2026.02.17 Thailand annual retreat deaf bangkok 2026.02.17 Thailand annual retreat deaf bangkok 

ಥೈಲ್ಯಾಂಡ್: ಕಿವುಡರ ಸೇವೆಗೆ ಧರ್ಮಸಭೆಯ ಆದ್ಯತೆ

ಥೈಲ್ಯಾಂಡ್ ಕಥೋಲಿಕ ಮಹಾಧರ್ಮಾಧ್ಯಕ್ಷರ ಸಭೆ ಕಿವುಡರು ಮತ್ತು ಶ್ರವಣದೋಷ ಹೊಂದಿರುವವರಿಗಾಗಿ ವಾರ್ಷಿಕ ಆಧ್ಯಾತ್ಮಿಕ ಶಿಬಿರವನ್ನು ಆಯೋಜಿಸಿ, ಸುವಾರ್ತೆಯನ್ನು ಪ್ರತಿಯೊಬ್ಬರಿಗೂ ಸುಲಭವಾಗಿ ತಲುಪಿಸುವ ಧರ್ಮಸಭೆಯ ಬದ್ಧತೆಯನ್ನು ವ್ಯಕ್ತಪಡಿಸಿದೆ.

ಲೇಖಕರು: ಚೈನರೊಂಗ್ ಮೊಂತಿಎಂವಿಚಿಯೆಂಚೈ, LiCAS ವರದಿ

ಸಂಕೇತ ಭಾಷೆಯ ಮೂಲಕ ಸುವಾರ್ತೆಯನ್ನು ಪ್ರಕಟಿಸುವುದು ಮತ್ತು ಆಧ್ಯಾತ್ಮಿಕ ಪಾಲನಾ ಸೇವೆಯನ್ನು ಒದಗಿಸುವುದು ಯಾವುದೇ “ಪೂರಕ ಕಾರ್ಯ”ವಲ್ಲ; ಅದು ಆಧುನಿಕ ಯುಗದಲ್ಲಿ ಧರ್ಮಸಭೆಯ ಅಸ್ತಿತ್ವದ ಹೃದಯಸ್ಪಂದನೆ ಎಂದು ಥೈಲ್ಯಾಂಡ್ ಧರ್ಮಸಭೆ ಒತ್ತಿ ಹೇಳಿದೆ.

ಈ ದೃಢ ನಂಬಿಕೆಯನ್ನು ಆಧಾರವಾಗಿಟ್ಟುಕೊಂಡು ಫೆಬ್ರವರಿ 14–15 ರಂದು ಬ್ಯಾಂಕಾಕ್‌ನ ಪಶ್ಚಿಮ ಭಾಗದಲ್ಲಿರುವ ಸಾಮ್ಫ್ರಾನ್‌ನಲ್ಲಿ ಕಿವುಡರು ಹಾಗೂ ಶ್ರವಣದೋಷ ಹೊಂದಿರುವವರಿಗಾಗಿ ವಾರ್ಷಿಕ ಆಧ್ಯಾತ್ಮಿಕ ಶಿಬಿರ ನಡೆಯಿತು.

ಥೈಲ್ಯಾಂಡ್ ಕಥೋಲಿಕ ಮಹಾಧರ್ಮಾಧ್ಯಕ್ಷರ ಸಭೆಯ (CBCT) ಕಿವುಡರ ಪಾಸ್ತೋರಲ್ ವಿಭಾಗವು, ಚಾಂತಬುರಿ ಧರ್ಮಕ್ಷೇತ್ರ ಮತ್ತು ಕಥೋಲಿಕ ಕಿವುಡರ ಸಂಘದ ಸಹಯೋಗದಲ್ಲಿ ಈ ಶಿಬಿರವನ್ನು ಆಯೋಜಿಸಿತು. ಮೌನ ಲೋಕ ಮತ್ತು ಧರ್ಮಸಭೆಯ ಸಂಸ್ಕಾರ ಜೀವನದ ನಡುವಿನ ಅಂತರವನ್ನು ಕಟ್ಟುವುದು ಇದರ ಉದ್ದೇಶವಾಗಿತ್ತು.

