ಫಿಲಿಪೈನ್ಸ್: ಶುಭ ಶುಕ್ರವಾರದಂದು ಪರಿವರ್ತನೆಗೆ ಕರೆ ನೀಡಿದ ಮಹಾಧರ್ಮಾಧ್ಯಕ್ಷರಾದ ವಿಲ್ಲೆಗಾಸ್
ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತುರಾ, RCJ
ಶುಭ ಶುಕ್ರವಾರದಂದು, “ಏನು ನಡೆಯಿತು? ದೇವರನ್ನು ಕೊಂದರು. ಕೊಲ್ಲುವ ಮೊದಲು ಅವಮಾನಿಸಿದರು. ಅವಮಾನಿಸುವ ಮೊದಲು ಅಪಹಾಸ್ಯಮಾಡಿದರು; ಅವರನ್ನು ನಿರ್ವಸ್ತ್ರಗೊಳಿಸಿದರು,” ಎಂದು ಮಹಾಧರ್ಮಾಧ್ಯಕ್ಷ ಸೋಕ್ರಟೀಸ್ ವಿಲ್ಲೆಗಾಸ್ ಅವರು ಕ್ರಿಸ್ತರ ಪಾಡುಗಳನ್ನುಕುರಿತು ತಮ್ಮ ಧ್ಯಾನದಲ್ಲಿ ಹೇಳಿದ್ದಾರೆ. ಈ ಮೂಲಕ, ತಮ್ಮ ಜೀವನವನ್ನು ಪರಿಶೀಲಿಸಿ ದೇವರ ಕಡೆಗೆ ಮರಳುವಂತೆ ಅವರು ವಿಶ್ವಾಸಿಗಳಿಗೆ ಕರೆ ನೀಡಿದರು.
ತಮ್ಮ ಶುಭ ಶುಕ್ರವಾರದ ಸಂದೇಶದಲ್ಲಿ, ಲಿಂಗಾಯೆನ್-ಡಗುಪಾನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರು ಸೃಷ್ಟಿಯ ಆರಂಭದ ಕತ್ತಲೆಯಿಂದ ಬೆಳಕು ಉದಯವಾದ ಕ್ಷಣವನ್ನು ಬೈಬಲ್ ಚಿತ್ರಣವನ್ನು ನೆನಪಿಸಿದರು. “ಸೂರ್ಯ, ಚಂದ್ರ ಮತ್ತು ನಕ್ಷತ್ರಗಳನ್ನು ಸೃಷ್ಟಿಸುವ ಮೊದಲು, ಸಂಪೂರ್ಣ ಕತ್ತಲೆ ಮಾತ್ರ ಇತ್ತು. ಯಾವುದೇ ಬೆಳಕು ಇರಲಿಲ್ಲ. ಆಗ ಪ್ರಭು ಆಜ್ಞಾಪಿಸಿದರು: ‘ಬೆಳಕು ಉಂಟಾಗಲಿ,’ ಮತ್ತು ಬೆಳಕು ಉಂಟಾಯಿತು,” ಎಂದು ಅವರು ಹೇಳಿದರು. ಆದರೆ, ಇತಿಹಾಸದಲ್ಲಿ ಮತ್ತೊಮ್ಮೆ ಭೂಮಿಯನ್ನು ಕತ್ತಲೆ ಆವರಿಸಿದ ಕ್ಷಣವಿದೆ — ಅದು ಶುಭ ಶುಕ್ರವಾರದ ದಿನವೆಂದು ಅವರು ಸೂಚಿಸಿದರು.
“ಆ ದಿನ ಕತ್ತಲೆ ಆವರಿಸಿತು. ನಾವು ಇಂದು ಕತ್ತಲೆಯಲ್ಲೇ ಬದುಕುತ್ತಿದ್ದೇವೋ, ಅಥವಾ ಬೆಳಕಿನಲ್ಲಿ ಬದುಕುತ್ತಿದ್ದೇವೋ?” ಎಂದು ಅವರು ಪ್ರಶ್ನಿಸಿದರು. “ಎರಡು ಸಾವಿರ ವರ್ಷಗಳ ಹಿಂದೆ ದೇವರ ವಿರುದ್ಧ ನಡೆದ ಹಾಸ್ಯ, ಅವಮಾನ ಮತ್ತು ಹತ್ಯೆಯ ನಂತರ, ನಾವು ‘ಇವನು ದೇವರ ಪುತ್ರ’ ಎಂದು ನಿಜವಾಗಿ ಘೋಷಿಸುವವರೆಗೆ ಕತ್ತಲೆ ಉಳಿಯುತ್ತದೆ,” ಎಂದು ಅವರು ಹೇಳಿದರು.
