2026.02.05 PS166 COPERTINA: Suor Jacqueline Githiri, VDM, durante una sessione di consulenza con una cliente 2026.02.05 PS166 COPERTINA: Suor Jacqueline Githiri, VDM, durante una sessione di consulenza con una cliente 

ಕೀನ್ಯಾ: ಪ್ರೀತಿಯಿಂದ ಕುಟುಂಬಗಳನ್ನು ಪುನರ್‌ಸ್ಥಾಪಿಸಿ, ಹೃದಯಗಳನ್ನು ಗುಣಪಡಿಸುವ ಸೇವೆ

ದುಃಖ, ವ್ಯಸನ ಮತ್ತು ಮುರಿದುಹೋದ ಕುಟುಂಬಗಳು ಹೆಚ್ಚುತ್ತಿರುವ ಇಂದಿನ ಜಗತ್ತಿನಲ್ಲಿ, ಸಹೋದರಿ ಜಾಕ್ವೆಲಿನ್ ಗಿಥಿರಿ, VDM, ಸಮಾಲೋಚನೆ, ಕರುಣೆ ಮತ್ತು ಆತ್ಮೀಯ ಪುನರುಜ್ಜೀವನದ ಮೂಲಕ ಜನರ ಬದುಕನ್ನು ಮೌನವಾಗಿ ಪರಿವರ್ತಿಸುತ್ತಾ, ಭರವಸೆ ಮತ್ತು ಗುಣಮುಖತೆಯ ದೀಪವಾಗುವ ತನ್ನ ಧ್ಯೇಯವನ್ನು ಮುಂದುವರಿಸುತ್ತಿದ್ದಾರೆ.

ಲೇಖಕರು: ಸಹೋದರಿ ಕ್ರಿಸ್ಟಿನ್ ಮಸಿವೊ, CPS

ಕೀನ್ಯಾ ಧರ್ಮಕ್ಷೇತ್ರಕ್ಕೆ ಸೇರಿದ “ಮರಿಯಮ್ಮನವರ ಭೇಟಿಯ ಪುತ್ರಿಯರು” (Visitation Daughters of Mary) ಎಂಬ ಧಾರ್ಮಿಕ ಸಭೆಯ ಸಹೋದರಿಯರು, ನಿರಾಶೆ ಹಾಗೂ ಹತಾಶೆಯಲ್ಲಿ ಮುಳುಗಿರುವ ಜನರ ಹೃದಯಗಳನ್ನು ಗುಣಪಡಿಸಿ, ಅವರಲ್ಲಿ ಭರವಸೆಯನ್ನು ಪುನರುಜ್ಜೀವನಗೊಳಿಸುವ ಸೇವೆಗೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದಾರೆ.

ಈ ಸೇವೆಯಲ್ಲಿ ಸಹೋದರಿ ಜಾಕ್ವೆಲಿನ್ ಗಿಥಿರಿ, VDM, ಕರುಣೆ ಮತ್ತು ಸ್ಥೈರ್ಯದ ಸಂಕೇತವಾಗಿ ನಿಂತಿದ್ದಾರೆ. ಧಾರ್ಮಿಕ ಸಹೋದರಿಯಾಗಿ ತಮಗೆ ವಹಿಸಲ್ಪಟ್ಟ ಜನರ ನಡುವೆ ಅವರು ತೋರಿಸುತ್ತಿರುವ ಸಾನ್ನಿಧ್ಯವೇ ಸಹಾಯದ ಭರವಸೆಯ ದೀಪವಾಗಿದೆ.

ನಮ್ಮ ಸೇವೆ

“ನಮ್ಮ ಸಭೆ 2020ರಲ್ಲಿ ಕೀನ್ಯಾದ ಕಿಸುಮು ಮಹಾಧರ್ಮಕ್ಷೇತ್ರದಲ್ಲಿ ಸ್ಥಾಪಿತವಾದ ಹೊಸ ಸಭೆ,” ಎಂದು ಸಹೋದರಿ ಜಾಕ್ವೆಲಿನ್ ವಿವರಿಸಿದ್ದಾರೆ. “ನಮ್ಮ ದೈವ ಕರೆ

