ಏಷ್ಯಾದಲ್ಲಿ ಕಥೋಲಿಕರಿಂದ ಚಾಂದ್ರಮಾನ ನೂತನ ವರ್ಷದ ಸಂಭ್ರಮ
ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತುರಾ, RCJ
ಏಷ್ಯಾದ ಅನೇಕ ದೇಶಗಳಲ್ಲಿ ಚೀನೀ ಸಂಸ್ಕೃತಿಯ ಬೇರುಗಳಿಂದ ಬೆಳೆದ ಚಾಂದ್ರಮಾನ ನೂತನ ವರ್ಷವನ್ನು ಭಾರೀ ಸಂಭ್ರಮದೊಂದಿಗೆ ಆಚರಿಸಲಾಗುತ್ತದೆ. ಈ ಸಂಭ್ರಮದಲ್ಲಿ ಕಥೋಲಿಕ ಕುಟುಂಬಗಳೂ ತಮ್ಮ ಪಾರಂಪರಿಕ ಆಚರಣೆಗಳನ್ನು ಕಾಪಾಡಿಕೊಂಡೇ ಭಾಗಿಯಾಗುತ್ತಿವೆ.
ಧರ್ಮಸಭೆಯ ದೃಷ್ಟಿಯಲ್ಲಿ ಇದು ಕೇವಲ ಸಾಂಸ್ಕೃತಿಕ ಹಬ್ಬವಲ್ಲ. ಇದು ಸುವಾರ್ತೆಯ ಸಾರವನ್ನು ಕುಟುಂಬಗಳೊಳಗೆ ಮತ್ತಷ್ಟು ಆಳವಾಗಿ ನೆಡುವ ಧಾರ್ಮಿಕ ಅವಕಾಶ. ಕೃತಜ್ಞತೆ ಸಲ್ಲಿಸುವ, ಕುಟುಂಬ ಕಲಹಗಳನ್ನು ಮರೆತು ಪುನಃ ಒಂದಾಗುವ, ದೇವರ ಆಶೀರ್ವಾದಕ್ಕಾಗಿ ಪ್ರಾರ್ಥಿಸುವ ವಿಶೇಷ ಸಮಯ.
ಸಂಸ್ಕೃತೀಕರಣದ ಮನೋಭಾವದೊಂದಿಗೆ, ಧರ್ಮಸಭೆ ಈ ಹಬ್ಬವನ್ನು ವಿಶ್ವಾಸವು ಏಷ್ಯಾದ ಜನಜೀವನದ ನಾಡಿಯೊಳಗೆ ಬೆರೆತುಹೋಗುವ ಕ್ಷಣವೆಂದು ಕಾಣುತ್ತದೆ. ಸ್ಥಳೀಯ ಸಂಪ್ರದಾಯಗಳನ್ನು ಗೌರವಿಸುತ್ತಲೇ, ಕುಟುಂಬ ಪ್ರಾರ್ಥನೆ, ಪವಿತ್ರ ಬಲಿಪೂಜೆ ಹಾಗೂ ದಾನಧರ್ಮಗಳ ಮೂಲಕ ಕ್ರಿಸ್ತನನ್ನು ಜೀವನದ ಕೇಂದ್ರದಲ್ಲಿ ಸ್ಥಾಪಿಸಿ ಕಥೋಲಿಕ ವಿಶ್ವಾಸಿಗಳು ಹೊಸ ವರ್ಷವನ್ನು ಸ್ವಾಗತಿಸುತ್ತಾರೆ.
ಈ ರೀತಿಯಾಗಿ, ಸಂಸ್ಕೃತಿ ಮತ್ತು ವಿಶ್ವಾಸ ಒಂದಾಗಿ ನೂತನ ವರ್ಷವನ್ನು ಭರವಸೆ, ಶಾಂತಿ ಮತ್ತು ಸಮಾಧಾನದ ಸಂದೇಶದೊಂದಿಗೆ ಆರಂಭಿಸುತ್ತವೆ.
