ಇಂಡೋನೇಷ್ಯಾದಲ್ಲಿ ಧಾರ್ಮಿಕ ಆಚರಣೆಯ ಮೇಲೆ ಮಾಧ್ಯಮಗಳ ಪ್ರಭಾವ ಕುರಿತು ವಿಚಾರಗೋಷ್ಠಿ
ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತುರಾ, RCJ
ಇಂಡೋನೇಷ್ಯಾದ ಪೂರ್ವ ಭಾಗದ ಫ್ಲೊರೆಸ್‌ನ ಇನ್‌ಸ್ಟಿಟುಟ್ ಫಿಲ್ಸಫಾತ್ ದಾನ್ ಟೆಕ್ನಾಲೋಗಿ ಕ್ರಿಯೇಟಿಫ್ ಲೆಡಲೆರೋ (IFTK Ledalero) ನಲ್ಲಿ 2026 ಫೆಬ್ರವರಿ 19ರಿಂದ 21ರವರೆಗೆ “ಮೀಡಿಯಾ, ಧರ್ಮ ಮತ್ತು ಸಂಸ್ಕೃತಿ” ವಿಷಯದ ಅಂತರರಾಷ್ಟ್ರೀಯ ವಿಚಾರಗೋಷ್ಠಿ ನಡೆಯಿತು.
ಈ ಮೂರು ದಿನಗಳ ಸಮಾವೇಶದಲ್ಲಿ ಇಂಡೋನೇಷ್ಯಾ, ಫಿಲಿಪೈನ್ಸ್, ಥೈಲ್ಯಾಂಡ್ ಮತ್ತು ಆಸ್ಟ್ರೇಲಿಯಾದ ಪಂಡಿತರು, ಸಂಶೋಧಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಥೈಲ್ಯಾಂಡ್‌ನ ಸಂತ ಜಾನ್ ವಿಶ್ವವಿದ್ಯಾಲಯದ ಏಷ್ಯದ ಧಾರ್ಮಿಕ ಮತ್ತು ಸಾಮಾಜಿಕ ಸಂವಹನ ಸಂಶೋಧನಾ ಕೇಂದ್ರ (ಏಷ್ಯನ್ ರಿಸರ್ಚ್ ಸೆಂಟರ್ ಫಾರ್ ರಿಲಿಜಿಯನ್ ಅಂಡ್ ಸೋಶಿಯಲ್ ಕಮ್ಯುನಿಕೇಶನ್) ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ವಿಚಾರಗೋಷ್ಠಿಯ ಉದ್ದೇಶ ಡಿಜಿಟಲ್ ಮಾಧ್ಯಮಗಳ ವೇಗದ ವಿಸ್ತರಣೆ ದಕ್ಷಿಣ ಪೂರ್ವ ಏಷ್ಯಾದ ಧಾರ್ಮಿಕ ಆಚರಣೆ ಮತ್ತು ಸಾಂಸ್ಕೃತಿಕ ಬದುಕನ್ನು ಹೇಗೆ ಮರು ರೂಪಗೊಳಿಸುತ್ತಿದೆ ಎಂಬುದನ್ನು ಆಳವಾಗಿ ವಿಶ್ಲೇಷಿಸುವುದಾಗಿತ್ತು. ಧಾರ್ಮಿಕ ವೈವಿಧ್ಯತೆ ಮತ್ತು ಗಾಢ ಸಾಂಸ್ಕೃತಿಕ ಪರಂಪರೆ ಹೊಂದಿರುವ ಸಮಾಜಗಳಲ್ಲಿ ಡಿಜಿಟಲ್ ವಾತಾವರಣ ಒದಗಿಸುವ ಅವಕಾಶಗಳು ಮತ್ತು ಸವಾಲುಗಳ ಕುರಿತು ಭಾಗವಹಿಸಿದವರು ಚಿಂತನೆ ಹಂಚಿಕೊಂಡರು.
ಡಿಜಿಟಲ್ ಧರ್ಮ ಮತ್ತು ಹೊಣೆಗಾರಿಕೆ
ವಿಚಾರಗೋಷ್ಠಿಯ ಉದ್ಘಾಟನೆಯಲ್ಲಿ IFTK Ledalero ಸಂಸ್ಥೆಯ ಮುಖ್ಯಾಧಿಕಾರಿ ಪ್ರೊ. ಡಾ. ಒಟ್ಟೊ ಗುಸ್ತಿ ನ್ಡೆಗೋಂಗ್ ಮದುಂಗ್, SVD, ಡಿಜಿಟಲ್ ಧರ್ಮದ ನೈತಿಕ ಮತ್ತು ರಾಜಕೀಯ ಆಯಾಮಗಳನ್ನು ಒತ್ತಿಹೇಳಿದರು.
