Canonizzazione Acutis-Frassati, gi� oltre 12 mila a San Pietro Canonizzazione Acutis-Frassati, gi� oltre 12 mila a San Pietro  (ANSA)

ಪೆನ್ಸಿಲ್ವೇನಿಯಾ: ಪವಿತ್ರ ಪರಮಪ್ರಸಾದ ಅದ್ಭುತಗಳು ಮತ್ತು ಸಂತ ಕಾರ್ಲೋ ಅಕುಟಿಸ್‌ಗೆ ಸಮರ್ಪಿತ ಹೊಸ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ

ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಮಾಲ್ವೆರ್ನ್‌ನಲ್ಲಿ ಇರುವ ಸಂತ ಕಾರ್ಲೋ ಅಕುಟಿಸ್ ಧಾಮ ಹಾಗೂ ಪವಿತ್ರ ಪರಮಪ್ರಸಾದ ಅನುಭವ ಕೇಂದ್ರವು, ಯುವ ಇಟಾಲಿಯನ್ ಸಂತ ಕಾರ್ಲೋ ಅಕುಟಿಸ್ ಅವರ ಆಧ್ಯಾತ್ಮಿಕ ಪ್ರೇರಣೆಯಿಂದ ರೂಪುಗೊಂಡ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ.

ವ್ಯಾಟಿಕನ್ ವರದಿ

ಫೆಬ್ರವರಿ 14, 2026ರಂದು ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಮಾಲ್ವೆರ್ನ್‌ನಲ್ಲಿರುವ ಸಂತ ಕಾರ್ಲೋ ಅಕುಟಿಸ್ ಧಾಮ ಹಾಗೂ ಪವಿತ್ರ ಪರಮಪ್ರಸಾದ ಅನುಭವ ಕೇಂದ್ರವು, ಯುವ ಇಟಾಲಿಯನ್ ಸಂತ ಕಾರ್ಲೋ ಅಕುಟಿಸ್ ಅವರ ಆಧ್ಯಾತ್ಮಿಕ ಪ್ರೇರಣೆಯಿಂದ ರೂಪುಗೊಂಡ ಪವಿತ್ರ ಪರಮಪ್ರಸಾದ ಅದ್ಭುತಗಳಿಗೆ ಸಮರ್ಪಿತ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿತು.

ಮಾಲ್ವೆರ್ನ್ ರಿಟ್ರೀಟ್ ಹೌಸ್‌ನ ಸಂತ ಕಾರ್ಲೋ ಅಕುಟಿಸ್ ಧಾಮದ ಕಾರ್ಯನಿರ್ವಾಹಕ ನಿರ್ದೇಶಕಿ ಮೇರಿ ಬಿಯಾ ಡ್ಯಾಮಿಕೊ ಅವರು, “ಕಾರ್ಲೋ ತಮ್ಮ ಕಾಲದ ತಂತ್ರಜ್ಞಾನವನ್ನು ಬಳಸಿ ಜನರನ್ನು ಪವಿತ್ರ ಪರಮಪ್ರಸಾದದಲ್ಲಿರುವ ಪ್ರಭು ಯೇಸುವಿನತ್ತ ಸೆಳೆದರು. ಈ ಅಪ್ಲಿಕೇಶನ್ ಮೂಲಕ ಆ ಸೇವೆಯನ್ನು ಮುಂದುವರಿಸುತ್ತಿದ್ದೇವೆ,” ಎಂದು ತಿಳಿಸಿದರು.

ಸಂತ ಕಾರ್ಲೋ ಅವರ ತಾಯಿ ಅಂಟೋನಿಯಾ ಅಕುಟಿಸ್ ಅವರ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಈ ಅಪ್ಲಿಕೇಶನ್‌ನಲ್ಲಿ, ಯುವ ಸಂತ ಸಂಗ್ರಹಿಸಿದ ಹಾಗೂ ಧರ್ಮಸಭೆಯಿಂದ ಮಾನ್ಯತೆ ಪಡೆದ ಪವಿತ್ರ ಪರಮಪ್ರಸಾದ ಅದ್ಭುತಗಳ ದಾಖಲೆ ಕಥೆಗಳು ಮೊಬೈಲ್ ರೂಪದಲ್ಲಿ ಒಗ್ಗೂಡಿಸಲ್ಪಟ್ಟಿವೆ.