ಚಾಂತಬುರಿ ಧರ್ಮಕ್ಷೇತ್ರದ ಕಿವುಡರ ಧಾರ್ಮಿಕ ಸೇವೆಯ ನಿರ್ದೇಶಕರಾದ ವಂ. ಗುರು ಪೀಟರ್ ಭುರವಜ್ ಸೆರಾರಿಯ್ಯ ಅವರ ಮಾತಿನಲ್ಲಿ, ಈ ಸೇವೆ ಒಂದು ಸ್ಪಷ್ಟ ಮತ್ತು ಹೃದಯಸ್ಪರ್ಶಿ ದೃಷ್ಟಿಯಲ್ಲಿ ಸಂಕೇತಗೊಂಡಿದೆ:

“ಧ್ವನಿಯಿಲ್ಲದವರನ್ನೂ ಸೇರಿಸಿ ಎಲ್ಲರೂ ಕೇಳಬಲ್ಲವರಾಗಿರಬೇಕು….”

“ಸಾಮಾನ್ಯವಾಗಿ ಕಿವುಡರನ್ನು ಸಮಾಜದಲ್ಲಿ ಧ್ವನಿ ಕೇಳಿಸದವರಾಗಿ ನೋಡಲಾಗುತ್ತದೆ, ಆದರೆ ನಿಜವಾಗಿ ಪ್ರತಿಯೊಂದು ಕ್ಷಣವೂ ಅವರನ್ನು ಕ್ರಿಸ್ತನ ಹೃದಯದಿಂದ ಆಲಿಸುವ ಅವಕಾಶವಾಗಿದೆ. ಸಂಕೇತ ಭಾಷೆಯ ಮೂಲಕ ಸುವಾರ್ತೆಯನ್ನು ಪ್ರಕಟಿಸುವುದು ಇಂದಿನ ಧರ್ಮಸಭೆಯ ಸೇವೆಯ ಜೀವನಾಡಿಯಾಗಿದೆ” ಎಂದು ವಂ. ಗುರು ಭುರವಜ್ LiCAS ಸುದ್ದಿಗೆ ತಿಳಿಸಿದ್ದಾರೆ.

ಸೇರ್ಪಡೆಗೆ ಅಧಿಕೃತ ಕರೆ

ಉಪವಾಸಕಾಲವಾದ ತಪಸ್ಸು ಕಾಲಕ್ಕೆ ಆತ್ಮಿಕವಾಗಿ ಸಿದ್ಧರಾಗುವ ಉದ್ದೇಶದಿಂದ ಈ ವಾರ್ಷಿಕ ಶಿಬಿರವನ್ನು ಆಯೋಜಿಸಲಾಗಿದ್ದು, ಆತ್ಮಿಕ ಬೆಳವಣಿಗೆ ಮತ್ತು  ಸಂಸ್ಕಾರಗಳು ಎಲ್ಲರಿಗೂ ಸಮಾನ ಹಕ್ಕುಗಳೆಂಬ ಸಂದೇಶವನ್ನು ಹತ್ತಿಕ್ಕಿ ತಿಳಿಸಲಾಯಿತು.

ರಾಷ್ಟ್ರೀಯ ಮಟ್ಟದಲ್ಲಿ ಕಿವುಡರ ಧಾರ್ಮಿಕ ಸೇವೆಯನ್ನು ಸಮನ್ವಯಗೊಳಿಸುವ ವಂ. ಗುರು ಪೀಟರ್ ಭುರವಜ್ ಅವರು, ಕಿವುಡರನ್ನು ಸುವಾರ್ತಾ ಕಾರ್ಯದಿಂದ ಹೊರತುಪಡಿಸುವುದು ದೈವಕೃಪೆಯಿಂದಲೇ ಅವರನ್ನು ವಂಚಿಸುವಂತಾಗಿದೆ ಎಂದು ಸ್ಪಷ್ಟಪಡಿಸಿದರು.

