ಕೆರಿಬಿಯನ್ ವಾಸ್ತವಿಕತೆಗಳನ್ನು ವಿಶ್ವಧರ್ಮಸಭೆಯ ಹೃದಯಕ್ಕೆ ತಂದ ಆಂಟಿಲೀಸ್ ಧರ್ಮಾಧ್ಯಕ್ಷರು
ವ್ಯಾಟಿಕನ್ ವರದಿ
ಆಂಟಿಲೀಸ್ ಧರ್ಮಾಧ್ಯಕ್ಷರ ಮಹಾಸಭೆ (AEC)ಯ ಅಧ್ಯಕ್ಷರಾದ ಮಹಾಧರ್ಮಾಧ್ಯಕ್ಷರಾದ ಚಾರ್ಲ್ಸ್ ಜೇಸನ್ ಗೋರ್ಡನ್, ರೋಮ್‌ಗೆ ನಡೆದ ಧರ್ಮಾಧ್ಯಕ್ಷರ ad limina Apostolorum (ಅಪೊಸ್ತಲರ ಹೊಸ್ತಿಲಿಗೆ)ಭೇಟಿಯನ್ನು ಕೆರಿಬಿಯನ್ ಪ್ರದೇಶದ ಸ್ಥಳೀಯ ಧರ್ಮಸಭೆಗಳು ಮತ್ತು ವಿಶ್ವಧರ್ಮಸಭೆಯ ನಡುವಿನ ಐಕ್ಯತೆ, ಭೇಟಿಯ ಮತ್ತು ಪರಸ್ಪರ ವಿನಿಮಯದ ವಿಶೇಷ ಕ್ಷಣವೆಂದು ವಿವರಿಸಿದ್ದಾರೆ.
2026ರ ಈ ಭೇಟಿಯ ಸಂದರ್ಭದಲ್ಲಿ ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮಹಾಧರ್ಮಾಧ್ಯಕ್ಷರಾದ ಗೋರ್ಡನ್, ಈ ಯಾತ್ರೆಯ ಮಹತ್ವದ ಬಗ್ಗೆ ಚಿಂತನೆ ವ್ಯಕ್ತಪಡಿಸಿ, ಇದನ್ನು “ಒಬ್ಬ ಧರ್ಮಾಧ್ಯಕ್ಷನ ಜೀವನದಲ್ಲಿಯೂ, ಧರ್ಮಾಧ್ಯಕ್ಷರ ಮಹಾಸಭೆಯ ಜೀವನದಲ್ಲಿಯೂ ಅತ್ಯಂತ ವಿಶೇಷ ಕ್ಷಣ” ಎಂದು ಕರೆಯುತ್ತಾರೆ.
ಪೋರ್ಟ್ ಆಫ್ ಸ್ಪೇನ್‌ನ ಮಹಾಧರ್ಮಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ಅವರು, ಈ ಭೇಟಿ ಧರ್ಮಾಧ್ಯಕ್ಷರಿಗೆ ನಿತ್ಯನಗರಿಯಾದ ರೋಮ್‌ನಲ್ಲಿ ಒಂದಾಗಲು ಮತ್ತು ಪವಿತ್ರ ಪೀಠದ ವಿಭಾಗಗಳೊಂದಿಗೆ ನೇರವಾಗಿ ಸಂವಾದ ನಡೆಸಲು ಅಪೂರ್ವ ಅವಕಾಶವನ್ನು ಒದಗಿಸುತ್ತದೆ ಎಂದು ತಿಳಿಸಿದ್ದಾರೆ.
