ಫಿಲಿಪ್ಪೀನ್ಸ್ ಧರ್ಮಸಭೆ: ತಪಸ್ಸು ಕಾಲ ಮತ್ತು ರಂಜಾನ್ ಒಂದೇ ದಿನ ಆರಂಭ — ಏಕತೆಯ ಕರೆ
ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತುರಾ, RCJ
ರಂಜಾನ್ ಮತ್ತು ತಪಸ್ಸು ಕಾಲ ಒಂದೇ ದಿನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಫಿಲಿಪ್ಪೀನ್ಸ್‌ನ ಕಥೋಲಿಕ ಮತ್ತು ಮುಸ್ಲಿಂ ಸಮುದಾಯಗಳನ್ನು ಪ್ರಾರ್ಥನೆ, ಉಪವಾಸ ಮತ್ತು ಆಂತರಿಕ ಪರಿವರ್ತನೆಯ ಹಂಚಿಕೆಯ ಕಾಲವೆಂದು ಈ ಕ್ಷಣವನ್ನು ಸ್ವೀಕರಿಸಲು ಆಹ್ವಾನಿಸಲಾಗಿದೆ.
ರಂಜಾನ್ ಪ್ರವಾದಿ ಮುಹಮ್ಮದ್ ಅವರಿಗೆ ಕುರಾನ್‌ನ ಮೊದಲ ಪ್ರಕಟಣೆ ದೊರೆತ ಸಂದರ್ಭವನ್ನು ಸ್ಮರಿಸುತ್ತದೆ; ಅದೇ ವೇಳೆ ತಪಸ್ಸು ಕಾಲವು ಕಥೋಲಿಕರನ್ನು ಯೇಸು ಕ್ರಿಸ್ತನ ಪಾಡು, ಮರಣ ಮತ್ತು ಪುನರುತ್ಥಾನವನ್ನು ಸ್ಮರಿಸಲು ಸಿದ್ಧಪಡಿಸುತ್ತದೆ.
ರಂಜಾನ್ ಫೆಬ್ರವರಿ 17ರ ಸಂಜೆ ಆರಂಭವಾದರೂ, ಉಪವಾಸದ ಮೊದಲ ಪೂರ್ಣ ದಿನವು ಚಂದ್ರದರ್ಶನದ ಆಧಾರದ ಮೇಲೆ ಬುಧವಾರ, ಫೆಬ್ರವರಿ 18ರಿಂದ ಆರಂಭವಾಗಲಿದೆ. ಅದೇ ದಿನ ಕಥೋಲಿಕರಿಗೆ ತಪಸ್ಸು ಕಾಲ ಪ್ರಯಾಣದ ಆರಂಭವಾದ ಬೂದಿ ಬುಧವಾರವೂ ಆಗಿದೆ.
ಮುಸ್ಲಿಮರು ಮತ್ತು ಕ್ರೈಸ್ತರು ಜೊತೆಯಾಗಿ ಬದುಕುವ ದೇಶಗಳಲ್ಲಿ, ಈ ಸಂಗಮವನ್ನು ಅಪರೂಪದ ಹಾಗೂ ಅರ್ಥಪೂರ್ಣ ಕ್ಷಣವೆಂದು ಧರ್ಮಸಭೆಯ ನಾಯಕರು ಪರಿಗಣಿಸಿದ್ದಾರೆ. ಇದು “ಕರುಣಾಮಯ ಮತ್ತು ದಯಾಳು” ದೇವರತ್ತ ಒಟ್ಟಾಗಿ ಆತ್ಮಾವಲೋಕನ ಮಾಡಿಕೊಂಡು ನಡೆಯುವ ಪವಿತ್ರ ಅವಕಾಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೃಪೆಯಿಂದ ತುಂಬಿದ ಸಂಗಮ
ಫಿಲಿಪ್ಪೀನ್ಸ್‌ನ ದಕ್ಷಿಣ ಭಾಗದ ಕಿಡಪಾವನ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರೂ, ಫಿಲಿಪ್ಪೀನ್ಸ್ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನದ ಅಂತರಧರ್ಮ ಸಂವಾದ ಆಯೋಗದ ಅಧ್ಯಕ್ಷರೂ ಆದ ಪೂಜ್ಯ ಧರ್ಮಾಧ್ಯಕ್ಷ ಜೋಸೆ ಕೊಲಿನ್ ಬಗಫೊರೊ ಅವರು, ಈ ಒಂದೇ ದಿನದ ಆರಂಭದ ಆಧ್ಯಾತ್ಮಿಕ ಮಹತ್ವವನ್ನು ಒತ್ತಿ ಹೇಳಿದ್ದಾರೆ.
