2026.01.15 Il cardinale Parolin in Kuwait (@TerzaLoggia) 2026.01.15 Il cardinale Parolin in Kuwait (@TerzaLoggia)  (@TerzaLoggia)

ಕಾರ್ಡಿನಲ್ ಪಾರೊಲಿನ್‌ರವರ ಕುವೈತ್‌ ಭೇಟಿ: ಸ್ನೇಹಬಾಂಧವ್ಯ ಮತ್ತು ಸಹಕಾರ

ಪವಿತ್ರ ಪೀಠ (ಹೋಲಿ ಸೀ) ಮತ್ತು ಕುವೈತ್ ರಾಜ್ಯವು ಹೊರಡಿಸಿದ ಸಂಯುಕ್ತ ಪ್ರಕಟಣೆಯಲ್ಲಿ, ಧರ್ಮಗಳ ನಡುವೆ ಪರಸ್ಪರ ಗೌರವ ಹಾಗೂ ಶಾಂತಿಯುತ ಸಹಬಾಳ್ವೆಯ ಮಹತ್ವವನ್ನು ಒತ್ತಿಹೇಳಲಾಗಿದೆ. ಈ ಪ್ರಕಟಣೆ, ಕಾರ್ಡಿನಲ್ ರಾಜ್ಯ ಕಾರ್ಯದರ್ಶಿ ವಂ. ಪಿಯೇತ್ರೋ ಪಾರೊಲಿನ್‌ರವರ ಅಧಿಕೃತ ಕುವೈತ್ ಭೇಟಿಯ ಆರಂಭದ ಸಂದರ್ಭದಲ್ಲೇ ಪ್ರಕಟವಾಗಿದೆ. ವ್ಯಾಟಿಕನ್ ವರದಿ

ಕುವೈತ್ ರಾಜ್ಯ ಮತ್ತು ಪವಿತ್ರ ಪೀಠವು, 2026ರ ಜನವರಿ 15–16ರಂದು ನಡೆಯುತ್ತಿರುವ ಕಾರ್ಡಿನಲ್ ರಾಜ್ಯ ಕಾರ್ಯದರ್ಶಿ ವಂ. ಪಿಯೇತ್ರೋ ಪಾರೊಲಿನ್‌ರವರ ಅಧಿಕೃತ ಭೇಟಿಯನ್ನು ಸ್ವಾಗತಿಸಿವೆ. ಈ ಭೇಟಿಯ ಸಂದರ್ಭದಲ್ಲಿ, ಕುವೈತ್ ರಾಜ್ಯದ ಪ್ರಧಾನಮಂತ್ರಿ ಗೌರವಾರ್ಹ ಶೇಖ್ ಅಹ್ಮದ್ ಅಬ್ದುಲ್ಲಾ ಅಲ್-ಅಹ್ಮದ್ ಅಲ್-ಸಬಾಹ್ ಅವರೊಂದಿಗೆ ಅಧಿಕೃತ ಮಾತುಕತೆಗಳ ಸುತ್ತು ನಡೆಯಿತು.

ಕಾರ್ಡಿನಲ್ ವಂ. ಪಾರೊಲಿನ್‌ರವರು, ಶುಕ್ರವಾರ ಅಹ್ಮದಿಯಲ್ಲಿ ನಡೆಯಲಿರುವ ಕಿರಿಯ ಬಸಿಲಿಕಾ ಘೋಷಣೆಯ ಘನ ಆಚರಣೆಗೆ ಅಧ್ಯಕ್ಷತೆಯನ್ನೂ ವಹಿಸಲಿದ್ದಾರೆ. ಈ ಭೇಟಿ, 1968ರಲ್ಲಿ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾದಾಗಿನಿಂದ ಪವಿತ್ರ ಪೀಠ ಮತ್ತು ಕುವೈತ್ ರಾಜ್ಯ ಉಳಿಸಿಕೊಂಡಿರುವ ಸ್ನೇಹ ಮತ್ತು ಸಹಕಾರದ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.

