ರೋಮ್‌ನ ಬೆಸಿಲಿಕಾ ಡಿ ಸಾಂಟಾ ಪುಡೆಂಜಿಯಾನಾದಲ್ಲಿ  ಸಿನಾಗ್ ಹಿಮಿಗ್ ಕೊರೇಲ್ ಲಂಡನ್ ರೋಮ್‌ನ ಬೆಸಿಲಿಕಾ ಡಿ ಸಾಂಟಾ ಪುಡೆಂಜಿಯಾನಾದಲ್ಲಿ ಸಿನಾಗ್ ಹಿಮಿಗ್ ಕೊರೇಲ್ ಲಂಡನ್ 

ಲಂಡನ್‌ನ ಫಿಲಿಪಿನೋ ವಲಸಿಗರ ಗಾಯನ ಬಳಗ: ನಂಬಿಕೆ ಮತ್ತು ಸಂಗೀತದ ಜಾಲವನ್ನು ನೇಯ್ದ ಸೇವೆ

ಪವಿತ್ರ ವಾರದ ಆರಂಭದ ಸಂದರ್ಭದಲ್ಲಿ, ಲಂಡನ್‌ನಲ್ಲಿ ನೆಲೆಸಿರುವ ಫಿಲಿಪಿನೋ ಗಾಯನ ಬಳಗವು ಸಂಗೀತದ ಮೂಲಕ ನಂಬಿಕೆ, ಸಂಸ್ಕೃತಿ ಮತ್ತು ಸಮುದಾಯವನ್ನು ಒಂದಾಗಿಸುತ್ತಿದ್ದು, ವಿದೇಶದಲ್ಲಿರುವ ಫಿಲಿಪಿನೋ ಕಥೋಲಿಕ ಆಧ್ಯಾತ್ಮಿಕತೆಯ ಶಕ್ತಿಶಾಲಿ ಸಾಕ್ಷಿಯಾಗಿದೆ.

ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತುರಾ, RCJ

“ನಮ್ಮ ‘ಸಿನಾಗ್ ಹಿಮಿಗ್ ಕೊರೇಲ್ ಲಂಡನ್’ ಸಂಗೀತವನ್ನು ಜನರನ್ನು ಸಂಪರ್ಕಿಸಲು, ಮನಸ್ಸುಗಳನ್ನು ಉತ್ತೇಜಿಸಲು ಮತ್ತು ಸಮುದಾಯದಲ್ಲಿ ಅರ್ಥಪೂರ್ಣ ಬದಲಾವಣೆ ತರಲು ಬಳಸಲು ಬದ್ಧವಾಗಿದೆ,” ಎಂದು ನಿರ್ದೇಶಕ ಜರೋಮ್ ಪಿನ್‌ಲಾಕ್ ತಿಳಿಸಿದ್ದಾರೆ.

ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಫಿಲಿಪಿನೋ ಗಾಯನ ಬಳಗವು, ವಲಸಿಗರು, ಸಂಗೀತ ಮತ್ತು ಧರ್ಮಸೇವೆಯನ್ನು ಒಂದಾಗಿ ಸೇರಿಸಿ, ನಂಬಿಕೆ ಮತ್ತು ಸಂಸ್ಕೃತಿಯ ಗುರುತನ್ನು ಪ್ರತಿಬಿಂಬಿಸುವ ಪವಿತ್ರ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಇಂಗ್ಲೆಂಡ್‌ನ ವಿವಿಧ ಫಿಲಿಪಿನೋ ಸಮುದಾಯಗಳಿಂದ ಬಂದ ಗಾಯಕರನ್ನು ಒಳಗೊಂಡಿರುವ ಸಿನಾಗ್ ಹಿಮಿಗ್ ಕೊರೇಲ್ ಲಂಡನ್, ಸೇವೆ, ಏಕತೆ ಮತ್ತು ಸುವಾರ್ತೆ ಪ್ರಸಾರದ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುವ ಚೈತನ್ಯಭರಿತ ಸಂಗೀತ ಧರ್ಮಸೇವೆಯಾಗಿದೆ.

2021ರಲ್ಲಿ ಸ್ಥಾಪಿತವಾದ ಈ ಬಳಗವು, ಆರಂಭದಲ್ಲಿ ಹ್ಯಾಮರ್ಸ್‌ಮಿತ್‌ನ ಸಂತ ಆಗಸ್ಟಿನ್ ಧರ್ಮಪೀಠದಲ್ಲಿ ನಿಧಿ ಸಂಗ್ರಹ ಕಾರ್ಯಕ್ರಮಕ್ಕಾಗಿ ರೂಪುಗೊಂಡಿತ್ತು; ಆದರೆ ನಂತರ ಸಂಗೀತವಷ್ಟೇ ಅಲ್ಲ, ಸಾಮಾನ್ಯ ಉದ್ದೇಶ ಮತ್ತು ನಂಬಿಕೆಯ ಮೂಲಕ ಒಗ್ಗೂಡಿದ ಸಮುದಾಯವಾಗಿ ಬೆಳೆಯಿತು.

