2026.02.13 Campionati europei dei sacerdoti in futsal 2026.02.13 Campionati europei dei sacerdoti in futsal 

ಪೋಲ್ಯಾಂಡ್, ಕ್ರೊಯೇಷಿಯಾ, ಪೋರ್ಚುಗಲ್ — ಯುರೋಪಿಯನ್ ಗುರುಗಳ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಅಗ್ರ ಸ್ಥಾನ

18ನೇ ಯುರೋಪಿಯನ್ ಗುರುಗಳ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಪೋಲ್ಯಾಂಡ್ ರಾಷ್ಟ್ರೀಯ ಗುರುಗಳ ತಂಡವು ಇತಿಹಾಸದಲ್ಲಿ 10ನೇ ಬಾರಿ ಚಿನ್ನದ ಪದಕವನ್ನು ಗೆದ್ದು ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. ಕ್ರೊಯೇಷಿಯಾ ದ್ವಿತೀಯ ಸ್ಥಾನ ಪಡೆದಿದ್ದು, ಪೋರ್ಚುಗಲ್ ತೃತೀಯ ಸ್ಥಾನವನ್ನು ಪಡೆದಿದೆ.

ಲೇಖಕರು: ಮೋನಿಕಾ ಸ್ಟಾಜೋಸ್ಕ,ಲುಬ್ಲಿನ್

ಪೋಲ್ಯಾಂಡ್ ತಂಡದ ನಾಯಕ ವಂ. ಗುರು ಮಾರೆಕ್ ವೋಸಿಯಾಕ್ ಅವರು ವಿಜಯದ ಬಳಿಕ ಪ್ರತಿಕ್ರಿಯಿಸಿ, “ನಾವು ನಮ್ಮ ಸಂತೋಷವನ್ನು ಹಂಚಿಕೊಳ್ಳಲು, ಅಭಿಮಾನಿಗಳೊಂದಿಗೆ ಸಂಭ್ರಮಿಸಲು ಹಾಗೂ ಗುರುಗಳು ಕೇವಲ ಧಾರ್ಮಿಕ ಸೇವಕರು ಮಾತ್ರವಲ್ಲ — ಉತ್ಸಾಹ ಮತ್ತು ಪ್ರತಿಭೆಯುಳ್ಳವರು, ಮುಖ್ಯವಾಗಿ ಹೃದಯದಲ್ಲಿ ದೇವರನ್ನು ಧರಿಸಿರುವವರು ಎಂಬುದಕ್ಕೆ ಸಾಕ್ಷಿಯಾಗಲು ಬಯಸುತ್ತೇವೆ,” ಎಂದು ಹೇಳಿದರು.

ವ್ಯಾಟಿಕನ್‌ನಿಂದ ಸಂದೇಶ

ಪವಿತ್ರ ಪೀಠದ ಸಂಸ್ಕೃತಿ ಮತ್ತು ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರಧಾನ ಗುರು ಜೋಸೆ ಟೋಲೆಂಟಿನೋ ದೆ ಮೆಂಡೊನ್ಸಾ ಅವರು ರಾಷ್ಟ್ರೀಯ ತಂಡಗಳು ಹಾಗೂ ಆಯೋಜಕರಿಗೆ  ಕಳುಹಿಸಿದ

ತಮ್ಮ ಸಂದೇಶದಲ್ಲಿ ಅವರು ಲುಬ್ಲಿನ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಸ್ಟಾನಿಸ್ಲಾವ್ ಬುದ್ಜಿಕ್ ಅವರಿಗೆ ಈ ಕ್ರೀಡಾ ಮಹೋತ್ಸವವನ್ನು ಆತಿಥ್ಯ ನೀಡಿ ಯಶಸ್ವಿಯಾಗಿ ಆಯೋಜಿಸಿದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು.  ಜೊತೆಗೆ ಚಾಂಪಿಯನ್‌ಶಿಪ್ ಸಿದ್ಧತೆಯಲ್ಲಿ ತೊಡಗಿಸಿಕೊಂಡ ಗುರುಗಳು ಹಾಗೂ ಸಹಕರಿಸಿದ ಸಂಸ್ಥೆಗಳಿಗೆ ಧನ್ಯವಾದ ಸಲ್ಲಿಸಿದರು.

