Memorial for Alex Pretti in Minneapolis Memorial for Alex Pretti in Minneapolis 

ಮಿನಿಯಾಪೊಲಿಸ್ ಹತ್ಯೆಗಳ ಬಳಿಕ ಮಾನವಜೀವನದ ಗೌರವಕ್ಕೆ ಅಮೆರಿಕದ ಧರ್ಮಾಧ್ಯಕ್ಷರ ಮನವಿ

ಮಿನಿಯಾಪೊಲಿಸ್‌ನಲ್ಲಿ ಒಕ್ಕೂಟ ವ್ಯವಸ್ಥೆಯ ವಲಸೆ ಅಧಿಕಾರಿಗಳಿಂದ ನಡೆದ ಇತ್ತೀಚಿನ ಎರಡು ಹತ್ಯೆಗಳ ಹಿನ್ನೆಲೆದಲ್ಲಿ, ಅಮೆರಿಕದ ಧರ್ಮಾಧ್ಯಕ್ಷರು ಸಂಯಮ, ಶಾಂತಿ ಹಾಗೂ ಪ್ರತಿಯೊಂದು ಮಾನವ ಜೀವಕ್ಕೂ ಗೌರವ ನೀಡುವಂತೆ ಮನವಿ ಮಾಡಿದ್ದಾರೆ.

ಲೇಖಕರು: ಡೆವಿನ್ ವಾಟ್ಕಿನ್ಸ್

ಅಮೆರಿಕದ ಮಿನೆಸೋಟಾ ರಾಜ್ಯದ ಮಿನಿಯಾಪೊಲಿಸ್ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಶನಿವಾರ, ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ವಿಭಾಗ (ICE)ದ ಅಧಿಕಾರಿಗಳು 37 ವರ್ಷದ ತೀವ್ರ ನಿಗಾ ಘಟಕದ ಶುಶ್ರೂಷಕ ಹಾಗೂ ಅಮೆರಿಕದ ನಾಗರಿಕರಾದ ಅಲೆಕ್ಸ್ ಪ್ರೆಟ್ಟಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಒಕ್ಕೂಟ ವ್ಯವಸ್ಥೆಯ ಸರ್ಕಾರದ ಹೇಳಿಕೆಯಂತೆ, ರಸ್ತೆ ಮೇಲೆ ಮಹಿಳೆಯೊಬ್ಬರೊಂದಿಗೆ ICE ಅಧಿಕಾರಿಗಳು ತೊಡಗಿದ್ದ ವೇಳೆ ಪ್ರೆಟ್ಟಿ ಮಧ್ಯಪ್ರವೇಶಿಸಿದ್ದು, ಅವರ ಬಳಿ ಬಂದೂಕು ಇದ್ದ ಕಾರಣ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಆದರೆ ಸ್ಥಳೀಯ ಅಧಿಕಾರಿಗಳ ಪ್ರಕಾರ, ಸಾರ್ವಜನಿಕವಾಗಿ ಬಂದೂಕು ಧರಿಸಲು ಪ್ರೆಟ್ಟಿಗೆ ಕಾನೂನುಬದ್ಧ ಅನುಮತಿ ಇತ್ತು ಹಾಗೂ ಅವರ ಬಂದೂಕು ಸರಿಯಾಗಿ ನೋಂದಾಯಿತವಾಗಿತ್ತು.

ಘಟನಾ ಸ್ಥಳದ ವೀಡಿಯೊ ದೃಶ್ಯಗಳಲ್ಲಿ, ಪ್ರೆಟ್ಟಿ ಬಂದೂಕನ್ನು ಹಿಡಿದಿರುವುದು ಕಾಣದೆ, ಮೊಬೈಲ್ ಫೋನ್ ಹಿಡಿದು ಇತರ ಪ್ರತಿಭಟನಾಕಾರರಿಗೆ ಸಹಾಯ ಮಾಡುತ್ತಿರುವುದು ಗೋಚರಿಸುತ್ತದೆ. ICE ಅಧಿಕಾರಿಗಳು ಅವರನ್ನು ನೆಲಕ್ಕೆ ತಳ್ಳುತ್ತಾರೆ. ಒಬ್ಬ ಅಧಿಕಾರಿ ಪ್ರೆಟ್ಟಿಯ ಬಳಿಯ ಬಂದೂಕನ್ನು ತೆಗೆದು ದೂರ ಸರಿಯುತ್ತಾರೆ. ನಂತರ ಮತ್ತೊಬ್ಬ ಅಧಿಕಾರಿ ಪ್ರೆಟ್ಟಿಯ ಬೆನ್ನಿಗೆ ಬಂದೂಕು ತೋರಿಸಿ ಸತತವಾಗಿ ನಾಲ್ಕು ಗುಂಡು ಹಾರಿಸಿರುವುದು ವೀಡಿಯೊಗಳಲ್ಲಿ ಕಾಣಿಸುತ್ತದೆ.