ಐಕ್ಯತೆ ಮತ್ತು ಆಲಿಸುವ ಕ್ಷಣ
“ನಾವು ಐಕ್ಯತೆಯನ್ನು ಕಂಡುಕೊಳ್ಳಲು, ಧರ್ಮಸಭೆಯ ಹೃದಯದ ಸ್ಪಂದನವನ್ನು ಆಳವಾಗಿ ಆಲಿಸಲು ಪವಿತ್ರ ನಗರಕ್ಕೆ, ನಿತ್ಯ ನಗರಕ್ಕೆ ಬರುತ್ತೇವೆ . ನಮ್ಮ ಸಂದರ್ಭದಲ್ಲಿನ ಸೇವೆಯ ವೈಶಿಷ್ಟ್ಯತೆಯನ್ನು ನಾವು ಭೇಟಿಯಾಗುವ ವಿವಿಧ ವಿಭಾಗಗಳೊಂದಿಗೆ ಹಂಚಿಕೊಳ್ಳಲು ಕೂಡ ಬರುತ್ತೇವೆ" ಎಂದು ಅವರು ಹೇಳಿದರು
ad limina ಭೇಟಿಯ ಪರಸ್ಪರ ಸ್ವಭಾವವನ್ನು ಉಲ್ಲೇಖಿಸಿದ ಮಹಾಧರ್ಮಾಧ್ಯಕ್ಷರಾದ ಗೋರ್ಡನ್, ವಿಶ್ವಧರ್ಮಸಭೆ ಮತ್ತು ಸ್ಥಳೀಯ ಧರ್ಮಸಭೆಗಳ ನಡುವಿನ ಈ ವಿನಿಮಯವು ಎರಡನ್ನೂ ಸಮೃದ್ಧಗೊಳಿಸುತ್ತದೆ ಎಂದು ಹೇಳಿದರು.
“ಧರ್ಮಸಭೆ ವಿಶ್ವವ್ಯಾಪಿಯಾಗಿದ್ದರೂ, ಅದು ಸ್ಥಳೀಯವೂ ಆಗಿದೆ,” ಎಂದು ಅವರು ಹೇಳಿದರು. “ವಿಶ್ವವ್ಯಾಪಿ ಮತ್ತು ಸ್ಥಳೀಯದ ಈ ವಿನಿಮಯದಲ್ಲಿ, ನಾವು ಸದಾ ಮಹತ್ತರ ಸಂಪತ್ತನ್ನು ಪಡೆದುಕೊಳ್ಳುತ್ತೇವೆ.” ಸ್ಥಳೀಯ ಧರ್ಮಸಭೆಗಳ ಅನುಭವವು ವಿಶ್ವಧರ್ಮಸಭೆಗೆ ಪಾಸ್ತೋರಲ್ ವಾಸ್ತವಿಕತೆಗಳನ್ನು ಹೊಸ ದೃಷ್ಟಿಕೋನಗಳಿಂದ ಆಳವಾಗಿ ಪರಿಗಣಿಸಲು ಸಹಾಯ ಮಾಡುತ್ತದೆ ಎಂಬುದನ್ನೂ ಅವರು ವಿವರಿಸಿದರು.
ಡಿಜಿಟಲ್ ಖಂಡದಲ್ಲಿ ಶುಭಸಂದೇಶ ಪ್ರಸಾರ ಕಾರ್ಯ
ಕೆರಿಬಿಯನ್ ಧರ್ಮಾಧ್ಯಕ್ಷರ ಈ ಭೇಟಿಯ ಮೊದಲ ಸಭೆಗಳಲ್ಲೊಂದಾಗಿ, ಸಂವಹನದ ದಿಕಾಸ್ತೇರಿಯೊಂದಿಗೆ ನಡೆದ ಭೇಟಿಯಲ್ಲಿ, ಡಿಜಿಟಲ್ ಲೋಕದಲ್ಲಿ ಧರ್ಮಸಭೆಯ ಮಿಷನ್ ಕುರಿತು ಚರ್ಚೆಗಳು ನಡೆದವು. ಮಹಾಧರ್ಮಾಧ್ಯಕ್ಷರಾದ ಗೋರ್ಡನ್, ಸಾಮಾಜಿಕ ಮಾಧ್ಯಮಗಳು ಸ್ಪಷ್ಟವಾದ ಅಪಾಯಗಳನ್ನು ಹೊಂದಿದ್ದರೂ, ಆ ಅಪಾಯಗಳು ಧರ್ಮಸಭೆಯನ್ನು ಡಿಜಿಟಲ್ ಕ್ಷೇತ್ರದಲ್ಲಿ ಶುಭಸಂದೇಶ ಪ್ರಸಾರ ಕಾರ್ಯದಿಂದ ತಡೆಯಬಾರದು ಎಂದು ಒತ್ತಿಹೇಳಿದರು.
