VIETNAM-CHINA-WOMEN-TRAFFICKING-CRIME-RESCUES VIETNAM-CHINA-WOMEN-TRAFFICKING-CRIME-RESCUES  (AFP or licensors)

ಮಾನವ ಕಳ್ಳಸಾಗಣೆ ವಿರುದ್ಧ ಬಲಿಷ್ಠ ಧರ್ಮಕ್ಷೇತ್ರೀಯ ಕ್ರಮಕ್ಕೆ ಫಿಲಿಪ್ಪೀನ್ಸ್‌ನ ಧರ್ಮಾಧ್ಯಕ್ಷರ ಆಗ್ರಹ

“ಮಾನವ ಕಳ್ಳಸಾಗಣೆ ವಿರುದ್ಧ ಅಂತಾರಾಷ್ಟ್ರೀಯ ಪ್ರಾರ್ಥನೆ ಹಾಗೂ ಜಾಗೃತಿ ದಿನ”ದ ಹಿನ್ನೆಲೆಯಲ್ಲಿ, ಫಿಲಿಪ್ಪೀನ್ಸ್‌ನ ಧರ್ಮಾಧ್ಯಕ್ಷರು ಮಾನವ ಕಳ್ಳಸಾಗಣೆಯ ವಿರುದ್ಧ ಹೋರಾಡಲು ಧರ್ಮಕ್ಷೇತ್ರಗಳಲ್ಲಿ ಇನ್ನಷ್ಟು ದೃಢವಾದ ಹಾಗೂ ಸಂಘಟಿತ ರಚನೆಗಳನ್ನು ಬಲಪಡಿಸುವಂತೆ ಕರೆ ನೀಡಿದ್ದಾರೆ. ದೇಶವು ವಿವಿಧ ರೂಪಗಳ ಶೋಷಣೆಯಿಂದ ತೀವ್ರವಾಗಿ ಬಳಲುತ್ತಿದೆ ಎಂದು ಅವರು ಎಚ್ಚರಿಸಿದ್ದು, ಧರ್ಮಸಭೆಯ ಸಮುದಾಯಗಳು ಈ ಸಮಸ್ಯೆಯನ್ನು ಗಂಭೀರವಾಗಿ ಎದುರಿಸಬೇಕೆಂದು ಒತ್ತಿ ಹೇಳಿದ್ದಾರೆ.

ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತೂರಾ, RCJ

ಮಾನವ ಕಳ್ಳಸಾಗಣೆ ವಿರುದ್ಧದ ರಾಷ್ಟ್ರೀಯ ಪ್ರಾರ್ಥನೆ ಮತ್ತು ಜಾಗೃತಿ ದಿನ (ಫೆಬ್ರವರಿ 1) ಆಚರಿಸುತ್ತಿರುವ ಸಂದರ್ಭದಲ್ಲಿ, ಫಿಲಿಪ್ಪೀನ್ಸ್ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನ (CBCP) ಮಾನವ ಕಳ್ಳಸಾಗಣೆಯನ್ನು ಎದುರಿಸಲು ಧರ್ಮಸಭೆಯ ರಚನೆಗಳನ್ನು ಮತ್ತಷ್ಟು ಬಲಪಡಿಸಬೇಕೆಂದು ಪುನರುಚ್ಚರಿಸಿದೆ.

ಪ್ರಕಟಣೆಯಲ್ಲಿ, ದೇಶವು ಇನ್ನೂ ಅನೇಕ ರೂಪಗಳ ಶೋಷಣೆಗೆ ಒಳಗಾಗುತ್ತಿದೆ ಎಂದು ಧರ್ಮಾಧ್ಯಕ್ಷರು ಎಚ್ಚರಿಸಿದ್ದಾರೆ. ಅಕ್ರಮ ನೇಮಕಾತಿ, ಬಲವಂತದ ಕಾರ್ಮಿಕತೆ, ಲೈಂಗಿಕ ಶೋಷಣೆ ಹಾಗೂ ವಿಶೇಷವಾಗಿ ಮಕ್ಕಳನ್ನು ಗುರಿಯಾಗಿಸಿಕೊಂಡು ಹೆಚ್ಚುತ್ತಿರುವ ಆನ್‌ಲೈನ್ ದುರುಪಯೋಗಗಳ ಅಪಾಯವನ್ನು ಅವರು ಉಲ್ಲೇಖಿಸಿದ್ದಾರೆ.

