Demonstrators protest outside the Attorney General's office asking for the liberation of detained people, amid prisoner releases by the Venezuelan government, in Caracas Demonstrators protest outside the Attorney General's office asking for the liberation of detained people, amid prisoner releases by the Venezuelan government, in Caracas  (GABY ORAA)

ವೆನೆಜುಯೆಲಾದ ಧರ್ಮಸಭೆ ‘ಎಲ್ಲರಿಗೂ ಭೇಟಿಯ ಸ್ಥಳ’ವಾಗಿರಲು ಯತ್ನಿಸುತ್ತಿದೆ

ವೆನೆಜುಯೆಲಾದ ಧರ್ಮಾಧ್ಯಕ್ಷರ ಸಮ್ಮೇಳನದ ಅಧ್ಯಕ್ಷರಾದ ಪೂಜ್ಯ ಧರ್ಮಾಧ್ಯಕ್ಷರಾದ ಜೀಸಸ್ ಅಂಡೋನಿ ಗೋನ್ಸಾಲೆಸ್ ಡೆ ಝರಾತೆ ಸಲಾಸ್ ಅವರು, ದೇಶದ ಧರ್ಮಸಭೆ “ಒಳ್ಳೆಯ, ಸತ್ಯ ಮತ್ತು ನ್ಯಾಯದ ವಿಜಯಕ್ಕಾಗಿ ಜನರು ನಡೆಸುತ್ತಿರುವ ಹೋರಾಟದಲ್ಲಿ ಸದಾ ಜೊತೆಯಾಗಲು” ಬದ್ಧವಾಗಿದೆ ಎಂದು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

— ಫೆಡರಿಕೋ ಪಿಯಾನಾ

ಶಾಂತಿ ಮತ್ತು ಸಂವಾದವನ್ನು ಉತ್ತೇಜಿಸುವುದು “ದೈನಂದಿನ” ಕೆಲಸ ಎಂದು ಪೂಜ್ಯ ಧರ್ಮಾಧ್ಯಕ್ಷರಾದ ಜೀಸಸ್ ಅಂಡೋನಿ ಗೋನ್ಸಾಲೆಸ್ ಡೆ ಝರಾತೆ ಸಲಾಸ್ ಹೇಳಿದ್ದಾರೆ. ಅದು ಸುಲಭವಾದ ಕರ್ತವ್ಯವಲ್ಲ; ಏಕೆಂದರೆ ಅಮೆರಿಕ ಅಧ್ಯಕ್ಷ ಮಾದುರೋ ಅವರನ್ನು ಬಂಧಿಸಿದ ನಂತರ ವೆನೆಜುಯೆಲಾ ಇನ್ನೂ ಅಸ್ಥಿರತೆಯನ್ನು ಎದುರಿಸುತ್ತಿದೆ.

 “ಸ್ಥಳೀಯ ಧರ್ಮಸಭೆ ಎಲ್ಲರಿಗೂ ಭೇಟಿಯ ಸ್ಥಳವಾಗಿರಲು ಹಾಗೂ ಒಳ್ಳೆಯ, ಸತ್ಯ ಮತ್ತು ನ್ಯಾಯದ ವಿಜಯಕ್ಕಾಗಿ ಜನರು ನಡೆಸುತ್ತಿರುವ ಹೋರಾಟದಲ್ಲಿ ಸದಾ ಜೊತೆಯಾಗಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ” ಎಂದು ಮಹಾಧರ್ಮಾಧ್ಯಕ್ಷರು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ಸಂದರ್ಶನದಲ್ಲಿ ಹೇಳಿದರು.

ಈ ಗಂಭೀರ ಸಂಕಷ್ಟದ ಸಮಯದಲ್ಲಿ ವೆನೆಜುಯೆಲಾದ ಧರ್ಮಾಧ್ಯಕ್ಷರು ತಮ್ಮ ಅಗತ್ಯ ಪಾತ್ರದ ಬಗ್ಗೆ ತುಂಬಾ ಜಾಗರೂಕರಾಗಿದ್ದಾರೆ ಎಂದು ಅವರು ತಿಳಿಸಿದರು. ರಾಷ್ಟ್ರದ ಸ್ಥಿತಿ ಹೇಗೆ ಮುಂದುವರಿಯುತ್ತದೆ ಎಂಬುದನ್ನು ಗಮನಿಸಿ ನಂತರವೇ “ಹೊಸ ಉಪಕ್ರಮಗಳನ್ನು ನಿರ್ಧರಿಸಿ ಜಾರಿಗೆ ತರಲಾಗುತ್ತದೆ” ಎಂದರು.

