2026.02.09 Conferencia Episcopal Venezolana 2026.02.09 Conferencia Episcopal Venezolana 

ವೆನೆಜುವೆಲಾದ ಧರ್ಮಸಭೆ: ಪ್ರಜಾಪ್ರಭುತ್ವದ ಪುನರ್‌ಸ್ಥಾಪನೆಗೆ ಕರೆ

ತಮ್ಮ ಸಾಮಾನ್ಯ ಪೂರ್ಣಾಂಗ ಸಭೆಯ ಅಂತ್ಯದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ವೆನೆಜುವೆಲಾದ ಪೂಜ್ಯ ಧರ್ಮಾಧ್ಯಕ್ಷರು ಜನಸಾರ್ವಭೌಮತ್ವಕ್ಕೆ ಗೌರವ ನೀಡುವ ಆಧಾರದ ಮೇಲೆ ರಾಷ್ಟ್ರೀಯ ಸಾಮರಸ್ಯ ಸಾಧಿಸಬೇಕೆಂದು ಆಗ್ರಹಿಸಿದರು. ಜೊತೆಗೆ, ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕೆಂದು ಮತ್ತು ಮಾನವೀಯ ಬಿಕ್ಕಟ್ಟಿಗೆ ತುರ್ತು ಗಮನ ನೀಡಬೇಕೆಂದು ಅವರು ತಿಳಿಸಿದರು.

ವ್ಯಾಟಿಕನ್ ವರದಿ

“ನೀವು ಉದಯಕಾಲದ ನಕ್ಷತ್ರದಂತೆ ಪ್ರಜ್ವಲಿಸುವಿರಿ” ಎಂಬ ಪ್ರವಾದಿ ಯೆಶಾಯನ ಗ್ರಂಥದ ವಾಕ್ಯವನ್ನು ಆಧಾರವಾಗಿಟ್ಟುಕೊಂಡು, ವೆನೆಜುವೆಲಾದ ಧರ್ಮಾಧ್ಯಕ್ಷರು ತಮ್ಮ 125ನೇ ಸಾಮಾನ್ಯ ಪೂರ್ಣಾಂಗ ಸಭೆಯ ಅಂತ್ಯದಲ್ಲಿ ದೇವಜನರಿಗೆ ಸಂದೇಶವನ್ನು ನೀಡಿದರು.

2026ರ ಫೆಬ್ರವರಿ 9ರಂದು ವೆನೆಜುವೆಲಾ ಧರ್ಮಾಧ್ಯಕ್ಷರ ಪರಿಷತ್ತಿನಿಂದ ಪ್ರಕಟವಾದ ಪಾಲನಾ ಉಪದೇಶದಲ್ಲಿ, ಧರ್ಮಾಧ್ಯಕ್ಷರು ಭರವಸೆಯ ಸಂದೇಶವನ್ನು ಹಂಚಿಕೊಂಡರು. ಜೊತೆಗೆ, “ಈ ವರ್ಷದ ಜನವರಿ 3ರ ಘಟನೆಗಳು ದೇಶದ ರಾಜಕೀಯ ಹಾಗೂ ಸಾಮಾಜಿಕ ಪರಿಸ್ಥಿತಿಯನ್ನು ಆಳವಾಗಿ ಬದಲಾಯಿಸಿವೆ” ಎಂದು ಅವರು ತಿಳಿಸಿದರು.

