FILE PHOTO: A general view of the White House in Washington FILE PHOTO: A general view of the White House in Washington 

ವಿದೇಶಾಂಗ ನೀತಿ ಮಾನವ ಮೌಲ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುವಂತಿರಬೇಕು:ಅಮೆರಿಕಾದ ಮೂವರು ಪ್ರಧಾನ ಗುರುಗಳ ಸಂದೇಶ

ಪೂಜ್ಯ ಜಗದ್ಗುರುಗಳಾದ 14ನೆಯ ಲಿಯೋ ಅವರು ನೀಡಿದ ‘ವಿಶ್ವದ ಸ್ಥಿತಿಗತಿ’ ಭಾಷಣದ ಹತ್ತು ದಿನಗಳ ಬಳಿಕ, ಅಮೇರಿಕಾದ ಕಾರ್ಡಿನಲ್ ಕ್ಯೂಪಿಚ್, ಕಾರ್ಡಿನಲ್ ಮೆಕ್‌ಎಲ್ರಾಯ್, ಮತ್ತು ಕಾರ್ಡಿನಲ್ ಟೋಬಿನ್ ಅವರು ಸಂಯುಕ್ತ ಹೇಳಿಕೆ ಬಿಡುಗಡೆ ಮಾಡಿ, ಯುದ್ಧವನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ, ಅಮೇರಿಕಾದ ವಿದೇಶಾಂಗ ನೀತಿಯು ಶಾಂತಿ, ಮಾನವ ಮೌಲ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯಗಳಿಗೆ ಗೌರವವನ್ನು ಆಧಾರವಾಗಿ ಇಟ್ಟುಕೊಂಡು ರೂಪುಗೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ.

ಲೇಖಕರು:ಡೆವಿನ್ ವಾಟ್ಕಿನ್ಸ್

ಸೋಮವಾರ ಅಮೆರಿಕದ ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಮೂವರು ಅಮೆರಿಕನ್ ಕಾರ್ಡಿನಲ್‌ಗಳು ಅಪರೂಪದ ಸಂಯುಕ್ತ ಹೇಳಿಕೆಯನ್ನು ಹೊರಡಿಸಿದ್ದಾರೆ. ಪವಿತ್ರ ಪೀಠಕ್ಕೆ ಮಾನ್ಯತೆ ಪಡೆದ ರಾಜತಾಂತ್ರಿಕ ದಳದ ಮುಂದೆ ಪೂಜ್ಯ ಜಗದ್ಗುರುಗಳಾದ 14ನೆಯ ಲಿಯೋ ನೀಡಿದ ಭಾಷಣದಲ್ಲಿ ವ್ಯಕ್ತವಾದ ಹಲವು ಪ್ರಮುಖ ವಿಚಾರಗಳನ್ನು ಈ ಹೇಳಿಕೆ ಪ್ರತಿಧ್ವನಿಸುತ್ತದೆ.( ಪೂಜ್ಯ ಜಗದ್ಗುರುಗಳ ಭಾಷಣವನ್ನು ಇಲ್ಲಿ ವೀಕ್ಷಿಸಬಹುದು)

ಈ ಸಂಯುಕ್ತ ಹೇಳಿಕೆಗೆ ಚಿಕಾಗೋ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಬ್ಲೇಸ್ ಕುಪಿಚ್, ವಾಷಿಂಗ್ಟನ್ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ರಾಬರ್ಟ್ ಮ್ಯಾಕ್ಎಲ್ರಾಯ್, ಮತ್ತು ನ್ಯೂವಕ್ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಜೋಸೆಫ್ ಟೋಬಿನ್ ಸಹಿ ಹಾಕಿದ್ದಾರೆ. “2026ರಲ್ಲಿ, ಶೀತಲಯುದ್ದದ ಅಂತ್ಯದಿಂದ ಬಳಿಕ, ಜಗತ್ತಿನಲ್ಲಿ ಅಮೆರಿಕ ಕೈಗೊಳ್ಳುವ ಕ್ರಮಗಳ ನೈತಿಕ ಅಡಿಪಾಯದ ಕುರಿತು ಅತ್ಯಂತ ಆಳವಾದ ಹಾಗೂ ತೀವ್ರ ಚರ್ಚೆಯೊಳಗೆ ಅಮೆರಿಕ ಪ್ರವೇಶಿಸಿದೆ,” ಎಂದು ಅವರು ಬರೆದಿದ್ದಾರೆ.(ಪ್ರಧಾನ ಗುರುಗಳ ಹೇಳಿಕೆಯನ್ನು ಇಲ್ಲಿ ಓದಬಹುದು)