“ಸಾಮಾಜಿಕ ಮಾಧ್ಯಮಗಳಲ್ಲಿ ಅಪಾಯಗಳಿವೆ, ರಸ್ತೆಯನ್ನು ದಾಟುವಾಗಲೂ ಅಪಾಯಗಳಿವೆ, ದೇಶದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಪ್ರಯಾಣಿಸುವಾಗಲೂ ಅಪಾಯಗಳಿವೆ. ಆ ಅಪಾಯಗಳು ಶುಭಸಂದೇಶವನ್ನು ಸಕಲ ಸೃಷ್ಟಿಯಲ್ಲಿಯೂ, ಜೀವನದ ಎಲ್ಲ ಕ್ಷೇತ್ರಗಳಲ್ಲಿಯೂ ಮತ್ತು ಚಟುವಟಿಕೆಗಳಲ್ಲಿಯೂ ಹರಡುವುದನ್ನು ತಡೆಯಬಾರದು.”
ಜಗದ್ಗುರುಗಳ 16ನೆ ಬೆನೆಡಿಕ್ಟ್ ಇಂಟರ್ನೆಟ್ ಅನ್ನು “ಡಿಜಿಟಲ್ ಖಂಡ” ಎಂದು ವಿವರಿಸಿದ್ದನ್ನು ಪ್ರತಿಧ್ವನಿಸುತ್ತಾ, ಮಹಾಧರ್ಮಾಧ್ಯಕ್ಷರಾದ ಗೋರ್ಡನ್, ಧರ್ಮಸಭೆ ತನ್ನ ಶುಭಸಂದೇಶ ಪ್ರಸಾರದ ಹೊಣೆಗಾರಿಕೆಯನ್ನು ಆನ್‌ಲೈನ್‌ದಲ್ಲಿಯೂ ಸ್ವೀಕರಿಸಬೇಕೆಂದು ಹೇಳಿದರು.
“ಅದು ನಾವು ಮಿಷನರಿಗಳಾಗಬೇಕಾದ ಸ್ಥಳವೂ ಹೌದು,” ಎಂದು ಅವರು ಹೇಳಿದರು, “ಅಲ್ಲಿ ಕೇವಲ ಸಂದೇಶವನ್ನು ತಲುಪಿಸುವುದಷ್ಟೇ ಅಲ್ಲ, ಡಿಜಿಟಲ್ ಮಾಧ್ಯಮಗಳಲ್ಲಿನ ಸಂವಹನವನ್ನು ರೂಪಿಸುವುದೂ ನಮ್ಮ ಕರ್ತವ್ಯವಾಗಿದೆ.”
ಕ್ರೈಸ್ತರು ಡಿಜಿಟಲ್ ಸಂವಹನವನ್ನು “ಹೆಚ್ಚು ಮಾನವೀಯ” ಮತ್ತು “ಮಾನವೀಯತೆಯನ್ನು ವೃದ್ಧಿಸುವ” ರೀತಿಯದ್ದಾಗಿಸಲು ಸಹಾಯ ಮಾಡಬೇಕು, ಹೀಗೆ ಆನ್‌ಲೈನ್ ಸ್ಥಳಗಳು ಸತ್ಯ ಮತ್ತು ಅರ್ಥದ ಹುಡುಕಾಟದಲ್ಲಿ ಇರುವವರಿಗೆ ಉತ್ತಮ ಮಾರ್ಗದರ್ಶನ ನೀಡುವಂತೆ ಮಾಡಬೇಕು ಎಂದು ಅವರು ವಿವರಿಸಿದರು.