ರೇಡಿಯೋ ವೆರಿತಾಸ್ ಏಷ್ಯಾ ವರದಿ ಪ್ರಕಾರ, ಡಿಜಿಟಲ್ ಧರ್ಮವು ಶಕ್ತಿ, ನೈತಿಕತೆ ಮತ್ತು ಹೊಣೆಗಾರಿಕೆಯಿಂದ ರೂಪುಗೊಂಡ ಕ್ಷೇತ್ರವಾಗಿದ್ದು, ಅದು ಸಾಮಾಜಿಕ ಸಂವಾದವನ್ನು ರೂಪಿಸುವ ಪ್ರಮುಖ ವೇದಿಕೆಯಾಗಿದೆ ಎಂದು ಅವರು ಹೇಳಿದರು. “ಡಿಜಿಟಲ್ ತಂತ್ರಜ್ಞಾನ ತಟಸ್ಥವಲ್ಲ; ಇದು ಧಾರ್ಮಿಕ ಗುರುತು, ನೈತಿಕ ಮೌಲ್ಯಗಳು ಮತ್ತು ಪೌರತ್ವ ನಿರಂತರವಾಗಿ ಚರ್ಚೆಯಾಗುವ ರಾಜಕೀಯ-ನೈತಿಕ ವಲಯ,” ಎಂದು ಅವರು ತಿಳಿಸಿದರು.
ಆನ್‌ಲೈನ್ ಕಥನಗಳನ್ನು ರೂಪಿಸುವ ಅಲ್ಗೋರಿಥಮ್ ವ್ಯವಸ್ಥೆಗಳ ಪಾತ್ರದ ಕುರಿತು ಅವರು ಗಮನಸೆಳೆದಿದ್ದು, ಆಡಳಿತ ಹಾಗೂ ಸುವಾರ್ತಾ ಪ್ರಚಾರದಲ್ಲಿ ಅವುಗಳ ಬಳಕೆ ಕುರಿತು ವಿಮರ್ಶಾತ್ಮಕ ಚಿಂತನೆ ಅಗತ್ಯವಿದೆ ಎಂದರು. ಧಾರ್ಮಿಕ ಸ್ವಾತಂತ್ರ್ಯ, ಬಹುಸ್ವರೂಪತೆ ಮತ್ತು ಮಾನವ ಹಕ್ಕುಗಳನ್ನು ಕಾಪಾಡಲು ಜವಾಬ್ದಾರಿಯುತವಾಗಿ ಡಿಜಿಟಲ್ ತೊಡಗಿಸಿಕೊಳ್ಳುವಿಕೆ ಅನಿವಾರ್ಯವೆಂದು ಅವರು ಕರೆ ನೀಡಿದರು.
ಡಿಜಿಟಲ್ ಯುಗದಲ್ಲಿ ಪವಿತ್ರತೆಯ ಸಾಕಾರ
ಮೊದಲ ಮುಖ್ಯ ಭಾಷಣಕಾರರಾದ ಫಿಲಿಪೈನ್ಸ್ ವಿಶ್ವವಿದ್ಯಾಲಯದ ಬೆಂಜಮಿನಾ ಪಿ. ಫ್ಲೋರ್ “ಡಿಜಿಟಲ್ ಯುಗದಲ್ಲಿ ಪವಿತ್ರತೆಯ ಸಾಕಾರ” ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿದರು. ಆಧ್ಯಾತ್ಮಿಕ ಆಚರಣೆಗಳು ಡಿಜಿಟಲ್ ಸಂವಹನದ ಮೂಲಕ ದಿನನಿತ್ಯ ಹೇಗೆ ಮರು ರೂಪುಗೊಳ್ಳುತ್ತಿವೆ ಎಂಬುದನ್ನು ಅವರು ವಿವರಿಸಿದರು.