ವಿಯೆಟ್ನಾಂನಲ್ಲಿ ವಿಶ್ವಾಸ ಮತ್ತು ಪರಂಪರೆಯ ಸಂಭ್ರಮ
ವಿಯೆಟ್ನಾಂನಲ್ಲಿ ಚಾಂದ್ರಮಾನ ನೂತನ ವರ್ಷವಾದ ಟೆಟ್ (Tết) ಹಬ್ಬದ ಸಿದ್ಧತೆಗಳು ಕ್ರಿಸ್ಮಸ್‌ನ ನಂತರವೇ ಆರಂಭವಾಗುತ್ತವೆ. ಕುಟುಂಬಗಳು ಪಾರಂಪರಿಕ ಆಹಾರಗಳನ್ನು—ವಿಶೇಷವಾಗಿ ಬಾಂಚ್ ಚುಂಗ್ (ಅಕ್ಕಿ ಕೇಕ್‌ಗಳು)—ತಯಾರಿಸಲು ಮುಂದಾಗುತ್ತವೆ. ಮನೆಗಳನ್ನು ಅಲಂಕರಿಸಲಾಗುತ್ತದೆ, ಪಿತೃಗಳ ಸಮಾಧಿಗಳನ್ನು ಶುದ್ಧಗೊಳಿಸಿ ಗೌರವ ಸಲ್ಲಿಸಲಾಗುತ್ತದೆ.
ಕಥೋಲಿಕ ವಿಶ್ವಾಸಿಗಳಿಗಾಗಿ ಈ ಆಚರಣೆಗಳಿಗೆ ಆತ್ಮೀಯ ಅರ್ಥವೂ ಇದೆ. ಹೊಸ ವರ್ಷವನ್ನು ದೇವರ ಮೇಲಿನ ಹೊಸ ವಿಶ್ವಾಸದೊಂದಿಗೆ ಆರಂಭಿಸುವುದು ಅವರ ಮುಖ್ಯ ಉದ್ದೇಶ.
ಹೊಸ ವರ್ಷದ ಮುನ್ನಾದಿನ, ಅನೇಕ ಭಕ್ತರು ದೇವಾಲಯಗಳಲ್ಲಿ ವಿಶೇಷ ಕೃತಜ್ಞತಾ ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸುತ್ತಾರೆ. ಕಳೆದ ವರ್ಷದ ಆಶೀರ್ವಾದಗಳಿಗೆ ಧನ್ಯವಾದ ಅರ್ಪಿಸಿ, ಮುಂದಿನ ವರ್ಷವನ್ನು ದೇವರಿಗೆ ಸಮರ್ಪಿಸುವ ಸಂಕಲ್ಪವನ್ನು ನವೀಕರಿಸುತ್ತಾರೆ.
ಟೆಟ್‌ನ ಮೊದಲ ದಿನಗಳಲ್ಲಿ ವಿಶೇಷ ಉದ್ದೇಶಗಳೊಂದಿಗೆ ಪವಿತ್ರ ಬಲಿಪೂಜೆಗಳು ನೆರವೇರಿಸಲಾಗುತ್ತವೆ. ಮೊದಲ ದಿನ ಶಾಂತಿಗಾಗಿ ಪ್ರಾರ್ಥನೆಗೆ ಮೀಸಲಾಗಿರುತ್ತದೆ. ಎರಡನೇ ದಿನ ಜೀವಿತ ಹಾಗೂ ವಿಧಿವಶರಾದ ತಾತ-ಅಜ್ಜಿಯರು ಮತ್ತು ಪೋಷಕರಿಗಾಗಿ ಅರ್ಪಿಸಲಾಗುತ್ತದೆ. ಮೂರನೇ ದಿನ ಕೆಲಸ, ವಿದ್ಯಾಭ್ಯಾಸ ಮತ್ತು ವೈಯಕ್ತಿಕ ಪ್ರಯತ್ನಗಳ ಪವಿತ್ರೀಕರಣಕ್ಕಾಗಿ ಸಮರ್ಪಿಸಲಾಗುತ್ತದೆ.