“ನಾವು ಇನ್ನೂ ಶುಭ ಶುಕ್ರವಾರದ ಕತ್ತಲೆಯಲ್ಲೇ ಬದುಕುತ್ತಿದ್ದೇವೆ,” ಎಂದು ಅವರು ಹೇಳಿ, ಇಂದಿನ ಜಗತ್ತಿನಲ್ಲಿಯೂ ದೇವರನ್ನು ಅಪಹಾಸ್ಯ ಮಾಡಲಾಗುತ್ತಿದೆ, ಅವಮಾನಿಸಲಾಗುತ್ತಿದೆ ಮತ್ತು ತಿರಸ್ಕರಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ನಂಬಿಕೆಯ ವಿರುದ್ಧದ ಅವಮಾನ ಮತ್ತು ನಿರ್ಲಕ್ಷ್ಯವು ಸಾಮಾನ್ಯವಾಗುತ್ತಿರುವುದರ ಬಗ್ಗೆ ಅವರು ಗಂಭೀರವಾಗಿ ಚಿಂತಿಸಿದರು.
“ನಾವು ದೇವರನ್ನು ಅಪಹಾಸ್ಯ ಮಾಡುತ್ತಿರುವುದನ್ನು ಕೇಳಿದ್ದೇವೆ… ಮತ್ತು ಜನರು ಅದಕ್ಕೆ ಚಪ್ಪಾಳೆ ಹೊಡೆಯುತ್ತಿದ್ದಾರೆ,” ಎಂದು ಅವರು ಹೇಳಿದರು. ಶಾಂತಿ ಮತ್ತು ಪ್ರೀತಿಯ ಶುಭಸಂದೇಶವನ್ನು ಸಾರುವ ಧರ್ಮಸಭೆ ಮತ್ತು ಅದರ ನಾಯಕರು ಕೂಡ ಅಪಹಾಸ್ಯದ ಗುರಿಯಾಗುತ್ತಿದ್ದಾರೆ ಎಂದು ಅವರು ಸೇರಿಸಿದರು. ಅವರ ದೃಷ್ಟಿಯಲ್ಲಿ, ಇದು ಸಮಾಜದಲ್ಲಿ ಆಳವಾದ ಆಧ್ಯಾತ್ಮಿಕ ಕತ್ತಲೆ ಇನ್ನೂ ಮುಂದುವರಿದಿರುವುದನ್ನು ತೋರಿಸುತ್ತದೆ.
ಪಶ್ಚಾತ್ತಾಪಕ್ಕೆ ಕರೆ
ಈ ಹಿನ್ನೆಲೆಯಲ್ಲೇ, ಅವರು ವಿಶ್ವಾಸಿಗಳನ್ನು ವಿನಯ ಮತ್ತು ನಿಷ್ಠಾವಂತ ಪಶ್ಚಾತ್ತಾಪಕ್ಕೆ ಆಹ್ವಾನಿಸಿದರು. “ನಾವು ಮಾಡಬೇಕಾದದ್ದು ಒಂದೇ — ತಲೆಬಾಗಬೇಕು ಮತ್ತು ಕ್ರಿಸ್ತರೇ ಪ್ರಭು ಎಂದು ಒಪ್ಪಿಕೊಳ್ಳಬೇಕು,” ಎಂದು ಅವರು ಹೇಳಿದರು. ಕೃತ್ಯಗಳ ಮೂಲಕವಾಗಲಿ, ನಿರ್ಲಕ್ಷ್ಯದಿಂದಾಗಲಿ ಅಥವಾ ಮೌನದಿಂದಾಗಲಿ, ಪಾಪದಲ್ಲಿ ನಾವು ನಮ್ಮದೇ ಪಾತ್ರವಿದೆ ಎಂಬುದನ್ನು ಅರಿತುಕೊಳ್ಳುವಂತೆ ಅವರು ಪ್ರೇರೇಪಿಸಿದರು.
