2025.03.29 Cardinal Charles Maung Bo of Myanmar (28 March 2025) 2025.03.29 Cardinal Charles Maung Bo of Myanmar (28 March 2025)  (Cardinal Charles Maung Bo of Myanmar)

ಮಯನ್ಮಾರ್‌ನ ಸಂಘರ್ಷದ ನಡುವೆ ಶಾಂತಿಗಾಗಿ ಕಾರ್ಡಿನಲ್ ಬೋ ಅವರ ಮನವಿ

ಮಯನ್ಮಾರ್‌ ದೇಶದಲ್ಲಿ ಮುಂದುವರಿಯುತ್ತಿರುವ ಸಂಘರ್ಷ, ಯುದ್ಧ ಮತ್ತು ಅಸ್ಥಿರ ಪರಿಸ್ಥಿತಿಗಳ ನಡುವೆ, ಯಾಂಗೋನ್ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಚಾರ್ಲ್ಸ್ ಮೌಂಗ್ ಬೋ ಅವರು ಕ್ರಿಸ್ತ ಜಯಂತಿ ಸಂದರ್ಭದಲ್ಲಿ ಶಾಂತಿ ಮತ್ತು ಆಯುಧವಿಮುಕ್ತತೆಗಾಗಿ ಬಲವಾದ ಮನವಿಯನ್ನು ಪುನಃ ಮಾಡಿದ್ದಾರೆ.

ಇತ್ತೀಚೆಗೆ ನೀಡಿದ ತಮ್ಮ ಕ್ರಿಸ್ತ ಜಯಂತಿ ಸಂದೇಶದಲ್ಲಿ, “ಯುದ್ಧ, ಭಯೋತ್ಪಾದನೆ ಮತ್ತು ಅಸಮಾನತೆಗಳಿಂದ ಭರವಸೆ ಅಲುಗಾಡುತ್ತಿದ್ದರೂ, ಶಾಂತಿ ಮಾನವಕುಲದ ನಿರಾಕರಣೆಯಾಗದ ಅಗತ್ಯವೇ ಆಗಿದೆ” ಎಂದು ಕಾರ್ಡಿನಲ್ ಬೋ ಹೇಳಿದರು. ಕ್ರಿಸ್ತ ಜಯಂತಿ ಕಾಲದಲ್ಲಿ ನಾವು ಪರಸ್ಪರ “ನಿಮಗೆ ಶಾಂತಿ ಇರಲಿ” ಎಂಬ ವಂದನೆಯನ್ನು ಹಂಚಿಕೊಳ್ಳುತ್ತೇವೆ ಎಂದು ಅವರು ನೆನಪಿಸಿದರು. ಈ ವಂದನೆಯ ಮೂಲವೇ ಕ್ರಿಸ್ತ ಶಿಶು ತಂದುಕೊಟ್ಟ ಶಾಂತಿ ಎಂದು ಅವರು ವಿವರಿಸಿದರು.

ಪವಿತ್ರ ಶಿಶು ನಮ್ಮ ಹೃದಯಗಳೊಳಗೆ ಪ್ರವೇಶಿಸಬಲ್ಲನು ಮತ್ತು ನಮ್ಮನ್ನು ಆಂತರಿಕವಾಗಿ ಪರಿವರ್ತಿಸುವ ಶಕ್ತಿಯನ್ನು ಹೊಂದಿದ್ದಾನೆ ಎಂದು ಕಾರ್ಡಿನಲ್ ಬೋ ಒತ್ತಿ ಹೇಳಿದರು.

ಶಸ್ತ್ರರಹಿತ ಶಾಂತಿ

ಮಾಯನ್ಮಾರಿನಲ್ಲಿನ ಸಂಘರ್ಷ ಮತ್ತು ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧಗಳನ್ನು ನೆನಪಿಸಿಕೊಂಡು, “ಪುನರುತ್ಥಾನಗೊಂಡ ಕ್ರಿಸ್ತನ ಶಾಂತಿ ಎಂದರೆ ಆಯುಧರಹಿತ ಶಾಂತಿ” ಎಂದು ಅವರು ಪುನಃ ದೃಢಪಡಿಸಿದರು. ಯೇಸು ತನ್ನ ಕಾಲದಲ್ಲಿಯೇ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಯನ್ನು ಹಿಂಸೆಯಿಲ್ಲದೆ ತಂದನು ಎಂದು ಅವರು ಹೇಳಿದರು. ಅದೇ ಉನ್ನತ ಮಾರ್ಗವನ್ನು ಕ್ರೈಸ್ತರು ಸಾಕ್ಷಿಯಾಗಿ ತೋರಿಸಬೇಕು ಮತ್ತು ಕ್ರೂರತೆಯನ್ನು ತಿರಸ್ಕರಿಸಲು ಎಲ್ಲರನ್ನೂ ಆಹ್ವಾನಿಸಬೇಕು ಎಂದು ಅವರು ಮನವಿ ಮಾಡಿದರು.

