Kalinowski-in-Yaounde.jpeg Kalinowski-in-Yaounde.jpeg 

ಯುರೋಪಿನೊಂದಿಗೆ ಸಹಕಾರ ವಿಸ್ತರಿಸಿದ ಕ್ಯಾಮರೂನ್ ಕಥೋಲಿಕ ವಿಶ್ವವಿದ್ಯಾಲಯ

ಮಧ್ಯ ಆಫ್ರಿಕಾದ ಕ್ಯಾಮರೂನ್‌ನ ಕಥೋಲಿಕ ವಿಶ್ವವಿದ್ಯಾಲಯ (UCAC) ಯುರೋಪಿನ ಪ್ರಮುಖ ಕಥೋಲಿಕ ವಿದ್ಯಾಸಂಸ್ಥೆಯಾದ ಲುಬ್ಲಿನ್‌ನ ಎರಡನೇ ಜಾನ್ ಪಾಲ್ ಕಥೋಲಿಕ ವಿಶ್ವವಿದ್ಯಾಲಯದ (KUL) ಜತೆ ಶೈಕ್ಷಣಿಕ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದೆ. ಸಾಮಾಜಿಕ ಪರಿವರ್ತನೆ ಹಾಗೂ ಸಮುದಾಯ ನಿರ್ಮಾಣದಲ್ಲಿ ಕಥೋಲಿಕ ಶಿಕ್ಷಣದ ಪಾತ್ರವನ್ನು ಬಲಪಡಿಸುವ ಉದ್ದೇಶದಿಂದ ಈ ಒಪ್ಪಂದ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಲೇಖಕರು: ಮೋನಿಕಾ ಸ್ಟಾಜೋಸ್ಕ & ವೊಜಿಎಚ್ ರೋಗಚಿನ್

ಮಧ್ಯ ಆಫ್ರಿಕಾದ ಕ್ಯಾಮರೂನ್‌ನ ಕಥೋಲಿಕ ವಿಶ್ವವಿದ್ಯಾಲಯ (UCAC) ಮತ್ತು ಪೋಲ್ಯಾಂಡ್‌ನ ಲುಬ್ಲಿನ್‌ನ ಎರಡನೇ ಜಾನ್ ಪಾಲ್ ಕಥೋಲಿಕ ವಿಶ್ವವಿದ್ಯಾಲಯ (KUL) ನಡುವೆ ವೈಜ್ಞಾನಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅನುಭವ ವಿನಿಮಯಕ್ಕೆ ಸಂಬಂಧಿಸಿದ ಮಹತ್ವದ ಸಹಕಾರ ಒಪ್ಪಂದ ಫೆಬ್ರವರಿಯಲ್ಲಿ ಕೈಗೊಳ್ಳಲಾಗಿದೆ.

ಈ ಒಪ್ಪಂದಕ್ಕೆ UCAC ಮುಖ್ಯಾಧಿಕಾರಿಯಾದ(rector) ಪ್ರಾಧ್ಯಾಪಕರಾದ ವಂ. ಗುರು ಥಾಮಸ್ ಬಿಯೆನ್‌ವೆನು ಟ್ಚೌಂಗ್ವಿ ಮತ್ತು KUL ಮುಖ್ಯಾಧಿಕಾರಿಯಾದ ಪ್ರಾಧ್ಯಾಪಕರಾದ ವಂ. ಗುರು ಮಿರೋಸ್ವಾವ್ ಕಾಲಿನೋವ್ಸ್ಕಿ ಸಹಿ ಹಾಕಿದರು.

ಮಧ್ಯ ಆಫ್ರಿಕಾದ ಕ್ಯಾಮರೂನ್‌ನ ಕಥೋಲಿಕ  ವಿಶ್ವವಿದ್ಯಾಲಯದ ವ್ಯಾಪಕ ಶೈಕ್ಷಣಿಕ ವ್ಯಾಪ್ತಿಯ ಹಿನ್ನೆಲೆಯಲ್ಲಿ, ಈ ಒಪ್ಪಂದವು ಕೇವಲ ಕ್ಯಾಮರೂನ್‌ಗೆ ಸೀಮಿತವಾಗದೇ ಚಾಡ್, ಗ್ಯಾಬೋನ್, ಗಿನಿಯಾ, ಕಾಂಗೋ ಹಾಗೂ ಮಧ್ಯ ಆಫ್ರಿಕಾ ಗಣರಾಜ್ಯ ದೇಶಗಳಿಗೂ ವ್ಯಾಪಿಸುತ್ತದೆ.

