2026.02.07 Abby Avellino Talitha Kum 2026.02.07 Abby Avellino Talitha Kum  

“ಶಾಂತಿ ಮಾನವ ಘನತೆಯಿಂದ ಆರಂಭವಾಗುತ್ತದೆ”:ತಲಿಥಾ ಕುಮ್ ಸಂಯೋಜಕಿ

ಫೆಬ್ರವರಿ 8ರಂದು ಧರ್ಮಸಭೆ ಮಾನವ ಕಳ್ಳಸಾಗಣೆಯ ವಿರುದ್ಧ ಪ್ರಾರ್ಥನೆ ಮತ್ತು ಚಿಂತನೆಯ ವಿಶ್ವ ದಿನವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ತಲಿಥಾ ಕುಮ್‌ನ ಅಂತರರಾಷ್ಟ್ರೀಯ ಸಂಯೋಜಕಿ ಸಹೋದರಿ ಆ್ಯಬಿ ಅವೆಲಿನೊ ಅವರು ಮಾನವ ಕಳ್ಳಸಾಗಣೆಯ ವಿರುದ್ಧದ ಹೋರಾಟದಲ್ಲಿ ಪ್ರಸ್ತುತ ಸವಾಲುಗಳು ಮತ್ತು ಆದ್ಯತೆಗಳನ್ನು ವಿವರಿಸಿದ್ದಾರೆ.

ಲೇಖಕರು: ಫ್ರಾನ್ಸೆಸ್ಕಾ ಮೆರ್ಲೊ

ಮಾನವ ಕಳ್ಳಸಾಗಣೆ ಇಂದು ಜಗತ್ತಿನ ಅತ್ಯಂತ ವ್ಯಾಪಕವಾಗಿದ್ದರೂ ಕಡಿಮೆ ಕಾಣಿಸಿಕೊಳ್ಳುವ ಹಿಂಸೆಯ ರೂಪಗಳಲ್ಲಿ ಒಂದಾಗಿ ಉಳಿದಿದೆ ಎಂದು ವರದಿಯಾಗಿದೆ. ಇದು ಖಂಡಾಂತರಗಳಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತಿದ್ದು, ಹೊಸ ತಂತ್ರಜ್ಞಾನಗಳು, ವಲಸೆ ಮಾರ್ಗಗಳು ಮತ್ತು ಜಾಗತಿಕ ಅಸಮಾನತೆಗಳಿಗೆ ಹೊಂದಿಕೊಂಡು ಬಹುತೇಕ ಮೌನವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. ಪ್ರತಿ ವರ್ಷ ಫೆಬ್ರವರಿ 8ರಂದು ಆಚರಿಸಲಾಗುವ ಮಾನವ ಕಳ್ಳಸಾಗಣೆ ವಿರುದ್ಧದ ಪ್ರಾರ್ಥನೆ ಮತ್ತು ಚಿಂತನೆಯ ವಿಶ್ವ ದಿನ ಈ ಅಡಗಿದ ಅಪರಾಧವನ್ನು ಬೆಳಕಿಗೆ ತರುವ ಉದ್ದೇಶ ಹೊಂದಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಒಂದು ವಾರದ ಕಾರ್ಯಕ್ರಮಗಳು

ಫೆಬ್ರವರಿ 4ರಿಂದ 8ರವರೆಗೆ ರೋಮಿನಲ್ಲಿ 12ನೇ ವಿಶ್ವ ದಿನಾಚರಣೆಯ ಅಂಗವಾಗಿ ಸಭೆಗಳು, ಪ್ರಾರ್ಥನೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಸರಣಿ ನಡೆದಿರುವುದಾಗಿ ತಿಳಿದುಬಂದಿದೆ. ತಲಿಥಾ ಕುಮ್ ಸೇರಿದಂತೆ ಮಾನವ ಕಳ್ಳಸಾಗಣೆಯನ್ನು ಎದುರಿಸಲು ಬದ್ಧವಾಗಿರುವ ವಿವಿಧ ಸಂಸ್ಥೆಗಳ ಜಾಲದ ಮೂಲಕ ಪ್ರಚಾರಗೊಂಡ ಈ ವಾರ, “ಶಾಂತಿ ಮಾನವ ಘನತೆಯಿಂದ ಆರಂಭವಾಗುತ್ತದೆ” ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಜಾಗೃತಿ, ತಡೆಗಟ್ಟುವಿಕೆ ಮತ್ತು ನಿಖರ ಕ್ರಮಗಳ ಮೇಲೆ ಕೇಂದ್ರೀಕರಿಸಿದೆ ಎಂದು ಆಯೋಜಕರು ವಿವರಿಸಿದ್ದಾರೆ.

