2026.02.07 Messa di Beatificazione di padre Salvador Valera Parra presieduta dal cardinale Marcello Semeraro 2026.02.07 Messa di Beatificazione di padre Salvador Valera Parra presieduta dal cardinale Marcello Semeraro 

ಪ್ರಧಾನ ಗುರು ಸೆಮೆರಾರೋ ಅವರಿಂದ ಸ್ಪೇನ್‌ನಲ್ಲಿ ಇತರರಿಗಾಗಿ ಬದುಕಿದ ಧರ್ಮಕೇಂದ್ರದ ಗುರುವೋರ್ವರಿಗೆ “ಇತರರಿಗೆ ಸಮರ್ಪಿತ” ಎಂದು ಧನ್ಯ ಘೋಷಣೆ

ಧನ್ಯ ಘೋಷಣೆಯ ಬಲಿಪೂಜೆಯ ಉಪದೇಶದಲ್ಲಿ, ಪ್ರಧಾನ ಗುರು ಮಾರ್ಚೆಲ್ಲೊ ಸೆಮೆರಾರೋ, ಹೇಗೆ ವಂ. ಗುರು ಸಾಲ್ವಡೋರ್ ವಲೇರೆ ಪಾರ್ರಾ ಅವರು ಸಂತರಾದ ಪೌಲರು “ಕ್ರಿಸ್ತನ ಸುಗಂಧ” ಎಂದು ಕರೆಯುವ ಜೀವನವನ್ನು ಸಾಕಾರಗೊಳಿಸಿದರು ಎಂಬುದನ್ನು ಒತ್ತಿಹೇಳಿ, ಅವರು ಶಾಶ್ವತವಾದ ಸಾಕ್ಷ್ಯ ಹಾಗೂ ಜೀವನದ ಆದರ್ಶವನ್ನು ಬಿಟ್ಟುಹೋಗಿದ್ದಾರೆ ಎಂದು ವಿವರಿಸಿದರು.

ಲೇಖಕರು: ಪಿಯೆರ್ ಫ್ರಾನ್ಸೆಸ್ಕಾ ಲೊರೆಟೊ

ಶನಿವಾರ, ಫೆಬ್ರವರಿ 7ರಂದು, ಸ್ಪೇನ್‌ನ ಆಂಡಲುಸಿಯಾ ಪ್ರದೇಶದ ಹುಎರ್ಕಾಲ್-ಒವೇರಾದ ಬಹುದ್ದೇಶ ಕೇಂದ್ರದಲ್ಲಿ ದೇವರ ಸೇವಕ ವಂದನೀಯ ಗುರು ಸಲ್ವದೋರ್ ವಾಲೇರಾ ಪಾರ್ರಾ ಅವರ ಧನ್ಯ ಪದವಿ ಪ್ರದಾನ ಬಲಿಪೂಜೆ ನಡೆಯಿತು. ಈ ಆಚರಣೆಗೆ ಸಂತಘೋಷಣಾ ವಿಷಯಗಳ ದೀಕ್ಷಾಲಯದ (Dicastery for the Causes of Saints) ಮುಖ್ಯ ಆಡಳಿತಾಧಿಕಾರಿ ಪ್ರಧಾನ ಗುರು ಮಾರ್ಚೆಲ್ಲೊ ಸೆಮೆರಾರೊ ಅವರು ಅಧ್ಯಕ್ಷತೆ ವಹಿಸಿದ್ದರು.

ಗುರು ವಾಲೇರಾ ಅವರು 1816ರ ಫೆಬ್ರವರಿ 27ರಂದು ಹುಎರ್ಕಾಲ್-ಒವೇರಾದಲ್ಲಿ ಬಡ ಹಾಗೂ ಸರಳ ಕುಟುಂಬದಲ್ಲಿ ಜನಿಸಿದರು. ರೋಗಮಹಾಮಾರಿ, ಕ್ಷಾಮ ಮತ್ತು ಧಾರ್ಮಿಕ ಹಿಂಸೆಯನ್ನು ಎದುರಿಸಿ ಬೆಳೆದ ಅವರನ್ನು ಅನುಭವಗಳು ಅವರ ಗಾಢ ನಂಬಿಕೆ ಮತ್ತು ಕ್ರಿಸ್ತನ ಮೇಲಿನ ಸಮರ್ಪಣೆಯನ್ನು ರೂಪಿಸಿದವು. ಅವರು 1838ರಲ್ಲಿ 24ನೇ ವಯಸ್ಸಿನಲ್ಲಿ ಗುರುದೀಕ್ಷೆ ಪಡೆದರು ಮತ್ತು ತಮ್ಮ ವಿನಯ, ಸರಳತೆ ಮತ್ತು ದಾನಶೀಲತೆಯಿಂದ ಪ್ರಸಿದ್ಧರಾಗಿದ್ದರು. ಗುರು ವಾಲೇರಾ ಅವರು 1868ರವರೆಗೆ ಅಲ್ಹಾಮಾ ದೆ ಮುರ್ಸಿಯಾ ಮತ್ತು ಕಾರ್ಟಾಜೇನಾ ಧರ್ಮಕೇಂದ್ರಗಳಲ್ಲಿ ಸೇವೆ ಸಲ್ಲಿಸಿದರು. ನಂತರ ತಮ್ಮ ಊರಿಗೆ ಮರಳಿ, ಸುಮಾರು 40 ವರ್ಷಗಳ ಕಾಲ ಧರ್ಮಕೇಂದ್ರ ಗುರುವಾಗಿ ಸೇವೆ ಮಾಡಿದರು.