ಮಾನವ ಕಳ್ಳಸಾಗಣೆಯನ್ನು “ಗಂಭೀರ ಮತ್ತು ನಿರಂತರ ಸಮಸ್ಯೆ” ಎಂದು ವಿವರಿಸಿದ ಅವರು, ಇದು ವಿಶೇಷವಾಗಿ ನಗರ ಪ್ರದೇಶಗಳಲ್ಲಿನ ಅನೇಕ ಫಿಲಿಪ್ಪೀನೋಗಳನ್ನು ಬಾಧಿಸುತ್ತಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಧರ್ಮಸಭೆ ಮತ್ತು ಸರ್ಕಾರದ ನಡುವೆ ಹೆಚ್ಚಿನ ಸಹಕಾರ ಅಗತ್ಯವೆಂದು ಅವರು ಒತ್ತಿ ಹೇಳಿದರು.

ಮಾನವ ಕಳ್ಳಸಾಗಣೆ ವಿರುದ್ಧದ ವಿಶ್ವಸಂಸ್ಥೆಯ ಜಾಗತಿಕ ಕಾರ್ಯಕ್ರಮದ (UN Global Programme against Trafficking in Human Beings) ಮಾಹಿತಿಯನ್ನು ಉಲ್ಲೇಖಿಸಿ, ಫಿಲಿಪ್ಪೀನ್ಸ್‌ನಲ್ಲಿ ಬಲಿಯಾದವರಲ್ಲಿ ಹೆಚ್ಚಿನವರು ವಯಸ್ಕ ಮಹಿಳೆಯರು, ಅವರ ನಂತರ ಅಪ್ರಾಪ್ತ ವಯಸ್ಕ ಬಾಲಕಿಯರು ಎಂದು ವರದಿ ತಿಳಿಸಿದೆ. ಬಹುಪಾಲು ಪ್ರಕರಣಗಳು ಮೆಟ್ರೋ ಮನಿಲಾ ಹಾಗೂ ಇತರೆ ನಗರ ಕೇಂದ್ರಗಳಿಂದಲೇ ಉದ್ಭವಿಸುತ್ತಿವೆ ಎಂದು ಸಮೀಕ್ಷೆ ಸೂಚಿಸಿದೆ.

ಡಿಜಿಟಲ್ ಅಪಾಯ

ಡಿಜಿಟಲ್ ವೇದಿಕೆಗಳ ವಿಸ್ತರಣೆಯೊಂದಿಗೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಮಾನವ ಕಳ್ಳಸಾಗಣೆದಾರರು ಮೋಸದ ಆನ್‌ಲೈನ್ ನೇಮಕಾತಿ ಜಾಲಗಳನ್ನು ಬಳಸಿ, ದೇಶದೊಳಗೂ ಹಾಗೂ ವಿದೇಶಗಳಲ್ಲಿಯೂ ಉದ್ಯೋಗದ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಬಲೆಗೆ ಕೆಡವುತ್ತಿದ್ದಾರೆ. ಬಡತನ, ಶಿಕ್ಷಣದ ಕೊರತೆ, ಸಶಸ್ತ್ರ ಸಂಘರ್ಷ ಹಾಗೂ ಪದೇಪದೇ ಸಂಭವಿಸುವ ನೈಸರ್ಗಿಕ ವಿಪತ್ತುಗಳು ಮಾನವ ಕಳ್ಳಸಾಗಣೆಗೆ ಜನರನ್ನು ಹೆಚ್ಚು ಅಸುರಕ್ಷಿತರನ್ನಾಗಿ ಮಾಡುತ್ತವೆ ಎಂದು ಧರ್ಮಾಧ್ಯಕ್ಷರು ಹೇಳಿದರು. ಆರ್ಥಿಕ ಸ್ಥಿರತೆಗಾಗಿ ಹಂಬಲಿಸುವ ಜನರನ್ನು ಗುರಿಯಾಗಿಸಿಕೊಂಡು, ಈ ದುರ್ಬಲ ಪರಿಸ್ಥಿತಿಗಳನ್ನು ಆನ್‌ಲೈನ್ ಮಾರ್ಗಗಳ ಮೂಲಕ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದರು.