ಬದುಕುಳಿದವರ ಜೊತೆಯ ಪ್ರಯಾಣ

ಈ ಕಾರ್ಯದಲ್ಲಿ ಪ್ರತಿದಿನ ತೊಡಗಿರುವವರಲ್ಲಿ ತಲಿಥಾ ಕುಮ್‌ನ ಅಂತರರಾಷ್ಟ್ರೀಯ ಸಂಯೋಜಕಿ ಹಾಗೂ ಮೇರಿಕ್ನಾಲ್ ಸಹೋದರಿ ಆ್ಯಬಿ ಅವೆಲಿನೊ ಕೂಡ ಒಬ್ಬರಾಗಿದ್ದಾರೆ ಎಂದು ವರದಿ ಹೇಳುತ್ತದೆ. ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಕಳ್ಳಸಾಗಣೆಯ ಸ್ವರೂಪ ಹೇಗೆ ಬದಲಾಗುತ್ತಿದೆ, ತಡೆಗಟ್ಟುವಿಕೆ ಏಕೆ ತುರ್ತಾಗಿ ಅಗತ್ಯ ಮತ್ತು ವಲಸೆ ಹಾಗೂ ಶೋಷಣೆಗೆ ಪ್ರತಿಕ್ರಿಯಿಸುವಲ್ಲಿ ಮಾನವ ಘನತೆ ಕೇಂದ್ರದಲ್ಲಿರಬೇಕೆಂದು ವಿವರಿಸಿದ್ದಾರೆ.

ಫಿಲಿಪೈನ್ಸ್‌ನಲ್ಲಿ ಜನಿಸಿ, ಕುಟುಂಬದ ವಲಸೆಯ ನಂತರ ಹೆಚ್ಚಿನ ಕಾಲ ಅಮೆರಿಕದಲ್ಲಿ ಬೆಳೆದ ಸಹೋದರಿ ಆ್ಯಬಿ, “ನಾನು ಹೃದಯದಿಂದ ಫಿಲಿಪಿನೋ, ಆದರೆ ಸಂಸ್ಕೃತಿಗಳ ನಡುವೆ ಬದುಕಿದ ಅನುಭವ ನನ್ನನ್ನು ರೂಪಿಸಿದೆ,” ಎಂದು ತಿಳಿಸಿದ್ದಾರೆ. ಜಪಾನಿನಲ್ಲಿ ಅವರ ವಲಸಿಗರು ಮತ್ತು ಶರಣಾರ್ಥಿಗಳ ಮಿಷನರಿ ಸೇವೆ, ಅನೆಕ ಬಾರಿ ಮಹಿಳೆಯರು ಮತ್ತು ಮಕ್ಕಳ ಜೊತೆಗಾದ ಅನುಭವಗಳು ಮಾನವ ಕಳ್ಳಸಾಗಣೆ ವಿರುದ್ಧದ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಕಾರಣವಾದವು ಎಂದು ಅವರು ಹೇಳಿದ್ದಾರೆ. “ಅವರ ಅನುಭವಗಳನ್ನು ಆಲಿಸುತ್ತಾ, ವಲಸೆ ಮತ್ತು ಕಳ್ಳಸಾಗಣೆ ಎಷ್ಟು ನಿಕಟವಾಗಿವೆ ಎಂಬುದನ್ನು ಅರಿತುಕೊಂಡೆ,” ಎಂದು ಅವರು ವಿವರಿಸಿದ್ದಾರೆ.

