2022.09.30 Sunday Gospel Reflections 2022.09.30 Sunday Gospel Reflections 

ಪ್ರಭುವಿನ ದಿನದ ಧ್ಯಾನ: ಕಾಣದ ಕೊರತೆಯಿಂದ ಉರಿಯುವ ಹೃದಯ

ಧರ್ಮಸಭೆ ಪುನರುತ್ಥಾನ ಮಹೋತ್ಸವವನ್ನು ಆಚರಿಸುತ್ತಿರುವಾಗ, ವಂ. ಗುರು ಮರಿಯೋನ್ ನ್ಗುಯೆನ್, OSB ಅವರು, ದಿನದ ಪೂಜಾ ವಾಕ್ಯಗಳ ಕುರಿತು “ಕಾಣದ ಕೊರತೆಯಿಂದ ಉರಿಯುವ ಹೃದಯ” ಎಂಬ ವಿಷಯದಡಿ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುತ್ತಾರೆ.

ಲೇಖಕರು: ವಂ. ಗುರು ಮರಿಯೋನ್ ನ್ಗುಯೆನ್, OSB

“ವಾರದ ಮೊದಲ ದಿನ, ಇನ್ನೂ ಕತ್ತಲೆ ಇರುವಾಗ…” (ಯೋವಾನ್ನ 20:1)-ಶುಭಸಂದೇಶವು ಸ್ಪಷ್ಟತೆ ಮತ್ತು ಆನಂದದಿಂದಲ್ಲ, ಕತ್ತಲೆ, ಗೊಂದಲ ಮತ್ತು ಅಭಾವದಿಂದ ಆರಂಭವಾಗುತ್ತದೆ.

ಮಗ್ದಲ ಮರಿಯಳು ಸಮಾಧಿಗೆ ಬರುತ್ತಾಳೆ — ಅವಳು ಅರ್ಥಮಾಡಿಕೊಂಡದ್ದರಿಂದ ಅಲ್ಲ, ಆದರೆ ಅವಳು ಪ್ರೀತಿಸುತ್ತಿದ್ದರಿಂದ. ಕಲ್ಲು ಸರಿದಿದೆ, ದೇಹ ಇಲ್ಲ, ಮತ್ತು ಅವಳು   ನಿರೀಕ್ಷಿಸಿದ್ದದ್ದು ಅಲ್ಲಿಲ್ಲ. ಇಲ್ಲಿಯೇ ಪುನರುತ್ಥಾನವು ಮೊದಲು ನಮ್ಮನ್ನು ಸೇರುತ್ತದೆ — ವಿಜಯದಲ್ಲಿ ಅಲ್ಲ, ಆದರೆ ಇನ್ನೂ ಕಾಣಲಾಗದ ಪ್ರೀತಿಯ ಗೊಂದಲದಲ್ಲಿ.

ನಾವು ಉಪವಾಸ ಕಾಲವನ್ನು ಅಂತರಂಗದಿಂದ ಪಾಲಿಸಿದ್ದರೆ, ಈ ಕ್ಷಣ ನಮಗೆ ಅಪರಿಚಿತವಲ್ಲ. ನಮ್ಮ ಆಸೆಗಳ ಮೇಲೆ ನಮಗೆ ಎಷ್ಟು ಅಲ್ಪ ಅಧಿಕಾರವಿದೆ ಎಂಬ ಸತ್ಯವನ್ನು ಉಪವಾಸವು ನಮಗೆ ಮನವರಿಕೆ ಮಾಡಿಕೊಟ್ಟಿದೆ. ಪ್ರಾರ್ಥನೆಯು ಮೌನದೊಂದಿಗಿನ ನಮ್ಮ ಅಸಹನೆಯನ್ನು ಬಯಲುಮಾಡಿದೆ; ಅಲ್ಲಿ ಲೌಕಿಕವಾಗಿ ತುರ್ತಲ್ಲದಿದ್ದರೂ, ಅಂತರಂಗಕ್ಕೆ ಅತ್ಯಗತ್ಯವಾದ ಪ್ರಶ್ನೆಗಳು ಮರುಜೀವ ಪಡೆಯುತ್ತವೆ. ನಾವು ಭದ್ರತೆ, ಸುಖ ಮತ್ತು ನಿಯಂತ್ರಣಕ್ಕೆ ಎಷ್ಟು ಗಾಢವಾಗಿ ಅಂಟಿಕೊಂಡಿದ್ದೇವೆ ಎಂಬುದನ್ನು ದಾನಧರ್ಮಗಳು ನಮಗೆ ತೋರಿಸಿಕೊಟ್ಟಿವೆ.

