ಸೈಬೀರಿಯಾ: ಪಂಥಭೇದ ಮೀರಿ ಕ್ರೈಸ್ತರ ಸೇವಾ ಏಕತೆ
ಲೇಖಕರು: ಸಹೋದರಿ ವಿಯೆರಾ (ಎಲೆನಾ) ಇಸಾಚೆಂಕೊ,SMCB
ಸ್ವತಂತ್ರ ಸಂಶೋಧನಾ ಸಂಸ್ಥೆ ವ್ಯಾಲಿಡಾಟಾ (Validata) ವರದಿ ಪ್ರಕಾರ, ರಷ್ಯಾದಲ್ಲಿ ಸುಮಾರು 21.3 ಲಕ್ಷ ನಿರಾಶ್ರಿತರು ಇದ್ದಾರೆ. ಅವರಲ್ಲಿ 36,000 ಕ್ಕೂ ಹೆಚ್ಚು ಮಂದಿ ಕ್ರಾಸ್ನೊಯಾರ್ಸ್ಕ್ ಪ್ರದೇಶದಲ್ಲಿದ್ದಾರೆ. ಕ್ರಾಸ್ನೊಯಾರ್ಸ್ಕ್ ನಗರದಲ್ಲಿ ಕೇವಲ ಒಂದು ಆಶ್ರಯ ಕೇಂದ್ರವಿದ್ದು, ಅದರಲ್ಲಿ 33 ಹಾಸಿಗೆಗಳಷ್ಟೇ ಲಭ್ಯವಿವೆ.
ವರ್ಷಗಳಿಂದ ವಿವಿಧ ಕ್ರೈಸ್ತ ಪಂಥಗಳವರು ತಮ್ಮ ತಮ್ಮ ರೀತಿಯಲ್ಲಿ ನಿರಾಶ್ರಿತರಿಗೆ ಸಹಾಯ ಮಾಡುತ್ತಿದ್ದರು. ಆದರೆ 2020ರಿಂದ ಅವರು “ಮೊಬೈಲ್ ಫೀಡಿಂಗ್ ಸ್ಟೇಷನ್ಸ್” ಎಂಬ ಯೋಜನೆಯಡಿ ಏಕತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಮುಖ್ಯ ಉದ್ದೇಶ ನಿರಾಶ್ರಿತರಿಗೆ ಪ್ರತಿದಿನ ಬಿಸಿ ಆಹಾರ ಒದಗಿಸುವುದು.
ಪ್ರಸ್ತುತ ನಗರದಲ್ಲಿ ಒಂಬತ್ತು ಶಾಶ್ವತ ವಿತರಣೆ ಕೇಂದ್ರಗಳಿದ್ದು, ಅವುಗಳಲ್ಲಿ ಎರಡು ಕೇಂದ್ರಗಳಲ್ಲಿ ಪ್ರತಿದಿನ ಮಧ್ಯಾಹ್ನ ಊಟ ನೀಡಲಾಗುತ್ತದೆ. ವಾರದ ಪ್ರತಿದಿನದ ಹೊಣೆಗಾರಿಕೆಯನ್ನು ವಿಭಿನ್ನ ಕ್ರೈಸ್ತ ಸಮುದಾಯಗಳು ವಹಿಸಿಕೊಂಡಿವೆ — ಸೋಮವಾರ ಕಥೋಲಿಕರು, ಮಂಗಳವಾರ ಮತ್ತು ಗುರುವಾರ ಆರ್ಥೋಡಾಕ್ಸ್ ಸಭೆ, ಉಳಿದ ದಿನಗಳಲ್ಲಿ ಪ್ರೊಟೆಸ್ಟಂಟ್ ಸಭೆಗಳು ಆಹಾರ ಸಿದ್ಧಪಡಿಸಿ ವಿತರಿಸುತ್ತಿವೆ.
ಆಹಾರ ವಿತರಿಸುವುದು ಸಹಾಯದ ಮೊದಲ ಹಂತ ಮಾತ್ರ. ಆದರೆ ಅದು ಸಂಕಷ್ಟದಲ್ಲಿರುವವರೊಂದಿಗೆ ಸಂಭಾಷಣೆ ಆರಂಭಿಸಲು ಮತ್ತು ಆಶ್ರಯವಿಲ್ಲದವರ ಜೀವನದಲ್ಲಿ ಬೆಂಬಲ ನೀಡಲು ದಾರಿಯನ್ನು ತೆರೆದು ಕೊಡುತ್ತದೆ.