ಈ ಅನುಭವವೇ ಅವರನ್ನು ಈಗ 100ಕ್ಕಿಂತ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಲಿಥಾ ಕುಮ್ ಜಾಲದತ್ತ ಕರೆದೊಯ್ದಿತು ಎಂದು ತಿಳಿದುಬಂದಿದೆ. ಕಳ್ಳಸಾಗಣೆ ಬಗ್ಗೆ ಜಾಗೃತಿ ಹೆಚ್ಚಿದರೂ ಸಮಸ್ಯೆ ಇನ್ನೂ ವಿಸ್ತರಿಸುತ್ತಲೇ ಇದೆ ಎಂದು ಸಹೋದರಿ ಆ್ಯಬಿ ಹೇಳಿದ್ದಾರೆ. “ಇಂದು ಹೆಚ್ಚು ಜನರು ಇದನ್ನು ಮಾನವ ಘನತೆಯ ಉಲ್ಲಂಘನೆ ಎಂದು ಗುರುತಿಸುತ್ತಿದ್ದಾರೆ, ಆದರೆ ಅನೇಕ ಪ್ರಕರಣಗಳು ಇನ್ನೂ ಅಡಗಿವೆ; ನಮಗೆ ಕಾಣುವ ಸಂಖ್ಯೆಗಳು ಸಂಪೂರ್ಣ ವಾಸ್ತವವನ್ನು ಪ್ರತಿಬಿಂಬಿಸುವುದಿಲ್ಲ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಂಚನೆಗೆ ಒಳಗಾಗಿ ವಂಚನೆಗೆ ತಳ್ಳಲ್ಪಟ್ಟವರು

ಮಾನವ ಕಳ್ಳಸಾಗಣೆಯ ವಿಧಾನಗಳು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಬದಲಾಗಿವೆ ಎಂದು ಸಹೋದರಿ ಆ್ಯಬಿ ವಿವರಿಸಿದ್ದಾರೆ. “ಈಗ ಕೇವಲ ಅತ್ಯಂತ ಬಡವರು ಅಥವಾ ಕಡಿಮೆ ವಿದ್ಯಾವಂತರೇ ಗುರಿಯಾಗುವುದಿಲ್ಲ,” ಎಂದು ಅವರು ತಿಳಿಸಿದ್ದಾರೆ. “ಇಂದು ಕಳ್ಳಸಾಗಣೆಯ ಜಾಲಗಳು ಹೆಚ್ಚು ವಿದ್ಯಾವಂತರಾದ, ಹಲವು ಭಾಷೆಗಳನ್ನು ಮಾತನಾಡಬಲ್ಲ ಯುವಜನರನ್ನು ಹೆಚ್ಚಾಗಿ ಗುರಿಯಾಗಿಸುತ್ತಿವೆ,” ಎಂದು ಅವರು ಹೇಳಿದ್ದಾರೆ.

ನೇಮಕಾತಿ ಪ್ರಕ್ರಿಯೆ ಹೆಚ್ಚಾಗಿ ಆನ್‌ಲೈನ್ ಮೂಲಕ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಮೊದಲ ನೋಟಕ್ಕೆ ಕಾನೂನುಬದ್ಧ ಹಾಗೂ ವೃತ್ತಿಪರವಾಗಿ ಕಾಣುವ ಉದ್ಯೋಗ ಆಫರ್‌ಗಳನ್ನು ನೀಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. “ಅನೇಕ ಬಲಿಪಶುಗಳು ತಾವು ನಿಜವಾದ ಉದ್ಯೋಗಕ್ಕೆ ಅರ್ಜಿ ಹಾಕುತ್ತಿದ್ದೇವೆ ಎಂದು ನಂಬುತ್ತಾರೆ,” ಎಂದು ಸಹೋದರಿ ಆ್ಯಬಿ ಹೇಳಿದ್ದಾರೆ. “ಅವರಿಗೆ ಒಪ್ಪಂದಗಳು, ವೀಸಾಗಳು ಮತ್ತು ಸ್ಪಷ್ಟ ಷರತ್ತುಗಳನ್ನು ತೋರಿಸಲಾಗುತ್ತದೆ,” ಎಂದು ಅವರು ತಿಳಿಸಿದ್ದಾರೆ.

