ಗರಿಗಳ ಭಾನುವಾರದಂದು ಗೆತ್ಸೆಮನೆ ತೋಪಿನಲ್ಲಿ ವಿಶ್ವ ಶಾಂತಿಗಾಗಿ ಪ್ರಾರ್ಥಿಸಿದ  ಪ್ರಧಾನ ಗುರು ಪಿಜ್ಜಬಲ್ಲ ಗರಿಗಳ ಭಾನುವಾರದಂದು ಗೆತ್ಸೆಮನೆ ತೋಪಿನಲ್ಲಿ ವಿಶ್ವ ಶಾಂತಿಗಾಗಿ ಪ್ರಾರ್ಥಿಸಿದ ಪ್ರಧಾನ ಗುರು ಪಿಜ್ಜಬಲ್ಲ  (ANSA)

ಗರಿಗಳ ಭಾನುವಾರದಂದು ಗೆತ್ಸೆಮನೆ ತೋಪಿನಲ್ಲಿ ವಿಶ್ವ ಶಾಂತಿಗಾಗಿ ಪ್ರಾರ್ಥಿಸಿದ ಪ್ರಧಾನ ಗುರು ಪಿಜ್ಜಬಲ್ಲ

ಗೆತ್ಸೆಮನೆ ತೋಪಿನಲ್ಲಿ ಗರಿಗಳ ಭಾನುವಾರದ ಧ್ಯಾನದಲ್ಲಿ, ಜೆರುಸಲೇಮ್‌ನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಪ್ರಧಾನ ಗುರು ಪಿಯರ್ಬತ್ತಿಸ್ತಾ ಪಿಜ್ಜಬಲ್ಲಾ, ಶಾಂತಿಯೇ ಇಲ್ಲದ ಜೆರುಸಲೇಮನ್ನು ನೋಡಿ ಪ್ರಭು ಯೇಸು ಅಂದು ಗೋಳಾಡಿದಂತೆ, ಇಂದು ಶಾಂತಿಯ ಗುರುತೇ ಕಾಣದ ಪ್ರಪಂಚವನ್ನು ನೋಡಿ ರೋದಿಸುತ್ತಾರೆ.ವಿಶೇಷವಾಗಿ ಸಂಘರ್ಷ, ನೋವುಗಳಿಂದಾಗಿ ಶಾಂತಿಯ ಅವಕಾಶಗಳನ್ನು ಕಳೆದುಕೊಳ್ಳುತ್ತಿರುವ ಪವಿತ್ರ ಭೂಮಿಯನ್ನು ಕಂಡು ಕಣ್ಣೀರಿಡುತ್ತಿದ್ದಾರೆ ಎಂದರು.

ವ್ಯಾಟಿಕನ್ ವರದಿ

ಇಸ್ರಾಯೇಲ್ ಪೊಲೀಸರಿಂದ ಪವಿತ್ರ ಸಮಾಧಿ ದೇವಾಲಯ ಪ್ರವೇಶಕ್ಕೆ ತಡೆಯಾದ ಕಾರಣ, ಗರಿಗಳ ಭಾನುವಾರದ ಪವಿತ್ರ ಬಲಿಯನ್ನು ಅಲ್ಲಿ ಆಚರಿಸಲು ಸಾಧ್ಯವಾಗಲಿಲ್ಲ.  ಇದರಿಂದಾಗಿ ಗರಿಗಳ ಭಾನುವಾರದ ಬಲಿಪೂಜೆಯ ಆಚರಣೆಯನ್ನು ಲ್ಯಾಟಿನ್ ಪ್ರಧಾನ ಗುರುಗಳು ಗೆತ್ಸೆಮನೆ ತೋಪಿನಲ್ಲಿರುವ ಸರ್ವ ದೇಶಗಳ ಬಸಿಲಿಕಾದಲ್ಲಿ ನಡೆಸಿದರು.

ಆಲಿವ್ ಗುಡ್ಡದ ತಟದಲ್ಲಿ, ಪ್ರಭು ಯೇಸು ಪ್ರಾರ್ಥಿಸಿದ ಅದೇ ಸ್ಥಳದಲ್ಲೇ ಪವಿತ್ರ ವಾರವನ್ನು ಸಮಾಧಾನ, ಶಾಂತಿ ಮತ್ತು ಭರವಸೆಯ ಕೋರಿಕೆಯೊಂದಿಗೆ ಆರಂಭಿಸುತ್ತೇವೆ ಎಂದು ಅವರು ಹೇಳಿದರು. ಪ್ರಧಾನ ಗುರು ಪಿಜ್ಜಾಬಲ್ಲಾ ಅವರು ದೇವರ ವಾಕ್ಯದ ಆರಾಧನೆಗೆ ಅಧ್ಯಕ್ಷತೆ ವಹಿಸಿ, ಪವಿತ್ರ ಶಿಲುಬೆಯ ಅವಶೇಷದೊಂದಿಗೆ ಜೆರುಸಲೇಮ್ ನಗರದ ಕಡೆಗೆ ಗಂಭೀರ ಆಶೀರ್ವಾದವನ್ನು ನೀಡಿದರು.