ಶಾಂತಿಗೆ ದಾರಿಗಳು

ಪೂಜ್ಯ ಧರ್ಮಾಧ್ಯಕ್ಷರಾದ ಗೋನ್ಸಾಲೆಸ್ ಡೆ ಝರಾತೆ ಅವರ ಪ್ರಕಾರ, ಹೆಚ್ಚು ನ್ಯಾಯಯುತ ಮತ್ತು ಸ್ವತಂತ್ರ ಸಮಾಜವನ್ನು ಕಟ್ಟಲು ಅಗತ್ಯವಾದ ಮೂಲಭೂತ ಅಡಿಪಾಯವೆಂದರೆ “ಮಾನವ ಗೌರವ, ಎಲ್ಲರ ಹಿತ ಮತ್ತು ಸುವಾರ್ತೆಯ ಪ್ರಮುಖ ಮೌಲ್ಯಗಳು.”

 “ನಮ್ಮ ದೇಶದ ಇಂದಿನ ಸಂಕೀರ್ಣ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳು ಕಳೆದ ಹಲವು ವರ್ಷಗಳಲ್ಲಿ ನಡೆದ ಪ್ರಕ್ರಿಯೆಯ ಫಲವಾಗಿದೆ ಅಸುರಕ್ಷತೆ, ಶಿಕ್ಷಣ-ಆರೋಗ್ಯ-ಸಾರಿಗೆ ಕ್ಷೇತ್ರಗಳ ಕೊರತೆ, ಅಸ್ಥಿರ ಸಂಬಳ, ನಿರಂತರ ದುಬಾರಿ, ದೇಶೀಯ ಉತ್ಪಾದನೆಯ ಕೊರತೆ — ಇವೆಲ್ಲವೂ ಬಹುತೇಕ ಜನರ ದಿನನಿತ್ಯದ ಜೀವನದ ಮೇಲೆ ಭಾರವಾಗಿ ಬೀಳುತ್ತಿವೆ. ಇವುವೇ ಇಂದು ಜನರ ಪ್ರಮುಖ ಚಿಂತೆ” ಎಂದು  ವಿವರಿಸಿದರು.

ಮಿಶ್ರ ಭಾವನೆಗಳು

ಇತ್ತೀಚಿನ ಘಟನೆಗಳ ಬಗ್ಗೆ ವೆನೆಜುಯೆಲಾದ ಜನರಲ್ಲಿ ಮಿಶ್ರ ಭಾವನೆಗಳಿವೆ ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು: “ಏನಾಯಿತು ಎಂಬುದರ ನಿಜವಾದ ಪರಿಣಾಮಗಳ ಬಗ್ಗೆ ಇರುವ ಚಿಂತೆಯ ಜೊತೆಗೆ, ಶೀಘ್ರ ಮತ್ತು ಶಾಶ್ವತ ಸುಧಾರಣೆಯ ನಿರೀಕ್ಷೆಯೂ ಜೊತೆಯಾಗಿ ಇದೆ.”

ಇತ್ತೀಚೆಗೆ ಅಧಿಕಾರಿಗಳು ಸಾಕಷ್ಟು ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಘೋಷಿಸಿದ್ದು ಒಂದು ಧನಾತ್ಮಕ ಸಂಕೇತ ಎಂದು ಅವರು ಹೇಳಿದರು.

