2023.10.19 Mons. João Carlos Hatoa Nunes, Arcivescovo di Maputo (Mozambico) 2023.10.19 Mons. João Carlos Hatoa Nunes, Arcivescovo di Maputo (Mozambico) 

ಮೊಜಾಂಬಿಕ್: ಪ್ರವಾಹಪೀಡಿತರಿಗೆ ಸಮೀಪತೆ–ಐಕ್ಯತೆ ಘೋಷಿಸಿದ ಮಾಪುಟೋ ಮಹಾಧರ್ಮಾಧ್ಯಕ್ಷರು

ಮಾಪುಟೋ ಪೂಜ್ಯ ಮಹಾಧರ್ಮಾಧ್ಯಕ್ಷರಾದ ಜೋವಾ ಕಾರ್ಲೊಸ್ ಹಟೋವಾ ನುನಿಸ್ ಅವರು, ಮೊಜಾಂಬಿಕ್‌ನಲ್ಲಿ ಸುರಿದ ಧಾರಾಕಾರ ಮಳೆ–ಪ್ರವಾಹದಿಂದ ಸಂಕಷ್ಟಕ್ಕೀಡಾದ ಜನರಿಗೆ ಧರ್ಮಸಭೆಯ ಸಮೀಪತೆ, ಬೆಂಬಲ ಮತ್ತು ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ. ಲೇಖನ: ವಂ. ಗುರು. ಬರ್ನಾರ್ಡೊ ಸುವಾಟೆ

ಮೊಜಾಂಬಿಕ್‌ನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ ಮತ್ತು ವ್ಯಾಪಕ ಪ್ರವಾಹ ಅನೇಕ ಮನೆಗಳನ್ನು ಧ್ವಂಸಗೊಳಿಸಿ, ಸಾವಿರಾರು ಕುಟುಂಬಗಳನ್ನು ನೆಲೆ ಕಳೆದುಕೊಂಡು ಸ್ಥಳಾಂತರಗೊಳ್ಳುವಂತೆ ಮಾಡಿದೆ. ಈ ಆಘಾತಕಾರಿ ಬೆಳವಣಿಗೆಯ ಹಿನ್ನೆಲೆ, ಪೂಜ್ಯ ಮಹಾಧರ್ಮಾಧ್ಯಕ್ಷರಾದ ಜೋವಾ ಕಾರ್ಲೊಸ್ ಹಟೋವಾ ನುನಿಸ್ ಅವರು ವಿಶ್ವಾಸಿಗಳಿಗೂ, ಸದುದ್ದೇಶ ಹೊಂದಿರುವ ಎಲ್ಲರಿಗೂ ಬೆಂಬಲದ ಸಂದೇಶವನ್ನು ಪ್ರಕಟಿಸಿದ್ದಾರೆ.

ಮಾಪುಟೋ ಮಹಾಧರ್ಮಾಧ್ಯಕ್ಷರು ಈ ವಿಕೋಪದಿಂದ ತತ್ತರಿಸಿದ ಜನರಿಗೆ ತಮ್ಮ *ಐಕ್ಯತೆ, ಸಮೀಪತೆ ಮತ್ತು ಭರವಸೆಯನ್ನು”   ವ್ಯಕ್ತಪಡಿಸಿದರು. “ಅಸಂಖ್ಯಾತ ಕುಟುಂಬಗಳು ಸ್ಥಳಾಂತರಗೊಂಡಿವೆ. ಅನೇಕರು ತಮ್ಮ ಸಂಪತ್ತು–ಸಾಧನ, ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ. ಕೆಲವರು ತಮ್ಮ ಪ್ರೀತಿಪಾತ್ರರನ್ನು ಕೂಡ ಕಳೆದುಕೊಂಡಿದ್ದಾರೆ,” ಎಂದು ಪೂಜ್ಯ ಮಹಾಧರ್ಮಾಧ್ಯಕ್ಷರಾದ ನುನಿಸ್ ವಿಷಾದದಿಂದ ಹೇಳಿದರು.

