ಬ್ಯಾಂಕಾಕಿನ ರೋಮಾಂಚಕ ವ್ಯಾಪಾರ ಕೇಂದ್ರ ಬ್ಯಾಂಕಾಕಿನ ರೋಮಾಂಚಕ ವ್ಯಾಪಾರ ಕೇಂದ್ರ  (ANSA)

ಏಷ್ಯಾದ ಕಥೋಲಿಕ ಉದ್ಯಮಿಗಳಿಗೆ ಕರೆ: ಉದ್ಯಮವು ಸೇವೆ ಮತ್ತು ನ್ಯಾಯದ ಸಮಾಗಮವಾಗಿರಬೇಕು

ಪವಿತ್ರ ವಾರದ ಸಂದರ್ಭದಲ್ಲಿ ಪುನರುತ್ಥಾನ ಮಹೋತ್ಸವದ ಸಿದ್ಧತೆಯಲ್ಲಿ ತೊಡಗಿರುವಾಗ, ಏಷ್ಯಾದ ಕಥೋಲಿಕ ಉದ್ಯಮ ನಾಯಕರು UNIAPAC Asia ಆಯೋಜಿಸಿದ ಆನ್‌ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ವೃತ್ತಿಜೀವನವನ್ನು ಸೇವಾ ಶಿಷ್ಯತ್ವದ ಬೆಳಕಿನಲ್ಲಿ ಮರುಪರಿಶೀಲಿಸಲು ಆಹ್ವಾನಿತರಾದರು.

ಲೇಖಕರು: ಚೈನರೊಂಗ್ ಮೊಂತಿಎಂವಿಚಿಯೆಂಚೈ, LiCAS ವರದಿ

ಗರಿಗಳ ಭಾನುವಾರ (ಮಾರ್ಚ್ 29) ನಡೆದ ತಪಸ್ಸುಕಾಲದ ಧ್ಯಾನಸಂಗಮವನ್ನು ಥಾಯ್ಲ್ಯಾಂಡ್‌ನ Catholic Business and Executive Professionals (CBEP- ಕಥೋಲಿಕ ಉದ್ಯಮ ಮತ್ತು ಕಾರ್ಯನಿರ್ವಾಹಕ ವೃತ್ತಿಪರರ ಸಂಸ್ಥೆ)ಆಯೋಜಿಸಿತು. ಈ ಸಂದರ್ಭವು ಏಷ್ಯಾದ ವಿವಿಧ ದೇಶಗಳ ಉದ್ಯಮಿಗಳು ಮತ್ತು ಕಾರ್ಯನಿರ್ವಾಹಕರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಪ್ರಾದೇಶಿಕ ಮಟ್ಟದಲ್ಲಿ ಕ್ರೈಸ್ತ ನಾಯಕತ್ವವನ್ನು ಬಲಪಡಿಸುವ ಪ್ರಯತ್ನವಾಗಿ ರೂಪುಗೊಂಡಿತು.

ಇತ್ತೀಚೆಗೆ ಥಾಯ್ಲ್ಯಾಂಡ್, ಸಿಂಗಪೂರ್, ಇಂಡೋನೇಶಿಯಾ ಮತ್ತು ವಿಯೆಟ್ನಾಂಗಳಲ್ಲಿ ನಡೆದ ಸಭೆಗಳ ಸರಣಿಯ ನಂತರ, UNIAPAC Asia ಒಳಗಿನ ಸಹಭಾಗಿತ್ವವನ್ನು ಗಾಢಗೊಳಿಸುವ ದಿಕ್ಕಿನಲ್ಲಿ ಈ ಸಭೆ ಒಂದು ಮಹತ್ವದ ಹಂತವಾಗಿ ಪರಿಣಮಿಸಿತು. UNIAPAC ಸಂಸ್ಥೆ, ಕಥೋಲಿಕ ಉದ್ಯಮಿ ನಾಯಕರಿಗೆ ಕ್ರೈಸ್ತ ಸಾಮಾಜಿಕ ಚಿಂತನೆಗಳನ್ನು ಆರ್ಥಿಕ ಜೀವನದೊಳಗೆ ಜಾಗೃತವಾಗಿ ಅಳವಡಿಸಲು ನೆರವಾಗುವ ಅಂತರರಾಷ್ಟ್ರೀಯ ವೇದಿಕೆಯಾಗಿದೆ.