ತಲಿಥಾ ಕುಮ್‌ನ ಅನುಭವದ ಪ್ರಕಾರ, ಆಫ್ರಿಕಾ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಫಿಲಿಪೈನ್ಸ್‌ನಲ್ಲಿ ನೇಮಕಾತಿ ಪ್ರಮಾಣ ಹೆಚ್ಚು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ. ಕೆಲವು ಬಾಧಿತರನ್ನು ಬಲವಂತದ ಆನ್‌ಲೈನ್ ವಂಚನಾ ಕಾರ್ಯಾಚರಣೆಗಳಿಗೆ ಕಳ್ಳಸಾಗಣೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ; ವಿಶೇಷವಾಗಿ ಮ್ಯಾನ್ಮಾರ್, ಕಾಂಬೋಡಿಯಾ ಮತ್ತು ಥೈಲ್ಯಾಂಡ್ ಗಡಿಭಾಗಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿವೆ ಎಂದು ಅವರು ವಿವರಿಸಿದ್ದಾರೆ.

“ಅವರಿಗೆ ಥೈಲ್ಯಾಂಡ್‌ನಲ್ಲಿ ಕೆಲಸ ನೀಡುವುದಾಗಿ ಹೇಳಲಾಗುತ್ತದೆ ಆದರೆ ಅವರು ಕೊನೆಗೆ ಕಠಿಣ ಭದ್ರತೆಯ  ಆವರಣಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಅಲ್ಲಿ ಒಮ್ಮೆ ಪ್ರವೇಶಿಸಿದರೆ ಹೊರಬರಲು ಸಾಧ್ಯವಾಗುವುದಿಲ್ಲ,” ಎಂದು ಅವರು ಹೇಳಿದ್ದಾರೆ.

ಬಾಧಿತರು ತಮ್ಮ ನೇಮಕಾತಿ ಮತ್ತು ಪ್ರಯಾಣ ವೆಚ್ಚವನ್ನು ತೀರಿಸಲು ಬಲವಂತವಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಅವರು ವಿವರಿಸಿದ್ದಾರೆ. “ಅವರಿಗೆ ತರಬೇತಿ ನೀಡಲಾಗುತ್ತದೆ, ಪಾತ್ರಗಳನ್ನು ಹಂಚಲಾಗುತ್ತದೆ ಮತ್ತು ಫಲಿತಾಂಶ ನೀಡುವಂತೆ ಒತ್ತಡ ಹೇರಲಾಗುತ್ತದೆ. ಇದು ಸಂಘಟಿತ ಅಪರಾಧ—ಆಧುನಿಕ ದಾಸ್ಯತ್ವದ ರೂಪ,” ಎಂದು ಸಹೋದರಿ ಆ್ಯಬಿ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಬಂಧ

ಸಂಘರ್ಷಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳು ಅತ್ಯಂತ ಕಠಿಣವಾಗಿವೆ ಎಂದು ಸಹೋದರಿ ಆ್ಯಬಿ ವಿವರಿಸಿದ್ದಾರೆ. “ಕೆಲವು ಪ್ರದೇಶಗಳಿಗೆ ಪ್ರವೇಶವೇ ಬಹಳ ಸೀಮಿತವಾಗಿದೆ,” ಎಂದು ಅವರು ತಿಳಿಸಿದ್ದಾರೆ. “ಅನೇಕ ಸಂದರ್ಭಗಳಲ್ಲಿ, ಯಾರಾದರೂ ಗಡಿಯನ್ನು ತಲುಪಿದ ನಂತರವೇ ಸಹಾಯ ನೀಡಲು ಸಾಧ್ಯವಾಗುತ್ತದೆ.”

