ಪವಿತ್ರ ಸಮಾದಿ ದೇವಾಲಯದಲ್ಲಿ ನಡೆದ ಪಾಸ್ಕ  ಜಾಗರಣೆ ಬಲಿಪೂಜೆಯಲ್ಲಿ ಪ್ರಧಾನ ಗುರು ಪಿಯರ್ಬತ್ತಿಸ್ತಾ ಪಿಜ್ಜಬಲ್ಲಾ ಮತ್ತು ಇತರ ಫ್ರಾನ್ಸಿಸ್ಕನ್ ಗುರುಗಳು ಪವಿತ್ರ ಸಮಾದಿ ದೇವಾಲಯದಲ್ಲಿ ನಡೆದ ಪಾಸ್ಕ ಜಾಗರಣೆ ಬಲಿಪೂಜೆಯಲ್ಲಿ ಪ್ರಧಾನ ಗುರು ಪಿಯರ್ಬತ್ತಿಸ್ತಾ ಪಿಜ್ಜಬಲ್ಲಾ ಮತ್ತು ಇತರ ಫ್ರಾನ್ಸಿಸ್ಕನ್ ಗುರುಗಳು 

ಪ್ರಧಾನ ಗುರು ಪಿಜ್ಜಬಲ್ಲಾ: ಎಂತಹ ನಿಶ್ಯಬ್ದವನ್ನೂ ಸೀಳಿಕೊಂಡು ದೇವವಾಕ್ಯವು ಪ್ರತಿಧ್ವನಿಸುತ್ತದೆ.

ಪುನರುತ್ಥಾನ ಮಹೋತ್ಸವದ ಜಾಗರಣ ಪವಿತ್ರ ಬಲಿಪೂಜೆಯಲ್ಲಿ, ಪವಿತ್ರ ಸಮಾಧಿ ಬಸಿಲಿಕಾದಲ್ಲಿ, ಪ್ರಧಾನ ಗುರು ಪಿಯರ್ಬತ್ತಿಸ್ತಾ ಪಿಜ್ಜಬಲ್ಲಾ ಅವರು “ಮರಣದ ಸ್ಮೃತಿಯಿಂದ ಗುರುತಿಸಲ್ಪಟ್ಟ ಜೆರುಸಲೇಮ್ ನಗರವು, ಮತ್ತು ಇಂದಿನ ಅನೇಕ ವಿಭಜನೆಗಳಿಂದ ಕೂಡಿದ ಈ ಸ್ಥಳವು, ಜೀವವನ್ನು ಘೋಷಿಸುವ ಸ್ಥಳವಾಗಿದೆ” ಎಂದು ಹೇಳಿದರು.

ಲೇಖಕರು: ಬಿಯಾತ್ರಿಚೆ ಗುವಾರೇರಾ

“ಪುನರುತ್ಥಾನ ಮಹೋತ್ಸವವು ಜಯದ ಘೋಷಣೆಯಿಂದ ಆರಂಭವಾಗುವುದಿಲ್ಲ; ಅದು ಒಂದು ಕಥೆಯನ್ನು ಕೇಳುವುದರಿಂದ ಆರಂಭವಾಗುತ್ತದೆ — ಮರಣವನ್ನು ಎದುರಿಸಿ ಜೀವವನ್ನು ಸಾಧಿಸುವ ಕಥೆ,” ಎಂಬ ಈ ಮಾತುಗಳೊಂದಿಗೆ,  ಜೆರುಸಲೇಮ್‌ನ ಲ್ಯಾಟಿನ್ ಪ್ರಧಾನ ಗುರು ಪಿಯರ್ಬತ್ತಿಸ್ತಾ ಪಿಜ್ಜಬಲ್ಲಾ ಅವರು, ಪುನರುತ್ಥಾನವನ್ನು ತಲುಪಲು ಅಗತ್ಯವಾದ ಕತ್ತಲೆಯ  ಪಯಣವನ್ನು ಸ್ಮರಿಸಿದರು. ಅವರು ಏಪ್ರಿಲ್ 4ರ ಶನಿವಾರ ಬೆಳಿಗ್ಗೆ ಪವಿತ್ರ ಸಮಾಧಿ ಬಸಿಲಿಕಾದಲ್ಲಿ ಅಧ್ಯಕ್ಷತೆ ವಹಿಸಿದ್ದ ಜಾಗರಣ ಪೂಜೆಯಲ್ಲಿ ತಮ್ಮ ಉಪದೇಶವನ್ನು ನೀಡಿದರು.

