2026.01.16 Nunzio Visvaldas Kulbokas durante la celebrazione a Berdychiv 2026.01.16 Nunzio Visvaldas Kulbokas durante la celebrazione a Berdychiv 

ಉಕ್ರೇನ್‌ನ ಪವಿತ್ರ ಪೀಠದ ಅಪೋಸ್ತೋಲಿಕ ರಾಯಭಾರಿ: “ನಾವು ಗಾಯಗೊಂಡಿದ್ದರೂ ದೇವರು ನಮ್ಮೊಡನೆ ಇದ್ದಾರೆ”

ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಉಕ್ರೇನ್‌ನಲ್ಲಿರುವ ಪವಿತ್ರ ಪೀಠದ ಅಪೋಸ್ತೋಲಿಕ ರಾಯಭಾರಿಯಾದ ಮಹಾಧರ್ಮಾಧ್ಯಕ್ಷ ಪೂಜ್ಯ ವಿಸ್ವಾಲ್ದಾಸ್ ಕುಲ್ಬೋಕಾಸ್ ರಷ್ಯಾ ದಾಳಿಯಿಂದ ಹಾನಿಗೊಂಡ ವಿದ್ಯುತ್–ಇಂಧನ ಮೂಲಸೌಕರ್ಯಗಳ ಹಿನ್ನೆಲೆಯಲ್ಲಿನ ದೇಶದ ಸ್ಥಿತಿ ಮತ್ತು ಜನರು ಎದುರಿಸುತ್ತಿರುವ ಸಂಕಷ್ಟಗಳನ್ನು ವಿವರಿಸಿದ್ದಾರೆ. ಲೇಖಕಿ: ಸ್ವೀತ್ಲಾನಾ ದುಖೋವಿಚ್

ಜನವರಿ 9ರಿಂದ ಕೀವ್ ನಗರದಲ್ಲಿನ ಸುಮಾರು ಆರು ಸಾವಿರ ಕಟ್ಟಡಗಳು ತಾಪಮಾನ ವ್ಯವಸ್ಥೆಯಿಲ್ಲದೆ ಕತ್ತಲೆಯಲ್ಲೇ ನಿಂತಿವೆ. ರಷ್ಯಾ ನಡೆಸಿದ ಭಾರೀ ದಾಳಿಯ ಬಳಿಕ ಈ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.

ಶುಕ್ರವಾರ ಮಧ್ಯಾಹ್ನದ ವೇಳೆಗೆ ಉಕ್ರೇನ್ ರಾಜಧಾನಿಯ ಸುಮಾರು 100 ಕಟ್ಟಡಗಳಲ್ಲಿ ಇನ್ನೂ ತಾಪಮಾನ ವ್ಯವಸ್ಥೆ ಸ್ಥಗಿತಗೊಂಡಿತ್ತು ಎಂದು ಮೇಯರ್ ವಿಟಾಲಿ ಕ್ಲಿಚ್ಕೋ ತಿಳಿಸಿದ್ದಾರೆ. ಎಲ್ಲಾ ಕಟ್ಟಡಗಳಲ್ಲೂ ತಾಪಮಾನ ವ್ಯವಸ್ಥೆಯನ್ನು ಮರುಸ್ಥಾಪಿಸಲು ನಗರ ಇಂಜಿನಿಯರ್‌ಗಳು ಹಗಲು–ರಾತ್ರಿ ತಡೆಯಿಲ್ಲದೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

“ಗೃಹೋಪಯೋಗಿ ಮೂಲಸೌಕರ್ಯಗಳ ಪೂರೈಕೆ ಸಂಪೂರ್ಣವಾಗಿ ಅವಲಂಬಿಸಿರುವ ವಿದ್ಯುತ್ ಪೂರೈಕೆ ಸ್ಥಿತಿ ಇನ್ನೂ ಅತ್ಯಂತ ಕಠಿಣವಾಗಿದೆ. ಕೀವ್‌ನಲ್ಲಿ ವಿದ್ಯುತ್ ಕಡಿತಗಳು ಮುಂದುವರಿದಿವೆ,” ಎಂದು ಕ್ಲಿಚ್ಕೋ ಟೆಲಿಗ್ರಾಂನಲ್ಲಿ ತಿಳಿಸಿದರು.