ಪೋಲ್ಯಾಂಡ್‌ನ ಕಥೋಲಿಕ ವಿಶ್ವವಿದ್ಯಾಲಯವು ಪೋಲ್ಯಾಂಡ್‌ನ ವಿದ್ಯಾರ್ಥಿಗಳ ಜೊತೆಗೆ ಯುರೋಪಿನ ಉಕ್ರೇನ್, ಬೆಲಾರಸ್, ಸ್ಪೇನ್ ಸೇರಿದಂತೆ 45ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಇದಲ್ಲದೆ ಮಧ್ಯ ಏಷ್ಯಾ ದೇಶಗಳು ಹಾಗೂ ಅಮೆರಿಕದಿಂದಲೂ ಸಾಕಷ್ಟು ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ಯೌಂಡೆಯ ವಿಶ್ವವಿದ್ಯಾಲಯದೊಂದಿಗೆ ಕೈಜೋಡಿಸಿರುವ ಸಹಕಾರವು ಮಧ್ಯ ಮತ್ತು ಪೂರ್ವ ಯುರೋಪ್ ಹಾಗೂ ಮಧ್ಯ ಆಫ್ರಿಕಾ ಪ್ರದೇಶಗಳ ಗಡಿಗಳನ್ನು ಮೀರುವ ಮಹತ್ವ ಹೊಂದಿದೆ ಎಂದು ಪ್ರಾಧ್ಯಾಪಕರಾದ ವಂ. ಗುರು ಮಿರೋಸ್ವಾವ್ ಕಾಲಿನೋವ್ಸ್ಕಿ ತಿಳಿಸಿದ್ದಾರೆ.

“ನಮ್ಮ ಆದ್ಯತೆ ಕೇವಲ ಜ್ಞಾನವಲ್ಲ; ಇಂದಿನ ವಿಶ್ವದ ಸವಾಲುಗಳಿಗೆ ಪ್ರತಿಕ್ರಿಯಿಸುವ ಆಧ್ಯಾತ್ಮಿಕ ಬೆಳವಣಿಗೆಯೂ ಆಗಿದೆ,” ಎಂದು ಅವರು ತಿಳಿಸಿದ್ದಾರೆ.

ಸಾಮಾಜಿಕ ಸವಾಲುಗಳಿಗೆ ಆಫ್ರಿಕನ್ ಅಸ್ತಿತ್ವಮೂಲಕ ದೃಷ್ಟಿಕೋನ

ಈ ಒಪ್ಪಂದವು ಕೆಲವು ತಿಂಗಳುಗಳ ಹಿಂದೆ ವ್ಯಾಟಿಕನ್‌ನಲ್ಲಿ ನಡೆದ ಎರಡು ಮುಖ್ಯಾಧಿಕಾರಿಗಳ ಭೇಟಿಯ ಹಾಗೂ ಚರ್ಚೆಗಳ ಫಲವಾಗಿದೆ.

ಈ ಖಂಡಾಂತರ ಮಟ್ಟದ ಸಹಕಾರದ ಮೂಲಕ ಸಮಕಾಲೀನ ಸವಾಲುಗಳಿಗೆ ಸಾಮಾನ್ಯ ಪರಿಹಾರಗಳನ್ನು ಹುಡುಕುವ ಅವಕಾಶ ದೊರೆಯುತ್ತದೆ ಎಂದು ಎರಡು ವಿಶ್ವವಿದ್ಯಾಲಯಗಳೂ ಅಭಿಪ್ರಾಯಪಟ್ಟಿವೆ. ವಿದ್ಯಾರ್ಥಿ ಮತ್ತು ಅಧ್ಯಾಪಕ ವಿನಿಮಯ ಕಾರ್ಯಕ್ರಮಗಳ ಮೂಲಕ ಈ ಗುರಿಯನ್ನು ಸಾಧಿಸಲು ಉದ್ದೇಶಿಸಲಾಗಿದೆ.

ಮೂರು ದಶಕಗಳಿಗಿಂತ ಹೆಚ್ಚಿನ ಪರಂಪರೆಯನ್ನು ಹೊಂದಿರುವ UCAC ಅನ್ನು ಮಧ್ಯ ಆಫ್ರಿಕಾದ ಧರ್ಮಾಧ್ಯಕ್ಷರ ಮಹಾಸಭೆಗಳು ಸ್ಥಾಪಿಸಿವೆ. ಈ ವಿಶ್ವವಿದ್ಯಾಲಯವು ಹಲವು ವರ್ಷಗಳಿಂದ ತನ್ನ ದೇಶಗಳ ಧರ್ಮಸಭೆ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುವ ನಾಯಕರು ಮತ್ತು ತಜ್ಞರನ್ನು ರೂಪಿಸುತ್ತಿದೆ.