ಕಲಾ ಪ್ರದರ್ಶನವನ್ನು ಮೀರಿದ ಸೇವೆ

ಪ್ರದರ್ಶನಕ್ಕಿಂತ ಹೆಚ್ಚಿನ ಧರ್ಮಸೇವೆಯಾಗಿ ಈ ಗಾಯನ ಬಳಗ ತನ್ನನ್ನು ಅರ್ಪಿಸಿದೆ. “ನಾವು ಕೇವಲ ಸಂಗೀತದ ಮೂಲಕ ಒಂದಾಗಿರುವವರಲ್ಲ; ಒಂದು ಉದ್ದೇಶದ ಮೂಲಕ ಕೂಡ ಒಂದಾಗಿದ್ದೇವೆ… ನಮ್ಮ ಹಾಡು ಪ್ರದರ್ಶನವನ್ನು ಮೀರಿ ಹೋಗುತ್ತದೆ,” ಎಂದು ಪಿನ್‌ಲಾಕ್ ತಿಳಿಸಿದ್ದಾರೆ.

ಸಂಗೀತದ ಮೂಲಕ ಜನರನ್ನು ಸಂಪರ್ಕಿಸುವುದು, ಮನಸ್ಸುಗಳನ್ನು ಉತ್ತೇಜಿಸುವುದು ಮತ್ತು ನಂಬಿಕೆಯನ್ನು ಬಲಪಡಿಸುವುದು ಇದರ ಧ್ಯೇಯವಾಗಿದೆ.

ಈ ಗಾಯನ ಬಳಗವು ಪವಿತ್ರ ಬಲಿಪೂಜೆಗಳಲ್ಲಿ ಪಾಲ್ಗೊಂಡು, ಆರಾಧನೆಯ ಆಧ್ಯಾತ್ಮಿಕ ಅನುಭವವನ್ನು ಗಾಢಗೊಳಿಸುವ ಸಂಗೀತವನ್ನು ನೀಡುತ್ತದೆ; ಜೊತೆಗೆ ಸಂಗೀತ ಕಾರ್ಯಕ್ರಮಗಳು, ಪ್ರವಾಸಗಳು ಮತ್ತು ಸೇವಾ ಚಟುವಟಿಕೆಗಳ ಮೂಲಕ ಸಮಾಜಮುಖಿ ಕಾರ್ಯಗಳಿಗೆ ಸಹಕಾರ ನೀಡುತ್ತದೆ.

ಫಿಲಿಪಿನೋ ನಂಬಿಕೆ ಮತ್ತು ಸಂಸ್ಕೃತಿಯ ಹಂಚಿಕೆ

ತಮ್ಮ ಸಂಗೀತದ ಮೂಲಕ ಈ ಬಳಗವು ಫಿಲಿಪಿನೋ ಆತ್ಮೀಯತೆ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ಹಂಚುತ್ತಿದೆ. “ನೇಯ್ದ ನಂಬಿಕೆ ಮತ್ತು ಸಂಗೀತದ ವಸ್ತ್ರ” (Woven: A Tapestry of Faith and Music) ಎಂಬ ಶೀರ್ಷಿಕೆಯೊಂದಿಗೆ 2026 ಮಾರ್ಚ್ 28ರಂದು ರೋಮ್‌ನ ಸಂತ ಪುದೆಂಜಿಯಾನಾ ಬಸಿಲಿಕಾದಲ್ಲಿ ನಡೆದ ಸಂಗೀತ ಕಾರ್ಯಕ್ರಮವು ಅವರ ಸೇವೆಯನ್ನು ಅಂತಾರಾಷ್ಟ್ರೀಯ ವೇದಿಕೆಗೆ ತಲುಪಿಸಿದೆ.

ರೋಮ್‌ಗೆ ಈ ಭೇಟಿ ವಿಶೇಷ ಉದ್ದೇಶವನ್ನೂ ಹೊಂದಿತ್ತು. “ವಿದೇಶದಲ್ಲಿರುವ ಫಿಲಿಪಿನೋ ವಲಸಿಗರ ಗೌರವಕ್ಕಾಗಿ ‘ಸಾನ್ ಲೊರೆನ್ಜೊ ರೂಯಿಸ್’ ಬಲಿಪೂಜೆಯನ್ನು ಪರಿಚಯಿಸುವುದೇ ನಮ್ಮ ಉದ್ದೇಶ,” ಎಂದು ವ್ಯವಸ್ಥಾಪಕಿ ಚಿ ಡಿ ದಿಯೋಸ್ ತಿಳಿಸಿದ್ದಾರೆ.

