FILE PHOTO: AI boom brings fresh risks to US markets, and more money to M&A FILE PHOTO: AI boom brings fresh risks to US markets, and more money to M&A  (REUTERS)

ಉತ್ತರ ಥೈಲ್ಯಾಂಡ್ ಧರ್ಮಸಭೆಯ ಕರೆ: (AI) ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನೈತಿಕ ಜಾಗೃತಿ ಅನಿವಾರ್ಯ

ಡಿಜಿಟಲ್ ತಂತ್ರಜ್ಞಾನಗಳು ಮತ್ತು ಕೃತಕ ಬುದ್ಧಿಮತ್ತೆ ಸಮಾಜದ ರೂಪುರೇಷೆಗಳನ್ನು ವೇಗವಾಗಿ ಬದಲಾಯಿಸುತ್ತಿರುವ ಸಂದರ್ಭದಲ್ಲಿ, ಉತ್ತರ ಥೈಲ್ಯಾಂಡ್‌ನ ಧರ್ಮಸಭಾ ನಾಯಕರು ಮನಸ್ಸಿನ ಶುದ್ಧತೆ, ಮೌಲ್ಯಗಳ ಬೆಳೆವಣಿಗೆ ಮತ್ತು ನೈತಿಕ ಹೊಣೆಗಾರಿಕೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಒತ್ತಿ ತಿಳಿಸಿದ್ದಾರೆ.

ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತುರಾ, RCJ

ಈ ವರ್ಷದ ಆರಂಭದಲ್ಲಿ, ಉತ್ತರ ಥೈಲ್ಯಾಂಡ್‌ನ ಕಥೋಲಿಕ ಧರ್ಮಸಭೆಯ ವತಿಯಿಂದ 2026ರ ವಾರ್ಷಿಕ ಪ್ರಾದೇಶಿಕ ಸಮ್ಮೇಳನವನ್ನು ಲಾವೋಸ್ ಗಡಿಗೆ ಹೊಂದಿಕೊಂಡಿರುವ ನಖೋನ್ ಫಾನೋಮ್ ಪ್ರಾಂತ್ಯದಲ್ಲಿ ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ಸುಮಾರು 200 ಗುರುಗಳು, ಐವರು ಧರ್ಮಾಧ್ಯಕ್ಷರು ಹಾಗೂ ನೆರೆಯ ದೇಶವಾದ ಲಾವೋಸ್‌ನ ಪ್ರತಿನಿಧಿಗಳು ಭಾಗವಹಿಸಿದ್ದರು.

ಹೊಸ ತಂತ್ರಜ್ಞಾನಗಳ ಯುಗದಲ್ಲಿ ಧರ್ಮಗುರುಗಳ ಜಾಗೃತಿ

ಸಮ್ಮೇಳನವು ಕೃತಕ ಬುದ್ಧಿಮತ್ತೆ ಮತ್ತು ಮಾನವ ಬುದ್ಧಿಮತ್ತೆಯ ನಡುವಿನ ಸಂಬಂಧವನ್ನು ಕುರಿತಾಗಿ ಇತ್ತೀಚೆಗೆ ವ್ಯಾಟಿಕನ್ ಪ್ರಕಟಿಸಿದ ಮಹತ್ವದ “ಪ್ರಾಚೀನ-ನವೀನ (Antiqua et Nova): ಕೃತಕ ಬುದ್ಧಿಮತ್ತೆ ಮತ್ತು ಮಾನವ ಬುದ್ಧಿಮತ್ತೆಯ ನಡುವಿನ ಸಂಬಂಧ ಕುರಿತು ಟಿಪ್ಪಣಿ” ದಸ್ತಾವೇಜಿನ ಆಧಾರದ ಮೇಲೆ ನಡೆಯಿತು.  

ಮುಖ್ಯ ಭಾಷಣಕಾರರಾದ ಧರ್ಮಾಧ್ಯಕ್ಷರುಗಳ ಮಹಾಸಭೆಯ ಸಾಮಾಜಿಕ ಸಂವಹನ ಕಚೇರಿಯ ಪ್ರಧಾನ ಕಾರ್ಯದರ್ಶಿ ವಂ. ಗುರು ಜೋಸೆಫ್ ಅನುಚಾ ಚಯ್ಯಾದೇಜ್, ಧರ್ಮಗುರುಗಳು ಮತ್ತು ಧಾರ್ಮಿಕ ಸೇವಾ ಕಾರ್ಯಕರ್ತರನ್ನು ಉದ್ದೇಶಿಸಿ, ಉದಯೋನ್ಮುಖ ತಂತ್ರಜ್ಞಾನಗಳ ಬೆಳವಣಿಗೆಯ ವಿಷಯದಲ್ಲಿ ಧರ್ಮಸಭೆಯ ವಿವೇಕಪೂರ್ಣ ಮನನ ಮತ್ತು ನೈತಿಕ ದೃಷ್ಟಿಕೋನದ ಅಗತ್ಯವನ್ನು ವಿವರಿಸಿದರು.

