Aftermath of the overnight Russian combined shelling of Ukraine Aftermath of the overnight Russian combined shelling of Ukraine  (ANSA)

ಕಠಿಣ ಚಳಿಗಾಲದ ಮಧ್ಯೆ ಉಕ್ರೇನ್ ಧರ್ಮಾಧ್ಯಕ್ಷರ ಮನವಿ: “ಬೆಂಬಲ ನಮ್ಮ ಹೃದಯಗಳನ್ನು ಬೆಚ್ಚಗಾಗಿಸುತ್ತದೆ”

ರಷ್ಯಾ ಸೇನೆಯಿಂದ ಉಕ್ರೇನ್ ನಗರಗಳ ಮೇಲೆ ಮತ್ತೊಂದು ಭಾರೀ ದಾಳಿಯ ಬಳಿಕ, ಖಾರ್ಕಿವ್–ಝಪೋರಿಝ್ಝಿಯಾ ಧರ್ಮಕ್ಷೇತ್ರದ ಸಹಾಯಕ ಧರ್ಮಾಧ್ಯಕ್ಷರಾದ ಪೂಜ್ಯ ಜಾನ್ ಸೊಬಿಲೋ ಅವರು ಈ ಕಠಿಣ ರಾತ್ರಿ ಮತ್ತು ದೈನಂದಿನ ಬಾಂಬ್ ದಾಳಿಗಳ ನಡುವೆ ಬದುಕುತ್ತಿರುವ ಜನರ ಸ್ಥಿತಿಗತಿಗಳ ಕುರಿತು ಮಾತನಾಡಿದ್ದಾರೆ.

ಲೇಖಕರು: ಸ್ವಿತ್ಲ್ಯಾನ ದುಖೋವಿಚ್

ಉಕ್ರೇನ್: ತೀವ್ರ ಚಳಿಯ ನಡುವೆ ರಷ್ಯಾದ ಮತ್ತೊಂದು ಭಾರೀ ದಾಳಿ

ಫೆಬ್ರವರಿ 5–6ರ ಮಧ್ಯರಾತ್ರಿ ಮತ್ತು ಮುಂಜಾನೆ ವೇಳೆಯಲ್ಲಿ ರಷ್ಯಾ ಸೇನೆ ಉಕ್ರೇನ್‌ನ ಹಲವಾರು ನಗರಗಳು ಹಾಗೂ ವಸತಿ ಪ್ರದೇಶಗಳ ಮೇಲೆ ವ್ಯಾಪಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಝಪೋರಿಝ್ಝಿಯಾ ಪ್ರದೇಶವು ಅತ್ಯಂತ ಹೆಚ್ಚು ಹಾನಿಗೊಳಗಾಗಿದೆ. ಅನೇಕ ವಸತಿ ಕಟ್ಟಡಗಳು ಹಾನಿಗೊಳಗಾಗಿವೆ. 14 ವರ್ಷದ ಬಾಲಕ ಹಾಗೂ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ದುರಂತವಾಗಿ, 49 ವರ್ಷದ ಪುರುಷ ಮತ್ತು 48 ವರ್ಷದ ಮಹಿಳೆ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಈ ಘಟನೆಗಳ ಕುರಿತು ಖಾರ್ಕಿವ್–ಝಪೋರಿಝ್ಝಿಯಾ ರೋಮನ್ ಕಥೋಲಿಕ ಧರ್ಮಕ್ಷೇತ್ರದ ಸಹಾಯಕ ಧರ್ಮಾಧ್ಯಕ್ಷರಾದ ಪೂಜ್ಯ  ಜಾನ್ ಸೊಬಿಲೋ ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿ, ನಗರವು ನಿರಂತರ ವಾಯುದಾಳಿ ಎಚ್ಚರಿಕೆಗಳು, ತೀವ್ರ ಚಳಿ ಹಾಗೂ ವಿದ್ಯುತ್ ಮತ್ತು ತಾಪನದ ಕೊರತೆಯ ನಡುವೆ ಬದುಕು ನಡೆಸುತ್ತಿರುವುದನ್ನು ವಿವರಿಸಿದ್ದಾರೆ. ಅಧಿಕಾರಿಗಳು ಹಾನಿಯ ಪ್ರಮಾಣವನ್ನು ಅಂದಾಜಿಸುತ್ತಿದ್ದು, ರಕ್ಷಣಾ ಹಾಗೂ ಪುನರ್‌ಸ್ಥಾಪನಾ ಕಾರ್ಯಗಳು ಮುಂದುವರೆದಿವೆ.

