ಅಮೆರಿಕದ ರಾಜಕೀಯ ಜೀವನದ ಪುನರುಜ್ಜೀವನಕ್ಕೆ ಬಾಲ್ಟಿಮೋರ್ ಪೂಜ್ಯ ಮಹಾಧರ್ಮಾಧ್ಯಕ್ಷರ ಕರೆ
ಲೇಖಕರು: ಜೆನ್ನಿ ಕ್ರಾಸ್ಕಾ,ಬಾಲ್ಟಿಮೋರ್
ಅಮೆರಿಕದ ಸ್ವಾತಂತ್ರ್ಯ ಘೋಷಣೆಯ 250ನೇ ವಾರ್ಷಿಕೋತ್ಸವದತ್ತ ದೇಶ ಸಾಗುತ್ತಿರುವ ಈ ಸಂದರ್ಭದಲ್ಲಿ, ಇದು ಕೇವಲ ಆಚರಣೆಯ ಕ್ಷಣವಲ್ಲ; ಆತ್ಮಪರಿಶೀಲನೆಯ ಆಹ್ವಾನವೂ ಆಗಿದೆ. ಒಂದು ರಾಷ್ಟ್ರಕ್ಕೆ ದೊರೆತ ಆಶೀರ್ವಾದಗಳಿಗೆ ಕೃತಜ್ಞತೆ ಸಲ್ಲಿಸುವಾಗಲೇ, ನಾಗರಿಕ ಜೀವನದಲ್ಲಿ ಕಾಣಿಸಿಕೊಳ್ಳುತ್ತಿರುವ ಬಿರುಕುಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾದ ಅಗತ್ಯವಿದೆ—ಅದು ಅಮೆರಿಕದಲ್ಲಷ್ಟೇ ಅಲ್ಲ, ಜಗತ್ತಿನ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿಯೂ ಸ್ಪಷ್ಟವಾಗಿದೆ.
“ಪ್ರೀತಿ ಮತ್ತು ಸತ್ಯದಲ್ಲಿ: ನವೀಕೃತ ರಾಜಕೀಯ ಸಂಸ್ಕೃತಿಯತ್ತ(In Charity & Truth: Toward a Renewed Political Culture)” ಎಂಬ ಪಾಲನಾ ಪತ್ರದಲ್ಲಿ ಬಾಲ್ಟಿಮೋರ್ ಮಹಾಧರ್ಮಾಧ್ಯಕ್ಷ ಪೂಜ್ಯ ವಿಲಿಯಂ ಲೋರಿ ಅವರು ಇಂದಿನ ರಾಜಕೀಯ ಸಂಕಟವು ಕೇವಲ ಸಂಸ್ಥಾತ್ಮಕ ಸಮಸ್ಯೆಯಲ್ಲ ಎಂದು ಸೂಚಿಸಿದ್ದಾರೆ. ಅದು ನೈತಿಕ ಮತ್ತು ಆತ್ಮೀಯ ಸಂಕಟವೂ ಹೌದು.ಕಾನೂನುಗಳು ಮತ್ತು ವ್ಯವಸ್ಥೆಗಳು ಮಹತ್ವದ್ದಾಗಿದ್ದರೂ, ಅವು ಸದ್ಗುಣಗಳಿಗೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ನಿಜವಾದ ಪುನರುಜ್ಜೀವನ ಯೇಸು ಕ್ರಿಸ್ತನತ್ತ ಮರುಮುಖವಾಗುವುದರಿಂದ ಆರಂಭವಾಗುತ್ತದೆ ಎಂದು ಮಹಾಧರ್ಮಾಧ್ಯಕ್ಷರು ಒತ್ತಿ ಹೇಳಿದ್ದಾರೆ.