LiCAS News ವರದಿ ಪ್ರಕಾರ, “ಆನ್‌ಲೈನ್ ಬಲಿಪೂಜೆಗಳು ದೈಹಿಕ ಸಭೆಗಳ ಪರ್ಯಾಯವಲ್ಲ; ಅದು ಪವಿತ್ರ ಅನುಭವದ ಮರು ವಿನ್ಯಾಸವಾಗಿದೆ. ತಂತ್ರಜ್ಞಾನ ಮೂಲಕ ಸಂವಹನದ ಆಚರಣೆಗಳಿಂದ ಪವಿತ್ರತೆ ಮುಂದುವರಿದು ಅನುಭವಿಸಲ್ಪಡುತ್ತದೆ,” ಎಂದು ಅವರು ಹೇಳಿದರು.
“Embodying the sacred” ಎಂಬ ಪದ ಬಳಸಿ, ಡಿಜಿಟಲ್ ಸ್ಥಳಗಳಲ್ಲಿಯೂ ಪವಿತ್ರ ಉಪಸ್ಥಿತಿ ಅನುಭವಿಸಬಹುದೆಂದು ಅವರು ವಿವರಿಸಿದರು. ಸತ್ಯಸಂಧ ಉದ್ದೇಶ ಮತ್ತು ನೈತಿಕ ಹೊಣೆಗಾರಿಕೆಯಿಂದ ಡಿಜಿಟಲ್ ಪ್ರಾರ್ಥನೆ,ಆರಾಧನೆಗಳು ನಿಜವಾದ ಆಧ್ಯಾತ್ಮಿಕ ಸಂಪರ್ಕವನ್ನು ಬೆಳೆಸಬಹುದು ಎಂದು ಅವರು ಒತ್ತಿಹೇಳಿದರು.
ಧರ್ಮ, ಮಾಧ್ಯಮ ಮತ್ತು ಸಂಸ್ಕೃತಿ
ಮತ್ತೊಬ್ಬ ಮುಖ್ಯ ಭಾಷಣಕಾರ ವಂ. ಗುರು. ಆಂಥನಿ ಲೆ ಡಕ್ ಧರ್ಮ, ಮಾಧ್ಯಮ ಮತ್ತು ಸಂಸ್ಕೃತಿ ನಡುವಿನ ಅಂತರಂಗ ಸಂಬಂಧವನ್ನು ವಿಶ್ಲೇಷಿಸಿದರು. “ಧರ್ಮವು ಭಾಷೆ, ಚಿಹ್ನೆಗಳು, ವಿಧಿಗಳು ಮತ್ತು ದೈನಂದಿನ ಆಚರಣೆಗಳ ಮೂಲಕ ಸಂಸ್ಕೃತಿಯಲ್ಲಿ ವ್ಯಕ್ತವಾಗುತ್ತದೆ; ಇಂದಿನ ದಿನಗಳಲ್ಲಿ ಇದರ ಬಹುಪಾಲು ಡಿಜಿಟಲ್ ಸ್ಥಳಗಳಲ್ಲಿ ನಡೆಯುತ್ತಿದೆ,” ಎಂದು ಅವರು ಹೇಳಿದರು.
LiCAS News ಉಲ್ಲೇಖಿಸಿದಂತೆ, ಮಾಧ್ಯಮವು ಧಾರ್ಮಿಕ ಸಂದೇಶಗಳನ್ನು ಕೇವಲ ಸಾಗಿಸುವುದಲ್ಲ; ಅವುಗಳನ್ನು ಸಾರ್ವಜನಿಕ ಕಲ್ಪನೆಯಲ್ಲಿ ಹೇಗೆ ಪ್ರತಿನಿಧಿಸಲಾಗುತ್ತದೆ, ಅರ್ಥೈಸಲಾಗುತ್ತದೆ ಮತ್ತು ಮೌಲ್ಯಮಾಪನಗೊಳ್ಳುತ್ತದೆ ಎಂಬುದನ್ನೂ ರೂಪಿಸುತ್ತದೆ ಎಂದು ಅವರು ತಿಳಿಸಿದರು.
ದಕ್ಷಿಣ ಪೂರ್ವ ಏಷ್ಯಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಹಿನ್ನೆಲೆಯಲ್ಲಿ ಡಿಜಿಟಲ್ ಕಥನಗಳು ಏಕತೆಯ ಸಾಧನವಾಗಬಹುದು ಅಥವಾ ವಿಭಜನೆಯ ಮೂಲವಾಗಬಹುದು ಎಂದು ಅವರು ಎಚ್ಚರಿಸಿದರು.