ಬಾಂಬ್ ದಾಳಿಗಳ ಮಧ್ಯೆಯೂ ಮುಂದುವರೆದ ಪ್ರಾರ್ಥನೆ 

ಬೆಳಗ್ಗೆ ಎಂಟು ಗಂಟೆಗೆ ಪವಿತ್ರ ಬಲಿಪೂಜೆ ಆಚರಿಸಲಾಯಿತು ಎಂದು ಧರ್ಮಾಧ್ಯಕ್ಷರಾದ ಪೂಜ್ಯ ಜಾನ್ ಸೊಬಿಲೋ ತಿಳಿಸಿ. ಉಕ್ರೇನ್‌ನ ಜಗದ್ಗುರುಗಳ ಸೇವಾ ಸಂಸ್ಥೆಯ  (ಪಾಂಟಿಫಿಕಲ್ ಮಿಷನ್ ಸೊಸೈಟೀಸ್ -PMS) ನಿರ್ದೇಶಕ ವಂ. ಗುರು ಲೂಕಾ ಬೋವಿಯೋ (IMC) ಹಾಗೂ ಅವರ ಸಹೋದ್ಯೋಗಿಗಳನ್ನು ಒಳಗೊಂಡ ಇಟಲಿಯಿಂದ ಬಂದ ಅತಿಥಿಗಳು ಕೂಡಾ ಹಾಜರಿದ್ದರು ಎಂದು ಅವರು ವಿವರಿಸಿದರು.

ಬಲಿಪೂಜೆಯ ವೇಳೆ ನಿರಂತರ ಬಾಂಬ್ ಸ್ಫೋಟಗಳ ಶಬ್ದ ಕೇಳಿಸಿತು ಎಂದು ಅವರು ನೆನಪಿಸಿಕೊಂಡರು. “ಒಂದು ಡ್ರೋನ್ ಹೊಡೆದುರುಳಿಸಲಾಗುವುದನ್ನು ನಾನು ನೋಡಿದೆ; ಅದು ಬೆಂಕಿಯ ಚೆಂಡಿನಂತೆ ಹಾರುತ್ತಾ ಕೆಳಗೆ ಬೀಳುತ್ತಿತ್ತು ಮತ್ತು ಗಾಳಿಯಲ್ಲಿ ಉರಿಯುತ್ತಲೇ ಇತ್ತು. ಆ ಬೆಳಗ್ಗೆ ಬಹಳ ಜೋರಾದ ಸದ್ದುಗಳಿದ್ದವು,” ಎಂದು ಧರ್ಮಾಧ್ಯಕ್ಷರು ಹೇಳಿದ್ದಾರೆ.

ಇಷ್ಟಾದರೂ ಜನರು ಪ್ರಾರ್ಥನೆಯನ್ನು ನಿಲ್ಲಿಸಿಲ್ಲ. ಈಗ ಅವರು ಶಾಂತವಾಗಿಯೇ ಪ್ರಾರ್ಥಿಸುತ್ತಿದ್ದರು ಎಂದು ಧರ್ಮಾಧ್ಯಕ್ಷರು ತಿಳಿಸಿದ್ದಾರೆ. “ಇದನ್ನು ಹೇಳುವುದು ದುಃಖಕರ, ಆದರೆ ನಾವು ಯುದ್ಧಕ್ಕೆ ಒಗ್ಗಿಕೊಂಡಿದ್ದೇವೆ. ವಾಯುದಾಳಿ ಸೈರನ್‌ಗಳು ದಿನ–ರಾತ್ರಿ ನಿರಂತರವಾಗಿ ಮೊಳಗುತ್ತವೆ,” ಎಂದು ಅವರು ಹೇಳಿದ್ದಾರೆ. ಅನೇಕರು ಈಗ ಬಾಂಬ್ ಆಶ್ರಯ ಕೇಂದ್ರಗಳಿಗೂ ಹೋಗುವುದಿಲ್ಲ, ಏಕೆಂದರೆ ಪ್ರತಿಬಾರಿಯೂ ಅಲ್ಲಿ ಹೋಗುವುದು ವಾಸ್ತವವಾಗಿ ಅಸಾಧ್ಯವಾಗಿದೆ. ಹಾಗೆ ಮಾಡಿದರೆ ಅಲ್ಲೇ ವಾಸಿಸಬೇಕಾಗುತ್ತದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವಿವರಿಸಿದ್ದಾರೆ.