ಮುಕ್ತವಾಗಿ ಪ್ರೀತಿಸುವುದು, ಪರಿಪೂರ್ಣರಾಗುವುದು ಮತ್ತು ಸಂಪೂರ್ಣವಾಗಿ ದೇವರಿಗೆ ಅರ್ಪಿಸಿಕೊಳ್ಳುವುದು—ನಮ್ಮ ಈ ಪರಮ ಹಂಬಲಗಳು ಇನ್ನೂ ನಮಗೆ ಎಟುಕದಂತಿವೆ ಎಂಬುದು ನಮಗೆ ಅರಿವಾಗತೊಡಗುತ್ತದೆ. ಹಾಗಾಗಿ, ಮಗ್ದಲ ಮರಿಯಳಂತೆ ನಾವು ಕೂಡ ಕತ್ತಲಿರುವಾಗಲೇ ಆ ಖಾಲಿ ಸಮಾಧಿಯತ್ತ ಹೆಜ್ಜೆ ಹಾಕುತ್ತೇವೆ.”

ಸಂತ ಮಹಾನ್ ಗ್ರೆಗೊರಿ ಒಂದು ಸತ್ಯವನ್ನು ತೆರೆದಿಡುತ್ತಾರೆ "ಕ್ರಿಸ್ತನ ಅನುಪಸ್ಥಿತಿಯು ಅರ್ಥಹೀನವಲ್ಲ, ಅದು ಚಿಕಿತ್ಸಕವಾದುದು. ನಮ್ಮಲ್ಲಿ ಹಂಬಲವನ್ನು ಅತಿಶಯಗೊಳಿಸಲು ದೇವರು ತಾನು ಗೈರುಹಾಜರಾಗಿರುವಂತೆ ಬಿಟ್ಟುಕೊಡುತ್ತಾನೆ. 'ವಿಳಂಬದಿಂದ ಪವಿತ್ರ ಆಸೆಗಳು ಬೆಳೆಯುತ್ತವೆ' (ಹೋಮಿಲಿಯಾ ಇನ್ ಇವಾಂಜೆಲಿಯಾ, 25). 

ನಾವು ಏನನ್ನು ಕಳೆದುಕೊಂಡು ಮರುಗುತ್ತೇವೆಯೋ, ಅದನ್ನೇ ನಾವು ನಿಜವಾಗಿಯೂ ಕಂಡುಕೊಳ್ಳುತ್ತೇವೆ ಎಂಬ ಸತ್ಯವನ್ನು ಬಹುಶಃ ನೋವಿನಿಂದಲೇ ಅರಿತುಕೊಳ್ಳುತ್ತೇವೆ. ಆದ್ದರಿಂದ, ಖಾಲಿ ಸಮಾಧಿಯು ಕೇವಲ ಪುನರುತ್ಥಾನದ ಸಂಕೇತವಲ್ಲ, ಅದು ನಮ್ಮ ಹಂಬಲಕ್ಕೆ ಒಂದು ಪಾಠಶಾಲೆಯೂ ಹೌದು.

ಶುಭಸಂದೇಶದಲ್ಲಿ  ಪೇತ್ರ ಮತ್ತು ಯೋವಾನ್ನರು ಸಮಾಧಿಯತ್ತ ಓಡಿ ಬರುತ್ತಾರೆ, ಅಲ್ಲಿರುವ ಬಟ್ಟೆಗಳನ್ನು ನೋಡುತ್ತಾರೆ ಮತ್ತು ಮನೆಗೆ ಹಿಂತಿರುಗುತ್ತಾರೆ. ಅವರು ಏನನ್ನೋ ಗ್ರಹಿಸುತ್ತಾರೆ, ಪ್ರಾರಂಭಿಕ ಹಂತದಲ್ಲಿ ನಂಬುತ್ತಾರೆ ಕೂಡ; ಆದರೆ ಅವರು ಅಲ್ಲಿ ನೆಲೆಸುವುದಿಲ್ಲ." 