ಜೆಕ್ ಗಣರಾಜ್ಯದ ಅಧ್ಯಕ್ಷ ಪೆಟ್ರ್ ಪಾವೆಲ್ ಅವರನ್ನು ಭೇಟಿಯಾದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ, ವಿದ್ಯುತ್–ಇಂಧನ ಮೂಲಸೌಕರ್ಯಗಳನ್ನು ಸರಿಪಡಿಸಲು ದಿನವೂ ಅಶ್ರಾಂತವಾಗಿ ದುಡಿಯುತ್ತಿರುವ ತಂಡಗಳಿಗೆ ಕೃತಜ್ಞತೆ ಸಲ್ಲಿಸಿದರು.

“ನಾವು ವಿದ್ಯುತ್ ಘಟಕಗಳನ್ನು ಮರುಸ್ಥಾಪಿಸುವ ಕಾರ್ಯದಲ್ಲಿಯೂ, ಆಮದು ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯದಲ್ಲಿಯೂ ನಿರಂತರವಾಗಿ ತೊಡಗಿದ್ದೇವೆ. ಆದರೆ ಇವುಗಳನ್ನೂ ದಿನನಿತ್ಯದ ರಷ್ಯಾ ದಾಳಿಗಳು ನಾಶಪಡಿಸುತ್ತಿವೆ,” ಎಂದು ಅಧ್ಯಕ್ಷರು ಹೇಳಿದರು.

ಪ್ರಸ್ತುತ ಪರಿಸ್ಥಿತಿಗಳನ್ನು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ವಿವರಿಸಿದವರು ಉಕ್ರೇನ್‌ನಲ್ಲಿರುವ ಪವಿತ್ರ ಪೀಠದ ಅಪೋಸ್ತೋಲಿಕ ರಾಯಭಾರಿಯಾದ ಮಹಾಧರ್ಮಾಧ್ಯಕ್ಷ ಪೂಜ್ಯ ವಿಸ್ವಾಲ್ದಾಸ್ ಕುಲ್ಬೋಕಾಸ್. ದೇಶ ಎದುರಿಸುತ್ತಿರುವ ಸಂಕಷ್ಟಗಳನ್ನೂ, ಜನಜೀವನದ ಮೇಲಿನ ಪರಿಣಾಮವನ್ನೂ ಅವರು ಮನಮುಟ್ಟುವಂತೆ ಚಿತ್ರಿಸಿದ್ದಾರೆ.

ಪ್ರಶ್ನೆ: ಕೀವ್ ಸೇರಿದಂತೆ ಉಕ್ರೇನ್‌ನ ವಿವಿಧ ಭಾಗಗಳಲ್ಲಿ ಉಂಟಾಗಿರುವ ಇಂಧನ ಸಂಕಷ್ಟದ ನಡುವೆ, ಕೀವ್‌ನ ನಾಗರಿಕರು ಹೇಗೆ ಜೀವಿಸುತ್ತಿದ್ದಾರೆ? ರಾಯಭಾರ ಕಚೇರಿಯಲ್ಲಿ ನಿಮ್ಮ ಪರಿಸ್ಥಿತಿ ಹೇಗಿದೆ?

ಈಗ ಯುದ್ಧದ ಪರಿಣಾಮವಾಗಿ ನಗರ–ಪಟ್ಟಣಗಳ ಮೇಲೆ ನಡೆದ ಬಾಂಬ್ ದಾಳಿಗಳಿಂದ ವಿದ್ಯುತ್ ಕೊರತೆ ತೀವ್ರವಾಗಿದೆ. ಜನವರಿಯ ಚಳಿಗಾಲದಲ್ಲಿ ರಾತ್ರಿ ವೇಳೆ ಉಷ್ಣಾಂಶವು ಶೂನ್ಯಕ್ಕಿಂತ ಇಪ್ಪತ್ತು ಡಿಗ್ರಿ ಕೆಳಗೆ ಇಳಿಯುತ್ತಿರುವುದರಿಂದ, ವಿಶೇಷವಾಗಿ ಕೀವ್‌ನಲ್ಲಿ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ.