ವಿದ್ಯುತ್ ಕೊರತೆ ಇನ್ನೂ ಗಂಭೀರ ಸಮಸ್ಯೆಯಾಗಿ ಉಳಿದಿದೆ ಎಂದು ಧರ್ಮಾಧ್ಯಕ್ಷರು ಒತ್ತಿ ಹೇಳಿದ್ದಾರೆ. “ವಿದ್ಯುತ್ ಕಡಿತಗಳು ಪದೇಪದೇ ನಡೆಯುತ್ತಿವೆ. ಇಂದು ಕೆಲ ಪ್ರದೇಶಗಳಿಗೆ ವಿದ್ಯುತ್ ಇದೆ, ಇತರ ಕಡೆಗಳಲ್ಲಿ ಇಲ್ಲ,” ಎಂದು ಅವರು ತಿಳಿಸಿದ್ದಾರೆ. ಝಪೋರಿಝ್ಝಿಯಾದಲ್ಲಿ ಸಂಪೂರ್ಣ ಬ್ಲ್ಯಾಕ್‌ಔಟ್ ಅಪರೂಪವಾದರೂ, ಎಲ್ಲರಿಗೂ ಸಾಕಷ್ಟು ವಿದ್ಯುತ್ ಇಲ್ಲದ ಕಾರಣ ಕೆಲವು ಪ್ರದೇಶಗಳಲ್ಲಿ  ವಿದ್ಯುತ್ ಕಡಿತಗಳು  ಸಂಭವಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ತಾಪನ ವ್ಯವಸ್ಥೆ ಕಟ್ಟಡದ ಪ್ರಕಾರಕ್ಕೆ ಅವಲಂಬಿತವಾಗಿದೆ ಎಂದು ಅವರು ವಿವರಿಸಿದ್ದಾರೆ. “ನಮ್ಮಂತೆ ಗ್ಯಾಸ್ ಇರುವವರು ಮನೆಯನ್ನು ಬಿಸಿಯಾಗಿರಿಸಿಕೊಳ್ಳಲು ಸಾಧ್ಯವಾಗಿದೆ. ಆದರೆ ಅನೇಕ ಆಧುನಿಕ ಎತ್ತರದ ಕಟ್ಟಡಗಳಲ್ಲಿ ಎಲ್ಲವೂ ವಿದ್ಯುತ್‌ ಮೇಲೆ ಅವಲಂಬಿತವಾಗಿದೆ. ವಿದ್ಯುತ್ ಇಲ್ಲದಾಗ ತಾಪನವೂ ಇಲ್ಲ, ಪಂಪುಗಳು ಕಾರ್ಯನಿರ್ವಹಿಸುವುದಿಲ್ಲ, ನೀರೂ ಸಿಗುವುದಿಲ್ಲ,” ಎಂದು ಅವರು ಹೇಳಿದ್ದಾರೆ.