ನಡೆಯುತ್ತಿರುವ ಯುದ್ಧದಿಂದಾಗಿ, ಈ ವರ್ಷದ ಆಚರಣೆಗಳು ಯಾತ್ರಿಕರಿಲ್ಲದೆ ನಡೆಯುತ್ತಿವೆ. ಆದರೂ ವಿಶ್ವದಾದ್ಯಂತ ಭಕ್ತರು ಶಾಂತಿಗಾಗಿ ಪ್ರಾರ್ಥನೆಯಲ್ಲಿ ಒಂದಾಗಿದ್ದಾರೆ. ತಮ್ಮ ಧ್ಯಾನದಲ್ಲಿ, ಪ್ರಭು ಯೇಸು ಜೆರುಸಲೇಮನ್ನು ನೋಡಿ ಅಳುವ ದೃಶ್ಯವನ್ನು ಉಲ್ಲೇಖಿಸಿ, ಇಂದಿನ ಪರಿಸ್ಥಿತಿಯನ್ನು ಅವರು ವಿವರಿಸಿದರು.

“ಇಂದು ಪ್ರಭು ಯೇಸು ಮತ್ತೆ ಜೆರುಸಲೇಮನ್ನು ನೋಡಿ ಅಳುತ್ತಿದ್ದಾರೆ,” ಎಂದು ಅವರು ಹೇಳಿದರು. “ಭರವಸೆ ಮತ್ತು ದುಃಖದ ಸಂಕೇತವಾಗಿರುವ ಈ ನಗರಕ್ಕಾಗಿ, ಕೃಪೆ ಮತ್ತು ನೋವಿನ ನಡುವೆ ನಿಂತಿರುವ ಈ ಪವಿತ್ರ ಭೂಮಿಗಾಗಿ ಅವರು ಅಳುತ್ತಿದ್ದಾರೆ. ಶಾಂತಿಯ ವರವನ್ನು ಇನ್ನೂ ಗುರುತಿಸದಿರುವುದಕ್ಕಾಗಿ ಅವರು ಅಳುತ್ತಿದ್ದಾರೆ. ಅಂತ್ಯವಿಲ್ಲದಂತೆ ಕಾಣುವ ಯುದ್ಧದಲ್ಲಿ ಮೃತರಾದ ನಿರಪರಾಧಿಗಳಿಗಾಗಿ — ವಿಭಜಿತ ಕುಟುಂಬಗಳು, ಭಗ್ನವಾದ ಭರವಸೆಗಳಿಗಾಗಿ ಅವರು ಅಳುತ್ತಿದ್ದಾರೆ. ಆದರೆ ಪ್ರಭು ಯೇಸುವಿನ ಕಣ್ಣೀರು ವ್ಯರ್ಥವಾಗುವುದಿಲ್ಲ. ಅವು ನಮ್ಮ ಕಣ್ಣುಗಳನ್ನು ತೆರೆಯುತ್ತವೆ, ನಮ್ಮನ್ನು ಪ್ರಶ್ನಿಸುತ್ತವೆ ಮತ್ತು ಸತ್ಯವನ್ನು ಅನಾವರಣಗೊಳಿಸುತ್ತವೆ.”

ಗರಿಗಳಿಲ್ಲದೆ ,ಗರಿಗಳ ಭಾನುವಾರದ ಸಾಂಪ್ರದಾಯಿಕ ಮೆರವಣಿಗೆಗಳಿಲ್ಲದೆ ನಡೆದ ಆಚರಣೆಯನ್ನು ಉಲ್ಲೇಖಿಸಿ, ಯುದ್ಧವು ಬಾಹ್ಯ ಆಚರಣೆಗಳನ್ನು ಅಸ್ತವ್ಯಸ್ತಗೊಳಿಸಬಹುದು, ಆದರೆ ನಿಜವಾದ ನಂಬಿಕೆ ಹೊರಗಿನ ಆಚರಣೆಗಳ ಮೇಲೆ ಅವಲಂಬಿತವಾಗಿರುವುದಿಲ್ಲ ಎಂದು ಅವರು ಹೇಳಿದರು.

“ಶಿಲುಬೆಗೆ ಹಾಕಲ್ಪಟ್ಟ ಮತ್ತು ಪುನರುತ್ಥಾನಗೊಂಡ ಪ್ರಭು ನಮ್ಮ ನಡುವೆ ನಡೆಯುವುದನ್ನು ನಿಲ್ಲಿಸುವುದಿಲ್ಲ,” ಎಂದು ಅವರು ಹೇಳಿದರು. “ಮಾರ್ಗ ಮುಚ್ಚಲ್ಪಟ್ಟಿದ್ದರೂ, ಆತನು ತನ್ನನ್ನು ಅನುಸರಿಸುವವರ ಹೃದಯಗಳಲ್ಲಿ ವಾಸಿಸುತ್ತಾನೆ. ಈ ಬಲವಂತದ ಮೌನದಲ್ಲಿ ಮಾಡುವ ಪ್ರಾರ್ಥನೆ, ಆರಾಧನೆ ಇನ್ನಷ್ಟು ನಿಜವಾಗುತ್ತದೆ. ‘ಹೊಸಾನ್ನ’ ಎಂಬ ಕೂಗು ಗರಿಗಳಿಲ್ಲದೇ ಸಹ ಸ್ವರ್ಗವನ್ನು ತಲುಪುತ್ತದೆ; ಮತ್ತು ಬಾಹ್ಯ ಆಚರಣೆಗಳಿಗೆ ಅಡ್ಡಿ ಒಡ್ಡಿದ ಮಾತ್ರಕ್ಕೆ ವಿಶ್ವಾಸ ಕುಂದುವುದಿಲ್ಲ.