ತಲಿಥಾ ಕುಮ್ ಜಾಲವು ಈ ಗಡಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಸಹಯೋಗಿಗಳೊಂದಿಗೆ ಕೆಲಸ ಮಾಡುತ್ತಿದ್ದು, ತಪ್ಪಿಸಿಕೊಂಡು ಬರುವವರಿಗೆ ತಕ್ಷಣದ ಬೆಂಬಲ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಕಾರಣಕ್ಕಾಗಿ ಪ್ರತಿಬಂಧ ಅವರ ಕಾರ್ಯದ ಕೇಂದ್ರಬಿಂದುವಾಗಿದೆ  “ಮಾನವ ಕಳ್ಳಸಾಗಣೆ ಸಂಭವಿಸುವ ಮೊದಲು ಅದನ್ನು ನಿಲ್ಲಿಸುವುದು ನಮ್ಮ ಗುರಿ,” ಎಂದು ಆ್ಯಬಿ  ತಿಳಿಸಿದ್ದಾರೆ. ಸುರಕ್ಷಿತ ವಲಸೆಯ ಕುರಿತು ಶಿಕ್ಷಣ ಮತ್ತು ಜಾಗೃತಿ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ. “ವಲಸೆ ಮಾನವ ಹಕ್ಕು, ಆದರೆ ಜನರು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಬೇಕು ಮತ್ತು ಅದರ ಅಪಾಯಗಳನ್ನು ಅರ್ಥಮಾಡಿಕೊಳ್ಳಬೇಕು,” ಎಂದು ಅವರು ಹೇಳಿದ್ದಾರೆ.

ತಾವು ತಿಳಿದಿದ್ದ ಒಬ್ಬ ಗುರುಗಳು, ವಿದೇಶಕ್ಕೆ ಹೋಗಲು ಸಿದ್ಧವಾಗಿದ್ದ ಕುಟುಂಬ ಸದಸ್ಯರ ಉದ್ಯೋಗದ ಆಫರ್ ಪರಿಶೀಲಿಸಲು ತಮ್ಮನ್ನು ಕೇಳಿಕೊಂಡ ಘಟನೆನ್ನು ಅವರು ನೆನಪಿಸಿಕೊಂಡಿದ್ದಾರೆ. “ನಮ್ಮ ಜಾಲದ ಮೂಲಕ ಆ ಕಂಪನಿ ಅಸ್ತಿತ್ವದಲ್ಲೇ ಇಲ್ಲ ಎಂದು ನಾವು ಕಂಡುಕೊಂಡೆವು,” ಎಂದು ಅವರು ತಿಳಿಸಿದ್ದಾರೆ. “ಆ ಸರಳ ಪರಿಶೀಲನೆ ಒಂದು ಅಪಾಯಕಾರಿ ಪರಿಸ್ಥಿತಿಯನ್ನು ತಡೆಯಿತು.”

ಸಹೋದರಿ ಆ್ಯಬಿ ಅವರ ಪ್ರಕಾರ, ಅನೇಕ ಬಾಧಿತರು ತಾವು ಮಾನವ ಕಳ್ಳಸಾಗಣೆಗೆ ಒಳಗಾಗಿದ್ದೇವೆ ಎಂಬುದನ್ನೇ ಗುರುತಿಸುವುದಿಲ್ಲ. “ಅನೇಕ ಬಾರಿ, ಕಳ್ಳಸಾಗಣೆ ನಡೆಸುವವರು ಅವರೇ ನಂಬಿದ ವ್ಯಕ್ತಿಗಳಾಗಿರುತ್ತಾರೆ,ಕೆಲವರು ನಮಗೆ ಹೇಳಿರುವಂತೆ, ತಮ್ಮ ಸಂಬಂಧಿಕರು ಅಥವಾ ಪರಿಚಿತರೇ ತಮ್ಮನ್ನು ಶೋಷಿಸುತ್ತಾರೆ ಎಂದು ಅವರು ಎಂದಿಗೂ ಊಹಿಸಿರಲಿಲ್ಲ.” ಕೆಲವು ಸಂದರ್ಭಗಳಲ್ಲಿ, ತಮ್ಮದೇ ರಕ್ಷಣೆಗೆ ಬದಲಾಗಿ ಇತರರನ್ನು ನೇಮಿಸಬೇಕೆಂದು ಬಾಧಿತರನ್ನು ಒತ್ತಾಯಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ದೀರ್ಘಕಾಲೀನ ಗಾಯ

