ತೆಹ್ರಾನ್‌ನ ಮಹಾಧರ್ಮಾಧ್ಯಕ್ಷರಾದ  ಪ್ರಧಾನ ಗುರು ಡೊಮಿನಿಕ್ ಜೋಸೆಫ್ ಮ್ಯಾಥ್ಯೂ ಅವರು ಪೂಜ್ಯ ಜಗದ್ಗುರು 14ನೇ ಲಿಯೋ ಅವರೊಂದಿಗೆ ತೆಹ್ರಾನ್‌ನ ಮಹಾಧರ್ಮಾಧ್ಯಕ್ಷರಾದ ಪ್ರಧಾನ ಗುರು ಡೊಮಿನಿಕ್ ಜೋಸೆಫ್ ಮ್ಯಾಥ್ಯೂ ಅವರು ಪೂಜ್ಯ ಜಗದ್ಗುರು 14ನೇ ಲಿಯೋ ಅವರೊಂದಿಗೆ   (@Vatican Media)

ತೆಹ್ರಾನ್ ಮಹಾಧರ್ಮಾಧ್ಯಕ್ಷರ ಪ್ರಾರ್ಥನೆ : ಗಲ್ಫ್ ಯುದ್ಧ ಕೊನೆಗೊಳಿಸಿ, ಪ್ರತೀಕಾರದ ತರ್ಕವನ್ನು ಕೊನೆಗೊಳಿಸಿ.

ಪವಿತ್ರ ವಾರದ ಆರಂಭದಲ್ಲಿ ರೋಮ್‌ನಲ್ಲಿ ನಡೆದ ಶಾಂತಿ ಪ್ರಾರ್ಥನಾ ಜಾಗರಣೆಯಲ್ಲಿ, ತೆಹ್ರಾನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಡೊಮಿನಿಕ್ ಜೋಸೆಫ್ ಮ್ಯಾಥ್ಯೂ, ಯುದ್ಧದಿಂದ ಪೀಡಿತವಾಗಿರುವ ಎಲ್ಲಾ ಪ್ರದೇಶಗಳಿಗಾಗಿ ಶಾಂತಿಯ ಮನವಿ ಮಾಡಿದ್ದು, ವಿಶೇಷವಾಗಿ ಮಧ್ಯಪ್ರಾಚ್ಯ ಮತ್ತು ಪವಿತ್ರ ಭೂಮಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಲೇಖಕರು: ವಾಲೇರಿಯೋ ಪಲೊಂಬಾರೋ

ಅನೇಕ ಸಂಘರ್ಷಗಳಿಂದ ಕಂಗೆಟ್ಟಿರುವ ವಿಶ್ವದಲ್ಲಿ ಶಾಂತಿಯ ತುರ್ತು ಕರೆಗೆ, ಪವಿತ್ರ ವಾರದ ಸೋಮವಾರ ಸಂಜೆ ರೋಮ್‌ನ ಜೆರೂಸಲೇಮ್‌ನ ಸಂತ ಕ್ರೋಚೆ ಬಸಿಲಿಕಾದಲ್ಲಿ ಪ್ರತಿಧ್ವನಿ ಮೂಡಿತು.

ರೋಮ್ ಧರ್ಮಪ್ರಾಂತ್ಯದ ಶ್ರೇಷ್ಠ ಗುರುಗಳಾದ ಪೂಜ್ಯ ಬಾಲ್ದಸ್ಸಾರೆ ರೇನಾ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಪ್ರಾರ್ಥನಾ ಜಾಗರಣೆ, ತೆಹ್ರಾನ್-ಇಸ್ಫಹಾನ್ ಲ್ಯಾಟಿನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರಾದ ಪ್ರಧಾನ ಗುರು ಡೊಮಿನಿಕ್ ಜೋಸೆಫ್ ಮ್ಯಾಥ್ಯೂ ಅವರ ಸಾನ್ನಿಧ್ಯದಿಂದ ವಿಶೇಷಗೊಂಡಿತು.

