ಇಥಿಯೋಪಿಯಾದಲ್ಲಿ ಎರಡು ಸಂಪ್ರದಾಯಗಳ ವಿಧಿಯಲ್ಲಿ ತಪಸ್ಸುಕಾಲ ಆರಂಭ: ಆಧ್ಯಾತ್ಮಿಕ ಪರಿವರ್ತನೆಗೆ ಪ್ರಧಾನ ಗುರುಗಳ ಕರೆ
ಲೇಖಕರು: ಬೇಜವಿತ್ ಬೋಗಲೆ
ಕಥೋಲಿಕ ಧರ್ಮಸಭೆ ತಪಸ್ಸುಕಾಲಕ್ಕೆ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ, ಇಥಿಯೋಪಿಯಾದ ಕಥೋಲಿಕ ಧರ್ಮಾಧ್ಯಕ್ಷರುಗಳ ಸಭೆಯ ಅಧ್ಯಕ್ಷರಾದ ಪ್ರಧಾನ ಗುರು ವಂ. ಅಬುನೆ ಬೆರ್ಹಾನೆ ಯೇಸುಸ್ ಅವರ ಪಾಲನಾ ಸಂದೇಶದಲ್ಲಿ, ವಿಶ್ವಾಸಿಗಳು ಹಾಗೂ ಸತ್ಸಂಕಲ್ಪದ ಎಲ್ಲರೂ ಪ್ರಾರ್ಥನೆ, ಉಪವಾಸ ಮತ್ತು ದಾನಧರ್ಮಗಳ ಮೂಲಕ ಆಳವಾದ ಆಂತರಿಕ ಪರಿವರ್ತನೆಗೈಯುವಂತೆ ಕರೆ ನೀಡಿದ್ದಾರೆ.
ಮತ್ತಾಯ ಸುವಾರ್ತೆಯ (6:17-18) ವಚನವನ್ನು ಉಲ್ಲೇಖಿಸಿದ ಪ್ರಧಾನ ಗುರುಗಳು, ಉಪವಾಸವು ಹೊರಾಂಗಣ ಪ್ರದರ್ಶನವಲ್ಲದೆ, ಗುಪ್ತವಾಗಿ ದೇವರೊಡನೆ ನಡೆಯುವ ಆಧ್ಯಾತ್ಮಿಕ ಸಂವಾದವಾಗಿರಬೇಕೆಂದು ನೆನಪಿಸಿದರು. ತಪಸ್ಸುಕಾಲವು ಲೋಕೀಯ ವ್ಯತ್ಯಯಗಳಿಂದ ದೂರವಿದ್ದು ದೇವರತ್ತ ಸಮೀಪಿಸುವ ಪವಿತ್ರ ಅವಕಾಶವೆಂದು ಅವರು ತಿಳಿಸಿದ್ದಾರೆ.
ಇಥಿಯೋಪಿಯಾದ ಕಥೋಲಿಕ ಧರ್ಮಸಭೆ ಪೂರ್ವಾತ್ಯ ಪಂಚಾಂಗ (ಗೀಝ್) ಹಾಗೂ ಲ್ಯಾಟಿನ್ ಪಂಚಾಂಗದನ್ವಯ ಆಚರಣೆಗಳನ್ನು ಅನುಸರಿಸುವ ಹಿನ್ನೆಲೆಯಲ್ಲಿ, 2026ರಲ್ಲಿ ಪೂರ್ವದಲ್ಲಿ ತಪಸ್ಸುಕಾಲ ಫೆಬ್ರವರಿ 16ರಂದು ಆರಂಭವಾಗಿದ್ದು, ಲ್ಯಾಟಿನ್ ಆಚರಣೆಯಲ್ಲಿ ಫೆಬ್ರವರಿ 18ರಂದು ಆರಂಭವಾಗಲಿದೆ. ಈ ದ್ವಿರೀತಿ ಆಚರಣೆ ಇಥಿಯೋಪಿಯಾದ ಸಮೃದ್ಧ ಧಾರ್ಮಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.