“ಮಾನವ ಕಳ್ಳಸಾಗಣೆಯ ಪರಿಣಾಮ ಬದುಕುಳಿದವರ ಮೇಲೆ ದೀರ್ಘಕಾಲ ಉಳಿಯುತ್ತದೆ ಕಳ್ಳಸಾಗಣೆ ಆಳವಾದ ಮಾನಸಿಕ ಗಾಯವನ್ನು ಉಂಟುಮಾಡುತ್ತದೆ, ಇದು ವ್ಯಕ್ತಿಯ ಘನತೆ ಮತ್ತು ಭದ್ರತೆಯ ಭಾವನೆಯನ್ನು ದುರ್ಬಲಗೊಳಿಸುತ್ತದೆ,” ಎಂದು ಅವರು ವಿವರಿಸಿದ್ದಾರೆ. ಚೇತರಿಕೆಗೆ ಸಮಯ, ನಿರಂತರ ಸಹವಾಸ ಮತ್ತು ಸ್ಥಿರ ಉದ್ಯೋಗದ ಅವಕಾಶ ಅಗತ್ಯ.  ಆರ್ಥಿಕ ಸ್ಥಿರತೆ ಇಲ್ಲದಿದ್ದರೆ, ಜನರು ಮತ್ತೆ ಅಪಾಯಕ್ಕೆ ಒಳಗಾಗುತ್ತಾರೆ,” ಎಂದು ಸಹೋದರಿ ಆ್ಯಬಿ ತಿಳಿಸಿದ್ದಾರೆ.

ಇತರರು ಇದೇ ನೋವನ್ನು ಅನುಭವಿಸಬಾರದು ಎಂಬ ಉದ್ದೇಶದಿಂದ, ಕೆಲವು ಬದುಕುಳಿದವರು ತಮ್ಮ ಅನುಭವಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಮುಂದಾಗಿದ್ದಾರೆ. ವಿಶೇಷವಾಗಿ ಯುವಜನರಿಗೆ ಅವರ ಸಾಕ್ಷ್ಯಗಳು ಮಹತ್ವದ್ದಾಗಿವೆ ಎಂದು ಸಹೋದರಿ ಅಬ್ಬಿ ಅಭಿಪ್ರಾಯಪಟ್ಟಿದ್ದಾರೆ.

ತಾವು ಭೇಟಿಯಾದ ಕೆಲ ಬದುಕುಳಿದವರು ಆರಂಭದಲ್ಲಿ ತಾವು ಕಳ್ಳಸಾಗಣೆಯ ಬಲಿಪಶುಗಳೆಂದು ಅರಿತಿರಲಿಲ್ಲ ಎಂದು ಅವರು ನೆನಪಿಸಿಕೊಂಡಿದ್ದಾರೆ. “ಅನೇಕರು ‘ಇದು ಮಾನವ ಕಳ್ಳಸಾಗಣೆ ಎಂದು ನನಗೆ ಗೊತ್ತಿರಲಿಲ್ಲ’ ಎಂದು ಹೇಳುತ್ತಾರೆ,  “ತಮ್ಮ ಹಕ್ಕುಗಳು ಏನು ಮತ್ತು ತಮ್ಮಿಂದ ಏನು ಕಸಿದುಕೊಳ್ಳಲಾಗಿದೆ ಎಂಬುದನ್ನು ಅರ್ಥಮಾಡಿಕೊಂಡಾಗ, ನಿಜವಾಗಿ ಏನಾಯಿತು ಎಂಬುದು ಅವರಿಗೆ ಸ್ಪಷ್ಟವಾಗುತ್ತದೆ,” ಎಂದು ಅವರು ವಿವರಿಸಿದ್ದಾರೆ. ಈ ಅರಿವಿನ ಕೊರತೆ ತಡೆಗಟ್ಟುವಿಕೆಯನ್ನು ಇನ್ನಷ್ಟು ತುರ್ತುಗೊಳಿಸುತ್ತದೆ ಎಂದು ಅವರು ಸೂಚಿಸಿದ್ದಾರೆ.