ವರ್ಷದ ಆರಂಭದಲ್ಲೇ ದಾನಧರ್ಮಕ್ಕೂ ವಿಶೇಷ ಮಹತ್ವ ನೀಡಲಾಗುತ್ತದೆ. ಅನೇಕ ಧರ್ಮಕೇಂದ್ರಗಳು ಬಡವರನ್ನು ಭೇಟಿ ಮಾಡಿ ಆಹಾರ ವಿತರಿಸುತ್ತವೆ, ವಿಶೇಷವಾಗಿ ಪಾರಂಪರಿಕ ಅಕ್ಕಿ ಕೇಕ್‌ಗಳನ್ನು ಹಂಚುವ ಮೂಲಕ ಕ್ರೈಸ್ತ ಒಗ್ಗಟ್ಟು ಮತ್ತು ಕರುಣೆಯನ್ನು ವ್ಯಕ್ತಪಡಿಸುತ್ತವೆ.
ವಿಯೆಟ್ನಾಂ ಕಥೋಲಿಕ ವಿಶ್ವಾಸಿಗಳಿಗಾಗಿ, ಈ ಎಲ್ಲ ಆಚರಣೆಗಳು ಹೊಸ ವರ್ಷದ ನಿಜವಾದ ಆತ್ಮವಾದ ವಿಶ್ವಾಸದಲ್ಲಿ ಬೇರುಬಿಟ್ಟ ಸಂತೋಷ ಮತ್ತು ಶಾಂತಿಯ ಜೀವನವನ್ನು ಪ್ರತಿಬಿಂಬಿಸುತ್ತವೆ.
ಥೈಲ್ಯಾಂಡಿನಲ್ಲಿ ಕುಟುಂಬ ಮತ್ತು ಪ್ರಾರ್ಥನೆಯ ಸಂಭ್ರಮ
ಥೈಲ್ಯಾಂಡಿನಲ್ಲಿ ಚಾಂದ್ರಮಾನ ನೂತನ ವರ್ಷವನ್ನು ಕಥೋಲಿಕ ಸಮುದಾಯಗಳು ಕುಟುಂಬಗಳು ಒಟ್ಟಾಗಿ ಸೇರಿ, ಪಿತೃಸ್ಮರಣೆ ಮತ್ತು ಭವಿಷ್ಯಕ್ಕಾಗಿ ಪ್ರಾರ್ಥನೆಯ ಆತ್ಮದೊಂದಿಗೆ ಆಚರಿಸುತ್ತವೆ.
LiCAS ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ವಂ. ಗುರು ಪೀಟರ್ ಪಿಯಾಚಾರ್ಟ್ ಮಕೋನ್‌ಖಾರ್ನ್ಪ್ ಅವರು, “ಚಾಂದ್ರಮಾನ ನೂತನ ವರ್ಷವು ಕುಟುಂಬ ಬಾಂಧವ್ಯವನ್ನು ಗಾಢಗೊಳಿಸಲು ಹಾಗೂ ಮುಂದಿನ ವರ್ಷಕ್ಕಾಗಿ ಪ್ರಾರ್ಥಿಸಲು ಒಳ್ಳೆಯ ಅವಕಾಶ,” ಎಂದು ತಿಳಿಸಿದ್ದಾರೆ. ಈ ಸಂದರ್ಭ ವಿಶೇಷ ಕೃತಜ್ಞತಾ ಪವಿತ್ರ ಬಲಿಪೂಜೆಗಳು ನೆರವೇರಿಸಲ್ಪಡುತ್ತವೆ. ಕುಟುಂಬಗಳು ತಮ್ಮ ಆಶೆಗಳು, ಯೋಜನೆಗಳು ಮತ್ತು ಭವಿಷ್ಯವನ್ನು ದೇವರಿಗೆ ಸಮರ್ಪಿಸುತ್ತವೆ.
ವಂ. ಗುರು ಪೀಟರ್ ಅವರು ಮತ್ತಷ್ಟು ಸ್ಪಷ್ಟಪಡಿಸಿದ್ದು, ಕಥೋಲಿಕ ಬೋಧನೆಗಳಿಗೆ ಹೊಂದುವ ಸಂಸ್ಕೃತಿ-ವಿಚಾರಗಳನ್ನು ಉತ್ತೇಜಿಸಬೇಕು; ಆದರೆ ಅಂಧಶ್ರದ್ಧೆಗಳಿಗೆ ಅವಕಾಶ ನೀಡಬಾರದು ಎಂದು ವಿಶ್ವಾಸಿಗಳಿಗೆ ಮನವಿ ಮಾಡಿದ್ದಾರೆ. ಈ ಹಬ್ಬದ ಪ್ರಸಿದ್ಧ ಸಂಪ್ರದಾಯಗಳಲ್ಲಿ ಒಂದಾಗಿದೆ ಕೆಂಪು ಲಕೋಟೆ—ಅಂಗ್ ಪಾವ್—ಹಣವನ್ನು ಒಳಗೊಂಡ ಉಡುಗೊರೆ.
