ಪ್ರಭುವಿನ ದಿನದ ಧ್ಯಾನ ಪ್ರಭುವಿನ ದಿನದ ಧ್ಯಾನ 

ಪ್ರಭುವಿನ ದಿನದ ಧ್ಯಾನ: ಕುರುಬರು ಒಳ್ಳೆಯ ಕುರಿಗಾಹಿಯನ್ನು ಭೇಟಿಯಾದ ಸಂದರ್ಭ

ಧರ್ಮಸಭೆ ಪುನರುತ್ಥಾನ ಮಹೋತ್ಸವದ ನಾಲ್ಕನೇ ಭಾನುವಾರವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಜೆನ್ನಿ ಕ್ರಾಸ್ಕಾ ಇಂದಿನ ವಾಚನಗಳ ಕುರಿತು “ಮೆಸ್ಸಿನಾದಿಂದ ಪ್ರೀತಿಯಿಂದ: ಕುರುಬರು ಒಳ್ಳೆಯ ಕುರಿಗಾಹಿಯನ್ನು ಭೇಟಿಯಾದ ಸಂದರ್ಭ” ಎಂಬ ವಿಷಯದ ಮೇಲೆ ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.

ಲೇಖಕರು: ಜೆನ್ನಿ ಕ್ರಾಸ್ಕ

ಒಳ್ಳೆಯ ಕುರಿಗಾಹಿಯ ಭಾನುವಾರವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ,  ಯೊವಾನ್ನರ ಶುಭಸಂದೇಶದಲ್ಲಿ ಪ್ರಭು ಯೇಸು ಸ್ಪಷ್ಟತೆಯೊಂದಿಗೆ ಮತ್ತು ಅಧಿಕಾರಪೂರ್ಣ ವಾಣಿಯಲ್ಲಿ ನಮ್ಮೊಂದಿಗೆ ಮಾತಾಡುತ್ತಾ, ತಾವೇ ನಮಗೆ ಬಾಗಿಲೂ ಮತ್ತು ಕುರಿಗಾಹಿಯೂ ಎನ್ನುತ್ತಾರೆ. “ಯಾರೇ ನನ್ನ ಮೂಲಕ ಪ್ರವೇಶಿಸಿದರೆ, ಅವನು ರಕ್ಷಿಸಲ್ಪಡುವನು,” ಎಂದು ಪ್ರಭು ಹೇಳುತ್ತಾರೆ. ಯೊವಾನ್ನ  10:9ರಲ್ಲಿ, “ನಾನೇ ಬಾಗಿಲು; ನನ್ನ ಮೂಲಕ ಒಳನುಗ್ಗುವವನು ರಕ್ಷಿಸಲ್ಪಡುವನು. ಅವನು ಒಳಗೆ ಹೋಗಿ ಹೊರಗೆ ಬಂದು ಮೇಯುವ ಸ್ಥಳವನ್ನು ಕಂಡುಕೊಳ್ಳುವನು,” ಎಂದು ಪ್ರಭು ಯೇಸು ಹೇಳುತ್ತಾರೆ.

ಈ  ಚಿತ್ರಣವು  ಸರಳವಾಗಿವೂ ಅರ್ಥಗರ್ಭಿತವೂ ಆಗಿದೆ. ಪ್ರಭು ಯೇಸು ಎತ್ತರದಲ್ಲಿ ನಿಂತು ದರ್ಪದಿಂದ ಆಳುವ ಅರಸನಲ್ಲ; ಬದಲಾಗಿ, ನಮ್ಮ ಜೀವನದ ದ್ವಾರದಲ್ಲೇ ನಿಂತು ನಮ್ಮನ್ನು ಕಾಪಾಡುವ, ಮಾರ್ಗದರ್ಶನ ನೀಡುವ ಹಾಗೂ ಪ್ರತಿಯೊಬ್ಬರನ್ನೂ ಹೆಸರಿನಿಂದ ಕರೆಯುವ ಸನ್ನಿಹಿತ ಪ್ರಭುವಾಗಿದ್ದಾರೆ.