“ಮಾನವ ಕಳ್ಳಸಾಗಣೆ ಕೇವಲ ಸಾಮಾಜಿಕ ಸಮಸ್ಯೆಯಲ್ಲ; ಅದು ಆಳವಾದ ನೈತಿಕ ಪ್ರಶ್ನೆ. ಇದು ಹೃದಯ ಪರಿವರ್ತನೆ ಮತ್ತು ವ್ಯವಸ್ಥಾತ್ಮಕ ಬದಲಾವಣೆಯನ್ನು ಅಗತ್ಯಪಡಿಸುತ್ತದೆ,” ಎಂದು ಧರ್ಮಾಧ್ಯಕ್ಷರು ಒತ್ತಿ ಹೇಳಿದರು. ದುರ್ಬಲರನ್ನು ರಕ್ಷಿಸುವುದು ಮತ್ತು ಶೋಷಣೆಯನ್ನು ಅನುಮತಿಸುವ ರಚನೆಗಳನ್ನು ಪ್ರಶ್ನಿಸುವುದು ಧರ್ಮಸಭೆಯ ಹೊಣೆಗಾರಿಕೆ ಎಂದು ಅವರು ಪ್ರತಿಪಾದಿಸಿದರು. ರಾಷ್ಟ್ರೀಯ ಮಟ್ಟದ ಮಾನವ ಕಳ್ಳಸಾಗಣೆ ವಿರೋಧಿ ಪ್ರಯತ್ನಗಳಿಗೆ ಬೆಂಬಲವಾಗಿ, ಧರ್ಮಕ್ಷೇತ್ರಗಳಿಗೆ  ಹೊಂದುವಂತಹ ಉಪಕ್ರಮಗಳ ಮೂಲಕ ಧರ್ಮಸಭೆ ಸಹಕಾರ ನೀಡುವುದಾಗಿ ಅವರು ತಿಳಿಸಿದ್ದಾರೆ.

ಮಾನವ ಕಳ್ಳಸಾಗಣೆ ವಿರುದ್ಧ ಧರ್ಮಕ್ಷೇತ್ರ ಮಟ್ಟದ ಕ್ರಮ

ಪ್ರತ್ಯೇಕ ಹೇಳಿಕೆಯಲ್ಲಿ, ಪುವೆರ್ಟೊ ಪ್ರಿನ್ಸೆಸಾದ ಪೂಜ್ಯ ಧರ್ಮಾಧ್ಯಕ್ಷರು ಹಾಗೂ CBCP ವಲಸಿಗರ ಮತ್ತು ಸಂಚಾರಿ ಜನರ ಪಾಲನಾ ಆರೈಕೆ ಆಯೋಗದ ಅಧ್ಯಕ್ಷರಾದ ಪೂಜ್ಯ ಸೋಕ್ರಟೀಸ್ ಮೆಸಿಯೋನಾ ಅವರು, ಪ್ರತಿಯೊಂದು ಧರ್ಮಕ್ಷೇತ್ರದಲ್ಲೂ ಮಾನವ ಕಳ್ಳಸಾಗಣೆ ವಿರೋಧಿ ಸಮಿತಿಗಳನ್ನು ಸ್ಥಾಪಿಸಿ ಬಲಪಡಿಸುವಂತೆ ಕರೆ ನೀಡಿದರು. ದೇಶದಾದ್ಯಂತ ಕಳ್ಳಸಾಗಣೆಗೆ ವಿರುದ್ಧವಾಗಿ ಸಮನ್ವಯಿತ ಧಾರ್ಮಿಕ ಹಾಗೂ ಸಂಸ್ಥಾತ್ಮಕ ಪ್ರತಿಕ್ರಿಯೆಯನ್ನು ಖಚಿತಪಡಿಸಲು ಈ ಸಮಿತಿಗಳು ನೆರವಾಗಲಿವೆ ಎಂದು ಅವರು ಹೇಳಿದರು.