 ಕುಟುಂಬಗಳ ಆತ್ಮಿಕ ಪುನರುಜ್ಜೀವನವಾಗಿದೆ. ಇಂದು ಅನೇಕ ಕುಟುಂಬಗಳು ವಿಚ್ಛೇದನ, ಮಾನಸಿಕ ಒತ್ತಡ ಹಾಗೂ ಖಿನ್ನತೆ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವುದನ್ನು ನಾವು ಕಾಣುತ್ತಿದ್ದೇವೆ, ಈ ಸಮಸ್ಯೆಗಳ ಬಹುತೇಕ ಬೇರುಗಳು ಆತ್ಮಿಕ ಶೂನ್ಯತೆಯಲ್ಲಿ ನೆಲೆಗೊಂಡಿವೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಆದ್ದರಿಂದ, ಕುಟುಂಬಗಳಿಗೆ ಅವರ ಮೂಲದಿಂದಲೇ ಸೇವೆ ಮಾಡುವ ಕರೆಯನ್ನು ನಾವು ಅನುಭವಿಸುತ್ತಿದ್ದೇವೆ,” ಎಂದು ಅವರು ಹೇಳಿದ್ದಾರೆ.

ಈ ಉದ್ದೇಶಕ್ಕಾಗಿ, ನಮ್ಮ ಸಭೆ ಸಮಾಲೋಚನೆ, ಸಾಮಾಜಿಕ ಸೇವೆ ಹಾಗೂ ಪಾಲನಾ ಸೇವೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಸಹೋದರಿ ಜಾಕ್ವೆಲಿನ್ ವಿವರಿಸಿದ್ದಾರೆ.

ಸೇವೆ ಮತ್ತು ಕರೆ

ಸಹೋದರಿ ಜಾಕ್ವೆಲಿನ್ ಗಿಥಿರಿ ಅವರು ಸಮಾಲೋಚನೆ, ಆತ್ಮೀಯ ಮಾರ್ಗದರ್ಶನ ಮತ್ತು ನಿರಂತರ ಸೇವೆಯ ಮೂಲಕ ವಿವಿಧ ಹಿನ್ನೆಲೆಯ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಗೃಹಹಿಂಸೆ, ಖಿನ್ನತೆ ಹಾಗೂ ಮಾನಸಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ಅವರು ಜೊತೆಯಾಗಿದ್ದು, ವಿಶೇಷವಾಗಿ ಯುವಜನರು, ಧಾರ್ಮಿಕ ಸಹೋದರ-ಸಹೋದರಿಯರು ಹಾಗೂ ಗುರುಗಳಿಗೂ ಸ್ನೇಹಮಯ ಸೇವೆ ನೀಡುತ್ತಿದ್ದಾರೆ. ಅವರ ಸೇವೆಯ ಉದ್ದೇಶವು ಜನರು ತಮ್ಮ ಮಾನವೀಯ ಘನತೆಯನ್ನು ಮರುಪಡೆಯಲು ಮತ್ತು ಆಂತರಿಕ ಶಾಂತಿಯನ್ನು ಕಂಡುಕೊಳ್ಳಲು ಸಹಾಯ ಮಾಡುತ್ತಿವೆ.

ತಮ್ಮ ಕರೆಯ ಕುರಿತು ಮಾತನಾಡಿದ ಸಹೋದರಿ ಜಾಕ್ವೆಲಿನ್, “ಧರ್ಮೋಪದೇಶ ತರಬೇತಿಯ ನಂತರದ ರೂಪಣೆಯ ಸಂದರ್ಭದಲ್ಲಿ ಮಾರ್ಗದರ್ಶನ ಮತ್ತು ಸಮಾಲೋಚನೆಗೆ ನನ್ನ ಕರೆಯು ಸ್ಪಷ್ಟವಾಯಿತು,ಅನೇಕ ಜನರು ತಮ್ಮ ವಿವಿಧ ಸಮಸ್ಯೆಗಳೊಂದಿಗೆ ನನ್ನ ಬಳಿಗೆ ಬರುತ್ತಿದ್ದರು, ಆದರೆ ಕೆಲವರಿಗೆ ಸಹಾಯ ಮಾಡಲು ನನಗೆ ಸಾಧ್ಯವಾಗುತ್ತಿರಲಿಲ್ಲ,” ಎಂದು ಅವರು ವಿವರಿಸಿದ್ದಾರೆ.

 “ನಾನು ಪ್ರಾರ್ಥಿಸಿದೆ, ಮತ್ತು ದೇವರು ನನ್ನ ಪ್ರಾರ್ಥನೆಗಳಿಗೆ ಉತ್ತರಿಸಿದರು; ನನ್ನ ಧ್ಯೇಯ ಸೇವೆಯ ನಿಮಿತ್ತ ನಾನು ವೈಯಕ್ತಿಕ ಮತ್ತು ಗುಂಪು ಸಮಾಲೋಚನೆಯಲ್ಲಿ ಸ್ನಾತಕೋತ್ತರ ಡಿಪ್ಲೋಮಾಗೆ ಸೇರಿಕೊಂಡಿರುವುದಾಗಿ” ಸಹೋದರಿ ಜಾಕ್ವೆಲಿನ್ ತಿಳಿಸಿದ್ದಾರೆ.