ಪಶ್ಚಿಮ ಭಾಗಗಳಲ್ಲಿಯೂ ವಿದ್ಯುತ್ ಕೊರತೆ ಇದೆ ಎಂದು ಧರ್ಮಾಧ್ಯಕ್ಷರು, ಯಾಜಕರು ಹಾಗೂ ಭಕ್ತರಿಂದ ನನಗೆ ಮಾಹಿತಿ ಬಂದಿದೆ. ಅನೇಕರು ದಿನಕ್ಕೆ ಕೇವಲ ಮೂರು ಗಂಟೆಗಳಷ್ಟೇ ಬೆಳಕು ದೊರೆಯುತ್ತದೆ ಎಂದು ಹೇಳಿದ್ದಾರೆ.

ಖಾರ್ಕಿವ್ ನಗರದಲ್ಲೂ ಪರಿಸ್ಥಿತಿ ಅದೇ ರೀತಿಯಾಗಿದೆ. ಕೆಲವು ಕುಟುಂಬಗಳು ಎರಡು ದಿನಗಳ ಕಾಲ ವಿದ್ಯುತ್ ಅಥವಾ ತಾಪಮಾನ ವ್ಯವಸ್ಥೆಯಿಲ್ಲದೆ ಕಾಲ ಕಳೆಯಬೇಕಾಗಿದೆ. ಇದರಿಂದ ಬೇಕರಿಗಳಿಗೂ ರೊಟ್ಟಿ ಬೇಯಿಸಲು ಸಾಧ್ಯವಾಗದೆ ಹೋಗುತ್ತದೆ. ಆಹಾರದ ಇನ್ನಿತರ ವಸ್ತುಗಳ ಪೂರೈಕೆಯಲ್ಲಿಯೂ ಇದೇ ತೊಂದರೆ ಎದುರಾಗುತ್ತದೆ.

ಹೀಗಾಗಿ ಚಳಿಯಿಂದ ಜನರು ಅನುಭವಿಸುವ ಸಂಕಷ್ಟಕ್ಕೆ ಜೊತೆಗೆ, ಈ ಇಂಧನ ಸಂಕಷ್ಟವೇ ಆಹಾರದ ಕೊರತೆಯನ್ನೂ ಉಂಟುಮಾಡುತ್ತಿದೆ. ಇದು 1930ರ ದಶಕದಲ್ಲಿ ಉಕ್ರೇನ್ ಅನುಭವಿಸಿದ ಹೋಲೊಡೊಮೋರ್ ದುರ್ಭಿಕ್ಷದ ನೋವನ್ನು  ನೆನಪಿಸುತ್ತದೆ.

ನಮ್ಮ ರಾಯಭಾರ ಕಚೇರಿಯಲ್ಲಿ ಸ್ವಂತ ಜನರೇಟರ್ ಇರುವುದರಿಂದ ಇತರರಿಗಿಂತ ಹೆಚ್ಚು ಬೆಳಕು, ನೀರು ಮತ್ತು ತಾಪಮಾನ ವ್ಯವಸ್ಥೆ ನಮಗೆ ದೊರೆಯುತ್ತಿದೆ. ಆದರೆ ಈ ಸ್ಥಿತಿ ಬದಲಾಗದೇ ಮುಂದುವರಿದರೆ, ಮೇಯರ್ ಕೆಲ ದಿನಗಳ ಹಿಂದೆ ಹೇಳಿದಂತೆ, ಸಂಪೂರ್ಣ ಉಕ್ರೇನ್ ರಾಜಧಾನಿಯನ್ನು ಖಾಲಿ ಮಾಡಬೇಕಾದ ಪರಿಸ್ಥಿತಿ ಬರಬಹುದೆಂಬ ಆತಂಕವಿದೆ.

