ಜೆರುಸಲೇಮಿನಲ್ಲಿರುವ ಪವಿತ್ರ ಸಮಾಧಿ ದೇವಾಲಯದ ಒಳಾಂಗಣ ಜೆರುಸಲೇಮಿನಲ್ಲಿರುವ ಪವಿತ್ರ ಸಮಾಧಿ ದೇವಾಲಯದ ಒಳಾಂಗಣ 

ಜೆರುಸಲೇಮ್: ಪವಿತ್ರ ಸಮಾಧಿ ದೇವಾಲಯದಲ್ಲಿ ಪುನರುತ್ಥಾನ ಮಹೋತ್ಸವದ ಆಚರಣೆಗಳಿಗೆ ಅವಕಾಶ

ಜೆರುಸಲೇಮ್‌ನ ಲ್ಯಾಟಿನ್ ಪ್ರಧಾನ ಧರ್ಮಪ್ರಾಂತ್ಯ ಮತ್ತು ಪವಿತ್ರ ಭೂಮಿಯ ಪಾಲಕರು ಪ್ರಕಟಿಸಿದಂತೆ, ಪವಿತ್ರ ಸಮಾಧಿ ದೇವಾಲಯದಲ್ಲಿ ಪುನರುತ್ಥಾನ ಹಬ್ಬದ ಆಚರಣೆಗಳನ್ನು ನಡೆಸಲು ಇಸ್ರಾಯೇಲ್ ಅಧಿಕಾರಿಗಳೊಂದಿಗೆ ಒಪ್ಪಂದಕ್ಕೆ ಬಂದಿದ್ದಾರೆ. ನಡೆಯುತ್ತಿರುವ ಯುದ್ಧದ ಹಿನ್ನೆಲೆ ಕೆಲವು ನಿರ್ಬಂಧಗಳು ಮುಂದುವರಿಯಲಿದ್ದು, ಆರಾಧನೆಗಳನ್ನು ವಿಶ್ವದಾದ್ಯಂತ ಭಕ್ತವಿಶ್ವಾಸಿಗಳಿಗಾಗಿ ನೇರ ಪ್ರಸಾರ ಮಾಡಲಾಗುತ್ತದೆ.

ವ್ಯಾಟಿಕನ್ ವರದಿ

ಸಂಯುಕ್ತ ಪ್ರಕಟಣೆಯಲ್ಲಿ, “ಪವಿತ್ರ ವಾರ ಹಾಗೂ ಪುನರುತ್ಥಾನ ಆಚರಣೆಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಸಂಬಂಧಿತ ಅಧಿಕಾರಿಗಳೊಂದಿಗೆ  ಪರಿಹರಿಸಲಾಗಿದೆ” ಎಂದು ತಿಳಿಸಲಾಗಿದೆ. “ಇಸ್ರಾಯೇಲ್ ಪೊಲೀಸರೊಂದಿಗೆ ಹೊಂದಾಣಿಕೆಯಲ್ಲಿ, ಧರ್ಮಸಭೆಯ ಪ್ರತಿನಿಧಿಗಳಿಗೆ ದೇವಾಲಯ ಪ್ರವೇಶವನ್ನು ಖಚಿತಪಡಿಸಲಾಗಿದೆ. ಇದರಿಂದ ಆರಾಧನೆಗಳು ಮತ್ತು ವಿಧಿವಿಧಾನಗಳನ್ನು ನಡೆಸಲು ಹಾಗೂ ಪುರಾತನ ಪುನರುತ್ಥಾನ ಮಹೋತ್ಸವದ ಪರಂಪರೆಗಳನ್ನು ಉಳಿಸಲು ಸಾಧ್ಯವಾಗಲಿದೆ,” ಎಂದು ಪ್ರಕಟಣೆ ಹೇಳಿದೆ.

ಈ ಒಪ್ಪಂದವು ಭಾನುವಾರ ನಡೆದ ಘಟನೆ ನಂತರ ಬಂದಿದೆ. ಗರಿಗಳ ಭಾನುವಾರದಂದು ಪವಿತ್ರ ವಾರದ ಆರಂಭಿಕ ಬಲಿಪೂಜೆಗಾಗಿ ತೆರಳಿದ್ದ ಪ್ರಧಾನ ಗುರು ಪಿಜ್ಜಬಲ್ಲಾ ಮತ್ತು ಪವಿತ್ರ ಭೂಮಿಯ ಪಾಲಕರಾದ ವಂ. ಗುರು ಫ್ರಾನ್ಸಿಸ್ಕೊ ಐಲ್ಪೊ ಅವರನ್ನು ಇಸ್ರಾಯೇಲ್ ಪೊಲೀಸರು ದೇವಾಲಯದ ಹೊರಗಡೆ ತಡೆದಿದ್ದರು.ಪ್ರಧಾನ ಗುರು ಪಿಜ್ಜಾಬಲ್ಲಾ ಅವರ ಕಚೇರಿ, “ಶತಮಾನಗಳಲ್ಲಿ ಇದೇ ಮೊದಲ ಬಾರಿಗೆ ಗರಿಗಳ ಭಾನುವಾರದಂದು ಲ್ಯಾಟಿನ್ ಪ್ರಧಾನ ಧರ್ಮಾಧ್ಯಕ್ಷರಿಗೆ ಪ್ರವೇಶ ನಿರಾಕರಿಸಲಾಗಿದೆ” ಎಂದು ತಿಳಿಸಿತ್ತು.