ಇದರ ಅಧ್ಯಯನ ವಿಭಾಗಗಳಲ್ಲಿ ಧರ್ಮಶಾಸ್ತ್ರ, ತತ್ವಶಾಸ್ತ್ರ, ಸಮಾಜ ವಿಜ್ಞಾನ, ಕಾನೂನು ಮತ್ತು ಆರೋಗ್ಯ ವಿಜ್ಞಾನ ಸೇರಿವೆ. ಸ್ಥಳೀಯ ಅಭಿವೃದ್ಧಿ ಅಗತ್ಯಗಳಿಗೆ ಹೊಂದಿಕೊಂಡಂತೆ ಶಿಕ್ಷಣ ನೀಡುವುದು ಇದರ ವೈಶಿಷ್ಟ್ಯ. ಮಾನವ ವ್ಯಕ್ತಿ ಮತ್ತು ಮಾನವ ಗೌರವವೇ ಇದರ ಕಾರ್ಯಧೋರಣೆಯ ಕೇಂದ್ರಬಿಂದು.

UCAC ಈಗಾಗಲೇ ಪಶ್ಚಿಮ ಯುರೋಪಿನ ವಿಶ್ವವಿದ್ಯಾಲಯಗಳೊಂದಿಗೆ ಸಹಕಾರ ನಡೆಸುತ್ತಿದ್ದು, ಈ ಹೊಸ ಒಪ್ಪಂದವು ಆ ವ್ಯಾಪ್ತಿಯನ್ನು ಇನ್ನೊಂದು ಖಂಡದ ಭಾಗದವರೆಗೆ ವಿಸ್ತರಿಸುತ್ತದೆ.

ಲೂಬ್ಲಿನ್‌ನ ಎರಡನೇ ಜಾನ್ ಪಾಲ್ ಕಥೋಲಿಕ ವಿಶ್ವವಿದ್ಯಾಲಯ ಶತಮಾನಕ್ಕೂ ಹೆಚ್ಚು ಪರಂಪರೆಯನ್ನು ಹೊಂದಿದೆ. ಕರೋಲ್ ವೊಯ್ಟಿಲಾ, ಎರಡನೇ ಜಾನ್ ಪಾಲ್ ಎಂಬ ಹೆಸರಿನೊಂದಿಗೆ ಜಗದ್ಗುರುಗಳಾಗುವ ಮೊದಲು  ಇಲ್ಲಿ ಪ್ರಾಧ್ಯಾಪಕರಾಗಿದ್ದರು.

ಸುಮಾರು 10,000 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಈ ವಿಶ್ವವಿದ್ಯಾಲಯವು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆ ಮತ್ತು ಬೋಧನಾ ಕಾರ್ಯಕ್ರಮಗಳನ್ನು ವಿಸ್ತರಿಸುತ್ತಿದೆ. ಆಫ್ರಿಕಾ ವಿಶ್ವವಿದ್ಯಾಲಯದೊಂದಿಗೆ ಈ ಸಹಭಾಗಿತ್ವವು ಅದರ ಮುಂದಿನ ಬೆಳವಣಿಗೆಗೆ ಹೊಸ ಅವಕಾಶವನ್ನು ಒದಗಿಸುತ್ತದೆ.

“ಎಲ್ಲಕ್ಕಿಂತ ಮುಖ್ಯವಾಗಿ, ಮಾನವಿಕ ಹಾಗೂ ಸಮಾಜ ವಿಜ್ಞಾನ ಕ್ಷೇತ್ರಗಳಲ್ಲಿ ಯುರೋಪಿನ ಶೈಕ್ಷಣಿಕ ಅನುಭವವನ್ನು, ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳುವ ಮತ್ತು ನೈಜ ಸಾಮಾಜಿಕ ಸವಾಲುಗಳಿಗೆ ಪ್ರತಿಕ್ರಿಯಿಸುವ ಆಫ್ರಿಕಾದ ಅಸ್ತಿತ್ವಮೂಲ ದೃಷ್ಟಿಕೋನದೊಂದಿಗೆ ಏಕೀಕರಿಸುವ ಅವಕಾಶವನ್ನು ಇದು ಒದಗಿಸುತ್ತದೆ” ಎಂದು ಪ್ರಾಧ್ಯಾಪಕರಾದ ವಂ. ಗುರು. ಕಾಲಿನೋವ್ಸ್ಕಿ ಹೇಳಿದ್ದಾರೆ.