 ಮುಂದುವರೆದು, “ಈ ಎಲ್ಲ ಪೀಡಿತರನ್ನು ಭರವಸೆಯ ಮತ್ತು ಸಾಂತ್ವನದ ತಾಯಿ ಮರಿಯಮ್ಮನವರ  ಮಧ್ಯಸ್ಥಿಕೆಗೆ ಒಪ್ಪಿಸುತ್ತೇನೆ. ಅಳುವವರ ಕಣ್ಣೀರಿಗೆ ಸಾಂತ್ವನ ನೀಡಲಿ; ಎಲ್ಲವನ್ನೂ ಕಳೆದುಕೊಂಡವರ ಮನೋಬಲವನ್ನು ಬಲಪಡಿಸಲಿ; ಪೀಡಿತರ ಸೇವೆಯಲ್ಲಿ ನಿರತರಾಗಿರುವವರಿಗೆ ಸ್ಥೈರ್ಯ–ಸಹನೆ ನೀಡಲಿ,” ಎಂದು ಪ್ರಾರ್ಥಿಸಿದರು.

ದಕ್ಷಿಣ ಆಫ್ರಿಕಾ ಪ್ರದೇಶದಲ್ಲಿ—ವಿಶೇಷವಾಗಿ ಮೊಜಾಂಬಿಕ್, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ದೇಶಗಳಲ್ಲಿ—ಧಾರಾಕಾರ ಮಳೆ ಹಾಗೂ ಪ್ರವಾಹಗಳು ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿವೆ. ಈ ಮೂರು ದೇಶಗಳಲ್ಲಿ ಒಟ್ಟು 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೊಜಾಂಬಿಕ್‌ನ ದಕ್ಷಿಣ ಮತ್ತು ಮಧ್ಯ ಭಾಗಗಳು ಅತ್ಯಂತ ತೀವ್ರವಾಗಿ ಹೊಡೆತ ಅನುಭವಿಸಿವೆ. ಅಸೋಸಿಯೇಟೆಡ್ ಪ್ರೆಸ್ ವರದಿ ಪ್ರಕಾರ, ದೇಶದ ಗಾಜಾ ಪ್ರಾಂತ್ಯದಲ್ಲಿ 3 ಲಕ್ಷಕ್ಕೂ ಅಧಿಕ ಜನರು ಸ್ಥಳಾಂತರಗೊಂಡಿದ್ದಾರೆ.

“ಪ್ರವಾಹ ಕೇವಲ ಪ್ರಕೃತಿ ವಿಕೋಪವಲ್ಲ”

ದೇವವಾಕ್ಯದ ಬೆಳಕಿನಲ್ಲಿ ಈ ಪರಿಸ್ಥಿತಿಯನ್ನು ಅರ್ಥೈಸಿದ  ಪೂಜ್ಯ ಮಹಾಧರ್ಮಾಧ್ಯಕ್ಷರಾದ ನುನಿಸ್, ಸಮುವೇಲನ ಮೊದಲನೇ ಗ್ರಂಥದ “ಯಜ್ಞಕ್ಕಿಂತ ವಿಧೇಯತೆ ಶ್ರೇಷ್ಠ” ಎಂಬ ವಾಕ್ಯವನ್ನು ನೆನಪಿಸಿದರು. ದೇವವಾಕ್ಯವು ಗ್ರಂಥದಲ್ಲಷ್ಟೇ ಅಲ್ಲ, ನಾವು ಅನುಭವಿಸುತ್ತಿರುವ ವಾಸ್ತವದೊಳಗಿಂದಲೂ ನಮ್ಮೊಂದಿಗೆ ಮಾತನಾಡುತ್ತದೆ ಎಂದು ಅವರು ಹೇಳಿದರು.