ಮಾನವನು ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟವನು, ಅವನಿಗೆ ಅಲಂಘನೀಯ ಮಾನವ ಗೌರವವಿದೆ ಹಾಗೂ ಇತರರ ಮೇಲಿನ ಹೊಣೆಗಾರಿಕೆಗೆ ಕರೆಯಲ್ಪಟ್ಟವನು ಎಂಬ ಸ್ಪಷ್ಟ ದೃಷ್ಟಿಕೋನವನ್ನು ಮರುಪಡೆಯದೇ ರಾಜಕೀಯ ಜೀವನದಲ್ಲಿ ನಿಜವಾದ ಶ್ರೇಯೋಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಧರ್ಮಸಭೆಯ ರಚನೆಗಳಾಚೆಗೆ “ಸಹಯಾತ್ರೆ’ (ಸಿನೋಡಾಲಿಟಿ)
ಈ ಪಾಲನಾ ಪತ್ರದಲ್ಲಿ “ಸಹಯಾತ್ರೆ” (ಸಿನೋಡಾಲಿಟಿ) ಎಂಬ ವಿಚಾರ ಪ್ರಮುಖವಾಗಿ ಪ್ರತಿಪಾದಿಸಲಾಗಿದೆ. ಸಾಮಾನ್ಯವಾಗಿ ಇದನ್ನು ಧರ್ಮಸಭೆಯ ಒಳಾಂಗಣ ಪ್ರಕ್ರಿಯೆಗಳೊಂದಿಗೆ ಸಂಪರ್ಕಿಸಲಾಗುತ್ತದೆ. ಆದರೆ ಮಹಾಧರ್ಮಾಧ್ಯಕ್ಷರ ಪ್ರಕಾರ, ಇದರ ಆತ್ಮವು ಸಾರ್ವಜನಿಕ ಹಾಗೂ ರಾಜಕೀಯ ಜೀವನಕ್ಕೂ ಅನ್ವಯಿಸಬಹುದಾದ ಮೌಲ್ಯಗಳನ್ನು ಒಳಗೊಂಡಿದೆ.
ಸಹಯಾತ್ರೆಯ ಹೃದಯದಲ್ಲಿ ಇರುವುದೇನು? ವಿನಯದಿಂದ ಕೇಳುವುದು, ಸತ್ಯನಿಷ್ಠೆಯಿಂದ ಮಾತನಾಡುವುದು, ಸಹನೆಯೊಂದಿಗೆ ವಿವೇಕಿಸುವುದು ಮತ್ತು ವಿಭಜನೆಗಿಂತ ಒಟ್ಟಾಗಿ ನಡೆಯುವ ಮನೋಭಾವ. ಭಿನ್ನಾಭಿಪ್ರಾಯಗಳ ಅಸ್ತಿತ್ವವನ್ನು ಇದು ನಿರಾಕರಿಸುವುದಿಲ್ಲ; ಆದರೆ ವಿಭಜನೆ ಮತ್ತು ಶತ್ರುತ್ವವನ್ನು ಅದು ತಳ್ಳಿಹಾಕುತ್ತದೆ.
ಧರ್ಮಸಭೆಯ ಆಂತರಿಕ ಜೀವನವನ್ನು ನೇರವಾಗಿ ಲೌಕಿಕ ರಾಜಕೀಯ ವ್ಯವಸ್ಥೆಗೆ ನಕ್ಷೆ ಹಾಕಲು ಸಾಧ್ಯವಿಲ್ಲ. ಆದಾಗ್ಯೂ, ಸಹಯಾತ್ರೆ ಬೆಳೆಸುವ ಗುಣಗಳಾದ ಗಮನ, ತಾಳ್ಮೆ, ನೈತಿಕ ಗಂಭೀರತೆ, ಘನತೆಗೆ ಗೌರವ— ಬಹುತ್ವ ಸಮಾಜವು ಒಳಒಳಗೆ ಭಂಗವಾಗದೆ ಉಳಿಯಲು ಅತ್ಯಗತ್ಯವೆಂದು ಪತ್ರವು ಸೂಚಿಸುತ್ತದೆ.