ಕುರಿಗಾಹಿಯ ಈ  ಮಾತುಗಳು ಮೊದಲಿಗೆ ಕೇಳಿದವರ ಮನಸ್ಸಿನಲ್ಲಿ ಆಳವಾಗಿ ಪ್ರತಿಧ್ವನಿಸಿದವು. ನಿಜವಾದ ಕುರಿಗಾಹಿ ತನ್ನ ಕುರಿಗಳನ್ನು ಅತೀವ ಆತ್ಮೀಯತೆಯಿಂದ ತಿಳಿದುಕೊಳ್ಳುತ್ತಾನೆ—ಅವರ ಸ್ವಭಾವಗಳು, ಅವರ ಭಯಗಳು, ಅವರ ಹಠವನ್ನೂ ಸಹ—ಮತ್ತು ವಿಶೇಷವಾಗಿ ಅಪಾಯದ ಸಂದರ್ಭಗಳಲ್ಲಿ ಅವರ ಜೊತೆಯಲ್ಲೇ ಇರುತ್ತಾನೆ.

ಇದಕ್ಕೆ ವಿರುದ್ಧವಾಗಿ, ಕೇವಲ ಕಳವುಮಾಡಲು ಮತ್ತು ನಾಶಮಾಡಲು ಬರುವ ಕಳ್ಳನ ಚಿತ್ರವನ್ನು ಪ್ರಭು ಯೇಸು ಮುಂದಿಡುತ್ತಾರೆ. ಅನೇಕ ಧ್ವನಿಗಳು ಮತ್ತು ಸುಳ್ಳು ಭರವಸೆಗಳಿಂದ ಗೊಂದಲಗೊಂಡಿರುವ ಇಂದಿನ ಜಗತ್ತಿನಲ್ಲಿ, ಈ ವ್ಯತ್ಯಾಸವು ಇನ್ನಷ್ಟು ತುರ್ತು ಮತ್ತು ಪ್ರಸ್ತುತವಾಗುತ್ತದೆ.

ಕ್ರಿಸ್ತನ ಧ್ವನಿ ಗೊಂದಲ ಅಥವಾ ಬಲವಂತದದ್ದಲ್ಲ; ಅದು ಸತ್ಯದ, ಶಾಂತಿಯ ಮತ್ತು ಸಮೃದ್ಧ ಜೀವನದ ಧ್ವನಿಯಾಗಿದೆ.

ಶುಭಸಂದೇಶದ ಈ ಭಾಗವು ಇಂದು ಮೆಸ್ಸಿನಾದ ಮ್ಯೂಸಿಯೋ ರಿಜಿಯೋನಾಲೆ ಇಂಟರ್‌ಡಿಸಿಪ್ಲಿನಾರೆಯಲ್ಲಿ ಸಂರಕ್ಷಿಸಲ್ಪಟ್ಟಿರುವ ಕಾರವಾಜಿಯೋ ಅವರ “ಕುರಿಗಾಹಿಗಳ ಆರಾಧನೆ” ಎಂಬ ಚಿತ್ರಕೃತಿಯಲ್ಲಿ ಅತ್ಯಂತ ಮನೋಜ್ಞ ದೃಶ್ಯ ಪ್ರತಿಧ್ವನಿಯನ್ನು ಕಂಡುಕೊಳ್ಳುತ್ತದೆ. ಈ ಚಿತ್ರದಲ್ಲಿ, ಹೊಸದಾಗಿ ಜನಿಸಿದ ಕ್ರಿಸ್ತನನ್ನು ಆರಾಧಿಸಲು ಬಂದ ಕುರಿಗಾಹಿಗಳು ಆದರ್ಶೀಕರಿಸಲ್ಪಟ್ಟ ವ್ಯಕ್ತಿಗಳಲ್ಲ. ಅವರು ದಣಿದವರು, ವಿನಮ್ರರು, ಆದಾಗ್ಯೂ ಸ್ವಲ್ಪ ಕಠಿಣತೆಯನ್ನು ಹೊತ್ತವರಂತೆ ಕಾಣುತ್ತಾರೆ. ಅವರ ಉಡುಪುಗಳು ಮಾಸಿವೆ, ಅವರ ಭಂಗಿ ವಾಲಿಕೊಂಡಂತಿದೆ, ಅವರ ಮುಖಭಾವಗಳು ಮೌನಭರಿತ ಅದ್ಭುತದಿಂದ ಕೂಡಿವೆ. ಆದರೂ, ಅವರು ಶಿಶುವಿನ ಸನ್ನಿಧಿಗೆ—ಅಂದರೆ ಒಳ್ಳೆಯ ಕುರಿಗಾಹಿಯಾದ ಪ್ರಭು ಯೇಸುವಿನ ಸನ್ನಿಧಿಗೆ—ಆಕರ್ಷಿತರಾಗುತ್ತಾರೆ; ಆತನು ಮಾರ್ಗದರ್ಶನ ನೀಡಲು ಮಾತ್ರವಲ್ಲ, ತನ್ನ ಮಂದೆಯೊಂದಿಗೇ ಒಂದಾಗಲು ಬಂದಿದ್ದಾನೆ.