ಅವರು ಅನೇಕ ಬಾರಿ ತಮ್ಮ ಆಹಾರ ಮತ್ತು ಬಟ್ಟೆಗಳನ್ನು ಅಗತ್ಯವಿರುವವರಿಗೆ ಹಂಚಿಕೊಳ್ಳುತ್ತಾ ಮತ್ತು ರಾತ್ರಿ ವೇಳೆ ರೋಗಿಗಳು ಹಾಗೂ ಮರಣಾವಸ್ಥೆಯಲ್ಲಿರುವ ಆರೈಕೆಗೆ ಜಾಗರಣೆ ಮಾಡುತ್ತಿದ್ದರು, ಎಲ್ಲರಿಗೂ ಆಧ್ಯಾತ್ಮಿಕ ಸಹಾಯ ನೀಡುತ್ತಿದ್ದರು. ಅದರ ಜೊತೆಗೆ, ತಮ್ಮ ಕಾಲದ ಕಾಲರಾ ಮಹಾಮಾರಿಯ ಸಮಯದಲ್ಲಿ ಧೈರ್ಯದಿಂದ ರೋಗಿಗಳ ಸೇವೆ ಮಾಡಿದರು. ಗುರು ವಾಲೇರಾ ತಮ್ಮ ಸೇವೆ, ಸಮರ್ಪಣೆ, ಸರಳ ಜೀವನಶೈಲಿ ಮತ್ತು ಸಮುದಾಯದ ಮೇಲಿನ ಆಳವಾದ ಪ್ರೀತಿಗೆ ಹೆಸರಾಗಿದ್ದರು. ಅವರ ಸೇವೆಯನ್ನು ಗುರುತಿಸಿ ಅವರಿಗೆ ಹಲವಾರು ನಾಗರಿಕ ಪ್ರಶಸ್ತಿಗಳು ಮತ್ತು ಗೌರವಗಳು ಲಭಿಸಿತು.

ಪೂಜ್ಯ ಗುರುಗಳು 1889ರ ಮಾರ್ಚ್ 15ರಂದು ನಿಧನರಾದರು. ಅವರು ಬದುಕಿದ್ದಾಗಲೇ ಜನರು ಅವರ ಕ್ರೈಸ್ತ ಹಾಗೂ ಗುರುತ್ವದ ಗುಣಗಳನ್ನು ಮೆಚ್ಚಿದ್ದರು, ಮತ್ತು  ಅನೇಕರು ಅವರ ಮೂಲಕ ಅದ್ಭುತಗಳನ್ನು ಪಡೆದಿದ್ದಾಗಿಯೂ ಹೇಳಿದ್ದಾರೆ.

ಅದ್ಭುತ

2007ರ ಜನವರಿ 14ರ ರಾತ್ರಿ, ಅಮೆರಿಕದ ಪ್ರಾವಿಡೆನ್ಸ್‌ನ ರೋಡ್ ಐಲ್ಯಾಂಡ್ ಮೆಮೊರಿಯಲ್ ಆಸ್ಪತ್ರೆಯಲ್ಲಿ ಎಂಬ ಪುಟ್ಟ ಮಗು ಟೈಕ್ವಾನ್ ಹಾಲ್ ಜನಿಸಿತು. ಜನನದ ವೇಳೆ ಮಗುವಿನ ಹೃದಯಬಡಿತ ನಿಧಾನವಾಗಿತ್ತು ಮತ್ತು ಮಗುವಿನ ಮೈ ಬಿಳಿಚಿಕೊಂಡಿದ್ದು, ಮೈ ನೀಲಿಗಟ್ಟಿತ್ತು. ಪರಿಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಚಿಕಿತ್ಸೆ ನೀಡುತ್ತಿದ್ದ ವೈದ್ಯರಾದ ಡಾ. ಜುವಾನ್ ಸಾಂಚೆಝ್ ಎಸ್ಟೆಬಾನ್ ಕೂಡ ಹುಎರ್ಕಾಲ್ ಒವೇರಾದವರೇ. ತಮ್ಮ ಬಾಲ್ಯದಲ್ಲಿ ತನ್ನ ಪೋಷಕರು ಕಲಿಸಿದ್ದ ನಂಬಿಕೆಯನ್ನು ನೆನಪಿಸಿಕೊಂಡರು. ನಿರಾಶೆಯ ಕ್ಷಣದಲ್ಲಿ ಅವರು ತಮ್ಮ ದೇಶಸ್ಥರ ಮಧ್ಯಸ್ಥಿಕೆಗ: “ಗುರು ವಾಲೇರಾ, ನಾನು ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದೇನೆ; ಈಗ ನಿಮ್ಮ ಸರದಿ” ಎಂದು ಪ್ರಾರ್ಥಿಸಿದರು.