ಪ್ರಶ್ನೆ: ನೀವು ಇತ್ತೀಚೆಗೆ ಉಕ್ರೇನ್‌ನ ಬೆರ್ಡಿಚಿವ್ ಮೇರಿಯನ್ ತೀರ್ಥಕ್ಷೇತ್ರದಲ್ಲಿ ಪವಿತ್ರ ಬಲಿಪೂಜೆಯನ್ನು ನಡೆಸಿಕೊಟ್ಟಿರಿ. 2026ರಿಗಾಗಿ ಲ್ಯಾಟಿನ್ ಕಥೋಲಿಕ ಧರ್ಮಾಧ್ಯಕ್ಷರು ಘೋಷಿಸಿದ “ಪ್ರಭು ಯೇಸುಗಳ ಪವಿತ್ರ ಹೃದಯದ ವರ್ಷ”ದ ಉದ್ಘಾಟನೆ, ಮತ್ತು 1991ರ ಜನವರಿ 16ರಂದು ಲ್ಯಾಟಿನ್ ದೇವಾಲಯಗಳು ಮರುಸ್ಥಾಪನೆಯಾದ 35ನೇ ವಾರ್ಷಿಕೋತ್ಸವ—ಇವೆಲ್ಲವೂ ಸಂಕಷ್ಟದ ಮಧ್ಯೆ ನಡೆದವು. ಈ ಅನುಭವದ ಬಗ್ಗೆ ನಿಮ್ಮ ಅನಿಸಿಕೆ ಏನು?

ಉಕ್ರೇನ್‌ನ ಲ್ಯಾಟಿನ್ ಕಥೋಲಿಕ ಧರ್ಮಸಭೆಗೆ ಇದು ಬೆರ್ಡಿಚಿವ್‌ನ ಮುಖ್ಯ ತೀರ್ಥಕ್ಷೇತ್ರದಲ್ಲಿ ನಡೆದ ಅತ್ಯಂತ ಮಹತ್ವದ ಆಚರಣೆ ಆಗಿತ್ತು.

ಉಕ್ರೇನ್‌ನ ಎಲ್ಲಾ ಧರ್ಮಕ್ಷೇತ್ರಗಳ ಧರ್ಮಾಧ್ಯಕ್ಷರು ಸೇರಿ, ಪ್ರಭು ಯೇಸುಗಳ ಪವಿತ್ರ ಹೃದಯಕ್ಕೆ ಸಮರ್ಪಿತ ವರ್ಷದ ಆರಂಭವನ್ನು ಆಚರಿಸಿದ್ದೇವೆ. ಅವರ ಕರುಣಾಮಯ ಸ್ವೀಕಾರ, ಪಾಪಕ್ಷಮೆ, ಮತ್ತು ಎಲ್ಲಾ ದುಷ್ಟದಿಂದ ರಕ್ಷಣೆಯಿಗಾಗಿ ನಾವು ಬೇಡಿಕೊಂಡೆವು. ದೇವರ ದಯೆ ಪಾಪ ಮತ್ತು ಯುದ್ದದಿಂದ ಬಿಡುಗಡೆ ನೀಡಿ, ನಮಗೆ ಶಾಂತಿಯನ್ನು ನೀಡಲಿ ಎಂದು ನಾವು ಪ್ರಾರ್ಥಿಸಿದೆವು.