ಮಗ್ದಲ ಮರಿಯಳು ಮಾತ್ರ ಉಳಿಯುತ್ತಾಳೆ. ಅವಳು ಅವರಿಗೆ ಹೋಲಿಸಿದರೆ ಹೆಚ್ಚು ಅರ್ಥಮಾಡಿಕೊಂಡಿಲ್ಲ; ವಾಸ್ತವವಾಗಿ ಅವಳು ಇನ್ನಷ್ಟು ಗೊಂದಲದಲ್ಲಿದ್ದಾಳೆ. ಆದರೂ ಅವಳು ತೆರಳುವುದಿಲ್ಲ. ಅವಳು ಸಮಾಧಿಯ ಹೊರಗೆ ನಿಂತು ಅಳುತ್ತಾಳೆ.

ಗ್ರೆಗೊರಿ ಇದರಲ್ಲಿ ಪ್ರತಿಯೊಬ್ಬ ಶಿಷ್ಯನಿಗೂ ಒಂದು ಸತ್ಯವನ್ನು ಕಾಣುತ್ತಾರೆ: ತಕ್ಷಣ ಕಂಡುಕೊಳ್ಳದಿರುವುದು ವೈಫಲ್ಯವಲ್ಲ — ಅದು ಪ್ರೀತಿಯ ಪರೀಕ್ಷೆ.

ಒಂದು ರೀತಿಯ ನಂಬಿಕೆ ಇದೆ — ಅದು ವೇಗವಾದದ್ದು, ಪರಿಣಾಮಕಾರಿ, ಸಾಕ್ಷ್ಯಗಳನ್ನು ಸಂಗ್ರಹಿಸಿದ ನಂತರ ತಕ್ಷಣ ನಿರ್ಧಾರಕ್ಕೆ ಬರುತ್ತದೆ.

ಆದರೆ ಇನ್ನೊಂದು ರೀತಿಯ ನಂಬಿಕೆ ಇದೆ — ಅದು ಹೃದಯಸ್ಪರ್ಶಿಯಾದದ್ದು, ಕಾಯುವುದು, ನಿಲ್ಲುವುದು, ಅಳುವುದು, ದೇವರನ್ನು ಕೊನೆಯದಾಗಿ ಅನುಭವಿಸಿದ ಸ್ಥಳವನ್ನು ಬಿಟ್ಟು ಹೋಗಲು ನಿರಾಕರಿಸುವುದು. “ಅವಳು ಅದೃಶ್ಯನಾದವನನ್ನು ಹಂಬಲಿಸಿ ಹುಡುಕಿದಳು; ರೋಧಿಸುತ್ತಲೇ ಆತನನ್ನು ಅರಸಿದಳು.” ಅವಳ ಕಣ್ಣೀರು ದೌರ್ಬಲ್ಯದ ಸಂಕೇತವಲ್ಲ; ಅದು ಸಹನೆಯ ಸಂಕೇತವಾಗಿದೆ.

 "ಸಮಾಧಿಯು ಶೂನ್ಯವಾಗಿದೆ ಎಂದು ಇಂದು ಅನೇಕರು ಭಾವಿಸುತ್ತಾರೆ; ಅಂದರೆ ನಂಬಿಕೆಯು ವ್ಯರ್ಥವೆಂದೂ, ದೇವರು ದೂರವಾದವನೆಂದೂ ಮತ್ತು ಪ್ರಾರ್ಥನೆಯು ಸಾಂತ್ವನ ನೀಡದಂತೆಯೂ ಅವರಿಗೆ ತೋರುತ್ತದೆ."

 "ಆದರೆ ಅಂತವರಿಗೆ ಗ್ರೆಗೊರಿ , ಬೇಗನೆ ನಿರ್ಗಮಿಸಬೇಡಿ. ಅಲ್ಲೇ ಇರಿ. ಆತನ ಅನುಪಸ್ಥಿತಿಯು ನಿಮ್ಮ ಹಂಬಲವನ್ನು ನಂದಿಸುವ ಬದಲಿಗೆ, ಅದನ್ನು ಇನ್ನಷ್ಟು ವಿಸ್ತರಿಸಲಿ" ಎಂದು ಉತ್ತೇಜಿಸುತ್ತಾರೆ.