“ಈ ಹಂಚಿಕೆಯ ಆರಂಭವೇ ಒಂದು ಕೃಪೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ಇದು ನಮ್ಮನ್ನು ಅರ್ಥವಿಲ್ಲದ ಐಹಿಕ ಓಟದಿಂದ ನಿಧಾನಿಸಿ, ದೇವರತ್ತ ಮರಳಲು ಮತ್ತು ನಂಬಿಕೆಯಲ್ಲಿ ಒಟ್ಟಾಗಿ ನಡೆಯಲು ಆಹ್ವಾನಿಸುತ್ತದೆ,” ಎಂದು ಅವರು ತಿಳಿಸಿದ್ದಾರೆ.
“ಈ ಪವಿತ್ರ ಕಾಲಗಳಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರು ಪ್ರಾರ್ಥನೆ, ಉಪವಾಸ, ಪಶ್ಚಾತ್ತಾಪ ಮತ್ತು ದಾನಶೀಲತೆಯ ಕಾಲಕ್ಕೆ ಪ್ರವೇಶಿಸುತ್ತಾರೆ. ನಾವು ಕರುಣಾಮಯ ದೇವರತ್ತ ನಮ್ಮ ಹೃದಯಗಳನ್ನು ತಿರುಗಿಸುತ್ತೇವೆ ಮತ್ತು ಪರಸ್ಪರರನ್ನು ಸಹೋದರರು ಮತ್ತು ಸಹೋದರಿಯರೆಂದು ಮತ್ತೊಮ್ಮೆ ಕಾಣಲು ಕಲಿಯುತ್ತೇವೆ,” ಎಂದು ಅವರು ವಿವರಿಸಿದ್ದಾರೆ.
ಎರಡೂ ಧಾರ್ಮಿಕ ಪರಂಪರೆಗಳ ಪವಿತ್ರ ಗ್ರಂಥಗಳನ್ನು ಉಲ್ಲೇಖಿಸುತ್ತಾ ಧರ್ಮಾಧ್ಯಕ್ಷರು ನೆನಪಿಸಿದ್ದಾರೆ: " ‘ಶಾಂತಿಯನ್ನು ನಿರ್ಮಿಸುವವರು ಧನ್ಯರು’ (ಮತ್ತಾಯ 5:9) ಮತ್ತು ದೇವರು ‘ಎಲ್ಲರನ್ನು ಶಾಂತಿಯ ಮನೆಗೆ ಆಹ್ವಾನಿಸುತ್ತಾನೆ’ (ಕುರಾನ್ 10:25)" ಎಂದು ನಮ್ಮ ಶಾಸ್ತ್ರಗಳು ನಮಗೆ ಶಾಂತಿಗೆ ಕರೆ ನೀಡುತ್ತವೆ
ಉಪವಾಸ, ಕರುಣೆ ಮತ್ತು ಸೇವೆ
ಧರ್ಮಾಧ್ಯಕ್ಷ ಬಗಫೊರೊ ಅವರು ರಂಜಾನ್ ಮತ್ತು ತಪಸ್ಸು ಕಾಲವನ್ನು ಪ್ರಾರ್ಥನೆ, ಪಶ್ಚಾತ್ತಾಪ, ಉಪವಾಸ ಮತ್ತು ದಾನಶೀಲತೆಯ ಸಾಂಪ್ರದಾಯಿಕ ಕಾಲಗಳೆಂದು ವರ್ಣಿಸಿದ್ದಾರೆ. ಇವು ಹೃದಯವನ್ನು ನವೀಕರಿಸುವ ಮತ್ತು ಸಹೋದರ–ಸಹೋದರಿಯರಾಗಿ ಬದುಕುವ ಕರೆಯನ್ನು ಬಲಪಡಿಸುವ ಕ್ಷಣಗಳಾಗಿವೆ ಎಂದು ಅವರು ಹೇಳಿದ್ದಾರೆ.
“ಉಪವಾಸ ನಮ್ಮ ಕಣ್ಣುಗಳನ್ನು ನೋವಿನತ್ತ ತೆರೆಯುತ್ತದೆ ಮತ್ತು ನಮ್ಮ ಕರುಣೆಯನ್ನು ವಿಸ್ತರಿಸುತ್ತದೆ,” ಎಂದು ಅವರು ತಿಳಿಸಿದ್ದಾರೆ. “ದೇವರ ಮೇಲಿನ ಪ್ರೀತಿ ನೆರೆಹೊರೆಯವರ ಮೇಲಿನ ಪ್ರೀತಿಯಲ್ಲಿ, ವಿಶೇಷವಾಗಿ ಬಡವರು ಮತ್ತು ಮರೆತವರ ಮೇಲಿನ ಕಾಳಜಿಯಲ್ಲಿ ವ್ಯಕ್ತವಾಗುತ್ತದೆ,” ಎಂದು ಅವರು ಒತ್ತಿ ಹೇಳಿದ್ದಾರೆ.