ಕೆಲವರು ಸಂಜೆ ತಮ್ಮ ಕಾರುಗಳಲ್ಲಿ ಕುಳಿತು ಬೆಚ್ಚಗಾಗಿದ್ದು, ನಂತರ ಮನೆಗೆ ಹಿಂತಿರುಗಿ ಸಂಪೂರ್ಣ ಬಟ್ಟೆ ಧರಿಸಿ ಮಲಗುತ್ತಾರೆ ಎಂದು ಧರ್ಮಾಧ್ಯಕ್ಷರು ತಿಳಿಸಿದ್ದಾರೆ. ಈ ಪರಿಸ್ಥಿತಿ ಕೇವಲ ಝಪೋರಿಝ್ಝಿಯಾಗೆ ಮಾತ್ರ ಸೀಮಿತವಾಗಿರದೆ, ಕೀವ್ ಮತ್ತು ಡ್ನಿಪ್ರೊ ಮುಂತಾದ ನಗರಗಳಲ್ಲೂ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

ಜೀವ ಉಳಿಸುವ ನೂಡಲ್ಸ್ ಪ್ಯಾಕೆಟ್

ಈ ಕಠಿಣ ಪರಿಸ್ಥಿತಿಯಲ್ಲಿ ಧರ್ಮಕೇಂದ್ರಗಳು ಜನರಿಗೆ ಪ್ರಮುಖ ಆಶ್ರಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಿವೆ. ಜನರು ಬಲಿಪೂಜೆಗೆ ಬರುತ್ತಲೇ ಇದ್ದಾರೆ ಎಂದು ಧರ್ಮಾಧ್ಯಕ್ಷ ಸೊಬಿಲೋ ತಿಳಿಸಿದ್ದಾರೆ. ಸಹ-ಕ್ಯಾಥೆಡ್ರಲ್ ಬಳಿಯ “ದೇವ ತಂದೆಯ ದೇವಾಲಯ”ದ ಬಳಿ ಆಲ್ಬರ್ಟೈನ್ ಸಹೋದರರು ವಾರಕ್ಕೆ ನಾಲ್ಕು ಬಾರಿ ರೊಟ್ಟಿ ವಿತರಿಸುತ್ತಾರೆ. ಪ್ರತಿ ಬಾರಿ ಸುಮಾರು 1,500 ಮಂದಿ ಬಂದಿದ್ದು, ಶನಿವಾರದಂದು ಈ ಸಂಖ್ಯೆ 2,000ಕ್ಕೆ ತಲುಪಿದೆ ಎಂದು ವರದಿಯಾಗಿದೆ. ಜನರಿಗೆ ರೊಟ್ಟಿ ಮತ್ತು ಪೂರ್ವಸಿದ್ಧ ಆಹಾರ(canned food) ನೀಡಲಾಗಿದೆ.

ಆದರೆ ನೆರವು ಸಂಪನ್ಮೂಲಗಳು ಕ್ರಮೇಣ ಕಡಿಮೆಯಾಗುತ್ತಿವೆ ಎಂದು ಧರ್ಮಾಧ್ಯಕ್ಷರು ವಿಷಾದಿಸುತ್ತಾರೆ. ನೆರವು ತಲುಪುವುದು ಹೆಚ್ಚು ಕಷ್ಟಕರವಾಗುತ್ತಿದ್ದು, ಎಲ್ಲಾ ಸಾರಿಗೆ ಕಂಪನಿಗಳು ಸರಕುಗಳನ್ನು ಕಳುಹಿಸಲು ಒಪ್ಪುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಆದರೂ ಆಲ್ಬರ್ಟೈನ್ ಸಹೋದರರು ರೊಟ್ಟಿ ಬೇಯಿಸುವುದನ್ನು ಮುಂದುವರಿಸಿದ್ದಾರೆ; ಕೆಲವರು ಪೂರ್ವಸಿದ್ಧ ಆಹಾರ ತರುತ್ತಾರೆ, ಕೆಲವು ಸಂಸ್ಥೆಗಳು ಸಹಾಯ ಮಾಡುತ್ತವೆ. “ಆದ್ದರಿಂದ ನಾವು ಬದುಕು ಸಾಗಿಸುತ್ತಿದ್ದೇವೆ,” ಎಂದು ಧರ್ಮಾಧ್ಯಕ್ಷರು ತಿಳಿಸಿದ್ದಾರೆ.