ಭಯದ ಭೀತಿ

ಶಾಂತಿಯೆಲ್ಲರಿಗೂ ಇಷ್ಟವಾಗಿದ್ದರೂ ಮತ್ತು ಅದಕ್ಕಾಗಿ ಹಾತೊರೆಯುತ್ತಿದ್ದರೂ, ಇಂದಿನ ಜಗತ್ತಿನಲ್ಲಿ ಅನಿಶ್ಚಿತತೆ ಹೆಚ್ಚುತ್ತಿರುವ ಕಾರಣ ಭಯವೂ ಹೆಚ್ಚುತ್ತಿದೆ ಎಂದು ಕಾರ್ಡಿನಲ್ ಬೋ ವಿಷಾದಿಸಿದರು. ಈ ಭಯವು ವ್ಯಕ್ತಿಗಳಷ್ಟೇ ಅಲ್ಲ, ರಾಷ್ಟ್ರಗಳನ್ನೂ ಆವರಿಸಿದೆ ಎಂದು ಅವರು ಹೇಳಿದರು. ಶಾಂತಿ ದೂರವಾಗಿರುವಂತೆ ಕಾಣುತ್ತಿದೆ. ಶಾಂತಿಯ ಹೆಸರಿನಲ್ಲಿ ಯುದ್ಧಕ್ಕೆ ಸಿದ್ಧತೆ ನಡೆಯುತ್ತಿದೆ. ಹಿಂಸೆಗೆ ಹಿಂಸೆಯಿಂದ ಉತ್ತರಿಸದ ಸರ್ಕಾರಗಳನ್ನು ದುರ್ಬಲವೆಂದು ಆರೋಪಿಸಲಾಗುತ್ತಿದೆ ಎಂದು ಅವರು ಎಚ್ಚರಿಸಿದರು.

ಇದರ ಪರಿಣಾಮವಾಗಿ, ಬಹುತೇಕ ಎಲ್ಲ ರಾಷ್ಟ್ರಗಳೂ ಆಯುಧ ಸಂಗ್ರಹವನ್ನು ಮುಂದುವರೆಸುತ್ತಿವೆ ಎಂದು ಅವರು ಹೇಳಿದರು. ಇತ್ತೀಚಿನ ಅಂದಾಜುಗಳ ಪ್ರಕಾರ, 2024ರಲ್ಲಿ ಮಾತ್ರ ಜಗತ್ತಿನ ಸೈನಿಕ ವೆಚ್ಚವು 2.718 ಟ್ರಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ ತಲುಪಿದೆ ಎಂದು ಕಾರ್ಡಿನಲ್ ಬೋ ಉಲ್ಲೇಖಿಸಿದರು. ಈ ಆಯುಧ ಸಂಗ್ರಹವನ್ನು ಅನಿವಾರ್ಯ ಕರ್ತವ್ಯವೆಂದು ಕಾಣಲಾಗುತ್ತಿದೆ ಎಂಬುದು ದುಃಖಕರ ಸಂಗತಿ ಎಂದು ಅವರು ಹೇಳಿದರು. ಈ ಸಂಕಷ್ಟದ ಮೂಲವು ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಇದೆ; ಆ ಸಂಬಂಧಗಳು ಕಾನೂನು, ನ್ಯಾಯ ಮತ್ತು ನಂಬಿಕೆಯ ಮೇಲೆ ಅಲ್ಲ, ಭಯ ಮತ್ತು ಆಧಿಪತ್ಯದ ಮೇಲೆ ನಿರ್ಮಿತವಾಗಿವೆ ಎಂದು ಅವರು ವಿಶ್ಲೇಷಿಸಿದರು.

