ASH-WEDNESDAY/MEXICO ASH-WEDNESDAY/MEXICO  (EDGARD GARRIDO)

ತಪಸ್ಸು ಕಾಲದಲ್ಲಿ ಯುರೋಪಿನ ಧರ್ಮಾಧ್ಯಕ್ಷರ ಏಕಮತ ಪ್ರಾರ್ಥನೆ: ಯುದ್ಧದಲ್ಲಿ ಬಲಿಯಾದವರ ಸ್ಮರಣೆ, ಶಾಂತಿಯ ಬೇಡಿಕೆ

ತಪಸ್ಸು ಕಾಲದ ಅಂಗವಾಗಿ ಯುರೋಪಿನ ಧರ್ಮಾಧ್ಯಕ್ಷರ ಮಹಾಸಭೆ (CCEE) ಮತ್ತೊಮ್ಮೆ “ಪವಿತ್ರ ಪರಮ ಪ್ರಸಾದ ಪ್ರಾರ್ಥನಾ ಸರಪಳಿ” ಯನ್ನು ಆರಂಭಿಸಿದೆ. ಈ ಮಹಾದ್ವೀಪೀಯ ಪ್ರಾರ್ಥನಾ ಉಪಕ್ರಮದ ಮೂಲಕ ಯುರೋಪಿನ ವಿವಿಧ ರಾಷ್ಟ್ರಗಳ ಧರ್ಮಸಭೆಗಳು ಯುದ್ಧದಲ್ಲಿ ಬಲಿಯಾದವರ ಸ್ಮರಣಾರ್ಥ ಹಾಗೂ ಶಾಂತಿಯ ಸ್ಥಾಪನೆಗಾಗಿ ವಿಶೇಷ ಬಲಿಪೂಜೆಗಳನ್ನು ಅರ್ಪಿಸಲಿವೆ.

ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್

CCEE ಪ್ರಕಟಣೆಯ ಪ್ರಕಾರ, ಯುರೋಪಿನ ಧರ್ಮಸಭೆ ಪವಿತ್ರ ಪರಮ ಪ್ರಸಾದದ ಬಲಿಪೀಠದ ಸುತ್ತ ಏಕಮನಸ್ಕವಾಗಿ ಕೂಡಿಕೊಂಡು ಪ್ರಭುವಿನಿಂದ ಶಾಂತಿಯನ್ನು ಬೇಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ “ಸರಪಳಿ” ಉಪಕ್ರಮವು ತಪಸ್ಸು ಕಾಲದ ನಿಯತ ಆಚರಣೆಯಾಗಿ ರೂಪುಗೊಂಡಿದ್ದು, ಏಕತೆ ಮತ್ತು ಭರವಸೆಯ ಚಿಹ್ನೆಯಾಗಿದೆ.

ಬೂದಿ ಬುಧವಾರದಿಂದ ತಪಸ್ಸು ಕಾಲದ ಅಂತ್ಯವರೆಗೆ CCEEಗೆ ಸೇರಿರುವ ಪ್ರತಿಯೊಂದು ರಾಷ್ಟ್ರೀಯ ಧರ್ಮಾಧ್ಯಕ್ಷರ ಮಹಾಸಭೆಯೂ ಕನಿಷ್ಠ ಒಂದು ಬಲಿಪೂಜೆಯನ್ನು ಯುದ್ಧದಲ್ಲಿ ಬಲಿಯಾದವರಿಗಾಗಿ ಹಾಗೂ “ಶಸ್ತ್ರರಹಿತ ಮತ್ತು ನಿರಾಯುಧ ಶಾಂತಿ”ಗಾಗಿ ಅರ್ಪಿಸಲಿದೆ.

ಉಕ್ರೇನ್, ಪವಿತ್ರ ಭೂಮಿ ಹಾಗೂ ಹಿಂಸಾಚಾರದಿಂದ ಬಳಲುತ್ತಿರುವ ಎಲ್ಲಾ ಪ್ರದೇಶಗಳಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.

ಧರ್ಮಾಧ್ಯಕ್ಷರು, ಪೂಜ್ಯ ಜಗದ್ಗುರುಗಳ “ನಾವು ಶಾಂತಿಗೆ ಮನಸ್ಸು ತೆರೆಯೋಣ. ಅದನ್ನು ಅಸಾಧ್ಯವೆಂದು ಭಾವಿಸದೆ ಸ್ವೀಕರಿಸಿ ಅರಿತುಕೊಳ್ಳೋಣ. ಶಾಂತಿ ಕೇವಲ ಗುರಿಯಲ್ಲ; ಅದು ಸಾನ್ನಿಧ್ಯವೂ ಹೌದು, ಒಂದು ಪಯಣವೂ ಹೌದು” ಎಂದು 59ನೇ ವಿಶ್ವ ಶಾಂತಿ ದಿನದ ಸಂದೇಶದಲ್ಲಿ ನೀಡಿದ ಮನವಿಯನ್ನು ಉಲ್ಲೇಖಿಸಿದರು.

ಬೂದಿ  ಬುಧವಾರದಂದು ಪೂಜ್ಯ ಜಗದ್ಗುರುಗಳು ರೋಮ್ ನಗರದ ಅವೆಂಟೈನ್ ಬೆಟ್ಟದಲ್ಲಿರುವ ಸಂತ ಸಾಬಿನಾ ಬಸಿಲಿಕಾದಲ್ಲಿ ಬಲಿಪೂಜೆಯ ಮೂಲಕ ತಪಸ್ಸು ಕಾಲವನ್ನು ಆರಂಭಿಸಲಿದ್ದಾರೆ. ಈ ಆಚರಣೆಗೆ ಮುನ್ನ ಸಂತ ಅಂಸೆಲ್ಮೊ ದೇವಾಲಯದಿಂದ ಸಾಂಪ್ರದಾಯಿಕ “ಸ್ಟಾತಿಯೋ” ಹಾಗೂ ಪ್ರಾಯಶ್ಚಿತ್ತ ಮೆರವಣಿಗೆ ನಡೆಯಲಿದೆ.

ಫೆಬ್ರವರಿ 22ರಿಂದ 27ರವರೆಗೆ ವ್ಯಾಟಿಕನ್ ಅಪೋಸ್ತೋಲಿಕ ಅರಮನೆಯಲ್ಲಿ ನಡೆಯುವ ವಾರ್ಷಿಕ ತಪಸ್ಸು ಕಾಲದ ಆಧ್ಯಾತ್ಮಿಕ ಕಾರ್ಯಗಳಲ್ಲಿ ಪೂಜ್ಯ ಜಗದ್ಗುರುಗಳು ರೋಮನ್ ಕ್ಯೂರಿಯ ಸದಸ್ಯರೊಂದಿಗೆ ಪಾಲ್ಗೊಳ್ಳಲಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

17 ಫೆಬ್ರವರಿ 2026, 11:35