ಆ ವರ್ಷ, ಪವಿತ್ರ ಪೀಠದೊಂದಿಗೆ ಈ ರೀತಿಯ ಸಂಬಂಧವನ್ನು ಸ್ಥಾಪಿಸಿದ ಗಲ್ಫ್‌ನ ಅರಬ್ ರಾಷ್ಟ್ರಗಳ ಸಹಕಾರ ಮಂಡಳಿ (GCC) ವ್ಯಾಪ್ತಿಯಲ್ಲಿ ಕುವೈತ್ ಮೊದಲ ರಾಷ್ಟ್ರವಾಗಿ ಗುರುತಿಸಿಕೊಂಡಿತು. ಈ ಭೇಟಿಯ ಮತ್ತೊಂದು ಉದ್ದೇಶ, ಅರೇಬಿಯನ್ ಗಲ್ಫ್ ಪ್ರದೇಶದೊಳಗೆ ಕುವೈತ್ ರಾಜ್ಯವು ನಿರಂತರವಾಗಿ ಉಳಿಸಿಕೊಂಡು ಬಂದಿರುವ ಧಾರ್ಮಿಕ ಸಹಬಾಳ್ವೆಯ ದೀರ್ಘ ಪರಂಪರೆಯನ್ನು ಮತ್ತೊಮ್ಮೆ ದೃಢಪಡಿಸುವುದಾಗಿದೆ.

ದೇಶದ ಮೊದಲ ಕಥೋಲಿಕ ದೇವಾಲಯ

ಈ ಭೇಟಿ, ಕುವೈತ್‌ನ ಅಹ್ಮದಿಯಲ್ಲಿ ಇರುವ “ಅವರ್ ಲೇಡಿ ಆಫ್ ಅರೇಬಿಯಾ” (ಅರೇಬಿಯಾದ ಮಾತೆ ದೇವಾಲಯ) ದೇವಾಲಯವನ್ನು ಕಿರಿಯ ಬಸಿಲಿಕಾ ಎಂದು ಘೋಷಿಸಿರುವ ಸಂಭ್ರಮಾಚರಣೆಯ ಭಾಗವಾಗಿ ನಡೆಯುತ್ತಿದೆ.

ಕುವೈತ್ ರಾಜ್ಯ ಮತ್ತು ಗಲ್ಫ್ ಪ್ರದೇಶದಲ್ಲಿಯೇ ಅತ್ಯಂತ ಹಳೆಯ ಕಥೋಲಿಕ ದೇವಾಲಯವಾಗಿರುವ ಈ ದೇವಾಲಯಕ್ಕೆ, ಗಲ್ಫ್ ಪ್ರದೇಶದ ಇತಿಹಾಸಾತ್ಮಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಗುರುತಿಸಿ, 2025ರ ಜೂನ್ 28ರಂದು ಪೂಜ್ಯ ಜಗದ್ಗುರು 14ನೆಯ ಲಿಯೋರವರು ಈ ಗೌರವಪದವಿಯನ್ನು ನೀಡಿದರು.

ಅರೇಬಿಯನ್ ಉಪಖಂಡದಲ್ಲಿಯೇ ಮೊದಲ ಬಾರಿಗೆ ನೀಡಲಾದ ಈ ಐತಿಹಾಸಿಕ ಮಾನ್ಯತೆ, “ಅವರ್ ಲೇಡಿ ಆಫ್ ಅರೇಬಿಯಾ” ದೇವಾಲಯವು ಕುವೈತ್‌ನ “ಮಾತೃದೇವಾಲಯ”ವಾಗಿ ಹೊಂದಿರುವ ವಿಶಿಷ್ಟ ಸ್ಥಾನವನ್ನು ಸ್ಪಷ್ಟಪಡಿಸುತ್ತದೆ. ಏಕೆಂದರೆ ಇದು ದೇಶದಲ್ಲಿ ನಿರ್ಮಾಣಗೊಂಡ ಮೊದಲ ಕ್ಯಾಥೋಲಿಕ ದೇವಾಲಯವಾಗಿದೆ.

ಮೂಲ ಪ್ರಾರ್ಥನಾ ಮಂದಿರವನ್ನು 1948ರಲ್ಲಿ ನಿರ್ಮಿಸಲಾಗಿತ್ತು. ಇಂದಿನ ದೇವಾಲಯವನ್ನು 1957ರಲ್ಲಿ ಪೂರ್ಣಗೊಳಿಸಲಾಯಿತು. ಸ್ಥಳೀಯ ದಾನಿಗಳ ಉದಾರ ಕೊಡುಗೆಯಾಗಿ ಇದು ನಿರ್ಮಾಣಗೊಂಡಿದ್ದು, ದೇವಾಲಯ ಸಂಕೀರ್ಣದ ಸಂರಕ್ಷಣೆ ಮತ್ತು ಬೆಂಬಲವು ಇಂದಿಗೂ ಮುಂದುವರಿದಿದೆ.