ಈ ಕಾರಣದಿಂದ ತಲಿಥಾ ಕುಮ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ. “ನಮ್ಮ ಸಹೋದರಿಯರು ಶಾಲೆಗಳು, ಧರ್ಮಕೇಂದ್ರಗಳು ಮತ್ತು ಸಮುದಾಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಮಕ್ಕಳಿಂದಲೇ ಜಾಗೃತಿ ಪ್ರಾರಂಭವಾಗಬೇಕು ಎಂಬ ಕಾರಣಕ್ಕೆ ನಾವು ಅವರಿಂದಲೇ ಆರಂಭಿಸುತ್ತೇವೆ,” ಎಂದು ಅವರು ವಿವರಿಸಿದ್ದಾರೆ. ಯುವಜನರು ಅತೀವ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದ್ದರೂ, ಬದಲಾವಣೆಯ ಶಕ್ತಿಯೂ ಅವರಲ್ಲೇ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ಯುವಜನರು ವಿಷಯವನ್ನು ಅರ್ಥಮಾಡಿಕೊಂಡಾಗ, ಅವರು ಪರಸ್ಪರ ರಕ್ಷಣೆ ಮಾಡಿಕೊಳ್ಳಬಹುದು,” ಎಂದು ಅವರು ತಿಳಿಸಿದ್ದಾರೆ.

ಮಾನವ ಕಳ್ಳಸಾಗಣೆಯ ಮಾನವೀಯ ವಿಷಯ, ಕೇವಲ ರಾಜಕೀಯವಲ್ಲ

ವಲಸೆ ಮತ್ತು ದಿನೇದಿನೇ ಕಠಿಣವಾಗುತ್ತಿರುವ ವಲಸೆ ಕಾನೂನುಗಳ ಕುರಿತು ನಡೆಯುತ್ತಿರುವ ಜಾಗತಿಕ ಚರ್ಚೆಗಳನ್ನು ಉಲ್ಲೇಖಿಸುತ್ತಾ, ಸಹೋದರಿ ಆ್ಯಬಿ ಅವೆಲಿನೊ ಅವರು  ಕಾನೂನು ಮಾನವ ಕೇಂದ್ರೀಕೃತವಾಗಿರಬೇಕೆಂದು ಆಗ್ರಹಿಸುತ್ತಾರೆ.

“ವಲಸೆಯನ್ನು ಅನೇಕ ಬಾರಿ ಕೇವಲ ರಾಜಕೀಯ ವಿಷಯವಾಗಿ ಮಾತ್ರ ನೋಡಲಾಗುತ್ತದೆ, ಆದರೆ ಮೂಲತಃ ಇದು ಮಾನವೀಯ ವಿಷಯ.” ತಮ್ಮದೇ ಕುಟುಂಬದ ವಲಸೆ ಅನುಭವ ಹಾಗೂ ಇಂದಿನ ಅನೇಕ ವಲಸಿಗರು ಅನುಭವಿಸುವ ಭಯವನ್ನು ಅವರು ನೆನಪಿಸಿಕೊಂಡಿದ್ದಾರೆ.

“ಬಹಿಷ್ಕಾರ ಅಥವಾ ದಂಡನೆ ಮೇಲೆ ಆಧಾರಿತ ನೀತಿಗಳು ಜನರ ಅಸುರಕ್ಷತೆಯನ್ನು ಹೆಚ್ಚಿಸುತ್ತವೆ, ಅವು ವಲಸೆ ಅಥವಾ ಮಾನವ ಕಳ್ಳಸಾಗಣೆಯ ಮೂಲ ಕಾರಣಗಳನ್ನು ಪರಿಹರಿಸುವುದಿಲ್ಲ” ಎಂದು ಅವರು ವಿವರಿಸಿದ್ದಾರೆ.

