‘ನ್ಯೂ ಸ್ಟಾರ್ಟ್’(New START) ಒಪ್ಪಂದದ ಅವಧಿ ಮುಕ್ತಾಯ ಸ್ವೀಕಾರಾರ್ಹವಲ್ಲ ಎಂದು ಅಮೆರಿಕದ ಧರ್ಮಾಧ್ಯಕ್ಷರ ಹೇಳಿಕೆ
ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್
“ಉಕ್ರೇನ್‌ನ ವಿನಾಶಕಾರಿ ಯುದ್ಧ ಸೇರಿದಂತೆ ಜಗತ್ತಿನಾದ್ಯಂತ ನಡೆಯುತ್ತಿರುವ ಪ್ರಸ್ತುತ ಸಂಘರ್ಷಗಳಿಂದ ಉಂಟಾಗಿರುವ ಅಪಾಯಗಳು, ಮುಂದಿನ ದಿನಗಳಲ್ಲಿ ನ್ಯೂ ಸ್ಟಾರ್ಟ್ ಒಪ್ಪಂದದ ಅವಧಿ ಮುಕ್ತಾಯವಾಗುವುದನ್ನು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲದಂತಾಗಿಸುತ್ತವೆ,” ಎಂದು ಅಮೆರಿಕದ ಕ್ಯಾಥೊಲಿಕ್ ಧರ್ಮಾಧ್ಯಕ್ಷರ ಸಮಾವೇಶದ (USCCB) ಅಧ್ಯಕ್ಷ ಆರ್ಚ್‌ಬಿಷಪ್ ಪಾಲ್ ಎಸ್. ಕೋಕ್ಲಿ ಮಂಗಳವಾರ ಪ್ರಕಟಿಸಿದ ಹೇಳಿಕೆಯಲ್ಲಿ ಎಚ್ಚರಿಸಿದರು.
ಫೆಬ್ರವರಿ 5ರಂದು ಅವಧಿ ಮುಕ್ತಾಯಗೊಳ್ಳಲಿರುವ ಅಮೆರಿಕ ಮತ್ತು ರಷ್ಯಾ ನಡುವಿನ, ಹೊಸ ತಂತ್ರಾತ್ಮಕ ಶಸ್ತ್ರ ನಿಯಂತ್ರಣ ಒಪ್ಪಂದದ (ನ್ಯೂ ಸ್ಟ್ರಾಟೆಜಿಕ್ ಆರ್ಮ್ಸ್ ರಿಡಕ್ಷನ್ ಟ್ರೀಟಿ- New START), ಹಿನ್ನೆಲೆಯಲ್ಲಿ ಮಹಾಧರ್ಮಾಧ್ಯಕ್ಷರಾದ ಕೋಕ್ಲಿ, “ಭಕ್ತ ವಿಶ್ವಾಸಿಗಳು ಹಾಗೂ ಸರ್ವರ ಒಳಿತನ್ನು ಬಯಸುವ ಎಲ್ಲರು, ಅಂತರರಾಷ್ಟ್ರೀಯ ಸಮುದಾಯವಾಗಿ ನಿಜವಾದ, ಪರಿವರ್ತನಾತ್ಮಕ ಮತ್ತು ಶಾಶ್ವತ ಶಾಂತಿಯನ್ನು ಸಾಧಿಸಲು ಅಗತ್ಯ ಧೈರ್ಯವನ್ನು ಬೆಳೆಸಿಕೊಳ್ಳುವಂತೆ ಉತ್ಸಾಹಪೂರ್ಣವಾಗಿ ಪ್ರಾರ್ಥಿಸಬೇಕೆಂದು ನಾನು ಕರೆ ನೀಡುತ್ತೇನೆ,” ಎಂದು ಒತ್ತಾಯಿಸಿದರು.
ಜನವರಿಯಲ್ಲಿ ರಾಜತಾಂತ್ರಿಕ ದಳವನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು “ನ್ಯೂ ಸ್ಟಾರ್ಟ್” ಒಪ್ಪಂದವನ್ನು ನವೀಕರಿಸುವ ಅಗತ್ಯವನ್ನು ಒತ್ತಿಹೇಳಿದ್ದನ್ನು ಮಹಾಧರ್ಮಾಧ್ಯಕ್ಷರಾದ ಕೋಕ್ಲಿ ನೆನಪಿಸಿದ್ದಾರೆ. “ಈ ಒಪ್ಪಂದದ ಮುಂದುವರೆಯದಿದ್ದಲ್ಲಿ, ಕೃತಕ ಬುದ್ಧಿಮತ್ತೆಯ ಸಹಾಯದಿಂದ “ಇನ್ನಷ್ಟು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಉತ್ಪಾದನಾ ಪೈಪೋಟಿಗೆ ಮರಳುವ ಅಪಾಯವಿದೆ” ಎಂದು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಎಚ್ಚರಿಸಿದ್ದರು.