ಇದರಿಂದಾಗಿ ಜನರು ಸದಾ ಆತಂಕದಲ್ಲಿ ಬದುಕುತ್ತಿದ್ದಾರೆ; ಯಾವಾಗ ಬೇಕಾದರೂ ಯುದ್ಧ ಸಿಡಿಯಬಹುದು ಎಂಬ ಭಾವನೆ ಅವರ ಮನಸ್ಸಿನಲ್ಲಿ ಆವರಿಸಿದೆ ಎಂದು ಅವರು ಹೇಳಿದರು.

ಆಯುಧ ಸಂಗ್ರಹದ ಬದಲು ಪರ್ಯಾಯ ಮಾರ್ಗ

ಭಯ ಆಳುವವರೆಗೆ ಆಯುಧಗಳು ಹೆಚ್ಚುತ್ತಲೇ ಇರುತ್ತವೆ ಎಂದು ಕಾರ್ಡಿನಲ್ ಬೋ ಎಚ್ಚರಿಸಿದರು. ಆಯುಧ ಸಂಗ್ರಹಿಸುವ ಬದಲು, ರಾಷ್ಟ್ರಗಳು ಪರಸ್ಪರ ಗೌರವ ಮತ್ತು ಸಹಕಾರವನ್ನು ಶಾಶ್ವತ ಶಾಂತಿಯ ಮಾರ್ಗವಾಗಿ ಆಯ್ಕೆ ಮಾಡಬೇಕು ಎಂದು ಅವರು ಕರೆ ನೀಡಿದರು.

ಈ ಹಿನ್ನೆಲೆಯಲ್ಲಿ, ಪವಿತ್ರ ತಂದೆಯಾದ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ (Pope Leo XIV) ಸಂಪೂರ್ಣ ಆಯುಧರಹಿತತೆಯಿಗಾಗಿ ಕರೆ ನೀಡುತ್ತಾರೆ ಎಂದು ಕಾರ್ಡಿನಲ್ ಬೋ ನೆನಪಿಸಿದರು. ಆದರೆ ಈ ಕರೆ ಕೇವಲ ಹೊರಗಿನ ಆಯುಧಗಳಿಗೆ ಮಾತ್ರ ಸೀಮಿತವಲ್ಲ; ನಮ್ಮ ಹೃದಯಗಳೊಳಗಿನ ಆಯುಧಗಳನ್ನೂ ನಿವಾರಿಸಬೇಕೆಂಬ ಆಳವಾದ ಆಹ್ವಾನವಿದು ಎಂದು ಅವರು ವಿವರಿಸಿದರು.

ಶಾಂತಿ ಮೊದಲು ನಮ್ಮ ಹೃದಯಗಳಲ್ಲಿ ಬೇರುಹಾಕಬೇಕು ಎಂದು ಕಾರ್ಡಿನಲ್ ಬೋ ಹೇಳಿದರು. ಶಾಂತಿ ನಿರ್ಮಾಣದಲ್ಲಿ ಧರ್ಮಕ್ಕೂ ಅತ್ಯಂತ ಮಹತ್ವದ ಪಾತ್ರವಿದೆ ಎಂದು ಅವರು ನೆನಪಿಸಿದರು. ಆದರೆ ಕೆಲವೊಮ್ಮೆ ರಾಜಕೀಯ ಸಂಘರ್ಷಗಳು, ಜಾತಿ ವಿಭಜನೆಗಳು ಮತ್ತು ಭಯೋತ್ಪಾದನೆ ಧರ್ಮವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂಬುದನ್ನು ಅವರು ತೀವ್ರವಾಗಿ ಖಂಡಿಸಿದರು.

ಶಾಂತಿ ಸಾಧಿಸಲು ಅವಶ್ಯಕ ಮಾರ್ಗಗಳು

ದೇವರ ಹೆಸರನ್ನು ದುರುಪಯೋಗಪಡಿಸುವುದನ್ನು ತಡೆಯುವ ಹೊಣೆ ಎಲ್ಲರಿಗೂ ಇದೆ ಎಂದು ಅವರು ಪುನಃ ಹೇಳಿದರು. ಪ್ರಾರ್ಥನೆ, ಆಧ್ಯಾತ್ಮಿಕ ಅಭ್ಯಾಸಗಳು ಮತ್ತು ಅಂತರಧರ್ಮ ಸಂವಾದವೇ ಶಾಂತಿಯ ಶ್ರೇಷ್ಠ ಮತ್ತು ಅವಶ್ಯಕ ಮಾರ್ಗಗಳು ಎಂದು ಅವರು ಹೇಳಿದರು.