“ಪ್ರವಾಹಗಳು ಕೇವಲ ಪ್ರಕೃತಿ ವಿಕೋಪವಲ್ಲ. ಇವು ವ್ಯಕ್ತಿಗಳಾಗಿ, ಸಮುದಾಯಗಳಾಗಿ, ಸಮಾಜವಾಗಿ ನಮ್ಮನ್ನು ಪ್ರಶ್ನಿಸುತ್ತವೆ—ಜವಾಬ್ದಾರಿ, ವಿವೇಕ, ನಮ್ಮೆಲ್ಲರ ಮನೆಯಾದ ಭೂಮಿಯ ಮೇಲಿನ ಕಾಳಜಿ, ಮತ್ತು ದುರ್ಬಲರ ಮೇಲಿನ ವಿಶೇಷ ಗಮನಕ್ಕೆ ನಮ್ಮನ್ನು ಕರೆಯುತ್ತವೆ,” ಎಂದು ಅವರು ಗಂಭೀರವಾಗಿ ಎಚ್ಚರಿಸಿದರು.

ಬಡವರ ಅಳಲು, ಸಂಕಷ್ಟಪೀಡಿತರ ನೋವಿನ ಧ್ವನಿ—ಇವುಗಳ ಮೂಲಕ ದೇವರು ನಮ್ಮ ಮನಸ್ಸಿಗೆ ಮಾತಾಡುತ್ತಾನೆ; ಆ ಧ್ವನಿಯನ್ನು ಕಡೆಗಣಿಸಿದಲ್ಲಿ ಬೆಲೆ ತೆರಲೇಬೇಕಾಗುವುದು, ಪರಿಣಾಮಗಳು ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.

ನಂಬಿಕೆಯನ್ನು ಐಕ್ಯತೆಯ ಕ್ರಿಯೆಗಳಾಗಿ ರೂಪಿಸುವ ಕಾಲ

ಈ ಕ್ಷಣವು ನಿರರ್ಥಕ ಆರೋಪಗಳಿಗೆ, ಪರಸ್ಪರ ನಿಂದನೆಗಳಿಗೆ ಅಥವಾ ವಿಭಜನೆ ಉಂಟುಮಾಡುವ ಭಾಷಣಗಳಿಗೆಲ್ಲ ಅಲ್ಲ ಎಂದು ಮಹಾಧರ್ಮಾಧ್ಯಕ್ಷರು ಸ್ಪಷ್ಟಪಡಿಸಿದರು. ಬದಲಾಗಿ ಇದು ಜಾಗೃತಿ, ಮನಃಪರಿವರ್ತನೆ ಮತ್ತು ಬದ್ಧತೆಯ ಕಾಲವಾಗಿದೆ ಎಂದು ಅವರು ಹೇಳಿದರು.

“ನಂಬಿಕೆ ಮಾತಿನಲ್ಲಿ ಮಾತ್ರ ಉಳಿಯಬಾರದು. ಅದು ಪ್ರೀತಿ ಮತ್ತು ಐಕ್ಯತೆಯ ನೈಜ ಕೃತಿಗಳಾಗಿ ಪ್ರಕಟವಾಗಬೇಕು,” ಎಂದು ಅವರು ಮನವಿ ಮಾಡಿದರು.

ಈ ಉದ್ದೇಶದಿಂದಲೇ, ಮಾಪುಟೋ ಮಹಾಧರ್ಮಪ್ರಾಂತ್ಯದ ಕಾರಿಟಾಸ್ ಸಂಸ್ಥೆ ನೆರವು ಸಂಗ್ರಹಣಾ ಅಭಿಯಾನವನ್ನು ಕೈಗೊಂಡಿದೆ. ಕ್ರೈಸ್ತರ ಉದಾರತೆ ಹಾಗೂ ಸದುದ್ದೇಶದ ಎಲ್ಲರ ಸಹಕಾರದಿಂದ, ಪ್ರವಾಹಪೀಡಿತ ಕುಟುಂಬಗಳ ದುಃಖವನ್ನು ತಗ್ಗಿಸುವುದು ಇದರ ಗುರಿಯಾಗಿದೆ.