“ಮತ್ತೆ ಯುದ್ಧ ಬೇಡ — ಅದು ಮರಳುವ ದಾರಿಯೇ ಇಲ್ಲದ ಪ್ರಯಾಣ; ಮತ್ತೆ ಯುದ್ಧ ಬೇಡ — ಅದು ಶೋಕ ಮತ್ತು ಹಿಂಸೆಯ ಅಂತ್ಯವಿಲ್ಲದ ಪ್ರವಾಹ”  ಎಂದು 1991ರ ಫೆಬ್ರವರಿ 2ರಂದು ಜಗದ್ಗುರುಗಳಾದ ದ್ವಿತೀಯ ಜಾನ್ ಪಾಲರು ಮಾಡಿದ ಪ್ರಾರ್ಥನೆಯ ಪದಗಳನ್ನು ಅವರು ಉಲ್ಲೇಖಿಸಿದರು. 

ಮಾರ್ಚ್ 8ರಂದು ಇರಾನ್ ರಾಜಧಾನಿಯನ್ನು ತೊರೆಯಬೇಕಾದ ನಂತರ, ಗಲ್ಫ್ ಪ್ರದೇಶವನ್ನು ಕಾಡುತ್ತಿರುವ ಯುದ್ಧಕ್ಕೆ ಅಂತ್ಯ ಬರಲಿ ಎಂದು ಅವರು ದೇವರ ಮಧ್ಯಸ್ಥಿಕೆಯನ್ನು ಬೇಡಿದರು.

“ಪ್ರತೀಕಾರ ಮತ್ತು ಪ್ರತಿಹಿಂಸೆಯ ದಾರಿಯನ್ನು ನಿಲ್ಲಿಸಿ, ಪ್ರಭು ಯೇಸುವೇ,ನಿಮ್ಮ ಪವಿತ್ರ ಆತ್ಮರ ಮೂಲಕ ನಮಗೆ ದಾರಿತೋರಿಸಿ — ಹೊಸ ಪರಿಹಾರಗಳನ್ನು ಅರಿಯುವ ಜ್ಞಾನವನ್ನು ನೀಡಿ, ಉದಾರ ಹಾಗೂ ಮಾನ್ಯವಾದ ನಡೆಗಳಲ್ಲಿ ಬದುಕುವ ಕೃಪೆಯನ್ನು ನೀಡಿ, ಸಂವಾದಕ್ಕೆ ಹೃದಯಗಳನ್ನು ತೆರೆಯಿರಿ; ಸಹನೆಯಿಂದ ನಿರೀಕ್ಷೆಯೆಡೆಗೆ ನಮ್ಮನ್ನು ನಡೆಸಿ, ಯುದ್ಧದ ಆತುರದ ನಿರ್ಧಾರಗಳನ್ನು ಮೀರಿ ಶಾಂತಿಗೆ ಕರೆದೊಯ್ಯುವ ದಾರಿಯಲ್ಲಿ ನಮ್ಮನ್ನು ಸ್ಥಿರಗೊಳಿಸಿ” ಎಂದು ಅವರು ಪ್ರಾರ್ಥಿಸಿದರು.

ಮರೆಯಲ್ಪಟ್ಟ ಸಂಘರ್ಷಗಳು ಮತ್ತು ಗಾಯಗೊಂಡ ಪವಿತ್ರ ಭೂಮಿ

ಈ ಸಂಜೆ ಪ್ರಾರ್ಥನೆಯನ್ನು “ಶಾಂತಿಯ ಗುರಿ- ಆತ್ಮರಲ್ಲಿ ಪಯಣ” ಎಂಬ ಮಾಸಿಕ ಕಾರ್ಯಕ್ರಮದ ಭಾಗವಾಗಿದೆ. ರೋಮ್ ಧರ್ಮಪ್ರಾಂತ್ಯದ ಧರ್ಮಪ್ರಚಾರ ಕೇಂದ್ರ ಮತ್ತು ಸಾಮಾಜಿಕ ಹಾಗೂ ಕಾರ್ಮಿಕ ಧಾರ್ಮಿಕ ಸೇವಾ ಕಚೇರಿ, ಪ್ಯಾಕ್ಸ್ ಕ್ರಿಸ್ಟಿ, ಅಜಿಯೋನ್ ಕ್ಯಾಥೋಲಿಕಾ ಮತ್ತು ಸಂತ ಎಜಿಡಿಯೊ ಸಮುದಾಯದ ಸಹಯೋಗದಲ್ಲಿ ಇದನ್ನು ಆಯೋಜಿಸಲಾಗಿತ್ತು. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಪೂರ್ವ ಭಾಗ ಮತ್ತು ಸುಡಾನ್ ಸೇರಿದಂತೆ ಜಗತ್ತಿನ ಕೆಲವು ಭಾಗಗಳಲ್ಲಿ ನಡೆಯುತ್ತಿರುವ “ಮರೆಯಲ್ಪಟ್ಟ ಸಂಘರ್ಷಗಳ” ಮೇಲೂ ಗಮನ ಹರಿಸಲಾಯಿತು.