ಸಹಪ್ರಯಾಣ ಮತ್ತು ಪುನಃಸ್ಥಾಪನೆ

ಸಹೋದರಿ ಜಾಕ್ವೆಲಿನ್ ಅವರ ಸೇವೆ ಅನೇಕರ ಜೀವನಗಳನ್ನು ಸ್ಪರ್ಶಿಸಿದೆ ಮತ್ತು ಅವರ ಬದುಕನ್ನೂ ರೂಪಿಸಿದೆ. ಆಳವಾಗಿ ಮನಸ್ಸನ್ನು ಮುಟ್ಟಿದ ಎರಡು ಅನುಭವಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ.

ಒಬ್ಬ ತಾಯಿ ಗಂಭೀರ ಮಾನಸಿಕ ಖಿನ್ನತೆಯಲ್ಲಿ ಅವರ ಬಳಿ ಬಂದರು. ಅವರು ಗರ್ಭಿಣಿಯಾಗಿದ್ದಾಗಲೇ ಪತಿಯ ಹಿಂಸೆಯನ್ನು ಅನುಭವಿಸಿ ನಂತರ ವಿಚ್ಛೇದನ ಪಡೆದುಕೊಂಡಿದ್ದರು. ಸಹೋದರಿ ಜಾಕ್ವೆಲಿನ್ ಆ ತಾಯಿಯೊಂದಿಗೆ ಜೊತೆಗಿದ್ದು, ಅವರನ್ನು ಧೈರ್ಯಪಡಿಸಿ, ಅವರು ಎದುರಿಸುತ್ತಿದ್ದ ಎಲ್ಲಾ ಕಷ್ಟಗಳ ನಡುವೆಯೂ ಬದುಕಿನಲ್ಲಿ ಮತ್ತೆ ಅರ್ಥವನ್ನು ಕಂಡುಕೊಳ್ಳಲು ಸಹಾಯ ಮಾಡಿದರು.

“ಅವರು ಮತ್ತೆ ಕಾಲೂರಿ ನಿಲ್ಲುವವರೆಗೆ ನಾವು ಅವರ ಜೊತೆಗಿದ್ದೆವು, ಅವರಿಗೆ ಅವಳಿ ಮಕ್ಕಳು ಇದ್ದಾರೆ, ಮತ್ತು ಈ ತಾಯಿ ಈಗ ಇಷ್ಟು ಸಂತೋಷವಾಗಿರುವುದನ್ನು ನೋಡುವುದು ನನಗೆ ಅಪಾರ ಆನಂದ ನೀಡುತ್ತದೆ. ಅವರು ಈಗ ದುಡಿಯುತ್ತಾ ಮತ್ತು ತನ್ನ ಮೂರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.”

ಇನ್ನೊಂದು ಘಟನೆ ಧಾರ್ಮಿಕ ಸಹೋದರಿಯೊಬ್ಬರದ್ದು. ಅವರು ತೀವ್ರ ಖಿನ್ನತೆಯಲ್ಲಿ ಬಂದಿದ್ದರು, ಮತ್ತು ಸಹೋದರಿ ಜಾಕ್ವೆಲಿನ್ ಅವರ ಸಭೆಯನ್ನು ಅವರೊಂದಿಗೆ ಜೊತೆಗಿರಲು ಪ್ರೇರೇಪಿಸಿದರು. “ಕ್ರಮೇಣ ಅವರು ಚೇತರಿಸಿಕೊಂಡರು, ಮತ್ತು ನಾವು ಅವರನ್ನು ಮತ್ತೆ ಅವರ ಸಭೆಯೊಂದಿಗೆ ಸೇರಿಸಲು ಸಾಧ್ಯವಾಯಿತು. ಈಗ ಅವರು ಆರೋಗ್ಯವಾಗಿದ್ದಾರೆ ಮತ್ತು ಮತ್ತೆ ಸಕ್ರಿಯರಾಗಿದ್ದಾರೆ.”