ಭದ್ರತಾ ನಿರ್ಬಂಧಗಳ ಕಾರಣದಿಂದ, ಪವಿತ್ರ ವಿಧಿವಿಧಾನದಲ್ಲಿ ಅಲ್ಪ ಸಂಖ್ಯೆಯ ಜನರು ಮಾತ್ರ ಭಾಗವಹಿಸಿದರು; ಇವರಲ್ಲಿ ಪವಿತ್ರ ಭೂಮಿಯ ಪಾಲಕರಾದ ಫ್ರಾನ್ಸಿಸ್ಕನ್ ಸಹೋದರರೂ ಸೇರಿದ್ದರು. ಅವರು “ಪುನರುತ್ಥಾನದ ದೇವಾಲಯ” ಎಂದು ಸ್ಥಳೀಯ ಕ್ರೈಸ್ತರು ಕರೆಯುವ ಪವಿತ್ರ ಸಮಾಧಿಯ ಸನ್ಯಾಸಿ ಮಠದಲ್ಲೇ ವಾಸಿಸುತ್ತಾರೆ.

ಮಾನವ ಜೀವನದ ಎಲ್ಲಾ ಆಯಾಮಗಳನ್ನು ಸ್ವೀಕರಿಸಿದ ಪ್ರಭು

“ಬಾಗಿಲುಗಳು ಇನ್ನೂ ಮುಚ್ಚಿವೆ. ಮೌನವು ಬಹುತೇಕ ಸಂಪೂರ್ಣವಾಗಿದೆ; ದೂರದಲ್ಲಿ ಯುದ್ಧವು ಈ ಪವಿತ್ರವಾದ ಮತ್ತು ಚೂರುಚೂರುಗೊಂಡ ಭೂಮಿಯಲ್ಲಿ ಇನ್ನೂ ಬಿತ್ತುತ್ತಿರುವ ಶಬ್ದದಿಂದ ಮಾತ್ರ ಅದು ಭಂಗವಾಗುತ್ತದೆ,” ಎಂದು ಪ್ರಧಾನ ಗುರು ಆರಂಭಿಸಿದರು. “ಆದರೂ ಇದೇ ಸ್ಥಳದಲ್ಲಿ ಎಂತಹ ನಿಶ್ಯಬ್ದವನ್ನೂ ಸೀಳಿಕೊಂಡು ದೇವವಾಕ್ಯವು ಪ್ರತಿಧ್ವನಿಸುತ್ತದೆ.,” ಎಂದು ಅವರು ಹೇಳಿದರು.

ಪವಿತ್ರ ಭೂಮಿಯ ಕ್ರೈಸ್ತ ಸಮುದಾಯದ ನಂಬಿಕೆ “ದೌರ್ಬಲ್ಯದಿಂದ ಕೂಡಿದ ನಂಬಿಕೆ; ಪರೀಕ್ಷಿಸಲ್ಪಟ್ಟ ನಂಬಿಕೆ, ಕೆಲವೊಮ್ಮೆ ಆಯಾಸಗೊಂಡ ನಂಬಿಕೆ… ಆದರೂ ಇನ್ನೂ ಸ್ಥಿರವಾಗಿದೆ,” ಎಂದು ಪ್ರಧಾನ ಗುರು ವಿವರಿಸಿದರು. ಇದು ಅವರ ಸ್ವಂತ ಶಕ್ತಿಯಿಂದಲ್ಲ, “ಯಾರೋ ಒಬ್ಬರು ನಮ್ಮನ್ನು ಇಲ್ಲಿ ಸ್ಥಿರವಾಗಿ ನಿಲ್ಲಿಸುತ್ತಿರುವುದರಿಂದ.” 