ಮಗುವಿನ ಮರಣ ಸುದ್ದಿಯನ್ನು ಪೋಷಕರಿಗೆ ತಿಳಿಸಲು ವೈದ್ಯರು  ನಡೆದು ಹೋಗುತ್ತಿದ್ದಾಗ, ಒಬ್ಬ ನರ್ಸ್ ಅವರನ್ನು ತಡೆದು, ಮಗು ಚೇತರಿಸಿಕೊಳ್ಳುತ್ತಿದೆ ಎಂದು ಹೇಳಿದರು. ಪ್ರಾರ್ಥನೆಯ ಕೆಲ ನಿಮಿಷಗಳ ನಂತರ, ಮಗು ಉಸಿರಾಡಲು ಪ್ರಾರಂಭಿಸಿತು ಮತ್ತು ಹೃದಯಬಡಿತ ಸಾಮಾನ್ಯ ಸ್ಥಿತಿಗೆ ಮರಳಿತು. ಈ ಗಂಭೀರ ಘಟನೆಯ ಬಳಿಕ, ವೈದ್ಯರು ಮಗುವಿಗೆ ಮೆದುಳಿನ ಹಾನಿಯಾಗಿರಬಹುದು ಮತ್ತು ಅದು ಸೆರೆಬ್ರಲ್ ಪಾಲ್ಸಿ ಅಥವಾ ಇತರ ಅಶಕ್ತತೆಯನ್ನು ಉಂಟುಮಾಡಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಟೈಕ್ವಾನ್‌ಗೆ ಯಾವುದೇ ಶಾಶ್ವತ ಪರಿಣಾಮಗಳು ಕಾಣಿಸಲಿಲ್ಲ.

ವಾಲೇರಾ ಅವರ ಧನ್ಯ ಪದವಿ ಪ್ರದಾನ ಪ್ರಕ್ರಿಯೆ 1991ರಲ್ಲಿ ಆರಂಭವಾಯಿತು ಮತ್ತು ಈ ಅದ್ಭುತವನ್ನು ಮಾನ್ಯಗೊಳಿಸಿದ ನಂತರ ಪೂರ್ಣಗೊಂಡಿತು. ಟೈಕ್ವಾನ್ ಹಾಲ್ ಅವರ ಚೇತರಿಕೆಯನ್ನು ವೈದ್ಯಕೀಯ ತಜ್ಞರು ವೈಜ್ಞಾನಿಕವಾಗಿ ವಿವರಿಸಲಾಗದು ಎಂದು ಪರಿಗಣಿಸಿದರು ಮತ್ತು ಅದನ್ನು ಗುರು ವಾಲೇರಾ ಅವರ ಮಧ್ಯಸ್ಥಿಕೆಗೆ ಸಂಬಂಧಿಸಿದರು. ಸಂತಘೋಷಣಾ ವಿಷಯಗಳ ದೀಕ್ಷಾಲಯವು ಸಮಗ್ರ ವೈದ್ಯಕೀಯ ಮತ್ತು ಧಾರ್ಮಿಕ ಪರಿಶೀಲನೆ ನಡೆಸಿದ ಬಳಿಕ, ಪೂಜ್ಯ ಜಗದ್ಗುರುಗಳಾದ 14ನೆಯ ಲಿಯೋ ಅವರು 2025ರ ಜೂನ್ 20ರಂದು ಈ ಅದ್ಭುತವನ್ನು ಅಧಿಕೃತವಾಗಿ ಅಂಗೀಕರಿಸಿದರು.