ಇಂತಹ ಅನುಭವಗಳು, ಜನರನ್ನು ಪ್ರೀತಿ ಮತ್ತು ಸಹನೆಯಿಂದ ನೋಡಿದಾಗ ಚೇತರಿಕೆ ಸಾಧ್ಯ ಎಂಬ ಸಹೋದರಿ ಜಾಕ್ವೆಲಿನ್ ಅವರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿವೆ. “ಜನರು ಕೆಟ್ಟವರಲ್ಲ ಎಂಬುದನ್ನು ನಾನು ಕಲಿತಿದ್ದೇನೆ, ಅವರು ಹೆಚ್ಚಾಗಿ ತಮ್ಮ ಬಾಲ್ಯ, ಅನುಭವಗಳು ಅಥವಾ ಪರಿಸರದ ಬಲಿಪಶುಗಳು. ಇದು ನನಗೆ ಜನರನ್ನು ತೀರ್ಪು ಮಾಡದೆ, ಅವರಿಗಾಗಿ ಪ್ರಾರ್ಥಿಸುವುದನ್ನು ಕಲಿಸಿದೆ.”

ಸಂಪನ್ಮೂಲಗಳು ಮತ್ತು ಗೌಪ್ಯತೆ

ತಮ್ಮ ಸೇವೆಯ ಸಂತೋಷದ ನಡುವೆಯೂ, ಸಹೋದರಿ ಜಾಕ್ವೆಲಿನ್ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. “ಕೆಲವು ಪ್ರಕರಣಗಳಿಗೆ ನಿರಂತರ ನಿಗಾ ಅಗತ್ಯವಿದೆ, ಆದರೆ ಸಂಕಷ್ಟದಲ್ಲಿರುವವರಿಗೆ ತಾತ್ಕಾಲಿಕ ವಸತಿ ನೀಡುವಂತಹ ಸೌಲಭ್ಯಗಳು ನಮ್ಮ ಬಳಿ ಇಲ್ಲ, ಕ್ರೂರ ಕುಟುಂಬ ದೌರ್ಜನ್ಯದಿಂದ ಬದುಕುಳಿದ ಹುಡುಗಿ ಹಾಗೂ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ ವಿಶ್ವವಿದ್ಯಾಲಯ ವಿದ್ಯಾರ್ಥಿನಿ ಸೇರಿದಂತೆ ಹಲವಾರು ಗಂಭೀರ ಪ್ರಕರಣಗಳು ನನ್ನ ಬಳಿ ಬಂದಿದ್ದವು. ಅವರಿಗೆ ಅಗತ್ಯವಾದ ಆರೈಕೆ ಮತ್ತು ಮೇಲ್ವಿಚಾರಣೆ ಬೇಕಾಗಿತ್ತು,” ಎಂದು ಅವರು ತಿಳಿಸಿದ್ದಾರೆ.

ಆದರೆ ಅಗತ್ಯ ಸೌಲಭ್ಯಗಳ ಕೊರತೆಯಿಂದ ಅವರನ್ನು ತಮ್ಮ ಬಳಿ ಇರಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಇದು ನನಗೆ ತುಂಬಾ ನೋವುಂಟುಮಾಡುತ್ತದೆ,” ಎಂದು ಅವರು ಹೇಳಿದ್ದಾರೆ.

ಅವರ ಕನಸು ಒಂದು ಕುಟುಂಬ ಪುನಸ್ಥಾಪನಾ ಕೇಂದ್ರ, ಭಾವನಾತ್ಮಕ ಹಾಗೂ ಮಾನಸಿಕ ಗಾಯಗಳಿಂದ ಬಳಲುತ್ತಿರುವವರಿಗೆ ತಾತ್ಕಾಲಿಕ ಆಶ್ರಯ ಮತ್ತು ಸಮಗ್ರ ಆರೈಕೆ ನೀಡುವ ಸುರಕ್ಷಿತ ಸ್ಥಳ ಸ್ಥಾಪಿಸುವುದಾಗಿದೆ.

“ಈ ಕೇಂದ್ರವು ಕುಟುಂಬಗಳಿಗೆ ತರಬೇತಿ ಹಾಗೂ ಜಾಗೃತಿ ನೀಡುವ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ. ನಿಯಂತ್ರಣ ಮತ್ತು ಆರಂಭಿಕ ಮಧ್ಯಪ್ರವೇಶ ಇಲ್ಲದ ಕಾರಣ ಅನೇಕರು ಖಿನ್ನತೆಗೆ ಒಳಗಾಗುತ್ತಾರೆ. ನಾವು ಈ ಪರಿಸ್ಥಿತಿಯನ್ನು ಬದಲಾಯಿಸಲು ಸೇತುವೆಯಾಗಬೇಕೆಂಬುದು ನಮ್ಮ ಸಭೆಯ ಆಶಯ,” ಎಂದು ಅವರು ವಿವರಿಸಿದ್ದಾರೆ.