ಹೊಸ ಡಿಜಿಟಲ್ ಸಾಧನಗಳ ಮೌಲ್ಯ ಮತ್ತು ಮಿತಿಗಳ ಕುರಿತು ಚಿಂತನೆ

ಪ್ರಮುಖ ಭಾಷಣದಲ್ಲಿ ಧರ್ಮಗುರು ಜೋಸೆಫ್ ಅವರು ಕೃತಕ ಬುದ್ಧಿಮತ್ತೆಯ ಸ್ವಭಾವ ಮತ್ತು ಮಿತಿಗಳ ಕುರಿತು ಸ್ಪಷ್ಟವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. “ಕೃತಕ ಬುದ್ಧಿಮತ್ತೆಗೆ ನಿಜವಾದ ಬುದ್ಧಿ, ಚೇತನ ಅಥವಾ ಅರ್ಥಗ್ರಹಣವಿಲ್ಲ. ಅದು ‘ವಿಷಯ’ವಲ್ಲ, ‘ವಸ್ತು’ ಮಾತ್ರ. ಅದಕ್ಕೆ ಅಂತಃಕರಣವಿಲ್ಲ, ಜೀವವಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.

 “AI ಜೀವಂತ ವ್ಯಕ್ತಿ ಅಲ್ಲ; ಅದು ಮಾನವ ನಿರ್ಮಿತ ಸಾಧನ. ಅದಕ್ಕೆ ಅಂತರಾತ್ಮವೂ ಇಲ್ಲ, ಜೀವವೂ ಇಲ್ಲ,” ಎಂದು ಅವರು ತಿಳಿಸಿದರು.

ಪ್ರಾಚೀನ-ನವೀನ (Antiqua et Nova) ಎಂಬ ವ್ಯಾಟಿಕನ್ ದಸ್ತಾವೇಜನ್ನು ಕುರಿತು ನಂಬಿಕೆಯನ್ನು ಹಂಚುವ ಜವಾಬ್ದಾರಿ ಹೊಂದಿರುವವರಿಗೆ   ‘ನೈತಿಕ ದಿಕ್ಸೂಚಿ’ ಎಂದು ಅವರು ವಿವರಿಸಿದರು. ವಿಶೇಷವಾಗಿ ಡಿಜಿಟಲ್ ವಲಯದಲ್ಲಿ ಸೇವೆ ಸಲ್ಲಿಸುವ ಯಾಜಕರು ಮತ್ತು ಧಾರ್ಮಿಕ ಕಾರ್ಯಕರ್ತರಿಗೆ ಈ ದಸ್ತಾವೇಜು ಅಗತ್ಯ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು.

“ಕ್ರಮಾವಳಿಗಳನ್ನು(algorithms) ನಿಮ್ಮ ಜೀವನ ಕಥೆಯನ್ನು ಬರೆಯಲು ಬಿಡಬೇಡಿ; ತಂತ್ರಜ್ಞಾನವನ್ನು ಮಾನವ ಸೇವೆಗೆ ಬಳಸಿರಿ,” ಎಂದು ಅವರು ಕರೆ ನೀಡಿದರು.

ಮುಂದುವರೆದು “ಅಂಕಿಅಂಶಗಳು ಮತ್ತು ಜ್ಞಾನ”ಗಳ ನಡುವಿನ ಒತ್ತಡವನ್ನು ಉಲ್ಲೇಖಿಸಿದರು. AI ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಸರಾಸರಿ ಲೆಕ್ಕಾಚಾರ ಮತ್ತು ಊಹಾಪೋಹಗಳಲ್ಲಿ ಪರಿಣತಿ ಹೊಂದಿದ್ದರೂ, ಮಾನವ ಪ್ರೀತಿ, ಸ್ವಾತಂತ್ರ್ಯ ಮತ್ತು ಬುದ್ಧಿ ಅನಿರೀಕ್ಷಿತವೂ ಪವಿತ್ರವೂ ಆಗಿವೆ ಎಂದು ಅವರು ಒತ್ತಿಹೇಳಿದರು.