ಈ ಘಟನೆಯ ಬಳಿಕ ಮಿನಿಯಾಪೊಲಿಸ್ ನಗರದಲ್ಲಿ ಸಾವಿರಾರು ಮಂದಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ವಾರಾಂತ್ಯದಲ್ಲಿ ಅಲೆಕ್ಸ್ ಪ್ರೆಟ್ಟಿಯ ಸ್ಮರಣಾರ್ಥ ಹಲವಾರು ಮೌನ ಸಭೆಗಳು ನಡೆದವು. ಈ ಘಟನೆ, ಎರಡು ವಾರಗಳ ಹಿಂದಷ್ಟೇ ಮಿನಿಯಾಪೊಲಿಸ್‌ನಲ್ಲಿ ICE ಅಧಿಕಾರಿಗಳಿಂದ 37 ವರ್ಷದ ತಾಯಿ ರೆನೇ ಗುಡ್ ಹತ್ಯೆಯಾಗಿದ್ದ ಘಟನೆಯ ನಂತರ ನಡೆದಿದೆ.

ಪ್ರಾರ್ಥನೆ ಮತ್ತು ಶಾಂತಿಗಾಗಿ ಧರ್ಮಾಧ್ಯಕ್ಷರುಗಳ ಮನವಿ

ಭಾನುವಾರ ಮಿನಿಯಾಪೊಲಿಸ್ ಮಹಾಧರ್ಮಾಧ್ಯಕ್ಷ ವಂ. ಬರ್ನಾರ್ಡ್ ಹೆಬ್ಡಾ ಅವರು ಅಲೆಕ್ಸ್ ಪ್ರೆಟ್ಟಿ ಹಾಗೂ ಅವರ ಆತ್ಮೀಯರಿಗಾಗಿ ಪ್ರಾರ್ಥನೆ ಸಲ್ಲಿಸುವಂತೆ ಕೋರಿದ ಪ್ರಕಟಣೆಯನ್ನು ಬಿಡುಗಡೆ ಮಾಡಿದರು.

“ಮಿನ್ನೆಸೋಟಾ ರಾಜ್ಯವನ್ನು ಆವರಿಸಿರುವ ಉದ್ವಿಗ್ನ ಪರಿಸ್ಥಿತಿಗಳ ಮಧ್ಯೆ ಮತ್ತೊಂದು ಜೀವ ನಷ್ಟವಾದುದು, ಪ್ರಭುವಿನ ಶಾಂತಿಯನ್ನು ಮರುಸ್ಥಾಪಿಸಲು ನಾವು ಏನು ಮಾಡಬಹುದು ಎಂಬುದನ್ನು ಗಂಭೀರವಾಗಿ ಚಿಂತಿಸುವಂತೆ ನಮಗೆಲ್ಲರನ್ನು ಪ್ರೇರೇಪಿಸಬೇಕು,” ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು.

ಆಯ್ಕೆಯಾದ ಅಮೆರಿಕದ ಸಾರ್ವಜನಿಕ ಪ್ರತಿನಿಧಿಗಳಾಗಲಿ ಅಥವಾ ದಾಖಲೆಗಳಿಲ್ಲದ ನಮ್ಮ ನೆರೆಯವರಾಗಲಿ ಎಲ್ಲಾ ಮಾನವರೂ ದೇವರ ಸ್ವರೂಪ ಮತ್ತು ಸಾದೃಶ್ಯದಲ್ಲಿ ಸೃಷ್ಟಿಸಲ್ಪಟ್ಟವರು ಎಂಬುದನ್ನು ಅವರು ನೆನಪಿಸಿದರು. “ನಾವು ದೇವರ ನ್ಯಾಯಕ್ಕಾಗಿ  ಹಾತೊರೆದರೂ ಮತ್ತು ಅವರ ಶಾಂತಿಗೆ ಹಸಿವಿನಿಂದಿದ್ದರೂ“ಆದರೆ ಪರಸ್ಪರರನ್ನು ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟ ಸಹೋದರರು ಮತ್ತು ಸಹೋದರಿಯರಾಗಿ ಕಾಣುವುದನ್ನು ತಡೆಯುವ ದ್ವೇಷ ಹಾಗೂ ಪೂರ್ವಾಗ್ರಹಗಳನ್ನು ನಮ್ಮ ಹೃದಯಗಳಿಂದ ದೂರ ಮಾಡದ  ಹೊರತು ಈ ಶಾಂತಿಯನ್ನು ಸಾಧಿಸಲಾಗದು” ಎಂದು ಮಹಾಧರ್ಮಾಧ್ಯಕ್ಷ ಹೆಬ್ಡಾ ಹೇಳಿದರು.