“ಪ್ರಭು ಓಡುವ ಮಾರ್ಗವನ್ನು ಆರಿಸಲಿಲ್ಲ, ಆದರೆ ಮಾನವ ಜೀವನದ ಅತೀ ಆಳವಾದ ವಾಸ್ತವಿಕತೆಯೊಳಗೆ ಪ್ರವೇಶಿಸಲು ನಿರ್ಧರಿಸಿದರು. ಮಾನವ ಅಸ್ತಿತ್ವದ ಎಲ್ಲಾ ಆಯಾಮಗಳನ್ನು — ಇಂದು ನಾವು ಬಹುಪಾಲು ಹಿಂಸಾತ್ಮಕವಾಗಿ ಅನುಭವಿಸುವ ನೋವು ಮತ್ತು ಮರಣವನ್ನೂ — ತನ್ನ ಮೇಲೆ ತೆಗೆದುಕೊಂಡರು.”

“ನಮಗಾಗಿ ಆ ಕಲ್ಲನ್ನು ಯಾರು ಸರಿಸುತ್ತಾರೆ?”

ದೇವರ ವಾಕ್ಯದ ದೀರ್ಘ ಪಠಣವು ವಿಶ್ವಾಸಿಗಳನ್ನು ಹಂತ ಹಂತವಾಗಿ ಮತ್ತಾಯನ ಸುವಾರ್ತೆಯ ಕಡೆಗೆ ನಡೆಸುತ್ತದೆ ಎಂದು ಪ್ರಧಾನ ಗುರು ಹೇಳಿದರು; ಅಲ್ಲಿ ಭೂಕಂಪದ ನಂತರ ದೇವದೂತನು ಸಮಾಧಿಯ ಕಲ್ಲನ್ನು ಸರಿಸುತ್ತಾನೆ.

ಇದು “ಪೂರ್ಣ ಜಗತ್ತನ್ನೇ ಕದಲಿಸುವ ಘಟನೆಯ ಹೃದಯ — ಮಾನವ ಶಕ್ತಿಯಿಂದಲ್ಲ, ದೇವರ ಶಕ್ತಿಯಿಂದ ಸರಿಸಲ್ಪಟ್ಟ ಕಲ್ಲು,” ಎಂದು ಅವರು ಹೇಳಿದರು.

“ಈ ಕ್ಷಣದಲ್ಲಿ,ಯುದ್ಧದಿಂದ ನಿರಂತರವಾಗಿ ತೋಡಲ್ಪಡುವ ಪಾಡುಗಳ ಸಮಾಧಿಗಳ ಮೇಲೆ ಇರುವ ಕಲ್ಲುಗಳನ್ನು ಸರಿಸಲು ಯಾರೂ ಇಲ್ಲವೆಂದು ಕಾಣುತ್ತದೆ. ಆದ್ದರಿಂದಲೇ, ಮಹಿಳೆಯರ ಹೃದಯದಲ್ಲಿದ್ದ ಪ್ರಶ್ನೆಯನ್ನು ನಾವು ಇನ್ನಷ್ಟು ತುರ್ತಾಗಿ ಕೇಳುತ್ತೇವೆ: ‘ನಮ್ಮಗಾಗಿ ಆ ಕಲ್ಲನ್ನು ಯಾರು ಸರಿಸುತ್ತಾರೆ?’” ಇದು “ಭರವಸೆಗಳ ಬುತ್ತಿ ಖಾಲಿಯಾದ ಸಂದರ್ಭಗಳಲ್ಲಿ, ಪ್ರತಿಯೊಂದು ಹೃದಯದಲ್ಲಿಯೂ ಮೂಡುವ ಪ್ರಶ್ನೆ ಇದೇ” ಎಂದು ಅವರು ಹೇಳಿದರು.