USCCB ಅಧ್ಯಕ್ಷರು, ಪೂಜ್ಯ ಜಗದ್ಗುರುಗಳ ವಿಶ್ವ ಶಾಂತಿ ದಿನದ ಸಂದೇಶದಲ್ಲಿ ಸಂತ 23ನೆಯ ಜಾನರ “ಸಮಗ್ರ ನಿಶಸ್ತ್ರೀಕರಣ”ದ ಕರೆಯನ್ನು ಉಲ್ಲೇಖಿಸಿದ್ದನ್ನು ಕೂಡ ನೆನಪಿಸಿದರು. ಇದು ಕೇವಲ ಶಸ್ತ್ರಾಸ್ತ್ರಗಳ ಕಡಿತವಲ್ಲ, ಬದಲಾಗಿ “ರಾಷ್ಟ್ರಗಳ ನಡುವಿನ ನಿಜವಾದ ಮತ್ತು ಶಾಶ್ವತ ಶಾಂತಿ ಸಮಾನ ಪ್ರಮಾಣದ ಶಸ್ತ್ರಾಸ್ತ್ರಗಳ ಸ್ವಾಮ್ಯದಲ್ಲಿಲ್ಲ, ಪರಸ್ಪರ ನಂಬಿಕೆಯಲ್ಲಿ ಮಾತ್ರ ಸಾಧ್ಯ” ಎಂಬ ಮನೋಭಾವವನ್ನು ಅಳವಡಿಸಿಕೊಳ್ಳಬೇಕೆಂದು ಪೂಜ್ಯ ಜಗದ್ಗುರು ಒತ್ತಿಹೇಳಿದ್ದರು.
ಈ ವಾಸ್ತವಿಕತೆಯ ಹಿನ್ನೆಲೆಯಲ್ಲಿ, ಮಹಾಧರ್ಮಾಧ್ಯಕ್ಷರಾದ ಕೋಕ್ಲಿ ನೀತಿನಿರ್ಧಾರಕರಿಗೆ, “ನ್ಯೂ ಸ್ಟಾರ್ಟ್ ಒಪ್ಪಂದದ ಮಿತಿಗಳನ್ನು ಕಾಯ್ದುಕೊಳ್ಳಲು ಧೈರ್ಯಪೂರ್ವಕವಾಗಿ ರಾಜತಾಂತ್ರಿಕ ಮಾತುಕತೆಗಳನ್ನು ಮುಂದುವರಿಸಿ, ನಿಶಸ್ತ್ರೀಕರಣದತ್ತ ದಾರಿಗಳನ್ನು ತೆರೆಯಬೇಕು” ಎಂದು ಕರೆ ನೀಡಿದರು. “ಅಂತರರಾಷ್ಟ್ರೀಯ ನೀತಿ ಭೇದಾಭಿಪ್ರಾಯಗಳು ಗಂಭೀರವಾಗಿದ್ದರೂ, ಅವು ರಾಜತಾಂತ್ರಿಕ ಸ್ಥಗಿತಕ್ಕೆ ನೆಪವಾಗಬಾರದು,ಬದಲಾಗಿ ಅವುಗಳು ನಮಗೆ ಇನ್ನಷ್ಟು ದೃಢವಾಗಿ ಪರಿಣಾಮಕಾರಿ ಸಂವಾದ ಮತ್ತು ಪರಸ್ಪರ ಮಾತುಕತೆಯನ್ನು ಮುಂದುವರಿಸಲು ಪ್ರೇರೇಪಿಸಬೇಕು” ಎಂದು ಮನವಿ ಮಾಡಿದರು.
ಅಂತಿಮವಾಗಿ, USCCB ಅಧ್ಯಕ್ಷರಾದ ಮಹಾಧರ್ಮಾಧ್ಯಕ್ಷರಾದ ಪೂಜ್ಯ ಪಾಲ್ ಎಸ್. ಕೋಕ್ಲಿ, “ಶಾಂತಿಯ ರಾಜಕುಮಾರರಾದ ಪ್ರಭು ಯೇಸುಕ್ರಿಸ್ತರು ವಿಶ್ವವ್ಯಾಪಿ ಸಹೋದರತ್ವದ ಮನೋಭಾವದಲ್ಲಿ ಶಾಂತಿಯನ್ನು ಹುಡುಕುವಂತೆ ನಮ್ಮ ಹೃದಯ ಮತ್ತು ಮನಸ್ಸುಗಳನ್ನು ಬೆಳಗಿಸಲಿ” ಎಂದು ಪ್ರಾರ್ಥಿಸಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).