ನೈತಿಕ ಕಲ್ಪನೆಗೆ ಮರುಜೀವ
ಈ ಪತ್ರದ ಮೂಲ ಸಂದೇಶ ರಾಜಕೀಯ ಜೀವನದಲ್ಲಿ “ನೈತಿಕ ಕಲ್ಪನೆ”ಯನ್ನು ಮತ್ತೆ ಜೀವಂತಗೊಳಿಸುವುದಾಗಿದೆ. ಇದು ಭಾವನಾತ್ಮಕ ಆದರ್ಶವಾದವಲ್ಲ, ಹಾಗೆಯೇ ನಿಲುವುಗಳನ್ನು ತೊರೆದು ಸಮರಸವಾಗುವ ಕರೆಯೂ ಅಲ್ಲ. ಬದಲಾಗಿ, ನೈತಿಕ ಕಲ್ಪನೆ ಎಂದರೆ ಸದ್ಗುಣಗಳಿಂದ ರೂಪುಗೊಂಡ ಒಳನೋಟ. ಸಾರ್ವಜನಿಕ ಬದುಕನ್ನು ವಿಭಿನ್ನ ರೀತಿಯಲ್ಲಿ ನೋಡುವ ಸಾಮರ್ಥ್ಯ. ಅಲ್ಲಿ ಧೈರ್ಯ ಆಕ್ರಮಣಶೀಲತೆಯಾಗುವುದಿಲ್ಲ; ನ್ಯಾಯ ಅವಮಾನವನ್ನು ಅವಶ್ಯಕತೆ ಎಂದು ಕಾಣುವುದಿಲ್ಲ; ಸತ್ಯ ಪ್ರೀತಿಯಿಂದ ಬೇರ್ಪಡುವುದಿಲ್ಲ. ಸದ್ಗುಣಗಳಿಂದ ರೂಪುಗೊಂಡ ಮನಸ್ಸು ಸಾರ್ವಜನಿಕ ಬದುಕನ್ನು ಮತ್ತೊಮ್ಮೆ ಮಾನವೀಯ ಕಣ್ಣಿನಿಂದ ನೋಡುವ ಸಾಮರ್ಥ್ಯವನ್ನು ಹೊಂದಬೇಕು ಎಂಬ ಸಂದೇಶವಾಗಿದೆ.
ರಾಜಕೀಯ ಪುನರುಜ್ಜೀವನವು ಕೇವಲ ವ್ಯವಸ್ಥೆಗಳ ಸುಧಾರಣೆಯಿಂದ ಸಾಧ್ಯವಿಲ್ಲ; ಅದು ವ್ಯಕ್ತಿಗಳ ಸದ್ಗುಣಗಳಿಂದ ಆರಂಭವಾಗಬೇಕು.
- ಪ್ರಜ್ಞೆ ಸಿದ್ಧಾಂತದ ಮೂಲಕ ತುರ್ತು ನಿರ್ಧಾರಗಳನ್ನು ತಡೆಯುತ್ತದೆ.
- ನ್ಯಾಯ ಕೇವಲ ಗೆಲುವಿಗಾಗಿ ಅಲ್ಲ, ಸಮಗ್ರ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತದೆ.
- ಧೈರ್ಯ ಒತ್ತಡದ ನಡುವೆ ಮಾನವೀಯತೆಯನ್ನು ಕಾಪಾಡುತ್ತದೆ.
- ಸಂಯಮ ಭಾಷೆ ಮತ್ತು ಅಧಿಕಾರದ ಅತಿರೇಕವನ್ನು ನಿಯಂತ್ರಿಸುತ್ತದೆ.
ಇವೆಲ್ಲಕ್ಕಿಂತ ಮೇಲಿರುವುದು ಸೇವೆ- ಸೇವೆ ಭಾವನಾತ್ಮಕ ಬಲಹೀನತೆಯಲ್ಲ, ಬದಲಾಗಿ ಶಿಸ್ತಿನೊಂದಿಗೆ ನೆರೆಯವರನ್ನು ಪ್ರೀತಿಸುವ ಬದ್ಧತೆ. ಪ್ರೀತಿ ಇಲ್ಲದೆ ಇದ್ದರೆ, ಸತ್ಯವಾದ ವಾದಗಳೂ ಸಹ ವಿಭಜನೆಯ ಸಾಧನಗಳಾಗಿ ಮಾರ್ಪಡಬಹುದು ಎಂಬ ಎಚ್ಚರಿಕೆಯನ್ನು ಪತ್ರ ಒತ್ತಿಹೇಳುತ್ತದೆ.