“ಇಂದು ಈ ಪ್ರಶ್ನೆ ಪವಿತ್ರ ಭೂಮಿಯೆಲ್ಲೆಡೆ, ಹಾಗೆಯೇ ಹಿಂಸೆಯಿಂದ ಗುರುತಿಸಲ್ಪಟ್ಟ ಜಗತ್ತಿನ ಪ್ರತಿಯೊಂದು ಭಾಗದಲ್ಲಿಯೂ ಕೇಳಿಸುತ್ತಿದೆ.  ಆದರೆ ಉತ್ತರವು ಖಾಲಿ ಘೋಷಣೆ ಅಲ್ಲ; ಅದು ನಿಜವಾದ ಘಟನೆ: ಕಲ್ಲು ಸರಿಸಲಾಗಿದೆ. ನಮ್ಮ ಶಕ್ತಿಯಿಂದಲ್ಲ, ಮರಣಕ್ಕಿಂತಲೂ ಬಲವಾದ ದೇವರ ಪ್ರೀತಿಯ ಶಕ್ತಿಯಿಂದ,” ಎಂದು ಅವರು ಹೇಳಿದರು.

ಪ್ರಭು ನಮ್ಮ ಯುದ್ಧಗಳು ಮುಗಿಯುವವರೆಗೂ ಕಾಯುವುದಿಲ್ಲ

ಈ ಪ್ರಶ್ನೆ “ನಮ್ಮ ಮನೆಗಳಿಂದ ಏಳುವ ಕಿರುಚಾಟದಲ್ಲಿಯೂ ಪ್ರತಿಧ್ವನಿಸುತ್ತದೆ; ಏಕೆಂದರೆ ನಮ್ಮ ಸುತ್ತ ಮತ್ತೆ ಕಲ್ಲುಗಳನ್ನು ಇಡಲಾಗಿದೆ. ಆದರೂ ಇಂದು ನಾವು ಶಾಶ್ವತವಾಗಿ ತೆರೆಯಲ್ಪಟ್ಟ ಸಮಾಧಿಯೊಳಗೆ  ಇದ್ದೇವೆ” ಎಂದು ಪ್ರಧಾನ ಗುರು ಹೇಳಿದರು.

ಕಲ್ಲು ಸರಿಸಲ್ಪಟ್ಟದ್ದು ಇನ್ನೂ ಕತ್ತಲೆಯಲ್ಲಿಯೇ, ಯಾರೂ ಸಾಧ್ಯವೆಂದು ನಂಬದ ಸಮಯದಲ್ಲಿಯೇ ಸಂಭವಿಸಿತು — ಇದೇ ಮೊದಲ ಪುನರುತ್ಥಾನ ಘೋಷಣೆ ಎಂದು ಅವರು ಹೇಳಿದರು.

“ಪ್ರಭು ನಮ್ಮ ಯುದ್ಧಗಳು ಮುಗಿಯುವವರೆಗೆ ಕಾಯುವುದಿಲ್ಲ; ಜೀವವನ್ನು ಮರುಸ್ಥಾಪಿಸಲು ಈಗಲೇ ಆರಂಭಿಸುತ್ತಾರೆ. ಅವರು ಕತ್ತಲೆಯಲ್ಲೇ ಆರಂಭಿಸುತ್ತಾರೆ. ಅವರು ಮೌನದಲ್ಲೇ ಆರಂಭಿಸುತ್ತಾರೆ. ಅವರು ಇನ್ನೂ ಮುಚ್ಚಿದ ಸಮಾಧಿಯಲ್ಲೇ ಆರಂಭಿಸುತ್ತಾರೆ. ಪುನರುತ್ಥಾನ ಮಹೋತ್ಸವವು ನಮ್ಮ ಶ್ರಮದ ಫಲವಲ್ಲ; ಅದು ಪ್ರತಿಯೊಂದು ಶ್ರಮವನ್ನು ಸಾಧ್ಯವಾಗಿಸುವ ಆಧಾರ,” ಎಂದು ಪ್ರಧಾನ ಗುರು ಒತ್ತಿಹೇಳಿದರು.