ಕಾರವಾಜಿಯೋ ಅವರ ಬೆಳಕಿನ ಬಳಕೆ ವಿಶೇಷವಾಗಿ ಆಳವಾದ ಅರ್ಥವನ್ನು ಹೊತ್ತಿದೆ. ಈ ಪ್ರಕಾಶವು ಹೊರಗಿನ ಮೂಲದಿಂದ ಬರುವುದಿಲ್ಲ; ಬದಲಾಗಿ, ಅದು ಸ್ವತಃ ಕ್ರಿಸ್ತನಿಂದಲೇ ಹರಿದುಬರುತ್ತಿರುವಂತೆ ಕಾಣುತ್ತದೆ, ಅವನ ಸುತ್ತ ಸೇರಿರುವವರ ಮುಖಗಳನ್ನು ಮೃದುವಾಗಿ ಬೆಳಗಿಸುತ್ತದೆ.

ಒಳ್ಳೆಯ ಕುರಿಗಾಹಿಯಾದ ಪ್ರಭು ಯೇಸು, ಶಿಶುವಾಗಿಯೇ ಇದ್ದರೂ ತನ್ನ ಕುರಿಗಳನ್ನು ಕತ್ತಲೆಯಿಂದ ಬೆಳಕಿನತ್ತ ಕರೆಯುತ್ತಿರುವಂತಿದೆ. ರಾತ್ರಿ ಸಮಯದಲ್ಲಿ ತಮ್ಮ ಮಂದೆಯನ್ನು ಕಾಪಾಡುವುದರಲ್ಲಿ ನುರಿತರಾಗಿದ್ದ ಕುರಿಗಾಹಿಗಳು, ಈಗ ತಾವು ಕಲ್ಪಿಸದ ಮಟ್ಟಿಗೆ ಸ್ವತಃ ಇನ್ನಷ್ಟು ಆಳವಾದ ರೀತಿಯಲ್ಲಿ ಕಾಪಾಡಲ್ಪಡುತ್ತಿದ್ದು, ಮಾರ್ಗದರ್ಶನ ಪಡೆಯುತ್ತಿದ್ದು, ಪ್ರೀತಿಸಲ್ಪಡುತ್ತಿರುವುದನ್ನು ಅನುಭವಿಸುತ್ತಾರೆ.

ಶುಭಸಂದೇಶ ಮತ್ತು ಈ ಚಿತ್ರಕೃತಿಯ ನಡುವಿನ ಈ ಪರಸ್ಪರ ಸಂಬಂಧವು ನಮ್ಮ ಜೀವನಗಳ ಬಗ್ಗೆ ಆಳವಾಗಿ ಚಿಂತಿಸಲು ನಮ್ಮನ್ನು ಆಹ್ವಾನಿಸುತ್ತದೆ; ನಮಗೆ ಮಾರ್ಗದರ್ಶನ ನೀಡಿದ ಕುರಿಗಾಹಿಗಳು ಯಾರು? ಗೊಂದಲದ ಮಧ್ಯೆಯೂ ಕ್ರಿಸ್ತನ ಧ್ವನಿಯನ್ನು ಗುರುತಿಸಲು ನಮಗೆ ಸಹಾಯ ಮಾಡಿದವರು ಯಾರು?