ಸೈಬೀರಿಯಾದ ಕ್ರಾಸ್ನೊಯಾರ್ಸ್ಕ್ ನಗರದಲ್ಲಿ ನಿರಾಶ್ರಿತರಿಗಾಗಿ ನಡೆಯುತ್ತಿರುವ ಕ್ರೈಸ್ತ ಸಭೆಗಳ ಸಂಯುಕ್ತ ಸೇವಾ ಕಾರ್ಯಾಚರಣೆ ಹೊಸ ಮಾದರಿಯ ಸಾಮಾಜಿಕ ಏಕ್ಯತೆಗೆ ಉದಾಹರಣೆಯಾಗಿದೆ. ಕಥೋಲಿಕ, ಆರ್ಥಡಾಕ್ಸ್ ಮತ್ತು ಪ್ರೊಟೆಸ್ಟಂಟ್ ಸಭೆಗಳು ಒಟ್ಟಾಗಿ ಕಾರ್ಯನಿರ್ವಹಿಸಿ ಕೇವಲ ಉಚಿತ ಆಹಾರ ವಿತರಿಸುವುದಲ್ಲದೆ, ಸಮಗ್ರ ಪುನರ್ವಸತಿ ಸಹಾಯವನ್ನೂ ಒದಗಿಸುತ್ತಿವೆ.
ಈ ತಂಡವು ನಿರಾಶ್ರಿತರ ಕಳೆದುಹೋದ ಗುರುತಿನ ದಾಖಲೆಗಳನ್ನು ಮರುಸ್ಥಾಪಿಸಲು ನೆರವಾಗುತ್ತದೆ. ಅಗತ್ಯವಿದ್ದಲ್ಲಿ ಆಶ್ರಯ ಕೇಂದ್ರಗಳು ಅಥವಾ ಪುನರ್ವಸತಿ ಕೇಂದ್ರಗಳಲ್ಲಿ ಸ್ಥಳ ಕಲ್ಪಿಸಲು ಕ್ರಮ ಕೈಗೊಳ್ಳುತ್ತದೆ. ಜೊತೆಗೆ ಔಷಧಿ, ಬಟ್ಟೆ ಹಾಗೂ ಪಾದರಕ್ಷೆಗಳ ವಿತರಣೆ ಕೂಡ ನಡೆಯುತ್ತಿದೆ. ಕುಟುಂಬದವರಿಲ್ಲದೆ ಸಾವನ್ನಪ್ಪುವ ನಿರಾಶ್ರಿತರ ಅಂತ್ಯಕ್ರಿಯೆಗಳ ವೆಚ್ಚವನ್ನು ಸಹ ಕ್ರೈಸ್ತ ಸಮುದಾಯಗಳ ಸಂಯುಕ್ತ ದೇಣಿಗೆಯಿಂದ ಭರಿಸಲಾಗುತ್ತಿದೆ.
ಸೇವಾ ಕಾರ್ಯದಲ್ಲಿ ತೊಡಗಿರುವವರಲ್ಲಿ ಹಲವರು ವೈಯಕ್ತಿಕ ಅನುಭವಗಳಿಂದ ಪ್ರೇರಿತರಾಗಿದ್ದಾರೆ. ಪ್ರೊಟೆಸ್ಟಂಟ್ “ಕ್ರಿಶ್ಚಿಯನ್ ಲೈಫ್” ಸಭೆಯ ಸದಸ್ಯೆ ಲ್ಯೂಡ್ಮಿಲಾ ಸಾಮೊಯ್ಲೋವಾ ಅವರು ತೀವ್ರ ಚಳಿಯಲ್ಲಿ ಬಸ್ ನಿಲ್ದಾಣದಲ್ಲಿ ಕಂಡ ನಿರಾಶ್ರಿತ ವ್ಯಕ್ತಿಯೊಂದಿಗೆ ನಡೆದ ಘಟನೆಯನ್ನು ಸ್ಮರಿಸುತ್ತಾರೆ. ಪ್ರಯಾಣ ದರ ಕೊಡಲು ಸಾಧ್ಯವಾಗದೆ ಬಸ್‌ನಿಂದ ಇಳಿಸಲ್ಪಡುತ್ತಿದ್ದ ಆ ವ್ಯಕ್ತಿಗೆ ಅವರು ನೆರವಾದ ಘಟನೆ ಅವರ ಸೇವಾ ಪ್ರವೃತ್ತಿಗೆ ತಿರುವು ನೀಡಿತು.