ಕೆರಿಬಿಯನ್ ಸವಾಲುಗಳನ್ನು ರೋಮ್‌ಗೆ ತರುವುದು
ಕೆರಿಬಿಯನ್ ಪ್ರದೇಶದಲ್ಲಿ ಧರ್ಮಸಭೆ ಎದುರಿಸುತ್ತಿರುವ ವಾಸ್ತವಿಕತೆಗಳ ಕುರಿತು ಮಾತನಾಡುತ್ತಾ, ಮಹಾಧರ್ಮಾಧ್ಯಕ್ಷರಾದ ಗೋರ್ಡನ್, ಹವಾಮಾನ ಅಸುರಕ್ಷತೆ, ವಲಸೆ ಮತ್ತು ಕುಟುಂಬ ಜೀವನವನ್ನು ಪ್ರಮುಖ ಧಾರ್ಮಿಕ ಪಾಲನಾ ಚಿಂತನೆಗಳಾಗಿ ಉಲ್ಲೇಖಿಸಿದರು.
“ನಮ್ಮ ಪ್ರದೇಶದಲ್ಲಿ, ಹವಾಮಾನ ಬದಲಾವಣೆಯ ದೃಷ್ಟಿಯಿಂದ ನಾವು ವಿಶ್ವದಲ್ಲಿಯೇ ಅತ್ಯಂತ ಅಸುರಕ್ಷಿತ ಪ್ರದೇಶಗಳಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ; ಇದು ಸದಾ ಒಂದು ಪ್ರಮುಖ ಪ್ರಶ್ನೆಯಾಗಿದೆ,” ಎಂದು ಅವರು ಹೇಳಿದರು. ಸಮುದ್ರ ಮಟ್ಟದ ಏರಿಕೆ, ಚಂಡಮಾರುತಗಳು ಮತ್ತು ಪರಿಸರ ಹಾನಿ ಕ್ಯಾರಿಬಿಯನ್ ರಾಷ್ಟ್ರಗಳಿಗೆ ಗಂಭೀರ ಅಪಾಯಗಳನ್ನು ಉಂಟುಮಾಡುತ್ತಿವೆ.
ವಲಸೆಯೂ ಇನ್ನೊಂದು ನಿರ್ಣಾಯಕ ಸವಾಲಾಗಿದೆ. ವೆನೆಜುವೆಲಾ ಸಂಕಷ್ಟದ ಪರಿಣಾಮವನ್ನು ಹಾಗೂ ವ್ಯಾಪಕ ಪ್ರಾದೇಶಿಕ ಅಸ್ಥಿರತೆಯನ್ನು ನೆನಪಿಸಿಕೊಂಡು, ಟ್ರಿನಿಡಾಡ್ ಮತ್ತು ಟೊಬಾಗೊ ಮುಂತಾದ ದೇಶಗಳು ವೆನೆಜುವೆಲಾ, ಹೈಟಿ, ಕ್ಯೂಬಾ ಹಾಗೂ ಕೆರಿಬಿಯನ್ ಮತ್ತು ಲ್ಯಾಟಿನ್ ಅಮೇರಿಕಾದ ಇತರೆ ಭಾಗಗಳಿಂದ “ಸಾವಿರಾರು ವಲಸಿಗರನ್ನು” ಸ್ವೀಕರಿಸಿವೆ ಎಂದು ಅವರು ಹೇಳಿದರು.
ಅವರು ಕೆರಿಬಿಯನ್ ಕುಟುಂಬ ಜೀವನದ ವೈಶಿಷ್ಟ್ಯಪೂರ್ಣ ಐತಿಹಾಸಿಕ ಅನುಭವವನ್ನೂ ಸೂಚಿಸಿದರು, ಇದು ಶತಮಾನಗಳ ಕಾಲದ ವಸಾಹತುಶಾಹಿ ಮತ್ತು ತೋಟಗಾರಿಕೆ ವ್ಯವಸ್ಥೆಯಿಂದ ರೂಪುಗೊಂಡಿದೆ.