ನಮ್ಮೊಳಗಿಂದಲೇ ಆರಂಭವಾಗುವ ಪುನರುಜ್ಜೀವನ
ಪತ್ರದ ಅತ್ಯಂತ ಗಮನಾರ್ಹ ಸಂದೇಶವೆಂದರೆ—ಪುನರುಜ್ಜೀವನವು ಒಬ್ಬ ನಾಯಕನಿಂದಲೋ, ಒಂದು ಚಳವಳಿಯಿಂದಲೋ ಅಥವಾ ಒಂದು ರಾಜಕೀಯ ಪಕ್ಷದಿಂದಲೋ ಬರುವುದಿಲ್ಲ ಎಂಬ ಮಹಾಧರ್ಮಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ಸಂಸ್ಕೃತಿಯನ್ನು ರೂಪಿಸುವುದು ಸಾಮಾನ್ಯ ನಾಗರಿಕರ ನೈತಿಕ ಅಭ್ಯಾಸಗಳೇ. ಸಂಸ್ಥೆಗಳು ಮಹತ್ವದ್ದಾಗಿದ್ದರೂ, ಸದ್ಗುಣಗಳ ಕೊರತೆಯನ್ನು ಅವು ಪೂರೈಸಲಾರವು. ಅಗತ್ಯವಿರುವ ಬದಲಾವಣೆ ಹೊರಗಿನಿಂದ ಹೇರಲಾಗುವುದಿಲ್ಲ; ಅದು ಮನಸ್ಸಿನ ಸಾಕ್ಷಿ, ಒಗ್ಗಟ್ಟು ಮತ್ತು ಭಿನ್ನಾಭಿಪ್ರಾಯಗಳ ನಡುವೆ ಜೊತೆಯಾಗಿ ನಡೆಯುವ ಬದ್ಧತೆಯಿಂದ ಬೆಳೆಸಲ್ಪಡಬೇಕು ಎಂದು ಅವರು ಸೂಚಿಸುತ್ತಾರೆ.
ಒಂದು ಬದಿಯಲ್ಲಿ ಹಿಂತೆಗೆದುಕೊಳ್ಳುವ ಪ್ರವೃತ್ತಿ ಮತ್ತು ಇನ್ನೊಂದು ಬದಿಯಲ್ಲಿ ಆಧಿಪತ್ಯ ಸಾಧಿಸುವ ಮನೋಭಾವ ಆವರಿಸಿರುವ ಕಾಲಘಟ್ಟದಲ್ಲಿ,“ಪ್ರೀತಿ ಮತ್ತು ಸತ್ಯದಲ್ಲಿ: ನವೀಕೃತ ರಾಜಕೀಯ ಸಂಸ್ಕೃತಿಯತ್ತ(In Charity & Truth: Toward a Renewed Political Culture)” ಪತ್ರವು ಪರ್ಯಾಯ ಮಾರ್ಗವನ್ನು ಸೂಚಿಸುತ್ತದೆ—ಸದ್ಗುಣಗಳಿಂದ ಪ್ರೇರಿತ, ನೈತಿಕ ಕಲ್ಪನೆಯಿಂದ ಜೀವಂತಗೊಂಡ, ಮತ್ತು ಪ್ರೀತಿ ಹಾಗೂ ಸತ್ಯವು ಪರಸ್ಪರ ಅವಿಭಾಜ್ಯವೆಂಬ ನಂಬಿಕೆಯಲ್ಲಿ ನೆಲೆಯೂರಿದ ರಾಜಕೀಯ ಬದುಕಿನ ದಾರಿ. ದಣಿದ ಸಾರ್ವಜನಿಕ ವಲಯಕ್ಕೆ ಇದು ಬಹುಶಃ ಅತ್ಯಂತ ಧೈರ್ಯಶಾಲಿ ಪ್ರಸ್ತಾಪವಾಗಬಹುದು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).