ಪವಿತ್ರ ಭೂಮಿ ಮತ್ತು ವ್ಯಾಪಕ ಮಧ್ಯಪ್ರಾಚ್ಯ ಪ್ರದೇಶದ ಮೇಲೆ ವಿಶೇಷ ಗಮನ ಕೇಂದ್ರೀಕರಿಸಲಾಯಿತು. ಯುದ್ಧಕ್ಕೆ ಸಂಬಂಧಿಸಿದ ಭದ್ರತಾ ನಿರ್ಬಂಧಗಳ ನಡುವೆ, ಜೆರೂಸಲೇಮ್‌ನಲ್ಲಿ ಪವಿತ್ರ ವಾರದ ಆಚರಣೆಗಳನ್ನು ಅನುಮತಿಸಿದ ಇಸ್ರಾಯೇಲ್ ಅಧಿಕಾರಿಗಳ ನಿರ್ಧಾರ ಕುರಿತು ಸ್ವಲ್ಪ ಮಟ್ಟಿನ ಸಮಾಧಾನ ವ್ಯಕ್ತವಾಯಿತು.

ಭಾನುವಾರ, ಜೆರೂಸಲೇಮ್‌ನ ಪವಿತ್ರ ಸಮಾಧಿ ದೇವಾಲಯಕ್ಕೆ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಪ್ರಧಾನ ಗುರು ಪಿಜ್ಜಬಲ್ಲ ಹಾಗೂ ಪವಿತ್ರ ಭೂಮಿಯ ಪಾಲಕರಾದ ವಂ ಗುರು ಫ್ರಾನ್ಸಿಸ್ಕೊ ಐಲ್ಪೊ ಅವರಿಗೆ ಪ್ರವೇಶ ನಿರಾಕರಿಸಿದ ಘಟನೆ ಬಳಿಕ ಈ ಒಪ್ಪಂದ ಸಾಧ್ಯವಾಯಿತು. 

ಅನೇಕ ನಿರಪರಾಧಿಗಳು ಶಿಲುಬೆಗೆ ಹಾಕಲ್ಪಡುತ್ತಿದ್ದಾರೆ

“ಈ ಕ್ಷಣದಲ್ಲಿ ನೋವು ಅನುಭವಿಸುತ್ತಿರುವ ಇರಾನ್ ಜನರಿಗೂ ಮತ್ತು ಎಲ್ಲರಿಗೂ ನಾವು ಹತ್ತಿರದಲ್ಲಿದ್ದೇವೆ,” ಎಂದು ಪ್ರಧಾನ ಗುರು ರೇನಾ ಕಾರ್ಯಕ್ರಮದ ನಂತರ ಮಾಧ್ಯಮಗಳಿಗೆ ತಿಳಿಸಿದರು. ಜೆರೂಸಲೇಮ್‌ನ ಸಂತ ಕ್ರೋಚೆ ಬಸಿಲಿಕವನ್ನು ಉಲ್ಲೇಖಿಸಿ, “ಈ ದೇವಾಲಯದಲ್ಲಿ ಪ್ರಭು ಯೇಸುವಿನ ಶಿಲುಬೆಯ ಮಹತ್ವದ ಅವಶೇಷಗಳಲ್ಲಿ ಒಂದನ್ನು ಸಂರಕ್ಷಿಸಲಾಗಿದೆ,” ಎಂದು ಅವರು ಹೇಳಿದರು.

“ಇತಿಹಾಸವು ಮರುಕಳಿಸುತ್ತಿದೆ; ಅನೇಕ ನಿರಪರಾಧಿಗಳು ಶಿಲುಬೆಗೆ ಹಾಕಲ್ಪಡುತ್ತಿದ್ದಾರೆ,” ಎಂದು ಅವರು ನೆನಪಿಸಿದರು. “ಪೂಜ್ಯ ಜಗದ್ಗುರು ಎಲ್ಲಾ ಕ್ರೈಸ್ತರನ್ನು ಶಾಂತಿಗಾಗಿ ಪ್ರಾರ್ಥಿಸಲು ಕರೆ ನೀಡುತ್ತಿದ್ದಾರೆ. ಇದು ಮಾನವಕುಲದ ಮಟ್ಟಿಗೆ ಅತ್ಯಂತ ಗಂಭೀರ ಕ್ಷಣವಾಗಿದೆ.”