ಸಮುದಾಯ ನಿರ್ಮಾಣ ಮತ್ತು ಸಾಮಾಜಿಕ ಪರಿವರ್ತನೆಗೆ ಸಾಧನಗಳು

“ಅಂತರ್‌ಸಾಂಸ್ಕೃತಿಕ ಸಂವಾದ, ಮಾನವೀಯ ಪರಿಸರಶಾಸ್ತ್ರ, ಸಾರ್ವಜನಿಕ ನೈತಿಕತೆ, ಹಾಗೂ ಶಿಕ್ಷಣದ ಸಿದ್ಧಾಂತ ಮತ್ತು ಅನುಷ್ಠಾನ ಕ್ಷೇತ್ರಗಳಲ್ಲಿ KUL ಹೊಂದಿರುವ ಅನುಭವವು ಆಫ್ರಿಕಾದ UCAC ಪರಿಸರದಲ್ಲಿ ಸೃಜನಾತ್ಮಕವಾಗಿ ಅನ್ವಯಿಸಬಹುದು. ಅಲ್ಲಿ ಶಿಕ್ಷಣವು ಕೇವಲ ವಿದ್ಯಾಭ್ಯಾಸವಲ್ಲ, ಸಾಮಾಜಿಕ ಪರಿವರ್ತನೆ ಮತ್ತು ಸಮುದಾಯ ನಿರ್ಮಾಣದ ಪ್ರಮುಖ ಸಾಧನವಾಗಿದೆ,” ಎಂದು KULನ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಇದೇ ವೇಳೆ, UCAC ಸಹ ಈ ಸಹಕಾರಕ್ಕೆ ತನ್ನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಅನುಭವವನ್ನು ಜೊತೆಯಾಗಿಸುತ್ತಿದೆ. ಯೂರೋಪಿನಲ್ಲಿ ಹಲವಾರು ಬಾರಿ ಗಮನಿಸದಿರುವ ಧಾರ್ಮಿಕ ಮತ್ತು ಸಾಮಾಜಿಕ ಜೀವನವು ದೈನಂದಿನ ಅಸ್ತಿತ್ವದ ಸವಾಲುಗಳೊಂದಿಗೆ ನಿಕಟವಾಗಿ ಜೋಡಿಕೊಂಡಿರುವ ಜಾಗತಿಕ ಪ್ರಕ್ರಿಯೆಗಳ ಬಗ್ಗೆ ಆಫ್ರಿಕಾದ ದೃಷ್ಟಿಕೋನವು ಈ ಸಹಭಾಗಿತ್ವಕ್ಕೆ ಹೊಸ ಆಯಾಮ ನೀಡಲಿದೆ.

ವಲಸೆ, ನೈತಿಕತೆ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಸಹಕಾರ

ಈ ಎರಡು ವಿಶ್ವವಿದ್ಯಾಲಯಗಳ ಸಹಭಾಗಿತ್ವವು ಧರ್ಮಸಭೆಯ ಜಾಗತಿಕ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಪರಸ್ಪರ ಸ್ಪರ್ಧಿಸುವುದಕ್ಕಿಂತಲೂ, ಧಾರ್ಮಿಕ ಸೇವಾ ಶಿಕ್ಷಣ ಕಾರ್ಯವನ್ನು ನೆರವೇರಿಸುವಲ್ಲಿ ಪರಸ್ಪರ ಬೆಂಬಲಿಸುವ ವಿಶ್ವವಿದ್ಯಾಲಯಗಳ ಸಮುದಾಯವಾಗಿಯೇ ಧರ್ಮಸಭೆ ವಿಶ್ವವನ್ನು ನೋಡುತ್ತದೆ.

“ಖಂಡಾಂತರ ಸಂವಾದದ ಚೌಕಟ್ಟಿನಲ್ಲಿ, ವಲಸೆ, ಸಾಂಸ್ಕೃತಿಕ ಬದಲಾವಣೆಗಳು, ಅಥವಾ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಉದ್ಭವಿಸುವ ನೈತಿಕ ಪ್ರಶ್ನೆಗಳ ಕುರಿತು ಸಂಶೋಧನಾ ಮತ್ತು ಬೋಧನಾ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಿ ರೂಪಿಸಬಹುದು,” ಎಂದು ಪ್ರಾಧ್ಯಾಪಕರಾದ ವಂ. ಗುರು ಮಿರೊಸ್ವಾವ್ ಕಾಲಿನೋವ್ಸ್ಕಿ ತಿಳಿಸಿದ್ದಾರೆ.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

13 ಫೆಬ್ರವರಿ 2026, 18:38