ಸತ್ಯ ಕುಸಿತ, ಡೀಪ್‌ಫೇಕ್‌ಗಳು ಮತ್ತು ಫಿಲ್ಟರ್ ಬಬಲ್‌ಗಳ ಬಗ್ಗೆ ಎಚ್ಚರಿಕೆ

ಡಿಜಿಟಲ್ ಯುಗದ ಗಂಭೀರ ಸವಾಲುಗಳತ್ತ ಗಮನ ಹರಿಸಿದ ವಂ. ಗುರು ಜೋಸೆಫ್ ಅವರು ಹೆಚ್ಚುತ್ತಿರುವ “ಸತ್ಯ ಕುಸಿತ” (Truth Decay) ಪ್ರವೃತ್ತಿಯನ್ನು ಉಲ್ಲೇಖಿಸಿದ್ದಾರೆ. ತಪ್ಪುಮಾಹಿತಿಯನ್ನು ಮೀರಿ, ಡೀಪ್‌ಫೇಕ್‌ಗಳು ಮತ್ತು ಫಿಲ್ಟರ್ ಬಬಲ್‌ಗಳು ಸಾರ್ವಜನಿಕ ಚರ್ಚೆಯನ್ನು ವಕ್ರಗೊಳಿಸಿ, ಜನರ ಮನೋಭಾವವನ್ನು ನಿಯಂತ್ರಿಸುವ ಅಪಾಯಕರ ಸಾಧನಗಳಾಗಿ ರೂಪಾಂತರಗೊಂಡಿವೆ ಎಂದು ಅವರು ಎಚ್ಚರಿಸಿದ್ದಾರೆ.

ವ್ಯಾಟಿಕನ್ ಪ್ರಕಟಿಸಿದ ದಸ್ತಾವೇಜಿನಲ್ಲಿ ಡೀಪ್‌ಫೇಕ್‌ಗಳ ಅಪಾಯವನ್ನು ವಿಶೇಷವಾಗಿ ಗುರುತಿಸಲಾಗಿದೆ. “ಡೀಪ್‌ಫೇಕ್‌ಗಳ ಅಪಾಯವು ಅವುಗಳನ್ನು ಯಾರನ್ನಾದರೂ ಗುರಿಯಾಗಿಸಿ ಅಥವಾ ಹಾನಿ ಮಾಡಲು ಬಳಸಿದಾಗ ಹೆಚ್ಚು ಸ್ಪಷ್ಟವಾಗುತ್ತದೆ. ಚಿತ್ರಗಳು ಕೃತಕವಾಗಿರಬಹುದು, ದೃಶ್ಯಗಳು ಕಲ್ಪಿತವಾಗಿರಬಹುದು; ಆದರೆ ಅವು ಉಂಟುಮಾಡುವ ಹಾನಿ ನಿಜವಾದದ್ದು, ಬಾಧಿತರ ಮನಸ್ಸಿಗೆ ಮಾಡುವ ಆಳವಾದ ಮಾಸದ ಗಾಯಗಳೂ ಅವರ ವ್ಯಕ್ತಿಗತ ಗೌರವಕ್ಕೆ ತರುವ ದಕ್ಕೆಯೂ ನಿಜವಾದದ್ದು” ಎಂದು ದಸ್ತಾವೇಜು ಹೇಳುತ್ತದೆ.

ಅದೇ ರೀತಿ, “ಸಂಪೂರ್ಣ ಸಾನ್ನಿಧ್ಯದತ್ತ: ಸಾಮಾಜಿಕ ಮಾಧ್ಯಮಗಳಲ್ಲಿ ಪಾಲ್ಗೊಳ್ಳುವಿಕೆ ಕುರಿತ ಧರ್ಮಪಾಲನಾ ಚಿಂತನೆ”(Towards Full Presence: A Pastoral Reflection on Engagement with Social Media) ಎಂಬ ವ್ಯಾಟಿಕನ್ ದಸ್ತಾವೇಜಿನಲ್ಲಿ “ಫಿಲ್ಟರ್ ಬಬಲ್‌”ಗಳನ್ನು ಕುರಿತೂ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ. ಅತಿಯಾದ ವೈಯಕ್ತಿಕೀಕರಣದ ಪರಿಣಾಮವಾಗಿ ವ್ಯಕ್ತಿಗಳು ಭಾಗಶಃ ಮಾಹಿತಿಗೆ ಮಾತ್ರ ಒಳಗಾಗುತ್ತಾರೆ; ಅದು ಅವರದೇ ಅಭಿಪ್ರಾಯಗಳನ್ನು ದೃಢಪಡಿಸಿ, ನಂಬಿಕೆಗಳನ್ನು ಬಲಪಡಿಸಿ, ಅಂತಿಮವಾಗಿ ಅವರನ್ನು ಏಕಾಂಗಿತನದೊಳಗೆ ತಳ್ಳುತ್ತದೆ ಎಂದು ವಿವರಿಸಲಾಗಿದೆ.