ಧರ್ಮಗಳ ನಡುವೆ ಶಾಂತಿಯುತ ಸಹಬಾಳ್ವೆ

ಪತ್ರಿಕಾ ಪ್ರಕಟಣೆಯಲ್ಲಿ, ಕುವೈತ್ ರಾಜ್ಯವು ಧರ್ಮಗಳ ನಡುವೆ ಪರಸ್ಪರ ಗೌರವ ಮತ್ತು ಶಾಂತಿಯುತ ಸಹಬಾಳ್ವೆಯನ್ನು ತನ್ನ ಅಡಿಪಾಯದ ಮೌಲ್ಯಗಳಾಗಿ ಪುನರುಚ್ಚರಿಸಿದೆ. ಇವು ಕುವೈತ್ ಸ್ಥಾಪನೆಯ ಆದರ್ಶಗಳಲ್ಲಿಯೇ ಅಂತರ್ನಿಹಿತವಾಗಿದ್ದು, ನಂತರ ಅದರ ಸಂವಿಧಾನದಲ್ಲಿಯೂ ಅಳವಡಿಸಲ್ಪಟ್ಟಿವೆ ಎಂದು ಹೇಳಲಾಗಿದೆ.

ಈ ಭೇಟಿ, 2010ರ ಮೇ 6ರಂದು ಕುವೈತ್ ರಾಜ್ಯದ ಮಾಜಿ ಅಮೀರ್ ದಿವಂಗತ  ಗೌರವಾರ್ಹ ಶೇಖ್ ಸಬಾಹ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರು ಪೇತ್ರರ ಉತ್ತರಾಧಿಕಾರಿಯನ್ನು ಭೇಟಿಯಾಗಿದ್ದ ಐತಿಹಾಸಿಕ ಸಂದರ್ಭವನ್ನು ಕೂಡ ನೆನಪಿಸುತ್ತದೆ. ಆ ಭೇಟಿ, ಕುವೈತ್ ರಾಜ್ಯ ಮತ್ತು ಪವಿತ್ರ ಪೀಠದ ಸಂಬಂಧಗಳಲ್ಲಿ ಮಹತ್ವದ ಮೈಲುಗಲ್ಲಾಗಿ ಪರಿಗಣಿಸಲಾಗಿದೆ.

ಅದೇ ಭೇಟಿ, ಉನ್ನತ ಮಟ್ಟದ ಅಧಿಕೃತ ವಿನಿಮಯಗಳ ಸರಣಿಯ ಭಾಗವಾಗಿದ್ದು, ಪವಿತ್ರ ಪೀಠದೊಂದಿಗೆ ಸಂವಹನ ಮತ್ತು ಸಂವಾದವನ್ನು ಗಟ್ಟಿಗೊಳಿಸುವ ಕುವೈತ್ ನಾಯಕತ್ವದ ಬದ್ಧತೆಯನ್ನು ಸ್ಪಷ್ಟಪಡಿಸಿದೆ.

ಈ ಭೇಟಿಗೆ ಮುನ್ನ, 2009ರಲ್ಲಿ ಆಗಿನ ಪ್ರಧಾನಮಂತ್ರಿ ಗೌರವಾರ್ಹ ಶೇಖ್ ನಾಸರ್ ಅಲ್-ಮೊಹಮ್ಮದ್ ಅಲ್-ಅಹ್ಮದ್ ಅಲ್-ಸಬಾಹ್ ಅವರು ಭೇಟಿ ನೀಡಿದ್ದರು. ಬಳಿಕ 2015ರಲ್ಲಿ, ಆಗಿನ ಪ್ರಧಾನಮಂತ್ರಿ ಗೌರವಾರ್ಹ ಶೇಖ್ ಜಾಬರ್ ಅಲ್-ಮುಬಾರಕ್ ಅಲ್-ಹಮದ್ ಅಲ್-ಸಬಾಹ್ ಅವರ ಭೇಟಿ ನಡೆಯಿತು.

15 ಜನವರಿ 2026, 14:57