ಇತ್ತೀಚಿನ ದಿನಗಳಲ್ಲಿ ವೆನೆಜುವೆಲಾ, ಉಕ್ರೇನ್ ಮತ್ತು ಗ್ರೀನ್‌ಲ್ಯಾಂಡ್ ಸಂಬಂಧಿಸಿದ ಬೆಳವಣಿಗೆಗಳು, “ಸೇನಾ ಬಲ ಬಳಕೆ ಮತ್ತು ಶಾಂತಿಯ ಅರ್ಥವೇನು” ಎಂಬ ಮೂಲಭೂತ ಪ್ರಶ್ನೆಗಳನ್ನು ಎತ್ತಿಹಿಡಿಯುತ್ತಿವೆ ಎಂದು ಕಾರ್ಡಿನಲ್‌ಗಳು ಹೇಳಿದ್ದಾರೆ.

ಅವರು ರಾಷ್ಟ್ರಗಳ ಸ್ವಯಂನಿರ್ಣಯದ  ಸಾರ್ವಭೌಮ ಹಕ್ಕು ಎಂಬ ತತ್ತ್ವವನ್ನು ವಿಶೇಷವಾಗಿ ಉಲ್ಲೇಖಿಸಿ, ಪ್ರಸ್ತುತ ಸಂಘರ್ಷಪೂರ್ಣ ಭೂರಾಜಕೀಯ ಪರಿಸ್ಥಿತಿಯಲ್ಲಿ ಈ ತತ್ತ್ವವು ದಿನೇದಿನೇ ಹೆಚ್ಚು ಅಸ್ಥಿರವಾಗುತ್ತಿರುವಂತೆ ಕಾಣುತ್ತಿದೆ ಎಂಬುದನ್ನೂ ಅವರು ಸೂಚಿಸಿದ್ದಾರೆ.

ಮಾನವಕುಲದ ಸಮಗ್ರ ಹಿತಕ್ಕಾಗಿ ಶಾಂತಿ ಅತ್ಯಾವಶ್ಯಕವಾದರೂ, ನ್ಯಾಯಸಮ್ಮತ ಹಾಗೂ ದೀರ್ಘಕಾಲಿಕ ಶಾಂತಿಗಾಗಿ ನಡೆಯುವ ಪ್ರಯತ್ನಗಳು ಪಕ್ಷಪಾತ, ಧ್ರುವೀಕರಣ ಮತ್ತು ವಿನಾಶಕಾರಿ ನೀತಿಗಳ ಒತ್ತಡಕ್ಕೆ ಒಳಗಾಗಿವೆ ಎಂದು ಈ ಮೂವರು ಕಾರ್ಡಿನಲ್‌ಗಳು ಹೇಳಿದ್ದಾರೆ.

“ಜಗತ್ತಿನಾದ್ಯಂತ ಇರುವ ದುಷ್ಟಶಕ್ತಿಗಳಿಗೆ ಎದುರು ನಿಲ್ಲುವಲ್ಲಿ, ಜೀವಿಸುವ ಹಕ್ಕು ಹಾಗೂ ಮಾನವ ಘನತೆಯನ್ನು ಕಾಪಾಡುವಲ್ಲಿ, ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಬೆಂಬಲಿಸುವಲ್ಲಿ ನಮ್ಮ ದೇಶದ ನೈತಿಕ ಪಾತ್ರವೇನು ಎಂಬುದು ಈಗ ಎಲ್ಲೆಡೆ ಪರಿಶೀಲನೆಯ ವಿಷಯವಾಗಿದೆ,” ಎಂದು ಅವರು ಸೂಚಿಸಿದ್ದಾರೆ.

ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಜನವರಿ 9ರಂದು ಪೂಜ್ಯ ಜಗದ್ಗುರುಗಳಾದ 14ನೆಯ ಲಿಯೋ ನೀಡಿದ “ವಿಶ್ವಸ್ಥಿತಿಗತಿ” (State of the World) ಭಾಷಣವು ಅಂತರರಾಷ್ಟ್ರೀಯ ಸಂಬಂಧಗಳಿಗೆ “ನಿಜಾರ್ಥದ ನೈತಿಕ ಅಡಿಪಾಯ”ವನ್ನೂ, ಅಮೆರಿಕದ ವಿದೇಶಾಂಗ ನೀತಿಗೆ ದಿಕ್ಕು ತೋರಿಸುವ ಮಾರ್ಗವನ್ನೂ ಒದಗಿಸುತ್ತದೆ ಎಂದು ಕಾರ್ಡಿನಲ್‌ಗಳು ಹೇಳಿದ್ದಾರೆ.