ಪವಿತ್ರ ಗ್ರಂಥ ಮತ್ತು ಇಸ್ಲಾಮಿಕ್ ಪರಂಪರೆಯನ್ನು ಉಲ್ಲೇಖಿಸುತ್ತಾ ಅವರು ಮುಂದುವರಿದು ಹೇಳಿದ್ದಾರೆ:
“ಯೇಸು ಕಲಿಸುವಂತೆ, ನಾವು ಅತಿ ಚಿಕ್ಕವರಿಗಾಗಿ ಮಾಡುವುದನ್ನು ದೇವರಿಗಾಗಿಯೇ ಮಾಡುತ್ತೇವೆ (ಮತ್ತಾಯ 25:40). ಅದೇ ರೀತಿ, ಪ್ರವಾದಿ ಮುಹಮ್ಮದ್—ಅವರಿಗೆ ಶಾಂತಿ ಇರಲಿ—ಇತರರಿಗೆ ಒಳಿತು ಮಾಡುವವರೇ ನಮ್ಮಲ್ಲಿ ಶ್ರೇಷ್ಠರು ಎಂದು ಬೋಧಿಸಿದ್ದಾರೆ.”
ಸ್ವಯಂಶಿಸ್ತು ಮತ್ತು ಉದಾರತೆಯ ಮೂಲಕ, ನಿಜವಾದ ನಂಬಿಕೆ ಕೇವಲ ಭಾವನೆಯಲ್ಲ, ಕರುಣೆ ಮತ್ತು ನ್ಯಾಯದ ಸ್ಪಷ್ಟ ಕಾರ್ಯಗಳಲ್ಲಿ ವ್ಯಕ್ತವಾಗುತ್ತದೆ ಎಂಬುದನ್ನು ಭಕ್ತರು ನೆನಪಿಸಿಕೊಳ್ಳುತ್ತಾರೆ ಎಂದು ಧರ್ಮಾಧ್ಯಕ್ಷರು ತಿಳಿಸಿದ್ದಾರೆ.
ಶಾಂತಿ, ಸೃಷ್ಟಿ ಮತ್ತು ಸಹೋದರತ್ವ
ಶಾಂತಿಯು ದೇವರೊಡನೆ, ಪರಸ್ಪರರೊಡನೆ ಹಾಗೂ ಸೃಷ್ಟಿಯೊಡನೆ ಸರಿಯಾದ ಸಂಬಂಧದಲ್ಲಿ ನೆಲೆಯೂರಿರಬೇಕು ಎಂದು ಧರ್ಮಾಧ್ಯಕ್ಷ ಬಗಫೊರೊ ಒತ್ತಿ ಹೇಳಿದ್ದಾರೆ.
“ಶಾಂತಿ ಎಂದರೆ ಕೇವಲ ಯುದ್ಧದ ಅಭಾವವಲ್ಲ,” ಎಂದು ಅವರು ಹೇಳಿದ್ದಾರೆ. “ಅದು ದೇವರೊಡನೆ, ಪರಸ್ಪರರೊಡನೆ ಮತ್ತು ಸೃಷ್ಟಿಯೊಡನೆ ಇರುವ ಸರಿಯಾದ ಸಂಬಂಧ. ಭೂಮಿಯ ಅಳಲು ಮತ್ತು ಬಡವರ ಅಳಲು ಒಂದೇ,” ಎಂದು ಅವರು ವಿವರಿಸಿದ್ದಾರೆ. ಆದ್ದರಿಂದ ಪರಿಸರದ ಕಾಳಜಿ ಶಾಂತಿ ಮತ್ತು ಸಾಮಾಜಿಕ ಸೌಹಾರ್ದಕ್ಕಾಗಿ ಕೆಲಸ ಮಾಡುವುದರ ಅವಿಭಾಜ್ಯ ಅಂಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರ ಸರ್ವ ಸಹೋದರರು (Fratelli Tutti) ಪರಿಪತ್ರದ ಬೋಧನೆಯನ್ನು ನೆನಪಿಸುತ್ತಾ, “ಮಾನವ ಸಹೋದರತ್ವ ಮತ್ತು ಸಾಮಾಜಿಕ ಸ್ನೇಹ”ವನ್ನು ಶಾಂತಿಪೂರ್ಣ ಸಹಬಾಳ್ವೆಯ ಅಡಿಪಾಯವಾಗಿ ಪ್ರಚಾರ ಮಾಡುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.
“ನಾವು ಪರಸ್ಪರರ ವಿರುದ್ಧವಲ್ಲ, ಒಟ್ಟಾಗಿ ಬದುಕಲು ಸೃಷ್ಟಿಸಲ್ಪಟ್ಟವರು ಎಂಬುದನ್ನು ಪೂಜ್ಯ ಜಗದ್ಗುರುಗಳು ನಮಗೆ ನೆನಪಿಸುತ್ತಾರೆ,” ಎಂದು ಧರ್ಮಾಧ್ಯಕ್ಷ ಬಗಫೊರೊ ಹೇಳಿದ್ದಾರೆ. “ಯಾರೂ ಹೊರಗಿಡಲ್ಪಡಬಾರದು; ಯಾರೂ ಹಿಂದೆ ಬಿಟ್ಟುಬಿಡಲ್ಪಡಬಾರದು,” ಎಂದು ಅವರು ಒತ್ತಿ ಹೇಳಿದ್ದಾರೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).