ಮಾಯನ್ಮಾರ್‌ನ ಧರ್ಮಾಧ್ಯಕ್ಷರ ಸಭೆಯ ನಾಯಕನಾಗಿ, ಪ್ರತಿಯೊಂದು ಧಾರ್ಮಿಕ ಸಮುದಾಯವೂ ದ್ವೇಷದಿಂದಲ್ಲ, ಸಂವಾದ, ನ್ಯಾಯ ಮತ್ತು ಕ್ಷಮೆಯ ಮೂಲಕ ಶಾಂತಿಯ ಮನೆಗಳನ್ನು ನಿರ್ಮಿಸಲು ಕರೆಯಲ್ಪಟ್ಟಿದೆ ಎಂದು ಅವರು ಹೇಳಿದರು.

ಶಾಂತಿ ಕೇವಲ ಮಾತಿನಲ್ಲಿ ಮಾತ್ರವಲ್ಲ, ಕಾರ್ಯಗಳ ಮೂಲಕವೂ ಕಾಣಿಸಬೇಕು ಎಂದು ಕಾರ್ಡಿನಲ್ ಬೋ ಹೇಳಿದರು. ಸಂವಾದ, ಆಲಿಕೆ ಮತ್ತು ಸಹನೆಯ ಮೂಲಕ ಶಾಂತಿಯನ್ನು ಜೀವಂತವಾಗಿ ತೋರಿಸಬೇಕು ಎಂದು ಅವರು ಹೇಳಿದರು. ದ್ವೇಷ ಮತ್ತು ಹಿಂಸೆ ಮಾನವದ ದುರ್ಬಲತೆಯಿಂದ ಹುಟ್ಟುತ್ತವೆ; ಆದರೆ ಕ್ಷಮೆ ಮತ್ತು ಕರುಣೆ ಮಾನವತೆಯನ್ನು ಪುನರ್‌ನಿರ್ಮಿಸುವ ಶಕ್ತಿಗಳಾಗಿವೆ ಎಂದು ಅವರು ಹೇಳಿದರು.

ಮ್ಯಾನ್ಮಾರ್‌ನಲ್ಲಿ ಶಾಂತಿಗಾಗಿ ಎಲ್ಲ ಸಾಧ್ಯ ಮಾರ್ಗಗಳಿಂದ ಶ್ರಮಿಸುತ್ತಿರುವ ಎಲ್ಲರಿಗೂ ದೇವರ ಆಶೀರ್ವಾದ ಇರಲಿ ಎಂದು ಕಾರ್ಡಿನಲ್ ಬೋ ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.

ಶಾಂತಿ ಮತ್ತು ಮಯನ್ಮಾರಿಗಾಗಿ ಜಗದ್ಗುರುಗಳ ಮನವಿ

ಈ ಹಿಂದೆ ವಿಶ್ವ ಮಿಷನ್ ಭಾನುವಾರ (World Mission Sunday) ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಮಾಯನ್ಮಾರಿನಲ್ಲಿ ತಕ್ಷಣದ ಮತ್ತು ಪರಿಣಾಮಕಾರಿ ಯುದ್ಧ ವಿರಾಮಕ್ಕೆ ಕರೆ ನೀಡಿದ್ದರು. ಜಗತ್ತಿನ ಇತರೆ ಸಂಘರ್ಷ ಪ್ರದೇಶಗಳ ಜೊತೆಗೆ ಮಾಯನ್ಮಾರ್‌ಗೂ ಶಾಂತಿ ಬೇಕೆಂದು ಅವರು ಮನವಿ ಮಾಡಿದ್ದರು.

2026ರ ಜನವರಿ 1ರಂದು ಧರ್ಮಸಭೆ ವಿಶ್ವ ಶಾಂತಿ ದಿನವನ್ನು ಆಚರಿಸಿತು. ಈ ಸಂದರ್ಭಕ್ಕೆ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ನೀಡಿದ ಮೊದಲ ಶಾಂತಿ ಸಂದೇಶವು, ಯುದ್ಧದಿಂದ ಬೆದರಿಕೆಯೊಳಗಾಗಿರುವ ಜಗತ್ತಿಗೆ “ಆಯುಧರಹಿತ ಮತ್ತು ಆಯುಧ ನಿವಾರಿಸುವ ಶಾಂತಿ”ಯ ಅಗತ್ಯವಿದೆ ಎಂಬುದನ್ನು ಸ್ಪಷ್ಟವಾಗಿ ನೆನಪಿಸಿತು.

02 ಜನವರಿ 2026, 19:11