ಕ್ರಿಸ್ಮಸ್ ನಂತರ ವಿಶೇಷ ನೆರವಿನ ಲಾರಿ ಬಂದಿದ್ದು, ಅದು ಪ್ರಧಾನ ಗುರು ಕಾನ್ರಾಡ್ ಕ್ರಾಜೆವ್ಸ್ಕಿಯವರಿಂದ ಕಳುಹಿಸಲ್ಪಟ್ಟಿತ್ತು. ಅದರಲ್ಲಿದ್ದ ಪ್ರಮುಖ ವಸ್ತುಗಳಲ್ಲಿ (Instant noodles)ಇನ್‌ಸ್ಟಂಟ್ ನೂಡಲ್ಸ್ ಕೂಡ ಇದ್ದವು. ಅವು ರುಚಿಕರವಾಗಿದ್ದು ಸ್ವಲ್ಪ ಖಾರವಾಗಿರುವುದರಿಂದ ಜನರು ಅವನ್ನು ಮೆಚ್ಚಿದ್ದಾರೆ ಎಂದು ಧರ್ಮಾಧ್ಯಕ್ಷರು ಹೇಳಿದ್ದಾರೆ.

“ಚಳಿಯಲ್ಲಿ ಅವು ದೇಹವನ್ನು ಬೆಚ್ಚಗಾಗಿಸುತ್ತವೆ. ಯುದ್ಧಭೂಮಿಯ ಮುಂಭಾಗದಲ್ಲಿರುವ ಸೈನಿಕರೂ ಸಹ ಇವುಗಳನ್ನು ಕೇಳುತ್ತಾರೆ,  ಅವು ಹಗುರವಾಗಿದ್ದು ಸಾಗಿಸಲು ಸುಲಭ. ಈ ನೂಡಲ್ಸ್ ತಮ್ಮ ಜೀವ ಉಳಿಸುತ್ತವೆ ಎಂದು ಸೈನಿಕರು ಹೇಳುತ್ತಾರೆ,” ಎಂದು ಧರ್ಮಾಧ್ಯಕ್ಷರು ವಿವರಿಸಿದ್ದಾರೆ. ಈ ಕಾರಣದಿಂದ ಬಡವರಿಗೂ ಸೈನಿಕರಿಗೂ ಹಂಚಿಕೊಳ್ಳಬಹುದಾದ ನೆರವಿನ ರೂಪವಾಗಿ ನೂಡಲ್ಸ್ ಮಹತ್ವ ಪಡೆದಿದೆ ಎಂದು ಧರ್ಮಾಧ್ಯಕ್ಷರು ತಿಳಿಸಿದ್ದಾರೆ.