ಆಚರಣೆಗಳ ನೇರ ಪ್ರಸಾರ

ಪ್ರಸ್ತುತ ಯುದ್ಧ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸಭೆಗಳ ಮೇಲಿನ ನಿರ್ಬಂಧಗಳು ಮುಂದುವರಿಯುತ್ತಿವೆ ಎಂದು ಪ್ರಕಟಣೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ, ಪವಿತ್ರ ಭೂಮಿ ಹಾಗೂ ವಿಶ್ವದಾದ್ಯಂತದ ಭಕ್ತವಿಶ್ವಾಸಿಗಳು ಆಧ್ಯಾತ್ಮಿಕವಾಗಿ ಭಾಗವಹಿಸಲು, ಆರಾಧನೆಗಳು ಮತ್ತು ಪ್ರಾರ್ಥನೆಗಳನ್ನು ನೇರ ಪ್ರಸಾರ ಮಾಡಲಾಗುತ್ತದೆ. ಧಾರ್ಮಿಕ ನಾಯಕರು ಇಸ್ರಾಯೇಲ್ ರಾಷ್ಟ್ರಪತಿ ಐಸಾಕ್ ಹೆರ್ಝೊಗ್ ಅವರ ತ್ವರಿತ ಹಸ್ತಕ್ಷೇಪಕ್ಕೆ ಕೃತಜ್ಞತೆ ಸಲ್ಲಿಸಿದ್ದು, ತಕ್ಷಣ ಸ್ಪಂದಿಸಿದ ಇತರೆ ರಾಷ್ಟ್ರಗಳ ನಾಯಕರು ಹಾಗೂ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಧಾರ್ಮಿಕ ಸ್ವಾತಂತ್ರ್ಯ – ಸಾರ್ವತ್ರಿಕ ಮೌಲ್ಯ

ಪ್ರಕಟಣೆ, “ಧಾರ್ಮಿಕ ನಂಬಿಕೆ ಮಾನವನ ಉನ್ನತ ಮೌಲ್ಯವಾಗಿದೆ; ಯಹೂದ್ಯರು, ಕ್ರೈಸ್ತರು, ಮುಸ್ಲಿಮರು, ದ್ರೂಜ್ ಸೇರಿದಂತೆ ಎಲ್ಲ ಧರ್ಮಗಳೂ ಇದನ್ನು ಹಂಚಿಕೊಂಡಿವೆ.ಈ ರೀತಿಯ ಸಂಕಷ್ಟದ ಸಂದರ್ಭಗಳಲ್ಲಿ ಆರಾಧನಾ ಸ್ವಾತಂತ್ರ್ಯವನ್ನು ಕಾಪಾಡುವುದು ಮೂಲಭೂತ ಹಾಗೂ ಎಲ್ಲರಿಗೂ ಸೇರಿದ ಜವಾಬ್ದಾರಿಯಾಗಿದೆ” ಎಂದು ಸ್ಪಷ್ಟಪಡಿಸಿದೆ

ಮುಂದುವರಿದ ಸಂವಾದ-ಶಾಂತಿಯ ನಿರೀಕ್ಷೆ

ಎಲ್ಲ ಧರ್ಮಗಳ ಪವಿತ್ರ ಸ್ಥಳಗಳಲ್ಲಿ ಪ್ರಾರ್ಥನೆ ನಡೆಸಲು ಅನುಕೂಲವಾಗುವ ಪರಿಹಾರಗಳು ಮುಂದುವರಿಯಲಿ ಎಂದು ಧಾರ್ಮಿಕ ಅಧಿಕಾರಿಗಳು ಆಶಿಸಿದ್ದಾರೆ. ಭದ್ರತೆ ಮತ್ತು ಧಾರ್ಮಿಕ ಆಚರಣೆಯ ಹಕ್ಕಿನ ನಡುವೆ ಸಮತೋಲನ ಕಾಪಾಡುವುದು ವಿಶ್ವದ ಕೋಟ್ಯಾಂತರ ಭಕ್ತರಿಗೆ ಅತ್ಯಂತ ಮುಖ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಧರ್ಮಸಭೆ ಇಸ್ರಾಯೇಲ್ ಪೊಲೀಸರೊಂದಿಗೆ ಸೇರಿದಂತೆ ಸಂಬಂಧಿತ ಅಧಿಕಾರಿಗಳೊಂದಿಗೆ ಸಂವಾದವನ್ನು ಮುಂದುವರಿಸುತ್ತಿದ್ದು, ಯುದ್ಧ ಅಂತ್ಯವಾಗಲಿ ಎಂಬ ಪ್ರಾರ್ಥನೆಯನ್ನು ಪುನರುಚ್ಚರಿಸಿದೆ. “ಜೆರುಸಲೇಮ್‌ನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರ ಮತ್ತು ಪವಿತ್ರ ಭೂಮಿಯ ಪಾಲಕರು ಸಂವಾದ, ಪರಸ್ಪರ ಗೌರವ ಹಾಗೂ ಸ್ಥಿತಿಗತಿಯ ಸಂರಕ್ಷಣೆಗೆ ತಮ್ಮ ಬದ್ಧತೆಯಲ್ಲಿ ನೆಲೆಯಾಗಿದ್ದಾರೆ” ಎಂದು ಪ್ರಕಟಣೆ ತಿಳಿಸಿದೆ. 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

30 ಮಾರ್ಚ್ 2026, 20:08