ನಗರದ ದೇವಾಲಯಗಳಲ್ಲಿ ಪವಿತ್ರ ಸಂಸ್ಕಾರದ ಮುಂದೆ ಪ್ರಾರ್ಥನೆಗೆ ಸೇರಿಕೊಳ್ಳುವಂತೆ ಅವರು ಕಥೋಲಿಕ ವಿಶ್ವಾಸಿಗಳಿಗೆ ಆಹ್ವಾನ ನೀಡಿ ಇಂತಹ ಸ್ಥಳಗಳು “ಪ್ರಾರ್ಥನೆ ಮತ್ತು ಆತ್ಮಪರಿಶೀಲನೆಗೆ ಶಾಂತ ವಾತಾವರಣವನ್ನು ಒದಗಿಸುತ್ತವೆ” ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ, ಅಮೆರಿಕದ ಕಥೋಲಿಕ ಧರ್ಮಾಧ್ಯಕ್ಷರುಗಳ ಒಕ್ಕೂಟದ ಅಧ್ಯಕ್ಷರಾದ ಮಹಾಧರ್ಮಾಧ್ಯಕ್ಷ ವಂ. ಪಾಲ್ ಕೋಕ್ಲಿ ಅವರು ಸಂವಾದದ ಮಾರ್ಗವನ್ನು ಆಯ್ಕೆಮಾಡುವಂತೆ ಹಾಗೂ “ಮಾನವ ಜೀವಕ್ಕೆ ಧಕ್ಕೆ ತರುವ ಅಮಾನುಷ ಭಾಷೆ ಮತ್ತು ಕೃತ್ಯಗಳಿಂದ ದೂರ ಉಳಿಯುವಂತೆ” ಅಮೆರಿಕನ್ನರಿಗೆ ಕರೆ ನೀಡಿದರು.

“ಮಿನಿಯಾಪೊಲಿಸ್‌ನಲ್ಲಿ ಮತ್ತು ಶಾಂತಿ ಅಪಾಯದಲ್ಲಿರುವ ಎಲ್ಲ ಸ್ಥಳಗಳಲ್ಲಿ ಸಂಯಮ, ಶಾಂತಿ ಮತ್ತು ಮಾನವ ಜೀವಕ್ಕೆ ಗೌರವ ಕಾಪಾಡಿಕೊಳ್ಳುವಂತೆ ನಾನು ಪ್ರಾರ್ಥನಾಪೂರ್ವಕವಾಗಿ ಮನವಿ ಮಾಡುತ್ತೇನೆ,” ಎಂದು ಅವರು ಭಾನುವಾರ ಪ್ರಕಟಿಸಿದ ಹೇಳಿಕೆಯಲ್ಲಿ ಹೇಳಿದರು. “ಸಾಮಾನ್ಯ ಹಿತಕ್ಕಾಗಿ ಜನರ ಕಲ್ಯಾಣವನ್ನು ರಕ್ಷಿಸುವ ವಿಶೇಷ ಹೊಣೆಗಾರಿಕೆ ಸಾರ್ವಜನಿಕ ಅಧಿಕಾರಿಗಳ ಮೇಲಿದೆ.”

ಭಾನುವಾರದ ಆಂಜೆಲಸ್ ಸಂದೇಶದಲ್ಲಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಶಾಂತಿಗೆ ನೀಡಿದ ಮನವಿಯನ್ನು ಮಹಾಧರ್ಮಾಧ್ಯಕ್ಷ ಕೋಕ್ಲಿ ಸ್ಮರಿಸಿದರು. “ಸುವಾರ್ತೆಯನ್ನು ಪ್ರತಿಯೊಂದು ಪರಿಸ್ಥಿತಿಯಲ್ಲೂ ಸಾರಬೇಕು ಮತ್ತು ಬದುಕಬೇಕು; ಅದು ಎಲ್ಲಾ ವ್ಯಕ್ತಿಗಳು, ಸಂಸ್ಕೃತಿಗಳು, ಧರ್ಮಗಳು ಹಾಗೂ ಜನಾಂಗಗಳ ನಡುವೆ ಸಹೋದರತ್ವ ಮತ್ತು ಶಾಂತಿಗೆ ಪಾಕದಂತೆ ಕಾರ್ಯನಿರ್ವಹಿಸಬೇಕು ಎಂದು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ನಮಗೆ ನೆನಪಿಸುತ್ತಾರೆ,” ಎಂದು ಅವರು ಹೇಳಿದರು.