ಬೆಂಬಲವು ಹೃದಯಗಳನ್ನು ಬೆಚ್ಚಗಾಗಿಸುತ್ತದೆ

ಸ್ಥಳೀಯ ಧರ್ಮಸಭೆ ಸೇನಾಪಡೆಗೆ ಬೆಂಬಲ ನೀಡುವುದು ಅತ್ಯಂತ ಪ್ರಮುಖ ಆದ್ಯತೆಯಾಗಿದೆ ಎಂದು ಖಾರ್ಕಿವ್–ಜಪೊರಿಜ್ಝಿಯಾ ಸಹಾಯಕ ಧರ್ಮಾಧ್ಯಕ್ಷ ಪೂಜ್ಯ ಜಾನ್ ಸೊಬಿಲೋ ಒತ್ತಿ ತಿಳಿಸಿದ್ದಾರೆ. “ನಮ್ಮ ಸೈನಿಕರಿಗೆ ಸಹಾಯ ಮಾಡುವುದು ಅತ್ಯಂತ ಅಗತ್ಯ, ಅವರು ನಮ್ಮನ್ನು ರಕ್ಷಿಸದಿದ್ದರೆ, ಬೇರೆ ಯಾವುದೇ ನೆರವಿಗೆ ಅರ್ಥವಿಲ್ಲ. ಆಕ್ರಮಣಕಾರರು ಬಂದು ಎಲ್ಲವನ್ನೂ ಕಬಳಿಸಿಬಿಡುತ್ತಾರೆ. ಅದಕ್ಕಾಗಿಯೇ ನಾವು ನಮ್ಮ ಸೈನಿಕರಿಗಾಗಿ ಪ್ರಾರ್ಥಿಸುತ್ತಿದ್ದೇವೆ ಮತ್ತು ಸಾಧ್ಯವಿರುವ ಎಲ್ಲ ರೀತಿಯಲ್ಲೂ ಅವರನ್ನು ಬೆಂಬಲಿಸುತ್ತಿದ್ದೇವೆ. ಅವರು ನಮ್ಮ ದೇಶವನ್ನು ರಕ್ಷಿಸುತ್ತಿದ್ದಾರೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯುದ್ಧಭೂಮಿಯ ಮುಂಭಾಗದ ಪರಿಸ್ಥಿತಿ ಇನ್ನೂ ಅತ್ಯಂತ ಉದ್ವಿಗ್ನವಾಗಿದೆ ಎಂದು ಧರ್ಮಾಧ್ಯಕ್ಷರು ವಿವರಿಸಿದ್ದಾರೆ. “ಈ ಚಳಿಗಾಲಕ್ಕೂ ಮೊದಲು ಪರಿಸ್ಥಿತಿ ಸ್ವಲ್ಪ ಶಾಂತವಾಗಿತ್ತು,” ಎಂದು ಅವರು ನೆನಪಿಸಿದ್ದಾರೆ. “ನಮ್ಮ ಸೇನೆ ಆಕ್ರಮಣಕಾರರನ್ನು ನಗರದಿಂದ ದೂರ ಇಡುತ್ತದೆ ಎಂದು ನಾವು ನಂಬಿದ್ದೆವು. ಆದರೆ ಈಗ ರಷ್ಯನ್ ಪಡೆಗಳು ಮುಂದೆ ಸರಿಯುತ್ತಿದ್ದು, ಜಪೊರಿಜ್ಝಿಯಾಗೆ ಸಮೀಪಿಸುತ್ತಿವೆ; ಮುಂಚೂಣಿ ರೇಖೆ ದುರ್ಬಲವಾಗುತ್ತಿದೆ ಮತ್ತು ನಮ್ಮ ಸೈನಿಕರು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ,” ಎಂದು ಅವರು ತಿಳಿಸಿದ್ದಾರೆ.

ಈ ಪರಿಸ್ಥಿತಿಯಲ್ಲಿ ಚಳಿ ಎಲ್ಲವನ್ನೂ ಇನ್ನಷ್ಟು ಕಷ್ಟಕರವಾಗಿಸಿದೆ ಎಂದು ಅವರು ಹೇಳಿದ್ದಾರೆ. “ಅವರು ನಮ್ಮ ನಗರ, ವಿದ್ಯುತ್ ವ್ಯವಸ್ಥೆ, ಬೆಳಕು ಮತ್ತು ಉಷ್ಣ ನೀಡುವ ಎಲ್ಲವನ್ನೂ ದಾಳಿಯಿಂದ ಧ್ವಂಸ ಮಾಡಿದ್ದಾರೆ. ಇದರ ಪರಿಣಾಮವಾಗಿ ಜನರಿಗೂ ಸೈನಿಕರಿಗೂ ಜೀವನ ಅತ್ಯಂತ ಕಠಿಣವಾಗಿದೆ. ರಷ್ಯನ್ ಸೇನೆ ಈ ಚಳಿಗಾಲವನ್ನು ಪೂರಕವಾಗಿಸಿಕೊಂಡು ಇನ್ನೂ ಮುಂದೆ ಬರುತ್ತಿದೆ,” ಎಂದು ಅವರು ಹೇಳಿದ್ದಾರೆ.

