COMECE ಧರ್ಮಾಧ್ಯಕ್ಷರು: ಜಾಗತಿಕ ಸಂಘರ್ಷಗಳ ನಡುವೆ ಯೂರೋಪ್ ಶಾಂತಿಯ ಶಕ್ತಿಯಾಗಲಿ
ಲೇಖಕರು: ಲಿಂಡಾ ಬೋರ್ಡೊನಿ
ಯೂರೋಪಿಯನ್ ಒಕ್ಕೂಟದ ಧರ್ಮಾಧ್ಯಕ್ಷರ ಮಹಾಸಭೆಗಳ ಆಯೋಗ (COMECE)ದ ಧರ್ಮಾಧ್ಯಕ್ಷರು, ಮಧ್ಯಪ್ರಾಚ್ಯ ಮತ್ತು ವಿಶ್ವದ ಇತರೆ ಪ್ರದೇಶಗಳಲ್ಲಿ ಹಿಂಸೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಶಾಂತಿಗಾಗಿ ತಮ್ಮ ಮನವಿಯನ್ನು ಪುನರುಚ್ಚರಿಸಿದ್ದಾರೆ.
ಕಳೆದ ವಾರ ಸೈಪ್ರಸ್‌ನ ನಿಕೋಸಿಯಾದಲ್ಲಿ ನಡೆದ ವಸಂತಕಾಲೀನ ಪೂರ್ಣಸಭೆಯ ಅಂತ್ಯದಲ್ಲಿ ಬಿಡುಗಡೆಗೊಂಡ ಪ್ರಕಟಣೆಯಲ್ಲಿ, ಪವಿತ್ರ ಭೂಮಿ, ಲೆಬನಾನ್, ಇರಾನ್ ಮತ್ತು ವ್ಯಾಪಕ ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ಯುದ್ಧ, ಅಸ್ಥಿರತೆ ಮತ್ತು ಅನ್ಯಾಯದಿಂದ ಬಳಲುತ್ತಿರುವ ಎಲ್ಲರೊಂದಿಗೆ ಅವರು ತಮ್ಮ ಐಕ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ಯುದ್ಧಪೀಡಿತ ಉಕ್ರೇನ್ ಮತ್ತು ಸುಡಾನ್‌ನ ಜನರನ್ನೂ, ಜೊತೆಗೆ “ಯುದ್ಧ ಮತ್ತು ಹಿಂಸೆಯ ದುಷ್ಟತೆಯನ್ನು” ಇನ್ನೂ ಅನುಭವಿಸುತ್ತಿರುವ ಜಗತ್ತಿನ ಇತರೆ ಜನರನ್ನೂ ಸ್ಮರಿಸಿದರು.
ಮಾನವೀಯ ನೋವಿನ ಕುರಿತು ಆಳವಾದ ವಿಷಾದ
ಮುಂದುವರಿಯುತ್ತಿರುವ ಸಂಘರ್ಷಗಳ ಭೀಕರ ಮಾನವೀಯ ಪರಿಣಾಮಗಳ ಕುರಿತು ವಿಷಾದ ವ್ಯಕ್ತಪಡಿಸಿದ ಧರ್ಮಾಧ್ಯಕ್ಷರು, ಅನೇಕ ಜೀವಗಳ ನಷ್ಟ, ವ್ಯಾಪಕ ವಿನಾಶ ಮತ್ತು ಯುದ್ಧದಲ್ಲಿ ಸಿಲುಕಿರುವ ಕುಟುಂಬಗಳ ದುಃಖದಿಂದ ತಾವು “ಆಳವಾಗಿ ದುಃಖಿತರಾಗಿದ್ದೇವೆ” ಎಂದು ತಿಳಿಸಿದ್ದಾರೆ.
ಯೂರೋಪಿನ ಪಕ್ಕದ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಸ್ಥಿರತೆ ಮತ್ತು ಹಿಂಸೆಯನ್ನು ವಿರೋಧಿಸಿ, ಅವರು ಪೂಜ್ಯ ಜಗದ್ಗುರುಗಳಾ ಲಿಯೋ XIV ಅವರ ಇತ್ತೀಚಿನ ಪಾಸ್ಕಾ Urbi et Orbi ಸಂದೇಶದ ಮಾತುಗಳನ್ನು ನೆನಪಿಸಿಕೊಂಡರು:
“ಆಯುಧಗಳನ್ನು ಹೊಂದಿರುವವರು ಅವುಗಳನ್ನು ಕೆಳಗಿಡಲಿ! ಯುದ್ಧಗಳನ್ನು ಪ್ರಾರಂಭಿಸುವ ಅಧಿಕಾರ ಹೊಂದಿರುವವರು ಶಾಂತಿಯನ್ನು ಆರಿಸಲಿ! ಬಲದಿಂದ ಹೇರುವ ಶಾಂತಿಯಲ್ಲ, ಸಂವಾದದ ಮೂಲಕ ದೊರೆಯುವ ಶಾಂತಿ! ಇತರರನ್ನು ಆಳುವ ಮನೋಭಾವದಿಂದಲ್ಲ, ಅವರನ್ನು ಭೇಟಿಯಾಗುವ ಮನಸ್ಸಿನಿಂದ!”