ತಮ್ಮ ಸಂದೇಶದಲ್ಲಿ ಪ್ರಧಾನ ಗುರುಗಳು ಅವರು ನಿಜವಾದ ಪ್ರಾರ್ಥನೆಯ ಮಹತ್ವವನ್ನು ಒತ್ತಿಹೇಳಿ, ಕ್ರಿಸ್ತನ ಪಾಡು, ಮರಣ ಮತ್ತು ಪುನರುತ್ಥಾನವನ್ನು ಧ್ಯಾನಿಸುವ ಮೂಲಕ ದೇವರೊಡನೆ ಆಳವಾದ ಸಂಬಂಧ ಬೆಳೆಸಬೇಕೆಂದು ಮನವಿ ಮಾಡಿದರು. ನೆರೆಹೊರೆಯವರಿಗಾಗಿ, ಸಂಕಷ್ಟದಲ್ಲಿರುವವರಿಗಾಗಿ, ಸಂಘರ್ಷ ಮತ್ತು ಸ್ಥಳಾಂತರದಿಂದ ಬಳಲುವವರಿಗಾಗಿ, ಕೈದಿಗಳಿಗಾಗಿ ಹಾಗೂ ಜ್ಞಾನ-ಪ್ರಾಮಾಣಿಕತೆಯಿಂದ ಆಡಳಿತ ನಡೆಸುವ ನಾಯಕರಿಗಾಗಿ ಪ್ರಾರ್ಥಿಸಬೇಕೆಂದು ಅವರು ವಿಶ್ವಾಸಿಗಳಿಗೆ ಕರೆ ನೀಡಿದ್ದಾರೆ.
ಉಪವಾಸ ಆಹಾರಕ್ಕಷ್ಟೇ ಸೀಮಿತವಲ್ಲ
ಪ್ರಧಾನ ಗುರು ಪೂಜ್ಯ ಅಬುನೆ ಬೆರ್ಹಾನೆಯೇಸುಸ್ ಅವರ ಪ್ರಕಾರ, ಉಪವಾಸವು ಕೇವಲ ಆಹಾರ ತ್ಯಾಗಕ್ಕೆ ಸೀಮಿತವಾಗಿರುವುದಿಲ್ಲ. ಅತಿರೇಕ, ವ್ಯತ್ಯಯಗಳು, ಪಾಪ, ನೋವುಂಟುಮಾಡುವ ಮಾತು ಹಾಗೂ ಇತರರಿಗೆ ಹಾನಿ ಉಂಟುಮಾಡುವ ಕ್ರಿಯೆಗಳಿಂದ ದೂರವಿರುವುದೇ ನಿಜವಾದ ಉಪವಾಸ. ಸಹನೆ, ಕ್ಷಮೆ, ದಾನಧರ್ಮ ಮತ್ತು ಮಾನವ ಗೌರವದ ಮೇಲಿನ ದೃಢವಾದ ಗೌರವದ ಮೂಲಕ ಉಪವಾಸದ ಆತ್ಮ ವ್ಯಕ್ತವಾಗುತ್ತದೆ ಎಂದು ಅವರು ಹೇಳಿದ್ದಾರೆ. “ಪ್ರಾಮಾಣಿಕ ಉಪವಾಸದ ಮೂಲಕ ನಮ್ಮ ಹೃದಯ ದೇವರ ಕಡೆಗೆ ಎಚ್ಚರಗೊಳ್ಳುತ್ತದೆ; ಮೌನ ಮತ್ತು ಧ್ಯಾನದಲ್ಲಿ ಕ್ರಿಸ್ತರನ್ನು ನಾವು ಕಾಣುತ್ತೇವೆ,” ಎಂದು ಅವರು ಹೇಳಿದರು.