ದೇಶದ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಪರಿಸ್ಥಿತಿಯಿಂದ ಉಂಟಾದ ಆತಂಕ ಮತ್ತು ಭಯದ ನಡುವೆ, ಧರ್ಮಾಧ್ಯಕ್ಷರು ಸುವಾರ್ತೆಯ ಬೆಳಕಿನಲ್ಲಿ ತಮ್ಮ ಚಿಂತನೆಗಳನ್ನು ರೂಪಿಸಿಕೊಂಡಿದ್ದಾರೆ ಎಂದು ವಿವರಿಸಿದರು. ಶಿಷ್ಯರೊಂದಿಗೆ ದೋಣಿಯಲ್ಲಿ ಇದ್ದ ಯೇಸು ಚಂಡಮಾರುತವನ್ನು ಶಾಂತಗೊಳಿಸಿದ ಘಟನೆ ಅವರನ್ನು ಪ್ರೇರೇಪಿಸಿದೆ ಎಂದು ಅವರು ಹೇಳಿದರು. “ಯೇಸು ಸದಾ ತನ್ನ ಜನರೊಂದಿಗೆ ಇದ್ದಾನೆ; ಆತನು ನಮ್ಮೊಡನೆ ಇರುವ ದೇವರು—ಇಮ್ಮಾನುಯೇಲ್,” ಎಂದು ಅವರು ಉಲ್ಲೇಖಿಸಿದರು.

ಧರ್ಮಾಧ್ಯಕ್ಷರು ಜನವರಿ 4ರ ಭಾನುವಾರ ಪೂಜ್ಯ ಜಗದ್ಗುರುಗಳಾದ 14ನೆ ಲಿಯೋ ಅವರು ಏಂಜೆಲುಸ್ ಪ್ರಾರ್ಥನೆಯ ನಂತರ ನೀಡಿದ ಮಾತುಗಳನ್ನು ಆಧಾರವಾಗಿ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.

“ವೆನೆಜುವೆಲಾದ ಜನರ ಹಿತವೇ ಎಲ್ಲಾ ವಿಚಾರಗಳಿಗಿಂತ ಮೇಲುಗೈ ಸಾಧಿಸಬೇಕು. ಇದು ಹಿಂಸೆಯನ್ನು ಅಂತ್ಯಗೊಳಿಸಿ, ನ್ಯಾಯ ಮತ್ತು ಶಾಂತಿಯ ಮಾರ್ಗಗಳನ್ನು ಅನುಸರಿಸಲು, ಹಾಗೂ ದೇಶದ ಸಾರ್ವಭೌಮತ್ವವನ್ನು ರಕ್ಷಿಸಲು ದಾರಿ ಮಾಡಿಕೊಡಬೇಕು,” ಎಂದು ಪೂಜ್ಯ ಜಗದ್ಗುರುಗಳು ಹೇಳಿದ್ದರು.

ಈ ಮಾತುಗಳನ್ನು ಮುಂದುವರಿಸಿಕೊಂಡು, ಧರ್ಮಾಧ್ಯಕ್ಷರು ಜನರು ಎದುರಿಸುತ್ತಿರುವ ಸಂಕೀರ್ಣ ಸಮಸ್ಯೆಗಳನ್ನು ವಿವರಿಸಿದರು—ನ್ಯಾಯಸಮ್ಮತ ವೇತನದ ಉದ್ಯೋಗಾವಕಾಶಗಳ ಕೊರತೆ, ವ್ಯಾಪಕ ಹಾಗೂ ಶಿಕ್ಷೆಗೊಳಗಾಗದ ಭ್ರಷ್ಟಾಚಾರ, ಮಾನವ ಮತ್ತು ನಾಗರಿಕ ಹಕ್ಕುಗಳ ಉಲ್ಲಂಘನೆ, ಅಭಿವ್ಯಕ್ತಿ ಸ್ವಾತಂತ್ರ್ಯದ ನಿರ್ಬಂಧ ಹಾಗೂ ನ್ಯಾಯಸಮ್ಮತ ವಿಚಾರಣೆ ಮತ್ತು ರಕ್ಷಣೆಯ ಹಕ್ಕಿನ ಲೋಪಗಳು ಸೇರಿದಂತೆ ಅನೇಕ ಸವಾಲುಗಳು ದೇಶವನ್ನು ಕಾಡುತ್ತಿವೆ ಎಂದು ಅವರು ವ್ಯಕ್ತಪಡಿಸಿದರು.

ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವ

ವೆನೆಜುವೆಲಾದ ಧರ್ಮಾಧ್ಯಕ್ಷರು ತಮ್ಮ ಸಂದೇಶದಲ್ಲಿ, ದೇಶದ ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವವನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರದ ಸಂಸ್ಥೆಗಳನ್ನು ಪುನರ್‌ನಿರ್ಮಿಸುವುದು, ಸಾರ್ವಜನಿಕ ಅಧಿಕಾರಗಳ ಸ್ವಾಯತ್ತತೆಯನ್ನು ಪುನಃಸ್ಥಾಪಿಸುವುದು ಮತ್ತು ಸ್ವತಂತ್ರ, ವಿಶ್ವಾಸಾರ್ಹ ಸುಪ್ರೀಂ ಕೋರ್ಟ್ ಹಾಗೂ ರಾಷ್ಟ್ರೀಯ ಚುನಾವಣಾ ಮಂಡಳಿಯನ್ನು ಸ್ಥಾಪಿಸುವುದು ಅಗತ್ಯವೆಂದು ಒತ್ತಿ ಹೇಳಿದ್ದಾರೆ.

ರಾಜ್ಯವು ನಗರ ಪ್ರದೇಶಗಳು ಹಾಗೂ ಮೂಲನಿವಾಸಿ ಪ್ರದೇಶಗಳು ಸೇರಿ ತನ್ನ ಸಂಪೂರ್ಣ ಭೂಪ್ರದೇಶದ ಮೇಲೆ ಪರಿಣಾಮಕಾರಿ ನಿಯಂತ್ರಣ ಹೊಂದಿರಬೇಕು ಎಂದು ಧರ್ಮಾಧ್ಯಕ್ಷರು ತಿಳಿಸಿದರು. ದೇಶದ ಒಳಗೆ ಮತ್ತು ಹೊರಗೆ ಇರುವ ಎಲ್ಲ ವೆನೆಜುವೆಲಾದ ನಾಗರಿಕರೂ ಈ ಪ್ರಕ್ರಿಯೆಯಲ್ಲಿ ಪರಸ್ಪರ ಗೌರವದ ವಾತಾವರಣದಲ್ಲಿ ಭಾಗವಹಿಸಬೇಕು ಎಂದು ಅವರು ವ್ಯಕ್ತಪಡಿಸಿದರು. ರಾಜಕೀಯ ಸಿದ್ಧಾಂತ ಅಥವಾ ಪಕ್ಷಭೇದವನ್ನು ಮೀರಿ, ಸ್ಥಿರ ಸಹಬಾಳ್ವೆಯನ್ನು ಬೆಳೆಸುವುದು ಅಗತ್ಯವೆಂದು ಅವರು ವಿವರಿಸಿದರು.

“ಸಾರ್ವತ್ರಿಕ, ನೇರ ಮತ್ತು ರಹಸ್ಯ ಮತದಾನದ ಮೂಲಕ ವ್ಯಕ್ತವಾಗುವ ಜನರ ಸಾರ್ವಭೌಮತ್ವವನ್ನು, 2024ರ ಜುಲೈ 28ರಂದು ನಡೆದ ಅಧ್ಯಕ್ಷೀಯ ಚುನಾವಣೆಯ ವಿವರವಾದ ಫಲಿತಾಂಶಗಳನ್ನು ಪ್ರಕಟಿಸದ ಮೂಲಕ ರಾಜ್ಯಾಧಿಕಾರಿಗಳು ನಿರ್ಲಕ್ಷಿಸಿದ್ದಾರೆ” ಎಂದು ಪಾಲನಾ ಸಂದೇಶ ಸ್ಪಷ್ಟಪಡಿಸಿದೆ ಎಂದು ಧರ್ಮಾಧ್ಯಕ್ಷರು ಹೇಳಿದರು.