ಈ ಹಿನ್ನೆಲೆೆಯಲ್ಲಿ, ಕೃತಕವಾಗಿ ರೂಪುಗೊಂಡ ವಿಷಯವನ್ನು ನೈಜ ಮಾಹಿತಿಯಿಂದ ಬೇರ್ಪಡಿಸುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ ಎಂದು ವಂ. ಗುರು ಜೋಸೆಫ್ ತಿಳಿಸಿದ್ದಾರೆ. ಇದರ ಪರಿಣಾಮವಾಗಿ ನಿಜವಾದ ಸಂವಾದಕ್ಕೆ ಮತ್ತು ನಂಬಿಕೆಯ ಜೀವನಕ್ಕೆ ಅವಶ್ಯಕವಾದ ವಿಶ್ವಾಸದ ಅಡಿಪಾಯವೇ ದುರ್ಬಲಗೊಳ್ಳುತ್ತಿರುವುದಾಗಿ ಅವರು ಎಚ್ಚರಿಸಿದ್ದಾರೆ.

ಕೃತಕ ಬುದ್ಧಿಮತ್ತೆಯ(AI) ಜವಾಬ್ದಾರಿಯುತ ಬಳಕೆ

ಈ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ, ವಂ. ಗುರು ಜೋಸೆಫ್, ಧರ್ಮಗುರುಗಳು ಮತ್ತು ಧಾರ್ಮಿಕ ಸಂಸ್ಥೆಗಳು ಪಾರದರ್ಶಕತೆ, ಸೇರ್ಪಡೆ ಮತ್ತು ಹೊಣೆಗಾರಿಕೆ ಎಂಬ ಮೂಲತತ್ವಗಳನ್ನು ಅನುಸರಿಸಬೇಕು ಎಂದು ತಿಳಿಸಿದರು. ಜಾಗತಿಕ ಮಟ್ಟದಲ್ಲಿ ಕೃತಕ ಬುದ್ಧಿಮತ್ತೆಯ ನೈತಿಕ ಚರ್ಚೆಗಳಲ್ಲಿಯೂ ಇದೇ ತತ್ವಗಳಿಗೆ ಮಹತ್ವ ನೀಡಲಾಗುತ್ತಿದೆ ಎಂದು ಅವರು ಸೂಚಿಸಿದರು.

ಪ್ರಾಚೀನ-ನವೀನ (Antiqua et Nova) ದಸ್ತಾವೇಜನ್ನು ಉಲ್ಲೇಖಿಸುತ್ತಾ, ತಂತ್ರಜ್ಞಾನದಿಂದ ಉಂಟಾಗುವ ಶಕ್ತಿಯ ವೃದ್ಧಿಗೆ ಅನುಗುಣವಾಗಿ ಮಾನವೀಯ ಹೊಣೆಗಾರಿಕೆ, ಮೌಲ್ಯಗಳು ಮತ್ತು ಮನಸ್ಸಾಕ್ಷಿಯ ಬೆಳವಣಿಗೆಯೂ ಅಗತ್ಯವೆಂದು ಪೋಪ್ ಫ್ರಾನ್ಸಿಸ್ ಬೋಧಿಸಿದ್ದರು ಎಂದು ಅವರು ನೆನಪಿಸಿದರು. ಈ ತತ್ವಗಳು ಧರ್ಮಪಾಲನಾ ಕಾರ್ಯಗಳಲ್ಲಿ, ಡಿಜಿಟಲ್ ಸುವಾರ್ತಾ ಪ್ರಸಾರದಲ್ಲಿ ಹಾಗೂ ಸಂಸ್ಥಾತ್ಮಕ ನಿರ್ಧಾರಗಳಲ್ಲಿಯೂ ಮಾರ್ಗದರ್ಶಕವಾಗಿರಬೇಕು ಎಂದು ಅವರು ಒತ್ತಿ ಹೇಳಿದರು.