“ಕೃತಜ್ಞತಾ ಪವಿತ್ರ ಬಲಿಪೂಜೆಯ ಅಂತ್ಯದಲ್ಲಿ ನಾವು ಎಲ್ಲರಿಗೂ ಪರಂಪರೆಯ ‘ಅಂಗ್ ಪಾವ್’ ವಿತರಿಸುತ್ತೇವೆ,” ಎಂದು ಅವರು ಹೇಳಿದ್ದಾರೆ. “ಈ ಸಂಪ್ರದಾಯ ಹೊಸ ವರ್ಷದ ಸಂತೋಷವನ್ನು ಧರ್ಮಸಭೆಯ ಸಮುದಾಯದ ದಾನಶೀಲತೆಗೆ ಬಂಧಿಸುತ್ತದೆ.” ಈ ರೀತಿಯಾಗಿ ಭೌತಿಕ ದಾನವು ಸಮುದಾಯ ಜೀವನದ ಒಂದು ಮಹತ್ವದ ಅಭಿವ್ಯಕ್ತಿಯಾಗಿ ಆಧ್ಯಾತ್ಮಿಕ ಒಗ್ಗಟ್ಟಿನೊಂದಿಗೆ ಜೋಡಣೆಯಾಗುತ್ತದೆ.
ಮಲೇಶಿಯಾದಲ್ಲಿ ಸಂಸ್ಕೃತಿ ಮತ್ತು ನಂಬಿಕೆಯ ಸಂಯೋಜನೆ
ಮಲೇಶಿಯಾದಲ್ಲಿ ಚಾಂದ್ರಮಾನ ನೂತನ ವರ್ಷದ ಸಂದರ್ಭ ದೇವಾಲಯಗಳು ಕೆಂಪು ದೀಪಗಳು ಮತ್ತು ಹಬ್ಬದ ಅಲಂಕಾರಗಳಿಂದ ಸಿಂಗಾರಗೊಳ್ಳುತ್ತವೆ. ಈ ಅಲಂಕಾರವು ಹಬ್ಬದ ಸಂತೋಷವನ್ನಷ್ಟೇ ಅಲ್ಲ, ಸಂಸ್ಕೃತಿಯ ಗೌರವವನ್ನೂ ಪ್ರತಿಬಿಂಬಿಸುತ್ತದೆ.
ಹಲವು ಧರ್ಮಕೇಂದ್ರಗಳಲ್ಲಿ ಹೊಸ ವರ್ಷದ ಮೊದಲ ದಿನ ಕೃತಜ್ಞತಾ ಪವಿತ್ರ ಬಲಿಪೂಜೆ ನೆರವೇರಿಸಲಾಗುತ್ತದೆ. ಆದರೆ ಕೆಲವು ವಿಶ್ವಾಸಿಗಳು ಕುಟುಂಬ ಸಂಪ್ರದಾಯಗಳಲ್ಲಿ ಭಾಗವಹಿಸುವುದಕ್ಕಾಗಿ—ಪೂರ್ವಜರ ಗೌರವಾಚರಣೆ ವಿಧಿ ಅಥವಾ ಪರಂಪರೆಯ ಸಿಂಹನೃತ್ಯ ವೀಕ್ಷಣೆಗಾಗಿ—ಬಲಿಪೂಜೆಯನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯೂ ಇದೆ.