“ನಾವು ಸುಮಾರು 400 ವರ್ಷಗಳ ಕಾಲ ತೋಟಗಾರಿಕೆ ವ್ಯವಸ್ಥೆಯಿಂದ ಕುಟುಂಬ ವ್ಯವಸ್ಥೆಗಳು ವ್ಯತ್ಯಯಗೊಂಡಿರುವ ಅನುಭವವನ್ನು ಹೊಂದಿದ್ದೇವೆ,” ಎಂದು ಅವರು ವಿವರಿಸಿದರು. ಈ ಹಿನ್ನೆಲೆ, ವಿಶ್ವದ ಅನೇಕ ಇತರೆ ಭಾಗಗಳಿಂದ ವಿಭಿನ್ನವಾದ ಕುಟುಂಬ ರಚನೆಗಳು ಮತ್ತು ಧಾರ್ಮಿಕ ಪಾಲನಾ ವಾಸ್ತವಿಕತೆಗಳನ್ನು ರೂಪಿಸಿದೆ.
ಕೃಪೆಯ ಅವಕಾಶಗಳಾಗಿರುವ ಸವಾಲುಗಳು
ಈ ವಾಸ್ತವಿಕತೆಗಳನ್ನು ವ್ಯಾಟಿಕನ್‌ಗೆ ತರುವ ಉದ್ದೇಶ ಕೇವಲ ಸವಾಲುಗಳನ್ನು ಪ್ರಸ್ತುತಪಡಿಸುವುದಲ್ಲ, ಕೆರಿಬಿಯನ್ ಪ್ರದೇಶದ ವೈಶಿಷ್ಟ್ಯಪೂರ್ಣ ಅನುಭವವನ್ನು ಧರ್ಮಸಭೆಯ ವಿಶಾಲ ವಿವೇಕದ ಪ್ರಕ್ರಿಯೆಗೆ ಕೊಡುಗೆ ನೀಡುವುದಾಗಿದೆ ಎಂದು ಮಹಾಧರ್ಮಾಧ್ಯಕ್ಷರಾದ ಗೋರ್ಡನ್ ಹೇಳಿದರು. “ಈ ವೈಶಿಷ್ಟ್ಯತೆಯನ್ನು, ಈ ವಿಶೇಷತೆಯನ್ನು ವಿಶ್ವವ್ಯಾಪಿ ಸಂವಾದದ ಭಾಗವನ್ನಾಗಿ ಮಾಡುವುದು ನಮ್ಮ ಆಶಯವಾಗಿದೆ,” ಎಂದು ಅವರು ಹೇಳಿದರು.
ಇದರಿಂದ, ಧರ್ಮಾಧ್ಯಕ್ಷರು ಸವಾಲುಗಳನ್ನು ಸೇವೆಗೆ ಅವಕಾಶಗಳಾಗಿ ಪರಿವರ್ತಿಸಲು ಸಹಾಯಮಾಡುವ ಬೆಳಕನ್ನು ಸ್ವೀಕರಿಸುವುದರ ಜೊತೆಗೆ ಹಂಚಿಕೊಳ್ಳುವುದನ್ನೂ ಉದ್ದೇಶಿಸುತ್ತಾರೆ ಎಂದು ಅವರು ಸೇರಿಸಿದರು. “ನಮ್ಮ ಸೇವೆ ಮತ್ತು ಸವಾಲುಗಳನ್ನು, ಕೇವಲ ಸವಾಲುಗಳಾಗಿ ಮಾತ್ರವಲ್ಲ, ಕೃಪೆಯಾಗಿ ಮತ್ತು ಸುವಾರ್ತಾ ಕಾರ್ಯದ ಅವಕಾಶಗಳಾಗಿ ನೋಡಬೇಕು” ಎಂದು ಅವರು ಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).