ಪೂಜ್ಯ ಜಗದ್ಗುರುಗಳಾದ 14ನೆ ಲಿಯೋ ಅವರ ಶಾಂತಿ ಕರೆಗೆ ಬೆಂಬಲ
COMECE ಧರ್ಮಾಧ್ಯಕ್ಷರು “ಪೂಜ್ಯ ತಂದೆಯವರೊಂದಿಗೆ ಸಂಪೂರ್ಣ ಐಕ್ಯತೆ ಮತ್ತು ಸಹಭಾಗಿತ್ವವನ್ನು” ವ್ಯಕ್ತಪಡಿಸಿ, ಜಾಗತಿಕ ನಾಯಕರನ್ನು ಶಾಂತಿಯ ಮಾರ್ಗವನ್ನು ಅನುಸರಿಸಲು ಪ್ರೇರೇಪಿಸುವಲ್ಲಿ ಅವರ ನಿರಂತರ ಪ್ರಯತ್ನಗಳನ್ನು ಪ್ರಶಂಸಿಸಿದರು. ಅವರ ನೈತಿಕ ಪ್ರಭಾವವು ರಾಜಕೀಯ ಹಿತಾಸಕ್ತಿಗಳಿಂದ ಅಲ್ಲ, “ಶುಭಸಂದೇಶದ ನಿಷ್ಠೆ ಮತ್ತು ಸತ್ಯಕ್ಕೆ ಧೈರ್ಯ ಸಾಕ್ಷಿಯಾಗಿರುವ”ಮಾರ್ಗವಾಗಿದೆ ಎಂದು ತಿಳಿಸಿದರು.
ಸೈಪ್ರಸ್: ಸೌಹಾರ್ದತೆಗೆ ಸಾಕ್ಷಿಯಾದ ನೆಲ
ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಗಳಿಂದ ಶ್ರೀಮಂತವಾಗಿದ್ದರೂ ಇನ್ನೂ ವಿಭಜನೆಯ ಗುರುತುಗಳನ್ನು ಹೊತ್ತಿರುವ ಸೈಪ್ರಸ್‌ನಲ್ಲಿ ಸೇರಿದ್ದ ಧರ್ಮಾಧ್ಯಕ್ಷರು, ವಿಶ್ವಾಸ ನಿರ್ಮಾಣ ಮತ್ತು ಸೌಹಾರ್ದತೆಯ ಅಗತ್ಯವನ್ನು ನೆನಪಿಸುವ ಈ ದ್ವೀಪದ ಶಾಶ್ವತ ಸಾಕ್ಷಿತ್ವದ ಬಗ್ಗೆ ಚಿಂತನೆ ನಡೆಸಿದರು.
ದ್ವೀಪದ ಉತ್ತರ ಭಾಗದಲ್ಲಿರುವ ಮಾರೊನೈಟ್ ಸಮುದಾಯಗಳ ಸಾನ್ನಿಧ್ಯವು ಅವರಿಗೆ ವಿಶೇಷವಾಗಿ ಸ್ಪರ್ಶಿಸಿದೆ ಎಂದು ಅವರು ಹೇಳಿದರು. ಅವರ ಸ್ಥೈರ್ಯವು ಸಂವಾದಕ್ಕೆ ಕೊಡುಗೆ ನೀಡುವುದರೊಂದಿಗೆ “ಭೇಟಿಯ ಸಂಸ್ಕೃತಿ”ಯನ್ನು ಬೆಳೆಸಲು ಸಹಾಯ ಮಾಡುತ್ತಿದೆ ಎಂದು ಅವರು ಗಮನಿಸಿದರು.
ಶಾಂತಿಗೆ ಯೂರೋಪಿನ ಜವಾಬ್ದಾರಿ
“ಶಾಂತಿಯ ಯೋಜನೆ”ಯಾಗಿ ಯೂರೋಪಿಯನ್ ಒಕ್ಕೂಟದ ಮೂಲಗಳನ್ನು ಉಲ್ಲೇಖಿಸಿದ ಧರ್ಮಾಧ್ಯಕ್ಷರು, ಮಧ್ಯಪ್ರಾಚ್ಯ ಪ್ರದೇಶದಾದ್ಯಂತ ಸ್ಥಿರತೆ ಮತ್ತು ಸಂವಾದವನ್ನು ಉತ್ತೇಜಿಸುವಲ್ಲಿ ಯೂರೋಪಿಯನ್ ಒಕ್ಕೂಟವು “ನಂಬಲರ್ಹ ಶಾಂತಿಯ ಶಕ್ತಿಯಾಗಿ” ಕಾರ್ಯನಿರ್ವಹಿಸುವ ವಿಶೇಷ ಜವಾಬ್ದಾರಿಯನ್ನು ಹೊಂದಿದೆ ಎಂದು ಒತ್ತಿಹೇಳಿದರು.