ಸಂವಾದ ಮತ್ತು ಪ್ರಾದೇಶಿಕ ದೃಷ್ಟಿಕೋನಗಳು
ವಿಚಾರಗೋಷ್ಠಿಯಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು, ಧಾರ್ಮಿಕ ಸಂವಹನ ಮತ್ತು ಶಾಂತಿ ನಿರ್ಮಾಣ ಕುರಿತು ತಜ್ಞರ ಚರ್ಚೆಯೂ ನಡೆಯಿತು. ಫಿಲಿಪೈನ್ಸ್ ವಿಶ್ವವಿದ್ಯಾಲಯದ ಅಲೆಕ್ಸಾಂಡರ್ ಫ್ಲೋರ್, ಯೂನಿವರ್ಸಿಟಾಸ್ ಗಜಾಹ್ ಮಡಾ ಸಂಸ್ಥೆಯ ರೋನಾಲ್ಡ್ ಎಪಾಫ್ರಾಸ್ ಮತ್ತು ವಂ. ಗುರು. ಆಂಥನಿ ಲೆ ಡಕ್ ತಜ್ಞ ಸದಸ್ಯರಾಗಿದ್ದರು.
ಬಹುಸಾಂಸ್ಕೃತಿಕ ಹಾಗೂ ಬಹುಧಾರ್ಮಿಕ ಸಮಾಜಗಳಲ್ಲಿ ಡಿಜಿಟಲ್ ವಿಷಯಗಳು ಸಾರ್ವಜನಿಕ ಮನೋಭಾವ ಮತ್ತು ಅಂತರ್ ಧಾರ್ಮಿಕ ಸಂಬಂಧಗಳ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಜವಾಬ್ದಾರಿಯುತ ಸಂವಹನದ ಅಗತ್ಯವನ್ನು ಅವರು ಒತ್ತಿಹೇಳಿದರು.
ಡಿಜಿಟಲ್ ಯುಗಕ್ಕೆ ನಾಯಕತ್ವ ರೂಪಿಸುವಿಕೆ
ಡಿಜಿಟಲ್ ವೇದಿಕೆಗಳು, ಧಾರ್ಮಿಕ ಪಾಲನಾ ತರಬೇತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿರುವ ಪಂಡಿತರು ಮತ್ತು ಕಾರ್ಯಕರ್ತರಿಗೆ ಈ ವಿಚಾರಗೋಷ್ಠಿ ತರಬೇತಿ ವೇದಿಕೆಯಾಗಿತ್ತು.
ಶಿಕ್ಷಣ ಮತ್ತು ಧಾರ್ಮಿಕ ಪಾಲನಾ ಕಾರ್ಯಗಳಲ್ಲಿ ಡಿಜಿಟಲ್ ಸಂವಹನ ಆಳವಾಗಿ ಬೆಸೆದುಕೊಂಡಿರುವ ಪ್ರದೇಶದಲ್ಲಿ ಮಾಧ್ಯಮ, ಧರ್ಮ ಮತ್ತು ಸಂಸ್ಕೃತಿ ನಡುವಿನ ಸಂಬಂಧವನ್ನು ಅರಿಯುವುದು ಅತ್ಯಾವಶ್ಯಕವೆಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು.
ವೈಜ್ಞಾನಿಕ ಸಂವಾದ ಮತ್ತು ವಿಮರ್ಶಾತ್ಮಕ ಚಿಂತನೆಯ ಮೂಲಕ ಡಿಜಿಟಲ್ ವಾತಾವರಣವು ಕೇವಲ ತಂತ್ರಜ್ಞಾನ ಸ್ಥಳವಲ್ಲ; ಅದು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಗಡಿ ಎಂದು ಭಾಗವಹಿಸಿದವರು ಪುನರುಚ್ಚರಿಸಿದರು.
ನೈತಿಕ, ಸಂವಹನಾತ್ಮಕ ಮತ್ತು ಧಾರ್ಮಿಕ ಆಯಾಮಗಳನ್ನು ವಿಶ್ಲೇಷಿಸುವ ಮೂಲಕ ದಕ್ಷಿಣ ಪೂರ್ವ ಏಷ್ಯಾದಲ್ಲಿ ಮಾಧ್ಯಮ ಮತ್ತು ವಿಶ್ವಾಸದ ಬದಲಾಗುತ್ತಿರುವ ಪ್ರಪಂಚವನ್ನು ಸಮರ್ಥವಾಗಿ ಸಂಚರಿಸಲು ಈ ವಿಚಾರಗೋಷ್ಠಿ ಮಹತ್ವದ ಕೊಡುಗೆ ನೀಡಿತು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).