ಪವಿತ್ರ ವಾರದ ಆರಂಭದಲ್ಲಿ ನಡೆದ ಈ ಧ್ಯಾನಸಂಗಮವು, ಗರಿಗಳ ಭಾನುವಾರವನ್ನು ಕೇವಲ ಜಯದ ಕ್ಷಣವಷ್ಟೇ ಅಲ್ಲದೆ, ಕ್ರಿಸ್ತರ ಪಾಡುಗಳ ಮುನ್ನುಡಿಯಾಗಿ ಅರಿತುಕೊಳ್ಳುವ ಆಂತರಿಕ ಮನನಕ್ಕೆ ಆಹ್ವಾನಿಸಿತು. ಆಯೋಜಕರು  ನಾಯಕರಿಗೆ ತಮ್ಮ ನಂಬಿಕೆಯ ಆಳವನ್ನು ಪರಿಶೀಲಿಸಿ, ಪಾಸ್ಕಾ ರಹಸ್ಯದೊಂದಿಗೆ ಇನ್ನಷ್ಟು ಅರ್ಥಪೂರ್ಣವಾಗಿ ಒಂದಾಗಲು ಸಿದ್ಧರಾಗುವಂತೆ ಪ್ರೇರೇಪಿಸಿದರು.

ಉದ್ಯಮ — ಒಂದು ಕ್ರೈಸ್ತ ಕರೆಯ ರೂಪ

ಮುಖ್ಯ ಭಾಷಣದಲ್ಲಿ, ಫೆಡರೇಷನ್ ಆಫ್ ಏಷಿಯನ್ ಬಿಷಪ್ಸ್’ ಕಾನ್ಫರೆನ್ಸಸ್‌ನ ಸಹ ಕಾರ್ಯದರ್ಶಿಯಾದ ವಂ ಗುರು ವಿಲಿಯಂ ಲಾರೂಸ್,  ಉದ್ಯಮವನ್ನು ಕೇವಲ ಉದ್ಯೋಗದ ಆಯ್ಕೆಯಾಗಿ ನೋಡದೆ, ಶಿಷ್ಯತ್ವದಲ್ಲಿ ನೆಲೆಗೊಂಡಿರುವ ಕರೆಯಾಗಿ ಅರ್ಥೈಸಬೇಕು ಎಂದು ಸ್ಪಷ್ಟಪಡಿಸಿದರು.

(Lumen Gentium) ಜನಾಂಗಗಳ ಬೆಳಕಿನಲ್ಲಿ, ಆರ್ಥಿಕ ಕ್ಷೇತ್ರದಲ್ಲಿರುವವರೂ ಸಹ ಸಭೆಯನ್ನು ಕಟ್ಟುವ ದೈವಿಕ ಕಾರ್ಯದಲ್ಲಿ ಪಾಲುದಾರರಾಗಿದ್ದಾರೆ ಎಂದು ಅವರು ನೆನಪಿಸಿದರು.

“ಶಿಷ್ಯನು ಎಂದರೆ ಕ್ರಿಸ್ತನನ್ನು ಅನುಸರಿಸುವವನು ಮಾತ್ರವಲ್ಲ; ತನ್ನ ಜೀವನ ಮತ್ತು ಕಾರ್ಯವನ್ನು ಕ್ರಿಸ್ತನ ಸನ್ನಿಧಿಯಲ್ಲಿ ರೂಪಾಂತರಗೊಳ್ಳಲು ಒಪ್ಪಿಸುವವನು,” ಎಂಬ ಅವರ ಮಾತುಗಳು ಸಭೆಗೆ ಗಂಭೀರ ಚಿಂತನೆಗೆ ದಾರಿ ಮಾಡಿಕೊಟ್ಟವು.

