2026.01.29 Terra Santa - Holy Land 2026.01.29 Terra Santa - Holy Land 

ಪವಿತ್ರ ಭೂಮಿಯ ಪಾಲಕರು: ಶುಭ ಶುಕ್ರವಾರದ ಕಾಣಿಕೆ, ಜೆರುಸಲೇಮ್ ಧರ್ಮಸಭೆಯೊಂದಿಗಿನ ಏಕತೆಯ ಜೀವಂತ ಸಾಕ್ಷಿ

ಪವಿತ್ರ ಭೂಮಿಯ ಪಾಲಕರು ಹೊರಡಿಸಿದ ಪತ್ರದಲ್ಲಿ, ಶುಭ ಶುಕ್ರವಾರದ ವಾರ್ಷಿಕ ಕಾಣಿಕೆಯನ್ನು “ಜೆರುಸಲೇಮ್ ಧರ್ಮಸಭೆಯೊಂದಿಗಿನ ಸ್ಪರ್ಶಿಸಬಹುದಾದ ಏಕತೆಯ ಚಿಹ್ನೆ” ಎಂದು ವಿವರಿಸಿ, ಸಂಕಷ್ಟಗಳು ತೀವ್ರವಾಗಿರುವ ಈ ಕಾಲದಲ್ಲಿ, ವಿಶ್ವದ ವಿಶ್ವಾಸಿಗಳ ಪ್ರಾರ್ಥನೆ, ಸಹಾನುಭೂತಿ ಮತ್ತು ಪಾಲ್ಗೊಳ್ಳುವಿಕೆಯ ವ್ಯಕ್ತ ರೂಪವೇ ಈ ಕಾಣಿಕೆ ಎಂದು ಹೇಳಿದ್ದಾರೆ.

ಲೇಖಕರು: ಕೀಲ್ ಗಸ್ಸಿ

ಬೂದಿ ಬುಧವಾರವು ತಪಸ್ಸು ಕಾಲದ ಆರಂಭ ಮಾತ್ರವಲ್ಲ, ಪವಿತ್ರ ಭೂಮಿಯನ್ನು ಸ್ಮರಿಸುವ ಆತ್ಮೀಯ ಕರೆದೂ ಆಗಿದೆ. ಪ್ರತಿ ವರ್ಷ ನಡೆಯುವ ಪಾಂಟಿಫಿಕಲ್ ಕಲೆಕ್ಷನ್ ಪ್ರೊ ಟೆರ್ರಾ ಸ್ಯಾಂಕ್ಟಾ ಕಾಣಿಕೆ (ಪವಿತ್ರ ಭೂಮಿಗಾಗಿ ಕಾಣಿಕೆ) ಮಧ್ಯಪೂರ್ವದ ಪವಿತ್ರ ತೀರ್ಥಕ್ಷೇತ್ರಗಳಿಗೆ ವಿಶ್ವಾಸಿಗಳ ಬೆಂಬಲವನ್ನು ತೋರಿಸುತ್ತದೆ.

ಜಗತ್ತಿನ ಕ್ರೈಸ್ತರ ಏಕತೆಯನ್ನು ಬಲಪಡಿಸುವ ಜಗದ್ಗುರುಗಳ ಆಶಯದಿಂದ ಪ್ರೇರಿತವಾದ ಈ ಕಾಣಿಕೆ ಪರಂಪರೆಯಿಂದ ಮಹಾ ಶುಕ್ರವಾರದಂದು ನಡೆಯುತ್ತದೆ. ಈ ವರ್ಷ ಬೂದಿ ಬುಧವಾರದಂದು ಪವಿತ್ರ ಭೂಮಿಯ ಪಾಲಕರಾದ ವಂ. ಗುರು ಫ್ರಾನ್ಸಿಸ್ಕೊ ಇಯೆಲ್ಪೋ, OFM ಅವರು ಪತ್ರದ ಮೂಲಕ ವಿಶ್ವಾಸಿಗಳನ್ನು ಈ ಕಾರ್ಯದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದರು.