ನಮ್ಮಲ್ಲಿ ಅನೇಕರಿಗೆ, ನಮ್ಮ ಪೋಷಕರು, ಗುರುಗಳು, ಧರ್ಮಗುರುಗಳು, ಮಾರ್ಗದರ್ಶಕರು ಮತ್ತು ಸ್ನೇಹಿತರು ಕುರಿಗಾಹಿಗಳಾಗಿದ್ದಾರೆ. ನಿಶ್ಶಬ್ದವಾಗಿಯೂ ನಿಷ್ಠೆಯಿಂದಲೂ ನಮ್ಮನ್ನು ಒಳ್ಳೆಯ ಕುರಿಗಾಹಿಯಾದ ಪ್ರಭು ಯೇಸುವಿನತ್ತ ನಡೆಸುತ್ತಿದ್ದಾರೆ. ಅವರ ಕಾಳಜಿ ಯಾವಾಗಲೂ ಪರಿಪೂರ್ಣವಾಗಿರಲಿಲ್ಲವಾದರೂ, ಅವರ ಮೂಲಕ ಕ್ರಿಸ್ತನ ಸ್ವಂತ ಕಾಳಜಿಯೇ ನಮಗೆ ಸ್ಪರ್ಶವಾಗಿ ವ್ಯಕ್ತವಾಗಿದೆ.

ಈ “ಕುರಿಗಾಹಿಗಳನ್ನು” ಗುರುತಿಸುವುದೇ ಸ್ವತಃ ಒಂದು ಕೃಪೆಯಾಗಿದೆ. ಇದು ನಮ್ಮಲ್ಲಿ ಕೃತಜ್ಞತೆ ಮತ್ತು ವಿನಮ್ರತೆಯನ್ನು ಬೆಳೆಸುತ್ತದೆ; ಈ ಜೀವನಯಾತ್ರೆಯನ್ನು ನಾವು ಒಂಟಿಯಾಗಿ ಸಾಗಿಸಲಾಗದು ಎಂಬುದನ್ನೂ ನಮಗೆ ನೆನಪಿಸುತ್ತದೆ. ಅಂತಿಮವಾಗಿ, ಶುಭಸಂದೇಶದ ಹೃದಯದಲ್ಲಿ ಪ್ರಭು ಯೇಸುವಿನ ವಾಗ್ದಾನವೇ ಉಳಿಯುತ್ತದೆ: “(ಯೊವಾನ್ನ 10:10) ನಾನು ಬಂದದ್ದಾದರೋ ಜೀವನೀಡಲು, ಯಥೇಚ್ಛವಾಗಿ ನೀಡಲು.”

ಇದು ಕೇವಲ ಬದುಕುಳಿಯುವಿಕೆಯಲ್ಲ; ಇದು ಪೂರ್ಣತೆಯ ಜೀವನ—ಅವನೊಂದಿಗೆ ಸಹಭಾಗಿತ್ವದಲ್ಲಿ, ಅವನ ಕಾಳಜಿಯಲ್ಲಿ ಮತ್ತು ಅವನ ಮಂದೆಯ ಭದ್ರತೆಯೊಳಗೆ ಬದುಕುವ ಜೀವನವಾಗಿದೆ. ಬಾಗಿಲೂ ಆಗಿ ಕುರಿಗಾಹಿಯೂ ಆಗಿರುವ ಕ್ರಿಸ್ತನಲ್ಲಿ, ನಾವು ನಮ್ಮ ಮಾರ್ಗವನ್ನೂ ನಮ್ಮ ಮನೆಯನ್ನೂ ಕಂಡುಕೊಳ್ಳುತ್ತೇವೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

25 ಏಪ್ರಿಲ್ 2026, 18:25