ಪೋಲ್ಯಾಂಡ್: ಯುರೋಪಿಯನ್ ಗುರುಗಳ ಫುಟ್ಬಾಲ್ ಚಾಂಪಿಯನ್‌ಶಿಪ್ ಆರಂಭ
ಲೇಖಕರು: ಮೋನಿಕಾ ಸ್ಟಾಜೋಸ್ಕ, ಲುಬ್ಲಿನ್
ಆರಂಭಿಕ ಗುಂಪು ಪಂದ್ಯಗಳು ಲುಬ್ಲಿನ್‌ನ ಎರಡು ಕ್ರೀಡಾಂಗಣಗಳಲ್ಲಿ ನಡೆಯುತ್ತಿವೆ: ಎರಡನೇ ಜಾನ್ ಪಾಲ್ ಕಥೋಲಿಕ ವಿಶ್ವವಿದ್ಯಾಲಯದಲ್ಲಿ ಇಟಲಿ, ಸ್ಲೋವಾಕಿಯಾ, ಸರ್ಬಿಯಾ ಮತ್ತು ರೊಮೇನಿಯಾ ತಂಡಗಳು ಆಡುತ್ತಿವೆ; ವೈದ್ಯಕೀಯ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಪೋಲ್ಯಾಂಡ್ ತಂಡವು ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಆಸ್ಟ್ರಿಯಾ ಮತ್ತು ಕೋಸೊವೊ ವಿರುದ್ಧ ಸೆಣಸುತ್ತಿದೆ.
ಆರಂಭಿಕ ಪಂದ್ಯಗಳ ಬಳಿಕ ಆಟಗಾರರು, ಯೂರೋ ಪ್ರೀಸ್ಟ್ 2026 ಕೇವಲ ಕ್ರೀಡಾ ಸ್ಪರ್ಧೆಯಲ್ಲ, ಬದಲಾಗಿ ಜಗತ್ತಿನತ್ತ ಧರ್ಮಸಭೆಯ ಮುಕ್ತ ಮನೋಭಾವದ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಟಲಿ ರಾಷ್ಟ್ರೀಯ ತಂಡದ ಹಾಗೂ ರೋಮ್ ಧರ್ಮಕ್ಷೇತ್ರದ ಗೋಲ್‌ಕೀಪರ್ ವಂ. ಗುರು ನಾಲ್ಕನೇ ಬೋನಿಫಾಸಿಯೊ ಸಾರ್ತೆ ಲೋಪೆಝ್ ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, “ ಇಲ್ಲಿ ಇರುವುದಕ್ಕೆ ತುಂಬಾ ಸಂತೋಷವಾಗಿದೆ. ಕ್ರೀಡೆ ನಮಗೆ ಅತ್ಯಂತ ಮಹತ್ವದ್ದಾಗಿದೆ, ಕ್ರೀಡೆ ಅದು ದೈಹಿಕ ಹಾಗೂ ಆತ್ಮಿಕ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಇಂದಿನ ಧರ್ಮಸಭೆಗೆ ಹೊಸ ರೀತಿಯ ಸುವಾರ್ತಾಪ್ರಚಾರ ಹಾಗೂ ವಿಭಿನ್ನ ಸಂಸ್ಕೃತಿಗಳ ಜನರೊಂದಿಗೆ ಹೆಚ್ಚಿನ ಮುಕ್ತತೆ ಅಗತ್ಯವಿದೆ,” ಎಂದು ಹೇಳಿದ್ದಾರೆ.
18ನೇ ಯುರೋಪಿಯನ್ ಗುರುಗಳ ಫುಟ್ಬಾಲ್ ಚಾಂಪಿಯನ್‌ಶಿಪ್ ಲುಬ್ಲಿನ್‌ನಲ್ಲಿ ನಡೆಯುತ್ತಿದ್ದು, ಗುರುವಾರ ನಿರ್ಣಾಯಕ ಹಂತದೊಂದಿಗೆ ಮುಕ್ತಾಯಗೊಳ್ಳಲಿದೆ. ನಾಕೌಟ್ ಪಂದ್ಯಗಳು, ಸೆಮಿಫೈನಲ್‌ಗಳು ಮತ್ತು ಮಹಾ ಫೈನಲ್ ವೈದ್ಯಕೀಯ ವಿಶ್ವವಿದ್ಯಾಲಯದ ಕ್ರೀಡಾ ಹಾಗೂ ಕಾರ್ಯಕ್ರಮಗಳ ಸಭಾಂಗಣದಲ್ಲಿ ನಡೆಯಲಿದ್ದು, ಬಳಿಕ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪಂದ್ಯಾವಳಿ, ಪವಿತ್ರ ಪೀಠದ ಸಂಸ್ಕೃತಿ ಮತ್ತು ಶಿಕ್ಷಣ ವಿಭಾಗದ ವಂ. ಗುರು ಡಾ. ಮಿಗುಯೆಲ್ ಕಾರ್ಡೋಸೊ ಅವರ ನೇತೃತ್ವದಲ್ಲಿ ಲಾಟಿಚೋವ್ ಮಾತೆಯ ದೇವಾಲಯದಲ್ಲಿ ಪವಿತ್ರ ಬಲಿಪೂಜೆಯೊಂದಿಗೆ ಸಮಾರೋಪಗೊಳ್ಳಲಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).