2006ರಲ್ಲಿ 15ನೇ ವಯಸ್ಸಿನಲ್ಲಿ ನಿಧನರಾದ ಹಾಗೂ 2025 ಸೆಪ್ಟೆಂಬರ್‌ನಲ್ಲಿ ಸಂತ ಘೋಷಿಸಲ್ಪಟ್ಟ ಕಾರ್ಲೋ ಅಕುಟಿಸ್, ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಯುಗಕ್ಕಿಂತ ಮುಂಚೆಯೇ ಇಂಟರ್ನೆಟನ್ನು ಸುವಾರ್ತಾಪ್ರಚಾರದ ಶಕ್ತಿಯುತ ಸಾಧನವೆಂದು ಗುರುತಿಸಿದ್ದರು.

ಅಪ್ಲಿಕೇಶನ್‌ನಲ್ಲಿ “ಲಿವ್ ಲೈಕ್ ಕಾರ್ಲೋ” ಎಂಬ ಸಂವಹನಾತ್ಮಕ ಜೀವನಯಾನ ವಿಭಾಗ, ವಿಶ್ವದ ವಿವಿಧ ಮಂದಿರಗಳಿಂದ ಆನ್‌ಲೈನ್ ಪವಿತ್ರ ಪರಮಪ್ರಸಾದ ಆರಾಧನೆ ಅವಕಾಶ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಯುವಜನರನ್ನು ತಲುಪುವ ಸಾಧನ

ಈ ಉಪಕ್ರಮದ ಕುರಿತು ಸಂತ ಕಾರ್ಲೋ ಅಕುಟಿಸ್ ಅವರ ತಾಯಿ ಅಂಟೋನಿಯಾ ಅಕುಟಿಸ್ ಅವರು, “ಕಾರ್ಲೋ ತಂತ್ರಜ್ಞಾನವನ್ನು ಬಳಸಿ ವಿಶೇಷವಾಗಿ ಪವಿತ್ರ ಪರಮಪ್ರಸಾದದಲ್ಲಿರುವ ಯೇಸು ಕುರಿತು ಮಾತನಾಡುವುದನ್ನು ಪ್ರೀತಿಸುತ್ತಿದ್ದರು. ಅವರ ಭಕ್ತಿ ಯುವಜನರು ಮತ್ತು ಕುಟುಂಬಗಳನ್ನು ಎಲ್ಲೆಡೆ ತಲುಪುವ ರೀತಿಯಲ್ಲಿ  ಮಾರ್ಪಟ್ಟಿರುವುದು ನನಗೆ ಸಂತೋಷ ನೀಡುತ್ತದೆ,” ಎಂದು ಹೇಳಿದರು.

ಪವಿತ್ರ ಪರಮಪ್ರಸಾದ ಅದ್ಭುತಗಳ ಸಂದೇಶವನ್ನು ವಿಶ್ವದಾದ್ಯಂತ ಹರಡುವುದು ಅಗತ್ಯವಿದೆ ಎಂದು ಅವರು ಒತ್ತಿ ಹೇಳುತ್ತಾ, “ಈ ಅಪ್ಲಿಕೇಶನ್ ಆ ಸೇವೆ ಮುಂದುವರಿಸಲು ಪರಿಣಾಮಕಾರಿ ಸಾಧನವಾಗಲಿದೆ,” ಎಂದರು.

ಫಿಲಡೆಲ್ಫಿಯಾದ ಮಹಾಧರ್ಮಾಧ್ಯಕ್ಷ ನೆಲ್ಸನ್ ಜೆ. ಪೆರೆಝ್ ಅವರು ಅಪ್ಲಿಕೇಶನ್ ಅನ್ನು “ಅದ್ಭುತ ಪ್ರಯತ್ನ”ವೆಂದು ಬಣ್ಣಿಸಿ, ಯುವಜನರೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಅವರನ್ನು ಮಾರ್ಗದರ್ಶನ ಮಾಡುವುದು ತಮ್ಮ ಪ್ರಮುಖ ಆದ್ಯತೆ  ಎಂದು ಹೇಳಿದರು.

“ಸಂತ ಕಾರ್ಲೋ ಅಕುಟಿಸ್ ಧಾಮ ಮತ್ತು ಈ ಅಪ್ಲಿಕೇಶನ್, ಮಕ್ಕಳಿಗೆ ಕಥೋಲಿಕ ನಂಬಿಕೆಯನ್ನು ಪರಿಚಯಿಸುವಲ್ಲಿ ಧರ್ಮಗುರುಗಳು, ಶಿಕ್ಷಕರು ಮತ್ತು ಪಾಲಕರಿಗೆ ಸಹಾಯಕವಾಗಲಿದೆ. ಪ್ರತಿದಿನವೂ ನಂಬಿಕೆಯನ್ನು ಬದುಕುವ ಕರೆಯನ್ನು ಇದು ಬಲಪಡಿಸುತ್ತದೆ,” ಎಂದು ಅವರು ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

18 ಫೆಬ್ರವರಿ 2026, 11:52