ವಂ ಗುರು ಲಾರೂಸ್ ಶಿಷ್ಯತ್ವದ ಆಂತರಿಕ ಲಕ್ಷಣಗಳನ್ನು ವಿಶ್ಲೇಷಿಸಿದರು: ದೈವವಾಕ್ಯಕ್ಕೆ ನಿಷ್ಠೆ, ಪ್ರೀತಿಯ ಕಾರ್ಯರೂಪ, ಫಲವತ್ತಾದ ಜೀವನ ಮತ್ತು ತ್ಯಾಗವನ್ನು ಸ್ವೀಕರಿಸುವ ಸಿದ್ಧತೆ. ವೃತ್ತಿಜೀವನದ ಒತ್ತಡಗಳ ನಡುವೆಯೂ ಈ ಶಿಷ್ಯತ್ವವು ಸ್ಥೈರ್ಯವನ್ನು ಕೇಳುತ್ತದೆ ಎಂದು ಅವರು ಹೇಳಿದರು.

ಉದ್ಯಮ ಲೋಕದಲ್ಲಿ ನಂಬಿಕೆಯ ಪರೀಕ್ಷೆ

ಕ್ರಿಸ್ತರ ಪಾಡುಗಳ ಅನುಭವವನ್ನು ಆಧುನಿಕ ಉದ್ಯಮ ಜಗತ್ತಿನೊಂದಿಗೆ ಹೋಲಿಸಿ, ನೈತಿಕ ಸಂಘರ್ಷಗಳು, ಸ್ಪರ್ಧಾತ್ಮಕ ಒತ್ತಡಗಳು ಮತ್ತು ಲಾಭದ ಆಕಾಂಕ್ಷೆಗಳು ಕ್ರೈಸ್ತ ಮೌಲ್ಯಗಳನ್ನು ನಿರಂತರವಾಗಿ ಪರೀಕ್ಷಿಸುತ್ತವೆ ಎಂದು ಅವರು ಸೂಚಿಸಿದರು.

“ಪವಿತ್ರ ವಾರವು ಭೂತಕಾಲದ ಘಟನೆಯಷ್ಟೇ ಅಲ್ಲ; ಅದು ಇಂದು ನಮ್ಮ ನಿರ್ಧಾರಗಳಲ್ಲಿ,  ಸಭೆಗಳಲ್ಲಿ ಮತ್ತು ಉದ್ಯಮ ಸಂಬಂಧಗಳಲ್ಲಿ ನಡೆಯುತ್ತಿದೆ,” ಎಂದು ಅವರು ಹೇಳಿದರು.

ವ್ಯವಹಾರವನ್ನು ಕೇವಲ ಲಾಭಕೇಂದ್ರಿತ ವ್ಯವಸ್ಥೆಯಾಗಿ ನೋಡದೆ, ಮಾನವ ವ್ಯಕ್ತಿತ್ವವನ್ನು ಗೌರವಿಸುವ ಸಮುದಾಯವಾಗಿ ರೂಪಿಸಬೇಕೆಂದು ಅವರು ಕರೆ ನೀಡಿದರು. ಲಾಭವು ಸಾಮಾನ್ಯ ಹಿತಕ್ಕಾಗಿರಬೇಕು; ಅದು ಮಾನವ ಗೌರವವನ್ನು ಹೆಚ್ಚಿಸಬೇಕು ಎಂದು ಅವರು ಒತ್ತಿಹೇಳಿದರು.

ಧರ್ಮಸಭೆಯ ಬೋಧನೆಯ ಪ್ರಕಾರ, ಆರ್ಥಿಕ ಜೀವನವು ಭೌತಿಕ ಮತ್ತು ಆತ್ಮೀಯ ಆಯಾಮಗಳನ್ನು — ವಿಶೇಷವಾಗಿ ನ್ಯಾಯ, ಕಾರ್ಮಿಕರ ಹಕ್ಕುಗಳು ಮತ್ತು ಬಡವರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಸಮನ್ವಯಗೊಳಿಸಬೇಕು.