“ಕಿವುಡರು ದೇವರ ಮಕ್ಕಳೇ; ಅವರು ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟವರು,ಯೇಸು ಕ್ರಿಸ್ತನು ಎಲ್ಲರನ್ನು ಬೇಧವಿಲ್ಲದೆ ವಿಮೋಚಿಸಿದ್ದಾನೆ. ಅವರು ಅರ್ಥಮಾಡಿಕೊಳ್ಳಬಲ್ಲ ಭಾಷೆಯಲ್ಲಿ ಸರಿಯಾದ ಬೋಧನೆ ನೀಡದಿದ್ದರೆ, ಅದು ಅನ್ಯಾಯಕರ ನಿರ್ಲಕ್ಷ್ಯವಾಗುತ್ತದೆ. ಧರ್ಮಸಭೆ ಕೇಳಬಲ್ಲವರಿಗಷ್ಟೇ ಅಲ್ಲ, ಎಲ್ಲರಿಗೂ ಮನೆ ಆಗಿರಬೇಕು” ಎಂದು ಅವರು ಹೇಳಿದರು.

ವಾರಾಂತ್ಯದ ಈ ಕಾರ್ಯಕ್ರಮವು ಪಾರಂಪರಿಕ ಮೌನ ಧ್ಯಾನ ಶಿಬಿರದಂತೆ ನಡೆದರೂ, ಇದರಲ್ಲಿ ವಿಶಿಷ್ಟ ಭಾಷಾತ್ಮಕ ಆಯಾಮವಿತ್ತು.

ಇಲ್ಲಿ ‘ಮೌನ’ ಎಂದರೆ ಸಂವಹನದ ಕೊರತೆಯಲ್ಲ; ಬದಲಾಗಿ ಥಾಯಿ ಸಂಕೇತ ಭಾಷೆಗೆ (TSL) ನಡೆದ ಪರಿವರ್ತನೆ. ಪವಿತ್ರ ಬಲಿಪೂಜೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ಥಾಯಿ ಸಂಕೇತ ಭಾಷೆಯಲ್ಲಿ ನಡೆಸಲ್ಪಟ್ಟಿದ್ದು, ತರಬೇತಿಗೊಂಡ ಅನುವಾದಕರ ಸಹಾಯದೊಂದಿಗೆ ವಂ. ಗುರು ಭುರವಜ್ ಅವರೇ ಬಲಿಪೂಜೆ ಅರ್ಪಿಸಿದರು.

‘ಮೌನ ಭೂಮಿಯಲ್ಲಿ’ ಧಾರ್ಮಿಕ ಸೇವಕರು

ಈ ಶಿಬಿರದಲ್ಲಿ ಸೇವಾ ಕರೆಯ ಕುರಿತಾಗಿ ವಿವಿಧ ಆಧ್ಯಾತ್ಮಿಕ ದೃಷ್ಟಿಕೋನಗಳನ್ನು ಮಂಡಿಸಲಾಯಿತು. ಕಾರ್ಮೆಲೈಟ್ ಸಂಘದ ವಂ. ಸಹೋದರ ಜೋಸೆಫ್ ಮೇರಿ ಕಿಟ್ಟಿಬುತ್ ಮೆಕ್ವಿಚಿತ್ ಅವರು ವಿಶ್ವಾಸವನ್ನು ಸಮರ್ಥವಾಗಿ ವಿವರಿಸುವ ಅಗತ್ಯತೆಯ ಕುರಿತು ಮಾತನಾಡಿ, ಧರ್ಮರಕ್ಷಣೆಯ ಮಹತ್ವವನ್ನು ಒತ್ತಿಹೇಳಿದರು.

ಅವರು ಕಿವುಡ ಸಮುದಾಯವನ್ನು ಕಥೋಲಿಕ ಧರ್ಮಸಭೆಯ ಧರ್ಮೋಪದೇಶವನ್ನು(CCC) ಆಳವಾಗಿ ಅಧ್ಯಯನ ಮಾಡಲು ಪ್ರೇರೇಪಿಸಿದರು. ತಮ್ಮದೇ ಧಾರ್ಮಿಕ ಕರೆಯ ಅನುಭವ ಹಾಗೂ ಫಿಲಿಪೈನ್ಸ್‌ನಲ್ಲಿ ಮಾಡಿದ ಸೇವಾ ಕಾರ್ಯಗಳ ನೆನಪುಗಳನ್ನು ಹಂಚಿಕೊಂಡರು.