ತಮ್ಮ ಸೇವೆಯಲ್ಲಿ ಸಹೋದರಿ ಜಾಕ್ವೆಲಿನ್ ಗುರುಗಳು, ಧಾರ್ಮಿಕ ಸಹೋದರ- ಸಹೋದರಿಯರು ಮತ್ತು ಸಾಮಾನ್ಯ ವಿಶ್ವಾಸಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಗೌಪ್ಯತೆ ಮತ್ತು ಗೌರವ ಕಾಪಾಡುವ ಉದ್ದೇಶದಿಂದ ಪ್ರತಿ ಗುಂಪಿಗೆ ನಿರ್ದಿಷ್ಟ ದಿನಗಳನ್ನು ನಿಗದಿಪಡಿಸಿದ್ದಾರೆ.

ಪ್ರಸ್ತುತ ಅವರ ಸಭೆಯಲ್ಲಿ ಇಬ್ಬರು ತರಬೇತಿ ಪಡೆದ ಸಲಹೆಗಾರರಿದ್ದಾರೆ, ಮತ್ತೊಬ್ಬರು ತರಬೇತಿಯಲ್ಲಿ ಇದ್ದಾರೆ. ಅವರು ಕಾರ್ಯಾಗಾರಗಳು, ತರಬೇತಿಗಳು ಮತ್ತು ವೈಯಕ್ತಿಕ ಸಲಹೆಗಳನ್ನು ಕೆಲವೊಮ್ಮೆ ಕಠಿಣ ಪರಿಸ್ಥಿತಿಗಳಲ್ಲೂ ನಡೆಸುತ್ತಾರೆ. “ಈಗ ನಾನು ಚಿಕ್ಕ ಶಿಪ್ಪಿಂಗ್ ಕಂಟೇನರ್ ಅನ್ನು ನನ್ನ ಸಲಹಾ ಕಚೇರಿಯಾಗಿ ಬಳಸುತ್ತಿದ್ದೇನೆ, ಆದರೆ ಒಂದು ದಿನ ದೇವರು ನಮಗೆ ಉತ್ತಮ ಸ್ಥಳವನ್ನು ನೀಡುವರೆಂಬ ನಂಬಿಕೆ ಇದೆ” ಎಂದು ಅವರು ಹೇಳಿದ್ದಾರೆ. 

ಸೇವೆ ಮತ್ತು ಸಹಕಾರದ ಮೂಲಕ ಬೆಳವಣಿಗೆ

ತಮ್ಮ ಸೇವೆಯ ಮೂಲಕ ಸಹೋದರಿ ಜಾಕ್ವೆಲಿನ್ ತಮ್ಮ ದೃಷ್ಟಿಕೋನದಲ್ಲಿಯೇ ಬದಲಾವಣೆಯನ್ನು ಕಂಡಿದ್ದಾರೆ ಎಂದು ಹೇಳಿದ್ದಾರೆ. “ನನ್ನ ಸೇವೆ ಜನರ ನೋವನ್ನು ಇನ್ನಷ್ಟು ಸ್ಪಷ್ಟವಾಗಿ ಕಾಣುವಂತೆ ಮಾಡಿದೆ ಮತ್ತು ನನ್ನಲ್ಲಿ ಹೆಚ್ಚಿನ ಕರುಣೆಯನ್ನು ಬೆಳೆಸಿದೆ, ಒಬ್ಬರನ್ನು ಅರ್ಥಮಾಡಿಕೊಂಡು, ಅವರ ಮಾತನ್ನು ಕೇಳಿದರೆ ಪ್ರತಿಯೊಬ್ಬರಲ್ಲೂ ಒಳ್ಳೆಯತನ ಅಡಗಿದೆ ಎಂಬುದನ್ನು ನಾನು ಕಂಡಿದ್ದೇನೆ,” ಎಂದು ಅವರು ಹೇಳಿದ್ದಾರೆ.

“ನಾವು ಎಲ್ಲೇ ಇರಲಿ, ಗುರುಗಳು, ಧಾರ್ಮಿಕ ಸಹೋದರರು ಅಥವಾ ಸಹೋದರಿಯರು ಸಲಹೆಗಾರಿಕೆಯನ್ನು ಅಳವಡಿಸಿಕೊಳ್ಳಬೇಕು. ಇದು ಕೇವಲ ವೃತ್ತಿ ಅಲ್ಲ; ಇದು ಸಾನ್ನಿಧ್ಯದ ಸೇವೆ. ಜನರು ನೋವಿನಲ್ಲಿದ್ದಾರೆ, ಮತ್ತು ಅವರ ಜೊತೆಗೆ ನಡೆಯುವ ಯಾರಾದರೊಬ್ಬರ ಅಗತ್ಯ ಅವರಿಗಿದೆ,” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

09 ಫೆಬ್ರವರಿ 2026, 09:07