‘ಗಾಯಗೊಂಡ ನಿರೀಕ್ಷೆ’

“ಪವಿತ್ರ ವಾರ ಸಮೀಪಿಸುತ್ತಿರುವ ಈ ಸಮಯದಲ್ಲಿ, ದೇವಪುತ್ರನು ‘ಅಂತ್ಯದವರೆಗೆ’ ತನ್ನ ಜೀವವನ್ನು ಅರ್ಪಿಸಿದ ಹಾಗೂ ಧರ್ಮಸಭೆ ಹುಟ್ಟಿದ ಪವಿತ್ರ ಭೂಮಿಯತ್ತ ನಮ್ಮ ಹೃದಯ ಮತ್ತು ದೃಷ್ಟಿ ಮರಳುತ್ತವೆ,” ಎಂದು ಪವಿತ್ರ ಭೂಮಿಯ ಪಾಲಕರಾದ ವಂ. ಗುರು ಫ್ರಾನ್ಸಿಸ್ಕೊ ಇಯೆಲ್ಪೋ ತಿಳಿಸಿದ್ದಾರೆ. ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಪಾಸ್ಕಾ ರಹಸ್ಯವೇ ತಮ್ಮ ಸೇವೆಗೆ ಅರ್ಥ ಮತ್ತು ನಿರೀಕ್ಷೆಯ ಮೂಲವಾಗಿಯೇ ಉಳಿದಿದೆ ಎಂದು ಅವರು ಸೂಚಿಸಿದರು.

ಆದರೆ ಪರಿಸ್ಥಿತಿ ಗಂಭೀರವಾಗಿದೆ. ಗಾಜಾ, ಪ್ಯಾಲೆಸ್ತೀನ್, ಇಸ್ರಾಯೇಲ್, ಲೆಬನಾನ್ ಮತ್ತು ಸಿರಿಯಾದಲ್ಲಿ ಯುದ್ಧ, ಹಿಂಸಾಚಾರ ಹಾಗೂ ಅಸ್ಥಿರತೆ ಮುಂದುವರಿದಿವೆ. ಯಾತ್ರಿಕರ ಆಗಮನ ಕುಂಠಿತವಾದ ಹಿನ್ನೆಲೆ, ಜೀವನೋಪಾಯ ಕಳೆದುಕೊಂಡ ಅನೇಕ ಕುಟುಂಬಗಳ ಸಂಕಷ್ಟ ಇನ್ನಷ್ಟು ಗಾಢವಾಗಿದೆ.

ಯುವಜನರು ತಮ್ಮ ಸ್ವದೇಶದಲ್ಲೇ ಭವಿಷ್ಯವನ್ನು ಕಲ್ಪಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ ಎಂದು ವಂ. ಗುರು ಇಯೆಲ್ಪೋ ತಿಳಿಸಿದ್ದಾರೆ. “ಬೆತ್ಲೆಹೇಮ್, ಜೆರುಸಲೇಮ್, ಇಸ್ರಾಯೇಲ್ ಉತ್ತರ ಭಾಗ, ಹಾಗೆಯೇ ಲೆಬನಾನ್ ಮತ್ತು ಸಿರಿಯಾದಲ್ಲಿ ನಿರೀಕ್ಷೆಯೇ ಗಾಯಗೊಂಡಂತೆ ಕಾಣುತ್ತಿದೆ,” ಎಂದು ಅವರು ಒತ್ತಿ ಹೇಳಿದರು.

ಸಹಭಾಗಿತ್ವದ ಸ್ಪಷ್ಟ ಸಂಕೇತ

ಈ ಹಿನ್ನೆಲೆಯಲ್ಲಿ ಪೂಜ್ಯ ಜಗದ್ಗುರುಗಳ ಮಾತುಗಳು ಮತ್ತಷ್ಟು ತೀವ್ರ ಅರ್ಥ ಪಡೆಯುತ್ತವೆ. ಪವಿತ್ರ ಭೂಮಿಯಲ್ಲಿ ಶಾಂತಿಗಾಗಿ ಪ್ರಾರ್ಥನೆ ಮತ್ತು ಉಪವಾಸಕ್ಕೆ ಮರಳುವಂತೆ ಅವರು ವಿಶ್ವದ ವಿಶ್ವಾಸಿಗಳನ್ನು ಕರೆದಿದ್ದು, ಸಂಘರ್ಷ ಅಂತ್ಯಗೊಳಿಸುವಂತೆ ಗಾಢ ಮನವಿ ಮಾಡಿದ್ದಾರೆ.