“ಇದು ನಿಜವಾಗಿಯೂ ಒಳ್ಳೆಯ ಸುದ್ದಿ,” ಎಂದು ಗೋನ್ಸಾಲೆಸ್ ಡೆ ಝರಾತೆ ಹೇಳಿದರು. “ಆದರೆ ಇದರ ಜೊತೆಗೇ ಬಂಧಿತರ ಕುಟುಂಬಗಳಲ್ಲಿ ದೊಡ್ಡ ಆತಂಕವೂ ಉಂಟಾಗಿದೆ. ಏಕೆಂದರೆ ಯಾರಿಗೆ ಈ ಕ್ರಮಗಳ ಲಾಭ ಸಿಗುತ್ತದೆ? ಇದರ ನಿಜವಾದ ವ್ಯಾಪ್ತಿ ಏನು? ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ. ಮೇಲಾಗಿ, ಬಿಡುಗಡೆ ಪ್ರಕ್ರಿಯೆ ತುಂಬಾ ನಿಧಾನವಾಗಿದೆ.”

ಕುಟುಂಬಗಳು ಇನ್ನಷ್ಟು ಬಿಡುಗಡೆಗಳ ನಿರೀಕ್ಷೆಯಲ್ಲಿ ಜೈಲಿನ ಗೇಟ್‌ಗಳ ಹೊರಗೆ ರಾತ್ರಿ ಕಳೆಯುವಷ್ಟು ಕಾಯುತ್ತಿದ್ದಾರೆ, “ಜನರು ಎಲ್ಲಾ ರಾಜಕೀಯ ಕೈದಿಗಳ ಬಿಡುಗಡೆ ಬಯಸುತ್ತಾರೆ”ಎಂದು  ಹೇಳಿದರು.

ನಿರೀಕ್ಷೆಯ ಮಾತೆ

ಆದರೆ  ‘ದಿವ್ಯ ಕುರಿಗಾಹಿ ಮಾತೆ’ (Our Lady of Divine Shepherdess) ಹಬ್ಬದ ಆಚರಣೆಯಲ್ಲಿ ದಣಿದ ಜನರಿಗೆ ನಿಜವಾದ ನಿರೀಕ್ಷೆಯ ಒಂದು ಬಲವಾದ ಕ್ಷಣ ಜನವರಿ 14ರಂದು ಕಂಡುಬಂದಿತು.

ಈ ಆಚರಣೆ ಸಾಮಾನ್ಯವಾಗಿ ಲಾರಾ ರಾಜ್ಯದ ಬಾರ್ಕಿಸಿಮೆತೊ ಧರ್ಮಕ್ಷೇತ್ರದಲ್ಲಿ ನಡೆಯುತ್ತದೆ; ಆದರೆ ಇದನ್ನು ದೇಶದಾದ್ಯಂತ ಜನರು ತಮ್ಮದಾಗಿಸಿಕೊಂಡಿದ್ದಾರೆ.

ಸಾಮಾಜಿಕ-ರಾಜಕೀಯ ಅನಿಶ್ಚಿತತೆ ಇದ್ದರೂ, ದೇಶದ ಅತ್ಯಂತ ಪ್ರೀತಿಪಾತ್ರ ಮರಿಯಮ್ಮನ ಮೂರ್ತಿಯ ಮೆರವಣಿಗೆಯಲ್ಲಿ ಜನಸಾಗರವೇ ಸೇರಿತು ಎಂದು ಮಹಾಧರ್ಮಾಧ್ಯಕ್ಷರು ನೆನಪಿಸಿಕೊಂಡರು.

“ಇದು ವೆನೆಜುಯೆಲಾದ ಜನರ ಆಧ್ಯಾತ್ಮಿಕ ಶಕ್ತಿಸಂಚಯದ ಸ್ಪಷ್ಟ ಅಭಿವ್ಯಕ್ತಿ. ನಾವು ಬದುಕುತ್ತಿರುವ ಇಂತಹ ಕಠಿಣ ಸಮಯದಲ್ಲಿ ನಮ್ಮ ಪ್ರಭು  ಯೇಸು ಕ್ರಿಸ್ತರು ಹಾಗೂ ಅವರ ತಾಯಿ ಧನ್ಯ ಕನ್ಯಾಮರಿಯಮ್ಮ — ನಮ್ಮೆಲ್ಲರಿಗೂ ಇನ್ನೂ ಉಲ್ಲೇಖಬಿಂದುಗಳು, ಸಾಂತ್ವನ ಮತ್ತು ಶಕ್ತಿಯಾಗಿಯೇ ಮುಂದುವರಿದಿದ್ದಾರೆ” ಎಂದು  ಹೇಳಿದರು.

 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

20 ಜನವರಿ 2026, 01:01