ಈ ವರ್ಷದ ಜನವರಿ 3ರ ಘಟನೆಗಳು ದೇಶದ ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಆಳವಾಗಿ ಬದಲಾಯಿಸಿವೆ ಎಂದು ಅವರು ತಿಳಿಸಿದರು. ಈ ಘಟನೆಗಳನ್ನು ಕೆಲವರು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ನೋಡುತ್ತಿದ್ದರೂ, ಇವು ವೆನೆಜುವೆಲಾದ ಪ್ರಜಾಪ್ರಭುತ್ವೀಕರಣಕ್ಕೆ ಹೊಸ ಮಾರ್ಗಗಳನ್ನು ತೆರೆದಿವೆ ಎಂದು ಅನೇಕರು ನಂಬುತ್ತಾರೆ ಎಂದು ಧರ್ಮಾಧ್ಯಕ್ಷರು ಮುಂದುವರೆದು ಹೇಳಿದರು.

“ನಾವು ನಮ್ಮ ಜನರ ನೋವನ್ನು ಹಂಚಿಕೊಳ್ಳುತ್ತೇವೆ”

ವೆನೆಜುವೆಲಾದ ಧರ್ಮಾಧ್ಯಕ್ಷರು ರಾಜಕೀಯ ಕೈದಿಗಳು ಮತ್ತು ಅವರ ಕುಟುಂಬಗಳೊಂದಿಗೆ, ದೇಶ ತೊರೆಯಬೇಕಾದ ಲಕ್ಷಾಂತರ ಜನರೊಂದಿಗೆ, ಔಷಧಿ ಸಿಗದೆ ಸಂಕಟಪಡುವ ರೋಗಿಗಳೊಂದಿಗೆ, ಅಧ್ಯಯನ ಹಾಗೂ ಉದ್ಯೋಗದ ಅವಕಾಶಗಳನ್ನು ಕಳೆದುಕೊಂಡ ಯುವಜನರೊಂದಿಗೆ, ತೀವ್ರವಾಗಿ ಅಂಚಿಗೆ ತಳ್ಳಲ್ಪಟ್ಟ ಹಾಗೂ ನಿರ್ಲಕ್ಷಿತ ಮೂಲನಿವಾಸಿ ಸಮುದಾಯಗಳೊಂದಿಗೆ, ಅನ್ಯಾಯವಾಗಿ ಆಸ್ತಿ ಕಳೆದುಕೊಂಡವರೊಂದಿಗೆ ಹಾಗೂ ವಿವಿಧ ಅನ್ಯಾಯಗಳಿಂದ ಬಳಲುತ್ತಿರುವ ಅನೇಕ ಇತರರೊಂದಿಗೆ ತಾವು ಮತ್ತೆ ಒಗ್ಗಟ್ಟನ್ನು ಮತ್ತು ಸಾನ್ನಿಧ್ಯವನ್ನು ವ್ಯಕ್ತಪಡಿಸುತ್ತಿರುವುದಾಗಿ ಹೇಳಿದರು.

“ನಾವು ನಮ್ಮ ಜನರ ನೋವನ್ನು ಹಂಚಿಕೊಳ್ಳುತ್ತೇವೆ,” ಎಂದು ಧರ್ಮಾಧ್ಯಕ್ಷರು ತಿಳಿಸಿದರು. “ಇತ್ತೀಚಿನದಾಗಲಿ ಹಳೆಯದಾಗಲಿ, ಹಿಂಸೆಯಿಂದ ಮೃತಪಟ್ಟ ಎಲ್ಲರ ಶಾಶ್ವತ ವಿಶ್ರಾಂತಿಗಾಗಿ ನಾವು ಪ್ರಾರ್ಥಿಸುತ್ತೇವೆ; ಅವರು ಅಮೂಲ್ಯ ಮಾನವ ಜೀವಗಳು, ಅರ್ಥವಿಲ್ಲದೆ ಕಳೆದುಹೋಗಿವೆ,” ಎಂದು ಅವರು ಹೇಳಿದರು.