ಉದ್ಯಮಿಗಳಿಗೆ ಧಾರ್ಮಿಕ ಸೇವಾ ಕರೆಯ ಆಹ್ವಾನ

ಧ್ಯಾನಸಂಗಮದಲ್ಲಿ UNIAPAC Asia ಯ ಆಧ್ಯಾತ್ಮಿಕ ಮಾರ್ಗದರ್ಶಕರಾದ ವಂ ಗುರು ವಿಲ್ ಕಾಂಕ್ವರ್ ಅವರ ಪ್ರವಚನವು ಶಿಷ್ಯತ್ವದ ಮೂಲ ಕರೆಯನ್ನು ಮತ್ತೊಮ್ಮೆ ನೆನಪಿಸಿತು. “ನಿಮ್ಮ ಮಾರುಕಟ್ಟೆಗಳು, ಕಾರ್ಖಾನೆಗಳು ಮತ್ತು ಉದ್ಯಮಗಳು ಗಲಿಲಾಯದಿಂದ ದೂರದಲ್ಲಿಲ್ಲ; ಅದೇ ಪ್ರಭು ನಿಮ್ಮ ದೈನಂದಿನ ಕಾರ್ಯಗಳಲ್ಲಿ ನಡೆದುಕೊಳ್ಳುತ್ತಾನೆ,” ಎಂಬ ಅವರ ಮಾತುಗಳು ವ್ಯವಹಾರ ಜೀವನಕ್ಕೆ ಆಧ್ಯಾತ್ಮಿಕ ಅರ್ಥ ನೀಡಿದವು.

ಪೇತ್ರ, ಆಂದ್ರೇಯ, ಯಾಕೋಬ, ಯೊವಾನ್ನ, ಮತ್ತಾಯ, ಪೌಲ ಮತ್ತು ಲಿಡಿಯ ಮೊದಲಾದ ಬೈಬಲ್ ವ್ಯಕ್ತಿಗಳ ಜೀವನವನ್ನು ಉಲ್ಲೇಖಿಸಿ, ಸಾಮಾನ್ಯ ವೃತ್ತಿಗಳು ಸೇವೆಯ ಸಾಧನಗಳಾಗಿ ಹೇಗೆ ಪರಿವರ್ತಿತರಾಗಬಹುದು ಎಂಬುದನ್ನು ಅವರು ವಿವರಿಸಿದರು.

“ಪ್ರಭು ನಿಮ್ಮ ಸಾಮರ್ಥ್ಯವನ್ನು ತ್ಯಜಿಸಲು ಕೇಳುವುದಿಲ್ಲ; ಅದನ್ನು ತನ್ನ ಕೃಪೆಯಲ್ಲಿ ಪರಿವರ್ತಿಸಲು ಅವಕಾಶ ನೀಡಲು ಕೇಳುತ್ತಾನೆ. ವ್ಯವಹಾರದ ಅನಿಶ್ಚಿತತೆಗಳನ್ನು ಅವರು “ಆಳವಾದ ನೀರು” ಎಂದು ವರ್ಣಿಸಿ, ಅಲ್ಲಿ ನಾಯಕರು ನಂಬಿಕೆಯಿಂದ ಹೆಜ್ಜೆ ಇಟ್ಟು, ಧೈರ್ಯ ಮತ್ತು ಸತ್ಯನಿಷ್ಠೆಯಿಂದ ಮುಂದುವರಿಯಬೇಕು ಎಂದು ಹೇಳಿದರು.

ನೈತಿಕತೆ, ನ್ಯಾಯ ಮತ್ತು ಸೇವೆಯ ಮಾರ್ಗ

ಈ ಸಭೆಯ ಎರಡೂ ಭಾಷಣಕಾರರು, ಕಥೋಲಿಕ ಸಾಮಾಜಿಕ ಬೋಧನೆಗಳು ನೈತಿಕ ಉದ್ಯಮಶೀಲತೆಗೆ ಸ್ಪಷ್ಟವಾದ ದಿಕ್ಕನ್ನು ನೀಡುತ್ತವೆ ಎಂದು ಒತ್ತಿಹೇಳಿದರು.

ವ್ಯವಹಾರ ನಾಯಕರು ಸಮಾಜಕ್ಕೆ ಉಪಯುಕ್ತವಾದ ವಸ್ತುಗಳು ಮತ್ತು ಸೇವೆಗಳನ್ನು ರೂಪಿಸಿ, ಮಾನವ ಗೌರವವನ್ನು ಕಾಪಾಡುವ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಸಂಪತ್ತಿನ ನ್ಯಾಯಯುತ ಹಂಚಿಕೆಯನ್ನು ಖಚಿತಪಡಿಸಬೇಕು ಎಂದು ಅವರು ತಿಳಿಸಿದರು.

