿಗೂ ನಾವು ಕಾಳಜಿ ವಹಿಸುತ್ತೇವೆ,” ಎಂದು ಅವರು ತಿಳಿಸುತ್ತಾರೆ.

ಉತ್ತಮ ಕುರಿಗಾಹಿಯ ಆತ್ಮವನ್ನು ಜೀವಂತವಾಗಿಟ್ಟ ಸೇವೆ

ಮಾಲ್ತದಿಂದ ಪೋರ್ಚುಗಲ್‌ವರೆಗೆ, ಉತ್ತಮ ಕುರಿಗಾಹಿಯ ದಯಾ ಮಾತೆಯ ಸಹೋದರಿಯರು ತಮ್ಮ  ನೋವಿನ ಲೋಕದಲ್ಲಿ ದೇವರ ಕರುಣೆಯ ಪ್ರೀತಿಯ ಸಂಕೇತವಾಗುವ ಸಂಸ್ಥಾಪಕಿಯ ಮುನ್ನೋಟವನ್ನು ಜೀವಂತವಾಗಿಟ್ಟಿದ್ದಾರೆ. ಅವರ ಸೇವೆಗಳು ಬಡವರೊಂದಿಗೆ ನಡೆಯುವ ಸುವಾರ್ತಾ ಕರೆಯನ್ನು ಪ್ರತಿಬಿಂಬಿಸುತ್ತವೆ.

“ಪ್ರೀತಿ ಅತ್ಯಂತ ಅವಶ್ಯಕವಾಗಿರುವ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವುದೇ ನಮ್ಮ ಧ್ಯೇಯ”ವೆಂದು ಸಹೋದರಿ ಡೋರಿಸ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಮಾತುಗಳನ್ನು ಮುಕ್ತಾಯಗೊಳಿಸಿದರು.

12 ಜನವರಿ 2026, 16:47