ರಾಜತಾಂತ್ರಿಕರನ್ನುದ್ದೇಶಿಸಿ ನೀಡಿದ ತಮ್ಮ ಭಾಷಣದಲ್ಲಿ, ಪೂಜ್ಯ ಜಗದ್ಗುರುಗಳಾದ 14ನೆಯ ಲಿಯೋ ಬಹುಪಕ್ಷೀಯ ವ್ಯವಸ್ಥೆಯ ದುರ್ಬಲತೆಯನ್ನು ಹಾಗೂ ಎದುರುಬದಿಗಳ ನಡುವೆ ಸಂವಾದ ಮತ್ತು ಒಮ್ಮತವನ್ನು ರೂಪಿಸುವಲ್ಲಿ ರಾಜತಾಂತ್ರಿಕ ಪ್ರಯತ್ನಗಳು ವಿಫಲವಾಗುತ್ತಿರುವುದನ್ನು ವಿಷಾದದಿಂದ ಉಲ್ಲೇಖಿಸಿದ್ದಾರೆ.

“ಯುದ್ಧ ಮತ್ತೆ ಫ್ಯಾಷನ್ ಆಗಿದೆ; ಯುದ್ಧದತ್ತ ಒಲವು ದಿನೇದಿನೇ ವ್ಯಾಪಿಸುತ್ತಿದೆ,” ಎಂದು ಪೂಜ್ಯ ಜಗದ್ಗುರುಗಳಾದ 14ನೆಯ ಲಿಯೋ ಹೇಳಿದ್ದಾರೆ. “ದ್ವಿತೀಯ ಮಹಾಯುದ್ಧದ ನಂತರ ಸ್ಥಾಪಿತವಾದ ಗಡಿಗಳನ್ನು ಉಲ್ಲಂಘಿಸಲು ರಾಷ್ಟ್ರಗಳು ಬಲಪ್ರಯೋಗ ಮಾಡಬಾರದು ಎಂಬ ತತ್ವವೇ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಶಾಂತಿಯನ್ನು ಈಗ ‘ಒಂದು ವರ’ವಾಗಿ, ಸ್ವತಃ ಬಯಸಬೇಕಾದ ಶ್ರೇಷ್ಠ ಮೌಲ್ಯವಾಗಿ ಹುಡುಕಲಾಗುತ್ತಿಲ್ಲ. ಬದಲಾಗಿ, ತಮ್ಮ ಸ್ವಾಧೀನವನ್ನು, ಸರಹದ್ದನ್ನು ಸ್ಥಾಪಿಸಲು ಬೇಕಾದ ಷರತ್ತಾಗಿ ಶಸ್ತ್ರಬಲದ ಮೂಲಕ ಶಾಂತಿಯನ್ನು ಹುಡುಕಲಾಗುತ್ತಿದೆ.”

ಕಾರ್ಡಿನಲ್‌ಗಳಾದ ಕುಪಿಚ್, ಮ್ಯಾಕ್‌ಎಲ್ರಾಯ್ ಮತ್ತು ಟೋಬಿನ್ ಅವರು, ಕಥೋಲಿಕ ಉಪದೇಶದ ಕುರಿತು ಜಗದ್ಗುರುಗಳು ಉಲ್ಲೇಖಿಸಿದ ಮಾತನ್ನು ನೆನಪಿಸಿಕೊಂಡರು. ಜೀವಿಸುವ ಹಕ್ಕನ್ನು ರಕ್ಷಿಸಲೇಬೇಕು, ಏಕೆಂದರೆ ಆ ಹಕ್ಕು “ಪ್ರತಿ ಇನ್ನೊಂದು ಮಾನವ ಹಕ್ಕಿಗೂ ಅವಿಭಾಜ್ಯ ಅಡಿಪಾಯ”ವೆಂದು ಜಗದ್ಗುರುಗಳು ಹೇಳಿದ್ದಾರೆ.