“ಸಮಾಧಿ ಖಾಲಿಯಾಗಿದ್ದರೆ, ಯಾವುದೂ ಶಾಶ್ವತವಾಗಿ ಅಂತಿಮವಾಗುವುದಿಲ್ಲ. ಯಾವುದೇ ಭೂಮಿಯೂ ಶಾಶ್ವತವಾಗಿ ವಿವಾದದಲ್ಲಿರುವುದಿಲ್ಲ; ಯಾವುದೇ ಗಾಯವೂ ಶಾಶ್ವತವಾಗಿ ಗುಣವಾಗದಂತಾಗುವುದಿಲ್ಲ; ಯಾವುದೇ ಸ್ಮೃತಿಯೂ ಶಾಶ್ವತವಾಗಿ ದ್ವೇಷಕ್ಕೆ ಬಂಧಿಯಾಗಿರುವುದಿಲ್ಲ,” ಎಂದು ಅವರು ಹೇಳಿದರು.

“ಇದು ಸುಲಭವಲ್ಲ — ಅದು ಎಷ್ಟು ಕಷ್ಟವೆಂದು ನಾವು ತಿಳಿದಿದ್ದೇವೆ — ಆದರೆ ಇತಿಹಾಸದ ದಿಕ್ಕೇ ಬದಲಾಗಿದೆ. ನಾವು ಇನ್ನು ಮರಣದತ್ತ ನಡೆಯುವುದಿಲ್ಲ; ಈ ಸಮಾಧಿಯಿಂದ ಮರಣವು ನಮ್ಮ ಹಿಂದೆ ಉಳಿದಿದೆ,” ಎಂದು ಅವರು ಹೇಳಿದರು.

ಖಾಲಿ ಸಮಾಧಿಯಲ್ಲಿ ನವಜೀವನದ ರಹಸ್ಯ

ಸುವಾರ್ತೆ ಮತ್ತೊಂದು ಕಲ್ಲನ್ನೂ ಸರಿಸುತ್ತಿರುವಂತೆ ಕಾಣುತ್ತದೆ — ಅದು ಭಯದ ಕಲ್ಲು. ಇಂದಿನ ಶುಭಸಂದೇಶದ ಮೊದಲ ಸಂದೇಶವೇ: “ಭಯಪಡಬೇಡಿ” (ಮತ್ತಾಯ 28:5).

“ಈ ಖಾಲಿ ಸಮಾಧಿಯೊಳಗೆ ಪ್ರವೇಶಿಸುವುದು — ಯುದ್ಧದ ನಡುವೆಯೂ, ಒಂಟಿಯಾಗಿದ್ದರೂ — ನವೀಕರಿಸಲ್ಪಟ್ಟ ಜೀವದ ರಹಸ್ಯವನ್ನು ಎದುರಿಸುವುದಾಗಿದೆ, ಖಾಲಿ ಸಮಾಧಿಯು ಇತಿಹಾಸವನ್ನು ಅಳಿಸುವ ಶೂನ್ಯವಲ್ಲ. ಅದು ಪಾಡುಗಳೇ ಇಲ್ಲವೆಂದು ಹೇಳುವುದಿಲ್ಲ. ಪುನರುತ್ಥಾನಗೊಂಡ ಪ್ರಭು ಕ್ರಿಸ್ತರ ದೇಹದಲ್ಲಿಯೂ ಪಾಡುಗಳ ಗುರುತುಗಳು ಇವೆ. ಆದರೆ ಆ ಗಾಯಗಳು ಸೋಲಿನ ಗುರುತುಗಳಲ್ಲ; ಅವು ಮರಣವನ್ನು ಜಯಿಸಿದ ಜೀವದ ಮುದ್ರೆಗಳು,” ಎಂದು ಅವರು ಹೇಳಿದರು.