ಇದೇ ರೀತಿ, ಥಾಯಿ ಸೇವಾ ಸಭೆಯ ವಂ. ಗುರು ಜಾನ್ ಬ್ಯಾಪ್ಟಿಸ್ಟ್ ಹತ್ತಚಾಯಿ ವಾಂಗ್ಮೇಸನ್ ಅವರು ಶಿಬಿರಾರ್ಥಿಗಳಿಗೆ “ತಮ್ಮ ಜೀವನವೇ ಸೇವೆಯಾಗಲಿ” ಎಂದು ಉತ್ತೇಜಿಸಿದರು.

ಕಾಂಬೋಡಿಯಾ ಮತ್ತು ಚಿಯಾಂಗ್ ರೈ ಪರ್ವತ ಪ್ರದೇಶದ ಜನಾಂಗಗಳೊಂದಿಗೆ ಕೆಲಸ ಮಾಡಿದ ತಮ್ಮ ಅನುಭವಗಳನ್ನು ಉಲ್ಲೇಖಿಸಿ, ಕಿವುಡರು ತಮ್ಮ ತಮ್ಮ ಸಾಮಾಜಿಕ ವಲಯಗಳಲ್ಲಿ ಕ್ರಿಸ್ತನ ಬೆಳಕನ್ನು ಹೊತ್ತುಕೊಂಡು ಹೋಗಬೇಕು ಎಂದು ಒತ್ತಿಹೇಳಿದರು.

ವಂ. ಗುರು ಭುರವಜ್ ಅವರು ಕಿವುಡ ಸಮುದಾಯವನ್ನೂ, ಅವರಿಗೆ ಬೆಂಬಲ ನೀಡುವ ತಂಡಗಳನ್ನೂ “ಮೌನ ಭೂಮಿಯ ಧಾರ್ಮಿಕ ಸೇವಕರು” ಎಂದು ವರ್ಣಿಸಿದರು.

ದೈವವಾಕ್ಯವನ್ನು ಸ್ವೀಕರಿಸುವುದು ಕೇವಲ ಮಾಹಿತಿಯನ್ನು “ಡೌನ್‌ಲೋಡ್” ಮಾಡುವುದಲ್ಲ; ಅದು ಸತ್ಯವನ್ನು ಅಂಗೀಕರಿಸಿ, ಅದು ದೇಹ, ಮನಸ್ಸು ಹಾಗೂ ಭಾವನಾತ್ಮಕ ಜೀವನದಲ್ಲಿ ಫಲಿಸಲೆಂಬ ಆಳವಾದ ಆಂತರಿಕ ಪರಿವರ್ತನೆಯಾಗಿದೆ ಎಂದು ಅವರು ವಿವರಿಸಿದರು.

ಕೃಪೆಗೆ ಅಡ್ಡಿಯಾಗುವ ಅಡೆತಡೆಗಳು

ಆಧ್ಯಾತ್ಮಿಕವಾಗಿ ಫಲಪ್ರದವಾಗಿದ್ದ ಈ ಶಿಬಿರದ ಹೊರತಾಗಿಯೂ, ರಚನಾತ್ಮಕ ಸವಾಲುಗಳು ಇನ್ನೂ ಮುಂದುವರಿದಿವೆ.

ಸರಕಾರಿ ಅಂಕಿಅಂಶಗಳ ಪ್ರಕಾರ, ಥೈಲ್ಯಾಂಡಿನಲ್ಲಿ ಕಿವುಡರ ಸಂಖ್ಯೆ ಸುಮಾರು 2 ಲಕ್ಷದಿಂದ 3.75 ಲಕ್ಷದ ನಡುವೆ ಇದೆ. ಕಥೋಲಿಕ ಕಿವುಡರ ನಿಖರ ಸಂಖ್ಯೆಯ ಮಾಹಿತಿ ಲಭ್ಯವಿಲ್ಲ. ಸಂಕೇತ ಭಾಷೆಯಲ್ಲಿ ಸೇವೆ ಸಲ್ಲಿಸಲು ಸಮರ್ಥರಾದ ಗುರುಗಳು ಮತ್ತು ಧಾರ್ಮಿಕರ ಕೊರತೆಯಿಂದ ಅನೇಕರು ಪವಿತ್ರ ಸಂಸ್ಕಾರಗಳಿಗೆ ಸುಲಭವಾಗಿ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ.

