ಬ್ರೆಜಿಲ್: ಸಂವೇದನೆ, ಪ್ರೀತಿ ಮತ್ತು ತಾಳ್ಮೆಯೊಂದಿಗೆ ವೃದ್ಧರ ದೇಹ–ಆತ್ಮದ ಆರೈಕೆ
ಲೇಖಕರು: ಸಹೋದರಿ ರೂತ್ ಸಂತಾನ
ದಕ್ಷಿಣ ಬ್ರೆಜಿಲ್‌ನ ರಿಯೋ ದೋ ಓಎಸ್ಟೆ ಪ್ರದೇಶದಲ್ಲಿರುವ ಅಮಲೋದ್ಭವ ಮಾತೆಯ ಕಿರಿಯ ಸಹೋದರಿಯರ ಸಭೆ (ಲಿಟಲ್ ಮಿಷನರೀಸ್ ಆಫ್ ಮೇರಿ ಇಮ್ಯಾಕ್ಯುಲೇಟ್) ಪ್ರತಿದಿನ 100ಕ್ಕೂ ಹೆಚ್ಚು ವೃದ್ಧರನ್ನು ಆರೈಕೆ ಮಾಡುತ್ತಿದೆ. ಸನ್ಯಾಸಿನಿಯರು ಅವರ ಜೀವನದ ವಿವಿಧ ಹಂತಗಳಲ್ಲಿ ಜೊತೆ ನಡೆದು, ಇನ್ನೂ ಕಾರ್ಯನಿರ್ವಹಿಸಲು ಶಕ್ತರಾದವರಿಗೆ ಮನೆಯ ದೈನಂದಿನ ಕೆಲಸಗಳನ್ನು ಮಾಡಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ. ಇದರಿಂದ ವೃದ್ಧರಿಗೆ ಹೊಣೆಗಾರಿಕೆಯ ಭಾವನೆ ಹಾಗೂ ಆತ್ಮಗೌರವ ಮೂಡುತ್ತದೆ.
ಇಲ್ಲಿನ ಪ್ರಸ್ತುತ ಧರ್ಮಗುರು, ಧರ್ಮಕ್ಷೇತ್ರದ ಅತ್ಯಂತ ಹಿರಿಯ ಗುರುಗಳಾಗಿದ್ದು, ಈ ಸೇವೆ ತಮ್ಮ ಪಾಲಿಗೂ ಪರಿವರ್ತನೆ, ಸ್ವೀಕಾರ ಮತ್ತು ಆಂತರಿಕ ಅನ್ವೇಷಣೆಯ ಪಯಣವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಸಣ್ಣ ಕಾರ್ಯಗಳು – ದೊಡ್ಡ ಬದಲಾವಣೆ
ಸಹೋದರಿ ಡೆನಿಸ್ ಕ್ರಿಸ್ಟಿನಾ ಅವರು 30 ವರ್ಷಗಳಿಗೂ ಹೆಚ್ಚು ಕಾಲ ವೃದ್ಧರ ಸೇವೆಯಲ್ಲಿ ಶುಶ್ರೂಷಕಿ ಹಾಗೂ ಸೇವಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದೈನಂದಿನ ಆಡಳಿತಾತ್ಮಕ ಜವಾಬ್ದಾರಿಗಳು ಮತ್ತು ಸೇವಾ ನಿರ್ವಹಣೆಯ ಒತ್ತಡಗಳ ನಡುವೆಯೂ, ಅವರು ದಿನವಿಡೀ ವೃದ್ಧರನ್ನು ಭೇಟಿ ಮಾಡುವುದನ್ನು ನಿಲ್ಲಿಸುವುದಿಲ್ಲ. ಅವರಿಗೆ ಊಟ ಮಾಡಿಸಲು ಸಹಾಯ ಮಾಡುವುದು, ಆರೈಕೆ ಕ್ರಮಗಳನ್ನು ಪೂರೈಸುವುದು ಹಾಗೂ ಅಗತ್ಯ ನೆರವು ನೀಡುವುದು ಅವರ ದಿನಚರಿಯ ಭಾಗವಾಗಿದೆ.
ಸಹೋದರಿ ಡೆನಿಸ್ ಅವರ ಪ್ರಕಾರ, ಕಾಳಜಿಯ ಮನೋಭಾವ ಅತ್ಯಂತ ಮಹತ್ವದ್ದಾಗಿದೆ. “ಸಣ್ಣ ಸಣ್ಣ ಕಾರ್ಯಗಳೇ ವೃದ್ಧರ ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತವೆ. ಅನೇಕ ಬಾರಿ ಅವರು ಮಾತನಾಡಲಾರರು, ನೋವಿನಲ್ಲಿರುತ್ತಾರೆ, ಒಂದು ಲೋಟ ನೀರು ಬೇಕಾದರೂ ಕೇಳಲಾಗುವುದಿಲ್ಲ,” ಎಂದು ಅವರು ಹೇಳಿದರು.