ಈ ವರ್ಷ ಕುಟುಂಬಗಳಲ್ಲಿ ಮತ್ತು ಧರ್ಮಕೇಂದ್ರಗಳಲ್ಲಿ ಕಳೆಯಲ್ಪಡಲಿದೆ. ಪ್ರತಿಯೊಬ್ಬರೂ ಪ್ರಭು ಯೇಸುಗಳ ಪವಿತ್ರ ಹೃದಯದ ಮೇಲಿನ ವೈಯಕ್ತಿಕ ಭಕ್ತಿಯನ್ನು ಅನುಭವಿಸಲು ಪ್ರೇರೇಪಿಸಲ್ಪಟ್ಟಿದ್ದಾರೆ. ಜೊತೆಗೆ 1991ರ ಜನವರಿ 16ರಂದು ಲ್ಯಾಟಿನ್ ಕಥೋಲಿಕ ದೇವಾಲಯಗಳು ಮರುಸ್ಥಾಪನೆಯಾದ 35ನೇ ವಾರ್ಷಿಕೋತ್ಸವವನ್ನೂ ಇಂದು ಆಚರಿಸಲಾಯಿತು.

ಯುದ್ಧವು ಸೈತಾನನ ಕ್ರಿಯೆಯಿಂದ ಹುಟ್ಟುತ್ತದೆ ಎಂಬುದು ನಮಗೆ ಗೊತ್ತು. ನಾವು ದೇವರನ್ನು ಆರಾಧಿಸುವ ಪ್ರತಿಯೊಂದು ಸಂದರ್ಭದಲ್ಲೂ ಸೈತಾನನು ಭೀತಿಗೊಳ್ಳುತ್ತಾನೆ. ಆದರೆ ನಾವು ಎಚ್ಚರದಲ್ಲಿದ್ದೇವೆ, ಮತ್ತು ದೃಢ ನಂಬಿಕೆಯೊಂದಿಗೆ ಹೇಳಬಲ್ಲೆವು—ಪ್ರಭು ನಮ್ಮೊಡನೆ ಇದ್ದಾರೆ.

ಈ ಆಚರಣೆಗಳು ಪೂಜ್ಯ ಜಗದ್ಗುರುಗಳು 14ನೆಯ ಲಿಯೋ  ಮತ್ತು ಸಮಸ್ತ ಧರ್ಮಸಭೆಯೊಂದಿಗಿನ ಏಕತೆಯಲ್ಲಿ ನಡೆಸಲ್ಪಟ್ಟವು. ನನಗೆ ಇದು ತುಂಬಾ ಸ್ಪರ್ಶಕಾರಿ ಮತ್ತು ಆಳವಾದ ಅನುಭವವಾಗಿತ್ತು. ಇದರ ಫಲಗಳು ಸಮೃದ್ಧವಾಗಲಿ ಎಂಬ ಆಶೆ ನನ್ನೊಳಗೆ ತುಂಬಿದೆ.

ಪ್ರಶ್ನೆ: ಬೆರ್ಡಿಚಿವ್‌ನಲ್ಲಿ ಯುದ್ಧದಿಂದ ಹೆಚ್ಚು ಬಾಧಿತ ಪ್ರದೇಶಗಳ ಧರ್ಮಾಧ್ಯಕ್ಷರನ್ನು ನೀವು ಭೇಟಿಯಾಗಲು ಸಾಧ್ಯವಾಯಿತೇ? ಅವರನ್ನು ನೀವು ಹೇಗೆ ಕಂಡಿರಿ?

ನಾನು ಖಾರ್ಕಿವ್–ಝಪೊರಿಜ್ಜಿಯಾ ಪ್ರದೇಶದ ಪ್ರಧಾನ ಧರ್ಮಾಧ್ಯಕ್ಷರನ್ನೂ ಅವರ ಸಹಾಯಕ ಧರ್ಮಾಧ್ಯಕ್ಷರನ್ನೂ, ಜೊತೆಗೆ ಒಡೆಸ್ಸಾ ಧರ್ಮಾಧ್ಯಕ್ಷರನ್ನೂ ಭೇಟಿಯಾದೆ. ಆತ್ಮಿಕವಾಗಿ ನೋಡಿದರೆ, ಅವರು ಎಲ್ಲರೂ ಪ್ರಭುವಿನ ಮೇಲೆ ಗಾಢ ನಂಬಿಕೆ ಇಟ್ಟುಕೊಂಡಿದ್ದಾರೆ ಎಂಬುದು ನನಗೆ ಸ್ಪಷ್ಟವಾಗಿ ಕಾಣಿಸಿತು. ಖಾರ್ಕಿವ್‌ನಲ್ಲಿ ದಿನವಿಡೀ ವಿದ್ಯುತ್ ಇಲ್ಲದೆ ಇರುವ ಪರಿಸ್ಥಿತಿ ಇದೆ—ಅದು ಬಹಳ ಸಂಕಷ್ಟದ ಸಮಯ.