ಈ ಪಾಲನಾ ಪಠ್ಯದಲ್ಲಿ, ಧರ್ಮಸಭೆ ಸಾರ್ವಜನಿಕ ಹಿತಾಸಕ್ತಿಯನ್ನು ಉತ್ತೇಜಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ ಎಂದು ಧರ್ಮಾಧ್ಯಕ್ಷರು ವಿವರಿಸಿದರು. ವಿಶೇಷವಾಗಿ ಬಡವರು ಮತ್ತು ಅಗತ್ಯದಲ್ಲಿರುವವರ ಪರವಾಗಿ ಕಾರ್ಯನಿರ್ವಹಿಸುವುದು ತನ್ನ ಕರ್ತವ್ಯವೆಂದು ಧರ್ಮಸಭೆ ದೃಢಪಡಿಸಿದೆ. ಎಲ್ಲಾ ಕ್ಷೇತ್ರಗಳೂ ಈ ಗುರಿಯನ್ನು ಸಾಧಿಸಲು ಸಹಕರಿಸಬೇಕು ಮತ್ತು ವೈಯಕ್ತಿಕ, ಸಿದ್ಧಾಂತಾತ್ಮಕ, ಪಕ್ಷಪಾತಿ ಅಥವಾ ಆರ್ಥಿಕ ಹಿತಾಸಕ್ತಿಗಳಿಗಿಂತ ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂದು ಧರ್ಮಸಭೆ ಕರೆ ನೀಡಿದೆ ಎಂದು ಅವರು ವ್ಯಕ್ತಪಡಿಸಿದರು.

ಸಮನ್ವಯ, ಪರಸ್ಪರ ಗುರುತಿನೀಡಿಕೆ ಮತ್ತು ಶಾಂತಿಯ ಪ್ರಕ್ರಿಯೆಗಳು

ಶಾಂತಿ ಮತ್ತು ಸ್ವಾತಂತ್ರ್ಯದಲ್ಲಿ ಬದುಕುವ ಆಶೆಯ ಕುರಿತು ಮಾತನಾಡುತ್ತಾ, ವೆನೆಜುವೆಲಾದ ಧರ್ಮಾಧ್ಯಕ್ಷರು, ಈ ಕನಸು ಸಾಕಾರವಾಗಬೇಕಾದರೆ ಹಿಂಸೆಯನ್ನು ತ್ಯಜಿಸಬೇಕು, ಸುಳ್ಳು, ದ್ವೇಷ, ಅಸಮಾಧಾನ, ಪ್ರತೀಕಾರ ಮತ್ತು ಮಾತಿನ ಯುದ್ಧವನ್ನು ದೂರ ಮಾಡಬೇಕು ಎಂದು ಹೇಳಿದ್ದಾರೆ.

“ಇದು ಎಲ್ಲಾ ವೆನೆಜುವೆಲಾದವರಿಂದ ಒಗ್ಗಟ್ಟಿನ, ಪರಸ್ಪರ ಗುರುತಿನೀಡಿಕೆ, ಕ್ಷಮೆ ಮತ್ತು ಸಮನ್ವಯ, ಹಾಗೂ ಸತ್ಯ ಮತ್ತು ನ್ಯಾಯದಲ್ಲಿ ಸ್ಮೃತಿಗಳ ಶುದ್ಧೀಕರಣದ ಪ್ರಕ್ರಿಯೆಗಳನ್ನು ಅಂಗೀಕರಿಸುವ ಅಗತ್ಯವಿದೆ,” ಎಂದು ಅವರು ವಿವರಿಸಿದ್ದಾರೆ. ಇದಕ್ಕಾಗಿ ಜನರ ಘನತೆಯ ಗೌರವ ಮತ್ತು ಸಹೋದರತ್ವದ ನಿರಂತರ ಅಭ್ಯಾಸದ ಮೇಲೆ ದೃಢವಾದ ಬದ್ಧತೆ ಅಗತ್ಯವೆಂದು ಧರ್ಮಾಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯ

ವೆನೆಜುವೆಲಾದ ಧರ್ಮಾಧ್ಯಕ್ಷರು ಎಲ್ಲರ ಮಾನವ ಹಾಗೂ ನಾಗರಿಕ ಹಕ್ಕುಗಳನ್ನು ಖಾತರಿಪಡಿಸುವ ಮಹತ್ವವನ್ನು ಪುನರುಚ್ಚರಿಸಿದ್ದಾರೆ. ವ್ಯಕ್ತಿಯ ಘನತೆಯ ಗೌರವವೇ ರಾಷ್ಟ್ರದ ಶಾಂತಿಯುತ ಮತ್ತು ದೀರ್ಘಕಾಲಿಕ ಪ್ರಗತಿಯ ಆಧಾರವೆಂದು ಅವರು ಒತ್ತಿ ಹೇಳಿದ್ದಾರೆ.

ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವ ಕಾನೂನುಗಳನ್ನು, ವಿಶೇಷವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ, ಮತದಾನ ಹಕ್ಕು ಹಾಗೂ ನಾಗರಿಕ ಸಂಘಟನೆಗಳ ಕಾರ್ಯನಿರ್ವಹಣೆಯನ್ನು ಮಿತಿಗೊಳಿಸುವ ಕಾನೂನುಗಳನ್ನು ರದ್ದುಪಡಿಸುವ ಅಗತ್ಯವಿದೆ. ರಾಜಕೀಯ ಕಾರಣಗಳಿಂದ ಅಥವಾ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಕ್ಕಾಗಿ ಬಂಧಿತರಾಗಿದ್ದ ಕೆಲವರು ಬಿಡುಗಡೆಗೊಂಡಿರುವುದನ್ನು ಅವರು ಸಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಿದ್ದಾರೆ. ಇದಾದರೂ, ಎಲ್ಲಾ ರಾಜಕೀಯ ಕೈದಿಗಳನ್ನು ಸಂಪೂರ್ಣವಾಗಿ ಬಿಡುಗಡೆ ಮಾಡುವಂತೆ ತಮ್ಮ ಕರೆಯನ್ನು ಅವರು ಪುನಃ ಒತ್ತಿ ಹೇಳಿದರು.

ಅದೇ ವೇಳೆ, ವ್ಯಾಪಕ, ಸಾಮಾನ್ಯ ಹಾಗೂ ಒಳಗೊಂಡಿರುವ ಕ್ಷಮಾದಾನ ಕಾನೂನನ್ನು ಅಂಗೀಕರಿಸುವುದನ್ನು ಅವರು ಬೆಂಬಲಿಸಿದ್ದಾರೆ. ಇದು ಸಮನ್ವಯ ಮತ್ತು ಪ್ರಜಾಸತ್ತಾತ್ಮಕ ಸಹಬಾಳ್ವೆಯತ್ತ ಮಹತ್ವದ ಹೆಜ್ಜೆ ಎಂದು ಧರ್ಮಾಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.

ಕಡು ಬಡವರತ್ತ ಗಮನಹರಿಸುವ ಭವಿಷ್ಯ

ವೆನೆಜುವೆಲಾದ ಧರ್ಮಾಧ್ಯಕ್ಷರು ಸ್ವಾತಂತ್ರ್ಯ ಮತ್ತು ನ್ಯಾಯದ ಮೇಲೆ ಆಧಾರಿತ ಭವಿಷ್ಯವನ್ನು ನಿರ್ಮಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಈ ಪ್ರಕ್ರಿಯೆಯಲ್ಲಿ ಕುಟುಂಬವನ್ನು ವ್ಯಕ್ತಿಗಳ ಸಮಗ್ರ ಬೆಳವಣಿಗೆಯ ಮೂಲಾಧಾರವಾಗಿ ಬಲಪಡಿಸಬೇಕು ಮತ್ತು ಸಮಾಜದ ಎಲ್ಲ ವಲಯಗಳ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸಬೇಕು ಎಂದು ಅವರು ತಿಳಿಸಿದ್ದಾರೆ.