ತೆರೆಯಬೇಕಾದ ಕಪ್ಪು ಪೆಟ್ಟಿಗೆ(Black Box)

ಅಂತಿಮವಾಗಿ ವಂ. ಗುರು ಜೋಸೆಫ್ ಪಾರದರ್ಶಕತೆಯ ಮಹತ್ವವನ್ನು ವಿಶೇಷವಾಗಿ ಒತ್ತಿಹೇಳಿ, ವಿಶೇಷವಾಗಿ ಸಮಾಜದ ಮೇಲೆ ಆಳವಾದ ಪರಿಣಾಮ ಬೀರುವ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳಲ್ಲಿ ಪಾರದರ್ಶಕತೆ ಅತ್ಯಗತ್ಯವೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

“ಕಪ್ಪು ಪೆಟ್ಟಿಗೆಯನ್ನು ತೆರೆಯಬೇಕು” -ಅಂದರೆ, ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳು ಹೇಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ, ಶಿಫಾರಸುಗಳನ್ನು ನೀಡುತ್ತವೆ ಎಂಬುದರ ಒಳನೋಟವನ್ನು ಸ್ಪಷ್ಟಗೊಳಿಸುವುದು ಅಗತ್ಯವೆಂದು ವಿವರಿಸಿದರು. ಇವು ಬಹುತೇಕ ಮರೆಯಾಗಿರುವ ಮತ್ತು ಅಸ್ಪಷ್ಟ ಪ್ರಕ್ರಿಯೆಗಳಾಗಿವೆ ಎಂದು ಅವರು ಸೂಚಿಸಿದರು.

ಶಿಕ್ಷಣ, ಆಡಳಿತ, ಸಂವಹನ ಹಾಗೂ ಸಾಮಾಜಿಕ ಸೇವೆಗಳಂತಹ “ಅತ್ಯಂತ ಪರಿಣಾಮಕಾರಿ ಕ್ಷೇತ್ರಗಳಲ್ಲಿ” ಇದು ವಿಶೇಷವಾಗಿ ಅನಿವಾರ್ಯ. ಇಂತಹ ಕ್ಷೇತ್ರಗಳಲ್ಲಿ ತಂತ್ರಜ್ಞಾನ ದುರಪಯೋಗವಾದರೆ ಅದರ ಪರಿಣಾಮಗಳು ಗಂಭೀರವಾಗಬಹುದು ಎಂದು ಎಚ್ಚರಿಸಿದರು.

ಸ್ಪಷ್ಟತೆ, ನೈತಿಕ ಮೇಲ್ವಿಚಾರಣೆ ಮತ್ತು ಮಾನವ ವಿವೇಚನೆ ಇದ್ದಾಗ ಮಾತ್ರ ತಂತ್ರಜ್ಞಾನವು ಮಾನವ ಗೌರವಕ್ಕೂ ಧರ್ಮಸಭೆಯ ಧ್ಯೇಯಕ್ಕೂ ನಿಜವಾಗಿ ಸೇವೆ ಮಾಡಬಲ್ಲದು ಎಂದು ಅವರು ಹೇಳಿದರು.

ಇಂತಹ ಪ್ರಾದೇಶಿಕ ವಿಚಾರಸಂವಾದಗಳ ಮೂಲಕ, ಉತ್ತರ ಥೈಲ್ಯಾಂಡ್‌ನ ಕಥೋಲಿಕ ಧರ್ಮಸಭೆ ಡಿಜಿಟಲ್ ಯುಗದಲ್ಲಿ ಜವಾಬ್ದಾರಿ, ಜ್ಞಾನ ಮತ್ತು ಸುವಾರ್ತೆಯ ನಿಷ್ಠೆಯೊಂದಿಗೆ ಕೃತಕ ಬುದ್ಧಿಮತ್ತೆಯನ್ನು ಎದುರಿಸುವ ನಂಬಿಕೆಆಧಾರಿತ ಮತ್ತು ವಿಮರ್ಶಾತ್ಮಕ ನಿಲುವನ್ನು ಮುಂದುವರಿಸುತ್ತಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

12 ಫೆಬ್ರವರಿ 2026, 14:29