ಕಳೆದ ಐದು ವರ್ಷಗಳಿಂದ ಸಂತ ಚಾರ್ಲ್ಸ್ ಬೊರೊಮಿಯೋ ಕರುಣಾ ಸಹೋದರಿಯರು ಹಾಗೂ ಪ್ರಭುವಿನ ರೂಪಾಂತರ ಧರ್ಮಕೇಂದ್ರದ ಕಥೋಲಿಕ ಭಕ್ತಾದಿಗಳು ಈ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಈ ಯೋಜನೆಯಲ್ಲಿ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೊಡುಗೆ ನೀಡುತ್ತಿದ್ದಾರೆ. ಉದಾಹರಣೆಗೆ, ಒಂದು ಕುಟುಂಬವು ಪ್ರತಿವಾರ 40 ಬನ್‌ಗಳನ್ನು ತಯಾರಿಸಿ ವಿತರಿಸುವ ಹೊಣೆ ಹೊತ್ತಿದೆ.
“ದೇವರು ನಮ್ಮ ಮೂಲಕ ಕಾರ್ಯನಿರ್ವಹಿಸುತ್ತಾರೆ,” ಎಂದು SMCB ಸಭೆಯ ವಂ. ಸ. ಲೆಟಿಜ್ಯಾ ಗೊರ್ನಿಯೆವಿಚ್ ಹೇಳುತ್ತಾರೆ. “ಆಹಾರ ಸಿದ್ಧಪಡಿಸುವವರಲ್ಲಿಯೂ, ನೆರವಿಗಾಗಿ ಬರುವವರಲ್ಲಿಯೂ ದೇವರ ಕಾರ್ಯವೇ ವ್ಯಕ್ತವಾಗುತ್ತದೆ. ಇದು ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಹೃದಯದಿಂದ ಭೇಟಿ ಮಾಡುವ, ಮಾನವೀಯತೆ ಸಂಧಿಸುವ ಸ್ಥಳ.”
ಸರ್ಜಿ, ಇವಾನ್ ಮತ್ತು ಅಂದ್ರೇಯ್: ಕರುಣೆಯ ಕಥೆಗಳು
ಕ್ರಾಸ್ನೋಯಾರ್ಸ್ಕ್ ನಗರದಲ್ಲಿ ನಡೆದ “ಮೊಬೈಲ್ ಫೀಡಿಂಗ್ ಸ್ಟೇಷನ್” ಕಾರ್ಯಾಚರಣೆಯ ಪಯಣದಲ್ಲಿ ಅನೇಕ ದುಃಖಭರಿತ ಹಾಗೂ ಪ್ರೇರಣಾದಾಯಕ ಕಥೆಗಳು ಮೂಡಿವೆ. ಅವುಗಳಲ್ಲಿ ಸರ್ಜಿ ಅವರ ಕಥೆ ವಿಶೇಷವಾಗಿ ಗಮನ ಸೆಳೆಯುತ್ತದೆ.
“ನಾವು ಅವರನ್ನು ನೇರವಾಗಿ ಕಸದ ಬಂಡಿಯಿಂದ ಹೊರತೆಗೆದಂತೆಯೇ,” ಎಂದು ಪೆಂಟೆಕೊಸ್ತ್ ಸಮುದಾಯದ ಕ್ರಿಸ್ಟಿನಾ ಕಿಸಿಡಿ ನೆನಪಿಸಿಕೊಳ್ಳುತ್ತಾರೆ. “ಅವರ ದೇಹವೆಲ್ಲಾ ಗಾಯಗಳಿಂದ ತುಂಬಿತ್ತು. ಬದುಕಿಗೆ ದಾರಿ ಕಾಣದೆ ಕುಸಿದು ಹೋಗಿದ್ದರು. ಇಂದು ಅವರಿಗೆ ಸುಂದರ ಕುಟುಂಬವಿದೆ—ಪತ್ನಿ ಹಾಗೂ ಮೂವರು ಮಕ್ಕಳು. ಆ ಸಂಕಷ್ಟದ ಕ್ಷಣದಲ್ಲಿ ನೆರವಾಗಿದ್ದು ಅವರ ಬದುಕನ್ನೇ ತಿರುಗಿಸಿತು.”