“ಇದೇ ಪುನರುತ್ಥಾನದ ಹೃದಯ: ಪ್ರಭು ನಮ್ಮ ಇತಿಹಾಸವನ್ನು ಅಳಿಸುವುದಿಲ್ಲ; ಅದನ್ನು ರೂಪಾಂತರಗೊಳಿಸುತ್ತಾರೆ. ಜೆರುಸಲೇಮ್ — ಮರಣದ ಸ್ಮೃತಿಯಿಂದ ಗುರುತಿಸಲ್ಪಟ್ಟ ನಗರ — ಈಗ ಜೀವವನ್ನು ಘೋಷಿಸುವ ಸ್ಥಳವಾಗಿದೆ,” ಎಂದು ಅವರು ಹೇಳಿದರು.

ಭರವಸೆಯು ತೆಗೆದುಕೊಳ್ಳಬೇಕಾದ ಒಂದು ಹೆಜ್ಜೆಯಾಗಿದೆ.

“ಅವರು ನಿಮಗಿಂತ ಮುಂಚೆ ಗಲಿಲೇಯಕ್ಕೆ ಹೋಗುತ್ತಿದ್ದಾರೆ” (ಮತ್ತಾಯ 28:7) ಎಂಬ ಸುವಾರ್ತೆಯ ವಾಕ್ಯವನ್ನು ಉಲ್ಲೇಖಿಸಿ, ಪ್ರಧಾನ ಗುರು ಹೇಳಿದರು: ಗಲಿಲೇಯ ಎಂದರೆ “ಮತ್ತೆ ಆರಂಭಿಸುವ ಧೈರ್ಯ, ಹೊಸ ದಾರಿಯ ಮೇಲೆ ನಂಬಿಕೆ ಇಡುವ ಧೈರ್ಯ.ಪುನರುತ್ಥಾನಗೊಂಡ ಪ್ರಭು ಮುಂದೆ ನಡೆಯುತ್ತಿದ್ದರೆ, ಭರವಸೆ ಕೇವಲ ಭಾವನೆ ಅಲ್ಲ; ಅದು ನಾವು ಇಡಬೇಕಾದ ಹೆಜ್ಜೆ,” ಎಂದು ಅವರು ಹೇಳಿದರು.

ಕ್ರೈಸ್ತರು “ಖಾಲಿ ಸಮಾಧಿಯ ಗುರುತಾಗಿರಲು” ಕರೆಯಲ್ಪಟ್ಟಿದ್ದಾರೆ — ಇತಿಹಾಸವನ್ನು ನಿರಾಕರಿಸದೇ, ಅದನ್ನು ಭರವಸೆಯತ್ತ ತೆರೆಯುವ. ನಿರಾಶೆ, ಅಸಹನೆ ಮತ್ತು ಅವಿಶ್ವಾಸದ ಕಲ್ಲುಗಳನ್ನು ನಾವು ದೂರ ಮಾಡಬೇಕು,” ಎಂದು ಅವರು ಮನವಿ ಮಾಡಿದರು.

ತಮ್ಮ ಉಪದೇಶದ ಅಂತ್ಯದಲ್ಲಿ, ಪವಿತ್ರ ಸಮಾಧಿಯಿಂದ ಪುನರುತ್ಥಾನದ ಸಂದೇಶವನ್ನು ನೀಡುತ್ತಾ ಅವರು ಹೇಳಿದರು: “ಲೋಕದ ಕಲ್ಲುಗಳ ಮುಂದೆ ನಿಲ್ಲಬೇಡಿ; ನಾವು ಸಾಧ್ಯವಾದ ಮಟ್ಟಿಗೆ ‘ಜೀವಂತ ಕಲ್ಲುಗಳಾಗಿ’ — ಸಮ್ಮಿಲನದ ಸಂಕೇತಗಳಾಗಿ, ಭರವಸೆಯ ಕಾರ್ಮಿಕರಾಗಿ, ಮರಣವು ಇನ್ನೂ ನಂದಿಸಲಾಗದ ಜೀವದ ಸಾಕ್ಷಿಗಳಾಗಿ ರೂಪುಗೊಳ್ಳೋಣ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

04 ಏಪ್ರಿಲ್ 2026, 16:46