“ನಾವು ಪ್ರಭುವನ್ನು ಅಪಹಾಸ್ಯಮಾಡಿದ್ದೇವೆ ಎಂದು ಒಪ್ಪಿಕೊಳ್ಳಿ; ಆ ಅಪಹಾಸ್ಯದಲ್ಲಿ ನಾವು ಪಾಲುಗಾರರಾಗಿದ್ದೇವೆ ಎಂದು ಒಪ್ಪಿಕೊಳ್ಳಿ. ನಾವು ಪ್ರಭುವನ್ನು ಅವಮಾನಿಸಿದ್ದೇವೆ, ಮತ್ತು ಅವಮಾನವಾಗುವಾಗ ನಾವು ನಕ್ಕಿದ್ದೇವೆ ಎಂಬುದನ್ನು ಒಪ್ಪಿಕೊಳ್ಳಿ,” ಎಂದು ಅವರು ಹೇಳಿದರು. ಈ ವಿನಯಪೂರ್ಣ ಸ್ವೀಕಾರವೇ ದೇವರ ಕರುಣೆ ಮತ್ತು ಪುನರುಜ್ಜೀವನಕ್ಕೆ ದಾರಿಯಾಗಿದೆ ಎಂದು ಅವರು ವಿವರಿಸಿದರು.
ಕತ್ತಲೆಯಿಂದ ಬೆಳಕಿನತ್ತ
ನಿಜವಾದ ಪರಿವರ್ತನೆ ಕ್ರಿಸ್ತನಲ್ಲಿ ಹೊಸ ಜೀವನದತ್ತ ಕರೆದೊಯ್ಯುತ್ತದೆ ಎಂದು ಮಹಾಧರ್ಮಾಧ್ಯಕ್ಷರು ಒತ್ತಿಹೇಳಿದರು. “ಪ್ರಭು ನಿಮ್ಮನ್ನು ಮತ್ತೆ ಅಪ್ಪಿಕೊಳ್ಳುವನು. ನಿಮ್ಮ ಜೀವನದಲ್ಲಿ ಬೆಳಕನ್ನು ಮರುತರುತ್ತಾನೆ; ಆಗ ಕತ್ತಲೆ ದೂರವಾಗುತ್ತದೆ, ಏಕೆಂದರೆ ಪ್ರಭು ನಿಮ್ಮೊಳಗೆ ಜೀವಂತನಾಗುತ್ತಾನೆ,” ಎಂದು ಅವರು ಹೇಳಿದರು.
ಆದರೆ, ಪರಿವರ್ತನೆಗೆ ಸ್ಪಷ್ಟ ಬದಲಾವಣೆ ಅಗತ್ಯವೆಂದು ಅವರು ಎಚ್ಚರಿಸಿದರು. “ನಿಂದನೆಗಳು ನಿಲ್ಲಬೇಕು. ಸುಳ್ಳು ನಿಲ್ಲಬೇಕು. ಅಶ್ಲೀಲತೆ ನಿಲ್ಲಬೇಕು. ಹತ್ಯೆಗಳು ನಿಲ್ಲಬೇಕು. ಹತ್ಯೆಗೆ ಬೆಂಬಲ, ಅಶ್ಲೀಲತೆಗೆ ಬೆಂಬಲ, ಸುಳ್ಳಿಗೆ ಬೆಂಬಲ — ಇವೆಲ್ಲವೂ ಅಂತ್ಯಗೊಳ್ಳಬೇಕು,” ಎಂದು ಅವರು ಸ್ಪಷ್ಟವಾಗಿ ಹೇಳಿದರು.
ಪುನರುತ್ಥಾನದ ನವ ಭರವಸೆ
ತಮ್ಮ ಸಂದೇಶದ ಅಂತ್ಯದಲ್ಲಿ, ಮಹಾಧರ್ಮಾಧ್ಯಕ್ಷ ವಿಲ್ಲೆಗಾಸ್ ಅವರು ಶುಭ ಶುಕ್ರವಾರವು ಅಂತಿಮವಾಗಿ ಪುನರುತ್ಥಾನ ನವ ಭರವಸೆಯತ್ತ ಕರೆದೊಯ್ಯುತ್ತದೆ ಎಂದು ವಿಶ್ವಾಸಿಗಳಿಗೆ ನೆನಪಿಸಿದರು.“ನೀವು ಪ್ರಭುವಿನ ಪರ ನಿಂತರೆ, ನಿಮಗೆ ಎದುರಾಗುವುದು ಒಂದೇ — ಹೊಸ ಜೀವನ, ಹೊಸ ಬೆಳಕು, ಹೊಸ ಪುನರುತ್ಥಾನ,” ಎಂದು ಅವರು ದೃಢವಾಗಿ ಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).