ಇವಾನ್ ಮತ್ತು ಅಂದ್ರೇಯ್ ಅವರ ಕಥೆಗಳು ಸಮುದಾಯದ ಎಲ್ಲರ ಮನದಲ್ಲೂ ಅಚ್ಚಳಿಯದ ಗುರುತು ಬಿಟ್ಟಿವೆ.
ಉತ್ತರ ಭಾಗದ ನೊರಿಲ್ಸ್ಕ್ ನಗರದಿಂದ ಕ್ರಾಸ್ನೋಯಾರ್ಸ್ಕ್‌ಗೆ ಬಂದಿದ್ದ ಇವಾನ್ ರೈಲು ನಿಲ್ದಾಣದಲ್ಲೇ ದರೋಡೆಗೆ ಒಳಗಾದರು. ಆಘಾತದಿಂದ ನಡುಗಿದ ಅವರು ಸೇತುವೆಯೊಂದರ ಮೇಲೆ ಆತ್ಮಹತ್ಯೆ ಯೋಚನೆಗೆ ತಲುಪಿದ್ದರು. ಅದೇ ವೇಳೆ ಒಬ್ಬ ನಿರಾಶ್ರಿತ ವ್ಯಕ್ತಿ ಅವರನ್ನು ಗಮನಿಸಿದರು. “ನನ್ನ ಜೊತೆಗೆ ಬನ್ನಿ. ಸಹಾಯ ದೊರೆಯುವ ಸ್ಥಳವಿದೆ,” ಎಂದು ಹೇಳಿದರು.
ಈ ರೀತಿಯಾಗಿ ಇವಾನ್ ‘ಕ್ರಿಶ್ಚಿಯನ್ ಲೈಫ್’ ಸಭೆಯ ಸಹಾಯ ಕೇಂದ್ರಕ್ಕೆ ತಲುಪಿದರು. ಅವರಿಗೆ ಆಹಾರ ನೀಡಲಾಯಿತು, ಪೊಲೀಸರ ಬಳಿ ಕರೆದೊಯ್ಯಲಾಯಿತು, ಕಳೆದುಹೋದ ದಾಖಲೆಗಳ ಬಗ್ಗೆ ದೂರು ದಾಖಲಿಸಲು ನೆರವಾಯಿತು. ಆಶ್ರಯ ಗೃಹದಲ್ಲಿ ಸ್ಥಳ ಕಲ್ಪಿಸಲಾಯಿತು, ಬಟ್ಟೆ ನೀಡಲಾಯಿತು. ಕೆಲವೇ ದಿನಗಳಲ್ಲಿ ಅವರ ದಾಖಲೆಗಳು ಪತ್ತೆಯಾದವು. ಕುಟುಂಬವನ್ನು ಸಂಪರ್ಕಿಸಿ ಮನೆಗೆ ಮರಳಲು ಟಿಕೆಟ್ ಹಣ ಕೇಳುವ ಧೈರ್ಯವೂ ಅವರಲ್ಲಿ ಮೂಡಿತು.
ಅಂದ್ರೇಯ್ ಅವರ ಕಥೆ ಇನ್ನೂ ವಿಭಿನ್ನ. ಅವರು ಆಹಾರಕ್ಕಾಗಿ ಅಲ್ಲ, ಸ್ನೇಹಪೂರ್ಣ ಮಾತುಕತೆಗೆ ಬರುತ್ತಿದ್ದೇನೆ ಎಂದು ಹೇಳುತ್ತಿದ್ದರು. ಸದಾ ತಮ್ಮ ಪಾಲನ್ನು ಕೊನೆಯಲ್ಲಿ ತೆಗೆದುಕೊಳ್ಳುತ್ತಿದ್ದರು. ಯಾರಾದರೂ ತಡವಾಗಿ ಬಂದು ಊಟ ತಪ್ಪಿಸಿಕೊಂಡರೆ, ತಮ್ಮ ಪಾಲನ್ನೇ ಅವರಿಗೆ ನೀಡುತ್ತಿದ್ದರು.