ಮಾತನಾಡುವುದು, ಕೇಳುವುದು, ನೋಡುವುದು ಮತ್ತು ನಡೆಯುವುದು ಮುಂತಾದ ಮೂಲಭೂತ ಕ್ರಿಯೆಗಳು ಕೆಲವೊಮ್ಮೆ ದುರ್ಬಲವಾಗುತ್ತವೆ; ಆಗ ವೃದ್ಧರು ಸಂಪೂರ್ಣವಾಗಿ ಆರೈಕೆದಾರರ ಮೇಲೆ ಅವಲಂಬಿತರಾಗುತ್ತಾರೆ. ಸಹೋದರಿ ಡೆನಿಸ್ ಅವರಿಗೆ, ಇದು ಸುವಾರ್ತೆಯನ್ನು ಕಾರ್ಯರೂಪದಲ್ಲಿ ಬದುಕುವ ಅವಕಾಶವಾಗಿದೆ.
ಪರಿವರ್ತನಶೀಲ ಪ್ರೀತಿ
ದೇಹದ ನೋವು ಮತ್ತು ಮೂಲಭೂತ ಆರೈಕೆಯ ಅಗತ್ಯಗಳ ನಡುವೆಯೂ, ವೃದ್ಧರೊಂದಿಗೆ ಬದುಕುವಾಗ ಪ್ರೀತಿಯೇ ಅತ್ಯಂತ ಮಹತ್ವದ ಅಂಶ ಎಂದು ಸಹೋದರಿ ಡೆನಿಸ್ ಕ್ರಿಸ್ಟಿನಾ ಒತ್ತಿ ಹೇಳಿದ್ದಾರೆ. ಜೀವನದಲ್ಲಿ ಪ್ರೀತಿಯನ್ನು ಅನುಭವಿಸಿದವರು ನೋವಿನಲ್ಲಿಯೂ ಶಾಂತವಾಗಿರುತ್ತಾರೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ಇದಕ್ಕೆ ವಿರುದ್ಧವಾಗಿ, ಜೀವನದಲ್ಲಿ ಪ್ರೀತಿಯನ್ನು ಅನುಭವಿಸದವರು, ಮನೆಯಲ್ಲಿ ಬಂದಾಗ ಅಶಾಂತಿ ಮತ್ತು ವಿರೋಧದ ಮನೋಭಾವ ಹೊಂದಿರುತ್ತಾರೆ. ಅಂತಹವರೊಂದಿಗೆ “ಸ್ವಾಗತದ ಸೌಮ್ಯ ನಡೆ” ಮತ್ತು ಅವರ ನೋವನ್ನು ಅರ್ಥಮಾಡಿಕೊಳ್ಳುವುದು ಅಗತ್ಯ ಎಂದು ಸಹೋದರಿ ಡೆನಿಸ್ ವಿವರಿಸಿದರು. ವಯಸ್ಸಿನೊಂದಿಗೆ ಈ ಮನಸ್ಥಿತಿ ಬದಲಾಗುತ್ತದೆ ಎಂದ ಅವರು, “ಪ್ರೀತಿಯಿಲ್ಲದ ಜಾಗದಲ್ಲಿ ಪ್ರೀತಿಯನ್ನು ನೀಡುವುದು ನಿಜವಾಗಿಯೂ ವ್ಯಕ್ತಿಯನ್ನು ಪರಿವರ್ತಿಸುತ್ತದೆ,” ಎಂದು ಹೇಳಿದರು.
ಆತ್ಮದ ಆರೈಕೆ ಮತ್ತು ಆಧ್ಯಾತ್ಮಿಕ ಸಹಾಯ
ಜೀವನದ ಈ ಹಂತವು ದೇವರೊಂದಿಗೆ ಮುಖಾಮುಖಿಯಾಗುವ ತಯಾರಿಯ ಅವಧಿ ಎಂಬ ಅರಿವು, ದೈಹಿಕ ಆರೈಕೆಯ ಜೊತೆಗೆ ಆಧ್ಯಾತ್ಮಿಕ ಸಹಾಯವನ್ನೂ ಅಗತ್ಯವನ್ನಾಗಿ ಮಾಡುತ್ತದೆ. ಈ ಹಿನ್ನೆಲೆಯಲ್ಲಿ, 93 ವರ್ಷದ ವಂ. ಗುರು ಬೆಲ್ಮಿರೋ ಅವರ ಉಪಸ್ಥಿತಿಯನ್ನು ಸಹೋದರಿಯರು ದೈವಾನುಗ್ರಹದ ಸಂಕೇತವಾಗಿ ನೋಡುತ್ತಾರೆ.