ಅಂತಿಮವಾಗಿ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಮಾತುಗಳನ್ನು ಪುನರುಚ್ಚರಿಸುತ್ತಾ, ಮಹಾಧರ್ಮಾಧ್ಯಕ್ಷ ಕೋಕ್ಲಿ, “ಶಾಂತಿ ಮಾನವರಿಗೆ ನೀಡುವ ಗೌರವದ ಮೇಲೆ ನಿರ್ಮಾಣವಾಗುತ್ತದೆ” ಎಂದು ಹೇಳಿದರು.

ಒಕ್ಕೂಟ ನ್ಯಾಯಾಲಯದ ವಿಚಾರಣೆ: ಮಿನೆಸೋಟಾದಲ್ಲಿ ICE ಹಾಜರಾತಿ ಕಡಿಮೆಯಾಗುವ ಸಾಧ್ಯತೆ

ಭಾನುವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾಲ್ ಸ್ಟ್ರೀಟ್ ಜರ್ನಲ್ಗೆ ಮಾತನಾಡುತ್ತಾ, ಮಿನಿಯಾಪೊಲಿಸ್‌ನಲ್ಲಿ ನಡೆದ ಪ್ರಾಣಘಾತಕ ಗುಂಡಿನ ದಾಳಿಯ ಕುರಿತು ತಮ್ಮ ಆಡಳಿತ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದರು.

ಮಿನಿಯಾಪೊಲಿಸ್ ಪ್ರದೇಶದಿಂದ ICE ಅಧಿಕಾರಿಗಳನ್ನು ಹಂತ ಹಂತವಾಗಿ ಹಿಂಪಡೆಯಲು ತಾವು ಸಿದ್ಧರಾಗಿರಬಹುದು ಎಂದು ಅವರು ಸೂಚಿಸಿದರು. ಆದರೆ ಅದಕ್ಕೆ ಸ್ಪಷ್ಟ ಸಮಯಾವಧಿಯನ್ನು ಅವರು ನೀಡಲಿಲ್ಲ. ಇದಕ್ಕೂ ನಡುವೆ, ಸೋಮವಾರ ಒಕ್ಕೂಟ ನ್ಯಾಯಾಧೀಶರು ಮಿನೆಸೋಟಾದಲ್ಲಿ ನಡೆಯುತ್ತಿರುವ ವಲಸೆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಸಾಧ್ಯತೆಯಿರುವ ಪ್ರಕರಣದ ವಾದಗಳನ್ನು ಕೇಳಲಿದ್ದಾರೆ.

ಈ ತಿಂಗಳ ಆರಂಭದಲ್ಲಿ ಮಿನೆಸೋಟಾ ರಾಜ್ಯವು ಗೃಹಸುರಕ್ಷತಾ ಇಲಾಖೆ ವಿರುದ್ಧ ದಾವೆ ಸಲ್ಲಿಸಿದ್ದು, 2025ರ ಡಿಸೆಂಬರ್‌ಗೆ ಮುನ್ನ ಇದ್ದ ಮಟ್ಟಕ್ಕೆ ಒಕ್ಕೂಟ ಕಾನೂನು ಜಾರಿ ಅಧಿಕಾರಿಗಳ ಸಂಖ್ಯೆಯನ್ನು ಮರುಸ್ಥಾಪಿಸುವಂತೆ ಬೇಡಿಕೆ ಇಟ್ಟಿದೆ. ಈ ಹೆಚ್ಚುವರಿ ನಿಯೋಜನೆಗಳನ್ನು ಟ್ರಂಪ್ ಆಡಳಿತವು ‘ಆಪರೇಷನ್ ಮೆಟ್ರೋ ಸರ್ಜ್’ ಅಡಿಯಲ್ಲಿ ಆರಂಭಿಸಿತ್ತು.



ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

26 ಜನವರಿ 2026, 22:23