ಇನ್ನೊಂದು ವಿಷಯವನ್ನು ಸೇರಿಸಿ ಹೇಳಬೇಕಾಗಿದೆ. ನಾನು ಸುಮಿ ಪ್ರದೇಶದ ಒಬ್ಬ ಕಥೋಲಿಕರನ್ನು ಮಾತನಾಡಿಸಿದೆ. ಅವರು ಖಾರ್ಕಿವ್ ಪ್ರದೇಶದಲ್ಲೇ ಮಾನವೀಯ ನೆರವು ಕಾರ್ಯಗಳಲ್ಲಿ ತೊಡಗಿದ್ದಾರೆ. ನೆರವು ಒಯ್ಯುವಾಗ ಡ್ರೋನ್ ದಾಳಿಯಲ್ಲಿ ಅವರ ಇಬ್ಬರು ಸಹೋದ್ಯೋಗಿಗಳು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಅದರಿಂದ ಅವರು ಮಾನಸಿಕವಾಗಿ ಸಂಪೂರ್ಣವಾಗಿ ಕುಗ್ಗಿಹೋಗಿದ್ದಾರೆ. ಡ್ರೋನ್ ದಾಳಿ ಕಂಡಾಗಲೆಲ್ಲಾ ಆ ಆಘಾತದ ನೆನಪು ಮತ್ತೆ ಕಾಡುತ್ತದೆ.

ಉಕ್ರೇನ್ ಒಳಗಿರುವಾಗ ಯುದ್ಧದ ಸಂಪೂರ್ಣ ಭಾರವನ್ನು ತಾನು ಅಷ್ಟಾಗಿ ಅನುಭವಿಸುವುದಿಲ್ಲ. ಆದರೆ ದೇಶದ ಹೊರಗೆ ಹೋಗಿದಾಗ ತನ್ನೊಳಗಿನ ಆಘಾತ ಎಷ್ಟು ಆಳವಾಗಿದೆ ಎಂಬುದು ಗೊತ್ತಾಗುತ್ತದೆ. ಅಲ್ಲಿ ಕೇಳಿಬರುವ ಪ್ರತಿಯೊಂದು ಶಬ್ದವೂ ಬಾಂಬ್, ಕ್ಷಿಪಣಿ, ಡ್ರೋನ್ ಸ್ಫೋಟದಂತೆಯೇ ಕೇಳಿಸುತ್ತದೆ. ಇಂದು ಉಕ್ರೇನ್‌ನ ಸಂಪೂರ್ಣ ಜನತೆ ಹೊಡೆತಗಳಿಂದ ನಲುಗಿಹೋಗಿದ್ದು, ಆಳವಾಗಿ ಮನಃಪೀಡಿತವಾಗಿದೆ.

ಈ ಕಾರಣದಿಂದಲೇ, ಜಗತ್ತಿನಾದ್ಯಂತ ಇರುವ ನಮ್ಮ ಸಹೋದರ–ಸಹೋದರಿಯರು ಯುದ್ಧದ ನೇರ ಪರಿಣಾಮದಿಂದ ನರಳುತ್ತಿರುವವರ ಮಾನಸಿಕ ಆರೋಗ್ಯಕ್ಕಾಗಿ ವಿಶೇಷವಾಗಿ ಪ್ರಾರ್ಥಿಸಲಿ ಎಂಬ ವಿಶ್ವಾಸ ನನ್ನದು.

17 ಜನವರಿ 2026, 12:51