ಈ ಬಲಿಪೂಜೆ ಸ್ವದೇಶದಿಂದ ದೂರ ಇರುವ ಫಿಲಿಪಿನೋಗಳ ಆತ್ಮೀಯ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ; ಭಾಷೆ, ಭಕ್ತಿ ಮತ್ತು ಸಂಸ್ಕೃತಿಯ ನೆನಪುಗಳನ್ನು ಒಟ್ಟುಗೂಡಿಸುತ್ತದೆ. “ಎಲ್ಲಿ ಫಿಲಿಪಿನೋ ಜನರು ಇದ್ದಾರೋ ಅಲ್ಲಿ ಈ ಬಲಿಪೂಜೆಯನ್ನು ಕೇಳಬೇಕು… ಇದು ನಮ್ಮ ಮೂಲಗಳೊಂದಿಗೆ ಆಳವಾದ ಸಂಪರ್ಕವನ್ನು ಒದಗಿಸುತ್ತದೆ,” ಎಂದು ಅವರು ಹೇಳಿದ್ದಾರೆ.

ವಲಸಿಗರಿಗೆ ಸೇತುವೆಯಾಗಿ ಸಂಗೀತ

ವಿದೇಶದಲ್ಲಿರುವ ಫಿಲಿಪಿನೋ ಜನರಿಗೆ ಸಂಗೀತವು ತಮ್ಮ ನಾಡಿನೊಂದಿಗೆ ಮತ್ತು ನಂಬಿಕೆಯೊಂದಿಗೆ ಸಂಪರ್ಕವನ್ನು ಉಳಿಸುವ ಪ್ರಮುಖ ಸಾಧನವಾಗಿದೆ. “ದೂರವು ನಮ್ಮ ಮೂಲಗಳ ಮೇಲಿನ ಪ್ರೀತಿಯನ್ನು ಇನ್ನಷ್ಟು ಗಾಢಗೊಳಿಸುತ್ತದೆ… ನಾವು ಇರುವ ಎಲ್ಲೆಡೆ ನಮ್ಮ ಮನೆತನವನ್ನು ಕೂಡ ಕೊಂಡೊಯ್ಯುತ್ತೇವೆ,” ಎಂದು ಬಳಗದ ಸದಸ್ಯರು ತಿಳಿಸಿದ್ದಾರೆ.

“ಕಲುಲುವಾ ನಿ ಕ್ರಿಸ್ತೋ” ಸೇರಿದಂತೆ ಹಲವು ಗಾಯನಗಳು, ವಲಸಿಗರ ಆತ್ಮೀಯ ಬದುಕಿಗೆ ಜೊತೆಯಾಗುತ್ತಿವೆ. ಈ ಮೂಲಕ ಸಂಗೀತವು ಸಂಸ್ಕೃತಿ, ಸಮುದಾಯ ಮತ್ತು ನಂಬಿಕೆಯನ್ನು ಸಂಪರ್ಕಿಸುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಈ ಬಳಗ ತೋರಿಸುತ್ತದೆ.

ನಂಬಿಕೆ ಮತ್ತು ಏಕತೆಯ ಸಂದೇಶ

ಫಿಲಿಪಿನೋ ವಲಸಿಗರಿಗಾಗಿ ಈ ಗಾಯನ ಬಳಗವು ಕೇವಲ ಕಲಾತ್ಮಕ ಅಭಿವ್ಯಕ್ತಿಯಲ್ಲ; ಅದು ಸೇರಿಕೊಂಡಿರುವ ಭಾವನೆ, ನಂಬಿಕೆ ಮತ್ತು ಭರವಸೆಯ ಸಂಕೇತವಾಗಿದೆ.

ವಿದೇಶದಲ್ಲಿರುವ ಫಿಲಿಪಿನೋ ಜನರಿಗೆ,  “ಪ್ರಾರ್ಥನೆ ಮುಂದುವರಿಸಿ, ಹಾಡು ಮುಂದುವರಿಸಿ, ಸೇವೆ ಮುಂದುವರಿಸಿ, ಸಮುದಾಯದೊಂದಿಗೆ ಒಂದಾಗಿ ಇರಿ… ಏಕೆಂದರೆ ವಿದೇಶದಲ್ಲಿರುವ ನಮ್ಮ ಸಮುದಾಯಗಳು ನಮ್ಮ ಮನೆಯ ವಿಸ್ತರಣೆಗಳೇ” ಎಂಬ ಸಂದೇಶವನ್ನು ನೀಡಿದ್ದಾರೆ:

“ನಾವು ಎಲ್ಲಿದ್ದರೂ, ಸಮುದಾಯದೊಂದಿಗೆ ಇದ್ದರೆ… ಅದೇ ನಮ್ಮ ಮನೆ,” ಎಂದು ಅವರು ಹೇಳಿದ್ದಾರೆ. ವಲಸೆ ಮತ್ತು ದೂರದಿಂದ ಗುರುತುಗೊಳ್ಳುವ ಈ ಜಗತ್ತಿನಲ್ಲಿ, ನಂಬಿಕೆ ಗಡಿಗಳನ್ನು ಮೀರಿ ಜನರನ್ನು ಒಂದಾಗಿಸುವ ಶಕ್ತಿಯಾಗಿದೆ ಎಂಬುದನ್ನು ಈ ಗಾಯನ ಬಳಗದ ಸೇವೆ ನೆನಪಿಸುತ್ತದೆ.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

30 ಮಾರ್ಚ್ 2026, 20:32