“ಮೊದಲ ಸವಾಲು ಭಾಷೆ,” ಎಂದು ವಂ. ಗುರು ಭುರವಜ್ ವಿವರಿಸಿದರು. “ಬರಹದ ಅಥವಾ ಮಾತಿನ ಥಾಯಿ ಭಾಷೆ ಅನೇಕ ಕಿವುಡರ ಮೊದಲ ಭಾಷೆಯಾಗಿರುವುದಿಲ್ಲ, ಏಕೆಂದರೆ ಅವರು ಅದನ್ನು ಕೇಳಿಲ್ಲ. ಆದ್ದರಿಂದ ಆರಂಭದಲ್ಲೇ ಅವರು ಹಿನ್ನಡೆಯನ್ನು ಅನುಭವಿಸುತ್ತಾರೆ.”

ಈ ಸಮಸ್ಯೆಯನ್ನು ಎದುರಿಸಲು, ಥೈಲ್ಯಾಂಡ್ ಧರ್ಮಾಧ್ಯಕ್ಷರ ಮಹಾಸಭೆ (CBCT) ಇಂತಹ ವಿಶೇಷ ಶಿಬಿರಗಳನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಕಾರ್ಯದಲ್ಲಿ ತೊಡಗಿದೆ. ಇವುಗಳನ್ನು ಅವರು “ಸಮಗ್ರ ವ್ಯಕ್ತಿತ್ವ ವಿಕಾಸ” ಮತ್ತು ಕ್ರೈಸ್ತ ಮೌಲ್ಯಗಳ ಬೆಳವಣಿಗೆಗೆ ಅಗತ್ಯ ಸಾಧನಗಳೆಂದು ಪರಿಗಣಿಸುತ್ತಿದ್ದಾರೆ.

ಶಿಬಿರದ ಸಮಾರೋಪದ ಸಂದರ್ಭದಲ್ಲಿ ಭಾಗವಹಿಸಿದವರು ತಮ್ಮ ಧರ್ಮಕ್ಷೇತ್ರಗಳಿಗೆ ಹೊಸ ಉತ್ಸಾಹದೊಂದಿಗೆ ಹಿಂತಿರುಗಿದರು. ಅವರ ಸೇವೆಯ ಘೋಷವಾಕ್ಯ ಹೀಗಿದೆ: “ಕೈಗಳಿಂದ ಮಾತಾಡುವುದು, ಕಣ್ಣುಗಳಿಂದ ಕೇಳುವುದು, ಹೃದಯದಿಂದ ಅರ್ಥಮಾಡಿಕೊಳ್ಳುವುದು.”

ಕಿವುಡರಿಗೆ ತಮ್ಮ ಸಮುದಾಯದಲ್ಲೇ ನಾಯಕತ್ವ ವಹಿಸಿ ಸುವಾರ್ತಾಪ್ರಚಾರ ಮಾಡುವ ಶಕ್ತಿಯನ್ನು ನೀಡುವ ಮೂಲಕ, ಥಾಯಿ ಧರ್ಮಸಭೆ “ಮೌನ” ನಿರ್ಬಂಧದಿಂದ ಯಾರೂ ಬಲಿಪೀಠದಿಂದ ದೂರವಾಗದ ಭವಿಷ್ಯದತ್ತ ಒಂದು ಹೆಜ್ಜೆ ಹತ್ತಿರವಾಗುತ್ತಿದೆ.

ಈ ಲೇಖನವು ಮೂಲತಃ licas.news ನಲ್ಲಿ ಪ್ರಕಟವಾಗಿದೆ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಮೂರನೇ ವ್ಯಕ್ತಿಗಳಿಂದ ಅನಧಿಕೃತ ಮರುಪ್ರಕಟಣೆ ಅನುಮತಿಸಲಾಗುವುದಿಲ್ಲ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

17 ಫೆಬ್ರವರಿ 2026, 11:28