ತಮ್ಮ ಸಂದೇಶದಲ್ಲಿ: “ಇತ್ತೀಚಿನ ಕ್ರೀಡಾ ಜುಬಿಲಿ ಸಂದರ್ಭದಲ್ಲಿ ಪೂಜ್ಯ ಜಗದ್ಗುರುಗಳು ಹೇಳಿರುವಂತೆ, ‘ಕ್ರೀಡೆ ನಮ್ಮ ಕಾಲದ ಅನೇಕ ಸಂತರ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ; ಅದು ವೈಯಕ್ತಿಕ ಶಿಸ್ತಿಗಾಗಿಯೂ ಸುವಾರ್ತಾಪ್ರಚಾರದ ಸಾಧನವಾಗಿಯೂ ಕಾರ್ಯನಿರ್ವಹಿಸಿದೆ.’ ಈ ಕಾರಣದಿಂದ ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ಗುರುಗಳಿಗೆ ಕೃತಜ್ಞತೆ ಮತ್ತು ಪ್ರೋತ್ಸಾಹದ ಮಾತುಗಳನ್ನು ಅರ್ಪಿಸುತ್ತೇನೆ,” ಎಂದು ಪ್ರಧಾನ ಗುರು ಮೆಂಡೊನ್ಸಾ ಬರೆದಿದ್ದಾರೆ.

ಹದಿನೆಂಟು ತಂಡಗಳಲ್ಲಿ ಮುನ್ನಡೆದ ನಾಯಕರು

ಲುಬ್ಲಿನ್ ನಗರ ಹಾಗೂ ಲುಬ್ಲಿನ್ ಮಹಾಧರ್ಮಕ್ಷೇತ್ರದ ಆತಿಥ್ಯದಲ್ಲಿ ನಡೆದ ಈ ವರ್ಷದ ಯುರೋಪಿಯನ್ ಗುರುಗಳ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಯುರೋಪಿನ ವಿವಿಧ ದೇಶಗಳಿಂದ ಆಗಮಿಸಿದ 18 ಗುರುಗಳ ತಂಡಗಳು ಪಾಲ್ಗೊಂಡವು. ಅಲ್ಬೇನಿಯಾ, ಆಸ್ಟ್ರಿಯಾ, ಇಟಲಿ, ಹಂಗೇರಿ, ಚೆಕ್ ಗಣರಾಜ್ಯ, ಸ್ಲೋವಾಕಿಯಾ, ಉಕ್ರೇನ್ ಸೇರಿದಂತೆ ಅನೇಕ ದೇಶಗಳ ಪ್ರತಿನಿಧಿಗಳು ಭಾಗವಹಿಸಿದರು. ಪಂದ್ಯಗಳು ನಗರದ ವಿಶ್ವವಿದ್ಯಾಲಯಗಳ ಕ್ರೀಡಾಂಗಣಗಳಲ್ಲಿ ನಡೆದವು.

ಪಂದ್ಯಾವಳಿಗಳು ಸ್ನೇಹಭಾವ ಮತ್ತು ಪರಸ್ಪರ ಗೌರವದ ವಾತಾವರಣದಲ್ಲಿ ನಡೆದಿದ್ದು, ಕೇವಲ ಕ್ರೀಡಾ ಸ್ಪರ್ಧೆಗೆ ಮಾತ್ರ ಸೀಮಿತವಾಗಿರದೆ, ಕ್ರೀಡೆಯ ಮೂಲಕ ಗುರುಗಳ ನಡುವೆ ಸಹೋದರತ್ವವನ್ನು ಬಲಪಡಿಸುವ ಉದ್ದೇಶವನ್ನೂ ಹೊಂದಿದ್ದವು.

2005ರಲ್ಲಿ ಆಸ್ಟ್ರಿಯಾದಲ್ಲಿ ಆರಂಭವಾದ ಈ ಚಾಂಪಿಯನ್‌ಶಿಪ್, ಕಳೆದ ವರ್ಷಗಳಲ್ಲಿ ಯುರೋಪಿನ ಗುರುಗಳ ಏಕತೆಯ ಪ್ರತೀಕವಾಗಿ ಬೆಳೆದಿದ್ದು, ರಾಷ್ಟ್ರೀಯ ಗಡಿಗಳನ್ನು ಮೀರಿ ಬಂಧುತ್ವದ ಸಂದೇಶವನ್ನು ಹರಡುತ್ತಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

13 ಫೆಬ್ರವರಿ 2026, 18:35