ಜಗದ್ಗುರುಗಳೊಂದಿಗೆ ಧ್ವನಿಸೇರಿಸಿ, ಸಂಕಷ್ಟದಲ್ಲಿ ನರಳುತ್ತಿರುವವರ ಮಾನವ ಘನತೆಯನ್ನು ಕಾಪಾಡುವ ಸಲುವಾಗಿ ಶ್ರೀಮಂತ ರಾಷ್ಟ್ರಗಳು ಮಾನವೀಯ ನೆರವನ್ನು ಒದಗಿಸಬೇಕೆಂದು ಅವರು ಆಗ್ರಹಿಸಿದರು. ಜೊತೆಗೆ, ತತ್ತ್ವಶುದ್ಧತೆ ಅಥವಾ ಧಾರ್ಮಿಕ ಶುದ್ಧತೆಯ ಹೆಸರಿನಲ್ಲಿ ಅಂತಃಕರಣದ ಹಕ್ಕು ಹಾಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಅವರು ತೀವ್ರವಾಗಿ ವಿಷಾದಿಸಿದರು.

ಆದ್ದರಿಂದ, ಅಮೆರಿಕದ ಕಾರ್ಡಿನಲ್‌ಗಳು ತಮ್ಮ ರಾಷ್ಟ್ರಕ್ಕೆ “ನಿಜಾರ್ಥದಲ್ಲಿ ನೈತಿಕ ವಿದೇಶಾಂಗ ನೀತಿ” ಅಗತ್ಯವಿದೆಯೆಂದು ಆಗ್ರಹಿಸಿದರು. ಜೊತೆಗೆ, ಶುಭ ಸಂದೇಶದಲ್ಲಿ ಪ್ರಭು ಯೇಸು ಕ್ರಿಸ್ತರು ಪ್ರಕಟಿಸಿದಂತೆ “ನಿಜವಾಗಿ ನ್ಯಾಯಸಮ್ಮತ ಹಾಗೂ ದೀರ್ಘಕಾಲಿಕ ಶಾಂತಿ” ನಿರ್ಮಿಸುವ ಆಕಾಂಕ್ಷೆಯನ್ನು ಅವರು ವ್ಯಕ್ತಪಡಿಸಿದರು.

“ಸೀಮಿತ ರಾಷ್ಟ್ರೀಯ ಹಿತಾಸಕ್ತಿಗಳ ಸಾಧನವಾಗಿ ಯುದ್ಧವನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಸೈನಿಕ ಕ್ರಮವನ್ನು ಅತ್ಯಂತ ತೀವ್ರ ಪರಿಸ್ಥಿತಿಗಳಲ್ಲಿ ಕೊನೆಯ ಆಯ್ಕೆಯಾಗಿ ಮಾತ್ರ ನೋಡಬೇಕು; ಅದು ರಾಷ್ಟ್ರದ ಸಾಮಾನ್ಯ ನೀತಿಯ ಸಾಧನವಾಗಬಾರದು,” ಎಂದು ಅವರು ಹೇಳಿದರು. “ವಿಶ್ವದಾದ್ಯಂತ ಮಾನವ ಜೀವದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಹಾಗೂ ಮಾನವ ಘನತೆಯ ಉತ್ತೇಜನವನ್ನು ಗೌರವಿಸಿ ಮುಂದೂಡುವಂತಹ ವಿದೇಶಾಂಗ ನೀತಿಯನ್ನು ನಾವು ಬಯಸುತ್ತೇವೆ—ವಿಶೇಷವಾಗಿ ಆರ್ಥಿಕ ನೆರವಿನ ಮೂಲಕ ಇವುಗಳನ್ನು ಸ್ಥಾಪಿಸಬೇಕು” ಎಂದಿದ್ದಾರೆ.

ಅಂತಿಮವಾಗಿ, ಅಮೆರಿಕ ತನ್ನದೇ ನೈತಿಕ ಅಡಿಪಾಯದ ಕುರಿತು ನಡೆಸುತ್ತಿರುವ ಚರ್ಚೆಯನ್ನು ಇಂದಿನ ಸ್ಥಿತಿಯಲ್ಲಿ ತಡೆಯುತ್ತಿರುವ “ಧ್ರುವೀಕರಣ, ಪಕ್ಷಪಾತ ಮತ್ತು ಸೀಮಿತ ಆರ್ಥಿಕ–ಸಾಮಾಜಿಕ ಹಿತಾಸಕ್ತಿಗಳನ್ನು” ಮೆಟ್ಟಿ ನಿಲ್ಲಲು ಅಮೆರಿಕಾಗೆ ಒಂದು ಹೊಸ ದೃಷ್ಟಿಕೋನವನ್ನು ಪೂಜ್ಯ ಜಗದ್ಗುರುಗಳು ನೀಡಿದ್ದಾರೆ  ಮೂವರು ಕಾರ್ಡಿನಲ್‌ಗಳು ಹೇಳಿದರು.

 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

19 ಜನವರಿ 2026, 10:54