ಮಾನವೀಯ ದೃಷ್ಟಿಯಿಂದ ಯುದ್ಧದ ಭಾರ ಅಪಾರವಾಗಿದೆ ಎಂದು ಧರ್ಮಾಧ್ಯಕ್ಷರು ಸೂಚಿಸಿದ್ದಾರೆ. “ಕೆಲವರು ಹಿಂದೆ ‘ನಾನು ಇಲ್ಲಿ ಎಂದಿಗೂ ಬಿಟ್ಟು ಹೋಗುವುದಿಲ್ಲ’ ಎಂದು ಹೇಳುತ್ತಿದ್ದರು, ಈಗ ಅವರೂ ಕೂಡ ಕುಟುಂಬದೊಂದಿಗೆ ವಸ್ತುಗಳೊಂದಿಗೆ ಹೊರಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಮಕ್ಕಳು ಇದನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ; ಡ್ರೋನ್‌ಗಳು ಹಗಲು–ರಾತ್ರಿ ಮೇಲೆ ಹಾರುತ್ತಿವೆ ಮತ್ತು ಹೊಡೆದುರುಳಿಸಲಾಗುತ್ತಿದೆ. ಇದು ವಿಶೇಷವಾಗಿ ಮಕ್ಕಳಿಗೆ ಭಾರೀ ಮಾನಸಿಕ ಒತ್ತಡವಾಗಿದೆ,” ಎಂದು ಅವರು ವಿವರಿಸಿದ್ದಾರೆ.

ಖಾರ್ಕಿವ್–ಜಪೊರಿಜ್ಝಿಯಾ ಸಹಾಯಕ ಧರ್ಮಾಧ್ಯಕ್ಷರು ಸಹಾಯ ಮಾಡಬಲ್ಲ ಎಲ್ಲರನ್ನೂ ಸಾಧ್ಯವಿರುವ ರೀತಿಯಲ್ಲಿ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಅವರ ಧರ್ಮಕ್ಷೇತ್ರದ ಜನರು ಎಲ್ಲವನ್ನೂ ಕಳೆದುಕೊಂಡಿದ್ದಾರೆ ಎಂದು ಅವರು ಒತ್ತಿ ಹೇಳಿದ್ದಾರೆ. “ವಿದ್ಯುತ್ ಮತ್ತು ನೀರಿಲ್ಲದೆ ವ್ಯಾಪಾರಗಳು ನಡೆಯುವುದಿಲ್ಲ; ಅಗತ್ಯಗಳು ಅಪಾರವಾಗಿವೆ,” ಎಂದು ಅವರು ತಿಳಿಸಿದ್ದಾರೆ.

ವ್ಯಾಟಿಕನ್ ಸುದ್ದಿ ಓದುಗರಿಗೂ, ಕೇಳುಗರಿಗೂ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. “ಮುಖ್ಯವಾಗಿ, ಪೂಜ್ಯ ತಂದೆಯ ಸಮೀಪತೆ, ಅವರ ಪ್ರೋತ್ಸಾಹದ ಮಾತುಗಳು ಮತ್ತು ಪ್ರಧಾನ ಗುರು ಕಾನ್ರಾಡ್ ಕ್ರಾಜೆವ್ಸ್ಕಿ ಮೂಲಕ ನೀಡಿದ ನೆರವಿಗೆ ನಾವು ಧನ್ಯವಾದ ಸಲ್ಲಿಸುತ್ತಿದ್ದೇವೆ. ನಾವು ಪ್ರಾರ್ಥನೆ ಮುಂದುವರಿಸುತ್ತಿದ್ದೇವೆ. ಕೆಲವೊಮ್ಮೆ ಜಗತ್ತು ನಾವು ಅನುಭವಿಸುತ್ತಿರುವ ಕ್ರೌರ್ಯವನ್ನು ಕಾಣುತ್ತಿಲ್ಲವೆನಿಸುತ್ತದೆ. ದಯವಿಟ್ಟು ಉಕ್ರೇನ್ ಅನ್ನು ಮರೆಯಬೇಡಿ. ಮಾನವ ಹೃದಯಗಳ ಸ್ಮರಣೆ ಮತ್ತು ಬೆಂಬಲವೇ ನಮ್ಮ ಹೃದಯಗಳನ್ನು ಬೆಚ್ಚಗಾಗಿಸುತ್ತದೆ,” ಎಂದು ಅವರು ಹೇಳಿದ್ದಾರೆ.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

07 ಫೆಬ್ರವರಿ 2026, 17:39