“ಶಾಂತಿ ಘನತೆಯಿಂದ ಆರಂಭವಾಗುತ್ತದೆ”

ಈ ವರ್ಷದ ವಿಶ್ವ ದಿನದ ಸಂದೇಶ ಸ್ಪಷ್ಟವಾಗಿದೆ “ಶಾಂತಿ ಘನತೆಯಿಂದ ಆರಂಭವಾಗುತ್ತದೆ, ಮಾನವ ಘನತೆ ರಕ್ಷಿಸಲ್ಪಡದಿದ್ದರೆ, ಶಾಂತಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ” .ಮಾನವ ಕಳ್ಳಸಾಗಣೆಯನ್ನು ವಿಶಾಲ ಜಾಗತಿಕ ಸಮಸ್ಯೆಗಳಿಂದ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ.ದಾರಿದ್ರ್ಯ, ಹವಾಮಾನ ವಿಪತ್ತುಗಳು, ಸಂಘರ್ಷ ಮತ್ತು ಬಲವಂತದ ವಲಸೆ ಜನರನ್ನು ಹೆಚ್ಚು ಅಸುರಕ್ಷಿತರನ್ನಾಗಿಸುತ್ತವೆ ಎಂದು ಅವರು ವಿವರಿಸಿದ್ದಾರೆ. “ಜನರು ತಮ್ಮ ಮನೆಗಳನ್ನು ಸುಲಭವಾಗಿ ಬಿಟ್ಟುಬರುವುದಿಲ್ಲ, ಅವರು ಬಲವಂತವಾಗಿ ಸ್ಥಳಾಂತರಗೊಳ್ಳುವಾಗ, ಕಳ್ಳಸಾಗಣೆಯವರು ಲಾಭ ಪಡೆಯಲು ಸಿದ್ಧವಾಗಿರುತ್ತಾರೆ.”

ಈ ಕಾರಣದಿಂದ ತಲಿಥಾ ಕುಮ್‌ನ ಕಾರ್ಯವು ರಕ್ಷಣೆ ಮತ್ತು ಜಾಗೃತಿಗೆ ಮಾತ್ರ ಸೀಮಿತವಾಗಿಲ್ಲ; ಅಂತರರಾಷ್ಟ್ರೀಯ ಮಟ್ಟದಲ್ಲಿ ವಕಾಲತ್ತು ಮತ್ತು ಸಹಕಾರವನ್ನೂ ಒಳಗೊಂಡಿದೆ ಎಂದು ಅವರು ವಿವರಿಸಿದ್ದಾರೆ. ಜಾಲವು ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಜಾಗತಿಕವಾಗಿ ಸಂಪರ್ಕದಲ್ಲಿದ್ದು, ಮಾಹಿತಿಯನ್ನು ಹಂಚಿಕೊಳ್ಳುತ್ತದೆ ಮತ್ತು ಗಡಿಗಳಾಚೆಗೂ ಪ್ರತಿಕ್ರಿಯಿಸುತ್ತದೆ.

“ಇದು ಒಂದೇ ಗುಂಪು ಒಂಟಿಯಾಗಿ ಮಾಡಬಹುದಾದ ಕೆಲಸವಲ್ಲ,ಇದಕ್ಕೆ ಸಂಸ್ಥೆಗಳು, ಸರ್ಕಾರಗಳು, ಸಮುದಾಯಗಳು ಮತ್ತು ವ್ಯಕ್ತಿಗಳ ನಡುವಿನ ಹಂಚಿಕೊಂಡ ಜವಾಬ್ದಾರಿ ಮತ್ತು ಒಗ್ಗಟ್ಟು ಅಗತ್ಯ” ಎಂದು ಸಹೋದರಿ ಆ್ಯಬಿ ವಿನಂತಿಸಿದರು.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

07 ಫೆಬ್ರವರಿ 2026, 17:56