ಲಾಭದ ಮೇಲಿನ ಅತಿಯಾದ ಆಸಕ್ತಿಯ ವಿರುದ್ಧ ಅವರು ಎಚ್ಚರಿಕೆ ನೀಡಿದರು; ಧನಾಸಕ್ತಿ ನೈತಿಕ ಸಮತೋಲನವನ್ನು ಕುಂದಿಸಬಹುದು ಎಂದು ಪವಿತ್ರ ಗ್ರಂಥದ ಸಂದೇಶವನ್ನು ಅವರು ನೆನಪಿಸಿದರು. ಸಂಪತ್ತನ್ನು ಸೇವೆಯ ಸಾಧನವಾಗಿ ನೋಡಬೇಕು ಎಂದು ಅವರು ಹೇಳಿದರು.

ಭಾಗವಹಿಸಿದವರನ್ನು ತಮ್ಮ ಜೀವನ ಮತ್ತು ವ್ಯವಹಾರದಲ್ಲಿ ಪರಿವರ್ತನೆ ಅಗತ್ಯವಿರುವ ಕ್ಷೇತ್ರಗಳನ್ನು ಪರಿಶೀಲಿಸಿ, ಸುವಾರ್ತೆಯ ಮೌಲ್ಯಗಳಿಗೆ ಹೊಂದುವ ನಿರ್ಧಾರಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸಲಾಯಿತು. ಈ ಧ್ಯಾನಸಂಗಮವು ಕಥೋಲಿಕ ಉದ್ಯಮಿಗಳು ತಮ್ಮ ನಂಬಿಕೆಯನ್ನು ನೈತಿಕ ನಾಯಕತ್ವ, ಉದಾರತೆ ಮತ್ತು ಸಮಾಜ ಸೇವೆಯ ಮೂಲಕ ಸ್ಪಷ್ಟವಾಗಿ ಜೀವಿಸುವಂತೆ ಕರೆ ನೀಡಿ ಸಮಾಪ್ತಿಯಾಯಿತು.

“ನಿಮ್ಮ ಉದ್ಯಮಗಳು ದೇವರ ರಾಜ್ಯ ನಿರ್ಮಾಣದಲ್ಲಿ ಪಾಲ್ಗೊಳ್ಳಬಹುದು,” ಎಂದು ವಂ ಗುರು ಲಾರೂಸ್ ಹೇಳಿದರು. “ಅವು ಲಾಭದಾಯಕವಾಗಿರಬಹುದು; ಆದರೆ ಅದಕ್ಕಿಂತ ಮುಖ್ಯವಾಗಿ ನ್ಯಾಯಯುತ ಮತ್ತು ಜೀವಪೂರ್ಣವಾಗಿರಬೇಕು.”

ಪವಿತ್ರ ವಾರದ ಆರಂಭದಲ್ಲಿ, ಶಿಷ್ಯತ್ವವು ವೃತ್ತಿಜೀವನದಿಂದ ಬೇರ್ಪಟ್ಟದ್ದಲ್ಲ; ಅದು ಪ್ರತಿದಿನದ ನಿರ್ಧಾರಗಳಲ್ಲಿ ಕ್ರಿಸ್ತನ ಪ್ರೀತಿ, ತ್ಯಾಗ ಮತ್ತು ಸೇವೆಯ ಮೂಲಕ ಪ್ರತಿಬಿಂಬಿಸುತ್ತದೆ ಎಂಬುದನ್ನು ಭಾಗವಹಿಸಿದವರಿಗೆ ನೆನಪಿಸಲಾಯಿತು.

ಈ ಲೇಖನವು ಮೂಲತಃ licas.news ನಲ್ಲಿ ಪ್ರಕಟವಾಗಿದೆ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಮೂರನೇ ವ್ಯಕ್ತಿಗಳಿಂದ ಅನಧಿಕೃತ ಮರುಪ್ರಕಟಣೆ ಅನುಮತಿಸಲಾಗುವುದಿಲ್ಲ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

01 ಏಪ್ರಿಲ್ 2026, 21:54