ಹಿಂಸೆಯನ್ನು ತ್ಯಜಿಸುವುದು: ಇತಿಹಾಸದ ಪಾಠ

“ಹಿಂಸೆ ಮತ್ತಷ್ಟು ಹಿಂಸೆಯನ್ನೇ ಹುಟ್ಟಿಸುತ್ತದೆ,” ಎಂದು ಪ್ರಧಾನ ಗುರು ರೇನಾ ತಮ್ಮ ಪ್ರವಚನದಲ್ಲಿ ಹೇಳಿದರು. “ಮಾನವಕುಲವು ಈ ಮೂಲಭೂತ ಪಾಠವನ್ನು ಇನ್ನೂ ಕಲಿಯದೇ ಇರುವುದೇ ಹೇಗೆ?” ಎಂದು ಪ್ರಶ್ನಿಸಿದರು.

ವಿಶ್ವವು “ಶಾಂತಿಯನ್ನು ಕಳೆದುಕೊಂಡಿದೆ” ಮತ್ತು “ಅಸಂಬದ್ಧತೆಯತ್ತ ಸಾಗುತ್ತಿದೆ, ಮರಣದ ವಾಸನೆ ಹೊತ್ತ ಪುನಃಶಸ್ತ್ರೀಕರಣದತ್ತ” ಅದು ಮುನ್ನಡೆಯುತ್ತಿದೆ ಎಂದರು. ಯುದ್ಧದಿಂದ ಪೀಡಿತ ಜನರೊಂದಿಗೆ ತಮ್ಮ ಜನರ ಪ್ರಾರ್ಥನೆಯನ್ನು ಸೇರಿಸಿ ಭಾಗವಹಿಸಿದ ಪ್ರಧಾನ ಗುರು ಮ್ಯಾಥ್ಯೂ ಅವರ ಸಾನ್ನಿಧ್ಯವನ್ನು ಅವರು ಪ್ರಶಂಸಿಸಿದರು.

“ಪ್ರಭು ಯೇಸು ನೋವು ಅನುಭವಿಸುವವರ ಮಧ್ಯದಲ್ಲಿದ್ದಾರೆ,” ಎಂದು ಅವರು ಹೇಳಿದರು. ಕ್ರಿಸ್ತನು ಇಬ್ಬರು ಅಪರಾಧಿಗಳ ಮಧ್ಯೆ ಶಿಲುಬೆಗೆ ಹಾಕಲ್ಪಟ್ಟುದನ್ನು ಉಲ್ಲೇಖಿಸಿ, ““ಶಾಂತಿಯನ್ನು ತರಲು ಬಂದ ಪ್ರಭು ಯೇಸು ಮಧ್ಯದಲ್ಲಿಯೇ ನಿಂತಿದ್ದಾರೆ — ನಮ್ಮ ಇತಿಹಾಸದಲ್ಲಿಯೂ, ನಮ್ಮ ನೋವಿನಲ್ಲಿಯೂ ದೇವರು ಪ್ರವೇಶಿಸುತ್ತಾನೆ ಎಂಬುದನ್ನು ಪ್ರಕಟಿಸಿ, ನಮ್ಮನ್ನು ಶಾಂತಿಯ ದಾರಿಯತ್ತ ಕರೆದೊಯ್ಯುತ್ತಾ ನಮ್ಮೊಂದಿಗೇ ನಿಂತಿದ್ದಾರೆ ಎಂದು ಹೇಳಿದರು.

ಕೊನೆಯಲ್ಲಿ,“ನಮಗೆ ಶಾಂತಿಯನ್ನು ಮರುಸ್ಥಾಪಿಸಲು ಸಹಾಯಮಾಡು,” ಎಂದು ಪ್ರಧಾನ ಗುರು ರೇನಾ ವಿನಂತಿಸಿ, ಶಾಂತಿ ಎಂಬುದು “ರಾಜತಾಂತ್ರಿಕ ತಂತ್ರ ಅಥವಾ ನಿರ್ಧಾರಗಳ ಫಲವಲ್ಲ,” ಅದು ಸ್ವತಃ ಕ್ರಿಸ್ತನೇ ಎಂಬುದನ್ನು ಅವರು ಒತ್ತಿ ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

31 ಮಾರ್ಚ್ 2026, 15:15