ಪ್ರವಚನ

ಗುರು ವಾಲೇರಾ ಅವರ ಧನ್ಯ ಪದವಿ ಪ್ರದಾನ ಸಮಾರಂಭದ ಸಿದ್ಧತೆಯ ಭಾಗವಾಗಿ, ಪ್ರಧಾನ ಗುರು ಮಾರ್ಸೆಲ್ಲೊ ಸೆಮೆರಾರೊ ಅವರು ಅಲ್ಮೇರಿಯಾ, ಕಾರ್ಟಾಜೆನಾ ಮತ್ತು ಗೆಟಾಫೆ ಧರ್ಮಕ್ಷೇತ್ರಗಳ ಧರ್ಮಾಧ್ಯಕ್ಷರು ಬರೆದ ಪಾಲನಾ ಪತ್ರವನ್ನು ವಾಚಿಸಿದರು. “ಇತರರಿಗಾಗಿ ಸಮರ್ಪಿತ ಜೀವನ” ಎಂಬ ಶೀರ್ಷಿಕೆಯ ಈ ಪತ್ರವು ನೂತನ ಧನ್ಯರ ಜೀವನಯಾನದ ಸಾರವನ್ನು ಹಿಡಿದಿಟ್ಟಿತ್ತು. ಧರ್ಮಾಧ್ಯಕ್ಷರು, ಅವರಿಗೆ ಒಪ್ಪಿಸಲಾದ ಎಲ್ಲ ಭಕ್ತರಿಗಾಗಿ ಗುರು ವಾಲೇರಾ ಯಾವಾಗಲೂ ತಮ್ಮ ಹೃದಯದ ಬಾಗಿಲುಗಳನ್ನು ತೆರೆದಿಟ್ಟಿದ್ದರು ಎಂದು ವಿವರಿಸಿದರು.

ಪ್ರಧಾನ ಗುರು ಸೆಮೆರಾರೊ ಅವರು,  ಸಂತ ಪೌಲರು “ಕ್ರಿಸ್ತನ ಸುಗಂಧ” ಎಂದು ಕರೆದ ಗುಣವನ್ನು ಗುರು ವಾಲೇರಾ ತಮ್ಮ ಜೀವನದಲ್ಲಿ ಸಾಕಾರಗೊಳಿಸಿದ್ದರು ಮತ್ತು ಶಾಶ್ವತ ಸಾಕ್ಷ್ಯ ಹಾಗೂ ಆದರ್ಶ ಜೀವನವನ್ನು ನಮಗೆ ಸಾಕ್ಷಿಯಾಗಿ ಬಿಟ್ಟು ಹೋಗಿದ್ದಾರೆ ಎಂದು ಒತ್ತಿ ಹೇಳಿದರು. ಸಂತಘೋಷಣಾ ವಿಷಯಗಳ ದೀಕ್ಷಾಲಯದ ಮುಖ್ಯ ಆಡಳಿತಾಧಿಕಾರಿ ಆಗಿರುವ ಪ್ರಧಾನ ಗುರು ಸೆಮೆರಾರೊ ಅವರು, ಪೂಜ್ಯ ಜಗದ್ಗುರು ಫ್ರಾನ್ಸಿಸ್ ಒಮ್ಮೆ ಹೇಳಿದ ಮಾತನ್ನು ನೆನಪಿಸಿ, ಪ್ರತಿಯೊಬ್ಬರೂ ತಮ್ಮ ತಮ್ಮ ಪರಿಸರದಲ್ಲಿ “ಲೋಕದಲ್ಲಿ ಕ್ರಿಸ್ತನ ಸುಗಂಧ”ವಾಗುವ ಉನ್ನತ ಕರೆಯನ್ನೇ ಹೊಂದಿದ್ದಾರೆ. ಈ ಮನೋಭಾವ ಗುರು ವಾಲೇರಾ ಅವರ ಜೀವನದಲ್ಲಿ ಸ್ಪಷ್ಟವಾಗಿ ಪ್ರತಿಫಲಿತವಾಗಿದೆ ಎಂದರು.

ಅಂತಿಮವಾಗಿ “ಅವರಲ್ಲಿ ‘ಕುರಾ’ (ಗುರು) ಎಂಬ ಪದ ತನ್ನ ನಿಜವಾದ ಅರ್ಥವನ್ನು ಕಂಡುಕೊಂಡಿದೆ. ಸ್ಪ್ಯಾನಿಷ್‌ನ ‘ಕುರಾ’ ಎಂಬ ಪದ ಲ್ಯಾಟಿನ್ ‘cura animarum’ ನಿಂದ ಬಂದಿದೆ, ಅಂದರೆ ಜನರನ್ನು ಪ್ರೀತಿಸುವುದು, ಅವರ ಬಳಿ ಇರುವುದು, ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರ ನೋವನ್ನು ತಗ್ಗಿಸಲು ಸಹಾಯ ಮಾಡುವುದಾಗಿದೆ” ಎಂದು ಪ್ರಧಾನ ಗುರು ಸೆಮೆರಾರೊ ಹೇಳಿದರು.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

07 ಫೆಬ್ರವರಿ 2026, 17:43