ತಪಸ್ಸುಕಾಲವು ಆಂತರಿಕ ಪರಿವರ್ತನೆಗೆ ಆಹ್ವಾನಿಸುವ ಸಮಯವಾಗಿದ್ದು, ನೈತಿಕ ಜಾಗೃತಿ ಬೆಳೆಸುವುದು, ಪರಸ್ಪರ ಹೊಂದಾಣಿಕೆ ಸಾಧಿಸುವುದು ಮತ್ತು ಕರುಣೆಯ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವೆಂದು ಪ್ರಧಾನ ಗುರುಗಳು ಕರೆ ನೀಡಿದರು. ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಅವರ ‘ಸರ್ವ ಸಹೋದರರು(Fratelli tutti)’ ಉಪದೇಶವನ್ನು ಉಲ್ಲೇಖಿಸಿ, ಗದ್ದಲ, ತಪ್ಪುಮಾಹಿತಿ ಹಾಗೂ ಅನ್ಯಾಯಗಳಿಂದ ಕೂಡಿದ ಜಗತ್ತಿನಲ್ಲಿ ನಿಜವಾದ ಸಂವಾದ ಮತ್ತು ಕ್ರೈಸ್ತ ಸಾಕ್ಷಿಗೆ ಪರಸ್ಪರ ಗಮನದಿಂದ ಕೇಳುವುದು ಮತ್ತು ಪ್ರತಿಯೊಬ್ಬರ ಮಾನವ ಗೌರವವನ್ನು ಗೌರವಿಸುವುದು ಅತ್ಯವಶ್ಯಕವೆಂದು ಅವರು ಒತ್ತಿಹೇಳಿದರು.
ಶಾಂತಿ ಮತ್ತು ನ್ಯಾಯಕ್ಕಾಗಿ ಕರೆ
ಪ್ರಧಾನ ಗುರು ಪೂಜ್ಯ ಅಬುನೆ ಬೆರ್ಹಾನೆಯೇಸುಸ್ ಇಥಿಯೋಪಿಯಾ ಸೇರಿದಂತೆ ಜಗತ್ತಿನಾದ್ಯಂತ ಶಾಂತಿ ಮತ್ತು ನ್ಯಾಯ ಸ್ಥಾಪನೆಗಾಗಿ ಪ್ರಾರ್ಥನೆ ಸಲ್ಲಿಸುವಂತೆ ವಿಶ್ವಾಸಿಗಳಿಗೆ ಮನವಿ ಮಾಡಿದರು. ಪ್ರಕೃತಿ ಮತ್ತು ಮಾನವ ಸೃಷ್ಟಿಸಿದ ವಿಪತ್ತುಗಳಿಂದ ರಕ್ಷಣೆ ದೊರಕಲಿ ಹಾಗೂ ಈ ಸವಾಲಿನ ಕಾಲದಲ್ಲಿ ವಿಶ್ವಾಸಿಗಳು ದೃಢವಾದ ನಂಬಿಕೆಯಲ್ಲಿ ಸ್ಥಿರರಾಗಿರಲಿ ಎಂದು ಅವರು ಪ್ರಾರ್ಥನೆಗೆ ಆಹ್ವಾನಿಸಿದರು.
ತಮ್ಮ ಸಂದೇಶದ ಅಂತ್ಯದಲ್ಲಿ, ಮಾತೆ ಮರಿಯಮ್ಮ, ದೂತರು, ರಕ್ತ ಸಾಕ್ಷಿಗಳ ಮತ್ತು ಸಮಸ್ತ ಪರಿಶುದ್ಧರ ಮಧ್ಯಸ್ಥಿಕೆಯನ್ನು ಕೋರಿ, ಈ ತಪಸ್ಸುಕಾಲದ ಪ್ರಯಾಣವನ್ನು ಪ್ರಾಮಾಣಿಕ ಹೃದಯ, ಪ್ರಾರ್ಥನಾಭಾವ ಮತ್ತು ಪ್ರೀತಿ, ಹೊಂದಾಣಿಕೆ ಹಾಗೂ ಸೇವೆಯ ಜೀವನಕ್ಕೆ ಬದ್ಧತೆಯೊಂದಿಗೆ ಕೈಗೊಳ್ಳುವಂತೆ ಪ್ರಧಾನ ಗುರುಗಳು ಕರೆ ನೀಡಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).