ಆದ್ದರಿಂದ ಪವಿತ್ರ ಶುಕ್ರವಾರ ಅಲ್ಲಿನ ಜನರಿಗೆ ವಿಶೇಷ ಮಹತ್ವ ಹೊಂದುತ್ತದೆ. ವಂ. ಗುರು ಫ್ರಾನ್ಸಿಸ್ಕೊ ಇಯೆಲ್ಪೋ ಅವರ ಮಾತಿನಲ್ಲಿ, ಪಾಂಟಿಫಿಕಲ್ ಕಲೆಕ್ಷನ್ ಪ್ರೊ ಟೆರ್ರಾ ಸ್ಯಾಂಕ್ಟಾ ಸಂಗ್ರಹ(ಪವಿತ್ರ ಭೂಮಿಗಾಗಿ ಕಾಣಿಕೆ) “ಸರಳ ಐಕ್ಯತಾ ಸೂಚನೆಯಲ್ಲ; ಅದು ಜೆರುಸಲೇಮ್ ಧರ್ಮಸಭೆಯೊಂದಿಗೆ ಸಹಭಾಗಿತ್ವದ ಸ್ಪಷ್ಟ ಸಂಕೇತವಾಗಿದೆ.”

ಈ ಸಂಗ್ರಹದ ಮೂಲಕ ಶಾಲೆಗಳು, ಧರ್ಮಕೇಂದ್ರಗಳು, ದಾನಕಾರ್ಯಗಳು, ಸಾಮಾಜಿಕ ಯೋಜನೆಗಳು ಮತ್ತು ತುರ್ತು ನೆರವು ಕಾರ್ಯಕ್ರಮಗಳು ಬೆಂಬಲ ಪಡೆಯುತ್ತವೆ. ಇದರ ಅರ್ಥ, ಪವಿತ್ರ ಭೂಮಿಯಲ್ಲಿ ಕ್ರೈಸ್ತ ಸಾನ್ನಿಧ್ಯವನ್ನು ಜೀವಂತವಾಗಿರಿಸುವುದಾಗಿದೆ.

“ಇಂದು ನಮಗೆ ಕಟ್ಟಡಗಳನ್ನು ಮಾತ್ರವಲ್ಲ, ಸಂಬಂಧಗಳು, ವಿಶ್ವಾಸ ಮತ್ತು ನಿರೀಕ್ಷೆಯನ್ನು ಮರುನಿರ್ಮಿಸಲು ಕರೆಯಲಾಗಿದೆ,” ಎಂದು ಪಾಲಕರು ತಿಳಿಸಿದ್ದಾರೆ. ಶಿಕ್ಷಣ, ಮುಂದಿನ ತಲೆಮಾರು, ಕುಟುಂಬಗಳು ಹಾಗೂ ಭೇಟಿಯ ಸಂಸ್ಕೃತಿ ಮತ್ತು ಶಾಂತಿಯ ಬೀಜ ಮೂಡುವ ಸ್ಥಳಗಳ ಮೂಲಕ ಈ ಕಾರ್ಯ ಸಾಧ್ಯವೆಂದು ಅವರು ವಿವರಿಸಿದರು.

ಕ್ರಿಸ್ತನ ಶಿಲುಬೆ ಪಾಡು ಮತ್ತು ತ್ಯಾಗವನ್ನು ಧ್ಯಾನಿಸುವ ಪವಿತ್ರ ಶುಕ್ರವಾರದ ಸಂದರ್ಭದಲ್ಲಿ, ಪವಿತ್ರ ಭೂಮಿಯನ್ನು ಮರೆಯಬಾರದೆಂದು ಪ್ರಾರ್ಥನೆ ಹಾಗೂ ಸಹಾಯದ ಮೂಲಕ ಅವರನ್ನು ಸ್ಮರಿಸಬೇಕೆಂದು ವಂ. ಗುರು ಇಯೆಲ್ಪೋ ಮನವಿ ಮಾಡಿದ್ದಾರೆ

“ನಿಮ್ಮ ಸಮೀಪತೆ ನಮಗೆ ಸಹೋದರತ್ವ ಮತ್ತು ನಿರೀಕ್ಷೆಯ ಅಮೂಲ್ಯ ಸಂಕೇತವಾಗಿದೆ,” ಎಂದು ಅವರು ಹೇಳಿದ್ದಾರೆ. ಪವಿತ್ರ ಭೂಮಿಯ ಸಹೋದರ-ಸಹೋದರಿಯರೂ ವಿಶ್ವಕ್ಕಾಗಿ ನಿರಂತರವಾಗಿ ಪ್ರಾರ್ಥಿಸುತ್ತಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

18 ಫೆಬ್ರವರಿ 2026, 12:02