ಶಾಂತಿ ನಿರ್ಮಾಣದ ಪ್ರಯತ್ನಗಳು, ಮಾನವ ಗೌರವದ ರಕ್ಷಣೆ ಮತ್ತು ಅಂತರರಾಷ್ಟ್ರೀಯ ಕಾನೂನಿನ ಸಂರಕ್ಷಣೆಗೆ ಬೆಂಬಲ ನೀಡುವ ಉದ್ದೇಶದಿಂದ, ಯೂರೋಪಿಯನ್ ಒಕ್ಕೂಟ ಮತ್ತು ಅದರ ಸದಸ್ಯ ರಾಷ್ಟ್ರಗಳು ರಾಜತಾಂತ್ರಿಕ, ರಾಜಕೀಯ ಮತ್ತು ಮಾನವೀಯ ಕಾರ್ಯಗಳಲ್ಲಿ ತಮ್ಮ ತೊಡಗುವಿಕೆಯನ್ನು ಹೆಚ್ಚಿಸಬೇಕೆಂದು ಅವರು ಮನವಿ ಮಾಡಿದರು. ಇದಲ್ಲದೆ, “ಎಲ್ಲರ ಧ್ವನಿಗೂ—ಧಾರ್ಮಿಕ ಸಮುದಾಯಗಳನ್ನು ಸೇರಿಸಿಕೊಂಡು—ಸ್ಥಾನ ದೊರೆಯುವ ಮತ್ತು ಅವರ ಹಕ್ಕುಗಳನ್ನು ಗೌರವಿಸುವ” ಸಮಗ್ರ ಶಾಂತಿ ಉಪಕ್ರಮಗಳನ್ನು ಅವರು ಕೋರಿದರು.
ಕತ್ತಲೆಯ ಮಧ್ಯೆ ಪಾಸ್ಕಾ ನಿರೀಕ್ಷೆ
ಪಾಸ್ಕಾ ಕಾಲದ ಬೆಳಕಿನಲ್ಲಿ ತಮ್ಮ ಸಂದೇಶವನ್ನು ಸಮಾಪ್ತಿಗೊಳಿಸುತ್ತಾ, ಧರ್ಮಾಧ್ಯಕ್ಷರು ಕ್ರೈಸ್ತರನ್ನು ಭರವಸೆಯಲ್ಲಿ ಸ್ಥಿರವಾಗಿರಲು ಹಾಗೂ ಶಾಂತಿಯ ನಿರ್ಮಾತೃಗಳಾಗಿ ತಮ್ಮ ಕರೆಯನ್ನು ನಿಷ್ಠೆಯಿಂದ ಪಾಲಿಸಲು ಪ್ರೇರೇಪಿಸಿದರು. “ಕ್ರಿಸ್ತನ ಅನುಯಾಯಿಗಳಾದ ನಮಗೆ, ಈ ಪಾಸ್ಕಾ ಕಾಲದಲ್ಲಿ ವಿಶೇಷವಾಗಿ… ಶಾಂತಿ ಮತ್ತು ಸೌಹಾರ್ದತೆಯ ಕರಕುಶಲಕಾರರಾಗುವ ನಮ್ಮ ಬದ್ಧತೆಯನ್ನು ಪುನರುಜ್ಜೀವನಗೊಳಿಸಲು ಪ್ರೇರಣೆ ದೊರೆಯುತ್ತದೆ.
“ಪುನರುತ್ಥಾನಿ ಕ್ರಿಸ್ತನ ಬೆಳಕು ಈ ಸಹಭಾಗಿತ್ವದ ಪ್ರಯತ್ನವನ್ನು ಬಲಪಡಿಸಲಿ; ಅತ್ಯಂತ ಕತ್ತಲೆಯ ಕ್ಷಣಗಳಲ್ಲಿಯೂ ಹಿಂಸೆ ಮತ್ತು ಅನ್ಯಾಯ ಅಂತಿಮ ಮಾತಾಗದೆ, ನ್ಯಾಯಯುತ ಮತ್ತು ಶಾಶ್ವತ ಶಾಂತಿಯ ಮಾರ್ಗವನ್ನು ಹುಡುಕಲು ಮತ್ತು ಅನುಸರಿಸಲು ನಾವು ಪ್ರಯತ್ನಿಸೋಣ,” ಎಂದು ಅವರು ಪ್ರಾರ್ಥಿಸಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).