ದ್ರೋಹ, ನಿರಾಕರಣೆ ಮತ್ತು ಹಿಂಸೆಯ ಮೂಲಕ ಮಾನವ ವೈಫಲ್ಯವನ್ನು ತೋರಿಸುವ ಶುಭಸಂದೇಶದ ಪಾಡುಗಳನ್ನು ಉಲ್ಲೇಖಿಸುತ್ತಾ ಇವು ಯೇಸುವಿನ ಅಚಲವಾದ ನಿಷ್ಠೆ ಮತ್ತು ನಿಸ್ವಾರ್ಥ ಪ್ರೀತಿಯನ್ನು ಬಹಿರಂಗಪಡಿಸುತ್ತದೆ ಎಂದು ಸಾರಿದರು.

 “ಸಾವು ಜಯ ಸಾಧಿಸಿದಂತೆ ಕಾಣುವ ಕ್ಷಣದಲ್ಲಿ, ಸತ್ಯ ಅನಾವರಣಗೊಳ್ಳುತ್ತದೆ, ಪ್ರೀತಿ ವ್ಯಕ್ತವಾಗುತ್ತದೆ ಮತ್ತು ರಕ್ಷಣೆ ನೆರವೇರುತ್ತದೆ,” ಎಂದು ಅವರು ಹೇಳಿದರು. ಪ್ರಭು ಯೇಸು ತೋರಿಸುವ ಶಾಂತಿ ಭ್ರಮೆಯಲ್ಲ, ಶಿಲುಬೆಯ ಫಲವಾಗಿದೆ, ಇದು ಬಲ ಅಥವಾ ಆಯುಧಗಳಿಂದ ಬರುವ ಶಾಂತಿ ಅಲ್ಲ; ತನ್ನನ್ನೇ ಸಂಪೂರ್ಣವಾಗಿ ಅರ್ಪಿಸುವ ದೇವರಿಂದ ಬರುವ ಶಾಂತಿ." 

ಈ ಪವಿತ್ರ ಭೂಮಿಯಲ್ಲಿ ವಿಶ್ವಾಸದಲ್ಲಿ ಬದುಕುವುದು ಎಂದರೆ ವಿರೋಧಾಭಾಸವನ್ನು ಸ್ವೀಕರಿಸುವುದು — ಪುನರುತ್ಥಾನದ ಸ್ಥಳವೇ ಕಲ್ವಾರಿಯ ಸ್ಥಳವಾಗಿರುವುದು, ದೇವರ ಅಪ್ಪುಗೆಯ ಸ್ಥಳವೇ ದ್ವೇಷದ ಗಾಯಗಳಿಂದ ಕೂಡಿರುವುದು ಎಂದು ಅವರು ಹೇಳಿದರು.

ಕೊನೆಯಲ್ಲಿ, ದೇವರ ಪ್ರೀತಿಗೆ ಸಾಕ್ಷಿಗಳಾಗಲು ಎಲ್ಲರನ್ನು ಅವರು ಆಹ್ವಾನಿಸಿ, “ಸಹೋದರ ಸಹೋದರಿಯರೇ, ಶಾಂತಿಗಾಗಿ ಕಾಯುತ್ತಿರುವ ಈ ಭೂಮಿಯಲ್ಲಿ ನಾವು ಕೈಬಿಡದ ಪ್ರೀತಿಗೆ ಸಾಕ್ಷಿಗಳಾಗಲು ಕರೆಯಲ್ಪಟ್ಟಿದ್ದೇವೆ,ಇಂದು ಸಹ ನಮ್ಮ ನಂಬಿಕೆಯ ಪಯಣವು ಭರವಸೆಯ ಪಯಣವಾಗಿರಲಿ. ಇಂದಿನ ಕಠಿಣ ಸಂದರ್ಭಗಳ ಮಧ್ಯೆಯೂ, ನಮ್ಮ ಜೀವನವು ಪ್ರಭು ಯೇಸುವಿನ ಪ್ರೀತಿ ಮತ್ತು ಬೆಳಕನ್ನು ಹರಡಲಿ” ಎಂದು ದೃಢವಿಶ್ವಾಸದ ಕರೆ ನೀಡಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

29 ಮಾರ್ಚ್ 2026, 11:03