ಆಯೋಗದ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಸುಮಾರು 12 ಧರ್ಮಕ್ಷೇತ್ರ ಸಮಿತಿಗಳು ಸ್ಥಾಪನೆಯಾಗಿದ್ದು, ಬಹುತೇಕವು ಲುಸಾನ್ ಪ್ರದೇಶದಲ್ಲಿವೆ. ಇದೇ ವೇಳೆ, ಪೂಜ್ಯ ಧರ್ಮಾಧ್ಯಕ್ಷ ಮೆಸಿಯೋನಾ ಅವರು ಸ್ಥಳೀಯ ಧರ್ಮಕೇಂದ್ರಗಳು ತಮ್ಮ ಪಾಲನಾ ಕಾರ್ಯಕ್ರಮಗಳಲ್ಲಿ ಮಾನವ ಕಳ್ಳಸಾಗಣೆ ಕುರಿತ ಜಾಗೃತಿಯನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಧರ್ಮಕೇಂದ್ರಗಳು ಜಾಗೃತಿ, ಶಿಕ್ಷಣ ಮತ್ತು ರಕ್ಷಣೆಯ ಸ್ಥಳಗಳಾಗಬೇಕೆಂದು ಅವರು ಒತ್ತಿ ಹೇಳಿದರು.

ಅಂತರರಾಷ್ಟ್ರೀಯ ದಿನದ ಹಿನ್ನೆಲೆಯಲ್ಲಿ ಮನವಿ

ಫೆಬ್ರವರಿ 8ರಂದು ಆಚರಿಸಲಾಗುವ ಮಾನವ ಕಳ್ಳಸಾಗಣೆ ವಿರುದ್ಧದ ಪ್ರಾರ್ಥನೆ ಮತ್ತು ಜಾಗೃತಿ ಅಂತರರಾಷ್ಟ್ರೀಯ ದಿನದ ಮುನ್ನವೇ ಫಿಲಿಪ್ಪೀನ್ ಧರ್ಮಾಧ್ಯಕ್ಷರ ಈ ಮನವಿ ಹೊರಬಿದ್ದಿದೆ. ಈ ದಿನವನ್ನು ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಅವರು ಸ್ಥಾಪಿಸಿದ್ದು, ಕಳ್ಳಸಾಗಣೆಯಿಂದ ಬದುಕುಳಿದವರ ಪಾಲಕ ಸಂತರಾದ ಜೋಸೆಫಿನ್ ಬಖಿತಾ ಅವರ ಹಬ್ಬದ ದಿನದಂದೇ ಇದನ್ನು ಆಚರಿಸಲಾಗುತ್ತದೆ.

ಮಾನವ ಕಳ್ಳಸಾಗಣೆಯನ್ನು ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಪದೇಪದೇ “ಒಂದು ಮಹಾಮಾರಿ” ಎಂದು ಕರೆದಿದ್ದು, ಇದು ಮಾನವ ಘನತೆಗೆ ಗಂಭೀರ ಧಕ್ಕೆ ತರುತ್ತದೆ ಎಂದು ಒತ್ತಿ ಹೇಳಿದ್ದಾರೆ.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

03 ಫೆಬ್ರವರಿ 2026, 01:20