ಮಹಾಧರ್ಮಾಧ್ಯಕ್ಷರು ಧರ್ಮಕೇಂದ್ರಗಳು, ಸಮುದಾಯಗಳು, ಸಂಘಟನೆಗಳು ಹಾಗೂ ಮಹಾಧರ್ಮಕ್ಷೇತ್ರದ ಎಲ್ಲ ವಿಶ್ವಾಸಿಗಳು ಒಂದಾಗಿ ನಿಲ್ಲಬೇಕೆಂದು ಕರೆ ನೀಡಿದರು. ಸರಳವಾದರೂ ಪರಿಣಾಮಕಾರಿ ಸಹೋದರತ್ವದ ನೆರವಿನ ಕಾರ್ಯಗಳನ್ನು ಉತ್ತೇಜಿಸಬೇಕೆಂದು ಅವರು ಹೇಳಿದರು.

“ಯಾವುದೇ ಕೊಡುಗೆ—ಅದು ಎಷ್ಟೇ ಚಿಕ್ಕದಾಗಿದ್ದರೂ—ಮೌಲ್ಯವುಳ್ಳದ್ದೇ.. ಪ್ರತಿಯೊಂದು ಸಹಾಯಕ್ಕೂ ಅರ್ಥವಿದೆ. ಹಂಚಿಕೊಳ್ಳುವ ಪ್ರತಿಯೊಂದು ಕ್ರಿಯೆಯೂ, ಬಹುತೇಕ ಎಲ್ಲವನ್ನೂ ಕಳೆದುಕೊಂಡವರಿಗೆ ಆಶೆಯ ದೀಪವಾಗುತ್ತದೆ,” ಎಂದು ಅವರು ಬರೆಯುತ್ತಾರೆ.

ಮನೆಗಳ ಜೊತೆ ಜವಾಬ್ದಾರಿಗಳನ್ನೂ ಮರುನಿರ್ಮಿಸಬೇಕಿದೆ

ಪ್ರವಾಹದ ನಂತರದ ಹಂತವನ್ನು ಗಮನದಲ್ಲಿಟ್ಟುಕೊಂಡು, ಪೂಜ್ಯ ಮಹಾಧರ್ಮಾಧ್ಯಕ್ಷರಾದ ನುನಿಸ್ ಒಂದು ಮಹತ್ವದ ಅಂಶವನ್ನು ಒತ್ತಿ ಹೇಳಿದರು: “ನಾವು ಮನೆಗಳನ್ನು ಮಾತ್ರ ಮರುಕಟ್ಟುವುದಲ್ಲ, ಸಂಬಂಧಗಳು, ಮನೋಭಾವಗಳು ಮತ್ತು ಜವಾಬ್ದಾರಿಗಳನ್ನೂ ಮರುನಿರ್ಮಿಸಬೇಕಾಗಿದೆ.”

ಭವಿಷ್ಯದಲ್ಲಿ ಇಂತಹ ವಿಕೋಪಗಳು ಮರುಕಳಿಸಿದಾಗ, ಜನರು ಹೆಚ್ಚು ಸಿದ್ಧರಾಗಿರಲು, ಹೆಚ್ಚು ಎಚ್ಚರಿಕೆಯಿಂದಿರಲು, ಪರಸ್ಪರ ಬೆಂಬಲ ನೀಡಲು ಸಮಾಜವಾಗಿ ನಾವು ರೂಪಾಂತರಗೊಳ್ಳಬೇಕೆಂದು ಅವರು ಹೇಳಿದರು.

“ಈ ದುರ್ಘಟನೆಯ ಸಮಯವು ಮತ್ತೊಂದು ಅರ್ಥದಲ್ಲಿ ಅನುಗ್ರಹದ ಅವಕಾಶವಾಗಲಿ—ಮಾನವ ಜೀವಕ್ಕೂ ಸೃಷ್ಟಿಗೂ ಹೆಚ್ಚು ಜಾಗೃತ, ಹೆಚ್ಚು ಸಹೋದರತ್ವಪೂರ್ಣ, ಹೆಚ್ಚು ಕಾಳಜಿಯಿರುವ ಹೊಸ ಮೊಜಾಂಬಿಕ್ ಉದಯಿಸಲಿ,” ಎಂದು ಅವರು ತಮ್ಮ ಸಂದೇಶವನ್ನು ಸಮಾಪ್ತಿಗೊಳಿಸಿದರು.

 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

20 ಜನವರಿ 2026, 18:56