“ಸುತ್ತಮುತ್ತ ಅನೇಕ ಸಮುದಾಯಗಳಿರುವುದರಿಂದ, ಧರ್ಮಕೇಂದ್ರದದ ಗುರುಗಳು ಇಲ್ಲಿ ನಮಗೆ ಲಭ್ಯವಾಗುವಷ್ಟು ಆಧ್ಯಾತ್ಮಿಕ ಸೇವೆಯನ್ನು ನೀಡಲು ಸಾಧ್ಯವಾಗುತ್ತಿರಲಿಲ್ಲ,” ಎಂದು ಸಹೋದರಿ ಡೆನಿಸ್ ಹೇಳಿದರು.
ವಂ. ಗುರು ಬೆಲ್ಮಿರೋ ಅವರು ಪ್ರತಿದಿನ ಬಲಿಪೂಜೆ ಅರ್ಪಿಸುತ್ತಾರೆ, ಇತರ ವೃದ್ಧ ನಿವಾಸಿಗಳಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಾರೆ, ಪಾಪನಿವೇದನಾ ಸಂಸ್ಕಾರವನ್ನು ನೀಡುತ್ತಾರೆ, ಆಶೀರ್ವಾದ ನೀಡುತ್ತಾರೆ ಹಾಗೂ ತಮ್ಮ ದೈಹಿಕ ಮಿತಿಗಳೊಳಗೆ ರೋಗಿಗಳ ಅಭಿಷೇಕ ವಿಧಿಯನ್ನು ನೆರವೇರಿಸುತ್ತಾರೆ.
ವಿನಯ ಮತ್ತು ದೀನತೆಯನ್ನು ಕಲಿಯುತ್ತಿರುವ ಪಯಣ
ವಂ. ಗುರು ಬೆಲ್ಮಿರೋ ಅವರು ಮೂರು ವರ್ಷಗಳ ಹಿಂದೆ, ಧರ್ಮಾಧ್ಯಕ್ಷರ ಕೋರಿಕೆಯ ಮೇರೆಗೆ ಈ ವೃದ್ಧಾಶ್ರಮದಲ್ಲಿ ವಾಸಿಸಲು ಬಂದರು. ಆರಂಭದಲ್ಲಿ ಏನು ಎದುರಾಗಲಿದೆ ಎಂಬ ಅನಿಶ್ಚಿತತೆ ಇದ್ದರೂ, ಅವರು ಇಲ್ಲಿಗೆ ಬರುವ ನಿರ್ಧಾರ ಕೈಗೊಂಡರು. ಆದರೆ, ಸಹೋದರಿಯರ ಸಂತೋಷಪೂರ್ಣ ಸೇವಾಭಾವವನ್ನು ಕಂಡು ಅವರು ಆಶ್ಚರ್ಯಗೊಂಡರು.
“ನಾನು ಈ ಸಂತೋಷವನ್ನು ಸಹೋದರಿಯರಿಗೆ ಹಾಗೂ ಇಲ್ಲಿರುವ ವೃದ್ಧರಿಗೆ ನೀಡಲು ಸಾಧ್ಯವಾದರೆ, ಅದುವೇ ನನ್ನ ಧ್ಯೇಯ,” ಎಂದು ಅವರು ಹೇಳಿದರು. ವೃದ್ಧಾಪ್ಯದ ದೈಹಿಕ ಮಿತಿಗಳನ್ನು ಎದುರಿಸುತ್ತಿರುವ ಅವರು, ಈ ವರ್ಷಗಳನ್ನು ಆತ್ಮಪರಿವರ್ತನೆಯ ಕಾಲವೆಂದು ನೋಡುತ್ತಾರೆ. “ನಾನು ಇನ್ನಷ್ಟು ವಿನಯಶೀಲನಾಗಲು ಕಲಿತಿದ್ದೇನೆ,” ಎಂದು ಅವರು ಒಪ್ಪಿಕೊಳ್ಳುತ್ತಾರೆ.
ವಯಸ್ಸಿನ ಪರಿಣಾಮವಾಗಿ ದೈಹಿಕ ಸಾಮರ್ಥ್ಯ ಮತ್ತು ಸ್ವಾಯತ್ತತೆ ಕಡಿಮೆಯಾಗುವುದೇ ಅವರ ಪಾಲಿಗೆ ದೊಡ್ಡ ಸವಾಲು. ಮಾಡಬೇಕಾದ ಕೆಲಸಗಳು ಎಷ್ಟೋ ಇದ್ದರೂ, ಅವುಗಳನ್ನು ಸದಾ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂಬ ಅರಿವು ಅವರಿಗೆ ಬಂದಿದೆ. ಅವರ ಪ್ರಕಾರ, ಎರಡನೇ ಮಹತ್ವದ ಪಾಠವೆಂದರೆ—ಇತರರಿಂದ ಸಹಾಯ ಸ್ವೀಕರಿಸುವ “ದೀನತೆಯನ್ನು” ಬೆಳೆಸಿಕೊಳ್ಳುವುದು.