ಪೂರ್ವಜರ ಗೌರವಾಚರಣೆಯನ್ನು ಅನೇಕ ಕಥೋಲಿಕ ಕುಟುಂಬಗಳು ಪಿತೃಭಕ್ತಿಯ ಅಭಿವ್ಯಕ್ತಿಯೆಂದು ಪರಿಗಣಿಸುತ್ತವೆ. “ನಿನ್ನ ತಂದೆ ತಾಯಿಯನ್ನು ಗೌರವಿಸು” ಎಂಬ ಆಜ್ಞೆಗೆ ಹೊಂದಿಕೊಂಡಂತೆ, ಇದನ್ನು ಅವರು ಕೃತಜ್ಞತೆ ಮತ್ತು ಸ್ಮರಣೆಯ ಸಾಂಸ್ಕೃತಿಕ ರೂಪವೆಂದು ನೋಡುತ್ತಾರೆ.
ಆದರೆ ಕೆಲವರು ಇದರಲ್ಲಿ ಎಚ್ಚರಿಕೆಯನ್ನು ವ್ಯಕ್ತಪಡಿಸುತ್ತಾ, ಅವರು ಮೃತರಿಗಾಗಿ ಪ್ರಾರ್ಥನೆಯನ್ನು ಮುಖ್ಯವಾಗಿ ಸಕಲ ಆತ್ಮಗಳ ಸ್ಮರಣೆಯ ದಿನದಂದು ಹಾಗೂ ಪವಿತ್ರ ಬಲಿಪೂಜೆಗಳ ಸಂದರ್ಭದಲ್ಲೇ ಕೇಂದ್ರೀಕರಿಸುವುದು ಸೂಕ್ತವೆಂದು ಅಭಿಪ್ರಾಯಪಡುತ್ತಾರೆ.
ಈ ಭಿನ್ನ ಅಭಿಪ್ರಾಯಗಳ ನಡುವೆಯೂ, ಮಲೇಶಿಯಾದಲ್ಲಿ ಚಾಂದ್ರಮಾನ ನೂತನ ವರ್ಷ ಕುಟುಂಬಕೇಂದ್ರಿತ ಹಬ್ಬವಾಗಿಯೇ ಉಳಿದಿದೆ—ಅಲ್ಲಿ ನಂಬಿಕೆ ಮನೆಮನೆಗೂ ಬೆಳೆದು ಬಲವಾಗುತ್ತದೆ.
ಕೃತಜ್ಞತೆ ಮತ್ತು ದಾನಧರ್ಮದ ಋತು
ಏಷ್ಯಾ ಖಂಡದಾದ್ಯಂತ ಚಾಂದ್ರಮಾನ ನೂತನ ವರ್ಷವು ಕುಟುಂಬ, ಕೃತಜ್ಞತೆ ಮತ್ತು ಉದಾರತೆಯ ಮಹತ್ವವನ್ನು ಒತ್ತಿಹೇಳುವ ಪ್ರಮುಖ ಸಂದರ್ಭವಾಗಿ ಉಳಿದಿದೆ. ಈ ಆಚರಣೆಗಳ ಮೂಲಕ, ದೀರ್ಘಕಾಲದ ಸಾಂಸ್ಕೃತಿಕ ಪರಂಪರೆಗಳ ಮಧ್ಯೆಯೇ ಸುವಾರ್ತೆ ನಿಜವಾದ ರೀತಿಯಲ್ಲಿ ಬದುಕಬಹುದು ಎಂಬುದಕ್ಕೆ ಧರ್ಮಸಭೆ ಸಾಕ್ಷಿಯಾಗುತ್ತದೆ.
ಗೌರವ, ಐಕ್ಯತೆ ಮತ್ತು ಪ್ರಾರ್ಥನೆ ಎಂಬ ಮೌಲ್ಯಗಳನ್ನು ಅಳವಡಿಸಿಕೊಂಡು, ಏಷ್ಯಾದ ಕಥೋಲಿಕರು ಚಾಂದ್ರಮಾನ ನೂತನ ವರ್ಷವನ್ನು ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಯ ಋತುವಾಗಿ ,ಪರಂಪರೆಯಲ್ಲಿ ಬೇರು ಬಿಟ್ಟಿದ್ದು, ಕ್ರಿಸ್ತನ ಬೆಳಕಿನಲ್ಲಿ ಪ್ರಕಾಶಮಾನವಾಗಿರುವ ಹಬ್ಬವಾಗಿ ರೂಪಾಂತರಿಸುತ್ತಿದ್ದಾರೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).