ಜನಸಂಖ್ಯೆಯ ಬಹುಭಾಗವನ್ನು ಪ್ರಭಾವಿಸುವ ದಾರಿದ್ರ್ಯವನ್ನು ಜಯಿಸುವುದು ತುರ್ತು ಅಗತ್ಯವೆಂದು ಧರ್ಮಾಧ್ಯಕ್ಷರು ಹೇಳಿದ್ದಾರೆ. ತೈಲ ಉದ್ಯಮದಿಂದ ಬರುವ ಸಂಪನ್ಮೂಲಗಳನ್ನು ರಾಜಕೀಯ ಲಾಭಕ್ಕಾಗಿ ಬಳಸದೆ, ನ್ಯಾಯಸಮ್ಮತವಾಗಿ ರೂಪಿಸುವ ವೇತನ ಸುಧಾರಣೆಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಮೀಸಲಿಡಬೇಕು ಎಂದು ಅವರು ಒತ್ತಿ ಹೇಳಿದರು. ಇದರಿಂದ ನಾಗರಿಕರು ತಮ್ಮ ಮೂಲಭೂತ ಭೌತಿಕ, ಸಾಮಾಜಿಕ ಮತ್ತು ಬೌದ್ಧಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು.

ಅಂತಿಮವಾಗಿ, ಪ್ರಸ್ತುತ ಸವಾಲುಗಳನ್ನು ಎದುರಿಸಲು ದಿನನಿತ್ಯದ ಪ್ರಾರ್ಥನೆಯ ಮೂಲಕ ಬೆಳಕು ಮತ್ತು ಶಕ್ತಿಯನ್ನು ಹುಡುಕುವಂತೆ ಧರ್ಮಾಧ್ಯಕ್ಷರು ವೆನೆಜುವೆಲಾದ ಜನತೆಗೆ ಕರೆ ನೀಡಿದ್ದಾರೆ.

 ಇದರಲ್ಲಿ ದೈವವಾಕ್ಯದ ಧ್ಯಾನಾತ್ಮಕ ಓದು, ಪವಿತ್ರ ಪರಮ ಪ್ರಸಾದ ಆರಾಧನೆ, ಶಿಲುಬೆಯ ಹಾದಿಯ ಭಕ್ತಿಪರ ಆಚರಣೆ ಮತ್ತು ತಪಸ್ಸು ಕಾಲದ ಆತ್ಮೀಕ ಸಮಾವೇಶಗಳು ಸೇರಿವೆ ಎಂದು ಅವರು ತಿಳಿಸಿದರು. ಇವುಗಳು ಒಂದೇ ನೆಲದ ಮಕ್ಕಳಾಗಿ ಬಂಧಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಕೊನೆಗೆ, ಕೊರೊಮೊಟೊ ಮಾತೆಯ ಮಧ್ಯಸ್ಥಿಕೆಯಲ್ಲಿ ವಿಶ್ವಾಸವಿಟ್ಟು, ಸ್ವಾತಂತ್ರ್ಯ, ನ್ಯಾಯ ಮತ್ತು ಶಾಂತಿಯ ಮಾರ್ಗಗಳಲ್ಲಿ ದೇಶದ ಪ್ರಗತಿಗಾಗಿ ಧೈರ್ಯ ಮತ್ತು ಉದಾರತೆಯಿಂದ ತಮ್ಮ ಜವಾಬ್ದಾರಿಗಳನ್ನು ಹೊತ್ತುಕೊಳ್ಳುವಂತೆ ಧರ್ಮಾಧ್ಯಕ್ಷರು ಎಲ್ಲರಿಗೂ ಮನವಿ ಮಾಡಿದ್ದಾರೆ.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

10 ಫೆಬ್ರವರಿ 2026, 20:19