ಒಳ್ಳೆಯದನ್ನು ಮಾಡುವ ಅವಕಾಶ
ವಂ. ಗುರು ಬೆಲ್ಮಿರೋ ಅವರಂತೆಯೇ, ಇಲ್ಲಿನ ಇತರ ವೃದ್ಧ ನಿವಾಸಿಗಳೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸಗಳಲ್ಲಿ ಸಹಕರಿಸುತ್ತಾರೆ. ಉದಾಹರಣೆಗೆ, 92 ವರ್ಷದ ದೋನಾ ಲೂರ್ಡೆಸ್ ಹೊಲಿಗೆ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಅಲ್ಲದೆ, ತೋಟದ ಹೂವುಗಳಿಂದ ವೃದ್ಧಾಶ್ರಮದ ವಿವಿಧ ಸ್ಥಳಗಳನ್ನು ಮತ್ತು ವಿಶೇಷವಾಗಿ ಮನೆಯ ಹೊರಭಾಗದಲ್ಲಿರುವಲೂರ್ದು ಮಾತೆಯ ಗವಿಯನ್ನು ಅಲಂಕರಿಸುತ್ತಾರೆ.
“ನನಗೆ ಇಲ್ಲಿ ಬಹಳ ಶಾಂತಿ ಇದೆ. ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡಲು ಸಾಧ್ಯವಾಗುವುದು ದೊಡ್ಡ ಕೃಪೆ,” ಎಂದು ಅವರು ಹೇಳುತ್ತಾರೆ. “ವಸ್ತುಗಳ ಮೂಲಕ ಸಹಾಯ ಮಾಡಲಾಗದಿದ್ದರೂ, ಕನಿಷ್ಠ ಆತ್ಮೀಯವಾಗಿ ಇತರರ ಪಕ್ಕ ನಿಲ್ಲಬಹುದು,” ಎಂದು ಅವರು ಅಗತ್ಯದಲ್ಲಿರುವವರ ಜೊತೆಗೆ ಇರುವ ಕ್ಷಣಗಳನ್ನು ಉಲ್ಲೇಖಿಸಿದರು.
ಯುವಜನರಿಗೆ ಜ್ಞಾನಪೂರ್ಣ ಸಂದೇಶ
ಐದನೇ ವಿಶ್ವ ತಾತ–ಅಜ್ಜಿಯರ ಮತ್ತು ವೃದ್ಧರ ದಿನದ ಸಂದೇಶದಲ್ಲಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಹೀಗೆ ಬರೆದಿದ್ದಾರೆ: “ವೃದ್ಧರ ದೌರ್ಬಲ್ಯಕ್ಕೆ ಯುವಜನರ ಬಲ ಅಗತ್ಯವಿದ್ದರೆ, ಯುವಜನರ ಅನುಭವಶೂನ್ಯತೆಗೆ ಭವಿಷ್ಯವನ್ನು ಜ್ಞಾನದಿಂದ ನಿರ್ಮಿಸಲು ವೃದ್ಧರ ಸಾಕ್ಷ್ಯವೂ ಅಗತ್ಯ.” ವೃದ್ಧರ ಜೀವನಾನುಭವವು, ಅವರನ್ನು ಆಲಿಸಲು ಸಿದ್ಧರಾದವರಿಗೆ ಪಾಠಶಾಲೆಯಂತಾಗುತ್ತದೆ.
ವೃದ್ಧಾಶ್ರಮಕ್ಕೆ ಭೇಟಿ ನೀಡುವ ಯುವಜನರ ಗುಂಪುಗಳ ಬಗ್ಗೆ ಮಾತನಾಡಿದ ಸಹೋದರಿ ಡೆನೀಸ್, “ಅವರು ಇಲ್ಲಿ ಬಂದ ನಂತರ ಹೃದಯದಲ್ಲಿ ಹೊಸ ಶ್ರೀಮಂತಿಕೆಯನ್ನು ಪಡೆದು ಮರಳುತ್ತಾರೆ—ಯಾವುದು ಶಾಶ್ವತವೋ, ಯಾವುದು ನಿಜವಾಗಿಯೂ ಮಹತ್ವದ್ದೋ ಎಂಬುದನ್ನು ಅವರು ಅರಿಯುತ್ತಾರೆ,” ಎಂದು ಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).