"ಏಕೆಂದರೆ ಆಸೆ ಕುಂದಿದರೆ, ಅದು ದೇವರು ಪವಿತ್ರಗೊಳಿಸಬೇಕೆಂದಿದ್ದ ಆಳವಾದ ಹಂಬಲವಾಗಿರಲಿಲ್ಲ ಎಂದರ್ಥ. ಕ್ರಿಸ್ತನು ಕೆಲವೊಮ್ಮೆ ಕಾಣದಂತೆ ಉಳಿಯುವುದು ನಮಗೆ ಆತನ ಕೊರತೆಯು ತಿಳಿಯಲೆಂದೇ; ಆಗ ಮಾತ್ರ ನಾವು ಆತನನ್ನು ಸತ್ಯವಾಗಿಯೂ ಕಂಡುಕೊಳ್ಳಲು ಮತ್ತು ಭದ್ರವಾಗಿ ಹಿಡಿದುಕೊಳ್ಳಲು ಸಾಧ್ಯ.”

ಪುನರುತ್ಥಾನ ಮಹೋತ್ಸವವು ಕಲ್ಪನಿಕವಲ್ಲ — ಇದು ಅಕ್ಷರಶಃ ವಾಸ್ತವಿಕ ಸತ್ಯ: ನಾವು ಅನುಭವಿಸಿದರೂ ಅಥವಾ ಅನುಭವಿಸದಿದ್ದರೂ, ಪ್ರಭು ಕ್ರಿಸ್ತರು ಎದ್ದಿದ್ದಾರೆ. ಆದರೆ ನಮ್ಮೊಳಗೆ, ನಮ್ಮ ಜೀವಿತದ ಅಂತರಾಳದಲ್ಲಿ, ಈ ಪುನರುತ್ಥಾನವು ನಮ್ಮ ನಿಯಂತ್ರಣದಾಚೆಯ ರೀತಿಯಲ್ಲಿ ನಿಧಾನವಾಗಿ ಅನಾವರಣಗೊಳ್ಳುತ್ತದೆ.

ಹೃದಯವು ಹಂಬಲದ ಮೂಲಕ ಶುದ್ಧೀಕರಿಸಿಕೊಂಡು, ಅವರನ್ನು ಗುರುತಿಸಲು ಯೋಗ್ಯವಾಗುವಾಗ ಅದು ಸಂಭವಿಸುತ್ತದೆ. ಈ ಗುರುತಿಸುವಿಕೆ ವಿಶ್ಲೇಷಿಸಿ ಹೊರಟುಹೋಗುವವರಿಗೆ ಅಲ್ಲ; ಪ್ರೀತಿಸಿ ಉಳಿಯುವವರಿಗೆ ಮಾತ್ರ ದೊರೆಯುವ ಕೃಪೆಯಾಗಿದೆ.

ಮಗ್ದಲ ಮರಿಯಳು ಕತ್ತಲೆಯೊಳಗೆ ಉಳಿಯುವ ಸ್ಥೈರ್ಯವೇ ಈಗಾಗಲೇ ಬೆಳಕಿನಲ್ಲಿ ಪಾಲ್ಗೊಳ್ಳುವಿಕೆಯಾಗಿದೆ ಎಂದು ನಮಗೆ ತೋರಿಸುತ್ತಾಳೆ.

ಪುನರುತ್ಥಾನವು ಖಂಡಿತವಾಗಿಯೂ ಬರುತ್ತದೆ — ಆದರೆ ಅದು ದೇವರ ಸಮಯದಲ್ಲಿ ಮಾತ್ರ.

ನಮ್ಮ ಪಾಲು ಸರಳವಾದರೂ ಗಂಭೀರವಾದದ್ದು: ಸಮಾಧಿಯ ಬಳಿಯಲ್ಲಿ ಉಳಿಯುವುದು, ಕಾಣದಿದ್ದರೂ ಹುಡುಕುತ್ತಲೇ ಇರುವುದು, ಮತ್ತು  ಅಂತಿಮವಾಗಿ, ಅಭಾವವೇ ಸನ್ನಿಧಿಯ ದ್ವಾರವಾಗುವವರೆಗೆ ಹಂಬಲವು ಹೃದಯದಲ್ಲಿ ಆಳವಾಗಿ ಬೆಳೆದುಕೊಳ್ಳಲು ಅವಕಾಶ ನೀಡುವುದು.

ವಾಷಿಂಗ್ಟನ್‌ನ ಲೇಸಿಯಲ್ಲಿರುವ ಸಂತ ಮಾರ್ಟಿನ್ ಮಠದ ಮಠಾಧಿಪತಿ ವಂ. ಮರಿಯೋನ್ ನ್ಗುಯೆನ್

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

04 ಏಪ್ರಿಲ್ 2026, 17:27