ಒಮ್ಮೆ ಅಂದ್ರೇಯ್ ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೇಳಿಬಂದಿತು. ಆದರೆ ಒಂದು ತಿಂಗಳ ಬಳಿಕ ಅವರು ಪುನಃ ಆಹಾರ ಕೇಂದ್ರಕ್ಕೆ ಕಾಣಿಸಿಕೊಂಡರು—ಅದು ಈಸ್ಟರ್ ಸೋಮವಾರ. ಆ ದಿನ ಕಥೋಲಿಕ ಸದಸ್ಯರು, “ಕ್ರಿಸ್ತರು ಮಾತ್ರವೇ ಪುನರುತ್ಥಾನ ಹೊಂದಲಿಲ್ಲ,ನೀವೂ ಕೂಡ ಮತ್ತೆ ಎದ್ದು ಬಂದಿದ್ದೀರಿ” ಎಂದು ಹಾಸ್ಯಭರಿತವಾಗಿ ಸ್ವಾಗತಿಸಿದರು.
ವರ್ಷದಲ್ಲಿ ಹಲವಾರು ಬಾರಿ “ಮೊಬೈಲ್ ಫೀಡಿಂಗ್ ಸ್ಟೇಷನ್” ಸೇವೆಯಲ್ಲಿ ತೊಡಗಿರುವ ವಿವಿಧ ಪಂಥಗಳ ಕ್ರೈಸ್ತರು ಒಂದಾಗಿ ಸೇರಿ ಪ್ರಾರ್ಥನೆ ನಡೆಸುತ್ತಾರೆ ಮತ್ತು ತಮ್ಮ ಯೋಜನೆಗಳು, ಅಗತ್ಯಗಳು ಹಾಗೂ ಭವಿಷ್ಯದ ಕಾರ್ಯಕ್ರಮಗಳನ್ನು ಹಂಚಿಕೊಳ್ಳುತ್ತಾರೆ. ಈ ಸಭೆಗಳು ಪರಸ್ಪರ ವಿಶ್ವಾಸ ಮತ್ತು ಏಕತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ.
“ಕ್ರೈಸ್ತರು ಒಂದಾದಾಗ ‘ನಾವು’ ಮತ್ತು ‘ನೀವು’ ಎಂಬ ಬೇಧ ಉಳಿಯುವುದಿಲ್ಲ—ಅದು ‘ನಾವು’ ಎಂಬ ಒಗ್ಗಟ್ಟು ಮಾತ್ರವಾಗುತ್ತದೆ,” ಎಂದು ಆರ್ಥಡಾಕ್ಸ್ ಸಭೆಯ ಮರೀನಾ ಬಾಲ್ಚುಗೋವಾ ಅಭಿಪ್ರಾಯಪಡುತ್ತಾರೆ.
“ವಿವಿಧ ಪಂಥಗಳ ಐಕ್ಯ ಸೇವೆಯ ಈ ಅನುಭವವು, ನನ್ನ ದೃಷ್ಟಿಯಲ್ಲಿ, ಪ್ರಭು ಏಕತೆಯನ್ನು ಬಯಸುತ್ತಾರೆ ಮತ್ತು ಅದು ನಿಜವಾಗಿಯೂ ಸಾಧ್ಯವೆಂಬುದಕ್ಕೆ ಜೀವಂತ ಉದಾಹರಣೆ,” ಎಂದು SMCB ಸಭೆಯ ವಂ. ಸ. ಲೆಟಿಜ್ಯಾ ಗೊರ್ನಿಯೆವಿಚ್ ತಿಳಿಸಿದ್ದಾರೆ.
“ನಮ್ಮನ್ನು ಒಂದಾಗಿಸಲು ಸಭಾ ಅಧಿಕಾರಿಗಳ ನಿರ್ಧಾರವನ್ನು ಕಾಯಬೇಕಾದ ಅಗತ್ಯವಿಲ್ಲ. ನಾವು ಕ್ರಿಸ್ತನಲ್ಲೇ ಸ್ವಯಂ ಒಂದಾಗಬಹುದು. ದೇವರ ಕರುಣೆಯನ್ನು ಅಗತ್ಯವಿರುವವರಿಗೆ ಒಟ್ಟಾಗಿ ತಲುಪಿಸುವುದು—ದೇವರನ್ನು ಹುಡುಕುತ್ತಿರುವ ಪ್ರತಿಯೊಬ್ಬರಿಗೂ ಶಕ್ತಿಯುತ ಸಾಕ್ಷಿಯಾಗಿದೆ,” ಎಂದು ಅವರು ಹೇಳುತ್ತಾರೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).